Marriage Failure: ಮದುವೆ ನಂತರ ದಂಪತಿ ಅನ್ಯೋನ್ಯವಾಗಿರಲು ಗುರು ಗ್ರಹ ಸೇರಿದಂತೆ ಯಾವ ಗ್ರಹಗಳ ಅನುಗ್ರಹ ಮುಖ್ಯ? ಇಲ್ಲಿದೆ ಮಾಹಿತಿ
Marriage Failure: ಹಿರಿಯರು ನೋಡಿ ಮಾಡಿದ ಮದುವೆ ಆಗಲೀ, ಲವ್ ಮ್ಯಾರೇಜ್ ಆಗಲೀ ಎಷ್ಟೋ ಮದುವೆಗಳು ಕೆಲವೇ ದಿನಗಳಲ್ಲಿ ವಿಚ್ಛೇದನದಲ್ಲಿ ಅಂತ್ಯಗೊಳ್ಳುತ್ತವೆ. ಹೀಗೆ ಬಹುತೇಕ ಮದುವೆ ಸಂಬಂಧದಲ್ಲಿ ಬಿರುಕು ಉಂಟಾಗಳು ಕಾರಣವೇನು? ಮದುವೆ ನಂತರ ದಂಪತಿ ಅನ್ಯೋನ್ಯವಾಗಿರಲು ಗುರು ಗ್ರಹ ಸೇರಿದಂತೆ ಯಾವ ಗ್ರಹಗಳ ಅನುಗ್ರಹ ಮುಖ್ಯ? ಎಂಬುದರ ಬಗ್ಗೆ ಇಲ್ಲಿದೆ ಮಾಹಿತಿ.
ಮದುವೆ ಅನ್ನೋದು ಪ್ರತಿಯೊಬ್ಬರ ಜೀವನದಲ್ಲೂ ಪ್ರಮುಖ ಘಟ್ಟ. ನನ್ನ ಸಂಗಾತಿ ಹಾಗಿರಬೇಕು, ಹೀಗಿರಬೇಕು, ಅವರೊಂದಿಗೆ ಸುಖ ಸಂತೋಷದಿಂದ ಬದುಕಬೇಕು ಎಂದು ಎಲ್ಲರೂ ಕನಸು ಕಾಣುತ್ತಾರೆ. ಕೆಲವರು ತಂದೆ ತಾಯಿ ನೋಡಿದವರನ್ನು ಮೆಚ್ಚಿ ಮದುವೆ ಆದರೆ ಇನ್ನೂ ಕೆಲವರು ಪ್ರೇಮ ವಿವಾಹ ಆಗುತ್ತಾರೆ. ಆದರೆ ಮದುವೆಗೂ ಮುಂಚೆ ಇದ್ದ ಪ್ರೀತಿ ಕ್ರಮೇಣ ಕಡಿಮೆ ಉಂಟಾಗುತ್ತದೆ.
ಎಷ್ಟೋ ಮಂದಿ ಸುದೀರ್ಘ ವರ್ಷಗಳ ಕಾಲ ಪ್ರೀತಿಸಿ ಮದುವೆ ಆಗುತ್ತಾರೆ. ಆದರೆ ಲವ್ ಮಾಡುವಾಗ ಇಬ್ಬರ ನಡುವೆ ಇದ್ದ ಪ್ರೀತಿ ವಿಶ್ವಾಸ ಮದುವೆ ಆದಾಗ ಇರುವುದಿಲ್ಲ. ಪ್ರೀತಿಸುವಾಗ ಒಬ್ಬರಿಗೊಬ್ಬರು ಅರ್ಥ ಮಾಡಿಕೊಂಡಷ್ಟು, ಮದುವೆ ನಂತರ ಮುಂದುವರೆಯುವುದಿಲ್ಲ. ಸಣ್ಣ ಪುಟ್ಟ ಮುನಿಸು ದೊಡ್ಡದಾಗಿ, ದಾಂಪತ್ಯ ಜೀವನದಲ್ಲಿ ಮನಸ್ತಾಪ ಉಂಟಾಗಿ ಬಿರುಕು ಮೂಡುತ್ತದೆ. ನಂತರ ಇದು ಡಿವೋರ್ಸ್‌ನಲ್ಲಿ ಕೊನೆಗೊಳ್ಳುತ್ತದೆ. ಒಬ್ಬರಿಗೊಬ್ಬರು ಬೆರಳು ತೋರಿಸುತ್ತಾ, ಇದಕ್ಕೆಲ್ಲಾ ನೀನೇ ಕಾರಣ ಎಂದು ಬೊಟ್ಟು ತೋರಿಸುತ್ತಾರೆ.
ಇದನ್ನೂ ಓದಿ: ಸೂರ್ಯಾಸ್ತದ ನಂತರ ಏಕೆ ತುಳಸಿಗಿಡ ಸ್ಪರ್ಶಿಸಬಾರದು?
ಜಾತಕದಲ್ಲಿ ಗ್ರಹಗಳು ದುರ್ಬಲವಾಗಿರುವುದೇ ಕಾರಣ
ಹಿರಿಯರು ನೋಡಿ ಮಾಡಿದ ಮದುವೆ ಕೂಡಾ ಇದೇ ರೀತಿ ಆಗುತ್ತದೆ. ಮದುವೆಗೂ ಮುನ್ನ ಒಬ್ಬರನೊಬ್ಬರು ನೋಡಿ, ಭೇಟಿ ಮಾಡಿ, ಇಷ್ಟ ಕಷ್ಟ ಅರಿತುಕೊಂಡು ಮದುವೆ ಆದರೂ ಎಷ್ಟೋ ಮದುವೆಗಳು ಟ್ರಾಜಿಡಿ ಅಂತ್ಯ ಕಾಣುತ್ತದೆ. ಇಬ್ಬರಲ್ಲಿ ಒಬ್ಬರಾದರೂ ಸೋತು ಹೇಗೋ ಹೊಂದಾಣಿಕೆ ಮಾಡಿಕೊಂಡು ಹೋದರೂ ಅದು ಯಾಂತ್ರಿಕ ಎನಿಸುತ್ತದೆ. ಈ ರೀತಿ ವಿವಾಹಗಳು ಬಿರುಕು ಮೂಡಲು ಪತಿ ಪತ್ನಿ ವರ್ತನೆ ಜೊತೆಗೆ ಗ್ರಹಗತಿಗಳು ಕೂಡಾ ಕಾರಣ ಎಂದರೆ ನೀವು ನಂಬುತ್ತೀರಾ? ಹೌದು ಈ ರೀತಿ ವೈವಾಹಿಕ ಜೀವನದಲ್ಲಿ ಬಿರುಕು ಉಂಟಾಗಲು ನಾಲ್ಕು ಪ್ರಮುಖ ಗ್ರಹಗಳು ಕಾರಣವಾಗಿರುತ್ತದೆ.
ಜ್ಯೋತಿಷ್ಯಶಾಸ್ತ್ರದ ಪ್ರಕಾರ ಈ ರೀತಿ ವಿವಾಹಗಳು ವೈಫಲ್ಯವಾಗಲು ಪ್ರಮುಖ ಕಾರಣ ಶುಕ್ರ, ಗುರು ಜೊತೆಗೆ ಬುಧ ಹಾಗೂ ರಾಹು ಗ್ರಹಗಳೇ ಕಾರಣ. ಗಂಡು ಹೆಣ್ಣಿನ ಜಾತಕದಲ್ಲಿ ಈ ನಾಲ್ಕೂ ರಾಶಿಗಳು ಉತ್ತಮವಾಗಿದ್ದಲ್ಲಿ ನಿಮ್ಮ ಮದುವೆ ಜೀವನ ಸುಖ ಸಂತೋಷದಿಂದ ಕೂಡಿರುತ್ತದೆ. ಇಲ್ಲವಾದರೆ ಇಬ್ಬರ ನಡುವೆ ಮನಸ್ತಾಪ, ಜಗಳ, ದ್ವೇಷ ಉಂಟಾಗುತ್ತದೆ. ಜಾತಕದಲ್ಲಿ ಗುರು ದುರ್ಬಲನಾಗಿದ್ದಲ್ಲಿ ಒಬ್ಬರಿಗೊಬ್ಬರು ಆಸಕ್ತಿ ಕಳೆದುಕೊಳ್ಳುತ್ತಾರೆ. ಸೌಂದರ್ಯದಲ್ಲಿ, ರೊಮಾನ್ಸ್ ವಿಚಾರದಲ್ಲಿ ಆಕರ್ಷಣೆಯೇ ಇರುವುದಿಲ್ಲ. ಇದೇ ವಿಚಾರಕ್ಕೆ ಸಬಂಧಿಸಿದಂತೆ ಇಬ್ಬರ ನಡುವೆ ಮನಸ್ತಾಪ ಉಂಟಾಗುವ ಸಾಧ್ಯತೆ ಇದೆ.
ಜೊತೆಗೆ ಬುಧನು ದುರ್ಬಲನಾಗಿದ್ದಲ್ಲಿ ಸ್ವಭಾವ ಬದಲಾಗುತ್ತದೆ. ಹೆಚ್ಚು ಪ್ರೀತಿಸುವವರು, ದ್ವೇಷಿಸಲು ಆರಂಭಿಸಬಹುದು. ಮೋಸ ಮಾಡುವ ಸಾಧ್ಯತೆಯೂ ಹೆಚ್ಚು. ಜಾತಕದಲ್ಲಿ ರಾಹುವಿನ ಸ್ಥಾನ ಸರಿ ಇಲ್ಲದಿದ್ದರೆ ಒಬ್ಬರ ಮೇಲೆ ಮತ್ತೊಬ್ಬರು ಸಂಶಯ ಪಡುತ್ತಾರೆ. ಇದೇ ವಿಚಾರಕ್ಕೆ ಇಬ್ಬರ ನಡುವೆ ವೈಮನಸ್ಸು ಉಂಟಾಗುತ್ತದೆ. ಶುಕ್ರ ದುರ್ಬಲನಾಗಿದ್ದಲ್ಲಿ ಮತ್ತೊಬ್ಬರೆಡೆಗೆ ಆಕರ್ಷಿತರಾಗುವ ಸಾಧ್ಯತೆ ಇದೆ. ಇದರಿಂದ ಸಂಗಾತಿಯ ಮೇಲೆ ಆಸಕ್ತಿ ಕಳೆದುಕೊಂಡು ಕೊನೆಗೆ ವಿಚ್ಛೇದನಗೊಂಡು ಎರಡನೇ ಮದುವೆ ಆಗುವ ಸಾಧ್ಯತೆ ಇದೆ.
ಏನು ಪರಿಹಾರ?
ಪ್ರತಿಯೊಂದು ಸಮಸ್ಯೆಗೂ ಒಂದಲ್ಲಾ ಒಂದು ಪರಿಹಾರವಿರುತ್ತದೆ. ಹಾಗೇ ವೈವಾಹಿಕ ಜೀವನದಲ್ಲಿ ಉಂಟಾದ ಬಿರುಕುಗಳನ್ನು ಸರಿಪಡಿಸಲು ಕೂಡಾ ಜ್ಯೋತಿಷ್ಯಶಾಸ್ತ್ರದಲ್ಲಿ ಕೆಲವೊಂದು ಪರಿಹಾರಗಳಿವೆ. ಜಾತಕದಲ್ಲಿ ಗುರುಬಲ ಚೆನ್ನಾಗಿರಬೇಕೆಂದರೆ ಪ್ರತಿ ಗುರುವಾರ ಗುರುವಿನ ದೇವಸ್ಥಾನ ಅಥವಾ ಶಿವಾಲಯಕ್ಕೆ ತೆರಳಿ ಹಳದಿ ಬಟ್ಟೆ, ಕಡ್ಲೆಬೇಳೆ, ಹಾಲು, ಬೆಲ್ಲ ಅರ್ಪಿಸಿದರೆ ಗುರುಬಲ ಚೆನ್ನಾಗಿರುತ್ತದೆ. ಸುಮಾರು 3 ತಿಂಗಳ ಕಾಲ ಈ ಪರಿಹಾರವನ್ನು ಅನುಸರಿಸಿ. ಪ್ರತಿ ಗುರುವಾರ ಉಪವಾಸ ಮಾಡಿ, ಗುರುವನ್ನು ನೆನೆದು ಬೃಹಸ್ಪತಿ ಕಥೆಯನ್ನು ಕೇಳಬೇಕು. ಗುರು ಅಷ್ಟೋತ್ತರ ಶತನಾಮಾವಳಿಯನ್ನು ಪಠಿಸಿ. ಶುಕ್ರ, ರಾಹು, ಬುಧ ಗ್ರಹಗಳು ಉತ್ತಮವಾಗಿರಲು ಆಯಾ ಗ್ರಹಗಳ ಶಾಂತಿ ಹೋಮ ಮಾಡಿಸಿ. ಈ ರೀತಿ ಮಾಡುವುದರಿಂದ ನಿಮ್ಮ ವೈವಾಹಿಕ ಜೀವನದಲ್ಲಿ ಉಂಟಾದ ಅಡೆತಡೆಗಳು ನಿವಾರಣೆಯಾಗಿ ದಂಪತಿ ನಡುವೆ ಪ್ರೀತಿ ಹೆಚ್ಚುತ್ತದೆ.
ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ "ಹಿಂದೂಸ್ತಾನ್ ಟೈಮ್ಸ್ ಕನ್ನಡ" ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ.
ಇದನ್ನೂ ಓದಿ: ಈ ದಿನಾಂಕದಂದು ಜನಿಸಿದವರು ಉನ್ನತ ಪದವಿಗೆ ಏರುತ್ತಾರೆ