ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  Horoscope: ಕಾಳಸರ್ಪ ದೋಷ, ಪಿತೃ ದೋಷ ಸೇರಿದಂತೆ ಜನ್ಮ ಜಾತಕದಲ್ಲಿ ಕಂಡುಬರುವ 5 ಪ್ರಮುಖ ದೋಷಗಳಿವು

Horoscope: ಕಾಳಸರ್ಪ ದೋಷ, ಪಿತೃ ದೋಷ ಸೇರಿದಂತೆ ಜನ್ಮ ಜಾತಕದಲ್ಲಿ ಕಂಡುಬರುವ 5 ಪ್ರಮುಖ ದೋಷಗಳಿವು

ಜನ್ಮ ದಿನಾಂಕದ ಆಧಾರದ ಮೇಲೆ ಜಾತಕ ಬರೆಯಲಾಗುತ್ತದೆ. ಆದರೆ ಹುಟ್ಟಿದ ಸಮಯದಲ್ಲಿ ಕೆಲವೊಮ್ಮೆ ಗ್ರಹ ಗತಿಗಳು ಅನುಕೂಲಕರವಾಗಿರುವುದಿಲ್ಲ. ಈ ಸಮಯದಲ್ಲಿ ಕುಂಡಲಿಯಲ್ಲಿ ದೋಷ ಉಂಟಾಗಬಹುದು. ನಾಡಿ ದೋಷ, ಪಿತೃ ದೋಷ ಸೇರಿದಂತೆ ಜಾತಕದಲ್ಲಿ ಕಂಡುಬರುವ 5 ಪ್ರಮುಖ ದೋಷಗಳಿವು

ಕಾಳಸರ್ಪ ದೋಷ, ಪಿತೃ ದೋಷ ಸೇರಿದಂತೆ  ಜನ್ಮ ಜಾತಕದಲ್ಲಿ ಕಂಡುಬರುವ 5 ಪ್ರಮುಖ ದೋಷಗಳಿವು
ಕಾಳಸರ್ಪ ದೋಷ, ಪಿತೃ ದೋಷ ಸೇರಿದಂತೆ ಜನ್ಮ ಜಾತಕದಲ್ಲಿ ಕಂಡುಬರುವ 5 ಪ್ರಮುಖ ದೋಷಗಳಿವು

ಜಾತಕ ಎನ್ನುವುದು, ನಾನು ಹುಟ್ಟಿದ ಸಮಯದಲ್ಲಿ ಗ್ರಹಗತಿಗಳ ಸ್ಥಾನ, ಹುಟ್ಟಿದ ದಿನ, ಸಮಯವವನ್ನು ಲೆಕ್ಕಾಚಾರ ಹಾಕಿ ಬರೆಯಲಾಗುತ್ತದೆ. ಆ ವ್ಯಕ್ತಿ ಭವಿಷ್ಯದಲ್ಲಿ ಯಾವ ರೀತಿ ಬದುಕುತ್ತಾರೆ, ಅವರ ವೃತ್ತಿ ಜೀವನ ಹೇಗಿರುತ್ತದೆ, ವೈಯಕ್ತಿಕ ಜೀವನ ಹೇಗಿರುತ್ತದೆ ಎಂಬುದನ್ನು ಜ್ಯೋತಿಷ್ಯದ ಮೂಲಕ ನಿರ್ಧರಿಸಬಹುದು. ಆದರೆ ಕೆಲವೊಮ್ಮೆ ಕುಂಡಲಿಯಲ್ಲಿ ದೋಷಗಳು ಕಂಡುಬರುತ್ತವೆ. ದೋಷ ಎಂದರೇನು? ಜಾತಕದಲ್ಲಿ ಕಂಡುಬರುವ ಪ್ರಮುಖ ದೋಷಗಳೇನು? ಎಂಬುದರ ಬಗ್ಗೆ ತಿಳಿಯೋಣ.

ದೋಷ ಎಂದರೇನು?

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ದೋಷವೆಂದರೆ ಜಾತಕದಲ್ಲಿನ 12 ಮನೆಗಳಲ್ಲಿರುವ ಗ್ರಹಗಳು ಉಂಟು ಮಾಡುವ ಪ್ರತಿಕೂಲ ಪರಿಸ್ಥಿತಿಯಾಗಿದೆ. ಗ್ರಹಗಳ ಚಲನೆಯಿಂದ ಜೀವನದ ಪ್ರತಿಯೊಂದು ಘಟ್ಟದಲ್ಲೂ ಅಡೆತಡೆ ಉಂಟಾಗುತ್ತದೆ. ಅದನ್ನೇ ದೋಷ ಎಂದು ಕರೆಯಲಾಗುತ್ತದೆ. ಅದು ವ್ಯಕ್ತಿಯ ಆರೋಗ್ಯ, ಸಂಪತ್ತು ಸೇರಿದಂತೆ ಜೀವನದ ಪ್ರಮುಖ ಅಂಶಗಳ ಮೇಲೆ ಪರಿಣಾಮವನ್ನು ಬೀರುತ್ತದೆ. ದೋಷಗಳಿಂದ ಜೀವನ ಕಷ್ಟಕರವೆನಿಸಲು ಪ್ರಾರಂಭವಾಗುತ್ತದೆ. ಜಾತಕಗಳಲ್ಲಿ ಅನೇಕ ದೋಷಗಳನ್ನು ಕಾಣಬಹುದು. ಎಲ್ಲಾ ದೋಷಗಳು ಒಂದಲ್ಲಾ ಒಂದು ರೀತಿಯ ಪರಿಣಾಮಗಳನ್ನುಂಟು ಮಾಡುತ್ತವೆ. ಆದರೆ ಕೆಲವು ದೋಷಗಳಿಗೆ ತಕ್ಷಣದ ಪರಿಹಾರದ ಅಗತ್ಯವಿರುತ್ತದೆ. ಆ ದೋಷಗಳು ಯಾವುವು ನೋಡೋಣ.

ಜಾತಕದಲ್ಲಿರುವ 5 ಪ್ರಮುಖ ದೋಷಗಳು

1. ಮಂಗಳ ದೋಷ

ಮಂಗಳ ದೋಷವನ್ನು ಕುಜ ದೋಷ, ಅಂಗಾರಕ ದೋಷ, ಮಾಂಗಲಿಕ ದೋಷ ಎಂದೂ ಕರೆಯುತ್ತಾರೆ. ಮಂಗಳ ದೋಷ ಹೊಂದಿರುವ ವ್ಯಕ್ತಿಯ ಮದುವೆ ವಿಳಂಬವಾಗಬಹುದು. ಒಂದು ವೇಳೆ ಸರಿಯಾದ ಸಮಯಕ್ಕೆ ಮದುವೆ ಆಗಬಹುದು. ದಾಂಪತ್ಯ ಜೀವನದಲ್ಲಿ ತೊಂದರೆಗಳನ್ನು ಎದುರಿಸಬಹುದು. ಜೊತೆಗೆ ದಾಂಪತ್ಯದಲ್ಲಿ ಸ್ಥಿರತೆಯನ್ನು ಕಾಯ್ದುಕೊಳ್ಳಲು ಕಷ್ಟಪಡಬಹುದು. ಮಂಗಳ ದೋಷವಿರುವವರ ವೈವಾಹಿಕ ಜೀವನ ಬಿರುಕಿನಿಂದ ಕೊನೆಗೊಳ್ಳಬಹುದು. ವೈವಾಹಿಕ ಜೀವನ ಮಾತ್ರವಲ್ಲ, ವೃತ್ತಿ ಜೀವನದಲ್ಲಿ ಕೂಡಾ ಸಮಸ್ಯೆಗಳನ್ನು ತರುತ್ತದೆ ಎಂದು ನಂಬಲಾಗಿದೆ.

2. ಕಾಳ ಸರ್ಪ ದೋಷ

ಈ ದೋಷವನ್ನು ಕಾಳಸರ್ಪ ಯೋಗವೆಂದೂ ಕರೆಯಲಾಗುತ್ತದೆ. ಇದು ವ್ಯಕ್ತಿಯ ಜನನದ ಸಮಯದಲ್ಲಿ ಒಂದು ನಿರ್ದಿಷ್ಟ ಗ್ರಹಗಳ ಜೋಡಣೆಯಿಂದಾಗಿ ಸಂಭವಿಸುತ್ತದೆ. ಜಾತಕದಲ್ಲಿ ಎಲ್ಲಾ 7 ಗ್ರಹಗಳು ರಾಹು ಮತ್ತು ಕೇತುವಿನ ನಡುವೆ ಸ್ಥಾನ ಪಡೆದಾಗ ಅದು ಸರ್ಪವನ್ನು ಹೋಲುವ ಮಾದರಿಯನ್ನು ರೂಪಿಸುತ್ತದೆ. ಆಗ ಈ ದೋಷವು ಸಂಭವಿಸುತ್ತದೆ. ರಾಹುವು ಸರ್ಪದ ತಲೆಯನ್ನು ಸಂಕೇತಿಸಿದರೆ, ಕೇತುವು ಸರ್ಪದ ಬಾಲವಾಗಿರುತ್ತದೆ. ವೈದಿಕ ಜ್ಯೋತಿಷ್ಯ ಶಾಸ್ತ್ರದಲ್ಲಿ ಇದನ್ನು ಕಾಳಸರ್ಪ ಯೋಗ ಎಂದು ಕರೆಯಲಾಗುತ್ತದೆ. ರಾಹುವಿಗೆ ಸಂಬಂಧಿಸಿದಂತೆ ಕಾಳ ಅಥವಾ ಕಾಲನನ್ನು ಸರ್ವೋಚ್ಚ ದೇವರೆಂದು ಕರೆದರೆ ಸರ್ಪವು ಅದರ ಸ್ವಭಾವನ್ನು ಪ್ರತಿನಿಧಿಸುತ್ತದೆ. ಹಾಗಾಗಿ ಕಾಳ ಸರ್ಪ ಯೋಗ ಅಥವಾ ದೋಷ ಎಂಬ ಹೆಸರು ಬಂದಿದೆ.

3. ನಾಡಿ ದೋಷ

ಜ್ಯೋತಿಷ್ಯ ಶಾಸ್ತ್ರವು ಮಾನವನ ದೇಹದಲ್ಲಿ ಮೂರು ವಿಭಿನ್ನ ರೀತಿಯ ನಾಡಿಗಳನ್ನು ಗುರುತಿಸುತ್ತದೆ. ಮೊದಲನೆಯದಾಗಿ ಆದಿ ನಾಡಿಯು ವಾಯು ಅಂಶವನ್ನು ಪ್ರತಿನಿಧಿಸುತ್ತದೆ. ಎರಡನೇಯದಾಗಿ ಮಧ್ಯ ನಾಡಿ. ಇದು ಅಗ್ನಿ ಅಂಶವನ್ನು ಪ್ರತಿನಿಧಿಸುತ್ತದೆ. ಕೊನೆಯದಾಗಿ ಅಂತ್ಯ ನಾಡಿ. ಇದು ನೀರಿನ ಅಂಶವನ್ನು ಪ್ರತಿನಿಧಿಸುತ್ತದೆ. ಇದು ದೇಹದೊಳಗೆ ಶಕ್ತಿಯ ಹರಿವಿನ ದಿಕ್ಕನ್ನು ತೋರಿಸುತ್ತದೆ. ನಾಡಿ ದೋಷವು ವಧು ಮತ್ತು ವರನ ನಕ್ಷತ್ರಗಳು ಒಂದೇ ನಾಡಿಯ ವರ್ಗಕ್ಕೆ ಸೇರಿದಾಗ ಸಂಭವಿಸುತ್ತದೆ. ಜ್ಯೋತಿಷ್ಯ ಶಾಸ್ತ್ರದಲ್ಲಿ ಇದನ್ನು ದೋಷ ಎಂದು ಕರೆಯಲಾಗುತ್ತದೆ. ಈ ದೋಷವು ಸಮಸ್ಯೆಗಳನ್ನು ಉಂಟುಮಾಡುತ್ತದೆ. ಇದರಿಂದ ವೈವಾಹಿಕ ಜೀವನದಲ್ಲಿ ಏರುಪೇರಾಗುತ್ತದೆ. ವಧು ಮತ್ತು ವರ ಇಬ್ಬರೂ ಏಕನಾಡಿಯಾಗಿದ್ದರೆ ಅವರು ಶೂನ್ಯ (0) ಅಂಕವನ್ನು ಪಡೆಯುತ್ತಾರೆ.

4. ಶನಿ ಸಾಡೆಸಾತಿ ದೋಷ

ಶನಿ ಗ್ರಹದ ಸಂಚಾರದಿಂದ ಸಾಡೆಸಾತಿ ಶನಿ ದೋಷ ದೋಷ ಉಂಟಾಗುತ್ತದೆ. ಶನಿಯು ಕರ್ಮ, ಶಿಸ್ತು ಮತ್ತು ನ್ಯಾಯದ ದೇವರಾಗಿದ್ದಾನೆ. ಇದು ನಿಧಾನವಾಗಿ ಸಾಗುವ ಗ್ರಹವಾಗಿದೆ. ಸಾಡೇ ಸಾತ್‌ ಶನಿ ದೋಷವು ಒಟ್ಟು ಏಳೂವರೆ ವರ್ಷಗಳ ದೀರ್ಘ ಸಮಯವಾಗಿದೆ. ಆ ಸಮಯದಲ್ಲಿ ವ್ಯಕ್ತಿಗೆ ಜೀವನದ ಪ್ರಮುಖ ಪಾಠಗಳನ್ನು ಕಲಿಸಲು ಶನಿಯು ಹಲವಾರು ಸವಾಲು ಮತ್ತು ತೊಂದರೆಗಳನ್ನು ನೀಡುತ್ತಾನೆ. ಇದು ಜೀವನದ ವಿವಿಧ ಕ್ಷೇತ್ರಗಳಲ್ಲಿ ನಕಾರಾತ್ಮಕ ಪರಿಣಾಮ ಬೀರಬಹುದು. ಕೈಗೊಳ್ಳುವ ಪ್ರತಿ ಕೆಲಸದಲ್ಲೂ ವಿಳಂಬ, ಅಡೆತಡೆಗಳು, ಹಣಕಾಸಿನ ನಷ್ಟ, ಆರೋಗ್ಯ ಸಮಸ್ಯೆಗಳು, ನಿರಾಶೆ ಮುಂತಾದವುಗಳನ್ನು ವ್ಯಕ್ತಿಯು ಎದುರಿಸಬೇಕಾಗುತ್ತದೆ. ಭಾವನಾತ್ಮಕ ಒತ್ತಡ, ಖಿನ್ನತೆ, ಒಂಟಿತನ ಸಹ ಕಾಡಬಹುದು.

5. ಪಿತೃ ದೋಷ

ಹೆಸರೇ ಸೂಚಿಸುವಂತೆ ಇದು ಪೂರ್ವಜರಿಂದ ಉಂಟಾಗುವ ದೋಷವಾಗಿದೆ. ಪಿತೃ ದೋಷ ಎಂಬ ಪದವು ಪೂರ್ವಜರ ಋಣಾತ್ಮಕ ಕರ್ಮಗಳು ಅಥವಾ ವಂಶಸ್ಥರ ಜೀವನದಲ್ಲಿದ್ದ ಅಡೆತಡೆಗಳು ಮತ್ತು ತೊಂದರೆಗಳು ಮುಂದುವರಿದು ಈಗಿನ ಪೀಳಿಗೆಯವರನ್ನು ಕಾಡುವ ದೋಷವಾಗಿದೆ. ಇದು ಪೂರ್ವಜರಿಗೆ ತೋರಿದ ಅಗೌರವವನ್ನು ಸೂಚಿಸುತ್ತದೆ. ಅಂದರೆ ಪಿತೃ ಕಾರ್ಯಗಳಲ್ಲಿ ನಡೆದ ಅಸಮರ್ಪಕ ಆಚರಣೆ ಅಥವಾ ಬಯಕೆಗಳು ಈಡೇರದಿರುವಂತಹ ಹಲವಾರು ಕಾರಣಗಳಿಂದ ಇದು ಸಂಭವಿಸುತ್ತದೆ. ಪೂರ್ವಜರು ಅತೃಪ್ತರಾದಾಗ ಈ ದೋಷ ಸಂಭವಿಸುತ್ತದೆ.

ಎಲ್ಲಾ ದೋಷಗಳಿಗೂ ಪರಿಹಾರ ಇದ್ದೇ ಇರುತ್ತದೆ. ಸೂಕ್ತ ಜ್ಯೋತಿಷಿಗಳ ಬಳಿ ಜಾತಕ ತೋರಿಸಿ ಪರಿಹಾರ ಕೈಗೊಳ್ಳಬಹುದು.

ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ "ಹಿಂದೂಸ್ತಾನ್ ಟೈಮ್ಸ್ ಕನ್ನಡ" ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ.