ವೃಶ್ಚಿಕ ರಾಶಿಯ ಯಾವ ನಕ್ಷತ್ರ, ಪಾದಗಳಲ್ಲಿ ಜನಿಸಿದವರಿಗೆ ಗುರುಬಲ ಇದೆ; ಗುರುವು ಯಾವ ರೀತಿಯ ಫಲಗಳನ್ನು ನೀಡಲಿದ್ದಾನೆ
ಜೀವನದಲ್ಲಿ ಸುಖ, ಸಂತೋಷದಿಂದ ಇರಲು ಗ್ರಹಗತಿಗಳು ಒಳ್ಳೆ ಸ್ಥಾನದಲ್ಲಿರಬೇಕು. ಹಾಗೇ ಗುರುವಿನ ಆಶೀರ್ವಾದ ಕೂಡಾ ಬಹಳ ಮುಖ್ಯ. ಆದರೆ ಪ್ರತಿಯೊಬ್ಬರಿಗೂ ಗುರು ಬಲ ದೊರೆಯುವುದು ಸುಲಭದ ಮಾತಲ್ಲ. ಇಂದು ವೃಶ್ಚಿಕ ರಾಶಿ ಹಾಗೂ ಗುರುಬಲದ ಬಗ್ಗೆ ತಿಳಿಯೋಣ. (ಬರಹ: ಎಚ್. ಸತೀಶ್, ಜ್ಯೋತಿಷಿ)

ವೃಶ್ಚಿಕ ರಾಶಿಗೆ ಗುರುಬಲವಿದೆ. ಈ ರಾಶಿಯಲ್ಲಿ ಅನೇಕ ಜನರು ಜನಿಸುತ್ತಾರೆ. ಪ್ರತಿಯೊಬ್ಬರೂ ಈ ಗುರುಬಲದಿಂದ ಶುಭ ಫಲಗಳನ್ನು ಪಡೆಯುವುದು ಅಸಾಧ್ಯವಾಗುತ್ತದೆ. ಕೆಲವರಿಗೆ ಅತ್ಯುತ್ತಮ ಫಲಗಳು ದೊರೆಯುತ್ತವೆ. ಇನ್ನೂ ಕೆಲವರಿಗೆ ಸಾಧಾರಣ ಮಟ್ಟದ ಫಲಗಳು ದೊರೆಯುತ್ತವೆ. ಹಲವರಿಗೆ ಯಾವ ರೀತಿಯ ಫಲಗಳೂ ದೊರೆಯುವುದಿಲ್ಲ. ಇದಕ್ಕೆ ಕಾರಣವೆಂದರೆ ನಕ್ಷತ್ರಗಳು.
ವೃಶ್ಚಿಕ ರಾಶಿಯಲ್ಲಿ ವಿಶಾಖ ನಕ್ಷತ್ರದ 4 ನೇಪಾದ, ಅನೂರಾಧ ನಕ್ಷತ್ರದ ನಾಲ್ಕು ಪಾದಗಳು ಮತ್ತು ಜ್ಯೇಷ್ಠನಕ್ಷತ್ರದ ನಾಲ್ಕೂ ಪಾದಗಳು ಬರುತ್ತದೆ. ಈ ನಕ್ಷತ್ರಗಳ ಪಾದಗಳನ್ನು ಅನುಸರಿಸಿ ಗುರುಬಲದ ಲೆಕ್ಕಾಚಾರವನ್ನು ಮಾಡಬೇಕು. ಸರಳವಾದ ಶಾಂತಿ, ಪೂಜೆ, ದಾನ, ಧರ್ಮದಿಂದ ಗುರುಬಲದಿಂದ ಶುಭಫಲಗಳನ್ನು ಪಡೆಯಬಹುದು. ವೃಶ್ಚಿಕ ರಾಶಿಯಲ್ಲಿ ಜನಿಸಿರುವ ಪ್ರತಿಯೊಬ್ಬರು ಶ್ರೀ ಸರಸ್ವತಿ ದೇವಿಯನ್ನು ಪೂಜಿಸಬೇಕು.
ವಿಶಾಖ ನಕ್ಷತ್ರದ 4ನೇ ಪಾದ
ವಿಶಾಖ ನಕ್ಷತ್ರದ ನಾಲ್ಕನೇ ಪಾದದಲ್ಲಿ ಜನಿಸಿದವರಿಗೆ ಗುರು ಬಲದಿಂದ ಕೆಲಸ ಕಾರ್ಯಗಳಲ್ಲಿ ಯಶಸ್ಸು ದೊರೆಯುತ್ತದೆ. ವಿದ್ಯಾರ್ಥಿಗಳಿಗೆ ಉತ್ತಮ ಫಲಗಳು ದೊರೆಯುತ್ತವೆ. ಗುರು ಪೂಜೆಯಿಂದ ಕೈಹಿಡಿದ ಕೆಲಸ ಕಾರ್ಯಗಳಲ್ಲಿ ಹೆಚ್ಚಿನ ಫಲಗಳನ್ನು ಪಡೆಯಬಹುದು. ಬೇರೆಯವರ ಪ್ರಭಾವಕ್ಕೆ ಸ್ವಂತ ಬುದ್ಧಿಶಕ್ತಿಯಿಂದ ಬಾಳುವುದು ಒಳ್ಳೆಯದು. ಆದರೆ ಆತುರದಿಂದ ಯಾವುದೇ ತೀರ್ಮಾನಗಳನ್ನು ತೆಗೆದುಕೊಳ್ಳಬಾರದು.
ಅನುರಾಧ ನಕ್ಷತ್ರದ ಒಂದು ಮತ್ತು ಎರಡನೇ ಪಾದದಲ್ಲಿ ಜನಿಸಿರುವವರಿಗೆ ಗುರುಬಲದಿಂದ ಸಂಪೂರ್ಣ ಫಲಗಳು ದೊರೆಯುತ್ತವೆ. ಆದರೆ ಅನುರಾಧ ನಕ್ಷತ್ರದ ಮೂರು ಮತ್ತು ನಾಲ್ಕನೇ ಪಾದದಲ್ಲಿ ಜನಿಸಿರುವವರಿಗೆ ಗುರುಬಲವಿದ್ದರೂ ದೊರೆಯುವ ಫಲಗಳು ಕೊಂಚ ಕಡಿಮೆ. ಅನೂರಾಧ ನಕ್ಷತ್ರದ 3ನೇ ಪಾದದಲ್ಲಿ ಜನಿಸಿರುವವರು ತಮ್ಮ ಕುಲದೇವರ ಪೂಜೆ ಮಾಡಿದರೆ ಕೆಲಸ ಕಾರ್ಯಗಳಲ್ಲಿ ಉನ್ನತ ಮಟ್ಟ ತಲುಪಬಹುದು. ಇದರೊಂದಿಗೆ ಸಹಪಾಠಿಗಳ ಜೊತೆ ಪ್ರೀತಿ ವಿಶ್ವಾಸದಿಂದ ನಡೆದುಕೊಳ್ಳಬೇಕು. ಬಡ ವಿದ್ಯಾರ್ಥಿಗಳಿಗೆ ಹಣದ ಸಹಾಯ ಮಾಡುವುದರಿಂದ ಗುರುಬಲದ ಪೂರ್ಣ ಫಲಗಳನ್ನು ಪಡೆಯಬಹುದು. ಶ್ರೀ ಸರಸ್ವತಿ ಸೂಕ್ತವನ್ನು ಕೇಳುವುದರಿಂದ ಅಥವ ಹೇಳುವುದರಿಂದ ಪೂರ್ಣ ಫಲವನ್ನು ಪಡೆಯಬಹುದು.
ಅನೂರಾಧ ನಕ್ಷತ್ರದ ನಾಲ್ಕನೆ ಪಾದದಲ್ಲಿ ಜನಿಸಿದವರೂ ಕೆಲಸ ಕಾರ್ಯಗಳನ್ನು ಆರಂಭಿಸುವ ಮುನ್ನ ಕುಲದೇವರನ್ನು ಪೂಜಿಸಬೇಕು. ಕುಟುಂಬದ ಹಿರಿಯರ ಪಡೆಯಬೇಕು. ಶ್ರೀ ರಾಮದೇವಾಲಯದಲ್ಲಿ ಪೂಜೆಯನ್ನು ಮಾಡಿಸಿ ಭಕ್ತಾದಿಗಳಿಗೆ ಪ್ರಸಾದ ರೂಪದಲ್ಲಿ ನಿಂಬೆಹಣ್ಣಿನ ಪಾನಕವನ್ನು ನೀಡಬೇಕು. ಇದರಿಂದಾಗಿ ಈ ನಕ್ಷತ್ರದಲ್ಲಿ ಜನಿಸಿದವರು ಶುಭಫಲಗಳನ್ನು ಪಡೆಯಬಹುದು. ಧಾರ್ಮಿಕ ಕೇಂದ್ರಕ್ಕೆ ಹಾಲು ಮತ್ತು ಮೊಸರನ್ನು ನೀಡುವುದು ಬಹು ಮುಖ್ಯ.
ಜ್ಯೇಷ್ಠ ನಕ್ಷತ್ರದ 1,4ನೇ ಪಾದ
ಜ್ಯೇಷ್ಠ ನಕ್ಷತ್ರದ ಒಂದು ಮತ್ತು ನಾಲ್ಕನೇ ಪಾದದಲ್ಲಿ ಜನಿಸಿದವರು ಗುರುಬಲದಿಂದ ಉನ್ನತ ಮಟ್ಟದ ಫಲಗಳನ್ನು ಪಡೆಯುತ್ತಾರೆ. ಶ್ರೀ ದುರ್ಗೆಗೆ ಸಂಬಂಧಿಸಿದ ಯಾವುದೆ ಪೂಜೆ ಮತ್ತು ಮಂತ್ರಗಳು ಉತ್ತಮ ಫಲಿತಾಂಶವನ್ನು ನೀಡುತ್ತದೆ. ಇವರು ಯೋಚನೆ ಮಾಡುವ ಬದಲು ಕೆಲಸ ಕಾರ್ಯಗಳನ್ನು ನಿಷ್ಠೆಯಿಂದ ಕಾರ್ಯಗತಗೊಳಿಸುವರು. ತಮ್ಮಲ್ಲಿ ಯಾವುದೇ ರಹಸ್ಯವನ್ನು ಬೇರೆಯವರಲ್ಲಿ ಹಂಚಿಕೊಳ್ಳುವುದಿಲ್ಲ. ಬೇರೆಯವರಿಗೆ ಸಹಾಯ ಮಾಡಿದಷ್ಠೂ ಒಳ್ಳೆಯ ಫಲಗಳನ್ನು ಪಡೆಯಬಹುದು.
ಜ್ಯೇಷ್ಠ ನಕ್ಷತ್ರದ ಮೂರನೆಯ ಪಾದದಲ್ಲಿ ಜನಿಸಿರುವವರು ಮಾನಸಿಕ ಒತ್ತಡದಿಂದ ತಪ್ಪು ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾರೆ. ಇದರಿಂದ ಗುರುಬಲವಿದ್ದರೂ ಕೇವಲ ಮಧ್ಯಮ ಗತಿಯ ಫಲಗಳನ್ನು ಪಡೆಯಲು ಸಾಧ್ಯವಾಗುತ್ತದೆ. ಶ್ರೀ ದತ್ತಾತ್ರೇಯ ಸ್ವಾಮಿ ಪೂಜೆಯಿಂದ ಅನಾವಶ್ಯಕ ಖರ್ಚು ವೆಚ್ಚಗಳು ಕಡಿಮೆಯಾಗುತ್ತದೆ. ಕ್ರಮೇಣವಾಗಿ ಆರೋಗ್ಯದಲ್ಲಿ ಸುಧಾರಣೆ ಕಂಡುಬರುತ್ತದೆ. ವಿದ್ಯಾಭ್ಯಾಸದಲ್ಲಿ ಉನ್ನತ ಮಟ್ಟ ತಲುಪಲು ಸಾಧ್ಯವಾಗುತ್ತದೆ. ವಯೋವೃದ್ಧರಿಗೆ ಹಾಲಿನಿಂದ ಮಾಡಿದ ಸಿಹಿಖಾದ್ಯವನ್ನು ನೀಡುದರಿಂದ ಶುಭಫಲಗಳು ದೊರೆಯುತ್ತದೆ.
ಜ್ಯೇಷ್ಠ ನಕ್ಷತ್ರದ ಮೂರನೆಯ ಪಾದದಲ್ಲಿ ಜನಿಸಿರುವವರು ಯಾರ ಮಾತಿಗೂ ಬದ್ದರಾಗುವುದಿಲ್ಲ. ನಿಮ್ಮಲ್ಲಿ ಅಚಲವಾದ ಆತ್ಮವಿಶ್ವಾಸ ಇರುತ್ತದೆ. ಇದರಿಂದಾಗಿ ಆತುರದ ನಿರ್ಧಾರದಿಂದ ತೊಂದರೆ ಅನುಭವಿಸುವಿರಿ. ಶಾಂತಿ ಸಹನೆಯಿಂದ ವರ್ತಿಸಿದಲ್ಲಿ ಯಾವುದೇ ತೊಂದರೆ ಇರುವುದಿಲ್ಲ. ಶ್ರೀ ಸುದರ್ಶನ ಪೂಜೆ ಮಾಡುವುದರಿಂದ ಶುಭ ಫಲಗಳು ದೊರೆಯುತ್ತವೆ. ಮನೆಯಲ್ಲಿರುವ ಪುಟ್ಟ ಮಕ್ಕಳಿಗೆ ಬೆಣ್ಣೆಯಿಂದ ಮಾಡಿದ ತಿಂಡಿಯನ್ನು ನೀಡುವುದರಿಂದ ಶುಭಫಲಗಳನ್ನು ಪಡೆಯಬಹುದು. ಪ್ರತಿ ತಿಂಗಳು ಪ್ರದೋಷ ಪೂಜೆ ಮಾಡುವುದು ಕ್ಷೇಮ.
ಬರಹ: ಎಚ್. ಸತೀಶ್, ಜ್ಯೋತಿಷಿ
ಮೊಬೈಲ್: 8546865832
(ಗಮನಿಸಿ: ಜ್ಯೋತಿಷ್ಯ ಶಾಸ್ತ್ರದ ಲೆಕ್ಕಾಚಾರಕ್ಕೆ ಹಲವು ಸೂತ್ರಗಳಿವೆ. ನಿರ್ದಿಷ್ಟ ರೀತಿಯಲ್ಲಿ ಕ್ರಮಬದ್ಧವಾಗಿ ಈ ರಾಶಿ ಭವಿಷ್ಯ ನೀಡಲಾಗಿದೆ. ಆದರೆ ಒಟ್ಟಾರೆಯಾಗಿ ಜ್ಯೋತಿಷ್ಯ ಎನ್ನುವುದು ನಂಬಿಕೆಯ ಮಾತು. ಓದುಗರ ನಂಬಿಕೆಯನ್ನು ‘ಹಿಂದೂಸ್ತಾನ್ ಟೈಮ್ಸ್ ಕನ್ನಡ’ ಗೌರವಿಸುತ್ತದೆ. ಇಲ್ಲಿರುವ ಯಾವುದೇ ಶಿಫಾರಸು ಅಥವಾ ಸಲಹೆಗಳನ್ನು ಪಾಲಿಸುವುದು ಓದುಗರ ವಿವೇಚನೆ, ನಂಬಿಕೆಗೆ ಬಿಟ್ಟ ವಿಷಯವಾಗಿರುತ್ತದೆ).