ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  Nails Astrology: ನಮ್ಮ ಜೀವನದಲ್ಲಿ ಉಗುರುಗಳ ಪಾತ್ರ; ಈ ರೀತಿಯ ಉಗುರು ಇದ್ದವರಿಗೆ ಆರೋಗ್ಯ ಸಮಸ್ಯೆ ಹೆಚ್ಚು

Nails Astrology: ನಮ್ಮ ಜೀವನದಲ್ಲಿ ಉಗುರುಗಳ ಪಾತ್ರ; ಈ ರೀತಿಯ ಉಗುರು ಇದ್ದವರಿಗೆ ಆರೋಗ್ಯ ಸಮಸ್ಯೆ ಹೆಚ್ಚು

ಜ್ಯೋತಿಷ್ಯಶಾಸ್ತ್ರದಲ್ಲಿ ಉಗುರುಗಳಿಗೆ ಕೂಡಾ ಪ್ರಾಮುಖ್ಯತೆ ಇದೆ. ಶನಿ ದೇವನನ್ನು ಉಗುರಿನ ಅಧಿಪತಿ ಎಂದು ನಂಬಲಾಗಿದೆ. ಉಗುರುಗಳು ಸೌಂದರ್ಯವನ್ನು ಕೂಡಾ ಪ್ರತಿನಿಧಿಸುತ್ತದೆ. ಶುಕ್ರನು, ಸೌಂದರ್ಯದ ದೇವತೆಯಾಗಿದ್ದಾನೆ. ಉಗುರಿನ ಆಕಾರ ನೋಡಿ ಆ ವ್ಯಕ್ತಿಗಳ ಸ್ವಭಾವ ಹೇಗೆ ಎಂದು ಗುರುತಿಸಿಬಹುದು. (ಬರಹ: ಎಚ್‌. ಸತೀಶ್, ಜ್ಯೋತಿಷಿ)

 ನಮ್ಮ ಜೀವನದಲ್ಲಿ ಉಗುರುಗಳ ಪಾತ್ರ; ಈ ರೀತಿಯ ಉಗುರು ಇದ್ದವರಿಗೆ ಆರೋಗ್ಯ ಸಮಸ್ಯೆ ಹೆಚ್ಚು
ನಮ್ಮ ಜೀವನದಲ್ಲಿ ಉಗುರುಗಳ ಪಾತ್ರ; ಈ ರೀತಿಯ ಉಗುರು ಇದ್ದವರಿಗೆ ಆರೋಗ್ಯ ಸಮಸ್ಯೆ ಹೆಚ್ಚು

ಕೆಲವರ ಉಗುರುಗಳು ಹೆಚ್ಚಾಗಿ ತಿಳಿ ನೀಲಿ ಬಣ್ಣದಿಂದ ಕೂಡಿರುತ್ತದೆ. ಸಾಮಾನ್ಯವಾಗಿ ಇವರು ಒಂದಲ್ಲಾ ಒಂದು ಆರೋಗ್ಯ ಸಮಸ್ಯೆಯನ್ನು ಹೊಂದಿರುತ್ತಾರೆ. ಮನಸ್ಸು ಒಳ್ಳೆಯದಾದರೂ ಆಡುವ ಮಾತಿನಲ್ಲಿ ತೀಕ್ಷ್ಣತೆ ತುಂಬಿರುತ್ತದೆ. ಮಾತಿನಲ್ಲಿ ಪ್ರೀತಿ ವಿಶ್ವಾಸ ತೋರಿಸಿದಲ್ಲಿ ಜೀವನ ಸುಖ ಸಂತೋಷದಿಂದ ಕೂಡಿರುತ್ತದೆ. ಇವರು ಸಣ್ಣ ಪುಟ್ಟ ನಿರಾಶೆಯನ್ನು ತಡೆದುಕೊಳ್ಳಲಾರರು. ಗೆಲ್ಲುವ ವೇಳೆ ಎಲ್ಲರೊಂದಿಗೆ ಸಂತೋಷವನ್ನು ಹಂಚಿಕೊಳ್ಳುತ್ತಾರೆ. ಸೋಲುವ ವೇಳೆ ಏಕಾಂಗಿಯಾಗಿ ನೋವನ್ನು ಅನುಭವಿಸುತ್ತಾರೆ.

ಆರೋಗ್ಯದ ಮೇಲೆ ಪರಿಣಾಮ

ಇವರ ಸ್ವಭಾವ ಆರೋಗ್ಯದ ಮೇಲೆ ಪ್ರಭಾವ ಬೀರುತ್ತದೆ. ದೈಹಿಕ ವ್ಯಾಯಾಮ ಮತ್ತು ಮುಂಜಾನೆಯ ನಡಿಗೆ ಮಾತ್ರ ಇವರಿಗೆ ಉತ್ತಮ ಆರೋಗ್ಯವನ್ನು ನೀಡುತ್ತದೆ. ಉದ್ಯೋಗ ಕ್ಷೇತ್ರದಲ್ಲಿ ಸದಾ ಗೆಲುವಿನ ಹಾದಿಯಲ್ಲಿ ಸಾಗುತ್ತಾರೆ. ಸಹೋದ್ಯೋಗಿಗಳ ಸಹಕಾರ ಇವರಿಗೆ ದೊರೆಯುತ್ತದೆ. ಆದರೆ ಕುಟುಂಬದಲ್ಲಿ ಯಾರೊಂದಿಗೂ ಇವರು ಹೊಂದಿಕೊಳ್ಳುವುದಿಲ್ಲ. ಪ್ರತಿಯೊಬ್ಬರೂ ಇವರ ರೀತಿ ನೀತಿಗಳನ್ನು ಒಪ್ಪಲೇಬೇಕೆಂದು ಬಯಸುತ್ತಾರೆ. ಆದರೆ ಅನಾವಶ್ಯಕವಾಗಿ ಯಾರ ಮೇಲೂ ತಮ್ಮ ಪ್ರಭಾವ ಬೀರುವುದಿಲ್ಲ. ಹಾಗೆಯೇ ಸುಲಭವಾಗಿ ಬೇರೆಯವರ ಪ್ರಭಾವಕ್ಕೂ ಮಣಿಯುವುದಿಲ್ಲ. ದಾಂಪತ್ಯ ಜೀವನ ಸುಖಮಯವಾಗಿರುತ್ತದೆ. ಮಕ್ಕಳ ಜೊತೆಯಲ್ಲಿ ಪ್ರೀತಿ ವಿಶ್ವಾಸದಿಂದ ಬೆರೆಯುತ್ತಾರೆ. ತಮ್ಮ ಪಾಲಿನ ಜವಾಬ್ದಾರಿಯನ್ನು ನಿರ್ವಹಿಸುವಲ್ಲಿ ಯಶಸ್ವಿಯಾಗುತ್ತಾರೆ.

ಕೆಲವರ ಉಗುರಿನಲ್ಲಿ ನೀಲಿ ಬಣ್ಣದ ಚುಕ್ಕೆಗಳಿರುತ್ತವೆ. ಆದರೆ ಉಗುರಿನಲ್ಲಿ ನಸುಗೆಂಪು ಬಣ್ಣ ಇರುತ್ತದೆ. ಇಂತಹವರ ಜೀವನದಲ್ಲಿ ಕೆಲವೊಮ್ಮೆ ಅನಿರೀಕ್ಷಿತ ಘಟನೆಗಳು ನಡೆಯುತ್ತವೆ. ತಮ್ಮ ಮನಸ್ಸಿಗೆ ಇಷ್ಟವಾದಂತಹ ಕೆಲಸ ಕಾರ್ಯಗಳನ್ನು ಆಯ್ಕೆ ಮಾಡಿಕೊಂಡು ಯಶಸ್ಸನ್ನು ಗಳಿಸುತ್ತಾರೆ. ತಮ್ಮ ಜೊತೆಯಲ್ಲಿ ಇರುವ ಜನರಿಗೂ ಒಳಿತನ್ನು ಕೋರುತ್ತಾರೆ. ಅವರಿಗೆ ಸಹಾಯ ಮಾಡಲು ಹಿಂಜರಿಯುವುದಿಲ್ಲ. ಇವರನ್ನು ನಂಬಿದವರಿಗಾಗಿ ಯಾವುದೇ ರೀತಿಯ ಅಪಾಯವನ್ನು ಎದುರಿಸಲು ಸದಾ ಸಿದ್ದರಾಗಿರುತ್ತಾರೆ. ಕುಟುಂಬದಲ್ಲಿಇವರಿಂದಾಗಿ ಸೌಹಾರ್ದಯುತ ವಾತಾವರಣ ಸದಾ ಇರುತ್ತದೆ. ದಾಂಪತ್ಯ ಜೀವನ ಸುಖ ಸಂತೋಷದಿಂದ ಕೂಡಿರುತ್ತದೆ.

ಪ್ರಯತ್ನಕ್ಕೆ ತಕ್ಕ ಪ್ರತಿಫಲ

ಸಂಗಾತಿಯೊಂದಿಗೆ ಅನಾವಶ್ಯಕ ವಾದ ವಿವಾದಗಳು ಉಂಟಾದರೂ ಬಹುಕಾಲ ನಿಲ್ಲದು. ಯಾರ ಮೇಲೂ ಅವಲಂಬಿತರಾಗುವುದಿಲ್ಲ. ತಮಗೆ ಅವಶ್ಯಕತೆ ಇದ್ದಷ್ಟು ಹಣ ಸಂಪಾದಿಸಬಲ್ಲರು. ವಿದ್ಯಾರ್ಥಿಗಳು ಏಕಾಗ್ರತೆಯನ್ನು ಬೆಳೆಸಿಕೊಂಡರೆ ಕಲಿಕೆಯ ಮೂಲಕ ಎಲ್ಲರ ಗಮನ ಸೆಳೆಯುವರು. ಉತ್ತಮ ಉದ್ಯೋಗವಿರುತ್ತದೆ. ಕಷ್ಟಪಟ್ಟು ದುಡಿಯಲು ಹಿಂಜರಿಯುವುದಿಲ್ಲ. ಹಾಗೆಯೇ ಇವರ ಪ್ರಯತ್ನಕ್ಕೆ ತಕ್ಕಂಥ ಫಲಿತಾಂಶ ದೊರೆಯುತ್ತದೆ. ಕುಟುಂಬದ ಹಿರಿಯರನ್ನು ತೊರೆದು ದೂರವಾಗಲು ಇಷ್ಟಪಡುವುದಿಲ್ಲ. ಹೆಣ್ಣು ಮಕ್ಕಳಾದರೂ ತಂದೆ ತಾಯಿಗಳಿಗಾಗಿ ಎಲ್ಲಾ ರೀತಿಯ ಅನುಕೂಲತೆಗಳನ್ನು ಕಲ್ಪಿಸುತ್ತಾರೆ. ಭೇದ ಭಾವವಿಲ್ಲದೆ ಎಲ್ಲಾ ಮಕ್ಕಳನ್ನು ಒಂದೇ ದೃಷ್ಟಿಯಿಂದ ಕಾಣುತ್ತಾರೆ. ಇವರ ಜೀವನ ಎಲ್ಲರಿಗೂ ಮಾದರಿಯಾಗಿರುತ್ತದೆ.

ಉಗುರುಗಳು ಕೆಂಪು ಬಣ್ಣವಿದ್ದರೂ ಕಪ್ಪು ಬಣ್ಣದ ಚುಕ್ಕೆಗಳಿರುತ್ತವೆ. ಇಂತಹವರು ಸಾಮಾನ್ಯವಾಗಿ ತಮ್ಮ ಮನಸ್ಸಿನ ವಿಚಾರಗಳನ್ನು ಯಾರಿಗೂ ತಿಳಿಸುವುದಿಲ್ಲ. ಎಷ್ಟೇ ಆತ್ಮೀಯರಿದ್ದರೂ ಗೌಪ್ಯವಾಗಿ ತಮ್ಮ ಕೆಲಸವನ್ನು ಸಾಧಿಸಿಕೊಳ್ಳುತ್ತಾರೆ. ಕುಟುಂಬದಲ್ಲಿ ಇಂತಹವರಿಂದ ಅನಾವಶ್ಯಕ ವಾದ ವಿವಾದಗಳು ಇರುತ್ತವೆ. ಹಿರಿಯರ ಬಗ್ಗೆ ಗೌರವವಿದ್ದರೂ ಅವರ ಮಾತನ್ನು ಕೇಳುವುದಿಲ್ಲ. ಉದ್ಯೋಗದಲ್ಲಿ ಯಾರೊಂದಿಗೂ ಬೆರೆಯದೆ ಏಕಾಂಗಿಯಾಗಿ ತಮ್ಮ ಕೆಲಸವನ್ನು ಸಾಧಿಸುತ್ತಾರೆ. ಜೀವನದಲ್ಲಿ ಪ್ರತಿಯೊಂದು ವಿಚಾರವು ಇವರ ನಿರೀಕ್ಷೆಯಂತೆ ನಡೆಯುತ್ತದೆ. ಇವರಿಗೆ ಹೊಂದಿಕೊಂಡು ಹೋಗುವ ಸಂಗಾತಿ ದೊರೆಯುತ್ತಾರೆ. ಇದರಿಂದ ದಾಂಪತ್ಯದಲ್ಲಿ ಯಾವುದೇ ತೊಂದರೆ ಇರುವುದಿಲ್ಲ. ಮಕ್ಕಳ ವಿಚಾರದಲ್ಲಿ ತಮ್ಮ ಮನಸ್ಸನ್ನು ಬದಲಾಯಿಸಿಕೊಳ್ಳುವರು. ಅದರಲ್ಲಿಯೂ ಹೆಣ್ಣು ಮಕ್ಕಳು ಹೇಳಿದಂತೆ ನಡೆದುಕೊಳ್ಳುವ ಮಂದಿ.

ಮಗಳು, ಸೋದರಿಯ ಮಾತಿಗೆ ಎದುರಾಡದ ಜನರು

ಈ ರೀತಿಯ ಜನರು ಸೋದರಿಯ ಮಾತಿಗೂ ಎದುರಾಡದೆ ಜೀವನದಲ್ಲಿ ಮುಂದುವರೆಯುತ್ತಾರೆ. ಗುಟ್ಟಾಗಿ ಹಣ ಉಳಿತಾಯ ಮಾಡುವ ಕಾರಣ ಹಣಕಾಸಿನ ಕೊರತೆ ಉಂಟಾಗುವುದಿಲ್ಲ. ಉಗುರಿನಲ್ಲಿ ಕಪ್ಪು ಬಣ್ಣದ ಚುಕ್ಕೆಗಳ ಜೊತೆ ನೀಲಿ ಬಣ್ಣದ ಚುಕ್ಕೆ ಇದ್ದಲ್ಲಿ ಎಲ್ಲರೊಂದಿಗೆ ಹೊಂದಿಕೊಂಡು ಬಾಳುವ ವ್ಯಕ್ತಿತ್ವವಿರುತ್ತದೆ. ಆದರೆ ಅನಾವಶ್ಯಕವಾಗಿ ಕೋಪದಿಂದ ವರ್ತಿಸುತ್ತಾರೆ. ಆದರೆ ದೊರೆತ ಅವಕಾಶವನ್ನು ಸರಿಯಾದ ಮಾರ್ಗದಲ್ಲಿ ಬಳಸಿಕೊಂಡು ಜೀವನದಲ್ಲಿ ಉನ್ನತಿ ಗಳಿಸುತ್ತಾರೆ. ಇವರುಗಳಿಗೆ ಜೀವನದಲ್ಲಿ ಕಷ್ಟವೆಂಬುದು ಬಹಳ ಕಡಿಮೆ. ಇವರಿಗೆ ಸಹಾಯ ಮಾಡಲೆಂದು ಆತ್ಮೀಯರು ಕಾಯುತ್ತಿರುತ್ತಾರೆ.

ಬರಹ: ಎಚ್‌. ಸತೀಶ್, ಜ್ಯೋತಿಷಿ

ಮೊಬೈಲ್:‌ 8546865832

(ಗಮನಿಸಿ: ಜ್ಯೋತಿಷ್ಯ ಶಾಸ್ತ್ರದ ಲೆಕ್ಕಾಚಾರಕ್ಕೆ ಹಲವು ಸೂತ್ರಗಳಿವೆ. ನಿರ್ದಿಷ್ಟ ರೀತಿಯಲ್ಲಿ ಕ್ರಮಬದ್ಧವಾಗಿ ಈ ರಾಶಿ ಭವಿಷ್ಯ ನೀಡಲಾಗಿದೆ. ಆದರೆ ಒಟ್ಟಾರೆಯಾಗಿ ಜ್ಯೋತಿಷ್ಯ ಎನ್ನುವುದು ನಂಬಿಕೆಯ ಮಾತು. ಓದುಗರ ನಂಬಿಕೆಯನ್ನು ‘ಹಿಂದೂಸ್ತಾನ್ ಟೈಮ್ಸ್ ಕನ್ನಡ’ ಗೌರವಿಸುತ್ತದೆ. ಇಲ್ಲಿರುವ ಯಾವುದೇ ಶಿಫಾರಸು ಅಥವಾ ಸಲಹೆಗಳನ್ನು ಪಾಲಿಸುವುದು ಓದುಗರ ವಿವೇಚನೆ, ನಂಬಿಕೆಗೆ ಬಿಟ್ಟ ವಿಷಯವಾಗಿರುತ್ತದೆ).