ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  ಮೇಷ ರಾಶಿಯಲ್ಲಿ ಕುಜನ ಸಂಚಾರ; ಕಂಕಣ ಭಾಗ್ಯ, ಆರ್ಥಿಕ ಲಾಭ ಸೇರಿದಂತೆ 12 ರಾಶಿಗಳಿಗೆ ಮಂಗಳ ನೀಡುತ್ತಿರುವ ಫಲಗಳಿವು

ಮೇಷ ರಾಶಿಯಲ್ಲಿ ಕುಜನ ಸಂಚಾರ; ಕಂಕಣ ಭಾಗ್ಯ, ಆರ್ಥಿಕ ಲಾಭ ಸೇರಿದಂತೆ 12 ರಾಶಿಗಳಿಗೆ ಮಂಗಳ ನೀಡುತ್ತಿರುವ ಫಲಗಳಿವು

Mars Transit: ಆಗ್ಗಾಗ್ಗೆ ಗ್ರಹಗಳು ರಾಶಿಯನ್ನು ಬದಲಾವಣೆ ಮಾಡುವುದು ದ್ವಾದಶ ರಾಶಿಗಳ ಮೇಲೆ ವಿವಿಧ ಪರಿಣಾಮ ಬೀರುತ್ತದೆ. ಜೂನ್‌ 1 ರಿಂದ ಮೇಷ ರಾಶಿಯಲ್ಲಿ ಕುಜ ಸಂಚಿಸುತ್ತಿದ್ದು 12 ರಾಶಿಗಳಿಗೆ ಕಂಕಣ ಬಲ, ಆರ್ಥಿಕ ಲಾಭ ಸೇರಿದಂತೆ ವಿವಿಧ ಫಲಗಳನ್ನು ನೀಡುತ್ತಿದ್ದಾನೆ.

ಮೇಷ ರಾಶಿಯಲ್ಲಿ ಕುಜನ ಸಂಚಾರ; 12 ರಾಶಿಗಳಿಗೆ ಮಂಗಳ ನೀಡುತ್ತಿರುವ ಫಲಗಳೇನು?
ಮೇಷ ರಾಶಿಯಲ್ಲಿ ಕುಜನ ಸಂಚಾರ; 12 ರಾಶಿಗಳಿಗೆ ಮಂಗಳ ನೀಡುತ್ತಿರುವ ಫಲಗಳೇನು?

ಕುಜನು ಜೂನ್ 1 ರಿಂದ ಜುಲೈ 12ರವರೆಗೂ ತನ್ನ ಸ್ವಕ್ಷೇತ್ರವಾದ ಮೇಷದಲ್ಲಿ ಸಂಚರಿಸುತ್ತಾನೆ. ಕುಜನು ರಾಹುವಿನೊಂದಿಗೆ ಮೀನದಲ್ಲಿ ಇರುವವರೆಗೂ ಶುಭ ಫಲಗಳನ್ನು ನೀಡಲು ಅಸಮರ್ಥನಾಗುತ್ತಾನೆ. ಆದರೆ ಮೇಷದಲ್ಲಿ ಕುಜನು ಸಂಚರಿಸುವ ವೇಳೆ ಪ್ರತಿಯೊಂದು ರಾಶಿಗಳಿಗೂ ಫಲಗಳನ್ನು ನೀಡುತ್ತಾನೆ. ಸಾಮಾನ್ಯವಾಗಿ ಮಿಥುನ ಮತ್ತು ಕನ್ಯಾ ರಾಶಿಗಳಿಗೆ ಕುಜನು ಶುಭ ಫಲಗಳನ್ನು ನೀಡುವುದಿಲ್ಲ. ಆದರೆ ಮೇಷವು ಕುಜನಿಗೆ ಸ್ವಕ್ಷೇತ್ರವಾದ ಕಾರಣ ಯಾವುದೇ ರಾಶಿಗಳಿಗೂ ತೊಂದರೆ ಆಗದು.

ಮೇಷ, ಕಟಕ, ಸಿಂಹ, ವೃಶ್ಚಿಕ ಧನಸ್ಸು ಮತ್ತು ಮೀನ ರಾಶಿಗಳಿಗೆ ವಿಶೇಷವಾದ ಫಲಗಳು ದೊರೆಯಲಿವೆ. ಮಿಥುನ, ತುಲಾ, ಮಕರ ಮತ್ತು ಕುಂಭ ರಾಶಿಗಳಿಗೆ ಉತ್ತಮ ಫಲಗಳು ದೊರೆಯುತ್ತವೆ. ಆದರೆ ಮಿಥುನ, ಕನ್ಯಾ ರಾಶಿಗಳಿಗೆ ಮಾತ್ರ ಸಾಧಾರಣ ಫಲಗಳು ದೊರೆಯುತ್ತವೆ. ಜನ್ಮ ಕುಂಡಲಿಯಲ್ಲಿ ಕುಜನು ಸುಸ್ಥಿತಿಯಲ್ಲಿ ಇಲ್ಲದಿದ್ದರೂ, ಕುಜ ಶಾಂತಿ, ಶ್ರೀ ಸುಬ್ರಹ್ಮಣ್ಯ ಸ್ವಾಮಿ ಹಾಗೂ ಶ್ರೀ ಲಕ್ಷ್ಮೀ ನರಸಿಂಹ ಸ್ವಾಮಿಯ ಪೂಜೆಯಿಂದ ಶುಭ ಫಲಗಳನ್ನು ಪಡೆಯಬಹುದು. ಗೋಚಾರದ ಗ್ರಹಗಳ ಫಲಾಫಲಗಳು ಬಹುತೇಕವಾಗಿ ಜನ್ಮ ಕುಂಡಲಿಯಲ್ಲಿ ನಡೆಯುತ್ತಿರುವ ದಶಾಭುಕ್ತಿಗಳನ್ನು ಆಧರಿಸುತ್ತದೆ. ಕುಜನನ್ನು ಮಂಗಳ ಎಂಬ ಹೆಸರಿನಿಂದಲೂ ಕರೆಯುತ್ತಾರೆ.

ಮೇಷ

ಸೋದರದ ನಡುವೆ ಇದ್ದ ಭಿನ್ನಾಭಿಪ್ರಾಯ ದೂರವಾಗುತ್ತವೆ. ಸ್ವಂತ ಭೂಮಿ ಅಥವಾ ಮನೆ ಕೊಳ್ಳುವ ಆಸೆ ಸುಲಭವಾಗಿ ಈಡೇರಲಿದೆ. ಸೋಲಿನ ಅಂಚಿನಲ್ಲಿ ಇದ್ದರೂ ಧೈರ್ಯಗಡದೆ ಕೆಲಸ ಸಾಧಿಸುವಿರಿ. ಬಹುದಿನದಿಂದ ಕಾಡುತ್ತಿದ್ದ ಆರೋಗ್ಯ ಸಮಸ್ಯೆ ದೂರವಾಗಲಿದೆ. ಅಧಿಕಾರಿಗಳಿಗೆ ವಿಶೇಷ ಅನುಕೂಲತೆಗಳು ದೊರೆಯುತ್ತವೆ. ಆದರೆ ವಾಹನ ಚಾಲನೆ ಮಾಡುವ ವೇಳೆ ಎಚ್ಚರಿಕೆಯಿಂದ ಇರಬೇಕು. ಆಡುವ ಮಾತಿನ ಮೇಲೆ ಹಿಡಿತವಿದ್ದಲ್ಲಿ ಯಾವುದೇ ಕಷ್ಟಕರ ಕೆಲಸವನ್ನು ಸಾಧಿಸಬಹುದು. ವಂಶದ ಆಸ್ತಿ ವಿಚಾರದಲ್ಲಿ ಯಾವುದೇ ತೊಂದರೆಗಳಿದ್ದರೂ ಬಗೆಹರಿಯುತ್ತದೆ. ದಂಪತಿ ಮಧ್ಯೆ ಮನಸ್ತಾಪ ಮರೆಯಾಗಿ ಮತ್ತೊಮ್ಮೆ ಪರಸ್ಪರ ಪ್ರೀತಿ ವಿಶ್ವಾಸ ಹೆಚ್ಚುತ್ತದೆ.

ವೃಷಭ

ಉತ್ತಮ ಆದಾಯವಿರುತ್ತದೆ. ಆದರೆ ಸಂಗಾತಿಗಾಗಿ ಅಥವಾ ಆತ್ಮೀಯರಿಗಾಗಿ ಹಣ ಖರ್ಚು ಮಾಡುವಿರಿ. ಉದ್ಯೋಗದಲ್ಲಿ ಸಹೋದ್ಯೋಗಿಗಳ ಸಹಾಯ ಸಹಕಾರ ದೊರೆಯುತ್ತದೆ. ಕಣ್ಣಿನ ದೋಷವಿದ್ದಲ್ಲಿ ವೈದ್ಯಕೀಯ ಚಿಕಿತ್ಸೆಯಿಂದ ಸಹಜ ಸ್ಥಿತಿಗೆ ಮರಳುತ್ತದೆ. ಪಾಲುದಾರಿಕೆಯ ವ್ಯಾಪಾರ ವ್ಯವಹಾರಗಳಲ್ಲಿ ಉತ್ತಮ ಲಾಭಾಂಶ ದೊರೆಯುತ್ತದೆ. ಹಣಕಾಸಿನ ವ್ಯವಹಾರವು ಸರಾಗವಾಗಿ ನಡೆಯುವುದಿಲ್ಲ. ದೀರ್ಘಕಾಲದ ಪ್ರಯಾಣದಿಂದ ಮನಸ್ಸಿಗೆ ನೆಮ್ಮದಿ ಉಂಟಾಗುತ್ತದೆ. ಅನಗತ್ಯ ಖರ್ಚು ವೆಚ್ಚಗಳನ್ನು ನಿಯಂತ್ರಿಸಿದರೆ ಹಣದ ತೊಂದರೆ ಉಂಟಾಗುವುದಿಲ್ಲ. ಯಾವುದೇ ಆತಂಕವಿಲ್ಲದೆ ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡಲಿದ್ದಾರೆ. ಪ್ರವಾಸಕ್ಕಾಗಿ ಹೆಚ್ಚಿನ ಹಣ ವೆಚ್ಚವಾಗುವ ಸಾಧ್ಯತೆ ಹೆಚ್ಚು.

ಮಿಥುನ

ಕುಟುಂಬದ ಜವಾಬ್ದಾರಿಗಳನ್ನು ಹಂಚಿಕೊಳ್ಳುವ ಕಾರಣ ಮಾನಸಿಕ ಒತ್ತಡ ಕಡಿಮೆಯಾಗುತ್ತದೆ. ಅನಿರೀಕ್ಷಿತ ಧನಲಾಭವು ಸಂತೋಷಕರ ಜೀವನಕ್ಕೆ ಸಹಕಾರಿಯಾಗಲಿದೆ. ಯಾವುದೇ ವಿಚಾರವಾದರೂ ತೆಗೆದುಕೊಳ್ಳುವ ನಿರ್ಧಾರಗಳನ್ನು ಪದೇ ಪದೇ ಬದಲಿಸುವಿರಿ. ನಿಮ್ಮದೇ ಆದ ತಪ್ಪಿನಿಂದ ಕೆಲಸ ಕಾರ್ಯಗಳು ನಿಧಾನಗತಿಯಲ್ಲಿ ಸಾಗಲಿವೆ. ಆದರೆ ಹಣಕಾಸಿನ ತೊಂದರೆ ಕಂಡು ಬರುವುದಿಲ್ಲ. ಒಳ್ಳೆಯ ಕೆಲಸಗಳಿಗಾಗಿ ಕಷ್ಟಪಟ್ಟು ದುಡಿದ ಹಣವನ್ನು ವಿನಿಯೋಗಿಸುವಿರಿ. ಹಿರಿಯ ಸೋದರ ಅಥವಾ ಸೋದರಿಗೆ ಹಣ ಸಹಾಯ ಮಾಡುವಿರಿ. ಮನಸ್ಸಿಲ್ಲದೇ ಹೋದರೂ ಉದ್ಯೋಗ ಬದಲಿಸಬೇಕಾದ ಪರಿಸ್ಥಿತಿ ಎದುರಾಗಲಿದೆ. ಕೊಂಚ ಪ್ರಯತ್ನ ಪಟ್ಟಲ್ಲಿ ಉದ್ಯೋಗದ ಸಲುವಾಗಿ ವಿದೇಶಕ್ಕೆ ತೆರಳಬಹುದು.

ಕಟಕ

ಕೆಲಸ ಕಾರ್ಯಗಳಲ್ಲಿ ಅನಿರೀಕ್ಷಿತವಾದ ಶುಭಫಲಗಳು ದೊರೆಯಲಿವೆ. ಮಕ್ಕಳ ಜೊತೆಯಲ್ಲಿ ಇದ್ದ ಮನಸ್ತಾಪ ದೂರವಾಗುತ್ತದೆ. ಉದ್ಯೋಗದಲ್ಲಿ ನಿರೀಕ್ಷೆ ಮೀರಿದ ಶುಭಫಲಗಳು ದೊರೆಯಲಿವೆ. ಉತ್ತಮ ಆದಾಯವಿರುವ ಕಾರಣ ಸ್ವಂತ ವ್ಯಾಪಾರ ವ್ಯವಹಾರವನ್ನು ಆರಂಭಿಸುವ ಸಾಧ್ಯತೆಗಳಿವೆ. ವಿದ್ಯಾರ್ಥಿಗಳು ಯಾವುದೇ ಹಿನ್ನಡೆ ಕಾಣದೆ ವಿದ್ಯಾಭ್ಯಾಸದಲ್ಲಿ ಮುಂದುವರೆಯುತ್ತಾರೆ. ಸಂತಾನ ಲಾಭವಿದೆ. ಸ್ವಂತ ಮನೆ ಕೊಳ್ಳುವ ಅಥವಾ ಕಟ್ಟಿಸುವ ಯೋಚನೆ ಇದ್ದರೆ ನೆರವೇರಲಿದೆ. ತಂದೆ ಹೆಸರಿನಲ್ಲಿ ಇದ್ದ ಜಮೀನಿನ ಒಡೆತನ ನಿಮಗೆ ದೊರೆಯುತ್ತದೆ. ಕುಟುಂಬದ ಭೂ ವಿವಾದ ಮಾತುಕತೆಯ ಮುಖಾಂತರ ಸುಖಾಂತ್ಯಗೊಳ್ಳುತ್ತದೆ.

ಸಿಂಹ

ಇಲ್ಲಿಯವರೆಗೂ ಅಸಾಧ್ಯವೆನಿಸಿದ ಕೆಲಸವೊಂದು ಸುಲಭವಾಗಿ ಕೈಗೂಡುತ್ತದೆ. ಕುಟುಂಬದಲ್ಲಿ ನಿಮ್ಮಿಂದ ಶಾಂತಿ ನೆಮ್ಮದಿ ನೆನೆಸಿರುತ್ತದೆ. ಸ್ವಗೃಹ ಭೂಲಾಭವಿದೆ. ತಾಯಿಯವರ ಆರೋಗ್ಯದಲ್ಲಿ ಸ್ಥಿರತೆ ಇರುತ್ತದೆ. ಕುಟುಂಬದ ಪರಿಪೂರ್ಣ ಜವಾಬ್ದಾರಿಯು ನಿಮ್ಮದಾಗುತ್ತದೆ. ಹಣಕಾಸಿನ ತೊಂದರೆ ಇರುವುದಿಲ್ಲ. ಉದ್ಯೋಗದಲ್ಲಿ ನಿಮ್ಮ ಕೆಲಸ ಕಾರ್ಯಗಳಿಗೆ ಎಲ್ಲರ ಮೆಚ್ಚುಗೆ ದೊರೆಯುತ್ತದೆ. ವಿದ್ಯಾರ್ಥಿಗಳು ಕೆಟ್ಟವಿಲ್ಲದೆ ತಮ್ಮ ನಿಗದಿತ ಗುರಿಯನ್ನು ತಲುಪುತ್ತಾರೆ. ಕುಟುಂಬದ ಹಿರಿಯರಿಗೆ ಇದ್ದ ರಕ್ತದ ದೋಷವು ಪರಿಹಾರವಾಗುತ್ತದೆ. ತಂದೆಯವರ ಅತಿಯಾದ ಸಿಡುಕಿನ ವರ್ತನೆ ಬೇಸರ ಉಂಟುಮಾಡುತ್ತದೆ. ತಾಯಿಯವರ ಸಹಾಯದಿಂದ ಅಥವಾ ತಾಯಿಯವರ ಪಾಲುದಾರಿಕೆಯಲ್ಲಿ ವ್ಯಾಪಾರವನ್ನು ಆರಂಭಿಸಿ ಯಶಸ್ವಿಯಾಗುವಿರಿ.

ಕನ್ಯಾ

ಸಣ್ಣಪುಟ್ಟ ಕೆಲಸ ಕಾರ್ಯಗಳಿಗೂ ಹೆಚ್ಚಿನ ಪ್ರಯತ್ನದ ಅವಶ್ಯಕತೆ ಇದೆ. ಕೆಲಸ ಕಾರ್ಯಗಳಲ್ಲಿ ಅನಿರೀಕ್ಷಿತವಾದ ಬದಲಾವಣೆಗಳು ಕಂಡರೂ ಯಶಸ್ಸಿಗೆ ಕೊರತೆ ಇರುವುದಿಲ್ಲ. ಹಿರಿಯ ಸೋದರ ಅಥವಾ ಸೋದರಿಗೆ ಆರೋಗ್ಯದಲ್ಲಿ ತೊಂದರೆ ಉಂಟಾಗುತ್ತದೆ. ಅನಿರೀಕ್ಷಿತ ಧನ ಲಾಭವು ಜೀವನದ ಆತಂಕವನ್ನು ಕಡಿಮೆ ಮಾಡುತ್ತದೆ. ಕುಟುಂಬದ ಎಲ್ಲರ ಸಹಾಯ ಸಹಕಾರ ದೊರೆಯುತ್ತದೆ. ಕುಟುಂಬದಲ್ಲಿ ಬೇಸರ ಉಂಟಾಗಬಹುದು. ಸೋದರರ ಜೊತೆಗಿನ ಸಂಬಂಧ ಗಟ್ಟಿಕೊಳ್ಳುತ್ತದೆ. ಮುಖ್ಯವಾಗಿ ಹೆಣ್ಣು ಮಕ್ಕಳಿಗೆ ವಿವಾಹ ನಿಶ್ಚಯವಾಗುತ್ತದೆ. ಉತ್ತಮ ಆದಾಯವಿದ್ದಾಗ ಹಣವನ್ನು ಉಳಿಸುವ ಪ್ರಯತ್ನ ಮಾಡಬೇಕು. ಕೈಕಾಲುಗಳಿಗೆ ಪೆಟ್ಟಾಗುವ ಸಂಭವವಿದೆ ಎಚ್ಚರಿಕೆ ಇರಲಿ. ಮನದಲ್ಲಿರುವ ನೋವನ್ನು ಮುಚ್ಚಿಟ್ಟು ಎಲ್ಲರೊಂದಿಗೆ ಸಂತಸದಿಂದ ಬಾಳುವಿರಿ.

ತುಲಾ

ದೊರೆಯುವ ಅವಕಾಶಗಳನ್ನು ಬಳಸಿಕೊಂಡು ಜೀವನದಲ್ಲಿ ಮುಂದುವರೆಯುವಿರಿ. ಯಾವುದೇ ರೀತಿಯ ಅಡೆತಡೆ ಇಲ್ಲದ ಸುಖ ಜೀವನ ನಿಮ್ಮದಾಗುತ್ತದೆ. ಕುಟುಂಬದಲ್ಲಿ ಪ್ರತಿ ವಿಚಾರದಲ್ಲಿಯೂ ಒಮ್ಮತದ ನಿರ್ಧಾರ ತೆಗೆದುಕೊಳ್ಳುವಿರಿ. ಪರಸ್ಪರ ಹೊಂದಾಣಿಕೆಯ ಗುಣ ಎಲ್ಲರ ಮನ ಸೆಳೆಯುತ್ತದೆ. ಪ್ರತಿ ವಿಚಾರದಲ್ಲೂ ನಿರೀಕ್ಷಿತ ಫಲಿತಾಂಶಗಳನ್ನು ಪಡೆಯುವಿರಿ. ದಂಪತಿ ನಡುವೆ ಇದ್ದ ಪ್ರೀತಿ ವಿಶ್ವಾಸ ಹೆಚ್ಚುತ್ತದೆ. ಕುಟುಂಬದ ಸದಸ್ಯರ ಜೊತೆ ಆರಂಭಿಸಿದ ಪಾಲುದಾರಿಕೆ ವ್ಯಾಪಾರದಲ್ಲಿ ಹೆಚ್ಚಿನ ಲಾಭವಿದೆ. ಗೃಹಿಣಿಯರಿಗೆ ತವರು ಮನೆಯಿಂದ ದೊಡ್ಡ ಉಡುಗೊರೆ ಲಭಿಸಲಿದೆ. ಎದುರಾಗುವ ಯಾವುದೇ ಸಮಸ್ಯೆಯನ್ನು ಬರಿ ಮಾತಿನಿಂದಲೇ ಪರಿಹರಿಸಬಲ್ಲಿರಿ. ಉಸಿರಾಟದ ಸಮಸ್ಯೆ ಇರುವವರು ಎಚ್ಚರಿಕೆಯಿಂದ ಇರಬೇಕು.

ವೃಶ್ಚಿಕ

ನಿಮ್ಮಲ್ಲಿರುವ ಛಲ ಮತ್ತು ಹಟದ ಗುಣವು ಎಲ್ಲರಿಗೂ ಮಾದರಿಯಾಗುತ್ತದೆ. ನಿಮ್ಮನ್ನು ನಂಬಿ ಬಂದವರಿಗೆ ಸೋಲಿನ ಭಯ ಇರುವುದಿಲ್ಲ. ಅವಿವಾಹಿತರಿಗೆ ವಿವಾಹ ನಿಶ್ಚಿಯವಾಗುತ್ತದೆ. ನಿಮ್ಮ ಸಂಗಾತಿಗೆ ಕುಟುಂಬವನ್ನು ಕಾಪಾಡಿಕೊಳ್ಳುವ ಮಾರ್ಗ ತಿಳಿದಿರುತ್ತದೆ. ಅತಿಯಾದ ಕೆಲಸ ಕಾರ್ಯಗಳು ಎದುರಾದಾಗ ಕಾರಣ ಮಾನಸಿಕವಾಗಿ ಬಳಲುವಿರಿ. ಉತ್ತಮ ಆರೋಗ್ಯವಿದ್ದರೂ ದೈಹಿಕ ಸದೃಢತೆ ಇರುವುದಿಲ್ಲ. ಕುಟುಂಬದ ದೊಡ್ಡ ಜವಾಬ್ದಾರಿಗಳನ್ನು ಮಕ್ಕಳು ಯಶಸ್ವಿಯಾಗಿ ನಿರ್ವಹಿಸಲಿದ್ದಾರೆ. ನಿಮ್ಮ ಮಕ್ಕಳಿಗೆ ಉದ್ಯೋಗ ದೊರೆಯುತ್ತದೆ. ಸಮಸ್ಯೆಗಳು ಎದುರಾದಾಗ ಹಿಂಜರಿಯದೆ ಯಶಸ್ಸನ್ನು ಗಳಿಸುವಿರಿ. ಉತ್ತಮ ಆರೋಗ್ಯಕ್ಕಾಗಿ ಯೋಗ ಪ್ರಾಣಾಯಾಮದಂತಹ ರೀತಿ ನೀತಿಗಳನ್ನು ಅನುಸರಿಸುವಿರಿ. ಹಿರಿಯರ ಪ್ರೀತಿ ಮತ್ತು ಕಿರಿಯರ ಗೌರವ ಸದಾ ನಿಮಗಿರುತ್ತದೆ.

ಧನಸ್ಸು

ಉತ್ತಮ ವಿದ್ಯೆ ಇರುತ್ತದೆ. ಆದರೆ ವಿದ್ಯೆಗಿಂತಲೂ ಸಮಯಕ್ಕೆ ತಕ್ಕಂತೆ ವರ್ತಿಸುವ ಬುದ್ಧಿವಂತಿಕೆ ನಿಮಗಿರುತ್ತದೆ. ಮಕ್ಕಳ ವಿಚಾರದಲ್ಲಿ ಇದ್ದ ಯೋಚನೆಯು ದೂರವಾಗುತ್ತದೆ. ತೆಗೆದುಕೊಂಡ ತೀರ್ಮಾನಗಳನ್ನು ಬದಲಾಯಿಸದೆ ಮುನ್ನಡೆಯುವಿರಿ. ಒಂದೇ ಮನಸ್ಸಿನಿಂದ ದುಡಿದು ಕೈಹಿಡಿದ ಕೆಲಸ ಕಾರ್ಯಗಳನ್ನು ಯಶಸ್ವಿಯಾಗಿಸುವಿರಿ. ವಿದ್ಯಾರ್ಥಿಗಳಿಗೆ ವಿಶೇಷ ಅನುಕೂಲತೆಗಳು ದೊರೆಯಲಿವೆ. ಪ್ರಯತ್ನ ಪಟ್ಟಲ್ಲಿ ಉನ್ನತ ವಿದ್ಯಾಭ್ಯಾಸಕ್ಕಾಗಿ ವಿದೇಶಕ್ಕೆ ತೆರಳಬಹುದು. ಮಕ್ಕಳನ್ನು ವಿಶೇಷ ಪ್ರೀತಿಯಿಂದ ಕಾಣುವಿರಿ. ಕೌಟುಂಬಿಕ ನಿರ್ಧಾರಗಳು ನಿಮ್ಮ ತಾಯಿಯನ್ನು ಅವಲಂಬಿಸಿದೆ. ಬಹು ದಿನಗಳಿಂದ ಕಾಡುತ್ತಿದ್ದ ಸ್ವಂತ ಮನೆಯ ಕನಸು ನನಸಾಗಲಿದೆ. ಸ್ವಂತ ಬಳಕೆಗಾಗಿ ಹೊಸ ವಾಹನವನ್ನು ಕೊಳ್ಳುವಿರಿ.

ಮಕರ

ನಿಮ್ಮ ಮನಸ್ಸಿನಂತೆ ಪ್ರತಿಯೊಂದು ಕೆಲಸ ಕಾರ್ಯಗಳು ಕಷ್ಟವಿಲ್ಲದೆ ಪೂರ್ಣಗೊಳ್ಳುತ್ತವೆ. ಕುಟುಂಬದ ಬಗ್ಗೆ ವಿಶೇಷ ಅಭಿಮಾನವಿರುತ್ತದೆ. ಯಾವುದೇ ವಿಷಯವಾದರೂ ನಿಮ್ಮ ತಾಯಿಯವರೇ ಅಂತಿಮ ತೀರ್ಮಾನ ತೆಗೆದುಕೊಳ್ಳುತ್ತಾರೆ. ಕುಟುಂಬದಲ್ಲಿ ತಂದೆ ತಾಯಿ ಅಥವಾ ಕುಟುಂಬದ ಹಿರಿಯರ ಮೇಲೆ ವಿಶೇಷ ಪ್ರೀತಿ ವಿಶ್ವಾಸ ಗೌರವವಿರುತ್ತದೆ. ಇರುವ ಸ್ವಂತ ಮನೆಯನ್ನು ನವೀಕರಣಗೊಳಿಸುವಿರಿ. ದೇವತಾ ಕಾರ್ಯಗಳಲ್ಲಿ ನೆಮ್ಮದಿ ಕಾಣುವಿರಿ. ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕಾಗಿ ಎಲ್ಲರ ಸಹಾಯ ಸಹಕಾರ ದೊರೆಯುತ್ತದೆ. ಹಣಕಾಸಿನ ವಿಚಾರದಲ್ಲಿ ಗೋಪ್ಯತೆ ಕಾಯ್ದುಕೊಳ್ಳುವಿರಿ. ಸುಲಭವಾಗಿ ಯಾರ ಸ್ನೇಹ ಅಥವಾ ಸಂಬಂಧವನ್ನು ಒಪ್ಪುವುದಿಲ್ಲ. ಮಕ್ಕಳ ಕ್ಷೇಮ ಮತ್ತು ಉನ್ನತ ಮಟ್ಟದ ಜೀವನಕ್ಕಾಗಿ ಯಾವುದೇ ರೀತಿಯ ತ್ಯಾಗಕ್ಕೆ ಸಿದ್ದರಾಗುವಿರಿ.

ಕುಂಭ

ಕೈಹಿಡಿದ ಕೆಲಸ ಕಾರ್ಯಗಳಲ್ಲಿ ಯಶಸ್ಸು ಗಳಿಸುವವರೆಗೂ ವಿಶ್ರಮಿಸುವುದಿಲ್ಲ. ಉದ್ಯೋಗದಲ್ಲಿ ಅಧಿಕಾರವಿಲ್ಲದೇ ಹೋದರೂ ನಿಮಗೆ ಸಂಪೂರ್ಣ ಜವಾಬ್ದಾರಿ ಇರುತ್ತದೆ. ಕಿರಿಯ ಸೋದರ ಅಥವಾ ಸೋದರಿಗೆ ಕುಟುಂಬದವರ ವಿಶೇಷ ಪ್ರೀತಿ ವಿಶ್ವಾಸಗಳು ದೊರೆಯುತ್ತವೆ. ಕುಟುಂಬದ ಜನ ಮಾತ್ರವಲ್ಲದೆ ಬೇರೆಯವರಿಗೂ ನಿಮ್ಮ ಮೇಲೆ ವಿಶೇಷ ಪ್ರೀತಿ ಗೌರವ ಉಂಟಾಗುತ್ತದೆ. ಉದ್ಯೋಗದ ಸಲುವಾಗಿ ವಿದೇಶಕ್ಕೆ ತೆರಳುವ ಅವಕಾಶ ದೊರೆಯುತ್ತದೆ. ಕುಟುಂಬದಲ್ಲಿ ಅನೇಕ ಧಾರ್ಮಿಕ ಕೆಲಸ ಕಾರ್ಯಗಳು ನಿಮ್ಮಿಂದ ನಡೆಯಲಿದೆ. ಆರೋಗ್ಯದಲ್ಲಿ ಯಾವುದೇ ತೊಂದರೆ ಇರುವುದಿಲ್ಲ. ತಮ್ಮ ತಪ್ಪನ್ನು ಅರಿತು ಮಾತಿನ ಮೇಲೆ ಹತೋಟಿ ಸಾಧಿಸುವ ಕಾರಣ ಸುಖ ಸಂತೋಷದಿಂದ ಜೀವನ ನಡೆಸುವಿರಿ.

ಮೀನ

ಅನಿರೀಕ್ಷಿತವಾದ ಶುಭ ಫಲಗಳು ನಿಮಗೆ ದೊರೆಯುತ್ತವೆ. ಯಾವುದೇ ಕೆಲಸ ಕಾರ್ಯವಾದರೂ ಸುಲಭವಾಗಿ ಯಶಸ್ಸನ್ನು ಗಳಿಸುವಿರಿ. ತಂದೆ ಬಗ್ಗೆ ವಿಶೇಷ ಪ್ರೀತಿ ಗೌರವ ಇರುತ್ತದೆ. ಕಡ್ಡಿ ತುಂಡಾದಂತೆ ಆಡುವ ಮಾತುಗಳಿಂದ ಕುಟುಂಬದಲ್ಲಿ ಬಿಗುವಿನ ವಾತಾವರಣ ಉಂಟಾಗುತ್ತದೆ. ಮನಸ್ಸಿಗೆ ಒಪ್ಪುವಂಥ ಕೆಲಸ ಕಾರ್ಯಗಳನ್ನೇ ಮಾಡುವಿರಿ. ಸದಾ ಕಾಲ ನ್ಯಾಯ ನೀತಿಗೆ ಬೆಲೆ ಕೊಡುವ ಕಾರಣ ವಿವಾದ ಎದುರಿಸುವಿರಿ. ತಂದೆಯವರಿಗೆ ಸೇರಬೇಕಿದ್ದ ಆಸ್ತಿ ವಿವಾದ ದೂರವಾಗುತ್ತದೆ. ನಿಯಮಿತವಾಗಿ ದೊರೆಯುವ ಯಶಸ್ಸು ಮತ್ತು ಅನುಕೂಲತೆಗಳು ಆತ್ಮವಿಶ್ವಾಸವನ್ನು ಹೆಚ್ಚಿಸುತ್ತದೆ. ಪಾಲುದಾರಿಕೆಯ ವ್ಯಾಪಾರ ವ್ಯವಹಾರಗಳಲ್ಲಿ ನಂಬಿಕೆ ಇರುವುದಿಲ್ಲ. ಸ್ವತಂತ್ರವಾಗಿ ನಿರ್ವಹಿಸುವ ಕೆಲಸ ಕಾರ್ಯಗಳಲ್ಲಿ ಯಶಸ್ಸು ದೊರೆಯುತ್ತದೆ.

ಬರಹ: ಎಚ್‌. ಸತೀಶ್, ಜ್ಯೋತಿಷಿ

ಮೊಬೈಲ್:‌ 8546865832

(ಗಮನಿಸಿ: ಜ್ಯೋತಿಷ್ಯ ಶಾಸ್ತ್ರದ ಲೆಕ್ಕಾಚಾರಕ್ಕೆ ಹಲವು ಸೂತ್ರಗಳಿವೆ. ನಿರ್ದಿಷ್ಟ ರೀತಿಯಲ್ಲಿ ಕ್ರಮಬದ್ಧವಾಗಿ ಈ ರಾಶಿ ಭವಿಷ್ಯ ನೀಡಲಾಗಿದೆ. ಆದರೆ ಒಟ್ಟಾರೆಯಾಗಿ ಜ್ಯೋತಿಷ್ಯ ಎನ್ನುವುದು ನಂಬಿಕೆಯ ಮಾತು. ಓದುಗರ ನಂಬಿಕೆಯನ್ನು ‘ಹಿಂದೂಸ್ತಾನ್ ಟೈಮ್ಸ್ ಕನ್ನಡ’ ಗೌರವಿಸುತ್ತದೆ. ಇಲ್ಲಿರುವ ಯಾವುದೇ ಶಿಫಾರಸು ಅಥವಾ ಸಲಹೆಗಳನ್ನು ಪಾಲಿಸುವುದು ಓದುಗರ ವಿವೇಚನೆ, ನಂಬಿಕೆಗೆ ಬಿಟ್ಟ ವಿಷಯವಾಗಿರುತ್ತದೆ).

(ಕನ್ನಡದಲ್ಲಿ ಕ್ರಿಕೆಟ್, ಎಚ್‌ಟಿ ಕನ್ನಡ ಬೆಸ್ಟ್‌. ಐಪಿಎಲ್, ಟಿ20 ವರ್ಲ್ಡ್‌ಕಪ್ ಸೇರಿದಂತೆ ಕ್ರಿಕೆಟ್ ಲೋಕದ ಸಮಗ್ರ ಮಾಹಿತಿ, ತಾಜಾ ವಿದ್ಯಮಾನ, ರನ್-ವಿಕೆಟ್, ಪ್ಲೇಆಫ್, ಟೀಮ್ ಸ್ಟಾಟ್ ವಿಶ್ಲೇಷಣೆಗಳಿಗಾಗಿ kannada.hindustantimes.com/cricket ಕ್ಕೆ ಭೇಟಿ ನೀಡಿ.)