Virgo Astrology in 2024: ಅನಿವಾರ್ಯವಾಗಿ ಅಪರಿಚಿತರ ಜೊತೆ ವಿವಾಹ, ಕೆಲವರಿಗೆ 2ನೇ ಮದುವೆ ಯೋಗ; ಕನ್ಯಾ ರಾಶಿ ವರ್ಷಭವಿಷ್ಯ
Virgo Horoscope in 2024: ಹೊಸ ನಿರೀಕ್ಷೆಗಳೊಂದಿಗೆ ಹೊಸ ವರ್ಷ ಆಗಮನವಾಗುತ್ತಿದೆ. ಕಷ್ಟ, ನೋವುಗಳು ದೂರವಾಗಿ ಹೊಸ ವರ್ಷದಲ್ಲಿ ಹೊಸ ಜೀವನ, ಸುಖ, ಸಂತೋಷ ನೆಲೆಸಲಿ ಎಂದು ಎಲ್ಲರೂ ಬಯಸುತ್ತಿದ್ದಾರೆ. ಹೊಸ ವರ್ಷ ದ್ವಾದಶ ರಾಶಿಗಳ ಜೀವನದಲ್ಲಿ ಏನೆಲ್ಲಾ ಬದಲಾವಣೆ ತರಲಿದೆ? ಕನ್ಯಾ ರಾಶಿ ವರ್ಷ ಭವಿಷ್ಯ ಹೀಗಿದೆ.
2024ರ ಕನ್ಯಾ ರಾಶಿ ವರ್ಷ ಭವಿಷ್ಯ: ಬದಲಾವಣೆ ಜಗದ ನಿಯಮ ಎಂಬ ಮಾತಿದೆ. ದಿನ ಉರುಳುತ್ತಿದ್ದಂತೆ ಎಲ್ಲರ ಜೀವನದಲ್ಲಿ ಸಾಕಷ್ಟು ಬದಲಾವಣೆ ಉಂಟಾಗಲಿದೆ. ಉದ್ಯೋಗ, ವ್ಯಾಪಾರ, ವಿದ್ಯಾಭ್ಯಾಸ, ವೈಯಕ್ತಿಕ ಜೀವನ ಉತ್ತವಾಗಿರಲಿ ಎಂದು ಎಲ್ಲರೂ ಬಯಸುತ್ತಾರೆ. ಈ ಆಸೆ ಆಕ್ಷಾಂಕ್ಷೆಗಳ ನಡುವೆ ಹೊಸ ವರ್ಷ ಆಗಮನವಾಗುತ್ತಿದೆ. 2024ರಲ್ಲಿ ಗ್ರಹಗತಿಗಳ ಸ್ತಾನ ಪಲ್ಲಟದೊಂದಿಗೆ ದ್ವಾದಶ ರಾಶಿಗಳ ಜೀವನದಲ್ಲಿ ಮಹತ್ತರ ಬದಲಾವಣೆಗಳಾಗುತ್ತವೆ. 2024 ವರ್ಷ ಭವಿಷ್ಯವನ್ನು ಜ್ಯೋತಿಷ್ಯ ಶಾಸ್ತ್ರವನ್ನು ಸಾಂಪ್ರದಾಯಿಕವಾಗಿ ಅಭ್ಯಾಸ ಮಾಡಿರುವ ಹಿರಿಯ ಜ್ಯೋತಿಷಿ ಎಚ್. ಸತೀಶ್ ಪ್ರಸ್ತುತಪಡಿಸುತ್ತಿದ್ದಾರೆ. ಮೇಷ ರಾಶಿಯವರ ವರ್ಷ ಭವಿಷ್ಯ ಹೀಗಿದೆ.
ಕನ್ಯಾ ರಾಶಿಯವರಿಗೆ ನೇರವಾದ ಮನಸ್ಸು ಇರುವುದಿಲ್ಲ. ಒಮ್ಮೆ ತೆಗೆದುಕೊಂಡ ತೀರ್ಮಾನಗಳನ್ನು ಪದೇಪದೇ ಬದಲಾಯಿಸುತ್ತಾರೆ. ಅದರಲ್ಲಿಯೂ ಪ್ರಸಕ್ತ ಸನ್ನಿವೇಶದಲ್ಲಿ ಅನಾವಶ್ಯಕವಾಗಿ ಮಾನಸಿಕ ಒತ್ತಡಕ್ಕೆ ಒಳಗಾಗುತ್ತಾರೆ. ಕುಟುಂಬದಲ್ಲಿನ ಕೆಲಸ ಕಾರ್ಯಗಳು ಸುಲಭ ಗತಿಯಲ್ಲಿ ನಡೆಯಲಾರವು. ವಿನಾಕಾರಣ ಟೀಕಿಸುವ ಗುಣ ಇರುವ ಕಾರಣ ಕುಟುಂಬದಲ್ಲಿ ಶಾಂತಿ ನೆಮ್ಮದಿ ನೆಲೆಸಿರುವುದಿಲ್ಲ. ಆರೋಗ್ಯದ ಸಮಸ್ಯೆ ಉಂಟಾಗುತ್ತದೆ. ನಾವಾಯಿತು ತಮ್ಮ ಕೆಲಸವಾಯಿತು ಎಂಬಂತೆ ಇದ್ದರೆ ಯಾವುದೇ ತೊಂದರೆ ಉಂಟಾಗುವುದಿಲ್ಲ. ಮನಸ್ಸಿಗೆ ನೆಮ್ಮದಿಯು ಇರುತ್ತದೆ.
ಮೇ ತಿಂಗಳವರೆಗೂ ಜೀವನವು ಒಂದು ರೀತಿಯ ತಪ್ಪು ಹಾದಿಯಲ್ಲಿ ಇರುತ್ತದೆ. ಉದ್ಯೋಗದ ವಿಚಾರದಲ್ಲಿ ಹಾದಿ ತಪ್ಪುವ ಸಾಧ್ಯತೆಗಳಿವೆ. ಆದ್ದರಿಂದ ಶಾಂತಿ ಸಂಯಮದಿಂದ ಎಲ್ಲರೊಂದಿಗೆ ಬೆರೆತು ಬಾಳುವ ಬುದ್ದಿಯನ್ನು ಬೆಳೆಸಿಕೊಳ್ಳಬೇಕು. ಬಾಳುವ ರೀತಿ ನೀತಿಯನ್ನು ಬದಲಿಸಿಕೊಂಡರೆ ಸುಗಮವಾಗಿ ನಡೆಯಲಿದೆ. ಮನದಲ್ಲಿರುವ ಹಿಂಜರಿಕೆ ಮತ್ತು ಕೀಳರಿಮೆ ದೂರವಾದಲ್ಲಿ ಅಪರೂಪದ ಅವಕಾಶಗಳು ದೊರೆಯುತ್ತವೆ. ಹೊಸ ವಸ್ತುಗಳ ಅನ್ವೇಷಣೆ, ಹೊಸ ವಿಚಾರಗಳ ಅಧ್ಯಯನ ಜೀವನದಲ್ಲಿನ ಯಶಸ್ವಿಗೆ ಕಾರಣವಾಗುತ್ತದೆ, ತಡವಾದರೂ ಕೆಲಸ ಕಾರ್ಯಗಳಲ್ಲಿ ಉತ್ತಮ ಮಟ್ಟದ ಯಶಸ್ಸನ್ನು ಗಳಿಸುವಿರಿ, ಆಧ್ಯಾತ್ಮಿಕ ನೆಲಗಟ್ಟಿನಲ್ಲಿ ವಿಶೇಷ ಸಾಧನೆ ಮಾಡಬಹುದು. ಸಂಪ್ರದಾಯ ಮತ್ತು ಧಾರ್ಮಿಕ ಆಚರಣೆಗಳಲ್ಲಿ ವಿಶೇಷವಾದ ಆಸಕ್ತಿ ತೋರುವಿರಿ.
ಉದ್ಯೋಗದಲ್ಲಿ ವಿಶೇಷ ಎನ್ನದೇ ಹೋದರು ಸಾಧಾರಣ ಮಟ್ಟದ ಜಯ ಲಭಿಸುತ್ತದೆ. ಸಮಯಕ್ಕೆ ಹೆಚ್ಚಿನ ಪ್ರಾಶಸ್ತ್ಯ ನೀಡುವಿರಿ. ಸಮಯ ವ್ಯರ್ಥವಾಗಬಾರದೆಂಬ ಕಾರಣದಿಂದ ಉಪ ವೃತ್ತಿಯನ್ನು ಆರಂಭಿಸುವಿರಿ. ಕುಟುಂಬದವರ ಸಹಾಯದಿಂದ ಹಣಕಾಸು ಸಂಸ್ಥೆ ಆರಂಭಿಸುವ ಸಾಧ್ಯತೆಗಳಿವೆ. ಯಾರೊಬ್ಬರ ಸಹಾಯವೂ ಇಲ್ಲವೇ ಸ್ವತಂತ್ರವಾಗಿ ಕೆಲಸ ಕಾರ್ಯಗಳನ್ನು ನಿರ್ವಹಿಸಬಲ್ಲಿರಿ. ಆತ್ಮವಿಶ್ವಾಸದ ಕೊರತೆ ಬಹುವಾಗಿ ಕಾಡುತ್ತದೆ. ಏಪ್ರಿಲ್ ನಂತರ ಜೀವನಕ್ಕೆ ಒಂದು ಹೊಸ ಆಯಾಮವೇ ದೊರೆಯುತ್ತದೆ. ಅಪೂರ್ಣಗೊಂಡಿದ್ದ ಹಲವಾರು ಕೆಲಸ ಕಾರ್ಯಗಳು ಸುಲಭವಾಗಿ ಕೈಗೂಡಲಿವೆ. ವಿರೋಧಿಯು ಎಷ್ಟೇ ಶಕ್ತಿಶಾಲಿಯಾಗಿದ್ದರು ಸಹ ಸೋಲಪ್ಪಲೇ ಬೇಕಾಗುತ್ತದೆ. ಹೆಚ್ಚಿನ ನಂಬಿಕೆ ಉಂಟಾಗುತ್ತದೆ. ಅನಿವಾರ್ಯವಾಗಿ ಅಪರಿಚಿತರ ಜೊತೆಯಲ್ಲಿ ವಿವಾಹವು ನೆರವೇರುತ್ತದೆ. ಪ್ರತಿಯೊಂದು ಕೆಲಸ ಕಾರ್ಯಗಳ ಮೇಲು ಕೆಲವರ ಬೇರೊಬ್ಬರ ಒತ್ತಡ ಇರುತ್ತದೆ. ಆದರೆ ಕುಟುಂಬದ ಹಿರಿಯರ ಮತ್ತು ಗುರುಹಿರಿಯರ ಸಹಾಯ ಸಹಕಾರ ಸದಾ ಕಾಲ ದೊರೆಯುತ್ತದೆ.
ಆತ್ಮೀಯರ ಸಹಾಯ ಸಹಕಾರದಿಂದ ವಿವಾಹ ಕಾರ್ಯವು ನೆರವೇರಲ್ಪಡುತ್ತದೆ. ಆಕಸ್ಮಿಕ ಕಾರಣಗಳಿಂದ ಕೆಲವರಿಗೆ ದ್ವಿತೀಯ ವಿವಾಹ ಯೋಗದ ಅವಕಾಶವು ದೊರೆಯಲಿದೆ. ಬಹುದಿನದ ಕೆಲಸವಾಗಿದ್ದ ಸ್ವಂತ ಮನೆಯ ಆಸೆ ಈಡೇರುತ್ತದೆ ಹಣದ ತೊಂದರೆ ಸಂಪೂರ್ಣವಾಗಿ ಮರೆಯಾಗುತ್ತದೆ. ಏಪ್ರಿಲ್ ತಿಂಗಳ ನಂತರ ಧನಾತ್ಮಕ ದೃಷ್ಟಿಕೋನದಿಂದ ಪ್ರತಿಯೊಂದು ವಿಚಾರಗಳನ್ನು ಅನುಸರಿಸುವಿರಿ. ಆದಾಯದಲ್ಲಿ ಏರಿಕೆ ಕಂಡು ಬರುತ್ತದೆ. ಆದರೆ ಉತ್ತಮ ಭವಿಷ್ಯಕ್ಕಾಗಿ ಹಣವನ್ನು ಉಳಿಸುವ ಮನಸ್ಸು ಮಾಡಬೇಕು. ಮಕ್ಕಳಿಗೆ ಸಂಬಂಧಿಸಿದಂತೆ ಉತ್ತಮ ನಿರೀಕ್ಷೆಗಳು ಇರುತ್ತವೆ. ಎಂದಿಗೂ ಹಿರಿಯರ ನಿರೀಕ್ಷೆಯನ್ನು ಹುಸಿ ಮಾಡುವುದಿಲ್ಲ. ಬೇರೊಬ್ಬರ ಮನಸ್ಸನ್ನು ಅರ್ಥ ಮಾಡಿಕೊಂಡು ಮುಂದುವರೆಯಿರಿ.
ಕೌಟುಂಬಿಕ ವಿಚಾರದಲ್ಲಿ ದಿಢೀರನೆ ಯಾವುದೇ ತೀರ್ಮಾನಗಳನ್ನು ತೆಗೆದುಕೊಳ್ಳಬೇಡಿರಿ. ಸಂಬಂಧಿಕರು ಮತ್ತು ಸ್ನೇಹಿತರ ಸಂಪರ್ಕದಲ್ಲಿ ಗೌರವಯುತ ಭಾವನೆ ಉಂಟಾಗುತ್ತದೆ. ಏಪ್ರಿಲ್ ತಿಂಗಳು ಮುಗಿಯುವವರೆಗೂ ಸುಲಭವಾಗಿ ಯಾರನ್ನು ನಂಬುವುದಿಲ್ಲ .ನಂತರದ ದಿನಗಳಲ್ಲಿ ಮಾಡಿದ ತಪ್ಪಿನ ಅರಿವಾಗಿ ಎಲ್ಲರೊಂದಿಗೆ ಹೊಸ ಜೀವನವನ್ನು ಆರಂಭಿಸುವಿರಿ. ಸ್ವಂತ ವ್ಯಾಪಾರ ವ್ಯವಹಾರಗಳಲ್ಲಿ ಹೊಸ ನಿರೀಕ್ಷೆಗಳು ಮೇಳೈಯಿಸುತ್ತದೆ. ಉದ್ಯೋಗದಲ್ಲಿ ಹೊಸ ನಿರೀಕ್ಷೆ ಉಂಟಾಗುತ್ತದೆ. ವಿದ್ಯಾರ್ಥಿಗಳು ಕ್ರಮೇಣವಾಗಿ ಆಟ ಪಾಠಗಳಲ್ಲಿ ಹೆಚ್ಚಿನ ಆಸಕ್ತಿಯನ್ನು ತೋರುತ್ತಾರೆ. ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿನ ಗೆಲುವು ಸಂತಸದ ಜೀವನ ರೂಪಿಸುತ್ತದೆ. ಆದರೆ ತಾಯಿಯವರ ಆರೋಗ್ಯ ಸತತವಾಗಿ ತೊಂದರೆಗೆ ಒಳಗಾಗುತ್ತದೆ. ಈ ಕಾರಣದಿಂದಾಗಿಕುಟುಂಬ ನಿರ್ವಹಣೆಗಾಗಿ ಹೆಚ್ಚಿನ ಹಣದ ಅವಶ್ಯಕತೆ ಉಂಟಾಗಲಿದೆ. ಕೇವಲ ಬಾಳ ಸಂಗಾತಿಯು ಜೀವನದ ಹಾದಿಯನ್ನೇ ಬದಲಾಯಿಸಬಲ್ಲರು.
ಜ್ಯೋತಿಷಿ: ಎಚ್. ಸತೀಶ್, ಬೆಂಗಳೂರು
ಮೊಬೈಲ್: 8546865832
(ಗಮನಿಸಿ: ಜ್ಯೋತಿಷ್ಯ ಶಾಸ್ತ್ರದ ಲೆಕ್ಕಾಚಾರಕ್ಕೆ ಹಲವು ಸೂತ್ರಗಳಿವೆ. ನಿರ್ದಿಷ್ಟ ರೀತಿಯಲ್ಲಿ ಕ್ರಮಬದ್ಧವಾಗಿ ಈ ರಾಶಿ ಭವಿಷ್ಯ ನೀಡಲಾಗಿದೆ. ಆದರೆ ಒಟ್ಟಾರೆಯಾಗಿ ಜ್ಯೋತಿಷ್ಯ ಎನ್ನುವುದು ನಂಬಿಕೆಯ ಮಾತು. ಓದುಗರ ನಂಬಿಕೆಯನ್ನು ‘ಹಿಂದೂಸ್ತಾನ್ ಟೈಮ್ಸ್ ಕನ್ನಡ’ ಗೌರವಿಸುತ್ತದೆ. ಇಲ್ಲಿರುವ ಯಾವುದೇ ಶಿಫಾರಸು ಅಥವಾ ಸಲಹೆಗಳನ್ನು ಪಾಲಿಸುವುದು ಓದುಗರ ವಿವೇಚನೆ, ನಂಬಿಕೆಗೆ ಬಿಟ್ಟ ವಿಷಯವಾಗಿರುತ್ತದೆ).