ಆಗಸ್ಟ್‌ 17 ರಿಂದ ಅಪರೂಪದ ನಿಪುಣ ಯೋಗ; ಕಂಕಣ ಭಾಗ್ಯ, ವಾಹನ ಯೋಗ ಸೇರಿದಂತೆ ದ್ವಾದಶ ರಾಶಿಗಳಿಗೆ ಮಿಶ್ರಫಲ-horoscope nipuna yoga will be formed due to sun mercury transit in leo on august 17th astrology in kannada ,ರಾಶಿ ಭವಿಷ್ಯ ಸುದ್ದಿ
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  ಆಗಸ್ಟ್‌ 17 ರಿಂದ ಅಪರೂಪದ ನಿಪುಣ ಯೋಗ; ಕಂಕಣ ಭಾಗ್ಯ, ವಾಹನ ಯೋಗ ಸೇರಿದಂತೆ ದ್ವಾದಶ ರಾಶಿಗಳಿಗೆ ಮಿಶ್ರಫಲ

ಆಗಸ್ಟ್‌ 17 ರಿಂದ ಅಪರೂಪದ ನಿಪುಣ ಯೋಗ; ಕಂಕಣ ಭಾಗ್ಯ, ವಾಹನ ಯೋಗ ಸೇರಿದಂತೆ ದ್ವಾದಶ ರಾಶಿಗಳಿಗೆ ಮಿಶ್ರಫಲ

ಸಿಂಹ ರಾಶಿಯಲ್ಲಿ ಸೂರ್ಯ ಹಾಗೂ ಬುಧ ಸಂಯೋಜನೆಯಾಗುತ್ತಿದ್ದು ಇದೇ ಆಗಸ್ಟ್‌ 17 ರಿಂದ ಸೆಪ್ಟೆಂಬರ್‌ 16ವರೆಗೆ ನಿಪುಣ ಯೋಗ ರೂಪುಗೊಳ್ಳಲಿದೆ. ಈ ಯೋಗದಿಂದ ದ್ವಾದಶ ರಾಶಿಗಳಿಗೆ ವಿವಿಧ ಫಲ ದೊರೆಯಲಿದೆ. (ಬರಹ: ಎಚ್‌. ಸತೀಶ್, ಜ್ಯೋತಿಷಿ)

ಆಗಸ್ಟ್‌ 17 ರಿಂದ ಅಪರೂಪದ ನಿಪುಣ ಯೋಗ; ಕಂಕಣ ಭಾಗ್ಯ, ವಾಹನ ಯೋಗ ಸೇರಿದಂತೆ ದ್ವಾದಶ ರಾಶಿಗಳಿಗೆ ಮಿಶ್ರಫಲ
ಆಗಸ್ಟ್‌ 17 ರಿಂದ ಅಪರೂಪದ ನಿಪುಣ ಯೋಗ; ಕಂಕಣ ಭಾಗ್ಯ, ವಾಹನ ಯೋಗ ಸೇರಿದಂತೆ ದ್ವಾದಶ ರಾಶಿಗಳಿಗೆ ಮಿಶ್ರಫಲ

ರವಿ ಮತ್ತು ಬುಧರ ಸಂಯೋಜನೆ ವಿಶೇಷವಾದ ಫಲಗಳನ್ನು ನೀಡುತ್ತದೆ. ಅದರಲ್ಲಿಯೂ ಸಿಂಹದಲ್ಲಿನ ಈ ಯೋಗ ಪ್ರತಿಯೊಂದು ರಾಶಿಗಳಿಗೆ ತನ್ನದೇ ಆದ ಫಲಗಳನ್ನು ನೀಡುತ್ತದೆ. ಈ ನಿಪುಣ ಯೋಗದಿಂದ ಯಾವ ರಾಶಿಯವರಿಗೆ ಏನು ಫಲ ದೊರೆಯಲಿದೆ ನೋಡೋಣ.

ಮೇಷ

ಮನದಲ್ಲಿ ಇದ್ದ ಆತಂಕ ಮರೆಯಾಗುತ್ತದೆ. ಆದರೆ ಕೋಪವನ್ನು ತಡೆಯಲಾರಿರಿ. ಕೆಲಸ ಕಾರ್ಯಗಳಲ್ಲಿ ಸುಲಭವಾದ ಯಶಸ್ಸು ದೊರೆಯುತ್ತದೆ. ತಂದೆಯವರ ಸಲಹೆಗ ಪಾಲಿಸಿದಲ್ಲಿ ಯಶಸ್ಸಿಗೆ ಬರವಿರುವುದಿಲ್ಲ. ವ್ಯಾಪಾರ ವ್ಯವಹಾರಗಳಲ್ಲಿ ಲಾಭದ ಕೊರತೆ ಇರುವುದಿಲ್ಲ. ಉದ್ಯೋಗದಲ್ಲಿ ನಿರೀಕ್ಷಿತ ಬದಲಾವಣೆಗಳು ಸಂತಸ ಮೂಡಿಸುತ್ತದೆ. ವಿದ್ಯಾರ್ಥಿಗಳು ಪಠ್ಯೇತರ ಚಟುವಟಿಕೆಗಳಲ್ಲಿ ಜಯ ಗಳಿಸುತ್ತಾರೆ. ವಿದ್ಯಾರ್ಜನೆ ವಿಚಾರದಲ್ಲಿ ಹೆಚ್ಚಿನ ಪರಿಶ್ರಮ ಬೇಕು. ಪಾಲುದಾರಿಕೆ ವ್ಯಾಪಾರ ವ್ಯವಹಾರದಲ್ಲಿ ಲಾಭಾಂಶ ಕಡಿಮೆಯಾಗಬಹುದು. ಅವಿವಾಹಿತರಿಗೆ ವಿವಾಹ ಆಗಲಿದೆ. ಧಾರ್ಮಿಕ ಕೇಂದ್ರಕ್ಕೆ ಹಣದ ಸಹಾಯ ಮಾಡುವಿರಿ. ಸಮಾಜದ ನಾಯಕತ್ವ ನಿಮಗೆ ಲಭಿಸುತ್ತದೆ. ಆರೋಗ್ಯದಲ್ಲಿ ಚೇತರಿಕೆ ಕಾಣಲಿದೆ.

ವೃಷಭ

ಸ್ಥಿರವಾದ ಮನಸ್ಥಿತಿಯಿಂದ ಜಯದ ಹಾದಿಯಲ್ಲಿ ನಡೆಯುವಿರಿ. ಜಯ ಅಪಜಯಗಳನ್ನು ಸಮಾನವಾಗಿ ಸ್ವೀಕರಿಸುವಿರಿ. ಕೆಲಸ ಕಾರ್ಯಗಳಲ್ಲಿ ಯಶಸ್ಸು ದೊರೆಯುತ್ತದೆ. ಉತ್ತಮ ಆದಾಯವಿದ್ದರೂ ಖರ್ಚು ವೆಚ್ಚಗಳು ಹೆಚ್ಚಲಿವೆ. ಅವಶ್ಯಕತೆ ಇದ್ದಲ್ಲಿ ಅತ್ಮೀಯರಿಂದ ಹಣದ ಸಹಕಾರ ಪಡೆಯುವಿರಿ. ಸ್ವಂತ ಮನೆಯ ಕನಸು ನನಸಾಗಲಿದೆ. ಉದ್ಯೋಗದಲ್ಲಿ ಯಾವುದೇ ತೊಂದರೆ ಇರುವುದಿಲ್ಲ. ವಿದ್ಯಾರ್ಥಿಗಳು ತಮ್ಮ ಕರ್ತವ್ಯ ಪಾಲನೆಯಲ್ಲಿ ಯಶಸ್ವಿಯಾಗುತ್ತಾರೆ. ಗೃಹಿಣಿಯರಿಗೆ ತವರು ಮನೆಯಿಂದ ಹಣದಲ್ಲಿ ಪಾಲು ದೊರೆಯಬಹುದು. ಹೊಸ ವಾಹನ ಕೊಳ್ಳುವಿರಿ. ಸಣ್ಣ ಪುಟ್ಟ ಪ್ರಯಾಣಗಳಿಗೆ ಸಮಯ ಹೊಂದಿಸುವಿರಿ. ವ್ಯಾಪಾರ ವ್ಯವಹಾರದಲ್ಲಿ ಸಾಧಾರಣ ಪ್ರಗತಿ ಕಾಣುವಿರಿ.

ಮಿಥುನ

ಮಾತಿನಲ್ಲಿ ದಿಟ್ಟತನವಿರುತ್ತದೆ. ನಿಮ್ಮ ಪಾಲಿನ ಹಣವು ನಿಮ್ಮ ಕೈಸೇರುತ್ತದೆ. ಸಹನೆ ಕಳೆದುಕೊಳ್ಳದೆ ಸಮಸ್ಯೆಯನ್ನು ಬದಲಿಸುವಿರಿ. ಉದ್ಯೋಗದಲ್ಲಿ ಅನಿರೀಕ್ಷಿತ ಪ್ರಗತಿ ಕಂಡುಬರುತ್ತದೆ. ಉತ್ತಮ ಧನಲಾಭವಿರುತ್ತದೆ. ಒಮ್ಮೆ ತೆಗೆದುಕೊಳ್ಳುವ ನಿರ್ಧಾರವನ್ನು ಬದಲಿಸದಿರಿ. ಸೋದರ ಸೋದರಿ ನಡುವೆ ಉತ್ತಮ ಒಡನಾಟ ಬೆಳೆಯುತ್ತದೆ. ವಿದ್ಯಾರ್ಥಿಗಳು ಸುಲಭವಾಗಿ ತಮ್ಮ ಗುರಿ ತಲುಪಲು ಸಾಧ್ಯವಾಗುತ್ತದೆ. ಉದ್ಯೋಗದಲ್ಲಿ ಕಾರ್ಯದ ಒತ್ತಡ ಅಧಿಕವಾಗಿರುತ್ತದೆ. ವ್ಯಾಪಾರ ವ್ಯವಹಾರಗಳಲ್ಲಿ ಹೆಚ್ಚಿನ ಆದಾಯ ಗಳಿಸುವಿರಿ. ಮಕ್ಕಳ ಆರೋಗ್ಯದಲ್ಲಿ ಚೇತರಿಕೆ ಕಂಡುಬರುತ್ತದೆ. ಹಣಕಾಸಿನ ವಿಚಾರದಲ್ಲಿ ಉನ್ನತ ಅಧಿಕಾರಿಗಳ ಸಲಹೆ ದೊರೆಯುತ್ತದೆ. ವಂಶದ ಹಿರಿಯರನ್ನು ಭೇಟಿ ಮಾಡುವಿರಿ.

ಕಟಕ

ಕ್ರಿಯಾಶೀಲತೆಯಿಂದ ಜೀವನದ ಸಮಸ್ಯೆಗಳನ್ನು ಎದುರಿಸುವಿರಿ. ಆತ್ಮವಿಶ್ವಾಸದಿಂದ ಹೊಸ ವ್ಯಾಪಾರ ವ್ಯವಹಾರವನ್ನು ಆರಂಭಿಸುವಿರಿ. ಹಣದ ಕೊರತೆ ಕಡಿಮೆಯಾಗುತ್ತದೆ. ಕುಟುಂಬದಲ್ಲಿ ಎದುರಾಗುವ ಅಡ್ಡಿಆತಂಕಗಳು ಬಹುಕಾಲ ಇರದು. ಕುಟುಂಬದಲ್ಲಿ ಒಮ್ಮತದ ಪರಿಸರ ಏರ್ಪಡುತ್ತದೆ. ಉದ್ಯೋಗದಲ್ಲಿ ಸಹೋದ್ಯೋಗಿಗಳಿಂದ ಉತ್ತಮ ಸಹಕಾರ ದೊರೆಯಲಿದೆ. ವ್ಯಾಪಾರ ವ್ಯವಹಾರಗಳಲ್ಲಿ ನಿಮ್ಮ ಮಾತೇ ಬಂಡವಾಳವಾಗುತ್ತದೆ. ನಿರೀಕ್ಷಿಸಿದಂತೆ ವಿದ್ಯಾರ್ಥಿಗಳು ಉತ್ತಮ ಫಲಿತಾಂಶ ಪಡೆಯುತ್ತಾರೆ. ಹಣಕಾಸಿನ ಕೊರತೆ ಎದುರಾಗದು. ಮನೆ ಕೊಳ್ಳುವ ಯೋಜನೆ ಮುಂದಕ್ಕೆ ಹೋಗುತ್ತದೆ. ತಂದೆಯವರ ಆರೋಗ್ಯದಲ್ಲಿ ಚೇತರಿಕೆ ಕಂಡುಬರಲಿದೆ. ವಾಹನ ಚಾಲನೆ ಮಾಡುವಾಗ ಮಾನಸಿಕ ಒತ್ತಡಕ್ಕೆ ಒಳಗಾಗದಿರಿ.

ಸಿಂಹ

ಪೂರ್ವ ನಿಯೋಜನೆಯಿಂದ ಕೆಲಸ ಕಾರ್ಯವನ್ನು ಆರಂಭಿಸುವಿರಿ. ಕುಟುಂಬದಲ್ಲಿ ಪರಸ್ಪರ ನಂಬಿಕೆ ಮತ್ತು ವಿಶ್ವಾಸ ನೆಲೆಸಿರುತ್ತದೆ. ಚಿಕ್ಕ ಪುಟ್ಟ ವಿಚಾರಗಳಿಗೂ ಸಿಡುಕಿನಿಂದ ವರ್ತಿಸುವಿರಿ. ಶಾಂತಿ ಸಂಧಾನದ ಮಾತುಕತೆಯಿಂದ ತೊಂದರೆಗಳು ಮರೆಯಾಗುತ್ತವೆ. ಸೋದರರ ನಡುವೆ ಇದ್ದ ಮನಸ್ತಾಪ ದೂರವಾಗುತ್ತವೆ. ನೆರೆಹೊರೆಯವರೊಂದಿಗೆ ಅನಾವಶ್ಯಕ ವಾದ ವಿವಾದಗಳು ಇರುತ್ತವೆ. ಉದ್ಯೋಗದಲ್ಲಿ ಅಧಿಕಾರಿಗಳ ವಿಶ್ವಾಸ ಗಳಿಸುವಿರಿ. ಮನದ ಬೇಸರ ಕಳೆಯಲು ದೂರದ ಪ್ರದೇಶಕ್ಕೆ ತೆರಳುವಿರಿ. ವಿದ್ಯಾರ್ಥಿಗಳಿಗೆ ಗೆಲ್ಲಲೇಬೇಕೆಂಬ ಹಟವಿರುತ್ತದೆ. ಸ್ವಂತ ವ್ಯಾಪಾರ ವ್ಯವಹಾರಗಳಲ್ಲಿ ಉತ್ತಮ ವರಮಾನ ಇರುತ್ತದೆ. ಧಾರ್ಮಿಕ ಕೇಂದ್ರಕ್ಕೆ ಎಲ್ಲರೊಂದಿಗೆ ಭೇಟಿ ನೀಡುವಿರಿ. ಆರೋಗ್ಯದ ಬಗ್ಗೆ ಕಾಳಜಿ ಇರಲಿ.

ಕನ್ಯಾ

ಬಹುದಿನಗಳಿಂದ ಅರ್ಧಕ್ಕೆ ನಿಂತಿದ್ದ ಕೆಲಸವೊಂದು ಸುಲಭವಾಗಿ ಪೂರ್ಣಗೊಳ್ಳಲಿದೆ. ಅಧಿಕಾರಯುತ ಮಾತುಕತೆಯಿಂದ ವಿವಾದ ಉಂಟಾಗಲಿದೆ. ಅನಾರೋಗ್ಯದಿಂದ ಬಳಲುತ್ತಿರುವವರು ತೊಂದರೆಯಿಂದ ಪಾರಾಗುತ್ತಾರೆ. ಸುಳ್ಳು ಹೇಳಿ ನಿಮ್ಮಿಂದ ಸಹಾಯ ಪಡೆಯುವ ಜನರ ಬಗ್ಗೆ ನಿಗಾ ಇರಲಿ. ಉದ್ಯೋಗದಲ್ಲಿ ಆರೋಗ್ಯಪೂರ್ಣ ವಾತಾವರಣ ಉಂಟಾಗಲಿದೆ. ಉದ್ಯೋಗ ನಿಮಿತ್ತ ವಿದೇಶಕ್ಕೆ ತೆರಳುವ ಅವಕಾಶ ಒದಗುತ್ತದೆ. ವ್ಯಾಪಾರ ವ್ಯವಹಾರಗಳು ಮಧ್ಯಮ ಗತಿಯಲ್ಲಿ ಸಾಗುತ್ತವೆ. ಆದರೆ ಹಣದ ತೊಂದರೆ ಕಾಣುವುದಿಲ್ಲ. ಬಡ ವಿದ್ಯಾರ್ಥಿಗಳಿಗೆ ಪುಸ್ತಕ ಮತ್ತು ಲೇಖನ ಸಾಮಗ್ರಿ ಯನ್ನು ನೀಡುವಿರಿ. ಸಮಾಜದಲ್ಲಿ ಗೌರವಯುತ ಸ್ಥಾನ ಪಡೆಯುವಿರಿ.

ತುಲಾ

ಸಮಯಕ್ಕೆ ತಕ್ಕಂತೆ ವರ್ತಿಸಿ ಕೆಲಸ ಸಾಧಿಸುವಿರಿ. ದೊರೆವ ಅವಕಾಶವನ್ನು ಬುದ್ಧಿವಂತಿಕೆಯಿಂದ ಪಡೆಯುವಿರಿ. ಲಾಭ ಇರದ ಅಥವಾ ಅನುಕೂಲಕ್ಕೆ ಬರದ ಯಾವುದೇ ಕೆಲಸ ಕಾರ್ಯಗಳನ್ನು ಮಾಡುವುದಿಲ್ಲ. ಉದ್ಯೋಗದಲ್ಲಿ ಅಧಿಕಾರ ವರ್ಗಕ್ಕೆ ವಿಶೇಷ ಅನುಕೂಲಗಳು ದೊರೆಯಲಿವೆ. ತಂದೆಯವರ ಕೆಲಸವೊಂದನ್ನು ಮುಂದುವರೆಸುವಿರಿ. ತಾಯಿಯ ಆರೋಗ್ಯದ ತೊಂದರೆ ದೂರವಾಗುವುದು. ವಿದ್ಯಾರ್ಥಿಗಳು ಹೆಚ್ಚಿನ ಪರಿಶ್ರಮದಿಂದ ಕಲಿಕೆಯಲ್ಲಿ ಮುಂದಿರುತ್ತಾರೆ. ಎದುರಾಗುವ ಕಷ್ಟ ನಷ್ಟಗಳು ಕ್ಷಣಮಾತ್ರದಲ್ಲಿ ಮರೆಯಾಗಲಿವೆ. ಪಾಲುದಾರಿಕೆ ವ್ಯಾಪಾರ ವ್ಯವಹಾರದಲ್ಲಿ ಹೆಚ್ಚಿನ ಲಾಭವಿರುತ್ತದೆ. ಸಾಲದ ವ್ಯವಹಾರದಿಂದ ತೊಂದರೆಗೆ ಒಳಗಾಗುವಿರಿ. ತಂದೆಯ ಜೊತೆಗಿನ ಸಂಬಂಧ ಉತ್ತಮಗೊಳ್ಳುತ್ತದೆ.

ವೃಶ್ಚಿಕ

ಇಲ್ಲಿಯವರೆಗಿನ ಜೀವನದಲ್ಲಿ ಅನೇಕ ಬದಲಾವಣೆಗಳು ಉಂಟಾಗುತ್ತವೆ. ಮಾತಿನ ಮುಖಾಂತರ ಕೆಲಸ ಕಾರ್ಯಗಳಲ್ಲಿ ಯಶಸ್ಸು ಗಳಿಸುವಿರಿ. ಹಣಕಾಸಿನ ಪರಿಸ್ಥಿತಿ ಉತ್ತಮಗೊಳ್ಳುತ್ತದೆ. ಕುಟುಂಬದಲ್ಲಿ ಸಂಗಾತಿಯ ಮಾತೇ ಅಂತಿಮವಾಗಿರುತ್ತದೆ. ಕುಟುಂಬದಲ್ಲಿ ಸಂತೋಷ ನೆಮ್ಮದಿ ತುಂಬಿರುತ್ತದೆ. ಶಾಂತಿ ಸಂಯಮದಿಂದ ವರ್ತಿಸುವಿರಿ. ಉದ್ಯೋಗದಲ್ಲಿ ನಿರೀಕ್ಷಿತ ಮಟ್ಟದಲ್ಲಿ ಅನುಕೂಲತೆಗಳು ದೊರೆಯಲಿವೆ. ವಿದ್ಯಾರ್ಥಿಗಳು ಕಲಿಕೆಯಲ್ಲಿ ಪ್ರಥಮ ಸ್ಥಾನ ಗಳಿಸುತ್ತಾರೆ. ಮನರಂಜನೆಯಲ್ಲಿ ಆಸಕ್ತಿ ಕಡಿಮೆಯಾಗುತ್ತದೆ. ಸಂಬಂಧಿಕರ ಕಾರ್ಯಕ್ರಮದಲ್ಲಿ ಕೇಂದ್ರಬಿಂದುವಾಗಿ ಭಾಗವಹಿಸುವಿರಿ. ವ್ಯಾಪಾರ ವ್ಯವಹಾರಗಳಲ್ಲಿ ಉತ್ತಮ ಲಾಭವಿರುತ್ತದೆ. ಕಷ್ಟವೆನಿಸಿದರೂ ಹಣವನ್ನು ಉಳಿಸಲು ಯಶಸ್ವಿಯಾಗುವಿರಿ.

ಧನಸ್ಸು

ಸಂದರ್ಭಾನುಸಾರವಾಗಿ ಯಾವುದಾದರೊಂದು ಕೆಲಸ ಕಾರ್ಯಗಳಲ್ಲಿ ನಿರತರಾಗುವಿರಿ. ಒಳ್ಳೆ ಮನಸ್ಸು ಇರುವ ಕಾರಣ ಅವಕಾಶಗಳಿಗೆ ಬರವಿಲ್ಲ. ದುಡುಕುತನದ ಮಾತುಗಳನ್ನು ಕಡಿಮೆ ಮಾಡುವುದು ಒಳ್ಳೆಯದು. ವಿವಾದಗಳಿಂದ ದೂರ ಉಳಿಯುವಿರಿ. ಉತ್ತಮ ಪ್ರಯತ್ನದಿಂದ ಹಣಕಾಸಿನ ಪರಿಸ್ಥಿತಿ ಸುಧಾರಿಸುತ್ತದೆ. ಬೇರೆಯವರ ಸಹಾಯವನ್ನು ನಿರೀಕ್ಷಿಸುವುದಿಲ್ಲ. ಉದ್ಯೋಗದಲ್ಲಿ ಜವಾಬ್ದಾರಿಯುತ ಕೆಲಸವಿರುತ್ತದೆ. ವ್ಯಾಪಾರ ವ್ಯವಹಾರಗಳು ಉತ್ತಮ ಮಟ್ಟದಲ್ಲಿ ಸಾಗಲಿವೆ. ಆರೋಗ್ಯದಲ್ಲಿ ಸುಧಾರಣೆ ಕಂಡುಬರಲಿದೆ. ವಂಶದ ಆಸ್ತಿಯ ವಿವಾದಕ್ಕೆ ತೆರೆ ಬೀಳಲಿದೆ. ಕುಟುಂಬದ ಕೆಲಸ ಕಾರ್ಯಗಳಲ್ಲಿ ಅನಿವಾರ್ಯವಾಗಿ ಭಾಗವಹಿಸುವಿರಿ. ಮಕ್ಕಳ ವಿದ್ಯಾಭ್ಯಾಸದಲ್ಲಿ ಉನ್ನತ ಪ್ರಗತಿ ಕಂಡುಬರುತ್ತದೆ.

ಮಕರ

ಕ್ರೀಡಾ ಮನೋಭಾವನೆ ಮನದ ನೋವನ್ನು ಮರೆಸುತ್ತದೆ. ಜೀವನದಲ್ಲಿ ಹೊಸ ರೀತಿಯ ಬದಲಾವಣೆಗಳು ಸಂತಸ ತರಲಿವೆ. ಅಸಾಧ್ಯವಾದ ಕೆಲಸದಿಂದ ದೂರ ಉಳಿಯುವಿರಿ. ಕಡಿಮೆ ಅವಕಾಶಗಳಿದ್ದರೂ ಆತ್ಮ ವಿಶ್ವಾಸದಿಂದ ಯಶಸ್ಸು ದೊರೆಯುತ್ತದೆ. ಶಾಲಾ ಕಾಲೇಜುಗಳಲ್ಲಿ ವಿದ್ಯಾಭ್ಯಾಸ ಮುಂದುವರೆಸುವಿರಿ. ಜನಸಾಮಾನ್ಯರಿಗಾಗಿ ಪ್ರಯೋಜನಕಾರಿ ಕೆಲಸಗಳನ್ನು ಮಾಡುವಿರಿ. ಉದ್ಯೋಗದ ಜೊತೆಯಲ್ಲಿ ಸಣ್ಣ ಪ್ರಮಾಣದ ಉದ್ಧಿಮೆ ಆರಂಭಿಸುವಿರಿ. ವಿದ್ಯಾರ್ಥಿಗಳು ಕಲಿಕೆ ಮುಗಿಯು ಮುನ್ನ ಉದ್ಯೋಗ ಗಳಿಸುತ್ತಾರೆ. ಅಜೀರ್ಣದ ತೊಂದರೆ ಸಾಮಾನ್ಯವಾಗಿರುತ್ತದೆ. ಶುಚಿಯಾದ ಆಹಾರ ಸೇವನೆಯಿಂದ ಉತ್ತಮ ಆರೋಗ್ಯ ಇರುತ್ತದೆ. ಕುಟುಂಬದ ಸದಸ್ಯರೊಂದಿಗೆ ಯಾತ್ರಾ ಸ್ಥಳಕ್ಕೆ ಪ್ರವಾಸಕ್ಕೆ ತೆರಳುವಿರಿ.

ಕುಂಭ

ಸ್ವಂತ ಬಳಕೆಗಾಗಿ ಹೊಸ ವಾಹನ ಕೊಳ್ಳುವಿರಿ. ಹಣಕಾಸಿನ ವ್ಯವಹಾರದಲ್ಲಿ ಎಚ್ಚರಿಕೆಯಿಂದ ಇರಬೇಕು. ವೃತ್ತಿ ನಿರತರರಿಗೆ ವಿದೇಶ ಪ್ರಯಾಣ ಯೋಗವಿದೆ. ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಯಶಸ್ಸನ್ನು ಗಳಿಸುವರು. ಮನದಲ್ಲಿ ಲೆಕ್ಕಾಚಾರ ಹಾಕಿ ಚುರುಕುತನದಿಂದ ಕಾರ್ಯ ಸಾಧಿಸುವಿರಿ. ನಿಮ್ಮ ಮನದ ವಿಚಾರವನ್ನು ಯಾರಿಗೂ ತಿಳಿಸುವುದಿಲ್ಲ. ಅನಾರೋಗ್ಯದ ತೊಂದರೆಯಿಂದ ಮುಕ್ತರಾಗುವಿರಿ. ಮಾನಸಿಕ ಒತ್ತಡದಿಂದ ದೂರ ಉಳಿಯಲು ಪ್ರಯತ್ನಿಸುವಿರಿ. ವ್ಯಾಪಾರ ವ್ಯವಹಾರದಲ್ಲಿ ಉತ್ತಮ ಆದಾಯ ಇರುತ್ತದೆ. ಕಲಾವಿದರಿಗೆ ಅಪೂರ್ವವಾದ ಅವಕಾಶವೊಂದು ಲಭಿಸುತ್ತದೆ. ಕುಟುಂಬದ ಹಿರಿಯರ ಜೊತೆ ಅನಾವಶ್ಯಕ ವಾದ ವಿವಾದ ಇರುತ್ತದೆ.

ಮೀನ

ವ್ಯಾಪಾರಿಗಳಿಗೆ ಆದಾಯದ ಕೊರತೆ ಇರುತ್ತದೆ. ಸಣ್ಣ ಪ್ರಮಾಣದ ಕೆಲಸಗಳಿಗೂ ಹೆಚ್ಚಿನ ಪ್ರಯತ್ನ ಬೇಕಾಗುತ್ತದೆ. ಉದ್ಯೋಗದಲ್ಲಿ ಯಾವುದೇ ಬದಲಾವಣೆಗಳು ಕಂಡುಬರುವುದಿಲ್ಲ. ತಾಯಿ ಮತ್ತು ಮಕ್ಕಳ ನಡುವೆ ಭಿನಾಭಿಪ್ರಾಯ ಇರುತ್ತದೆ. ಮಕ್ಕಳಿಗೆ ಅನಾರೋಗ್ಯ ಇರುತ್ತದೆ. ವಿದ್ಯಾರ್ಥಿಗಳು ಸಂಯಮದಿಂದ ಉನ್ನತಿಯತ್ತ ಸಾಗುತ್ತಾರೆ. ಅತಿಯಾಗಿ ಮಾತನಾಡಿ ಬೇರೆಯವರ ಅಸಡ್ಡೆಗೆ ಗುರಿಯಾಗುತ್ತಾರೆ. ಕುಟುಂಬದ ಭೂ ವಿವಾದ ಒಂದು ಎದುರಾದರೂ ಅದನ್ನು ಸುಲಭವಾಗಿ ಪರಿಹರಿಸುವಿರಿ. ಅವಿವಾಹಿತರಿಗೆ ವಿವಾಹ ಯೋಗವಿದೆ. ಅನಿರೀಕ್ಷಿತವಾದ ಖರ್ಚು ವೆಚ್ಚಗಳು ಎದುರಾಗಲಿವೆ. ವಂಶದ ಆಸ್ತಿಯಲ್ಲಿ ಸಮಪಾಲು ದೊರೆಯುತ್ತದೆ.

ಬರಹ: ಎಚ್‌. ಸತೀಶ್, ಜ್ಯೋತಿಷಿ

ಮೊಬೈಲ್:‌ 8546865832

(ಗಮನಿಸಿ: ಜ್ಯೋತಿಷ್ಯ ಶಾಸ್ತ್ರದ ಲೆಕ್ಕಾಚಾರಕ್ಕೆ ಹಲವು ಸೂತ್ರಗಳಿವೆ. ನಿರ್ದಿಷ್ಟ ರೀತಿಯಲ್ಲಿ ಕ್ರಮಬದ್ಧವಾಗಿ ಈ ರಾಶಿ ಭವಿಷ್ಯ ನೀಡಲಾಗಿದೆ. ಆದರೆ ಒಟ್ಟಾರೆಯಾಗಿ ಜ್ಯೋತಿಷ್ಯ ಎನ್ನುವುದು ನಂಬಿಕೆಯ ಮಾತು. ಓದುಗರ ನಂಬಿಕೆಯನ್ನು ‘ಹಿಂದೂಸ್ತಾನ್ ಟೈಮ್ಸ್ ಕನ್ನಡ’ ಗೌರವಿಸುತ್ತದೆ. ಇಲ್ಲಿರುವ ಯಾವುದೇ ಶಿಫಾರಸು ಅಥವಾ ಸಲಹೆಗಳನ್ನು ಪಾಲಿಸುವುದು ಓದುಗರ ವಿವೇಚನೆ, ನಂಬಿಕೆಗೆ ಬಿಟ್ಟ ವಿಷಯವಾಗಿರುತ್ತದೆ).

ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.