Birth Date: ನಿಮ್ಮ ಮಾತೇ ನಿಮಗೆ ವೇದವಾಕ್ಯ, ಆದರೆ ಒಳ್ಳೆಯ ಮನಸ್ಸಿರುತ್ತದೆ; 11ನೇ ತಾರೀಕು ಜನಿಸಿದವರ ಜೀವನ ಹೀಗಿರತ್ತೆ
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  Birth Date: ನಿಮ್ಮ ಮಾತೇ ನಿಮಗೆ ವೇದವಾಕ್ಯ, ಆದರೆ ಒಳ್ಳೆಯ ಮನಸ್ಸಿರುತ್ತದೆ; 11ನೇ ತಾರೀಕು ಜನಿಸಿದವರ ಜೀವನ ಹೀಗಿರತ್ತೆ

Birth Date: ನಿಮ್ಮ ಮಾತೇ ನಿಮಗೆ ವೇದವಾಕ್ಯ, ಆದರೆ ಒಳ್ಳೆಯ ಮನಸ್ಸಿರುತ್ತದೆ; 11ನೇ ತಾರೀಕು ಜನಿಸಿದವರ ಜೀವನ ಹೀಗಿರತ್ತೆ

Birth Date Astrology: 11ನೇ ತಾರೀಕು ಹುಟ್ಟಿದವರ ಗುಣ-ಜೀವನದ ಕುರಿತು ಜ್ಯೋತಿಷಿ ಎಚ್‌. ಸತೀಶ್‌ ಅವರು ನೀಡಿದ ಮಾಹಿತಿ ಇಲ್ಲಿದೆ.

ಜನ್ಮದಿನಾಂಕ ಭವಿಷ್ಯ (ಪ್ರಾತಿನಿಧಿಕ ಚಿತ್ರ)
ಜನ್ಮದಿನಾಂಕ ಭವಿಷ್ಯ (ಪ್ರಾತಿನಿಧಿಕ ಚಿತ್ರ)

ಯಾವುದೇ ತಿಂಗಳ 11ನೇ ತಾರೀಕು ಹುಟ್ಟಿದವರಿಗೆ ಒಂಟಿ ಜೀವನ ಇಷ್ಟವಾಗುವುದಿಲ್ಲ. ಕನಿಷ್ಠಪಕ್ಷ ಮಾತನಾಡಲು ಚಿಕ್ಕ ಮಗುವಾದರೂ ಬೇಕು. ಇಲ್ಲವಾದರೆ ಗುಟ್ಟಾಗಿ ಕನ್ನಡಿಯ ಮುಂದೆ ಮಾತನಾಡುವರು. ಮಾತು ಕಡಿಮೆ ಮಾಡು ಎಂದರೆ ಇವರಿಗೆ ಎಲ್ಲಿಲ್ಲದ ಸಿಟ್ಟು ಬರುತ್ತದೆ. ಹೆಣ್ಣು ಮಕ್ಕಳಿಗೆ ವಿವಾಹವಾದರೂ ಗಂಡನಿಗಿಂತ ಅಣ್ಣತಮ್ಮಂದಿರ ಮೇಲೆ ವಿಶೇಷ ಪ್ರೀತಿ ಇರುತ್ತದೆ. ಎಷ್ಟೇ ಬಡತನ ಇದ್ದರೂ ಸುಖ ಸಂತೋಷ ಕಡಿಮೆಯಾಗದು. ಯಾವುದೇ ವಿಚಾರವನ್ನು ಕೂಲಂಕುಶವಾಗಿ ನೋಡದೆ ತೀರ್ಮಾನ ತೆಗೆದುಕೊಳ್ಳುವುದಿಲ್ಲ. ಇರುವ ಹಣ ಖರ್ಚು ಮಾಡುವ ಇಚ್ಛೆ ಇರುವುದಿಲ್ಲ. ಗುಟ್ಟಾಗಿ ಹಣವನ್ನು ಸಂಗ್ರಹ ಮಾಡುವುದೇ ಇವರಿಗೆ ಹವ್ಯಾಸ. ಅದೃಷ್ಟವೆಂದರೆ ಸಮಯಕ್ಕೆ ತಕ್ಕಂತೆ ಇವರಿಗೆ ಯಾವುದೋ ಮೂಲದಿಂದ ಹಣ ದೊರೆಯುತ್ತದೆ.

ಯಾವುದೇ ಔಷಧಿ ತೆಗೆದುಕೊಳ್ಳದೆ ಆರೋಗ್ಯವನ್ನು ಸರಿಪಡಿಸಿಕೊಳ್ಳುವುದು ಇವರ ವಿಶೇಷ ಗುಣ. ಸ್ತ್ರೀಯರಿಗೆ ಈ ದಿನಾಂಕವು ಪ್ರಬಲ ಯೋಗವನ್ನು ನೀಡುತ್ತದೆ. ಪ್ರೀತಿಸುವ ಪತಿ ದೊರಕುತ್ತಾನೆ. ಮುದ್ದಿಸುವ ತಂದೆ ತಾಯಿಗಳಿರುತ್ತಾರೆ. ಸ್ನೇಹಿತರಂತೆ ಬಾಳುವ ಸೋದರ ಸೋದರಿಯರು ಇರುತ್ತಾರೆ. ಒಟ್ಟಾರೆ ಸುಖ ಜೀವನವನ್ನು ನಡೆಸುತ್ತಾರೆ. ಇವರು ದುಡುಕಿದರು ತಪ್ಪಾಗಿ ಗ್ರಹಿಸದ ಮಂದಿ ಇವರ ಸ್ನೇಹಿತರಾಗುತ್ತಾರೆ. ಇವರ ಒಂದೇ ಒಂದು ಸರಿಯಲ್ಲದ ಗುಣವೆಂದರೆ ಬೇರೆಯವರ ಮನಸ್ಸನ್ನು ಅರ್ಥಮಾಡಿಕೊಳ್ಳದೆ ಮಾತನಾಡುವುದು.

ಚಿಕ್ಕ ವಯಸ್ಸಿನಲ್ಲಿ ಸಣ್ಣಗಿದ್ದರೂ ಕ್ರಮೇಣವಾಗಿ ದಪ್ಪರಾಗುವ ಸಾಧ್ಯತೆಗಳು ಇರುತ್ತವೆ. ಯಾವುದಾದರೂ ಒಂದು ವಿಚಾರಕ್ಕೆ ಇವರು ಚಿಂತೆ ಮಾಡುವುದಕ್ಕಿಂತಲೂ ಬೇರೆಯವರ ಮೇಲೆ ಒತ್ತಡ ಹೇಳುತ್ತಾರೆ. ನಡೆಯುವುದೆಂದರೆ ಇವರಿಗೆ ಆಗದ ಮಾತು. ಯಾವುದೇ ಸ್ಥಳಕ್ಕೆ ಹೊರಡಬೇಕೆಂದರು ಇವರಿಗೆ ವಾಹನ ಸೌಲಭ್ಯ ಬೇಕು. ಹಣವನ್ನು ಲೆಕ್ಕವಿಡದೆ ಪ್ರವಾಸ ಮಾಡುತ್ತಾರೆ. ಸ್ನೇಹಿತರ ಅಥವಾ ಸಂಬಂಧಿಕರ ಮನೆಗೆ ಹೋಗಿ ಕ್ಷಣಮಾತ್ರದಲ್ಲಿ ವಾಪಸ್ ಆಗುವ ಬುದ್ಧಿ ಇರುವುದಿಲ್ಲ. ಕನಿಷ್ಠಪಕ್ಷ ಒಂದು ದಿನವಾದರೂ ಪರಸ್ಪರ ವಿಚಾರ ವಿನಿಮಯ ಮಾಡಿಕೊಳ್ಳಬೇಕು. ಇದನ್ನು ಯಾರೇ ವಿರೋಧಿಸಿದರು ಅವರ ಮಾತಿಗೆ ಪ್ರಾಶಸ್ತ್ಯ ನೀಡುವುದಿಲ್ಲ. ಇವರ ಮಾತೇ ಇವರಿಗೆ ವೇದವಾಕ್ಯ. ಆದರೆ ಒಳ್ಳೆಯ ಮನಸ್ಸಿರುತ್ತದೆ. ಯಾವುದೇ ಭೇದ ಭಾವ ಮಾಡದೆ ಪ್ರತಿಯೊಬ್ಬರನ್ನು ಸಮಾನ ದೃಷ್ಟಿಯಿಂದ ನೋಡುವುದು ಇವರ ಹೆಗ್ಗಳಿಕೆ.

ತಮ್ಮಲ್ಲಿರುವ ಬುದ್ಧಿವಂತಿಕೆಯನ್ನು ಸರಿಯಾದ ಮಟ್ಟದಲ್ಲಿ ಬಳಸಿದರೆ ಹಣಕಾಸಿನ ತೊಂದರೆ ಉಂಟಾಗುವುದಿಲ್ಲ. ಸಹಾಯ ಮಾಡುವ ಜನರಿದ್ದರು ಹೊಸ ಕೆಲಸಗಳನ್ನು ಆರಂಭಿಸುವುದಿಲ್ಲ. ಇವರಿಗೆ ಬೇಗನೆ ಸಿಟ್ಟು ಬರುತ್ತದೆ. ಹಾಗೆಯೇ ಬೇರೆಯವರ ಕೋಪಕ್ಕೆ ಇವರೇ ಕಾರಣರಾಗುತ್ತಾರೆ. ಕ್ಷಣಮಾತ್ರದಲ್ಲಿ ಕೋಪ ತಾಪಗಳನ್ನು ಮರೆತು ಎಲ್ಲರೊಂದಿಗೆ ನಗು ನಗುತ್ತಾ ಬಾಳುತ್ತಾರೆ. ಸ್ತ್ರೀಯರಿಗೆ ಅನಾವಶ್ಯಕ ವಾದ ವಿವಾದಗಳು ಎದುರಾಗುತ್ತವೆ. ಇವರಿಗೆ ದೊರೆಯುವ ಒಳ್ಳೆಯ ಹೆಸರೇ ಶತ್ರುಗಳನ್ನು ಹೆಚ್ಚಿಸುತ್ತದೆ. ಇವರ ಮನಸ್ಸಿನಲ್ಲಿ ಇರುವ ವಿಚಾರವನ್ನು ಸುಲಭವಾಗಿ ಅರಿತುಕೊಳ್ಳಲು ಸಾಧ್ಯವಾಗುವುದಿಲ್ಲ. ಆದರೆ ತಮ್ಮಲ್ಲಿರುವ ಜ್ಞಾನವನ್ನು ಇತರರಿಗೆ ಹಂಚುವುದರಲ್ಲಿ ಸಂತಸ ಪಡುತ್ತಾರೆ. ಹೊಗಳಿಕೆಯ ಮಾತನಾಡಿ ಬೇರೆಯವರಿಂದ ಕೆಲಸ ಮಾಡಿಸಿಕೊಳ್ಳುವುದರಲ್ಲಿ ನಿಸ್ಸೀಮರು.

ಧಾರ್ಮಿಕ ವಿಧಿ ವಿಧಾನಗಳನ್ನು ಅನುಸರಿಸದೇ ಹೋದರು ದೇವರಲ್ಲಿ ನಂಬಿಕೆ ಇರುತ್ತದೆ. ಉಪವಾಸ ಮಾಡಬೇಕಾದ ದಿನವೂ ಇವರಿಗೆ ಪುಷ್ಠಿಕರ ಆಹಾರ ಬೇಕು. ಇವರ ಮನಸ್ಸಿನಲ್ಲಿರುವ ವಿಚಾರಗಳನ್ನು ಯಾರಿಗೂ ಹೇಳುವುದಿಲ್ಲ. ಸಮಾಜ ಸೇವೆ ಮಾಡಲು ಸದಾ ಕಾತರರಾಗಿರುತ್ತಾರೆ. ಅಲೆದಾಡುವುದೆಂದರೆ ಎಲ್ಲಿಲ್ಲದ ಖುಷಿ. ಕೆಲಸವಿರಲಿ ಇಲ್ಲದೆ ಹೋಗಲಿ ಒಂದು ಪ್ರದೇಶದಿಂದ ಮತ್ತೊಂದು ಪ್ರದೇಶಕ್ಕೆ ಸುತ್ತಾಡುವ ಮಂದಿ. ದುಡಿಯುವುದರಲ್ಲಿ ಮೊದಲಿಗರು. ಬೇರೆಯವರ ಕಾರ್ಯಕ್ರಮದ ಹೊಣೆಯನ್ನು ಹೊತ್ತು ಯಶಸ್ವಿಯಾಗಿ ನಡೆಸಿಕೊಡುವರು. ಬೇರೆಯವರಿಗೆ ಬುದ್ಧಿವಾದ ಹೇಳುವಲ್ಲಿ ನಿಷ್ಣಾತರು. ಆದರೆ ಬೇರೆಯವರ ಮಾತನ್ನು ಕಡೆಗಣಿಸಿ ನಡೆಯುವ ಜನರು. ಯಾರನ್ನು ಸುಲಭವಾಗಿ ನಂಬುವುದಿಲ್ಲ. ಅತ್ತೆಯ ಮನೆಯಲ್ಲಿ ಉತ್ತಮ ಸಹಕಾರದಿಂದ ನಡೆದುಕೊಳ್ಳುವುದಿಲ್ಲ. ಆದರೂ ಯಾರಿಗೂ ತೊಂದರೆ ಇರುವುದಿಲ್ಲ. ದುರಾದೃಷ್ಟದಿಂದ ಅಥವಾ ಕರ್ಮಫಲದಿಂದ ಕೆಲ ದಿನ ಕಷ್ಟವನ್ನು ಅನುಭವಿಸುವರು.

ಲೇಖನ: ಎಚ್‌. ಸತೀಶ್‌, ಜ್ಯೋತಿಷಿ -ಬೆಂಗಳೂರು

ಮೊಬೈಲ್:‌ 8546865832

(ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ "ಹಿಂದೂಸ್ತಾನ್ ಟೈಮ್ಸ್ ಕನ್ನಡ" ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ.)

Whats_app_banner

ವಿಭಾಗ

ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.