Pisces Astrology in 2024: ಒಂದೆರಡು ಬಾರಿ ಉದ್ಯೋಗ ಬದಲಾವಣೆ, ಮಕ್ಕಳ ಆರೋಗ್ಯದಲ್ಲಿರಲಿ ಎಚ್ಚರ: 2024ರಲ್ಲಿ ಹೇಗಿರಲಿದೆ ಮೀನ ರಾಶಿಯ ಭವಿಷ್ಯ
Pisces Horoscope in 2024: ಹೊಸ ನಿರೀಕ್ಷೆಗಳೊಂದಿಗೆ ಹೊಸ ವರ್ಷ ಆಗಮನವಾಗುತ್ತಿದೆ. ಕಷ್ಟ, ನೋವುಗಳು ದೂರವಾಗಿ ಹೊಸ ವರ್ಷದಲ್ಲಿ ಹೊಸ ಜೀವನ, ಸುಖ, ಸಂತೋಷ ನೆಲೆಸಲಿ ಎಂದು ಎಲ್ಲರೂ ಬಯಸುತ್ತಿದ್ದಾರೆ. ಹೊಸ ವರ್ಷ ದ್ವಾದಶ ರಾಶಿಗಳ ಜೀವನದಲ್ಲಿ ಏನೆಲ್ಲಾ ಬದಲಾವಣೆ ತರಲಿದೆ? ಮೀನ ರಾಶಿಯ ವರ್ಷ ಭವಿಷ್ಯ ಹೀಗಿದೆ.
2024ರ ಮೀನ ರಾಶಿ ವರ್ಷ ಭವಿಷ್ಯ: ಬದಲಾವಣೆ ಜಗದ ನಿಯಮ ಎಂಬ ಮಾತಿದೆ. ದಿನ ಉರುಳುತ್ತಿದ್ದಂತೆ ಎಲ್ಲರ ಜೀವನದಲ್ಲಿ ಸಾಕಷ್ಟು ಬದಲಾವಣೆ ಉಂಟಾಗಲಿದೆ. ಉದ್ಯೋಗ, ವ್ಯಾಪಾರ, ವಿದ್ಯಾಭ್ಯಾಸ, ವೈಯಕ್ತಿಕ ಜೀವನ ಉತ್ತವಾಗಿರಲಿ ಎಂದು ಎಲ್ಲರೂ ಬಯಸುತ್ತಾರೆ. ಈ ಆಸೆ ಆಕ್ಷಾಂಕ್ಷೆಗಳ ನಡುವೆ ಹೊಸ ವರ್ಷ ಆಗಮನವಾಗುತ್ತಿದೆ. 2024ರಲ್ಲಿ ಗ್ರಹಗತಿಗಳ ಸ್ತಾನ ಪಲ್ಲಟದೊಂದಿಗೆ ದ್ವಾದಶ ರಾಶಿಗಳ ಜೀವನದಲ್ಲಿ ಮಹತ್ತರ ಬದಲಾವಣೆಗಳಾಗುತ್ತವೆ. 2024 ವರ್ಷ ಭವಿಷ್ಯವನ್ನು ಜ್ಯೋತಿಷ್ಯ ಶಾಸ್ತ್ರವನ್ನು ಸಾಂಪ್ರದಾಯಿಕವಾಗಿ ಅಭ್ಯಾಸ ಮಾಡಿರುವ ಹಿರಿಯ ಜ್ಯೋತಿಷಿ ಎಚ್. ಸತೀಶ್ ಪ್ರಸ್ತುತಪಡಿಸುತ್ತಿದ್ದಾರೆ. ಮೀನ ರಾಶಿಯವರ ವರ್ಷ ಭವಿಷ್ಯ ಹೀಗಿದೆ.
2023ರಲ್ಲಿ ಕೇವಲ ಮಿಶ್ರ ಫಲಗಳನ್ನು ಪಡೆದ ನೀವು ಹೊಸ ವರ್ಷದಲ್ಲಿ ಹೊಸ ನಿರೀಕ್ಷೆಗಳಿಂದ ಬಾಳಬಹುದು. ರಾಶಿಯಲ್ಲಿ ರಾಹು ಇರುವ ಕಾರಣ ಆತ್ಮವಿಶ್ವಾಸದ ಕೊರತೆ ಉಂಟಾಗುತ್ತದೆ. ಯಾವುದೇ ಕೆಲಸ ಕಾರ್ಯಗಳಿಗೆ ಕೈ ಹಾಕುವ ಮುನ್ನ ಆಪ್ತರ ಸಲಹೆ ಅಥವಾ ಸೂಚನೆಗಳು ಅವಶ್ಯಕವೆನಿಸುತ್ತದೆ. ಆದರೆ ವರ್ಷದ ಪೂರ್ವಾರ್ಧದಲ್ಲಿ ತೆಗೆದುಕೊಳ್ಳುವ ತೀರ್ಮಾನಗಳು ಅತಿ ಮುಖ್ಯವಾಗುತ್ತವೆ. ಮನದಲ್ಲಿ ಇರುವ ಭಯದ ಮನಸ್ಥಿತಿಯನ್ನು ಮರೆಯುವ ಪ್ರಯತ್ನ ಮಾಡಿ. ಹಣದ ತೊಂದರೆ ಬಾರದು. ಆದರೆ ಖರ್ಚು ವೆಚ್ಚಗಳ ಬಗ್ಗೆ ನಿಯಂತ್ರಣ ಹೊಂದಿರಬೇಕು.
ತಂದೆಯವರ ಸಲುವಾಗಿ ಹೆಚ್ಚಿನ ಹಣದ ಅವಶ್ಯಕತೆ ಇರುತ್ತದೆ. ಕುಟುಂಬದ ನಡುವಿನ ಆತ್ಮೀಯತೆ ಹೊಸ ನೀರಿಕ್ಷೆಗಳನ್ನು ಮೂಡಿಸುತ್ತದೆ. ನಿರುದ್ಯೋಗಿಗಳಿಗೆ ಉತ್ತಮ ಅವಕಾಶಗಳು ದೊರೆಯುತ್ತವೆ. ಒಂದೇ ಮನಸ್ಸಿನಿಂದ ಕೈಗೊಳ್ಳುವ ನಿರ್ಧಾರಗಳು ಜೀವನಕ್ಕೆ ಹೊಸ ಅರ್ಥವನ್ನು ನೀಡುತ್ತವೆ. ಈ ವರ್ಷದಲ್ಲಿ ಒಂದೆರಡು ಬಾರಿ ಉದ್ಯೋಗವನ್ನು ಬದಲಾಯಿಸುವ ಸೂಚನೆಗಳಿವೆ. ಕೇವಲ ಮಾತಿನಿಂದಲೇ ಎಲ್ಲವನ್ನು ಸಾಧಿಸಲು ಸಾಧ್ಯವಿಲ್ಲ. ಚಿಕ್ಕ ಪುಟ್ಟ ವಿಚಾರವಾದರೂ ಬದಲಾಗದ ಮನಸ್ಸು ಮುಖ್ಯವಾಗುತ್ತದೆ. ಗಾಂಭೀರ್ಯದ ನಡೆ ನುಡಿಯ ಕಾರಣ ಸ್ನೇಹ ಸಂಬಂಧಗಳು ಬಹುಕಾಲ ಉಳಿಯಬಹುದು. ತಪ್ಪು ಯಾರದೇ ಆದರೂ ಅನವಶ್ಯಕವಾಗಿ ಯಾರನ್ನು ಟೀಕಿಸದಿರಿ.
ಮೇ ತಿಂಗಳ ನಂತರ ಜೀವನದ ಹೊಸ ಅಧ್ಯಾಯ ಒಂದು ಆರಂಭವಾಗುತ್ತದೆ. ಆತ್ಮವಿಶ್ವಾಸ ಹೆಚ್ಚದೆ ಹೋದರು ಕೆಲಸ ಕಾರ್ಯಗಳಲ್ಲಿ ಗೆಲ್ಲಬೇಕೆಂಬ ಛಲ ಮೂಡುತ್ತದೆ. ಸುಲಭವಾಗಿ ಸೋಲನ್ನು ಒಪ್ಪದೆ ಸತತ ಪ್ರಯತ್ನದಿಂದ ಗೆಲುವನ್ನು ಸಾಧಿಸುವಿರಿ. ಜೀವನದ ಪ್ರಮುಖ ಘಟ್ಟವನ್ನು ತಲುಪಲು ಹಿರಿಯ ಸೋದರಿಯ ಅಥವಾ ಸ್ನೇಹಿತರ ಸಹಾಯ ದೊರೆಯುತ್ತದೆ. ಹಣದ ಕೊರತೆ ಉಂಟಾದರೂ ಅದನ್ನು ಸರಿದೂಗಿಸುವ ಸಾಮರ್ಥ್ಯ ನಿಮ್ಮಲ್ಲಿರುತ್ತದೆ. ಬಹು ದಿನಗಳಿಂದ ಕೂಡಿಟ್ಟ ಹಣವನ್ನು ಅನಿವಾರ್ಯವಾಗಿ ಖರ್ಚು ಮಾಡುವಿರಿ. ಕುಟುಂಬದ ಬಗ್ಗೆ ವಿಶೇಷವಾದ ಕಾಳಜಿ ತೋರುವಿರಿ. ನೀವೆಷ್ಟೇ ದೊಡ್ಡವರಾದರೂ ತಂದೆಯವರ ಸಲಹೆ ಸೂಚನೆಯಂತೆ ನಡೆಯುವಿರಿ.
ಅನಿರೀಕ್ಷಿತ ಹಣ ಗಳಿಕೆ ಕಂಡುಬರುತ್ತದೆ. ಕುಟುಂಬದಲ್ಲಿ ನಡೆಯಬೇಕಿದ್ದ ಮಂಗಳ ಕಾರ್ಯವನ್ನು ಪ್ರಯುತ್ನ ಪೂರ್ವಕವಾಗಿ ನಡೆಸುವಿರಿ. ಹೆಚ್ಚಿನ ಪ್ರಯತ್ನದಿಂದ ಸ್ವಂತ ಮನೆ ಅಥವಾ ಸ್ವಂತ ಜಮೀನನ್ನು ಕೊಳ್ಳುವ ಕನಸು ನನಸಾಗಲಿದೆ. ಕುಟುಂಬದ ಸದಸ್ಯರ ಜೊತೆ ಅಥವಾ ಆತ್ಮೀಯರೊಂದಿಗೆ ಪಾಲುಗಾರಿಕೆಯ ವ್ಯಾಪಾರವನ್ನು ಆರಂಭಿಸಬಹುದು. ದಾಂಪತ್ಯ ಜೀವನದಲ್ಲಿ ಸುಖ ಸಂತೋಷ ನೆಲೆಸಿರುತ್ತದೆ. ಆದರೆ ಪದೇ ಪದೇ ದಂಪತಿಗಳ ನಡುವೆ ಭಿನ್ನಾಭಿಪ್ರಾಯವು ತಲೆದೋರಲಿವೆ. ಸಂತಾನ ಲಾಭವಿದೆ. ಮಕ್ಕಳ ಆರೋಗ್ಯದ ಬಗ್ಗೆ ಎಚ್ಚರಿಕೆ ಅವಶ್ಯಕತೆ ಇರುತ್ತದೆ. ತಪ್ಪು ಕಲ್ಪನೆ ಮತ್ತು ತಪ್ಪು ಅಭಿಪ್ರಾಯಗಳು ಮಾನಸಿಕ ಒತ್ತಡವನ್ನು ಉಂಟುಮಾಡುತ್ತದೆ. ಹಲವು ಬಾರಿ ಯಾತ್ರಾ ಸ್ಥಳಗಳಿಗೆ ಕುಟುಂಬದ ಸದಸ್ಯರ ಜೊತೆಯಲ್ಲಿ ಭೇಟಿ ನೀಡುವಿರಿ.
ನಿಮ್ಮ ಕಾರ್ಯ ಸಾಧನೆಯನ್ನು ನೋಡಿ ಅಸೂಯೆ ಪಡುವ ಜನರು ಹಲವರಿರುತ್ತಾರೆ. ಆದ್ದರಿಂದ ಕೆಲಸ ಕಾರ್ಯಗಳು ಪೂರ್ಣಗೊಳ್ಳುವವರೆಗೂ ಆಂತರ್ಯದ ವಿಚಾರವನ್ನು ಯಾರಿಗೂ ಹೇಳದಿರಿ. ಸಂಸಾರದ ಶಾಂತಿ ನೆಮ್ಮದಿಗಾಗಿ ಕಷ್ಟಪಡುವಿರಿ. ವಿದ್ಯಾರ್ಥಿಗಳು ತಮ್ಮ ಪಾಲಿನ ಕರ್ತವ್ಯವನ್ನು ಪೂರೈಸುತ್ತಾರೆ. ನಿಮ್ಮಲ್ಲಿರುವ ದೊಡ್ಡ ಆಸ್ತಿ ಎಂದರೆ ಬುದ್ಧಿ ಶಕ್ತಿ. ಸಾಮಾನ್ಯವಾಗಿ ಯಾವುದೇ ನಿರ್ಧಾರವನ್ನು ಬದಲಿಸುವುದಿಲ್ಲ. ಆದರೆ ಲಾಭವಿಲ್ಲದ ಕೆಲಸ ಕಾರ್ಯಗಳನ್ನು ಅಪೂರ್ಣಗೊಳಿಸುವಿರಿ. ಯಾರನ್ನು ನಂಬುವುದಿಲ್ಲ. ಆದರೆ ಬೇರೆಯವರು ನಿಮ್ಮ ಪರಿಶುದ್ಧ ಮನಸ್ಸಿಗೆ ಸೋತು ಸ್ನೇಹವನ್ನು ಬಯಸುತ್ತಾರೆ. ಸಾಮಾನ್ಯ ಉದ್ಯೋಗದಲ್ಲಿ ಇರುವವರಿಗೆ ದೊಡ್ಡ ಪ್ರಮಾಣದ ಅವಕಾಶವೊಂದು ದೊರೆಯುತ್ತದೆ.
ಮಕ್ಕಳಿಗೆ ಅನಿರೀಕ್ಷಿತವಾಗಿ ವಿವಾಹ ಸಂಬಂಧ ಕೈಗೂಡುತ್ತದೆ. ದಾಂಪತ್ಯದಲ್ಲಿ ಉತ್ತಮ ಹೊಂದಾಣಿಕೆ ಇರುತ್ತದೆ. ಸಂಬಂಧವರೇ ಇಲ್ಲದವರು ಹೇಳುವ ಮಾತನ್ನು ನಂಬದಿರಿ. ಎಚ್ಚರಿಕೆಯಿಂದ ಇರಬೇಕು. ಬಹುದಿನದಿಂದ ನಿರೀಕ್ಷೆಯಿದ್ದ ಕೆಲಸವೊಂದು ನೆರವೇರಲಿದೆ. ವಿದೇಶಕ್ಕೆ ತೆರಳುವ ಅಪೂರ್ವ ಅವಕಾಶ ನಿಮ್ಮದಾಗುತ್ತದೆ. ಪೂರ್ವ ನಿಯೋಜನೆ ಇಲ್ಲದೆ ಯಾವುದೇ ಕೆಲಸ ಕಾರ್ಯಗಳಲ್ಲಿ ತೊಡಗಬೇಡಿರಿ. ಹೆಚ್ಚನ ಪ್ರಯತ್ನ ಪಟ್ಟಲ್ಲಿ ಆಸ್ತಿ ವಿವಾದವೊಂದು ದೂರವಾಗಲಿದೆ. ವಂಶಕ್ಕೆ ಸೇರಿದ ಹಳೆಯ ಮನೆಯನ್ನು ನವೀಕರಿಸಲು ನಿರ್ಧರಿಸುವಿರಿ. ಸಮಾಜದ ಅತಿ ಮುಖ್ಯ ಕೆಲಸ ಕಾರ್ಯಗಳ ನಿರ್ವಹಣೆಯ ಜವಾಬ್ದಾರಿ ನಿಮ್ಮದಾಗಲಿದೆ. ಜನಪ್ರತಿನಿಧಿಗಳು ನಯವಾಗಿ ಜನರೊಂದಿಗೆ ವರ್ತಿಸುತ್ತಾರೆ. ಇದರಿಂದಾಗಿ ಉನ್ನತ ಸ್ಥಾನಮಾನ ದೊರೆಯುತ್ತದೆ.
ಜ್ಯೋತಿಷಿ: ಎಚ್. ಸತೀಶ್, ಬೆಂಗಳೂರು
ಮೊಬೈಲ್: 8546865832
(ಗಮನಿಸಿ: ಜ್ಯೋತಿಷ್ಯ ಶಾಸ್ತ್ರದ ಲೆಕ್ಕಾಚಾರಕ್ಕೆ ಹಲವು ಸೂತ್ರಗಳಿವೆ. ನಿರ್ದಿಷ್ಟ ರೀತಿಯಲ್ಲಿ ಕ್ರಮಬದ್ಧವಾಗಿ ಈ ರಾಶಿ ಭವಿಷ್ಯ ನೀಡಲಾಗಿದೆ. ಆದರೆ ಒಟ್ಟಾರೆಯಾಗಿ ಜ್ಯೋತಿಷ್ಯ ಎನ್ನುವುದು ನಂಬಿಕೆಯ ಮಾತು. ಓದುಗರ ನಂಬಿಕೆಯನ್ನು ‘ಹಿಂದೂಸ್ತಾನ್ ಟೈಮ್ಸ್ ಕನ್ನಡ’ ಗೌರವಿಸುತ್ತದೆ. ಇಲ್ಲಿರುವ ಯಾವುದೇ ಶಿಫಾರಸು ಅಥವಾ ಸಲಹೆಗಳನ್ನು ಪಾಲಿಸುವುದು ಓದುಗರ ವಿವೇಚನೆ, ನಂಬಿಕೆಗೆ ಬಿಟ್ಟ ವಿಷಯವಾಗಿರುತ್ತದೆ).