ಕುಜ ಮೇಷದಿಂದ ವೃಷಭ ಪ್ರವೇಶ; ಹಣಕಾಸಿನ ಸಮಸ್ಯೆ ನಿವಾರಣೆ, ಕುಟುಂಬದಲ್ಲಿ ಶಾಂತಿ ಸೇರಿ ಈ 3 ರಾಶಿಯವರಿಗೆ ಭಾರಿ ಲಾಭ
ಕುಜ ಮೇಷದಿಂದ ವೃಷಭ ಸಂಕ್ರಮಣದಿಂದ ಹಲವು ರಾಶಿಗಳ ಪರಿಣಾಮ ಬೀರುತ್ತದೆ, ಅದರಲ್ಲೂ ಪ್ರಮುಖವಾಗಿ 3 ರಾಶಿಯವರಿಗೆ ಭಾರಿ ಲಾಭಗಳಿವೆ. ಯಾವುವು ಆ ರಾಶಿಗಳು ಅನ್ನೋದನ್ನು ತಿಳಿಯೋಣ.
ಜುಲೈ ತಿಂಗಳ 12ನೇ ದಿನಾಂಕದಂದು ರಾತ್ರಿ . 07.20ಕ್ಕೆ ಸರಿಯಾಗಿ ಕುಜನು ತನ್ನ ಸ್ವಕ್ಷೇತ್ರವಾದ ಮೇಷದಿಂದ ವೃಷಭವನ್ನು ಪ್ರವೇಶಿಸುತ್ತಾನೆ. ಆಗಸ್ಟ್ ತಿಂಗಳ 26ನೆಯ ದಿನಾಂಕದಂದು ಹಗಲು 03.10ರ ವರೆಗೂ ಇದೇ ರಾಶಿಯಲ್ಲಿ ಸಂಚರಿಸುತ್ತಾನೆ. ವೃಷಭವು ಕುಜನಿಗೆ ಶತೃಕ್ಷೇತ್ರವಾಗುತ್ತದೆ. ಆದರೆ ಇದೇ ರಾಶಿಯಲ್ಲಿ ಕುಜನ ಮಿತ್ರನಾದ ಗುರುವು ಸಹ ನೆಲೆಸಿದ್ದಾನೆ. ಯಾವುದೇ ಕುಂಡಲಿಯಲ್ಲಿ ಕುಜ ಮತ್ತು ಗುರುಗಳ ಸಂಯೋಜನೆ ಇದ್ದಲ್ಲಿ ಅದನ್ನು ಗುರುಮಂಗಳ ಯೋಗ ಎಂದು ಕರೆಯುತ್ತಾರೆ. ಶ್ರೀ ಸುಬ್ರಹ್ಮಣ್ಯಸ್ವಾಮಿ, ಶ್ರೀಲಕ್ಷ್ಮಿನರಸಿಂಹಸ್ವಾಮಿ ಮತ್ತು ಶ್ರೀ ಗುರುದತ್ತರ ಆರಾದನೆಯಿಂದ ಶುಭಫಲಗಳು ದೊರೆಯುತ್ತವೆ. ಕುಜ ಸಂಕ್ರಣದಿಂದ ಪ್ರಮುಖವಾಗಿ 3 ರಾಶಿಯವರಿಗೆ ಲಾಭಗಳಿವೆ.
ವೃಷಭ ರಾಶಿ
ವೃಷಭ ರಾಶಿಗೆ ಮಂಗಳನು 7 ಮತ್ತು 12ನೇ ಮನೆಯ ಅಧಿಪತಿಯಾಗುತ್ತಾನೆ. ಅಂದರೆ ಇದು ಆತ್ಮೀಯರು, ಪಾಲುದಾರರು, ಬಾಳಸಂಗಾತಿ, ಸ್ನೇಹಿತರು ಮುಂತಾದವರನ್ನು ಸೂಚಿಸುತ್ತದೆ, ಖರ್ಚು ವೆಚ್ಚಗಳನ್ನೂ ತಿಳಿಯಬಹುದು. ಹಾಗೆಯೇ ಗುರುವು 8 ಮತ್ತು 11ನೇ ಮನೆಯ ಅಧಿಪತಿ, ಇದು ಆರೋಗ್ಯ ಮತ್ತು ವರಮಾನವನ್ನು ಸೂಚಿಸುತ್ತದೆ, ಈ ಕಾರಣದಿಂದಾಗಿ ಈ ಮೇಲ್ಕಂಡ ಅವಧಿಯಲ್ಲಿ ಪಾಲುಗಾರಿಕೆಯ ವ್ಯಾಪಾರ ಇದ್ದಲ್ಲಿ ಪಾಲುದಾರರ ನಡುವೆ ಉತ್ತಮ ಆತ್ಮೀಯತೆ ಉಂಟಾಗುತ್ತದೆ, ಇದರಿಂದಾಗಿ ಹಣಕಾಸಿನ ತೊಂದರೆ ಉಂಟಾಗುವುದಿಲ್ಲ.
ದಂಪತಿಗಳ ನಡುವೆ ಅನಾವಶ್ಯಕ ಮನುಸ್ತಾಪವಿದ್ದು ಒಂದು ವೇಳೆ ದೂರವಾಗಿದ್ದಲ್ಲಿ ಉತ್ತಮ ಪ್ರಯತ್ನದಿಂದ ದಂಪತಿಗಳ ನಡುವೆ ಮತ್ತೊಮ್ಮೆ ಪ್ರೀತಿ ವಿಶ್ವಾಸ ಬೆಳೆಯುತ್ತದೆ, ಈ ಕಾರಣದಿಂದಾಗಿ ಆತುರ ಪಡದೆ ಸಂಯಮದಿಂದ ವರ್ತಿಸಬೇಕು. ಅನಾರೋಗ್ಯವಿದ್ದವರಿಗೆ ಉತ್ತಮ ವೈದ್ಯಕೀಯ ಚಿಕಿತ್ಸೆಯಿಂದ ಆರೋಗ್ಯದಲ್ಲಿನ ತೊಂದರೆಯು ಕಡಿಮೆಯಾಗುವುದು. ಆದರೆ ಕೆಲವರಿಗೆ ಶಸ್ತ್ರ ಚಿಕಿತ್ಸೆಯ ಅವಶ್ಯಕತೆ ಇರುತ್ತದೆ. ಹಿಂದೊಮ್ಮೆ ಸಾಲವಾಗಿ ನೀಡಿದ್ದ ಹಣವು ಬಹು ದಿನದ ನಂತರ ನಿಮ್ಮ ಕೈಸೇರಲಿದೆ. ಹಿರಿಯ ಅಣ್ಣ ಮತ್ತು ತಂದೆಯ ನಡುವೆ ಇದ್ದ ಮನಸ್ತಾಪವು ದೂರವಾಗುತ್ತದೆ . ಕುಟುಂಬದಲ್ಲಿ ಶಾಂತಿ ನೆಮ್ಮದಿ ಇರುತ್ತದೆ.
ಕನ್ಯಾ ರಾಶಿ
ಸಾಮಾನ್ಯವಾಗಿ ಕನ್ಯಾ ರಾಶಿ ಅಥವಾ ಕನ್ಯಾ ಲಗ್ನದವರಿಗೆ ಮಂಗಳನು ಯಾವುದೇ ರೀತಿಯ ಚೇತೋಹಾರಿ ಫಲಗಳನ್ನು ನೀಡುವುದಿಲ್ಲ. ಆದರೆ ಗುರುವಿನೊಂದಿಗೆ ನವಮಭಾವದಲ್ಲಿ ನೆಲೆಸಿದ್ದಾನೆ. ಮಂಗಳನು ಮೂರು ಮತ್ತು ಎಂಟನೆಯ ಮನೆಯ ಅಧಿಪತಿ ಆದ್ದರಿಂದ ನಿಮ್ಮ ಪ್ರಯತ್ನ ಮತ್ತು ನಿಮ್ಮ ಆರೋಗ್ಯವನ್ನು ಸೂಚಿಸುತ್ತಾನೆ. ಗುರುವು ಕೇಂದ್ರಾಧಿಪತಿ ದೋಷವನ್ನು ಉಂಟು ಮಾಡಿದರು ನಾಲ್ಕು ಮತ್ತು ಏಳನೆ ಮನೆಯ ಅಧಿಪತಿಯಾಗಿದ್ದಾನೆ. ಆದ್ದರಿಂದ ಕುಟುಂಬದ ಸದಸ್ಯರು ಮತ್ತು ಬಂದು ಮಿತ್ರರನ್ನು ಸೂಚಿಸುತ್ತಾನೆ. ಈ ಕಾರಣದಿಂದಾಗಿ ನಿಮ್ಮ ಉತ್ತಮ ಪ್ರಯತ್ನದಿಂದ ಕುಟುಂಬದಲ್ಲಿ ಶಾಂತಿ ನೆಮ್ಮದಿ ನೆಲೆಸಿರುತ್ತದೆ.
ದಂಪತಿಗಳ ನಡುವೆ ಉಂಟಾಗಿದ್ದ ಅಸಹಕಾರವು ಕೊನೆಗೊಳ್ಳುತ್ತೆ
ಮಂಗಳನು ಭೂಕಾರಕನಾಗಿರುವ ಕಾರಣ ಆತ್ಮೀಯರ ಸಹಾಯ ಮತ್ತು ಹೆಚ್ಚಿನ ಪರಿಶ್ರಮದಿಂದ ಸ್ವಂತ ಮನೆ ಅಥವಾ ಸ್ವಂತ ಜಮೀನನ್ನು ಕೊಳ್ಳಬಹುದು. ತಾಯಿಯವರ ಆರೋಗ್ಯದಲ್ಲಿ ಸುಧಾರಣೆ ಕಂಡು ಬರುತ್ತದೆ. ಅವಿವಾಹಿತರಿಗೆ ವಿವಾಹ ನಿಶ್ಚಯವಾಗುತ್ತದೆ. ದಂಪತಿ ನಡುವೆ ಉಂಟಾಗಿದ್ದ ಅಸಹಕಾರವು ಕೊನೆಗೊಳ್ಳುತ್ತದೆ. ಮತ್ತೊಮ್ಮೆ ದಂಪತಿಗಳ ನಡುವೆ ಉತ್ತಮ ಬಾಂಧವ್ಯ ಉಂಟಾಗುತ್ತದೆ. ಆದರೆ ದಂಪತಿಗಳಿಗೆ ವಿನಾಕಾರಣ ಕೋಪ ಬರುತ್ತದೆ. ಇದರಿಂದ ಶಾಂತಿ ಸಹನೆಯಿಂದ ಬಾಳಿದರೆ ಜೀವನದಲ್ಲಿ ಸುಖ ಸಂತೋಷ ಹೆಚ್ಚುತ್ತದೆ. ರಕ್ತ ದೋಷ ಇದ್ದವರಿಗೆ ಉತ್ತಮ ಆರೋಗ್ಯ ಲಭಿಸುತ್ತದೆ. ಶ್ವಾಸಕೋಶದ ತೊಂದರೆಯಿಂದ ಬಳಲುತ್ತಿರುವವರು ಉತ್ತಮ ವೈದ್ಯಕೀಯ ಚಿಕಿತ್ಸೆಯಿಂದ ಗುಣ ಹೊಂದುತ್ತಾರೆ.
ಮಕರ ರಾಶಿ
ಮಕರ ರಾಶಿಗೆ ಗುರುವು ಮೂರು ಮತ್ತು 12ನೇ ಮನೆ ಅಧಿಪತಿ ಆಗುತ್ತಾನೆ. ಇದರಿಂದಾಗಿ ನಿಮ್ಮ ನಿಸ್ವಾರ್ಥ ಕಾರ್ಯನಿರ್ವಹಣೆ ಮತ್ತು ನಿಮ್ಮ ಉತ್ತಮ ಪ್ರಯತ್ನ ಹಾಗು ಖರ್ಚು ವೆಚ್ಚಗಳನ್ನು ತೋರಿಸುತ್ತಾನೆ. ಹಾಗೆಯೇ ಮಂಗಳನು 4 ಮತ್ತು 11ನೇ ಮನೆಯ ಅಧಿಪತಿ ಆಗುತ್ತಾನೆ. ಇದರಿಂದಾಗಿ ಮಂಗಳನು ಆದಾಯ ಮತ್ತು ಸುಖ ಸಂತೋಷಗಳನ್ನು ನೀಡುತ್ತಾನೆ. ಸಾಮಾನ್ಯವಾಗಿ ಮಕರ ಲಗ್ನ ಅಥವಾ ಮಕರ ರಾಶಿಯಲ್ಲಿ ಜನಿಸಿರುವವರು ಕಷ್ಟವಾದರೂ ತಮ್ಮ ಪಾಲಿನ ಕೆಲಸ ಕಾರ್ಯಗಳನ್ನು ಪೂರ್ಣಗೊಳಿಸುತ್ತಾರೆ. ಆದರೆ ಮಾತಿನ ಭರದಲ್ಲಿ ರಹಸ್ಯವಾಗಿ ಇಡಬೇಕಾದ ವಿಚಾರಗಳನ್ನು ಸಹ ತಿಳಿಸುತ್ತಾರೆ. ಆದ್ದರಿಂದ ಮಾತನ್ನು ಕಡಿಮೆ ಮಾಡಿ ಕೆಲಸ ಕಾರ್ಯಗಳಲ್ಲಿ ಮುಂದುವರೆದರೆ ಉತ್ತಮ ಫಲಿತಾಂಶಗಳು ದೊರೆಯುತ್ತವೆ.
ಯಾರ ಮನಸ್ಸಿಗೂ ನೋವುಂಟು ಮಾಡದೆ ತಮ್ಮ ಪಾಲಿನ ಕರ್ತವ್ಯವನ್ನು ನಿರ್ವಹಿಸುವರು. ಇದರಿಂದಾಗಿ ಎಲ್ಲರ ಪ್ರಶಂಸೆಯೂ ದೊರೆಯುತ್ತದೆ. ಹಣಕಾಸಿನ ವಿಚಾರದಲ್ಲಿ ನಿಯಂತ್ರಣವಿದ್ದರೆ ಹಣವನ್ನು ಉಳಿಸಬಹುದು. ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಹೆಚ್ಚಿನ ಶ್ರಮ ಪಡುವ ಅಗತ್ಯತೆ ಇಲ್ಲ. ನಿಮ್ಮ ಮಕ್ಕಳು ಉತ್ತಮ ಫಲಿತಾಂಶಗಳನ್ನು ಮತ್ತು ಉತ್ತಮ ಅವಕಾಶಗಳನ್ನು ಪಡೆಯುತ್ತಾರೆ. ಆರಂಭದಲ್ಲಿ ಆತಂಕವಿದ್ದರೂ ಕ್ರಮೇಣವಾಗಿ ನಿಮ್ಮ ವರಮಾನವು ಹೆಚ್ಚುತ್ತದೆ.
(ಗಮನಿಸಿ: ಇದು ಪ್ರಚಲಿತದಲ್ಲಿರುವ ಧಾರ್ಮಿಕ ನಂಬಿಕೆಗಳನ್ನು ಆಧರಿಸಿದ ಬರಹ. ಓದುಗರಿಗೆ ಮಾಹಿತಿ ನೀಡುವ ಉದ್ದೇಶದಿಂದಷ್ಟೇ ಪ್ರಕಟಿಸಲಾಗಿದೆ.)
(ಕನ್ನಡದಲ್ಲಿ ಕ್ರಿಕೆಟ್, ಎಚ್‌ಟಿ ಕನ್ನಡ ಬೆಸ್ಟ್. ಐಪಿಎಲ್, ಟಿ20 ವರ್ಲ್ಡ್‌ಕಪ್ ಸೇರಿದಂತೆ ಕ್ರಿಕೆಟ್ ಲೋಕದ ಸಮಗ್ರ ಮಾಹಿತಿ, ತಾಜಾ ವಿದ್ಯಮಾನ, ರನ್-ವಿಕೆಟ್, ಪ್ಲೇಆಫ್, ಟೀಮ್ ಸ್ಟಾಟ್ ವಿಶ್ಲೇಷಣೆಗಳಿಗಾಗಿ kannada.hindustantimes.com/cricket ಕ್ಕೆ ಭೇಟಿ ನೀಡಿ.)