ರಾಹು-ಕುಜ ಪರಸ್ಪರ ದೃಷ್ಠಿ: ಕಷ್ಟ ನಷ್ಟಗಳು ದೂರವಾಗುತ್ತೆ; ಸಿಂಹದಿಂದ ವೃಶ್ಚಿಕದವರಿಗೆ ಯಾವ ರಾಶಿಯವರಿಗೆ ಏನೆಲ್ಲಾ ಶುಭಫಲಗಳಿವೆ
ಗ್ರಹಗಳು ತಮ್ಮ ಸ್ಥಾನವನ್ನು ಬದಲಾಯಿಸುತ್ತಲೇ ಇರುತ್ತವೆ. ರಾಶಿಗಳ ಸ್ಥಾನಗಳಿಗೆ ಪ್ರವೇಶದ ವೇಳೆಯಲ್ಲಿ ಕೆಲವು ಗ್ರಹಗಳು ಮುಖಾಮುಖಿಯಾಗುತ್ತವೆ. ರಾಹು-ಕುಜ ಪರಸ್ಪರ ದೃಷ್ಠಿಯಿಂದ ಸಿಂಹ, ಕನ್ಯಾ, ತುಲಾ ಹಾಗೂ ವೃಶ್ಚಿಕ ರಾಶಿಯವರ ಶುಭಫಲಗಳು ಹೀಗಿವೆ.

ಶನಿವತ್ ರಾಹು ಕುಜವತ್ ಕೇತು ಎಂಬ ಮಾತು ಜೋತಿಷ್ಯ ಶಾಸ್ತ್ರದಲ್ಲಿದೆ. ಅಂದರೆ ರಾಹುವು ಶನಿಗ್ರಹದಂತೆ ಫಲಗಳನ್ನು ನೀಡುತ್ತದೆ. ಇದೇ ರೀತಿ ಕೇತುವು ಕುಜ ಅಥವಾ ಮಂಗಳನ ರೀತಿ ಫಲಗಳನ್ನು ನೀಡುತ್ತದೆ. ಈ ಕಾರಣದಿಂದಾಗಿ ರಾಹುವು ಕುಂಭರಾಶಿಯಲ್ಲಿ ಸಂಪೂರ್ಣ ಶಕ್ತಿಯುತನಾಗುತ್ತಾನೆ. ಆದ್ದರಿಂದ ರಾಹುವು ಕೇವಲ ಅಶುಭ ಫಲಗಳನ್ನು ನೀಡದೆ ಕೆಲವೊಂದು ವಿಚಾರದಲ್ಲಿ ಶುಭ ಫಲಗಳನ್ನು ನೀಡುತ್ತಾನೆ. ಇದರ ಬಗ್ಗೆ ಪುರಾತನ ಗ್ರಂಥಗಳಿಂದ ಮಾತ್ರ ತಿಳಿಯಲು ಸಾಧ್ಯ. ಕುಜನು ಸಿಂಹ ರಾಶಿಯನ್ನು 2025 ರ ಜೂನ್ 6 ರಂದು ಪ್ರವೇಶಿಸುತ್ತಾನೆ. ಇದೇ ರಾಶಿಯಲ್ಲಿ ಜುಲೈ ತಿಂಗಳ 28 ರವರೆಗು ಸಂಚರಿಸುತ್ತಾನೆ. ಕುಜನಿಗೆ ಸಿಂಹ ರಾಶಿಯು ಮಿತ್ರಕ್ಷೇತ್ರವಾಗುತ್ತದೆ. ಆದ್ದರಿಂದ ರಾಹು ಮತ್ತು ಕುಜರ ದೃಷ್ಠಿ ಇದ್ದರೂ ಶುಭ ಮತ್ತು ಅಶುಭಫಲಗಳು ಸಮನಾಗಿರುತ್ತವೆ. ಸಿಂಹ, ಕನ್ಯಾ, ತುಲಾ ಹಾಗೂ ವೃಶ್ಚಿಕ ರಾಶಿಯವರ ಶುಭಫಲಗಳ ವಿವರ ಇಲ್ಲಿದೆ.
ಸಿಂಹ ರಾಶಿ
ನಿರೀಕ್ಷಿಸಿದ ಮಟ್ಟದಲ್ಲಿ ಕೆಲಸ ಕಾರ್ಯಗಳು ನಡೆಯಲಾರವು. ನಿಮ್ಮ ನಂಬಿಕೆಯೆ ನಿಮ್ಮ ಜೀವನವನ್ನು ನಿರ್ಧರಿಸುತ್ತದೆ. ತಂದೆ ತಾಯಿಯ ಜೊತೆಯಲ್ಲಿ ಕೌಟುಂಬಿಕ ಭಿನ್ನಾಭಿಪ್ರಾಯ ಇರುತ್ತದೆ. ಸೋದರರ ಪ್ರೀತಿ ವಿಶ್ವಾಸ ಗಳಿಸುವಿರಿ. ಮಾಡದ ತಪ್ಪನ್ನು ಒಪ್ಪಿಕೊಳ್ಳುವಿರಿ. ಹಣದ ಕೊರತೆ ಇರಲಿದೆ. ವಾತ ಪಿತ್ತದ ತೊಂದರೆ ಇರುತ್ತದೆ. ದೇವತಾಕಾರ್ಯಗಳಲ್ಲಿ ಆಸಕ್ತಿ ಉಂಟಾಗುತ್ತದೆ. ಕುಟುಂಬದ ಹಿರಿತನವನ್ನು ಒಪ್ಪಿಕೊಳ್ಳುವುದಿಲ್ಲ. ಮನದಲ್ಲಿ ಆತಂಕದ ಭಾವನೆ ಮನೆಮಾಡಿರುತ್ತದೆ. ರಕ್ತದ ತೊಂದರೆ ಇದ್ದಲ್ಲಿ ಎಚ್ಚರಿಕೆವಹಿಸಿ. ಭೂವಿವಾದವೊಂದು ಎದುರಾಗಲಿದೆ. ಸ್ತ್ರೀಯರ ಆರೋಗ್ಯದಲ್ಲಿ ಹಿನ್ನೆಡೆ ಉಂಟಾಗುತ್ತದೆ. ಮನೆಯನ್ನು ನವೀಕರಣಗೊಳಿಸುವ ನಿರ್ಧಾರ ಮಾಡುವಿರಿ. ದೃಢಸಂಕಲ್ಪದಿಂದ ಮಾತ್ರ ಗುರಿ ತಲುಪಲು ಸಾಧ್ಯವಾಗುತ್ತದೆ. ನಿಂದನೆಯ ಮಾತುಗಳು ನಿಮ್ಮ ಆತ್ಮಶಕ್ತಿಯನ್ನು ಕುಂದಿಸುತ್ತದೆ. ಆದರೆ ಕ್ರಮೇಣವಾಗಿ ಜೀವನವು ಸರಿದಾರಿಯಲ್ಲಿ ಸಾಗುತ್ತದೆ. ಮಕ್ಕಳಿಂದ ಜೀವನದಲ್ಲಿ ಕೆಲವೊಂದು ಬದಲಾವಣೆಗಳು ಕಂಡುಬರಲಿವೆ.
ಕನ್ಯಾ ರಾಶಿ
ಒಂದೇ ಬಾರಿ ಹಲವಾರು ಕೆಲಸ ಕಾರ್ಯಗಳನ್ನು ನಿರ್ವಹಿಸಲು ಪ್ರಯತ್ನಿಸಿ ತೊಂದರೆಗೆ ಸಿಲುಕುವಿರಿ. ಅತಿಯಾದ ಆತ್ಮವಿಶ್ವಾಸ ಸಮಸ್ಯೆಗಳಿಗೆ ಕಾರಣವಾಗುತ್ತದೆ. ಸೋದರ ಸೋದರಿಯರ ಹಣಕಾಸಿನ ಸ್ಥಿತಿಯು ಉತ್ತಮಗೊಳ್ಳುತ್ತದೆ. ಎಚ್ಚರ ತಪ್ಪಿದಲ್ಲಿ ಉನ್ನತ ಅಧಿಕಾರವು ಕೈತಪ್ಪಬಹುದು. ತಾಳ್ಮೆಯಿಂದ ವರ್ತಿಸಿದಷ್ಟೂ ಜೀವನದಲ್ಲಿ ಉನ್ನತಿ ಕಾಣುವಿರಿ. ಕೋಪಬಂದರೂ ನಿಮ್ಮಿಂದ ಯಾರಿಗೂ ತೊಂದರೆ ಆಗದು. ಉಷ್ಣದ ತೊಂದರೆ ಇರಲಿದೆ. ದೂರದ ಸಂಬಂಧಿಕರ ಸಹಾಯದಿಂದ ವಿವಾಹ ನಿಶ್ಚಯವಿರುತ್ತದೆ. ಗುರು ಹಿರಿಯರ ಮಾರ್ಗದರ್ಶನದಂತೆ ನಡೆದರೆ ಕಷ್ಟ ನಷ್ಟಗಳು ದೂರವಾಗುತ್ತವೆ. ಸಾಮಾಜಿಕ ನಾಯಕತ್ವವನ್ನು ಉಳಿಸಿಕೊಳ್ಳಲು ಪ್ರಯತ್ನಿಸಿ. ತಾಯಿಯೊಂದಿಗೆ ಮನಸ್ತಾಪ ಇರುತ್ತದೆ. ಸಾಕುಪ್ರಾಣಿಗಳಿಂದ ತೊಂದರೆ ಉಂಟಾಗುವ ಸಾಧ್ಯತೆಗಳಿವೆ. ಅನ್ಯರನ್ನು ಟೀಕಿಸುವದಲ್ಲಿ ನಿರತರಾಗುವಿರಿ. ಕುಟುಂಬೇತರ ವ್ಯಕ್ತಿಗಳಿಂದ ನಿಮಗೆ ಸಹಾಯ ದೊರೆಯುತ್ತದೆ.
ತುಲಾ ರಾಶಿ
ಸಮಾಜದಲ್ಲಿ ಉನ್ನತ ಗೌರವ ಗಳಿಸುವಿರಿ. ಇದರಿಂದಾಗಿ ನಿಮ್ಮ ಕೆಲಸ ಕಾರ್ಯಗಳಿಗೆ ಪರೋಕ್ಷವಾಗಿ ಬೇರೆಯವರನ್ನು ಅವಲಂಬಿಸುವಿರಿ. ನಿಮ್ಮ ಸೋದರದ ಆರೋಗ್ಯದಲ್ಲಿ ತೊಂದರೆ ಕಂಡುಬರಲಿದೆ. ಧಾರ್ಮಿಕ ಗುರುಗಳ ಭೇಟಿಗೆ ಅವಕಾಶ ಮತ್ತು ಅನುಗ್ರಹ ದೊರೆಯುತ್ತದೆ. ಮನಸ್ಸಿನ ಕೆಲಸ ಕಾರ್ಯಗಳು ಸುಲಭವಾಗಿ ಕೈಗೊಳ್ಳುತ್ತವೆ. ಮನದಲ್ಲಿರುವ ಆತಂಕದ ಕಾರಣ ಆರಂಭದಲ್ಲಿ ಹಿನ್ನಡೆ ಉಂಟಾಗಲಿದೆ. ವಿದ್ಯಾರ್ಥಿಗಳ ಜೀವನದಲ್ಲಿ ಹೊಸ ರೀತಿಯ ಬದಲಾವಣೆಗಳು ಎದುರಾಗಲಿವೆ. ಯಾವುದೇ ಸಂದರ್ಭವನ್ನು ನಿಮಗೆ ಅನುಕೂಲವಾಗುವಂತೆ ಮಾರ್ಪಾಡು ಮಾಡಬಲ್ಲಿರಿ. ಕುಟುಂಬದ ಎಲ್ಲರ ವಿಶ್ವಾಸ ಗಳಿಸುವಿರಿ. ಹಣಕಾಸಿನ ಕೊರತೆ ಕಂಡು ಬರುವುದಿಲ್ಲ. ಸ್ವಂತ ಮನೆ ಅಥವಾ ಭೂಮಿಯನ್ನು ಖರೀದಿಸುವ ಆಸೆಯು ಆತ್ಮೀಯರ ಸಹಾಯದಿಂದ ಈಡೇರಲಿದೆ. ಗೆಲುವಿನ ಹಠ ಮತ್ತು ಛಲ ನಿಮ್ಮಲ್ಲಿರುತ್ತದೆ. ದುಡುಕಿನ ನಿರ್ಧಾರಗಳಿಂದ ಧನವ್ಯಯವಾಗುತ್ತದೆ. ಯುವಕ ಯುವತಿಯರ ಜೀವನದಲ್ಲಿ ಉತ್ತಮ ಬದಲಾವಣೆಗಳು ಕಂಡುಬರಲಿವೆ.
ವೃಶ್ಚಿಕ ರಾಶಿ
ತಂದೆಯವರಿಗೆ ಅಥವಾ ಕುಟುಂಬದ ಹಿರಿಯರಿಗೆ ಅನಾರೋಗ್ಯ ಇರುತ್ತದೆ. ಕೆಲಸ ಕಾರ್ಯಗಳು ಅನಿರೀಕ್ಷಿತ ತಿರುಗುಗಳು ಕಂಡುಬರಲಿದೆ. ನಿಮ್ಮ ಎಣಿಕೆಯಂತೆ ಯಾವುದೇ ಕೆಲಸ ಕಾರ್ಯಗಳು ನಡೆಯಲಾರವು. ಗುರು ಹಿರಿಯರ ಸಹಾಯವು ಅವಶ್ಯಕವಾಗುತ್ತದೆ. ಬೇರೆಯವರನ್ನು ಸುಲಭವಾಗಿ ನಂಬುವುದಿಲ್ಲ. ಇದರಿಂದ ಏಕಾಂಗಿಯಾಗಿ ಕೆಲಸ ಕಾರ್ಯಗಳನ್ನು ನಿರ್ವಹಿಸಬೇಕಾಗುತ್ತದೆ. ಕೆಲಸ ಕಾರ್ಯಗಳು ಅತಿ ನಿಧಾನವಾಗಿ ನಡೆಯಲಿವೆ. ಆದ್ದರಿಂದ ಎಲ್ಲರನ್ನೂ ವಿಶ್ವಾಸದಿಂದ ಕಾಣಲು ಪ್ರಯತ್ನಿಸಿ. ಪ್ರತಿಯೊಂದು ವಿಚಾರವನ್ನು ಆಳವಾಗಿ ಅಭ್ಯಾಸ ಮಾಡುವಿರಿ. ವಿದ್ಯಾರ್ಥಿಗಳಿಗೆ ಒಳ್ಳೆಯ ದಿನಗಳಾಗುತ್ತವೆ. ಹಿರಿಯರ ಸೇವೆಯನ್ನು ಮಾಡುವಿರಿ. ಎಲ್ಲವನ್ನೂ ಬಲ್ಲೆ ಎಂಬ ಭಾವನೆ ಅಧಿಕವಾಗಿರುತ್ತದೆ. ಅವಿವಾಹಿತ ಯುವತಿಯರಿಗೆ ವಿವಾಹ ನಿಶ್ಚಯವಾಗುತ್ತದೆ. ನಿಮ್ಮಲ್ಲಿರುವ ಬುದ್ದಿವಂತಿಕೆಯನ್ನು ಸರಿಯಾದ ಹಾದಿಯಲ್ಲಿ ಬಳಸಿಕೊಳ್ಳುವುದಿಲ್ಲ. ತಪ್ಪು ತೀರ್ಮಾನವನ್ನು ತೆಗೆದುಕೊಳ್ಳುವಿರಿ. ಆರೋಗ್ಯದಲ್ಲಿ ಸ್ಥಿರತೆ ಕಂಡುಬರುತ್ತದೆ. ಕೋಪ ತಾಪಗಳಿಂದ ಕುಟುಂಬದಲ್ಲಿ ಬೇಸರದ ಛಾಯೆ ಮೂಡುತ್ತದೆ.
ಬರಹ: ಹೆಚ್. ಸತೀಶ್, ಜ್ಯೋತಿಷಿ, ಬೆಂಗಳೂರು
(ಗಮನಿಸಿ: ಜ್ಯೋತಿಷ್ಯ ಶಾಸ್ತ್ರದ ಲೆಕ್ಕಾಚಾರಕ್ಕೆ ಹಲವು ಸೂತ್ರಗಳಿವೆ. ನಿರ್ದಿಷ್ಟ ರೀತಿಯಲ್ಲಿ ಕ್ರಮಬದ್ಧವಾಗಿ ಈ ರಾಶಿ ಭವಿಷ್ಯ ನೀಡಲಾಗಿದೆ. ಆದರೆ ಒಟ್ಟಾರೆಯಾಗಿ ಜ್ಯೋತಿಷ್ಯ ಎನ್ನುವುದು ನಂಬಿಕೆಯ ಮಾತು. ಓದುಗರ ನಂಬಿಕೆಯನ್ನು ಹಿಂದೂಸ್ತಾನ್ ಟೈಮ್ಸ್ ಕನ್ನಡ ಗೌರವಿಸುತ್ತದೆ. ಇಲ್ಲಿರುವ ಯಾವುದೇ ಶಿಫಾರಸು ಅಥವಾ ಸಲಹೆಗಳನ್ನು ಪಾಲಿಸುವುದು ಓದುಗರ ವಿವೇಚನೆ, ನಂಬಿಕೆಗೆ ಬಿಟ್ಟ ವಿಷಯವಾಗಿರುತ್ತದೆ).