ಮದುವೆಗೆ ಕುಜ ದೋಷ ಅಡ್ಡಿಯಾಗುತ್ತಾ? ಜನರಲ್ಲಿ ಇರುವ ತಪ್ಪು ಕಲ್ಪನೆಗಳು, ದೋಷದ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  ಮದುವೆಗೆ ಕುಜ ದೋಷ ಅಡ್ಡಿಯಾಗುತ್ತಾ? ಜನರಲ್ಲಿ ಇರುವ ತಪ್ಪು ಕಲ್ಪನೆಗಳು, ದೋಷದ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ

ಮದುವೆಗೆ ಕುಜ ದೋಷ ಅಡ್ಡಿಯಾಗುತ್ತಾ? ಜನರಲ್ಲಿ ಇರುವ ತಪ್ಪು ಕಲ್ಪನೆಗಳು, ದೋಷದ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ

ವಧು ಅಥವಾ ವರನ ಕುಂಡಲಿಗಳಲ್ಲಿ ಕುಜನು ಲಗ್ನ, ಚತುರ್ಥ, ಅಷ್ಟಮ, ದ್ವಾದಶದಲ್ಲಿ ಭಾವಗಳಲ್ಲಿ ಇದ್ದರೆ, ಅದನ್ನು ಕುಜ ದೋಷ ಎನ್ನುತ್ತೇವೆ. ಒಂದು ವೇಳೆ ವರ ಮತ್ತು ವಧುಗಳಿಬ್ಬರ ಜಾತಕಗಳಲ್ಲಿಯೂ ಕುಜದೋಷವಿದ್ದಲ್ಲಿ ಯಾವುದೇ ದೋಷವಿರುವುದಿಲ್ಲ. ಕುಜ ದೋಷದ ಬಗ್ಗೆ ಜನರಲ್ಲಿರುವ ತಪ್ಪು ಕಲ್ಪನೆಗಳು ಹಾಗೂ ಇತರೆ ಮಾಹಿತಿ ಇಲ್ಲಿದೆ.

ಕುಜ ದೋಷದ ಬಗ್ಗೆ ಜನರಲ್ಲಿ ಇರುವ ತಪ್ಪು ತಿಳುವಳಿಕೆಯನ್ನು ತಿಳಿಯಿರಿ.
ಕುಜ ದೋಷದ ಬಗ್ಗೆ ಜನರಲ್ಲಿ ಇರುವ ತಪ್ಪು ತಿಳುವಳಿಕೆಯನ್ನು ತಿಳಿಯಿರಿ.

ಮಾನವನ ಜನನದಿಂದ ಮರಣದವರೆಗು ಹೋರಾಟದಿಂದಲೇ ಬಾಳಬೇಕಾಗುತ್ತದೆ. ಕಷ್ಟ ನಷ್ಟಗಳನ್ನು ಎದುರಿಸಿ ಗೆಲ್ಲಲೇಬೇಕಾಗುತ್ತದೆ. ಬಾಲ್ಯ ಕಳೆದು ಯೌವನಾವಸ್ಥೆಗೆ ಬಂದರೆ ವಿವಾಹದ ಮಾತುಕತೆ ನಡೆಯುತ್ತದೆ. ಇಂತಹ ಸಂದರ್ಭದಲ್ಲಿ ಪ್ರತಿಯೊಬ್ಬರ ಮನದಲ್ಲಿಯೂ ಮೂಡುವ ವಿಚಾರ ಎಂದರೆ ಕುಜದೋಷವಿಲ್ಲದ ವರ ಅಥವಾ ವಧುವನ್ನು ವಿವಾಹವಾಗಬೇಕೆಂಬುದು. ಅದರಲ್ಲಿಯೂ ಹೆಣ್ಣಿನ ಜಾತಕದಲ್ಲಿ ಕುಜದೋಷವಿದ್ದಲ್ಲಿ ಮದುವೆ ಎಂಬುದು ದೊಡ್ಡ ಸಾಹಸವೇ ಆಗುತ್ತದೆ. ಇಂಥಹವರನ್ನು ಮದುವೆಯಾದರೆ ವರನ ಆಯುಷ್ಯಕ್ಕೆ ಧಕ್ಕೆ ಬರುತ್ತದೆ. ಎಂದು ಮಾತನಾಡುತ್ತಾರೆ. ಆದರೆ ಇದು ಸರ್ವಥಾ ಸುಳ್ಳು. ಇದಕ್ಕೆ ಕಾರಣ ಕುಜದೋಷ ಇದ್ದರೂ ಅದರಿಂದ ಯಾವುದೇ ತೊಂದರೆ ಇರುವುದಿಲ್ಲ.

ಕೆಲವು ನಕ್ಷತ್ರಗಳು, ಲಗ್ನಗಳು, ಕುಂಡಲಿಯಲ್ಲಿನ ಗ್ರಹಗಳ ದೃಷ್ಟಿ, ಗ್ರಹಗಳ ಯುತಿ ಇನ್ನೂ ಹತ್ತಾರು ಕಾರಣಗಳಿಂದ ಕುಂಡಲಿಯಲ್ಲಿಯೆ ಕುಜದೋಷವು ತಾನಾಗಿಯೆ ಕೊನೆಗೊಂಡಿರುತ್ತದೆ. ದಂಪತಿಗಳ ಒಬ್ಬರ ಕುಂಡಲಿಯಲ್ಲಿ ಕುಜದೋಷ ಇದ್ದು ಇನ್ನೊಬ್ಬರಲ್ಲಿ ಸಂಬಂಧಿತ ಗ್ರಹಗಳು ಶುಭರು ಮತ್ತು ಸಶಕ್ತರಾದಲ್ಲಿ ಯಾವುದೇ ತೊಂದರೆ ಕಂಡುಬರುವುದಿಲ್ಲ. ಕುಜ ಎಂದಲ್ಲಿ ಕೇವಲ ಪತಿಯನ್ನು ಸೂಚಿಸುವುದಿಲ್ಲ. ಕುಜನಿಂದ ಭೂಮಿ, ರಕ್ತ, ಸೋದರರ ಬಗ್ಗೆಯೂ ತಿಳಿಯಬಹುದು. ಪುರುಷರ ಕುಂಡಲಿಯಲ್ಲಿ ಶುಕ್ರನು ಪತ್ನಿಯನ್ನು ಸೂಚಿಸುತ್ತಾನೆ. ಶುಕ್ರನ ಬಗ್ಗೆ ಇರದ ಭಯ ಖಂಡಿತವಾಗಿ ಕುಜನ ಬಗ್ಗೆ ತೋರುವ ಅಗತ್ಯವಿಲ್ಲ. ಕುಜನಿಗೆ ಮಂಗಳ ಎಂಬ ಒಳ್ಳೆಯ ಹೆಸರನ್ನೂ ಋಷಿಮುನಿಗಳು ನೀಡಿದ್ದಾರೆ ಎಂಬುದನ್ನು ಖಂಡಿತ ಮರೆಯಬಾರದು.

ಕುಜ ದೋಷ ಎಂದರೇನು?

ಸಾಮಾನ್ಯವಾಗಿ ವಧು ಅಥವಾ ವರನ ಕುಂಡಲಿಗಳಲ್ಲಿ ಕುಜನು ಲಗ್ನ, ಚತುರ್ಥ, ಅಷ್ಟಮ, ದ್ವಾದಶದಲ್ಲಿ ಭಾವಗಳಲ್ಲಿ ಇದ್ದರೆ, ಅದನ್ನು ಕುಜ ದೋಷ ಎನ್ನುತ್ತೇವೆ. ಒಂದು ವೇಳೆ ವರ ಮತ್ತು ವಧುಗಳಿಬ್ಬರ ಜಾತಕಗಳಲ್ಲಿಯೂ ಕುಜದೋಷವಿದ್ದಲ್ಲಿ ಯಾವುದೇ ದೋಷವಿರುವುದಿಲ್ಲ. ಕುಜನೂ ಸಪ್ತಮದಲ್ಲಿದ್ದು ಶನಿಯ ದೃಷ್ಟಿ ಇದ್ದರೆ ಅದನ್ನು ಪ್ರಬಲ ದೋಷ ಎನ್ನುತ್ತಾರೆ. ಆದರೆ ಕೆಲವು ಧಾರ್ಮಿಕ ಮತ್ತು ಜೋತಿಷ್ಯಗ್ರಂಥಗಳಲ್ಲಿ ಇದನ್ನು ಕುಜದೋಷ ಎಂದು ಕರೆಯುವುದಿಲ್ಲ.

ಯಾವಾಗ ಕುಜ ದೋಷ ಉಂಟಾಗುವುದಿಲ್ಲ

ಕುಜನು ಮೇಷ, ಸಿಂಹ, ವೃಶ್ಚಿಕ, ಧನಸ್ಸು, ಮಕರ ಮತ್ತು ಮೀನರಾಶಿಗಳಲ್ಲಿ ಇದ್ದಲ್ಲಿ ಕುಜದೋಷ ಇದ್ದರೂ ಅದರಿಂದ ಯಾವುದೇ ತೊಂದರೆ ಉಂಟಾಗದು. ಕುಜನು ಯಾವುದೇ ಮನೆಯಲ್ಲಿ ಇದ್ದರು ಗುರುವಿನ ದೃಷ್ಟಿ ಇದ್ದಲ್ಲಿ ಅಥವಾ ಗುರುವಿನ ಜೊತೆ ಇದ್ದಲ್ಲಿ ಕುಜದೋಷ ಇರುವುದಿಲ್ಲ. ಆಯುಷ್ಯವನ್ನು ಕುಂಡಲಿಯಲ್ಲಿ ಎಂಟನೆ ಮನೆ ಮತ್ತು ಎಂಟರ ಅಧಿಪತಿಗಳು ಸೂಚಿಸುತ್ತಾರೆ. ಆದ್ದರಿಂದ ವರನ ಕುಂಡಲಿಯಲ್ಲಿ ಲಗ್ನಾಧಿಪತಿ ಮತ್ತು ಅಷ್ಠಮಾಧಿಪತಿಗಳು ಶಕ್ತರಾಗಿದ್ದು ಹುಡುಗಿಯ ಜಾತಕದಲ್ಲಿ ಕುಜದೋಷವಿದ್ದರೂ ಯಾವುದೇ ತೊಂದರೆ ಆಗದು. ಇದೇ ಮಾದರಿಯಲ್ಲಿ ವಧುವಿನ ಜಾತಕದಲ್ಲಿ ಲಗ್ನಾಧಿಪತಿ ಮತ್ತು ಅಷ್ಠಮಾಧಿಪತಿಗಳು ಶಕ್ತರಾಗಿದ್ದಲ್ಲಿ ವರನ ಕುಂಡಲಿಯಲ್ಲಿ ಕುಜ ದೋಷವಿದ್ದರೂ ಯಾವುದೇ ತೊಂದರೆ ಆಗದು. ಯಾವುದೇ ಜಾತಕದಲ್ಲಿ ಕುಜನು ವೃಷಭ ಅಥವ ತುಲಾ ಮತ್ತು ಶುಕ್ರನು ಮೇಷ ಅಥವ ವೃಶ್ಚಿಕದಲ್ಲಿ ಇದ್ದಲ್ಲಿ ಕುಜನಿದ್ದಲ್ಲಿ ಕುಜ ದೋಷದ ತೊಂದರೆ ಬರುವುದಿಲ್ಲ. ಮೇಷ ಮತ್ತು ವೃಶ್ಚಿಕ ರಾಶಿಯಲ್ಲಿ ಕುಜ ಇದ್ದಲ್ಲಿ ಕುಜ ದೋಷವಿರುವುದಿಲ್ಲ .

ಧನುರ್ ಲಗ್ನದಲ್ಲಿ ಜನಿಸಿದವರಿಗೆ ಕುಜದೋಷವಿದ್ದಾರೂ ಯಾವುದೇ ತೊಂದರೆ ಬಾರದು. ಮೀನ ಲಗ್ನದಲ್ಲಿ ಜನಿಸಿದವರಿಗೆ ಕುಜನು ಒಂಬತ್ತರ ಅಧಿಪತಿ ಆಗುವ ಕಾರಣ ಅವರಿಗೂ ಕುಜದೋಷದ ವಿಚಾರವೇ ಬರುವುದಿಲ್ಲ. ಒಂದು ವೇಳೆ ಕುಂಡಲಿಯಲ್ಲಿ ಕುಜದೋಷವಿದ್ದರೂ ವಿವಾಹವು ಅನಿವಾರ್ಯವಾದಲ್ಲಿ ವಿವಾಹ ಮಹೂರ್ತವನ್ನು ಸರಿಯಾದ ಮಾದರಿಯಲ್ಲಿ ನಿರ್ಧರಿಸಬೇಕು. ಇಂತಹ ಸಂದರ್ಭದಲ್ಲಿ ಯಾವುದೇ ದೋಷ ಉಂಟಾಗುವುದಿಲ್ಲ .

ರೋಹಿಣಿ, ಸ್ವಾತಿ ,ರೇವತಿ ,ಮೃಗಶಿರ, ಮೂಲ, ಮುಖ, ಹ,ಸ್ತ ಅನುರಾಧ, ಉತ್ತರ, ಉತ್ತರಾಷಾಡ ಮತ್ತು ಉತ್ತರಭಾದ್ರ ನಕ್ಷತ್ರಗಳಲ್ಲಿ ವಿವಾಹವನ್ನು ಮಾಡಬೇಕಾಗುತ್ತದೆ. ಇದರಿಂದ ಕುಜದೋಷ ಅಥವ ಇನ್ನಿತರ ದೋಷವಿದ್ದರೂ ಅದರ ಪ್ರಾಬಲ್ಯತ ಕಂಡುಬರುವುದಿಲ್ಲ. ಕುಜನು ವರನ ಅಥವಾ ವಧುವಿನ ಆಯಸ್ಸನ್ನು ಸೂಚಿಸುವುದಿಲ್ಲ. ಕುಜನಿಂದ ರಕ್ತದ ಬಗ್ಗೆ ಸಹ ತಿಳಿಯಬಹುದು. ತಮ್ಮ ಅಥವ ತಂಗಿಯ ಬಗ್ಗೆಯೂ ತಿಳಿಯಬಹುದು. ಈ ಕಾರಣದಿಂದ ಕುಜ ದೋಷವಿದ್ದಲ್ಲಿ ರಕ್ತದ ಒತ್ತಡದ ದೋಷ ಬರುವ ಸಾಧ್ಯತೆಯೂ ಇರುತ್ತದೆ.

ಈ ಎಲ್ಲಾ ಕಾರಣಗಳಿಂದಾಗಿ ಕೇವಲ ಕುಜ ದೋಷವಿದ್ದ ಪಕ್ಷದಲ್ಲಿ ವಿವಾಹವನ್ನು ರದ್ದು ಮಾಡಬಾರದು. ತಿಳಿದವರಿಂದ ಗ್ರಹ ಮೈತ್ರಕೂಟದ ,ಯೋನಿ ಕೂಟ, ವಶಕೂಟ, ಗಣಕೂಟದ ಬಗ್ಗೆ ತಿಳಿದುಕೊಳ್ಳುವುದು ಒಳ್ಳೆಯದು. ಜೋತಿಷ್ಯದಲ್ಲಿ ಪ್ರತಿಯೊಂದು ದೋಷಕ್ಕೂ ತ್ರಿಕಾಲಜ್ಞಾನಿಗಳು ಪರಿಹಾರವನ್ನು ಸೂಚಿಸಿದ್ದಾರೆ.

(ಕನ್ನಡದಲ್ಲಿ ಕ್ರಿಕೆಟ್, ಎಚ್‌ಟಿ ಕನ್ನಡ ಬೆಸ್ಟ್‌. ಐಪಿಎಲ್, ಟಿ20 ವರ್ಲ್ಡ್‌ಕಪ್ ಸೇರಿದಂತೆ ಕ್ರಿಕೆಟ್ ಲೋಕದ ಸಮಗ್ರ ಮಾಹಿತಿ, ತಾಜಾ ವಿದ್ಯಮಾನ, ರನ್-ವಿಕೆಟ್, ಪ್ಲೇಆಫ್, ಟೀಮ್ ಸ್ಟಾಟ್ ವಿಶ್ಲೇಷಣೆಗಳಿಗಾಗಿ kannada.hindustantimes.com/cricket ಕ್ಕೆ ಭೇಟಿ ನೀಡಿ.)

Whats_app_banner
ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.