ರಾಹು-ಕುಜ ಪರಸ್ಪರ ದೃಷ್ಠಿ: ಮೇಷದಿಂದ ಕಟಕದವರಿಗೆ ಯಾವ ರಾಶಿಯವರಿಗೆ ಏನೆಲ್ಲಾ ಶುಭಫಲಗಳಿವೆ
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  ರಾಹು-ಕುಜ ಪರಸ್ಪರ ದೃಷ್ಠಿ: ಮೇಷದಿಂದ ಕಟಕದವರಿಗೆ ಯಾವ ರಾಶಿಯವರಿಗೆ ಏನೆಲ್ಲಾ ಶುಭಫಲಗಳಿವೆ

ರಾಹು-ಕುಜ ಪರಸ್ಪರ ದೃಷ್ಠಿ: ಮೇಷದಿಂದ ಕಟಕದವರಿಗೆ ಯಾವ ರಾಶಿಯವರಿಗೆ ಏನೆಲ್ಲಾ ಶುಭಫಲಗಳಿವೆ

ಗ್ರಹಗಳು ತಮ್ಮ ಸ್ಥಾನವನ್ನು ಬದಲಾಯಿಸುತ್ತಲೇ ಇರುತ್ತವೆ. ರಾಶಿಗಳ ಸ್ಥಾನಗಳಿಗೆ ಪ್ರವೇಶದ ವೇಳೆಯಲ್ಲಿ ಕೆಲವು ಗ್ರಹಗಳು ಮುಖಾಮುಖಿಯಾಗುತ್ತವೆ. ರಾಹು-ಕುಜ ಪರಸ್ಪರ ದೃಷ್ಠಿಯಿಂದ ಮೇಷ, ವೃಷಭ, ಮಿಥುನ ಹಾಗೂ ಕಟಕ ರಾಶಿಯವರ ಶುಭಫಲಗಳು ಹೀಗಿವೆ.

ರಾಹು ಮತ್ತು ಮಂಗಳನ ಸಂಯೋಗದಿಂದ ಮೇಷ, ವೃಷಭ, ಮಿಥುನ ಮತ್ತು ಕಟಕ ರಾಶಿಯವರ ಶುಭಫಲಗಳ ವಿವರ
ರಾಹು ಮತ್ತು ಮಂಗಳನ ಸಂಯೋಗದಿಂದ ಮೇಷ, ವೃಷಭ, ಮಿಥುನ ಮತ್ತು ಕಟಕ ರಾಶಿಯವರ ಶುಭಫಲಗಳ ವಿವರ

ಶನಿವತ್ ರಾಹು ಕುಜವತ್ ಕೇತು ಎಂಬ ಮಾತು ಜೋತಿಷ್ಯ ಶಾಸ್ತ್ರದಲ್ಲಿದೆ. ಅಂದರೆ ರಾಹುವು ಶನಿಗ್ರಹದಂತೆ ಫಲಗಳನ್ನು ನೀಡುತ್ತದೆ. ಇದೇ ರೀತಿ ಕೇತುವು ಕುಜ ಅಥವಾ ಮಂಗಳನ ರೀತಿ ಫಲಗಳನ್ನು ನೀಡುತ್ತದೆ. ಈ ಕಾರಣದಿಂದಾಗಿ ರಾಹುವು ಕುಂಭರಾಶಿಯಲ್ಲಿ ಸಂಪೂರ್ಣ ಶಕ್ತಿಯುತನಾಗುತ್ತಾನೆ. ಆದ್ದರಿಂದ ರಾಹುವು ಕೇವಲ ಅಶುಭ ಫಲಗಳನ್ನು ನೀಡದೆ ಕೆಲವೊಂದು ವಿಚಾರದಲ್ಲಿ ಶುಭ ಫಲಗಳನ್ನು ನೀಡುತ್ತಾನೆ. ಇದರ ಬಗ್ಗೆ ಪುರಾತನ ಗ್ರಂಥಗಳಿಂದ ಮಾತ್ರ ತಿಳಿಯಲು ಸಾಧ್ಯ. ಕುಜನು ಸಿಂಹ ರಾಶಿಯನ್ನು 2025 ರ ಜೂನ್ 6 ರಂದು ಪ್ರವೇಶಿಸುತ್ತಾನೆ. ಇದೇ ರಾಶಿಯಲ್ಲಿ ಜುಲೈ ತಿಂಗಳ 28 ರವರೆಗು ಸಂಚರಿಸುತ್ತಾನೆ. ಕುಜನಿಗೆ ಸಿಂಹ ರಾಶಿಯು ಮಿತ್ರಕ್ಷೇತ್ರವಾಗುತ್ತದೆ. ಆದ್ದರಿಂದ ರಾಹು ಮತ್ತು ಕುಜರ ದೃಷ್ಠಿ ಇದ್ದರೂ ಶುಭ ಮತ್ತು ಅಶುಭಫಲಗಳು ಸಮನಾಗಿರುತ್ತವೆ.

ಮೇಷ ರಾಶಿ

ತಂದೆ ತಾಯಿಗಳಿಗೆ ಸುಖ ಸಂತೋಷದ ಜೀವನವಿರುತ್ತದೆ. ಕೆಲಸ ಕಾರ್ಯಗಳಿಗೆ ದೂರದ ಸಂಬಂಧಿಕರು ಅಥವಾ ಪರಿಚಯಸ್ಥರ ಸಹಾಯ ದೊರೆಯುತ್ತದೆ. ಸೋದರ ಮತ್ತು ಸೋದರಿಯರ ಜೊತೆ ಇದ್ದ ಮನಸ್ತಾಪವು ದೂರವಾಗಿ ಉತ್ತಮ ಬಾಂಧವ್ಯ ರೂಪುಗೊಳ್ಳುತ್ತವೆ. ನಿಮ್ಮಲ್ಲಿರುವ ಒಳ್ಳೆಯ ಗುಣಕ್ಕೆ ಜನಸಾಮಾನ್ಯರ ಮೆಚ್ಚುಗೆ ದೊರೆಯುತ್ತದೆ. ಆದರೆ ಮನೆಯಲ್ಲಿ ಕುಟುಂಬದ ಸದಸ್ಯರ ಜೊತೆಯಲ್ಲಿ ಪರಸ್ಪರ ಹಣಕಾಸಿನ ವಿಚಾರದಲ್ಲಿ ಭಿನಾಭಿಪ್ರಾಯ ಇರುತ್ತದೆ. ಹಣಕಾಸಿನ ತೊಂದರೆ ಇದ್ದಲ್ಲಿ ಆತ್ಮೀಯರಿಂದ ಸಹಾಯ ದೊರೆಯುತ್ತದೆ. ವಾಹನಾ ಅಪಘಾತದಿಂದ ಪಾರಾಗುವಿರಿ. ರಕ್ತದೋಷದಿಂದ ಬಳಲುತ್ತಿದ್ದಲ್ಲಿ ಉತ್ತಮ ಚಿಕಿತ್ಸೆ ಲಭಿಸುತ್ತದೆ. ನಿಮ್ಮ ತಾಯಿಯವರ ಆರೋಗ್ಯದಲ್ಲಿ ತೊಂದರೆ ಉಂಟಾದರೂ ಕ್ರಮೇಣವಾಗಿ ಸುಧಾರಿಸುತ್ತಾರೆ. ಬಂಧು ಬಳಗದವರು ನಿಮ್ಮ ಸ್ನೇಹ ಪ್ರೀತಿಯನ್ನು ಅಪೇಕ್ಷಿಸುವರು. ಏಕಾಂಗಿಯಾಗಿ ಉಳಿಯಲು ಬಯಸುವಿರಿ. ಬಹುದಿನದ ಕನಸಾದ ವಿದೇಶ ಪ್ರವಾಸವು ನನಸಾಗುತ್ತದೆ. ಕೋಪದಲ್ಲಿ ತಪ್ಪು ನಿರ್ಧಾರವನ್ನು ತೆಗೆದುಕೊಳ್ಳುವ ಸಾಧ್ಯತೆಗಳಿವೆ. ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ತೋರುವಿರಿ.

ವೃಷಭ ರಾಶಿ

ಹೆಣ್ಣು ಮಕ್ಕಳು ಉದ್ಯೋಗದಲ್ಲಿ ಉನ್ನತ ಮಟ್ಟ ಗಳಿಸುತ್ತಾರೆ. ಆದರೆ ಉದ್ಯೋಗ ಕ್ಷೇತ್ರದಲ್ಲಿ ಸದಾಕಾಲ ಬೇಸರ ಅಥವಾ ಒತ್ತಡದ ಸನ್ನಿವೇಶಗಳು ಎದುರಾಗುತ್ತವೆ. ಹಿರಿಯ ಸೋದರನ ಜೊತೆಯಲ್ಲಿ ಬೇಸರ ಇರಲಿದೆ. ವಿಶೇಷ ವ್ಯಕ್ತಿ ಒಬ್ಬರನ್ನು ಭೇಟಿಯಾಗುವಿರಿ. ವಾದ ವಿವಾದಗಳಲ್ಲಿ ಜಯಗಳಿಸುವಿರಿ. ಬುದ್ಧಿವಂತಿಕೆಯಿಂದ ನಿಮ್ಮ ಕೆಲಸ ಕಾರ್ಯಗಳನ್ನು ಪೂರ್ಣಗೊಳಿಸಬಲ್ಲಿರಿ. ಆತ್ಮವಿಶ್ವಾಸದ ಕೊರತೆ ಇರುತ್ತದೆ. ಆತುರ ಪಡದೆ ತಾಳ್ಮೆಯಿಂದ ನಿಮ್ಮ ಕೆಲಸ ಕಾರ್ಯಗಳು ಸಾಧಿಸಬಲ್ಲಿರಿ. ಕುಟುಂಬದ ಹಿರಿಯರೊಬ್ಬರು ಆರಂಭದಲ್ಲಿ ತೊಂದರೆಗಳನ್ನು ಎದುರಿಸಿ ಕ್ರಮೇಣ ಸಹಜಸ್ಥಿತಿಗೆ ಮರಳುತ್ತಾರೆ. ವೃತ್ತಿ ಕ್ಷೇತ್ರದಲ್ಲಿ ಸಹೋದ್ಯೋಗಿಗಳ ನೆರವಿನಿಂದ ಯಶಸ್ಸನ್ನು ಗಳಿಸುವಿರಿ. ಹೊಸ ರೀತಿಯ ಜೀವನಕ್ಕೆ ಒಗ್ಗಿಕೊಳ್ಳುವಿರಿ. ಮೊದಲ ಆದ್ಯತೆಯನ್ನು ನಿಮ್ಮ ಸ್ವಂತ ಕೆಲಸ ಕಾರ್ಯಗಳಿಗೆ ನೀಡುವಿರಿ. ಬಾಳಸಂಗಾತಿಯ ಜೊತೆಯಲ್ಲಿ ಬೇರೆಯವರ ಸಲುವಾಗಿ ವಾದ ಮಾಡುವಿರಿ. ಧಾರ್ಮಿಕ ಗುರುಗಳ ಭೇಟಿಯಾದ ನಂತರ ಮನಸ್ಸಿಗೆ ನೆಮ್ಮದಿ ದೊರೆಯುತ್ತದೆ. ಸುಲಭವಾಗಿ ಬೇರೆಯವರ ಪ್ರಭಾವಕ್ಕೆ ಒಳಗಾಗುವಿರಿ.

ಮಿಥುನ ರಾಶಿ

ಹಣದ ತೊಂದರೆ ಇರುವುದಿಲ್ಲ. ಮಕ್ಕಳಿಂದ ನಿರೀಕ್ಷಿತ ವರ್ತಮಾನಗಳು ಬರಲಿವೆ. ಸುಖ ಸಂತೋಷದ ಜೀವನ ನಿಮ್ಮದಾಗುತ್ತದೆ. ನವ ದಂಪತಿ ಸಂತಾನ ಪ್ರಾಪ್ತಿಯಾಗುತ್ತದೆ. ಸಂಪ್ರದಾಯ ಅಥವಾ ಧಾರ್ಮಿಕ ಕೆಲಸ ಕಾರ್ಯಗಳಲ್ಲಿ ಪಾಲ್ಗೊಳ್ಳುವಿರಿ. ಯಾವುದೇ ಕೆಲಸ ಕಾರ್ಯಗಳಲ್ಲಿ ಯಶಸ್ಸನ್ನು ಗಳಿಸುವಿರಿ. ವಿದ್ಯಾರ್ಥಿಗಳು ತಮ್ಮಲ್ಲಿರುವ ಪ್ರತಿಭೆಗೆ ತಕ್ಕಂತಹ ಅವಕಾಶಗಳನ್ನು ಪಡೆಯುತ್ತಾರೆ. ಹಣಕಾಸಿನ ವ್ಯವಹಾರದಲ್ಲಿ ಯಾರನ್ನೂ ನಂಬುವುದಿಲ್ಲ. ಕಣ್ಣಿನ ತೊಂದರೆಯಿಂದ ಬಳಲುವಿರಿ. ಶಸ್ತ್ರಚಿಕಿತ್ಸೆ ಆಗುವ ಸಾಧ್ಯತೆಗಳಿವೆ. ನಿಮ್ಮ ವಾದ ವಿವಾದಗಳಿಂದ ಜನರ ಗಮನ ಸೆಳೆಯುವಿರಿ. ಮಾತಿನ ಮೇಲೆ ಹತೋಟಿ ಸಾಧಿಸಬಲ್ಲಿರಿ. ವಿದ್ಯಾಭ್ಯಾಸವನ್ನು ಇರುವ ಸ್ಥಳದಲ್ಲಿಯೇ ಮುಂದುವರೆಸಬೇಕಾಗುತ್ತದೆ. ತಾಳ್ಮೆಯ ಕೊರತೆ ನಿಮ್ಮನ್ನು ಕಾಡುತ್ತದೆ. ದೂರದ ಸಂಬಂಧಿಕರಿಂದ ನಿಮ್ಮ ಕೆಲಸ ಕಾರ್ಯಗಳಲ್ಲಿ ಸಹಾಯ ಸಹಕಾರ ದೊರೆಯುತ್ತದೆ. ಉತ್ತಮ ವರಮಾನ ಗಳಿಸಲು ಆರಂಭದಲ್ಲಿ ಸಾಧ್ಯವಾಗದು. ಆದರೆ ಆತ್ಮೀಯರ ನೆರವು ನಿಮಗೆ ಅನುಕೂಲ ಕಲ್ಪಿಸುತ್ತದೆ. ಆಕರ್ಷಕವಾದ ವಸ್ತುಗಳಿಗೆ ಹೆಚ್ಚಿನ ಹಣ ವೆಚ್ಚವಾಗುತ್ತದೆ.

ಕಟಕ ರಾಶಿ

ಉತ್ತಮ ಚಿಕಿತ್ಸೆಯ ಕಾರಣದಿಂದ ಚರ್ಮದ ತೊಂದರೆಯು ದೂರವಾಗುತ್ತದೆ. ಮುಂಗೋಪದ ಗುಣವಿರುತ್ತದೆ. ದೇಹದ ತೂಕವು ಮಿತಿಮೀರುತ್ತದೆ. ಕೈಕಾಲುಗಳಲ್ಲಿ ನಿಶಕ್ತಿ ಇರಲಿದೆ. ನಿಮ್ಮ ಮನಸ್ಸಿನಲ್ಲಿ ಆತಂಕದ ಭಾವನೆ ಮನೆ ಮಾಡಿರುತ್ತದೆ. ನಿಮ್ಮಲ್ಲಿರುವ ಬುದ್ಧಿವಂತಿಕೆಯನ್ನು ಸರಿಯಾದ ಹಾದಿಯಲ್ಲಿ ಬಳಸುವುದಿಲ್ಲ. ನಿಮ್ಮ ಮನದ ಭಾವನೆಗಳನ್ನು ಬೇರೆಯವರಿಗೆ ತಿಳಿಸುವುದಿಲ್ಲ. ಬೇರೆಯವರ ಪ್ರಭಾವಕ್ಕೆ ಒಳಗಾಗಿ ತಪ್ಪು ನಿರ್ಧಾರವನ್ನು ತೆಗೆದುಕೊಳ್ಳುವಿರಿ. ಸಭೆ ಸಮಾರಂಭಗಳಲ್ಲಿ ಮೌನವಾಗಿರುವಿರಿ. ಹಣಕಾಸಿನ ಕೊರತೆ ಕಾಣುವುದಿಲ್ಲ. ಮನಸ್ಸಿನಲ್ಲಿ ದೊಡ್ಡಮಟ್ಟದ ಆಸೆಗಳಿರುತ್ತವೆ. ಅನಾವಶ್ಯಕ ಚಿಂತೆಗಳು ನಿಮ್ಮನ್ನು ಆವರಿಸಿರುತ್ತದೆ. ಅತಿಕೋಪಿಷ್ಟರು. ಉದ್ಯೋಗದಲ್ಲಿ ಬೇರೆಯವರ ಪ್ರಭಾವವು ಅಧಿಕವಾಗಿರುತ್ತದೆ. ನಿಮ್ಮಲ್ಲಿನ ಕಾರ್ಯ ದಕ್ಷತೆಯನ್ನು ಬೇರೆಯವರು ತಿಳಿಯುವುದಿಲ್ಲ. ಆರೋಗ್ಯದಲ್ಲಿ ಏರಿಳಿತವಿರುತ್ತದೆ. ಗಣ್ಯ ವ್ಯಕ್ತಿಗಳ ಸಂಪರ್ಕವಿದ್ದರೂ ಯಾವುದೇ ಉಪಯೋಗ ಇರುವುದಿಲ್ಲ. ನಿಮ್ಮಲ್ಲಿರುವ ಪ್ರತಿಭೆಯನ್ನು ಬಳಸಿಕೊಳ್ಳುವುದಿಲ್ಲ. ಬರವಣಿಗೆಯಲ್ಲಿ ಖ್ಯಾತಿ ಗಳಿಸುವಿರಿ. ಸಹನೆ ಇದ್ದಲ್ಲಿ ಹಣಕಾಸಿನ ಅಭಿವೃದ್ದಿ ಇರುತ್ತದೆ.

ಬರಹ: ಹೆಚ್‌. ಸತೀಶ್‌, ಜ್ಯೋತಿಷಿ, ಬೆಂಗಳೂರು

(ಗಮನಿಸಿ: ಜ್ಯೋತಿಷ್ಯ ಶಾಸ್ತ್ರದ ಲೆಕ್ಕಾಚಾರಕ್ಕೆ ಹಲವು ಸೂತ್ರಗಳಿವೆ. ನಿರ್ದಿಷ್ಟ ರೀತಿಯಲ್ಲಿ ಕ್ರಮಬದ್ಧವಾಗಿ ಈ ರಾಶಿ ಭವಿಷ್ಯ ನೀಡಲಾಗಿದೆ. ಆದರೆ ಒಟ್ಟಾರೆಯಾಗಿ ಜ್ಯೋತಿಷ್ಯ ಎನ್ನುವುದು ನಂಬಿಕೆಯ ಮಾತು. ಓದುಗರ ನಂಬಿಕೆಯನ್ನು ಹಿಂದೂಸ್ತಾನ್ ಟೈಮ್ಸ್ ಕನ್ನಡ ಗೌರವಿಸುತ್ತದೆ. ಇಲ್ಲಿರುವ ಯಾವುದೇ ಶಿಫಾರಸು ಅಥವಾ ಸಲಹೆಗಳನ್ನು ಪಾಲಿಸುವುದು ಓದುಗರ ವಿವೇಚನೆ, ನಂಬಿಕೆಗೆ ಬಿಟ್ಟ ವಿಷಯವಾಗಿರುತ್ತದೆ).

ರಾಘವೇಂದ್ರ ಎಂ.ವೈ: 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದಲ್ಲಿ ಸೀನಿಯರ್ ಕಂಟೆಂಟ್ ಪ್ರೊಡ್ಯೂಸರ್. ರಾಶಿ ಭವಿಷ್ಯ (ಧರ್ಮ) ವಿಭಾಗದಲ್ಲಿ ಕಾರ್ಯನಿರ್ವಹಣೆ. ಪ್ರಜಾವಾಣಿ, ಉದಯ ನ್ಯೂಸ್, ದಿಗ್ವಿಜಯ ನ್ಯೂಸ್, ಫಸ್ಟ್ ನ್ಯೂಸ್, ಡಿಡಿ ಚಂದನ ನ್ಯೂಸ್, ಈ-ಟಿವಿ ಭಾರತದಲ್ಲಿ ಬುಲೆಟಿನ್ ಪ್ರೊಡ್ಯೂಸರ್ ಸೇರಿ ವಿವಿಧ ವಿಭಾಗಗಳಲ್ಲಿ ಒಟ್ಟು 12 ವರ್ಷ ಅನುಭವ. ಪುಸ್ತಕ, ಪತ್ರಿಕೆ ಓದುವುದು ಇಷ್ಟ. ವಾಣಿಜ್ಯ, ಕ್ರಿಕೆಟ್, ಗ್ರಾಮೀಣ ವಿದ್ಯಮಾನಗಳ ಬಗ್ಗೆ ಇಷ್ಟಪಟ್ಟು ಬರೆಯುತ್ತಾರೆ. ಕೋಲಾರ ಜಿಲ್ಲೆಯ ಮಾಲೂರು ತಾಲೂಕಿನ ಮಿರುಪನಹಳ್ಳಿ ಇವರ ಸ್ವಂತ ಊರು. ಸದ್ಯಕ್ಕೆ ಬೆಂಗಳೂರು ನಿವಾಸಿ.
ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.