ಸಿಂಹ ರಾಶಿಯಲ್ಲಿ ಕುಜ-ಕೇತು ಸಂಯೋಗ: ಸಿಂಹ, ಕನ್ಯಾ, ತುಲಾ, ವೃಶ್ಚಿಕ ರಾಶಿಯವರಿಗೆ ಏನೆಲ್ಲಾ ಶುಭಫಲಗಳಿವೆ
ಗ್ರಹಗಳ ಸಂಚಾರವು ಪ್ರತಿಯೊಂದು ರಾಶಿಯ ಮೇಲೆ ಪರಿಣಾಮ ಬೀರುವಂತೆಯೇ ಗ್ರಹಗಳ ಸಂಯೋಗವೂ ಶುಭಫಲಗಳ ಜೊತೆಗೆ ಸವಾಲುಗಳನ್ನು ನೀಡುತ್ತವೆ. ಸಿಂಹ ರಾಶಿಯಲ್ಲಿ ಕುಜ-ಕೇತು ಸಂಯೋಗದಿಂದ ಸಿಂಹ, ಕನ್ಯಾ, ತುಲಾ, ವೃಶ್ಚಿಕ ರಾಶಿಯವರಿಗೆ ಏನೆಲ್ಲಾ ಫಲಗಳಿವೆ ತಿಳಿಯಿರಿ.

ಸಿಂಹ ರಾಶಿಯಲ್ಲಿ ಕುಜ ಮತ್ತು ಕೇತುವಿನ ಸಂಯೋಗವು ಜೂನ್ 6 ರಿಂದ ಜುಲೈ ತಿಂಗಳ 28 ರವರೆಗು ಇರಲಿದೆ. ನಾಡಿ ಜೋತಿಷ್ಯದ ಪ್ರಕಾರ ಜನ್ಮಕುಂಡಲಿಯಲ್ಲಿ ಕುಜ ಮತ್ತು ಕೇತುವಿನ ಯುತಿ ಇದ್ದಲ್ಲಿ ಅದನ್ನು ಕುಜದೋಷ ಎಂದು ಪರಿಗಣಿಸುತ್ತೇವೆ. ಈ ಅವಧಿಯಲ್ಲಿ ಪತಿಯೊಂದು ರಾಶಿಗಳಿಗೂ ವಿಭಿನ್ನವಾದ ಫಲಗಳು ದೊರೆಯುತ್ತವೆ. ಈ ಅವಧಿಯಲ್ಲಿ ಶ್ರೀ ಸುಬ್ರಹ್ಮಣ್ಯ ಸ್ವಾಮಿ ಅಥವಾ ಶ್ರೀ ಲಕ್ಷ್ಮಿ ನರಸಿಂಹ ಸ್ವಾಮಿ ಪೂಜೆಯಿಂದ ಶುಭಫಲಗಳು ದೊರೆಯುತ್ತವೆ. ಕಿರಿ ಸೋದರಿ ಅಥವಾ ಕಿರಿ ಸೋದರನ ಜೊತೆಯಲ್ಲಿ ಅನಾವಶ್ಯಕ ವಾದ ವಿವಾದಗಳು ಉಂಟಾಗುವ ಸಾಧ್ಯತೆಗಳಿವೆ. ಮನೆತನದ ಭೂ ವಿವಾದವೂ ಅಂತಿಮ ಹಂತವನ್ನು ತಲುಪುತ್ತದೆ. ಆದ್ದರಿಂದ ಶಾಂತಿ ಸಹನೆಯಿಂದ ವರ್ತಿಸಿದಷ್ಟೂ ಶುಭಫಲಗಳನ್ನು ಪಡೆಯುವ ಸಾದ್ಯತೆಗಳು ಇರುತ್ತವೆ. ಸಿಂಹ ರಾಶಿಯಲ್ಲಿ ಕುಜ-ಕೇತು ಸಂಯೋಗದಿಂದ ಸಿಂಹ, ಕನ್ಯಾ, ತುಲಾ ಹಾಗೂ ವೃಶ್ಚಿಕ ರಾಶಿಯವರಿಗೆ ಏನೆಲ್ಲಾ ಶುಭಫಲಗಳಿವೆ.
ಸಿಂಹ ರಾಶಿ
ಕೆಲಸ ಕಾರ್ಯಗಳು ಸರಳವಾಗಿದ್ದರೂ ಹೆಚ್ಚಿನ ಪರಿಶ್ರಮದಿಂದ ಮಾತ್ರ ಪೂರ್ಣಗೊಳ್ಳುತ್ತವೆ. ನಿಮ್ಮ ನಿರೀಕ್ಷೆಗಳು ಕೈಗೂಡಲು ಆತ್ಮೀಯರ ಸಹಾಯ ಸಹಕಾರ ಬೇಕಾಗುತ್ತದೆ. ಕುಟುಂಬದಲ್ಲಿ ನರವೇರಬೇಕಿದ್ದ ಮಂಗಳಕಾರ್ಯಗಳು ನಿಮ್ಮ ಕಾರಣದಿಂದ ಮುಂದೂಡಲ್ಪಡುತ್ತವೆ. ಕುಟುಂಬದಲ್ಲಿ ಶಾಂತಿ ನೆಮ್ಮದಿಯ ಕೊರತೆ ಇರುತ್ತದೆ. ಕುಟುಂಬದ ಹಿರಿಯರ ಆರೋಗ್ಯದ ಬಗ್ಗೆ ಆತಂಕದ ಪರಿಸ್ಥಿತಿ ಎದುರಾಗುತ್ತದೆ. ತಂದೆ ತಾಯಿಗಳ ಸಹಾಯದಿಂದ ಹಣಕಾಸಿನ ಪರಿಸ್ಥಿತಿ ಸುಧಾರಿಸುತ್ತದೆ. ಕ್ರಮೇಣವಾಗಿ ಜೀವನದ ಕಷ್ಟ ನಷ್ಟಗಳು ದೂರವಾಗುತ್ತವೆ. ಮಕ್ಕಳ ಕೆಲಸ ಕಾರ್ಯಗಳು ಸುಲಭವಾಗಿ ಯಶಸ್ವಿಯಾಗುತ್ತದೆ. ಗರ್ಭಿಣಿಯರು ತಮ್ಮ ಆರೋಗ್ಯದ ಬಗ್ಗೆ ಎಚ್ಚರಿಕೆ ವಹಿಸಬೇಕು. ವದಂತಿಗಳಿಗ ಕಿವಿಗೊಡದಿರಿ. ಉದ್ಯೋಗದಲ್ಲಿನ ವಿಚಾರದಲ್ಲಿ ನಿಮ್ಮ ಹಿರಿಯ ಅಧಿಕಾರಿಗಳ ಮನಸ್ಸನ್ನು ಗೆಲ್ಲುವಿರಿ. ಹೆಚ್ಚಿನ ಪ್ರಯತ್ನದಿಂದ ಮಾತ್ರ ಉತ್ತಮ ಉದ್ಯೋಗವನ್ನು ಗಳಿಸಲು ಸಾಧ್ಯವಾಗುತ್ತದೆ. ವಿದ್ಯಾರ್ಥಿಗಳು ವಿದೇಶದಲ್ಲಿ ತಮ್ಮ ಕಲಿಕೆಯನ್ನು ಮುಂದುವರೆಸುತ್ತಾರೆ. ಹೊಸ ವಾಹನ ಕೊಳ್ಳುವಿರಿ.
ಕನ್ಯಾ ರಾಶಿ
ಸೋದರಮಾವನ ಕಷ್ಟ ನಷ್ಟಗಳಿಗೆ ಸ್ಪಂದಿಸುವಿರಿ. ಯಾವುದೇ ವಿಚಾರದಲ್ಲಿಯೂ ದೃಢವಾದ ನಿರ್ಣಯವನ್ನು ತೆಗೆದುಕೊಳ್ಳಲು ಸಾಧ್ಯವಾಗುವುದಿಲ್ಲ. ತಪ್ಪುಗಳಿಗೆ ಮತ್ತು ನಿಮ್ಮ ಸೋಲಿಗೆ ಬೇರೆಯವರನ್ನು ಕಾರಣೀಭೂತರನ್ನಾಗಿ ಮಾಡುವಿರಿ. ಪುರುಷರಾಗಲಿ ಸ್ತ್ರೀಯರಾಗಲಿ ಮಾವನ ಮನೆಯಲ್ಲಿ ಸಂದಿಗ್ಧದ ಪರಿಸ್ಥಿತಿಯನ್ನು ಎದುರಿಸಬೇಕಾಗುತ್ತದೆ. ದಂಪತಿ ನಡುವೆ ಉತ್ತಮ ಅನುಬಂಧ ಇರುವುದಿಲ್ಲ. ವ್ಯಾಪಾರ ವ್ಯವಹಾರದಲ್ಲಿ ಕಠಿಣದ ಪರಿಸ್ಥಿತಿಯು ಎದುರಾದರೂ ತೊಂದರೆಯಿಂದ ಪಾರಾಗುವಿರಿ. ಧೈರ್ಯದ ಗುಣದಿಂದ ನಿಮ್ಮ ಜೀವನದಲ್ಲಿನ ಸಮಸ್ಯೆಗಳು ಎದುರಾಗುತ್ತವೆ. ಉದ್ಯೋಗದಲ್ಲಿ ನಿಮ್ಮ ಪ್ರಯತ್ನಗಳಿಗೆ ಉತ್ತಮ ಪ್ರತಿಕ್ರಿಯೆ ಗಳಿಸುವಿರಿ. ರಕ್ತಕ್ಕೆ ಸಂಬಂಧಿಸಿದ ದೋಷ ಇರುವವರು ಎಚ್ಚರಿಕೆ ವಹಿಸಬೇಕು. ಜನೋಪಕಾರಿ ಕೆಲಸಗಳಲ್ಲಿ ಅನ್ಯರ ಮಧ್ಯಸ್ಥಿಕೆಯಿಂದ ಕೀರ್ತಿ ಪ್ರತಿಷ್ಠೆಗೆ ಪಾತ್ರರಾಗುವಿರಿ. ಕಲಾವಿದರಿಗೆ ಉನ್ನತ ಮಟ್ಟದ ಯಶಸ್ಸು ದೊರೆಯುತ್ತದೆ. ಒಂದೇ ಬಾರಿ ಹಲವು ಕೆಲಸವನ್ನು ಮಾಡಬಲ್ಲರಿ. ಪಾಲುಗಾರಿಕೆಯ ವ್ಯಾಪಾರ ವ್ಯವಹಾರದಲ್ಲಿ ಭಿನ್ನಾಭಿಪ್ರಾಯಗಳು ಎದುರಾಗುತ್ತವೆ. ವಾಸಸ್ಥಳವನ್ನು ಬದಲಿಸುವ ನಿಮ್ಮ ಪ್ರಯತ್ನಕ್ಕೆ ಕುಟುಂಬದವರ ಸಹಾಯ ದೊರೆಯುತ್ತದೆ.
ತುಲಾ ರಾಶಿ
ಉನ್ನತ ವಿದ್ಯಾಭ್ಯಾಸವಿದ್ದರೂ ಅದನ್ನು ಸರಿಯಾದ ಹಾದಿಯಲ್ಲಿ ಬಳಸಲು ಸಾಧ್ಯವಾಗುವುದಿಲ್ಲ. ನಿಮ್ಮ ಆತುರದ ನಿರ್ಧಾರಗಳು ಬೇರೊಬ್ಬರಿಗೆ ಲಾಭದಾಯಕವಾಗುತ್ತದೆ. ನಿಮ್ಮ ಮನಸ್ಸಿನ ವಿಚಾರಗಳನ್ನು ಬೇರೆಯವರಿಗೆ ತಿಳಿಸುವುದು ಮುಖ್ಯವಾಗುತ್ತದೆ. ನಿಮಗೆ ಉತ್ತಮ ಗೆಳೆತನ ಇದ್ದರೂ ಅದರ ಲಾಭ ಪಡೆಯುವಲ್ಲಿ ವಿಫರಾಗುವಿರಿ. ನಿಮ್ಮ ರೀತಿ ನೀತಿಗೆ ನಿಮ್ಮ ವಿರೋಧಿಗಳೂ ಸೋಲೊಪ್ಪುತ್ತಾರೆ. ನಿಮ್ಮ ಕಲ್ಪನೆಗೆ ಕಾಯಕಲ್ಪ ನೀಡುವಲ್ಲಿ ಯಶಸ್ಸನ್ನು ಕಾಣುವಿರಿ. ವಿದ್ಯಾರ್ಥಿಗಳು ಕೊಂಚ ನಿಧಾನ ಎನಿಸಿದರೂ ತಮ್ಮ ಗುರಿ ತಲುಪುತ್ತಾರೆ. ಮೊದಲ ಆದ್ಯತೆಯನ್ನು ನಿಮ್ಮ ಸ್ವಂತ ಕೆಲಸ ಕಾರ್ಯಗಳಿಗೆ ನೀಡುವಿರಿ. ಆತ್ಮೀಯರ ವಿಜಯದಲ್ಲಿ ನಿಮ್ಮ ಪಾಲು ಅಧಿಕವಾಗಿರುತ್ತದೆ. ವದಂತಿ ನಂಬುವ ಕಾರಣ ದಾಂಪತ್ಯದಲ್ಲಿ ವಿಶ್ವಾಸದ ಕೊರತೆ ಇರುತ್ತದೆ. ಬೇರೆಯವರು ನಿಮ್ಮನ್ನು ಅಸಡ್ಡೆಯಿಂದ ನೋಡಿದಲ್ಲಿ ಅವರಿಂದ ದೂರ ಉಳಿಯುವಿರಿ. ಯಾರ ಸಂಧಾನಗಳನ್ನು ಒಪ್ಪುವುದಿಲ್ಲ. ವಿದೇಶಕ್ಕೆ ಮಕ್ಕಳ ಜೊತೆ ತೆರಳುವ ಸಾಧ್ಯತೆಗಳು ಕಂಡುಬರುತ್ತವೆ.
ವೃಶ್ಚಿಕ ರಾಶಿ
ಆರಂಭಿಸಿದ ಕೆಲಸ ಕಾರ್ಯಗಳಲ್ಲಿ ನಿರೀಕ್ಷಿತ ಯಶಸ್ಸು ಕಂಡುಬರುತ್ತದೆ. ಬೇರೆಯವರನ್ನು ಆಶ್ರಯಿಸದೆ ಸ್ವಂತ ನಿಲುವಿಗೆ ಬದ್ಧರಾಗುವಿರಿ. ಬೇರಯವರ ತಪ್ಪುಗಳನ್ನು ಖಂಡಿಸದೆ ಸರಿಪಡಿಸುವಿರಿ. ಸಮಾಜದಲ್ಲಿ ನಿಮಗೆ ವಿಶೇಷವಾದ ಸ್ಥಾನ ಮಾನಗಳು ಲಭಿಸುತ್ತವೆ. ಅನಾವಶ್ಯಕ ವಿಚಾರಗಳಿಗೆ ಯೋಚನೆಗೆ ಒಳಗಾಗುವಿರಿ. ಸೋಲನ್ನು ಗೆಲುವನ್ನಾಗಿ ಪರಿವರ್ತಿಸಲು ನಿಮ್ಮಿಂದ ಸಾಧ್ಯವಾಗುತ್ತದೆ. ನಿಮ್ಮ ತಪ್ಪು ನಿರ್ಧಾರಗಳಿಂದ ಆತ್ಮೀಯ ಬಂಧುವೊಬ್ಬರು ನಿಮ್ಮಿಂದ ದೂರವಾಗಲಿದ್ದಾರೆ. ಸದಾ ಉತ್ಸಾಹದಿಂದ ಎಲ್ಲರ ಜೊತೆಯಲ್ಲಿ ವರ್ತಿಸುವಿರಿ. ನಿಮ್ಮ ಜೀವನದ ಉದ್ದೇಶಗಳನ್ನು ಕಾರ್ಯರೂಪಕ್ಕೆ ತರುವಿರಿ. ಸ್ವಾರ್ಥದ ಬುದ್ದಿಯು ನಿಮ್ಮನ್ನು ಆವರಿಸಿರುತ್ತದೆ. ಮಕ್ಕಳ ಜೊತೆಯಲ್ಲಿ ವಿಶ್ವಾಸದಿಂದ ವರ್ತಿಸುವಿರಿ. ವಿದ್ಯಾರ್ಥಿಗಳು ಉನ್ನತ ವಿದ್ಯಾಭ್ಯಾಸದಲ್ಲಿ ತಲ್ಲೀನರಾಗುತ್ತಾರೆ. ಉದ್ಯೋಗಲ್ಲಿ ಸಹೋದ್ಯೋಗಿಗಳ ಜೊತೆಯಲ್ಲಿ ಮನಸ್ತಾಪ ಉಂಟಾಗುತ್ತದೆ. ಐಷಾರಾಮಿ ಜೀವನಕ್ಕೆ ಮನಸೋಲುವಿರಿ. ಮನೆತನದ ಹಿರಿಯರ ಜೊತೆಯಲ್ಲಿ ಉತ್ತಮ ಬಾಂಧವ್ಯ ಇರುತ್ತದೆ. ಹಠದ ಗುಣದಿಂದ ನಿಮ್ಮ ಜೀವನದಲ್ಲಿನ ಅಪೂರ್ವವಾದ ಅವಕಾಶಗಳನ್ನು ಕಳೆದುಕೊಳ್ಳುವಿರಿ. ಆರೋಗ್ಯದಲ್ಲಿ ಚೇತರಿಕೆ ಇರುತ್ತದೆ.
ಬರಹ: ಹೆಚ್. ಸತೀಶ್, ಜ್ಯೋತಿಷಿ, ಬೆಂಗಳೂರು
(ಗಮನಿಸಿ: ಜ್ಯೋತಿಷ್ಯ ಶಾಸ್ತ್ರದ ಲೆಕ್ಕಾಚಾರಕ್ಕೆ ಹಲವು ಸೂತ್ರಗಳಿವೆ. ನಿರ್ದಿಷ್ಟ ರೀತಿಯಲ್ಲಿ ಕ್ರಮಬದ್ಧವಾಗಿ ಈ ರಾಶಿ ಭವಿಷ್ಯ ನೀಡಲಾಗಿದೆ. ಆದರೆ ಒಟ್ಟಾರೆಯಾಗಿ ಜ್ಯೋತಿಷ್ಯ ಎನ್ನುವುದು ನಂಬಿಕೆಯ ಮಾತು. ಓದುಗರ ನಂಬಿಕೆಯನ್ನು ಹಿಂದೂಸ್ತಾನ್ ಟೈಮ್ಸ್ ಕನ್ನಡ ಗೌರವಿಸುತ್ತದೆ. ಇಲ್ಲಿರುವ ಯಾವುದೇ ಶಿಫಾರಸು ಅಥವಾ ಸಲಹೆಗಳನ್ನು ಪಾಲಿಸುವುದು ಓದುಗರ ವಿವೇಚನೆ, ನಂಬಿಕೆಗೆ ಬಿಟ್ಟ ವಿಷಯವಾಗಿರುತ್ತದೆ).