ಕುಂಭ ರಾಶಿಯಲ್ಲಿ ಶನಿ, ಬುಧ ಸಂಯೋಗ: ಉತ್ತಮ ಆದಾಯವಿರುತ್ತೆ, ಮೇಷದಿಂದ ಕಟಕ ರಾಶಿಯವರಿಗೆ ಏನೆಲ್ಲಾ ಶುಭಫಲಗಳಿವೆ
ಕುಂಭ ರಾಶಿಯಲ್ಲಿ ಶನಿ ಮತ್ತು ಬುಧನ ಸಂಯೋಗವು 12 ರಾಶಿಯವರ ಮೇಲೆ ಪರಿಣಾಮ ಬೀರುತ್ತದೆ. ಕೆಲವು ರಾಶಿಯವರಿಗೆ ಶುಭಫಲಗಳಿವೆ. ಮೇಷ, ವೃಷಭ, ಮಿಥುನ ಹಾಗೂ ಕಟಕ ರಾಶಿಯವರಿಗೆ ಏನೆಲ್ಲಾ ಲಾಭಗಳಿವೆ ನೋಡಿ.

ಇಂದು (ಫೆಬ್ರವರಿ 11, ಮಂಗಳವಾರ ಬುಧ ಗ್ರಹವು ಕುಂಭರಾಶಿಯನ್ನು ಪ್ರವೇಶಿಸಿ, ಇದೇ ತಿಂಗಳ 27ರವರೆಗು ಶನಿಗ್ರಹದೊಂದಿಗೆ ಸಂಚರಿಸುತ್ತಾನೆ. ಶನಿ ಮತ್ತು ಬುಧ ಗ್ರಹಗಳು ಪರಸ್ಪರ ಮಿತ್ರರಾಗುತ್ತಾರೆ. ಶನಿಯು ಮೂಲ ತ್ರಿಕೋಣದಲ್ಲಿದ್ದರೆ, ಬುಧನಿಗೆ ಕುಂಭವು ಮಿತ್ರ ಕ್ಷೇತ್ರವಾಗುತ್ತದೆ. ಇದರಿಂದ ಪ್ರತಿಯೊಂದು ರಾಶಿಗಳಿಗೆ ವಿಭಿನ್ನವಾದ ಫಲಗಳು ದೊರೆಯುತ್ತವೆ. ಬಹುತೇಕ ಶುಭಫಲಗಳು ದೊರೆಯುತ್ತವೆ. ಕುಂಭ ರಾಶಿಯಲ್ಲಿ ಶನಿ ಮತ್ತು ಬುಧನ ಸಂಯೋಗವು ಮೇಷ, ವೃಷಭ, ಮಿಥುನ ಹಾಗೂ ಕಟಕ ರಾಶಿಯವರಿಗೆ ಇರುವ ಪ್ರಯೋಜನಗಳನ್ನು ತಿಳಿಯೋಣ.
ಮೇಷ ರಾಶಿ
ಸೋದರ ಅಥವಾ ಸೋದರಮಾವನ ಜೊತೆಯಲ್ಲಿ ಪಾಲುಗಾರಿಕೆಯ ವ್ಯಾಪಾರ ಆರಂಭಿಸುವ ಸಾಧ್ಯತೆ ಇರುತ್ತದೆ. ಮನೆತನದಿಂದ ಬಂದ ವೃತ್ತಿಯನ್ನು ಮುಂದುವರೆಸುವಿರಿ. ವ್ಯಾಪಾರ ವ್ಯವಹಾರಗಳಲ್ಲಿ ನಿಮ್ಮಲ್ಲಿರುವ ಆತ್ಮಸ್ಥೈರ್ಯವನ್ನು ಕಡಿಮೆ ಮಾಡುವ ಪ್ರಯತ್ನ ನಡೆಯುತ್ತದೆ. ಆತಂಕದ ಪರಿಸ್ಥಿತಿಯಲ್ಲಿಯೂ ಬುದ್ಧಿವಂತಿಕೆಯ ನಿರ್ಧಾರವನ್ನು ತೆಗೆದುಕೊಳ್ಳುವಿರಿ. ಉತ್ತಮ ಪ್ರಯತ್ನವಿದ್ದರೂ ಆದಾಯದಲ್ಲಿ ಕೊರತೆ ಕಂಡು ಬರುತ್ತದೆ. ಆದರೆ ಯಾವುದೇ ತೊಂದರೆ ಎದುರಾಗುವುದಿಲ್ಲ. ಕಬ್ಬಿಣ ಅಥವಾ ಇತರೆ ಲೋಹಕ್ಕೆ ಸಂಬಂಧಿಸಿದ ವ್ಯಾಪಾರ ವ್ಯವಹಾರಗಳಲ್ಲಿ ಲಾಭ ಗಳಿಸುವಿರಿ. ಉದ್ಯೋಗದಲ್ಲಿ ಯಾವುದೇ ತೊಂದರೆ ಕಂಡುಬರುವುದಿಲ್ಲ. ಹಿರಿಯ ಅಧಿಕಾರಿಗಳು ಸಮಯಕ್ಕೆ ತಕ್ಕಂತಹ ಸಲಹೆಯನ್ನು ನೀಡುತ್ತಾರೆ.
ಯಾವುದೇ ಕೆಲಸವನ್ನು ಆರಂಭಿಸಿದರು ನಿರೀಕ್ಷಿಸಿದ ಫಲಿತಾಂಶ ದೊರೆಯುತ್ತದೆ. ಕುಟುಂಬದ ಹಿರಿಯರ ಕೈಕಾಲುಗಳಲ್ಲಿ ಶಕ್ತಿ ಕಡಿಮೆಯಾಗುತ್ತದೆ. ಆರೋಗ್ಯದಲ್ಲಿ ಯಾವುದೇ ತೊಂದರೆ ಇರುವುದಿಲ್ಲ. ಎಡಗೈನ ತೋಳಿಗೆ ಪೆಟ್ಟಾಗಬಹುದು ಎಚ್ಚರಿಕೆ ಇರಲಿ. ಮನದ ಬೇಸರವನ್ನು ಮರೆತು ಸುಖ ಶಾಂತಿ ನೆಮ್ಮದಿಯಿಂದ ಬಾಳುವಿರಿ. ಆರಂಭಿಸಿದ ಕೆಲಸ ಕಾರ್ಯಗಳಲ್ಲಿ ಯಶಸ್ಸು ಗಳಿಸಲು ಹೆಚ್ಚಿನ ಪ್ರಯತ್ನ ಮಾಡುವಿರಿ. ಬುದ್ಧಿವಂತಿಕೆಯ ಮಾತುಕತೆ ನಿಮ್ಮನ್ನು ಕಷ್ಟದಿಂದ ಪಾರು ಮಾಡುತ್ತದೆ. ಉತ್ತಮ ಅವಕಾಶ ದೊರೆಯುವ ಕಾರಣ ಉದ್ಯೋಗವನ್ನು ಬದಲಿಸಬಹುದು.
ವೃಷಭ ರಾಶಿ
ಹಣಕಾಸಿನ ವಿಚಾರದಲ್ಲಿ ಸ್ವತಂತ್ರವಾದ ನಿರ್ಧಾರವನ್ನು ತೆಗೆದುಕೊಳ್ಳುವಿರಿ. ಯಾವುದೇ ವಿಚಾರದಲ್ಲಿಯೂ ಬೇರೆಯವರನ್ನು ಅವಲಂಬಿಸುವುದಿಲ್ಲ. ಉತ್ತಮ ಆದಾಯವಿರುತ್ತದೆ. ವಿದ್ಯಾರ್ಥಿಗಳು ಕಲಿಕೆಯಲ್ಲಿ ವಿಶೇಷ ಸಾಧನೆ ಮಾಡುತ್ತಾರೆ. ಹೆಚ್ಚಿನ ಪ್ರಯತ್ನ ಪಟ್ಟಲ್ಲಿ ಉನ್ನತ ವಿದ್ಯಾಭ್ಯಾಸಕ್ಕಾಗಿ ವಿದೇಶಕ್ಕೆ ತೆರಳಬಹುದು. ಧಾರ್ಮಿಕ ಕೆಲಸ ಕಾರ್ಯಗಳಲ್ಲಿ ಆಸಕ್ತಿ ಮೂಡುತ್ತದೆ. ಯಾತ್ರಾ ಸ್ಥಳಕ್ಕೆ ಭೇಟಿ ನೀಡುವಿರಿ. ಸಾರಿಗೆ ವ್ಯವಸ್ಥೆಯನ್ನು ಕಲ್ಪಿಸುವ ವೃತ್ತಿಯಲ್ಲಿ ಲಾಭವಿದೆ. ಬರವಣಿಗೆಯಲ್ಲಿ ವಿಶೇಷ ಪ್ರಗತಿ ಕಂಡು ಬರುತ್ತದೆ. ಆತಂಕದ ಪರಿಸ್ಥಿತಿಯಲ್ಲಿ ಬುದ್ಧಿವಂತಿಕೆಯ ತೀರ್ಮಾನಗಳನ್ನು ತೆಗೆದುಕೊಳ್ಳುವಿರಿ.
ನವವಿವಾಹಿತರಿಗೆ ಸಂತಾನ ಲಾಭವಿದೆ. ಕುಟುಂಬದಲ್ಲಿನ ಸಾಮರಸ್ಯವು ಕಡಿಮೆಯಾಗುವ ಸಾಧ್ಯತೆ ಇದೆ. ಸೋದರಿಯ ಜೊತೆಯಲ್ಲಿ ಹಣಕಾಸಿನ ವಿಚಾರವಾಗಿ ವಾದ ವಿವಾದ ಕಂಡು ಬರುತ್ತದೆ. ಸಂಧಾನದಿಂದ ಎಲ್ಲರೊಂದಿಗೆ ಪ್ರೀತಿ ವಿಶ್ವಾಸ ಬೆಳೆಸುವಿರಿ. ಏಕಾಂಗಿಯಾಗಿ ಯಾವುದೇ ರೀತಿಯ ತೀರ್ಮಾನವನ್ನು ತೆಗೆದುಕೊಳ್ಳುವಿರಿ. ಅನಿರೀಕ್ಷಿತ ಧನಲಾಭವಿರುತ್ತದೆ. ಉಪವೃತ್ತಿಯನ್ನು ಆರಂಭಿಸಿ ಹಣಕಾಸಿನ ಕೊರತೆಯಿಂದ ಪಾರಾಗುವಿರಿ. ಮಕ್ಕಳ ಜೀವನದಲ್ಲಿ ವಿಶೇಷ ಘಟನೆಯಿಂದು ನಡೆಯಲಿದೆ. ಗುರು ಹಿರಿಯರ ಭೇಟಿ ಮಾಡಲು ಸಾಧ್ಯವಾಗುತ್ತದೆ.
ಮಿಥುನ ರಾಶಿ
ದಂಪತಿ ನಡುವೆ ಉತ್ತಮ ಆತ್ಮೀಯತೆ ಬೆಳೆಯುತ್ತದೆ. ಸಂಗಾತಿಗೆ ಸಮಾಜದಲ್ಲಿ ವಿಶೇಷವಾದ ಗೌರವ ಲಭಿಸುತ್ತದೆ. ಧಾರ್ಮಿಕ ಕೆಲಸ ಕಾರ್ಯಗಳು ಪಾಲ್ಗೊಳ್ಳುವಿರಿ. ಗೃಹಿಣಿಯರು ಯಾವುದೇ ಕೆಲಸ ಕಾರ್ಯಗಳಲ್ಲಿ ಪ್ರಾವೀಣ್ಯತೆಯಿಂದ ಪಾಲ್ಗೊಳ್ಳುತ್ತಾರೆ. ಕುಟುಂಬದಲ್ಲಿ ಪರಸ್ಪರ ಸ್ನೇಹಮಯ ವ್ಯಕ್ತಿತ್ವ ಮೂಡುತ್ತದೆ. ಹೊಸ ಮನೆ ಅಥವಾ ಜಮೀನನ್ನು ಕೊಳ್ಳುವ ಸೂಚನೆಗಳಿವೆ. ಪಾಲುಗಾರಿಕೆಯ ವ್ಯಾಪಾರ ವ್ಯವಹಾರಗಳಲ್ಲಿ ಉತ್ತಮ ವರಮಾನವಿರುತ್ತದೆ. ಕಷ್ಟಕರ ಕೆಲಸ ಕಾರ್ಯಗಳಿಂದ ದೂರ ಉಳಿಯುವಿರಿ. ನಿಮ್ಮ ಮನಸ್ಸನ್ನು ಸುಲಭವಾಗಿ ಅರ್ಥ ಮಾಡಿಕೊಳ್ಳುವುದು ಸಾಧ್ಯವಿಲ್ಲ.
ಹಣ ಗಳಿಕೆಯ ಬಗ್ಗೆ ವಿಶೇಷ ಗಮನ ತೋರುವಿರಿ. ಬಾಳ ಸಂಗಾತಿಯ ಆರೋಗ್ಯದಲ್ಲಿ ಏಳುಬೀಳು ಸಹಜವಾಗಿರುತ್ತದೆ. ಪತ್ನಿಯ ಸಂಬಂಧಿಕರಿಂದ ಸಹಾಯ ದೊರೆಯುತ್ತದೆ. ಸಂಗಾತಿಯ ಆರೋಗ್ಯದಲ್ಲಿ ತೊಂದರೆ ಇರುತ್ತದೆ. ನಿಮ್ಮ ಮಕ್ಕಳು ಮತ್ತು ನಿಮ್ಮ ತಂದೆಯ ನಡುವೆ ಉತ್ತಮ ಬಾಂಧವ್ಯ ಬೆಳೆಯುತ್ತದೆ. ಇಲಾಖೆಗೆ ಸಂಬಂಧಿಸಿದ ಪರೀಕ್ಷೆಗಳಲ್ಲಿ ಯಶಸ್ಸನ್ನು ಗಳಿಸುವಿರಿ. ಒಮ್ಮೆ ತೆಗೆದುಕೊಂಡು ತೀರ್ಮಾನವನ್ನು ಉಳಿಸಿಕೊಳ್ಳಲು ಸಾಧ್ಯವಾಗುವುದಿಲ್ಲ. ಉದ್ಯೋಗದಲ್ಲಿ ಅನಾವಶ್ಯಕವಾದ ವಿಚಾರಗಳಿಗೆ ಮನಸ್ತಾಪ ಉಂಟಾಗುತ್ತದೆ.
ಕಟಕ ರಾಶಿ
ಸ್ಥಿರವಾದ ಮನಸ್ಸು ಇರುವುದಿಲ್ಲ. ವಿದ್ಯಾರ್ಥಿಗಳು ಸಹಪಾಠಿಗಳ ಜೊತೆಯಲ್ಲಿ ಕಲಿಕೆಯನ್ನು ಮುಂದುವರೆಸುತ್ತಾರೆ. ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಹೆಚ್ಚಿನ ಹಣದ ಅವಶ್ಯಕತೆ ಇರುತ್ತದೆ. ಆಡುವ ಮಾತಿನ ಮೇಲೆ ಹಿಡಿತವಿರುವುದು ಒಳ್ಳೆಯದು. ಅನಾವಶ್ಯಕವಾದ ವಿವಾದಗಳು ಬೇಸರ ಮೂಡಿಸುತ್ತದೆ. ಸಭೆ ಸಮಾರಂಭಗಳಿಂದ ದೂರ ಉಳಿಯುವಿರಿ. ಕಷ್ಟ ನಷ್ಟಗಳಿಗೆ ಬೆದರುವುದಿಲ್ಲ. ಸಮಯ ಸಂದರ್ಭಕ್ಕೆ ಹೊಂದಿಕೊಂಡು ನಡೆದುಕೊಳ್ಳಬಲ್ಲಿರಿ. ನಿಮ್ಮಲ್ಲಿರುವ ಬುದ್ದಿವಂತಿಕೆ ಸಮಾಜದಲ್ಲಿಉನ್ನತ ಸ್ಥಾನ ದೊರೆಯಲು ಕಾರಣವಾಗುತ್ತದೆ. ಮುಂಗೋಪಿಗಳಾಗುವಿರಿ. ವ್ಯಾಪಾರ ವ್ಯವಹಾರಗಳಲ್ಲಿ ಆಸಕ್ತಿ ತೋರುವುದಿಲ್ಲ. ಆದಾಯಕ್ಕಿಂತಲೂ ಖರ್ಚು ವೆಚ್ಚಗಳು ಅಧಿಕವಾಗಿರುತ್ತದೆ. ಕೆಲಸ ಕಾರ್ಯಗಳು ನಿಧಾನ ಗತಿಯಲ್ಲಿ ಪೂರ್ಣಗೊಳ್ಳುತ್ತವೆ. ದಂಪತಿಗಳ ನಡುವೆ ಅನಾವಶ್ಯಕವಾದ ವಿವಾದಗಳು ಎದುರಾಗಲಿವೆ.
ನೇರ ನಿಷ್ಟೂರದ ಮಾತುಕತೆಯಿಂದ ವಿರೋಧಿಗಳನ್ನು ಹೆಚ್ಚುವ ಸಾಧ್ಯತೆ ಇದೆ. ಮಹಿಳೆಯರು ತೆಗೆದುಕೊಳ್ಳುವ ತಪ್ಪಾದ ನಿರ್ಧಾರಗಳು ಬೇಸರಕ್ಕೆ ಕಾರಣವಾಗುತ್ತದೆ. ಪುಟ್ಟ ಮಕ್ಕಳ ಆರೋಗ್ಯದಲ್ಲಿ ಏರಿಳಿತ ಕಂಡು ಬರಬಹುದು. ವಿದೇಶಿ ಭಾಷೆಯನ್ನು ಕಲಿಯುವ ಆಸೆಯು ಈಡೇರುತ್ತದೆ. ಕಣ್ಣುಗಳಲ್ಲಿ ತೊಂದರೆ ಕಂಡು ಬರಲಿದೆ. ನಿಮ್ಮ ಮನಸ್ಸಿನಲ್ಲಿ ಇರುವ ವಿಚಾರವನ್ನು ಎಲ್ಲರೊಂದಿಗೆ ಹಂಚಿಕೊಳ್ಳುವಿರಿ. ಹಣಕಾಸಿನ ವಿಚಾರದಲ್ಲಿ ದೃಢವಾದ ನಿರ್ಧಾರವನ್ನು ತೆಗೆದುಕೊಳ್ಳುವಿರಿ. ನರದ ಸಮಸ್ಯೆ ಇರುವವರು ಎಚ್ಚರಿಕೆಯಿಂದ ಇರುವುದು ಒಳ್ಳೆಯದು. ಆತ್ಮೀಯರ ಸಹಾಯ ದೊರೆಯುತ್ತದೆ. ಅನಿವಾರ್ಯದ ಪರಿಸ್ಥಿತಿಯಿಂದ ಉದ್ಯೋಗವನ್ನು ಬದಲಿಸುವಿರಿ. ಹೊಸ ವಾಹನವನ್ನು ಕೊಳ್ಳುವ ಸಾಧ್ಯತೆಗಳಿವೆ.
(ಗಮನಿಸಿ: ಜ್ಯೋತಿಷ್ಯ ಶಾಸ್ತ್ರದ ಲೆಕ್ಕಾಚಾರಕ್ಕೆ ಹಲವು ಸೂತ್ರಗಳಿವೆ. ನಿರ್ದಿಷ್ಟ ರೀತಿಯಲ್ಲಿ ಕ್ರಮಬದ್ಧವಾಗಿ ಈ ಭವಿಷ್ಯ ನೀಡಲಾಗಿದೆ. ಆದರೆ ಒಟ್ಟಾರೆಯಾಗಿ ಜ್ಯೋತಿಷ್ಯ ಎನ್ನುವುದು ನಂಬಿಕೆಯ ಮಾತು. ಓದುಗರ ನಂಬಿಕೆಯನ್ನು ‘ಹಿಂದೂಸ್ತಾನ್ ಟೈಮ್ಸ್ ಕನ್ನಡ’ ಗೌರವಿಸುತ್ತದೆ. ಇಲ್ಲಿರುವ ಯಾವುದೇ ಶಿಫಾರಸು ಅಥವಾ ಸಲಹೆಗಳನ್ನು ಪಾಲಿಸುವುದು ಓದುಗರ ವಿವೇಚನೆ, ನಂಬಿಕೆಗೆ ಬಿಟ್ಟ ವಿಷಯವಾಗಿರುತ್ತದೆ)
ಬರಹ: ಹೆಚ್. ಸತೀಶ್, ಜ್ಯೋತಿಷಿ, ಬೆಂಗಳೂರು
ಮೊಬೈಲ್: 8546865832
