ಶನಿ ಬೆಂಬಿಡದೆ ಕಾಡುತ್ತಿದ್ದಾನಾ; ರಾಶಿಗಳಿಗೆ ಅನುಗುಣವಾಗಿ ಲಾಲ್ ಕಿತಾಬ್ ಪರಿಹಾರಗಳಿವು, ಶುಭಫಲಗಳು ನಿಮ್ಮದಾಗುತ್ತವೆ
ಶನಿ ನೀತಿವಂತನು. ಮಾಡಿದ ಕೆಲಸಕ್ಕೆ ದುಪ್ಪಟ್ಟು ಪ್ರತಿಫಲವನ್ನು ಹಿಂದಿರುಗಿಸುತ್ತಾನೆ ಎಂಬ ನಂಬಿಕೆ ಇದೆ. ಶನಿ ದೋಷ ಇರುವವರಿಗೆ ರಾಶಿಗೆ ಅನುಗುಣವಾಗಿ ಲಾಲ್ ಕಿತಾಬ್ ಪರಿಹಾರಗಳು ಇಲ್ಲಿವೆ.

Lal Kitab Remedies: ಜೋತಿಷ್ಯದಲ್ಲಿ ಲಾಲ್ ಕಿತಾಬ್ ಸಹ ಒಂದು. ಪ್ರತಿಯೊಂದು ರೋಗಕ್ಕೂ ಔಷಧಿ ಇರುವಂತೆ ಜೀವನದಲ್ಲಿ ಎದುರಾಗುವ ಕಷ್ಟ ನಷ್ಟಗಳಿಗೆ ಸಹ ಪರಿಪಕ್ವ ಪರಿಹಾರಗಳಿವೆ. ವೇದ ಜೋತಿಷ್ಯ, ಸಂಖ್ಯಾ ಜೋತಿಷ್ಯ, ಪ್ರಶ್ನ ಜೋತಿಷ್ಯ, ಕವಡೆ ಜೋತಿಷ್ಯ ಇನ್ನು ಮುಂತಾದವುಗಳು. ಇದೇ ರೀತಿ ನಮಗೆ ದೊರೆತ ವಿದೇಶಿ ಜ್ಞಾನ ಭಂಡಾರವೆ ಲಾಲ್ ಕಿತಾಬ್. ಕೆಲವರ ಅನಿಸಿಕೆಯಂತೆ ಇದು ಪರ್ಷಿಯ ದೇಶದ ಕೊಡುಗೆ. ಆದರೆ ಇದು ನಮಗೆ ಉರ್ದು ಮತ್ತು ಹಿಂದಿ ಭಾಷೆಗಳಲ್ಲಿ ದೊರೆಯುತ್ತವೆ. ಕೆಲವರ ಅಭಿಪ್ರಾಯದಂತೆ ಇದನ್ನು ರಚಿಸಿರುವವನು ಶ್ರೀರಾಮನಿಗೆ ಯುದ್ದದ ಮುಹೂರ್ತವನ್ನು ನೀಡಿದ ರಾವಣ ಎಂದು ತಿಳಿದುಬರುತ್ತದೆ. ಇದರಲ್ಲಿ ಲಿಂಗಬೇಧವಿಲ್ಲದೆ, ಜಾತಿಬೇಧವಿಲ್ಲದೆ, ಧರ್ಮ ಬೇಧವಿಲ್ಲದೆ ಮಾಡಬಹುದಾದ ಸುಲಭವಾದ ಪರಿಹಾರಗಳು ನಮಗೆ ದೊರೆಯುತ್ತವೆ. ಇದರಲ್ಲಿ ಹಸ್ತದಲ್ಲಿರುವ ರೇಖೆಗಳನ್ನು ಪರಿಶೀಲಿಸಿ ಜಾತಕ ರಚಿಸುವ ವಿಧಾನವನ್ನು ವಿವರಿಸಿದ್ದಾರೆ. ಜನ್ಮರಾಶಿಯ ಅನುಸಾರವಾಗಿ ಶನಿಗೆ ಸಂಬಂಧಿಸಿದ ಕೆಲವು ಸುಲಭ ಪರಿಹಾರಗಳನ್ನು ಇಲ್ಲಿ ನೀಡಲಾಗಿದೆ.
ಮೇಷ ರಾಶಿ
- ಮನೆಯ ಕೊನೆಯ ಗೋಡೆಗೆ ಸಂಬಂಧಿಸಿದ ಕಿಟಕಿಯನ್ನು ಮುಚ್ಚಬೇಕು.
- ಸುಳ್ಳನ್ನು ಹೇಳದೆ ನೇರವಾದ ಮಾತನಾಡುವುದನ್ನು ಅಭ್ಯಾಸ ಮಾಡಿಕೊಳ್ಳಿ
- ನಿಮ್ಮ ಆದಾಯದ ಅಲ್ಪ ಭಾಗವನ್ನಾದರೂ ಬಡರೋಗಿಗಳಿಗೆ ದಾನ ಮಾಡಿ
ವೃಷಭ ರಾಶಿ
- ಹಳದಿ ಬಣ್ಣದ ವಸ್ತ್ರಗಳನ್ನು ಆತ್ಮೀಯರಿಗೆ ಉಡುಗೊರೆಯಾಗಿ ನೀಡಿ
- ಧಾರ್ಮಿಕ ಕೇಂದ್ರಕ್ಕೆ ಕಡಲೆಬೇಳೆ ಅಥವಾ ಕಡಲೆ ಕಾಳು ನೀಡಿರಿ
- ಮನೆಯಲ್ಲಿ ಚಿಕ್ಕ ಇಟ್ಟಿಗೆ ಆಕಾರದ ಬೆಳ್ಳಿಯ ವಸ್ತುವನ್ನು ಇಡಿ
ಮಿಥುನ ರಾಶಿ
- ಹಳದಿ ಬಣ್ಣದ ಬಟ್ಟೆಗಳನ್ನು ಧರಿಸಬೇಡಿ
- ಕಣ್ಣಿನ ದೋಷ ಇದ್ದವರಿಗೆ ಸಹಾಯ ಮಾಡಿ
ಕಟಕ ರಾಶಿ
- ಗಂಗಾ ನದಿ ಅಥವಾ ಬೇರಾವುದೆ ನದಿಯಲ್ಲಿ ಸ್ನಾನವನ್ನು ಮಾಡಿ
- ಶಾಸ್ತ್ರ ಸಂಪ್ರದಾಯಗಳನ್ನು ಪಾಲಿಸಬೇಕು
- ಕೆಲಸಕ್ಕೆ ಬಾರದ ವಸ್ತುಗಳನ್ನು ಮನೆಯಲ್ಲಿ ಇಡಬೇಡಿ
ಸಿಂಹ ರಾಶಿ
- ಬೆಳ್ಳಿಯ ಉಂಗುರ ಅಥವಾ ಸರವನ್ನು ಧರಿಸಿ
- ಪುಟ್ಟ ಮಕ್ಕಳಿಗೆ ಕುಡಿಯಲು ಹಾಲು ನೀಡಿ
- ಧಾರ್ಮಿಕ ಕೇಂದ್ರಕ್ಕೆ ಉದ್ದಿನ ಬೇಳೆ ದಾನಮಾಡಿ
ಕನ್ಯಾ ರಾಶಿ
- ಶ್ರೀ ಹನುಮಂತನ ಪೂಜೆಯನ್ನು ಮಾಡಿ
- ಕಪ್ಪು ಹಸುವಿಗೆ ಆಹಾರವನ್ನು ನೀಡಿ
ತುಲಾ ರಾಶಿ
- ಹೊಸ ಚರ್ಮ ಅಥವಾ ಕಬ್ಬಿಣದ ವಸ್ತುಗಳನ್ನು ಖರೀದಿಸಬೇಡಿ
- ಕಪ್ಪು ನಾಯಿಗೆ ಆಹಾರ ನೀಡಿ ಮುಖ್ಯವಾಗಿ ಹಾಲು ನೀಡಿರಿ
ವೃಶ್ಚಿಕ ರಾಶಿ
- ಚಿನ್ನದ ಉಂಗುರವನ್ನು ಧರಿಸಿ
- ವ್ಯವಸಾಯ ಮಾಡಿ, ಇಲ್ಲವಾದಲ್ಲಿ ಹಸಿರು ಗಿಡಗಳಿಗೆ ನೀರನ್ನು ಹಾಕಿರಿ
- ಯಾವುದೆ ಬಣ್ಣದ ನಾಯಿಗೆ ಆಹಾರ ನೀಡಿ
ಧನು ರಾಶಿ
- ಬಾಳ ಸಂಗಾತಿಯ ಜೊತೆ ಜಗಳವಾಡದಿರಿ. ಅವರನ್ನು ಪ್ರೀತಿಯಿಂದ ನೋಡಿಕೊಳ್ಳಿರಿ.
- ಕಪ್ಪು ಹಸುವಿಗೆ ಆಹಾರ ನೀಡಿರಿ
ಮಕರ ರಾಶಿ
- ಶಾಸ್ತ್ರೀಯ ಸಂಗೀತ ಕಲಿಯಿರಿ ಅಥವಾ ಕೇಳಿರಿ
- ಧಾರ್ಮಿಕ ಕೇಂದ್ರಕ್ಕೆ ಮೊಸರು ಮತ್ತು ಬೆಣ್ಣೆ ದಾನ ಮಾಡಿ
- ಕಣ್ಣಿನ ತೊಂದರೆ ಇರುವವರಿಗೆ ಹಣದ ಸಹಾಯ ಮಾಡಿ
ಕುಂಭ ರಾಶಿ
- ಕೋತಿಗಳಿಗೆ ಆಹಾರ ನೀಡಿ
- ಮನೆಯಲ್ಲಿ ಸಾಕಿದ ಪ್ರಾಣಿಗಳನ್ನು ಪ್ರೀತಿಯಿಂದ ಕಾಣಬೇಕು
- ಬೇರೆಯವರ ಹಣ ಅಥವಾ ಸ್ಥಾನಮಾನವನ್ನು ಪಡೆಯದಿರಿ
- ಬಿಳಿ ಹಸುವಿನ ಸೇವೆ ಮಾಡಿರಿ ಕನಿಷ್ಠಪಕ್ಷ ಆಹಾರವನ್ನು ನೀಡಿ
ಮೀನ ರಾಶಿ
- ಬರಿ ಹಣೆಯಲ್ಲಿ ಇರಬೇಡಿ
- ಪುಟ್ಟ ಮಕ್ಕಳಿಗೆ ಕುಡಿಯಲು ಹಾಲು ನೀಡಿ
- ಕಬ್ಬಿಣದ ಪದಾರ್ಥಗಳನ್ನು ದಾನ ನೀಡಿ
ಕೆಲವರಿಗೆ ಅವರ ಜನ್ಮರಾಶಿ ತಿಳಿದಿರುವುದಿಲ್ಲ. ಅಂತಹವರು ತಮ್ಮ ಹಿರಿಯ ಅಣ್ಣ ಅಥವಾ ಸೋದರಿಗೆ ಸಹಾಯ ಮಾಡಬೇಕು. ನೀವು ಅಧಿಕಾರಿಗಳಾದಲ್ಲಿ ಸಹೋದ್ಯೋಗಿಗಳನ್ನು ಪ್ರಿತಿ ವಿಶ್ವಾಸದಿಂದ ಕಾಣಿರಿ. ದಿನ ನಿತ್ಯ ಬಳಸುವ ವಾಹನವನ್ನು ಶುಚಿಯಾಗಿರಿಸಿ. ಇದರಿಂದ ಶನಿಯಿಂದ ಉಂಟಾಗುವ ಸಮಸ್ಯೆಗಳು ಕಡಿಮೆಯಾಗುತ್ತದೆ. ಆಂಜನೇಯ ದೇವರ ಪೂಜೆಯನ್ನು ಮಾಡಬಹುದು. ಶನಿವಾರ ಮತ್ತು ಪುಷ್ಯ, ಅನೂರಾಧ ಮತ್ತು ಉತ್ತರಾಭಾದ್ರ ನಕ್ಷತ್ರ ಇರುವ ದಿನ ರವೆಯಿಂದ ಮಾಡಿದ ಸಜ್ಜಿಗೆಯನ್ನು ನಿಮ್ಮ ಮನೆಯ ಸುತ್ತಮುತ್ತಲಿನ ಮಕ್ಕಳಿಗೆ ನೀಡಿರಿ. ಇದರಿಂದ ಶನಿಯಿಂದ ಉಂಟಾಗುವ ತೊಂದರೆಗಳು ಕಡಿಮೆ ಆಗುತ್ತದೆ.
(ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ ಹಿಂದೂಸ್ತಾನ್ ಟೈಮ್ಸ್ ಕನ್ನಡ ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ)
