ಸಿಂಹ ರಾಶಿಯಲ್ಲಿ ಕುಜ-ಕೇತು ಸಂಯೋಗ: ಧನು, ಮಕರ, ಕುಂಭ, ಮೀನ ರಾಶಿಯವರ ಅದೃಷ್ಟದ ಫಲಗಳಿವು
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  ಸಿಂಹ ರಾಶಿಯಲ್ಲಿ ಕುಜ-ಕೇತು ಸಂಯೋಗ: ಧನು, ಮಕರ, ಕುಂಭ, ಮೀನ ರಾಶಿಯವರ ಅದೃಷ್ಟದ ಫಲಗಳಿವು

ಸಿಂಹ ರಾಶಿಯಲ್ಲಿ ಕುಜ-ಕೇತು ಸಂಯೋಗ: ಧನು, ಮಕರ, ಕುಂಭ, ಮೀನ ರಾಶಿಯವರ ಅದೃಷ್ಟದ ಫಲಗಳಿವು

ಗ್ರಹಗಳ ಸಂಚಾರವು ಪ್ರತಿಯೊಂದು ರಾಶಿಯ ಮೇಲೆ ಪರಿಣಾಮ ಬೀರುವಂತೆಯೇ ಗ್ರಹಗಳ ಸಂಯೋಗವೂ ಶುಭಫಲಗಳ ಜೊತೆಗೆ ಸವಾಲುಗಳನ್ನು ನೀಡುತ್ತವೆ. ಸಿಂಹ ರಾಶಿಯಲ್ಲಿ ಕುಜ-ಕೇತು ಸಂಯೋಗದಿಂದ ಧನು, ಮಕರ, ಕುಂಭ, ಮೀನ ರಾಶಿಯವರಿಗೆ ಏನೆಲ್ಲಾ ಫಲಗಳಿವೆ ತಿಳಿಯಿರಿ.

ಕುಜ-ಕೇತು ಸಂಯೋಗದಿಂದ ಧನು, ಮಕರ, ಕುಂಭ ಹಾಗೂ ಮೀನ ರಾಶಿಯವರಿಗೆ ಏನೆಲ್ಲಾ ಶುಭಫಲಗಳಿವೆ ಎಂಬುದನ್ನು ಇಲ್ಲಿ ತಿಳಿಯೋಣ
ಕುಜ-ಕೇತು ಸಂಯೋಗದಿಂದ ಧನು, ಮಕರ, ಕುಂಭ ಹಾಗೂ ಮೀನ ರಾಶಿಯವರಿಗೆ ಏನೆಲ್ಲಾ ಶುಭಫಲಗಳಿವೆ ಎಂಬುದನ್ನು ಇಲ್ಲಿ ತಿಳಿಯೋಣ

ಸಿಂಹ ರಾಶಿಯಲ್ಲಿ ಕುಜ ಮತ್ತು ಕೇತುವಿನ ಸಂಯೋಗವು ಜೂನ್ 6 ರಿಂದ ಜುಲೈ ತಿಂಗಳ 28 ರವರೆಗು ಇರಲಿದೆ. ನಾಡಿ ಜೋತಿಷ್ಯದ ಪ್ರಕಾರ ಜನ್ಮಕುಂಡಲಿಯಲ್ಲಿ ಕುಜ ಮತ್ತು ಕೇತುವಿನ ಯುತಿ ಇದ್ದಲ್ಲಿ ಅದನ್ನು ಕುಜದೋಷ ಎಂದು ಪರಿಗಣಿಸುತ್ತೇವೆ. ಈ ಅವಧಿಯಲ್ಲಿ ಪತಿಯೊಂದು ರಾಶಿಗಳಿಗೂ ವಿಭಿನ್ನವಾದ ಫಲಗಳು ದೊರೆಯುತ್ತವೆ. ಈ ಅವಧಿಯಲ್ಲಿ ಶ್ರೀ ಸುಬ್ರಹ್ಮಣ್ಯ ಸ್ವಾಮಿ ಅಥವಾ ಶ್ರೀ ಲಕ್ಷ್ಮಿ ನರಸಿಂಹ ಸ್ವಾಮಿ ಪೂಜೆಯಿಂದ ಶುಭಫಲಗಳು ದೊರೆಯುತ್ತವೆ. ಕಿರಿ ಸೋದರಿ ಅಥವಾ ಕಿರಿ ಸೋದರನ ಜೊತೆಯಲ್ಲಿ ಅನಾವಶ್ಯಕ ವಾದ ವಿವಾದಗಳು ಉಂಟಾಗುವ ಸಾಧ್ಯತೆಗಳಿವೆ. ಮನೆತನದ ಭೂ ವಿವಾದವೂ ಅಂತಿಮ ಹಂತವನ್ನು ತಲುಪುತ್ತದೆ. ಆದ್ದರಿಂದ ಶಾಂತಿ ಸಹನೆಯಿಂದ ವರ್ತಿಸಿದಷ್ಟೂ ಶುಭಫಲಗಳನ್ನು ಪಡೆಯುವ ಸಾದ್ಯತೆಗಳು ಇರುತ್ತವೆ. ಸಿಂಹ ರಾಶಿಯಲ್ಲಿ ಕುಜ-ಕೇತು ಸಂಯೋಗದಿಂದ ಧನು, ಮಕರ, ಕುಂಭ ಹಾಗೂ ಮೀನ ರಾಶಿಯವರಿಗೆ ಏನೆಲ್ಲಾ ಶುಭಫಲಗಳಿವೆ.

ಧನು ರಾಶಿ

ಸದಾ ಗಡಿಬಿಡಿಯಿಂದ ವರ್ತಿಸುವ ಕಾರಣ ಕೆಲಸ ಕಾರ್ಯಗಳಲ್ಲಿ ನಿರೀಕ್ಷಿತ ಯಶಸ್ಸು ದೊರೆಯುವುದಿಲ್ಲ. ಒಮ್ಮೆ ತೆಗೆದುಕೊಂಡ ತೀರ್ಮಾನಗಳನ್ನು ಬದಲಾಯಿಸುವುದಿಲ್ಲ. ನಿಮ್ಮ ಇಂತಹ ಪ್ರಕೃತಿಯಿಂದ ಕುಟುಂಬದಲ್ಲಿ ಅಸಹನೆ ಎದ್ದು ಕಾಣುತ್ತದೆ. ಬೇರೆಯವರ ಮಾತನ್ನು ಸುಲಭವಾಗಿ ಅರ್ಥ ಮಾಡಿಕೊಳ್ಳುವಿರಿ. ಯಾವುದೇ ವಿಚಾರವನ್ನು ಗಂಭೀರವಾಗಿ ಸ್ವೀಕರಿಸುವುದಿಲ್ಲ. ತಿಳಿದು ಮಾಡುವ ತಪ್ಪುಗಳೆ ಹೆಚ್ಚಾಗುತ್ತವೆ. ನೀವು ಮಾಡುವ ಕೆಲಸ ಕಾರ್ಯಗಳೆಲ್ಲ ಸರಿ ಎಂಬ ಭಾವನೆ ಇರುತ್ತದೆ. ನಿಮ್ಮ ಮನಸ್ಸಿನ ಭಾವನೆಗಳನ್ನು ಸಂಗಾತಿಗೆ ಮಾತ್ರ ತಿಳಿಸುವಿರಿ. ಇದರಿಂದ ಬೇರೆಯವರ ಅನುಮಾನಕ್ಕೆ ಗುರಿಯಾಗುವುದು ಸಹಜ. ನಿಮ್ಮ ಸ್ವಾರ್ಥದ ಬುದ್ಧಿ ಬೇರೆಯವರ ಮನಸ್ತಾಪಕ್ಕೆ ಕಾರಣವಾಗುತ್ತದೆ. ವಾಹನ ಚಾಲನೆ ಮಾಡುವ ವೇಳೆ ಎಚ್ಚರಿಕೆ ಇರಲಿ. ಮಕ್ಕಳ ವಿಚಾರದಲ್ಲಿ ನಿಮ್ಮ ನಿರೀಕ್ಷೆ ಹುಸಿಯಾಗುತ್ತದೆ. ಯಾವುದೇ ಕೆಲಸವನ್ನು ಪೂರ್ಣಗೊಳಿಸಲು ವಿಫಲರಾಗುವಿರಿ. ಸ್ವಂತ ವ್ಯಾಪಾರ ವ್ಯವಹಾರಗಳಲ್ಲಿ ಭಾಗಶಹ ಯಶಸ್ಸು ದೊರೆಯುತ್ತದೆ. ಹಣಕಾಸಿನ ವ್ಯವಹಾರದಲ್ಲಿ ಬೇರೆಯವರನ್ನು ನಂಬುವುದಿಲ್ಲ.

ಮಕರ ರಾಶಿ

ಹೆಚ್ಚಿನ ಪರಿಶ್ರಮದ ನಡುವೆಯೂ ಆದಾಯದಲ್ಲಿ ಕೊರತೆ ಕಂಡು ಬರುತ್ತದೆ. ಹೆಚ್ಚಿನ ಪರಿಶ್ರಮವಿಲ್ಲದೆ ಸರಳ ರೀತಿಯಲ್ಲಿ ಕೆಲಸಕಾರ್ಯಗಳನ್ನು ನಿರ್ವಹಿಸಲು ಬಯಸುವಿರಿ. ಆತ್ಮೀಯರಿಂದ ಹಣದ ಸಹಾಯ ದೊರೆಯುತ್ತದೆ. ತಪ್ಪು ಕಲ್ಪನೆಯಿಂದ ಉದ್ಯೋಗವನ್ನು ಬದಲಿಸುವಿರಿ. ಆರೋಗ್ಯದಲ್ಲಿ ದಿಢೀರನೆ ತೊಂದರೆ ಕಂಡುಬರುತ್ತದೆ. ಮುಖ್ಯವಾದ ಮನೆತನದ ವಿಚಾರಗಳನ್ನು ರಹಸ್ಯವಾಗಿ ಇಡುವಿರಿ. ಮನೆತನದ ಆಸ್ತಿ ಹಂಚಿಕೆಯ ವಿಚಾರದಲ್ಲಿ ಅವಿಶ್ವಾಸ ಇರುತ್ತದೆ. ದುಡುಕು ಮಾತಿನಿಂದಾಗಿ ಕ್ಲಿಷ್ಟಕರ ಪರಿಸ್ಥಿತಿಯನ್ನು ಎದುರಿಸುವಿರಿ. ಮಾತಿನ ಮೇಲೆ ಹತೋಟಿ ಸಾಧಿಸಿದರೆ ನಿಮ್ಮ ಜೀವನದಲ್ಲಿ ಯಾವುದು ಅಸಾಧ್ಯ ಎನಿಸುವುದಿಲ್ಲ. ನಿಮ್ಮ ಬಗ್ಗೆ ಬಂದು ಬಳಗದಲ್ಲಿ ಇರುವ ಗೌರವವು ಹೆಚ್ಚುತ್ತದೆ. ವ್ಯಾಪಾರ ವ್ಯವಹಾರಗಳಲ್ಲಿ ಹೆಚ್ಚಿನ ಆಸಕ್ತಿ ತೋರುವುದಿಲ್ಲ. ಪಾಲುಗಾರಿಕೆಯ ವ್ಯಾಪಾರದಲ್ಲಿ ಕನಿಷ್ಠ ಲಾಭಾಂಶ ದೊರೆಯಲಿದೆ. ಮಕ್ಕಳು ಮಾತ್ರ ತಮ್ಮ ಜವಾಬ್ದಾರಿಯನ್ನು ಅರಿತು ಜೀವನದಲ್ಲಿ ನಡೆಯುತ್ತಾರೆ. ಹೊಸ ವಾಹನ ಕೊಳ್ಳಲು ಆತ್ಮೀಯರಿಂದ ಹಣದ ಸಹಾಯ ಪಡೆಯುವಿರಿ. ಅನಾವಶ್ಯಕವಾದ ಖರ್ಚು ವೆಚ್ಚಗಳಿಂದ ತೊಂದರೆಗೆ ಒಳಗಾಗುವಿರಿ.

ಕುಂಭ ರಾಶಿ

ಸದಾಕಾಲ ಅನಾವಶ್ಯಕವಾದ ಒತ್ತಡದಿಂದ ಬಾಳುವಿರಿ. ಸುಲಭವಾಗಿ ಬೇರೆಯವರ ಪ್ರಭಾವಕ್ಕೆ ಒಳಗಾಗುವಿರಿ. ಸತತ ಪ್ರಯತ್ನದ ನಡುವೆಯೂ ಸಾಧಾರಣ ಪ್ರಗತಿಯನ್ನು ಕಾಣುವಿರಿ. ಪರಿಪಕ್ವ ಯೋಜನೆ ಇಲ್ಲದೆ ಕೆಲಸ ಕಾರ್ಯಗಳನ್ನು ಆರಂಭಿಸುವಿರಿ. ಸ್ವಂತ ಕೆಲಸ ಕಾರ್ಯಗಳಲ್ಲಿ ಮಾತ್ರ ಆಸಕ್ತಿ ಇರುತ್ತದೆ. ಬುದ್ದಿವಂತಿಕೆಯಿಂದ ಎದುರಾಗುವ ಸಂದಿಗ್ಧ ಪರಿಸ್ಥಿತಿಯಿಂದ ಪಾರಾಗುವಿರಿ. ಸಾಹಸದ ಗುಣವಿರುತ್ತದೆ. ಇದರಿಂದ ಸೋಲನ್ನು ಸಹ ಕ್ರೀಡಾ ಮನೋಭಾವನೆಯಿಂದ ಕಾಣುವಿರಿ. ಸೋದರರ ಪ್ರೀತಿಯನ್ನು ಉಳಿಸಿಕೊಳ್ಳಲು ಸಫಲರಾಗುವಿರಿ. ದಾಂಪತ್ಯ ಜೀವನದಲ್ಲಿ ಪರಸ್ಪರ ನಂಬಿಕೆ ಅತಿ ಮುಖ್ಯವಾಗುತ್ತದೆ. ತಡವಾಗಿಯಾದರೂ ನಿಮ್ಮ ಕೆಲಸ ಕಾರ್ಯಗಳಲ್ಲಿ ಯಶಸ್ಸು ದೊರೆಯುತ್ತದೆ. ಆರೋಗ್ಯದ ಬಗ್ಗೆ ಸದಾ ಎಚ್ಚರಿಕೆಯಿಂದ ಇರುವುದು ಲೇಸು. ಸುಲಭವಾಗಿ ಬೇರೆಯವರನ್ನು ಹಣಕಾಸಿನ ವಿಚಾರದಲ್ಲಿ ನಂಬುವುದಿಲ್ಲ. ಕುಟುಂಬದಲ್ಲಿ ಮಕ್ಕಳ ಕಾರಣ ಶಾಂತಿ ನೆಮ್ಮದಿಯ ಜೀವನ ಇರುತ್ತದೆ. ವಿದ್ಯಾರ್ಥಿಗಳಿಗೆ ನಿರೀಕ್ಷಿಸಿದ ಮಟ್ಟದ ಯಶಸ್ಸು ದೊರೆಯುತ್ತದೆ. ದಂಪತಿಗಳ ನಡುವೆ ಹಣಕಾಸಿನ ವಿಚಾರದಲ್ಲಿ ಭಿನ್ನಾಭಿಪ್ರಾಯವಿರುತ್ತದೆ.

ಮೀನ ರಾಶಿ

ಬಾಳ ಸಂಗಾತಿಯು ಅಶಾಂತಿಯಿಂದ ಬಾಳುತ್ತಾರೆ. ನಿಮ್ಮ ಮನಸ್ಸನ್ನು ಅರಿತುಕೊಳ್ಳಲು ಯಾರಿಗೂ ಸಾಧ್ಯವಾಗುವುದಿಲ್ಲ. ನಿಯಮಿತ ಧ್ಯಾನ ವ್ಯಾಯಾಮದ ನಡುವೆಯೂ ಹೊಟ್ಟೆಗೆ ಸಂಬಂಧಿಸಿದ ದೋಷವಿರುತ್ತದೆ. ಸುಖ ಮತ್ತು ನೆಮ್ಮದಿಯ ಜೀವನವನ್ನು ನಡೆಸುವಿರಿ. ಯಾವುದೇ ವಿಚಾರವನ್ನು ಗಂಭೀರವಾಗಿ ಪರಿಗಣಿಸುವುದಿಲ್ಲ. ದೃಡವಾದ ನಿಲುವಿನಿಂದ ನಿಮ್ಮ ಕೆಲಸ ಕಾರ್ಯಗಳುನ್ನು ನಿರ್ವಹಿಸುವಿರಿ. ಮನಸ್ಸಿನಲ್ಲಿಯೇ ಯೋಚನೆ ಮಾಡಿ ನಂತರ ನಿಮ್ಮ ಯೋಜನೆಗಳನ್ನು ಕಾರ್ಯರೂಪಕ್ಕೆ ತರುವಿರಿ. ಆರಂಭದಲ್ಲಿ ಕಷ್ಟದ ಪರಿಸ್ಥಿತಿ ಇದ್ದರೂ ಕ್ರಮೇಣವಾಗಿ ಉದ್ಯೋಗದಲ್ಲಿ ಪ್ರಗತಿ ಸಾಧಿಸುವಿರಿ. ಬುದ್ಧಿವಂತಿಕೆಯಿಂದ ನಿಮ್ಮ ವ್ಯಾಪಾರ ವ್ಯವಹಾರಗಳನ್ನು ಲಾಭದ ಹಾದಿಯಲ್ಲಿ ನಡೆಸುವಿರಿ. ಅಧಿಕಾರದ ಮೇಲೆ ಆಸೆ ಇರುವುದಿಲ್ಲ. ಆದರೆ ತಾನಾಗಿಯೇ ದೊರೆಯುವ ಅಧಿಕಾರವನ್ನು ಕೈ ಬಿಡುವುದಿಲ್ಲ. ಕೊಂಚವು ಯೋಚಿಸದೆ ಎಲ್ಲರನ್ನೂ ನಂಬುವಿರಿ. ನಿಮ್ಮ ಸಂಗಾತಿಯ ಆರೋಗ್ಯದಲ್ಲಿ ಏರುಪೇರು ಕಂಡುಬರುತ್ತದೆ. ಖರ್ಚು ವೆಚ್ಚಗಳು ಹೆಚ್ಚಾದರೂ ನಿಮ್ಮ ನಿಯಂತ್ರಣಕ್ಕೆ ಬರುತ್ತದೆ. ಹಣದ ವ್ಯವಹಾರದಲ್ಲಿ ಸಾಧ್ಯವಾದಷ್ಟು ಸ್ಥಿರವಾದ ಮನಸ್ಥಿತಿಯಿಂದ ವ್ಯವಹರಿಸಿ.

ಬರಹ: ಹೆಚ್‌. ಸತೀಶ್‌, ಜ್ಯೋತಿಷಿ, ಬೆಂಗಳೂರು

(ಗಮನಿಸಿ: ಜ್ಯೋತಿಷ್ಯ ಶಾಸ್ತ್ರದ ಲೆಕ್ಕಾಚಾರಕ್ಕೆ ಹಲವು ಸೂತ್ರಗಳಿವೆ. ನಿರ್ದಿಷ್ಟ ರೀತಿಯಲ್ಲಿ ಕ್ರಮಬದ್ಧವಾಗಿ ಈ ರಾಶಿ ಭವಿಷ್ಯ ನೀಡಲಾಗಿದೆ. ಆದರೆ ಒಟ್ಟಾರೆಯಾಗಿ ಜ್ಯೋತಿಷ್ಯ ಎನ್ನುವುದು ನಂಬಿಕೆಯ ಮಾತು. ಓದುಗರ ನಂಬಿಕೆಯನ್ನು ಹಿಂದೂಸ್ತಾನ್ ಟೈಮ್ಸ್ ಕನ್ನಡ ಗೌರವಿಸುತ್ತದೆ. ಇಲ್ಲಿರುವ ಯಾವುದೇ ಶಿಫಾರಸು ಅಥವಾ ಸಲಹೆಗಳನ್ನು ಪಾಲಿಸುವುದು ಓದುಗರ ವಿವೇಚನೆ, ನಂಬಿಕೆಗೆ ಬಿಟ್ಟ ವಿಷಯವಾಗಿರುತ್ತದೆ).

ರಾಘವೇಂದ್ರ ಎಂ.ವೈ: 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದಲ್ಲಿ ಸೀನಿಯರ್ ಕಂಟೆಂಟ್ ಪ್ರೊಡ್ಯೂಸರ್. ರಾಶಿ ಭವಿಷ್ಯ (ಧರ್ಮ) ವಿಭಾಗದಲ್ಲಿ ಕಾರ್ಯನಿರ್ವಹಣೆ. ಪ್ರಜಾವಾಣಿ, ಉದಯ ನ್ಯೂಸ್, ದಿಗ್ವಿಜಯ ನ್ಯೂಸ್, ಫಸ್ಟ್ ನ್ಯೂಸ್, ಡಿಡಿ ಚಂದನ ನ್ಯೂಸ್, ಈ-ಟಿವಿ ಭಾರತದಲ್ಲಿ ಬುಲೆಟಿನ್ ಪ್ರೊಡ್ಯೂಸರ್ ಸೇರಿ ವಿವಿಧ ವಿಭಾಗಗಳಲ್ಲಿ ಒಟ್ಟು 12 ವರ್ಷ ಅನುಭವ. ಪುಸ್ತಕ, ಪತ್ರಿಕೆ ಓದುವುದು ಇಷ್ಟ. ವಾಣಿಜ್ಯ, ಕ್ರಿಕೆಟ್, ಗ್ರಾಮೀಣ ವಿದ್ಯಮಾನಗಳ ಬಗ್ಗೆ ಇಷ್ಟಪಟ್ಟು ಬರೆಯುತ್ತಾರೆ. ಕೋಲಾರ ಜಿಲ್ಲೆಯ ಮಾಲೂರು ತಾಲೂಕಿನ ಮಿರುಪನಹಳ್ಳಿ ಇವರ ಸ್ವಂತ ಊರು. ಸದ್ಯಕ್ಕೆ ಬೆಂಗಳೂರು ನಿವಾಸಿ.
ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.