ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  ಜೂನ್‌ 30 ರಿಂದ ಶನಿ ವಕ್ರಿ ಆರಂಭ; ಮಿಥುನ ಸೇರಿ ಈ 5 ರಾಶಿಗಳಿಗೆ ಮಾತು, ಹಣಕಾಸಿನ ವಿಚಾರದಲ್ಲಿ ಎಚ್ಚರಿಕೆ ಅಗತ್ಯ

ಜೂನ್‌ 30 ರಿಂದ ಶನಿ ವಕ್ರಿ ಆರಂಭ; ಮಿಥುನ ಸೇರಿ ಈ 5 ರಾಶಿಗಳಿಗೆ ಮಾತು, ಹಣಕಾಸಿನ ವಿಚಾರದಲ್ಲಿ ಎಚ್ಚರಿಕೆ ಅಗತ್ಯ

ಶನಿಯು ಸದ್ಯಕ್ಕೆ ಕುಂಭ ರಾಶಿಯಲ್ಲಿ ನೆಲೆಸಿದ್ದಾನೆ. ಆದರೆ ಜೂನ್‌ 30 ರಿಂದ ಹಿಮ್ಮುಖವಾಗಿ ಚಲನೆ ಆರಂಭಿಸಲಿದ್ದಾನೆ. ಇದರ ಪರಿಣಾಮ ನವೆಂಬರ್‌ 14ವರೆಗೂ ಕೆಲವೊಂದು ರಾಶಿಗಳು ಬಹಳ ಮುನ್ನೆಚರಿಕೆ ವಹಿಸಬೇಕು. ಈ ರಾಶಿಯವರು ಹಣಕಾಸು, ಆರೋಗ್ಯದ ವಿಚಾರದಲ್ಲಿ ಜಾಗ್ರತೆ ವಹಿಸಬೇಕು.

ಜೂನ್‌ 30 ರಿಂದ ಶನಿ ವಕ್ರಿ ಆರಂಭ; ಮಿಥುನ ಸೇರಿ ಈ 5 ರಾಶಿಗಳಿಗೆ ಮಾತು, ಹಣಕಾಸಿನ ವಿಚಾರದಲ್ಲಿ ಎಚ್ಚರಿಕೆ ಅಗತ್ಯ
ಜೂನ್‌ 30 ರಿಂದ ಶನಿ ವಕ್ರಿ ಆರಂಭ; ಮಿಥುನ ಸೇರಿ ಈ 5 ರಾಶಿಗಳಿಗೆ ಮಾತು, ಹಣಕಾಸಿನ ವಿಚಾರದಲ್ಲಿ ಎಚ್ಚರಿಕೆ ಅಗತ್ಯ

ಜೂನ್ ತಿಂಗಳ 30ರಂದು ಶನಿಯು ವಕ್ರಿಯಾಗುತ್ತಾನೆ. ಆನಂತರ ನವೆಂಬರ್ ತಿಂಗಳ 14ರಂದು ವಕ್ರತ್ಯಾಗ ಮಾಡುತ್ತಾನೆ. ಅಂದರೆ ಋಜುತ್ವ ಪಡೆಯುತ್ತಾನೆ. ಸಾಮಾನ್ಯವಾಗಿ ಶನಿಗ್ರಹ ಎಂದರೆ ಪ್ರತಿಯೊಬ್ಬರೂ ಭಯಪಡುತ್ತಾರೆ. ಖಂಡಿತವಾಗಿ ಶನಿಗ್ರಹದಿಂದಲೂ ಎಲ್ಲಾ 12 ರಾಶಿಗಳಿಗೂ ಶುಭಫಲ ದೊರೆಯುತ್ತದೆ. ಶನಿಯು ಶುಭಸ್ಥಾನದಲ್ಲಿದ್ದರೆ ತೊಂದರೆ ಇರುವುದಿಲ್ಲ. ಅಶುಭ ಸ್ಥಾನದಲ್ಲಿ ಇದ್ದಲ್ಲಿ ಪೂಜೆ ಮತ್ತು ಶಾಂತಿಯ ಅವಶ್ಯಕತೆ ಇರುತ್ತದೆ.

ಶ್ರೀ ಆಂಜನೇಯ ಸ್ವಾಮಿ ಪೂಜೆ ಮಾಡುವುದರಿಂದ ಮತ್ತು ಕಷ್ಟದಲ್ಲಿರುವವರಿಗೆ ಸಹಾಯ ಮಾಡುವುದರಿಂದ ಶುಭಫಲಗಳನ್ನು ಪಡೆಯಬಹುದು. ಕಷ್ಟ ಪಟ್ಟು ಕೆಲಸ ಮಾಡುವವರನ್ನು ಕಂಡರೆ ಶನೈಶ್ಚರನಿಗೆ ಬಹಳ ಇಷ್ಟ. ಕಷ್ಟಪಟ್ಟು ಕೆಲಸ ಮಾಡುವವರಿಗೆ ಸಹಾಯ ಮಾಡಿದರೆ ಶುಭ ಉಂಟಾಗುತ್ತದೆ. ನಾರದರು ಶನಿಯನ್ನು ಪುಟ್ಟ ಮಗುವಿಗೆ ಹೋಲಿಸುತ್ತಾರೆ. ಅಂದರೆ ಶನಿ ಭಗವಾನನಿಗೆ ಸಂತೋಷವಾಗುವಂತೆ ನಡೆದುಕೊಳ್ಳುವುದು ನಮ್ಮ ಕರ್ತವ್ಯ.

ಮಿಥುನ

ಮಿಥುನ ರಾಶಿಗೆ ಶನಿಯು ಎಂಟು ಮತ್ತು ಒಂಬತ್ತನೇ ಮನೆಯ ಅಧಿಪತಿ ಆಗುತ್ತದೆ. ಈ ಕಾರಣದಿಂದಾಗಿ ಈ ರಾಶಿಯಲ್ಲಿ ಜನಿಸಿದವರಿಗೆ ಉತ್ತಮ ಫಲಿತಾಂಶಗಳು ದೊರೆಯುತ್ತವೆ. ಆದರೆ ಯಾವುದೇ ಕಾರಣಕ್ಕೂ ದುಡುಕುತನದ ನಿರ್ಧಾರಗಳನ್ನು ತೆಗೆದುಕೊಳ್ಳಬಾರದು. ತಳುಕುಬಳಕಿನ ಮಾತನ್ನು ನಂಬಿದರೆ ಜೀವನದಲ್ಲಿ ಕಷ್ಟವನ್ನು ಎದುರಿಸಬೇಕಾಗುತ್ತದೆ. ಆರೋಗ್ಯದಲ್ಲಿ ಕ್ರಮೇಣವಾಗಿ ಚೇತರಿಕೆ ಕಂಡು ಬರುತ್ತದೆ. ಆಹಾರದ ವಿಚಾರದಲ್ಲಿಎಚ್ಚರಿಕೆ ವಹಿಸಬೇಕು. ತಂದೆಯಿಂದ ಹಣದ ಸಹಾಯ ದೊರೆಯುತ್ತದೆ. ಆದರೆ ತಂದೆಯವರಿಗೆ ಅನಾರೋಗ್ಯ ಉಂಟಾಗುತ್ತದೆ. ವಾಹನ ಚಾಲನೆ ಮಾಡುವ ವೇಳೆ ತೊಂದರೆ ಉಂಟಾಗಬಹುದು. ಸ್ವತಂತ್ರವಾಗಿ ವ್ಯಾಪಾರ ವ್ಯವಹಾರ ನಡೆಸುವ ಬದಲು ಕುಟುಂಬದ ಸದಸ್ಯರ ಸಹಾಯ ಸಹಕಾರ ಪಡೆಯುವುದು ಒಳ್ಳೆಯದು. ಹಣಕಾಸಿನ ವ್ಯವಹಾರದಲ್ಲಿ ಎಚ್ಚರಿಕೆ ಇರಬೇಕು. ಬೇರೆಯವರ ಹಣದ ವ್ಯವಹಾರಕ್ಕೆ ಸಾಕ್ಷಿದಾರರಾದಲ್ಲಿ ಬಹಳ ಕಷ್ಟ ಎದುರಿಸಬೇಕಾಗುತ್ತದೆ.

ಕಟಕ

ಕಟಕ ಲಗ್ನ ಅಥವಾ ರಾಶಿಗೆ ಶನಿಯು 7 ಮತ್ತು 8ನೇ ಮನೆಯ ಅಧಿಪತಿ ಆಗುತ್ತದೆ. ಶನಿಯು ಕುಂಭದಲ್ಲಿ ವಕ್ರಿಯಾದಾಗ ಇವರ ಆರೋಗ್ಯದಲ್ಲಿ ಏರಿಳಿತ ಉಂಟಾಗುತ್ತದೆ. ಪಾಲುದಾರಿಕೆಯ ವ್ಯಾಪಾರ ವ್ಯವಹಾರದಲ್ಲಿ ಅನಿರೀಕ್ಷಿತವಾದ ಹಿನ್ನಡೆ ಉಂಟಾಗುತ್ತದೆ. ಹೊಸ ವ್ಯಾಪಾರ ವ್ಯವಹಾರವನ್ನು ಆರಂಭಿಸುವ ಬದಲಾಗಿ ಸನ್ನಿವೇಶಕ್ಕೆ ಹೊಂದಿಕೊಂಡು ನಡೆಯಬೇಕಾಗುತ್ತದೆ. ದುಡುಕುತನದ ಮಾತಿನಿಂದ ಸ್ನೇಹ ಕಳೆದುಕೊಳ್ಳಬೇಕಾದ ಸಂದರ್ಭ ಬರುತ್ತದೆ. ಆದ್ದರಿಂದ ತಾಳ್ಮೆಯಿಂದ ಮಾತ್ರ ಜೀವನವು ಸರಿಯಾದ ಹಾದಿಯಲ್ಲಿ ನಡೆಯುತ್ತದೆ. ಹಿರಿಯ ಸೋದರ ಅಥವಾ ಸೋದರಿಯ ಜೊತೆ ಅನಾವಶ್ಯಕವಾದ ವಾದ ವಿವಾದಗಳು ಎದುರಾಗಲಿದೆ. ವಾದ ವಿವಾದವನ್ನು ಕಡಿಮೆ ಮಾಡಿ ಪ್ರೀತಿ ವಿಶ್ವಾಸದಿಂದ ವರ್ತಿಸುವುದು ಒಳ್ಳೆಯದು. ವಾಹನ ಚಾಲನೆ ಮಾಡುವ ವೇಳೆ ಎಚ್ಚರಿಕೆ ಇರಲಿ. ಗೃಹಿಣಿಯರಿಗೆ ಮನೆಯ ಕೆಲಸ ನಿರ್ವಹಿಸುವ ವೇಳೆ ಲೋಹದ ವಸ್ತುವಿನಿಂದ ತೊಂದರೆಯಾಗಬಹುದು. ಕ್ರಮೇಣವಾಗಿ ಶುಭಫಲಗಳು ದೊರೆಯುತ್ತವೆ.

ವೃಶ್ಚಿಕ

ವೃಶ್ಚಿಕ ಲಗ್ನ ಅಥವಾ ರಾಶಿಗೆ ಶನಿಯು ಮೂರು ಮತ್ತು ನಾಲ್ಕನೇ ಮನೆಯ ಅಧಿಪತಿ ಆಗುತ್ತಾನೆ. ಇದರಿಂದಾಗಿ ಸೋಲಿಗೆ ಹೆದರದೆ ಹಟದಿಂದ ಕೆಲಸ ಕಾರ್ಯಗಳನ್ನು ನಿರ್ವಹಿಸುವಿರಿ. ಈ ಕಾರಣದಿಂದಾಗಿ ತಪ್ಪು ನಿರ್ಧಾರ ತೆಗೆದುಕೊಳ್ಳುವ ಸಾಧ್ಯತೆಗಳಿವೆ. ಸೋದರರ ನಡುವೆ ಉತ್ತಮ ಅನುಬಂಧ ಇರುವುದಿಲ್ಲ. ಕುಟುಂಬದ ಹಿರಿಯರ ಆರೋಗ್ಯದಲ್ಲಿ ಏರುಪೇರು ಕಂಡುಬರುತ್ತದೆ. ಕುಟುಂಬಕ್ಕೆ ಸೇರಿದ ಭೂ ವಿವಾದ ಒಂದು ಪರಿಹಾರ ದೊರೆಯದೆ ಮುಂದುವರೆಯುತ್ತದೆ. ನಿಮ್ಮ ಉತ್ತಮ ಪ್ರಯತ್ನಕ್ಕೆ ತಕ್ಕಂತೆ ಫಲಗಳು ದೊರೆಯುತ್ತವೆ. ಯಾವುದೇ ಕೆಲಸ ಆರಂಭಿಸುವ ಮೊದಲು ಆತ್ಮೀಯರ ಸಲಹೆಯನ್ನು ಕೇಳುವುದು ಒಳ್ಳೆಯದು, ಸಾರಿಗೆ ವ್ಯವಸ್ಥೆಯನ್ನು ಕಲ್ಪಿಸುವ ವ್ಯವಹಾರವಿದ್ದಲ್ಲಿ ಯಾವುದೇ ತೊಂದರೆ ಉಂಟಾಗುವುದಿಲ್ಲ.ಅನಿವಾರ್ಯವಾಗಿ ವಾಸ ಸ್ಥಳವನ್ನು ಬದಲಿಸಬೇಕಾಗುತ್ತದೆ. ತೆಗೆದುಕೊಂಡು ತೀರ್ಮಾನಗಳು ಸರಿ ಇಲ್ಲವೆಂದರೆ ಬದಲಿಸುವುದು ಒಳ್ಳೆಯದು. ಒಟ್ಟಾರೆ ನೇರವಾದ ನಡೆ ನುಡಿ ಮತ್ತು ಹಟದಿಂದ ಹೊರ ಬರುವುದು ಒಳ್ಳೆಯದು. ಆರಂಭಿಸುವ ಕೆಲಸ ಕಾರ್ಯಗಳಲ್ಲಿ ತಡವಾಗಿ ಜಯ ಲಭಿಸುತ್ತದೆ.

ಧನಸ್ಸು

ಧನುರ್ ಲಗ್ನಅಥವಾ ರಾಶಿಯಲ್ಲಿ ಜನಿಸಿದವರಿಗೆ ಶನಿಯು ಎರಡು ಮತ್ತು ಮೂರನೇ ಮನೆಯ ಅಧಿಪತಿ ಆಗುತ್ತಾನೆ. ಇದರಿಂದಾಗಿ ಕಷ್ಟವೆನಿಸುವ ಕೆಲಸ ಕಾರ್ಯಗಳನ್ನು ಆರಂಭಿಸುವಿರಿ. ನಿಮ್ಮ ತಪ್ಪು ನಿರ್ಧಾರಗಳಿಗೆ ಬೇರೆಯವರನ್ನು ಹೊಣೆ ಮಾಡುವಿರಿ. ಮಾತಿನ ಮೇಲೆ ನಿಯಂತ್ರಣ ಇದ್ದಲ್ಲಿ ಯಾವುದೇ ತೊಂದರೆಗಳು ಎದುರಾಗುವುದಿಲ್ಲ. ಒಮ್ಮೆ ತೆಗೆದುಕೊಂಡ ನಿರ್ಧಾರಗಳನ್ನು ಅನಾವಶ್ಯಕವಾಗಿ ಬದಲಿಸುವಿರಿ. ಇದರಿಂದಾಗಿ ಕೆಲಸ ಕಾರ್ಯಗಳು ಸುಲಭವಾಗಿ ಮುಂದುವರೆಯುವುದಿಲ್ಲ. ಕುಟುಂಬದಲ್ಲಿ ಅನಾವಶ್ಯಕವಾದ ವಾದ ವಿವಾದಗಳು ತಲೆದೋರುತ್ತವೆ. ನಿಮ್ಮ ಮನಸ್ಸಿನಲ್ಲಿ ಇರುವ ಒಳ್ಳೆಯ ಭಾವನೆಗಳಿಗೆ ಬೇರೆಯವರ ಸಹಮತ ಇರುತ್ತದೆ. ಆದರೆ ಅದನ್ನು ನೀವು ಅರ್ಥಮಾಡಿಕೊಳ್ಳಬೇಕು. ಸನ್ನಿವೇಶಕ್ಕೆ ತಕ್ಕಂತೆ ನಡೆದುಕೊಂಡರೆ ಹಣಕಾಸಿನ ತೊಂದರೆ ಉಂಟಾಗುವುದಿಲ್ಲ. ಮಿತಿಮೀರಿ ಹಣವನ್ನು ಖರ್ಚು ಮಾಡಬೇಡಿ. ಒಟ್ಟಾರೆ ಧನುರ್ ರಾಶಿಯವರು ಮನಸ್ಸು ಬದಲಿಸದೆ ಎಲ್ಲರೊಂದಿಗೆ ಪ್ರೀತಿ ವಿಶ್ವಾಸದಿಂದ ಹೊಂದಿಕೊಂಡು ನಡೆದರೆ ಯಾವುದೇ ತೊಂದರೆ ಉಂಟಾಗುವುದಿಲ್ಲ.

ಕುಂಭ

ಶನಿಯು ಕುಂಭ ರಾಶಿಗೆ ಅಧಿಪತಿ ಆಗುತ್ತಾನೆ. ಅಲ್ಲದೆ ಹನ್ನೆರಡನೇ ಮನೆಯ ಅಧಿಪತಿಯು ಆಗುತ್ತಾನೆ. ಈ ಕಾರಣದಿಂದಾಗಿ ಕುಂಭದಲ್ಲಿ ಶನಿಯು ವಕ್ರಿ ಆದಾಗ ಅನಾವಶ್ಯಕ ಖರ್ಚು ವೆಚ್ಚಗಳು ಹೆಚ್ಚುತ್ತವೆ. ನಿಮ್ಮ ಮಾತುಕತೆ ಸರಿ ಇದ್ದರೂ ಅದು ಬೇರೆಯವರಿಗೆ ಅರ್ಥವಾಗುವುದಿಲ್ಲ. ನಿಮ್ಮ ಮನಸ್ಸಿಗೆ ಒಳ್ಳೆಯತನವಾಗಲಿ ನಿಮ್ಮಲ್ಲಿರುವ ಬುದ್ಧಿವಂತಿಕೆಯಾಗಲಿ ಬೇರೆಯವರು ಗಮನಿಸುವುದಿಲ್ಲ. ಇದರಿಂದ ಮಾನಸಿಕ ನೆಮ್ಮದಿ ಇರುವುದಿಲ್ಲ. ಏಕಾಂಗಿತನ ನಿಮ್ಮನ್ನು ಕಾಡುತ್ತದೆ. ಕಣ್ಣಿನ ತೊಂದರೆ ಉಂಟಾಗುತ್ತದೆ. ಪ್ರಯೋಜನವಲ್ಲದ ತಿರುಗಾಟಗಳಿಗೆ ಹೆಚ್ಚಿನ ಹಣ ವಿನಿಯೋಗಿಸುವಿರಿ. ಸರಿಯಾದ ತೀರ್ಮಾನವನ್ನು ತೆಗೆದುಕೊಳ್ಳದೆ ಹೋದಲ್ಲಿ ಕೂಡಿಟ್ಟ ಹಣ ಖರ್ಚಾಗುತ್ತದೆ. ಮನಸ್ಸಿಲ್ಲದೆ ಹೋದರೂ ಇರುವ ವಾಹನವನ್ನು ಮಾರಾಟ ಮಾಡುವಿರಿ. ಆದರೆ ಹೊಸ ವಾಹನವನ್ನು ಕೊಳ್ಳಲು ಸಾಧ್ಯವಾಗುವುದಿಲ್ಲ. ಕೆಲವು ದಿನಗಳು ಕುಟುಂಬದಿಂದ ಹೊರಗಡೆ ಉಳಿಯಬೇಕಾಗುತ್ತದೆ. ಹಿರಿಯ ಸೋದರಿಯ ಸಹಾಯವು ದೊರೆಯುವ ಕಾರಣ ಕಷ್ಟಗಳು ಕಡಿಮೆ. ಆದರೆ ನಿಮ್ಮ ಅವಶ್ಯಕತೆಗಳನ್ನು ಮನ ಬಿಚ್ಚಿ ಬೇರೆಯವರಿಗೆ ತಿಳಿಸುವುದು ಒಳ್ಳೆಯದು.

ಬರಹ: ಎಚ್‌. ಸತೀಶ್, ಜ್ಯೋತಿಷಿ

ಮೊಬೈಲ್:‌ 8546865832

(ಗಮನಿಸಿ: ಜ್ಯೋತಿಷ್ಯ ಶಾಸ್ತ್ರದ ಲೆಕ್ಕಾಚಾರಕ್ಕೆ ಹಲವು ಸೂತ್ರಗಳಿವೆ. ನಿರ್ದಿಷ್ಟ ರೀತಿಯಲ್ಲಿ ಕ್ರಮಬದ್ಧವಾಗಿ ಈ ರಾಶಿ ಭವಿಷ್ಯ ನೀಡಲಾಗಿದೆ. ಆದರೆ ಒಟ್ಟಾರೆಯಾಗಿ ಜ್ಯೋತಿಷ್ಯ ಎನ್ನುವುದು ನಂಬಿಕೆಯ ಮಾತು. ಓದುಗರ ನಂಬಿಕೆಯನ್ನು ‘ಹಿಂದೂಸ್ತಾನ್ ಟೈಮ್ಸ್ ಕನ್ನಡ’ ಗೌರವಿಸುತ್ತದೆ. ಇಲ್ಲಿರುವ ಯಾವುದೇ ಶಿಫಾರಸು ಅಥವಾ ಸಲಹೆಗಳನ್ನು ಪಾಲಿಸುವುದು ಓದುಗರ ವಿವೇಚನೆ, ನಂಬಿಕೆಗೆ ಬಿಟ್ಟ ವಿಷಯವಾಗಿರುತ್ತದೆ).

ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.