Makara Sankranti: ವಿವಿಧ ರಾಶಿಗಳ ಮೇಲೆ ಮಕರ ಸಂಕ್ರಾಂತಿಯ ಫಲಾಫಲ ಹೇಗಿದೆ? ಅಂದು ಯಾವ ರಾಶಿಯವರು ಏನು ಮಾಡಬೇಕು, ಇಲ್ಲಿದೆ ವಿವರ
Makara Sankranti Horoscope: ಮಕರ ಸಂಕ್ರಾಂತಿ ದಿನದಂದು ವಿವಿಧ ರಾಶಿಯವರು ತಮ್ಮದೇ ಆದ ಮಾದರಿಯಲ್ಲಿ ಸೂರ್ಯನಿಗೆ ಪೂಜೆಯನ್ನು ಅರ್ಪಿಸಬೇಕು. ಕೇವಲ ಪೂಜೆಯನ್ನು ಮಾಡಿದರೆ ಯಾವುದೇ ಉಪಯೋಗ ಇರುವುದಿಲ್ಲ. ಮೊದಲನೆಯದಾಗಿ ಮಾಡಬೇಕಾದ ದಾನ ಧರ್ಮ ಅತಿ ಮುಖ್ಯವಾಗುತ್ತದೆ.
ಹಿಂದೂಗಳ ಮೊದಲ ಹಬ್ಬ ಯುಗಾದಿ. ಆದರೆ ಕ್ಯಾಲೆಂಡರ್ ವರ್ಷದ ಪ್ರಕಾರ ಮೊದಲ ಹಬ್ಬವೇ ಮಕರ ಸಂಕ್ರಾಂತಿ. ಸೂರ್ಯನು ದಕ್ಷಿಣದಿಂದ ಉತ್ತರಕ್ಕೆ ತನ್ನ ಪಥವನ್ನು ಬದಲಾಯಿಸುತ್ತಾನೆ. ಇದನ್ನು ಉತ್ತರಾಯಣ ಎಂದು ಕರೆಯುತ್ತೇವೆ. ಇದರ ಅವಧಿ ಆರು ತಿಂಗಳಾಗಿರುತ್ತದೆ. ಧಾರ್ಮಿಕ ಗ್ರಂಥಗಳ ಪ್ರಕಾರ ಮತ್ತು ಪುರಾಣವನ್ನು ಆಧರಿಸಿ ಈ ಅವಧಿಯಲ್ಲಿ ಸ್ವರ್ಗದ ಬಾಗಿಲು ತೆರೆದಿರುತ್ತದೆ ಎಂದು ನಂಬುತ್ತೇವೆ.
ಈ ದಿನದಂದು ವಿವಿಧ ರಾಶಿಯವರು ತಮ್ಮದೇ ಆದ ಮಾದರಿಯಲ್ಲಿ ಸೂರ್ಯನಿಗೆ ಪೂಜೆಯನ್ನು ಅರ್ಪಿಸಬೇಕು. ಕೇವಲ ಪೂಜೆಯನ್ನು ಮಾಡಿದರೆ ಯಾವುದೇ ಉಪಯೋಗ ಇರುವುದಿಲ್ಲ. ಮೊದಲನೆಯದಾಗಿ ಮಾಡಬೇಕಾದ ದಾನ ಧರ್ಮ ಅತಿ ಮುಖ್ಯವಾಗುತ್ತದೆ. ದೈವಂ ಮಾನುಷ ರೂಪೇಣ ಎಂಬ ವಾಕ್ಯವಿದೆ. ಇದರ ಅನ್ವಯ ಪ್ರತಿಯೊಬ್ಬರಲ್ಲಿಯೂ ದೇವರ ಅಂಶವಿರುತ್ತದೆ ಎಂದು ನಂಬಬಹುದು. ಈ ವಿಚಾರವೂ ಸಹ ಮಾಡಬೇಕಾಗುತ್ತದೆ. ಜಾತಕದಲ್ಲಿನ ಲಗ್ನವನ್ನು ಪರಿಗಣಿಸಬೇಕು. ಆದರೆ ಲಗ್ನದ ಅರಿವು ಇಲ್ಲದೆ ಹೋದಲ್ಲಿ ರಾಶಿಯನ್ನು ಪರಿಗಣಿಸಬೇಕು.
ಬೆಳಗಿನ ವೇಳೆ ಎಂಟು ಗಂಟೆಯ ಒಳಗೆ ಸೂರ್ಯನ ಪೂಜೆಯನ್ನು ಮಾಡುವುದು ಶ್ರೇಷ್ಠ. ಸೂರ್ಯನಿಗೆ ಕೆಂಪು ಹೂಗಳನ್ನು ಅರ್ಪಿಸುವುದು ಒಳ್ಳೆಯದು. ತಾಮ್ರದ ಸಣ್ಣಪಾತ್ರೆಯಲ್ಲಿ ನೀರನ್ನು ತೆಗೆದುಕೊಂಡು ಸೂರ್ಯನಿಗೆ 12 ಬಾರಿ ಅರ್ಘ್ಯವನ್ನು ನೀಡಬೇಕು. ಉಳಿದಂತೆ ಪಂಚಾಮೃತ ಅಭಿಷೇಕದ ಸಮೇತ ಷೋಡಶೋಪಚಾರ ಪೂಜೆಯನ್ನು ಮಾಡಬೇಕು. ಉಳಿದಂತೆ ಪ್ರತ್ಯೇಕ ರಾಶಿಗಳಿಗೂ ವಿಭಿನ್ನ ರೀತಿಯ ಪರಿಹಾರವು ಈ ಕೆಳಕಂಡಂತಿದೆ. ಈ ಅವಧಿಯಲ್ಲಿ ಬೆಳಗಿನ ವೇಳೆಯಲ್ಲಿ ಮಾತ್ರ ಆದಿತ್ಯ ಹೃದಯ ಅಥವಾ ಸೌರ ಸೂಕ್ತವನ್ನು ಪಠಣೆ ಮಾಡುವುದು ಒಳ್ಳೆಯದು. ಇದರಿಂದಾಗಿ ಬಹು ದಿನಗಳಿಂದ ಕಾಡುತ್ತಿದ್ದ ಆರೋಗ್ಯದಲ್ಲಿಯೂ ಸುಧಾರಣೆ ಕಂಡುಬರುತ್ತದೆ. ತಂದೆಯ ಅಥವಾ ಕುಟುಂಬದ ಹಿರಿಯರ ಜೊತೆಗಿನ ಮನಸ್ತಾಪವು ಕೊನೆಗೊಳ್ಳುತ್ತದೆ. ಉದ್ಯೋಗ ಕ್ಷೇತ್ರದಲ್ಲಿ ಹಿರಿಯ ಅಧಿಕಾರಿಗಳ ಸಹಾಯ ಸಹಕಾರ ದೊರೆಯುತ್ತದೆ.
ವಿವಿಧ ರಾಶಿಗಳ ಮೇಳೆ ಮಕರ ಸಂಕ್ರಾಂತಿಯ ಫಲ
ಮೇಷ
ಮೇಷ ರಾಶಿಯವರು ಬಿಳಿ ಬಣ್ಣದ ಪಂಚೆ ಮತ್ತು ಶಲ್ಯವನ್ನುವಯೋವೃದ್ಧರಿಗೆ ದಾನ ನೀಡಿ ಅವರ ಆಶೀರ್ವದವನ್ನು ಪಡೆಯಬೇಕು. ಕುಟುಂಬದ ಹಿರಿಯರ ಮನೆಯಲ್ಲಿ ನೀರಿನ ತೊಂದರೆ ಇದ್ದಲ್ಲಿ ಅದನ್ನು ಸರಿಪಡಿಸಬೇಕು. ಇದರಿಂದ ಉದ್ಯೋಗದಲ್ಲಿ ಎದುರಾಗುವ ತೊಂದರೆಗಳು ನಿವಾರಣೆಯಾಗುತ್ತದೆ. ಮೇಲಧಿಕಾರಿಗಳ ಜೊತೆ ಇರುವ ಭಿನ್ನಾಭಿಪ್ರಾಯಗಳು ದೂರವಾಗುತ್ತದೆ. ಅಲ್ಲದೆ ತಂದೆ ಅಥವಾ ಕುಟುಂಬದ ಹಿರಿಯರ ಜೊತೆಗಿನ ಮನಸ್ತಾಪವು ದೂರವಾಗುತ್ತದೆ.
ವೃಷಭ
ವೃಷಭ ರಾಶಿಯವರು ಕೋಪವನ್ನು ಹತೋಟಿಯಲ್ಲಿ ಇಟ್ಟುಕೊಳ್ಳಬೇಕು. ಹಿತ್ತಾಳೆ ಪಾತ್ರೆಗಳನ್ನು ದಾನ ಮಾಡಬೇಕು. ಧಾರ್ಮಿಕ ಕೇಂದ್ರಕ್ಕೆ ಹಾಲು, ಅಕ್ಕಿ ಮತ್ತು ಬೇಳೆಯನ್ನು ದಾನ ನೀಡಬೇಕು.ಇದರಿಂದ ಆರಂಭಿಸುವ ಕೆಲಸ ಕಾರ್ಯಗಳಲ್ಲಿ ಜಯ ಲಭಿಸುತ್ತದೆ. ತಂದೆಯವರ ಆರೋಗ್ಯದಲ್ಲಿ ಚೇತರಿಕೆ ಕಂಡು ಬರುತ್ತದೆ.
ಮಿಥುನ
ಮಿಥುನ ರಾಶಿಯವರು ಈದಿನ ಮಾತ್ರ ದಕ್ಷಿಣದಲ್ಲಿರುವ ಗೇಟ್ ಮೂಲಕ ಮನೆಯನ್ನು ಪ್ರವೇಶಿಸಬಾರದು. ಬಿಳಿ ಹಸುವಿಗೆ ಆಹಾರ ನೀಡಬೇಕು. ಅಲ್ಲದೆ ಗೋಪೂಜೆಯನ್ನು ಮಾಡಬೇಕು. ಇದರಿಂದಾಗಿ ಉತ್ತಮ ಆರೋಗ್ಯ ಲಭಿಸುತ್ತದೆ. ಅಪಮೃತ್ಯು ಪರಿಹಾರವಾಗುತ್ತದೆ. ಅನಿರೀಕ್ಷಿತ ಧನಲಾಭ ವಿರುತ್ತದೆ.
ಕಟಕ
ಕಟಕ ರಾಶಿಯಲ್ಲಿ ಜನಿಸಿದವರು ಕೊಂಬಿಲ್ಲದ ಹಸುವಿನ ಸೇವೆ ಮಾಡಬೇಕು. ಪುಟ್ಟ ಮಕ್ಕಳಿಗೆ ಹಸುವಿನ ಉತ್ಪನ್ನದಿಂದ ಮಾಡಿದ ಸಿಹಿತಿಂಡಿಯನ್ನು ನೀಡಬೇಕು. ತಂದೆಯವರಿಗೆ ಅಥವಾ ಕುಟುಂಬದ ಹಿರಿಯರಿಗೆ ಕುಡಿಯಲು ಬೆಳ್ಳಿ ಲೋಟದಲ್ಲಿ ಹಾಲನ್ನು ನೀಡಬೇಕು. ಇದರಿಂದ ಪಾಲುಗಾರಿಕೆ ವ್ಯಾಪಾರ ವಿದ್ದಲ್ಲಿ ನಿಮ್ಮ ಅಸ್ತಿತ್ವ ಉಳಿಯುತ್ತದೆ. ಸಹೋದ್ಯೋಗಿಗಳ ನಡುವಿನ ಭಿನ್ನಾಭಿಪ್ರಾಯವು ಹಿರಿಯ ಅಧಿಕಾರಿಗಳ ನೆರವಿನಿಂದ ಪರಿಹಾರ ಗೊಳ್ಳುತ್ತದೆ. ದಾಂಪತ್ಯ ಜೀವನದಲ್ಲಿ ಶಾಂತಿ ನೆಮ್ಮದಿ ನೆಲೆಸುತ್ತದೆ.
ಸಿಂಹ
ಸಿಂಹ ರಾಶಿಯವರು ತಂದೆಯವರ ಅಥವಾ ಕುಟುಂಬದ ಹಿರಿಯರ ಆಶೀರ್ವಾದವನ್ನು ಪಡೆಯಬೇಕು. ಕಪ್ಪು ಇರುವೆಗಳಿಗೆ ಆಹಾರ ಧಾನ್ಯವನ್ನು ಹಾಕಬೇಕು. ಆನಂತರ ತಾಯಿಯ ಆಶೀರ್ವಾದವನ್ನು ಪಡೆದಲ್ಲಿ, ಬಹುದಿನದಿಂದ ಕಾಡುತ್ತಿದ್ದ ಆರೋಗ್ಯದ ತೊಂದರೆ ನಿವಾರಣೆಯಾಗುತ್ತದೆ. ಉದ್ಯೋಗದಲ್ಲಿ ನಿರೀಕ್ಷಿತ ಫಲಿತಾಂಶಗಳು ದೊರೆಯುತ್ತವೆ.
ಕನ್ಯಾ
ಕನ್ಯಾ ರಾಶಿಯಲ್ಲಿ ಜನಿಸಿರುವವರು ಸೋದರರು ಅಳಿಯ ಅಥವಾ ಮೊಮ್ಮಕ್ಕಳಿಗೆ ಹಬ್ಬದ ಊಟವನ್ನು ನೀಡಬೇಕು. ಬಡ ವಿದ್ಯಾರ್ಥಿಗಳಿಗೆ ಪುಸ್ತಕ ಲೇಖನಿಯನ್ನು ನೀಡಬೇಕು. ಇದರಿಂದ ಮಕ್ಕಳ ವಿದ್ಯಾಭ್ಯಾಸವು ಸುಗಮವಾಗಿ ಸಾಗುತ್ತದೆ. ಸಂತಾನ ಬಯಸುವವರಿಗೆ ಶುಭವರ್ತಮಾನ ಬರುತ್ತದೆ.
ತುಲಾ
ತುಲಾ ರಾಶಿಯಲ್ಲಿ ಜನಿಸಿರುವವರು ಕಣ್ಣಿನ ತೊಂದರೆ ಇರುವವರಿಗೆ ವೈದ್ಯಕೀಯ ಚಿಕಿತ್ಸೆಗಾಗಿ ಹಣದ ಸಹಾಯ ಮಾಡಬೇಕು. ಖಾಕಿ ಬಣ್ಣದ ದಾರದಲ್ಲಿ ತಾಮ್ರದ ನಾಣ್ಯವನ್ನು ಕತ್ತಿನಲ್ಲಿ ಧರಿಸಬೇಕು. ತಾಯಿಯವರಿಗೆ ಅವರು ಇಷ್ಟಪಡುವ ಉಡುಗೆ ತೊಡೆಗೆಯನ್ನು ಉಡುಗೊರೆಯಾಗಿ ನೀಡಬೇಕು. ಇದರಿಂದಾಗಿ ಸುಖಜೀವನ ನಿಮ್ಮದಾಗುತ್ತದೆ. ಕುಟುಂಬಕ್ಕೆ ಸಂಬಂಧಿಸಿದ ಭೂ ವಿವಾದದಲ್ಲಿ ವಿಜಯ ಲಭಿಸುತ್ತದೆ. ಕುಟುಂಬದಲ್ಲಿನ ಸ್ತ್ರೀಯರ ಆರೋಗ್ಯದಲ್ಲಿ ಚೇತರಿಗೆ ಕಂಡುಬರುತ್ತದೆ.
ವೃಶ್ಚಿಕ
ವೃಶ್ಚಿಕ ರಾಶಿಯಲ್ಲಿ ಜನಿಸಿದವರು ಕುಟುಂಬದ ಹಿರಿಯರ ಆಶೀರ್ವಾದವನ್ನು ಪಡೆಯಬೇಕು. ಯಾತ್ರಾ ಸ್ಥಳಕ್ಕೆ ಭೇಟಿ ನೀಡುವ ವಯೋವೃದ್ದರಿಗೆ ಹಣದ ಸಹಾಯವನ್ನು ಮಾಡಿದರೆ ಶುಭಫಲಗಳನ್ನು ಪಡೆಯಬಹುದು. ಯಾವುದೇ ಅತಂತ್ರ ಸ್ಥಿತಿಯಲ್ಲಿಯೂ ದಿಟ್ಟವಾದ ನಿರ್ಧಾರವನ್ನು ತೆಗೆದುಕೊಳ್ಳಬಲ್ಲಿರಿ. ನಿಮ್ಮ ಹಿರಿಯ ಸೋದರ ಅಥವಾ ಸೋದರಿಗೆ ಅನುಕೂಲ ಉಂಟಾಗುತ್ತದೆ.
ಧನು
ಧನು ರಾಶಿಯಲ್ಲಿ ಜನಿಸಿರುವವರು ಉಚಿತವಾದ ಉಡುಗೊರೆಯನ್ನು ಯಾರಿಂದಲೂ ಪಡೆಯದಿರಿ. ಆತ್ಮೀಯರಿಗೆ ಎಳನೀರು ಅಥವಾ ತೆಂಗಿನಕಾಯಿಯಿಂದ ಮಾಡಿರುವ ಸಿಹಿ ತಿಂಡಿಯನ್ನು ನೀಡಿರಿ. ಧಾರ್ಮಿಕ ಕೇಂದ್ರಕ್ಕೆ ಎಣ್ಣೆ ಮತ್ತು ಬಾದಾಮಿಯನ್ನು ನೀಡಬೇಕು. ಇದರಿಂದ ಆಡುವ ಭಾಷೆಯ ಮೇಲೆ ಮತ್ತು ಮಾತಿನ ಮೇಲೆ ಹಿಡಿತ ಉಂಟಾಗುತ್ತದೆ. ಎದುರಾಗುವ ವಿವಾದಗಳು ಮರೆಯಾಗುತ್ತವೆ. ಅಲ್ಲದೆ ಕುಟುಂಬದಲ್ಲಿ ಶಾಂತಿ ನೆಮ್ಮದಿ ನೆಲೆಸುತ್ತದೆ. ಉದ್ಯೋಗ ಕ್ಷೇತ್ರದಲ್ಲಿ ಅಧಿಕಾರಿಗಳಾಗಿದ್ದಲ್ಲಿ ನಿಮ್ಮ ಮಾತಿಗೆ ವಿಶೇಷವಾದ ಗೌರವ ದೊರೆಯುತ್ತದೆ.
ಮಕರ
ಮಕರ ರಾಶಿಯಲ್ಲಿ ಜನಿಸಿರುವವರು ಮನೆಯಲ್ಲಿನ ಪೂಜಾ ಕೇಂದ್ರದಲ್ಲಿ ತುಪ್ಪದ ದೀಪವನ್ನು ಹೊತ್ತಿಸಬೇಕು. ಮನೆಯಲ್ಲಿ ಕತ್ತಲೆ ಆವರಿಸದಂತೆ ನೋಡಿಕೊಳ್ಳಬೇಕು. ನಿಮ್ಮಿಂದ ದೂರವಾಗಿರುವ ಆತ್ಮೀಯರಿಗೆ ಸಿಹಿಯನ್ನು ನೀಡಿ ತಪ್ಪನ್ನು ಮನ್ನಿಸಬೇಕು. ಕಿರಿಯ ಸೋದರ ಅಥವಾ ಕಿರಿಯ ಸೋದರಿಗೆ ಅವರಿಗೆ ಇಷ್ಟವಾದ ತಿಂಡಿಯನ್ನು ನೀಡಬೇಕು. ತೊಂದರೆ ಪಡುವವರಿಗೆ ಸಹಾಯ ಮಾಡಬೇಕು. ಇದರಿಂದ ಉದ್ಯೋಗ ಕ್ಷೇತ್ರದಲ್ಲಿ ಹಿರಿಯ ಅಧಿಕಾರಿಗಳ ಅವಕೃಪೆಯಿಂದ ಪಾರಾಗುವಿರಿ. ಆತ್ಮವಿಶ್ವಾಸವು ಹೆಚ್ಚುತ್ತದೆ. ಆರೋಗ್ಯದಲ್ಲಿ ಚೇತರಿಕೆ ಕಂಡು ಬರುತ್ತದೆ.
ಕುಂಭ
ಕುಂಭ ರಾಶಿಯಲ್ಲಿ ಜನಿಸಿರುವವರು ಮನೆ ಮುಂಭಾಗದಲ್ಲಿ ಮತ್ತು ಹಿಂಭಾಗದಲ್ಲಿ ಇರುವ ಜಾಗವನ್ನು ಶುಚಿಯಾಗಿಟ್ಟುಕೊಳ್ಳಬೇಕು. ದಿನನಿತ್ಯ ಬಳಸುವ ದಿನಬಳಕೆಗಾಗಿ ಬಳಸುವ ಕಬ್ಬಿಣದ ವಸ್ತುಗಳನ್ನು ಶುಚಿಯಾಗಿಟ್ಟುಕೊಳ್ಳಬೇಕು. ಇದರಿಂದ ಅನಾವಶ್ಯಕ ಓಡಾಟಗಳು ಕಡಿಮೆಯಾಗುತ್ತವೆ. ಅನಪೇಕ್ಷಿತ ವಿಚಾರಗಳಿಗೆ ಮಾಡುವ ಖರ್ಚು ವೆಚ್ಚಗಳು ಕಡಿಮೆಯಾಗುತ್ತದೆ. ಮತ್ತು ದೃಷ್ಟಿದೋಷವೂ ನಿವಾರಣೆಯಾಗುತ್ತದೆ.
ಮೀನ
ಮೀನ ರಾಶಿಯಲ್ಲಿ ಜನಿಸಿದವರು ಪಕ್ಷಿಗಳಿಗೆ ನೀರು ಮತ್ತು ಆಹಾರದ ವ್ಯವಸ್ಥೆ ಮಾಡಬೇಕು. ಬಡಬಗ್ಗರಿಗೆ ಹಣದ ಸಹಾಯವನ್ನು ಮಾಡಬೇಕು. ಇದರ ಜೊತೆ ಮನೆಯಲ್ಲಿರುವ ಕೆಟ್ಟು ಹೋದ ಲೋಹದ ಪದಾರ್ಥಗಳನ್ನು ವಿಲೇವಾರಿ ಮಾಡಬೇಕು. ಇದರಿಂದ ಅನಾವಶ್ಯಕ ಖರ್ಚು ವೆಚ್ಚಗಳು ಕಡಿಮೆಯಾಗುತ್ತದೆ. ಸೋದರ ಅಥವಾ ಸೋದರಿಯ ಹಣಕಾಸಿನ ಕೊರತೆ ಕಡಿಮೆಯಾಗುತ್ತದೆ.