ಹಂಸ ಯೋಗ, ಮಾಲವ್ಯ ಯೋಗದ ಮಹತ್ವವೇನು; ರಾಶಿಗಳ ನಡುವಿನ ಸಂಬಂಧ ಸಂಪೂರ್ಣ ಮಾಹಿತಿ ಇಲ್ಲಿದೆ
ಹಂಸ ಯೋಗವು ಗುರುಗ್ರಹದಿಂದ ಉಂಟಾದರೆ, ಮಾಲವ್ಯ ಯೋಗ ಶುಕ್ರ ಗ್ರಹದಿಂದ ಉಂಟಾಗುತ್ತದೆ. ಶುಕ್ರನು ವೃಷಭ, ತುಲಾ ಮತ್ತು ಮೀನ ರಾಶಿಗಳಲ್ಲಿ ನೆಲೆಸಿರುವಾಗ ಮಾಲವ್ಯ ಯೋಗವು ಉಂಟಾಗುತ್ತದೆ. ಈ ಕುರಿತ ವಿಶೇಷ ಮಾಹಿತಿ ಇಲ್ಲಿದೆ.

ಪಂಚಮಹಾಪುರುಷ ಯೋಗಗಳಲ್ಲಿ ಹಂಸ ಯೋಗ ಮತ್ತು ಮಾಲವ್ಯ ಯೋಗಗಳು ಬಲು ಮುಖ್ಯವಾಗುತ್ತವೆ. ಹಂಸ ಯೋಗವು ಗುರುಗ್ರಹದಿಂದ ಉಂಟಾಗುತ್ತದೆ. ಗುರುವು ಧನು, ಮೀನ ಅಥವಾ ಕಟಕ ರಾಶಿಗಳಲ್ಲಿ ಇರುವ ವೇಳೆ ಹಂಸ ಯೋಗವು ಉಂಟಾಗುತ್ತದೆ. ಆದರೆ ಗುರುವು ಕೇಂದ್ರ ಸ್ಥಾನಗಳಲ್ಲಿ ಇರಬೇಕು. ಗುರು ಧನು ಅಥವಾ ಮೀನ ರಾಶಿಗಳಲ್ಲಿ ಇದ್ದಾಗ ಮಿಥುನ, ಕನ್ಯಾ, ಧನು ಮತ್ತು ಮೀನ ರಾಶಿಗಳಿಗೆ ಹಂಸಯೋಗ ಇರುತ್ತದೆ. ಗುರುವು ಕಟಕದಲ್ಲಿ ಇದ್ದಲ್ಲಿ ಮೇಷ, ಕಟಕ, ತುಲಾ ಮತ್ತು ಮಕರ ರಾಶಿಗಳಿಗೆ ಹಂಸಯೋಗ ಇರುತ್ತದೆ. ರಾಶಿ ಅಲ್ಲದೆ ಜನ್ಮ ಲಗ್ನಗಳನ್ನು ಸಹ ಪರಿಗಣಿಸಬೇಕಾಗುತ್ತದೆ. ಗುರುವು ಈ 3 ರಾಶಿಗಳಲ್ಲಿ ಬಲಶಾಲಿ ಆಗುತ್ತಾನೆ.
ಮಾಲವ್ಯ ಯೋಗವು ಶುಕ್ರಗ್ರಹದಿಂದ ಉಂಟಾಗುತ್ತದೆ. ಶುಕ್ರನು ವೃಷಭ, ತುಲಾ ಮತ್ತು ಮೀನ ರಾಶಿಗಳಲ್ಲಿ ನೆಲೆಸಿರುವಾಗ ಮಾಲವ್ಯ ಯೋಗವು ಉಂಟಾಗುತ್ತದೆ. ಆದರೆ ಶುಕ್ರನು ಕೇಂದ್ರಸ್ಥಾನಗಳಲ್ಲಿ ನೆಲೆಸಿರಬೇಕು. ಶುಕ್ರನು ವೃಷಭ ರಾಶಿಯಲ್ಲಿ ನೆಲೆಸಿದ್ದಲ್ಲಿ ವೃಷಭ, ಸಿಂಹ, ವೃಶ್ಚಿಕ ಮತ್ತು ಕುಂಭ ರಾಶಿಗಳಿಗೆ ಮಾಲವ್ಯ ಯೋಗ ಇರುತ್ತದೆ. ಶುಕ್ರನು ತುಲಾರಾಶಿಯಲ್ಲಿ ನೆಲೆಸಿರುವಾಗ ಮೇಷ, ಕಟಕ, ತುಲಾ ಮತ್ತು ಮಕರ ರಾಶಿಗಳಿಗೆ ಮಾಲವ್ಯ ಯೋಗ ಇರುತ್ತದೆ. ಜನ್ಮರಾಶಿಯ ಮಾತ್ರವಲ್ಲದೆ ಜನ್ಮಲಗ್ನವನ್ನು ಸಹ ಪರಿಗಣಿಸಬೇಕಾಗುತ್ತದೆ.
ಗುರು ಮತ್ತು ಶುಕ್ರರ ಸಂಯೋಜನೆಯನ್ನು ಪದ್ಮಯೋಗ ಎಂದುಕರೆಯುತ್ತೇವೆ. ಮುಖ್ಯವಾಗಿ ಯಾವುದೇ ಕುಂಡಲಿಯಲ್ಲಿ ಹಂಸಯೋಗ ಇದ್ದಲ್ಲಿ, ಗುರುವಿನ ಜೊತೆಯಲ್ಲಿ ಶುಕ್ರ ಇದ್ದಲ್ಲಿ ಪದ್ಮಯೋಗ ಉಂಟಾಗುತ್ತದೆ. ಇದೇ ರೀತಿ ಮಾಲವ್ಯ ಯೋಗ ಇದ್ದಲ್ಲಿ ಶುಕ್ರನ ಜೊತೆಯಲ್ಲಿ ಗುರು ಇದ್ದಲ್ಲಿ ಪದ್ಮಯೋಗ ಇರುತ್ತದೆ. ಪದ್ಮಯೋಗ ಇದ್ದಲ್ಲಿ ವಿಶೇಷವಾಗಿ ವಿವಾಹದ ನಂತರ ವಿಶೇಷವಾದ ಫಲಗಳು ದೊರೆಯುತ್ತವೆ.
ಪದ್ಮ ಯೋಗವಿದ್ದವರು ಮತ್ಸ್ಯ ಯಂತ್ರವನ್ನು ಪೂಜಿಸುವುದು ಹೆಚ್ಚು ಫಲದಾಯಕವಾಗಿರುತ್ತದೆ. ಮತ್ಸ್ಯಯಂತ್ರವನ್ನು ತಾಮ್ರ, ಬೆಳ್ಳಿ ಅಥವಾ ಚಿನ್ನದ ಲೇಪನವಿರುವ ತಗಡಿನಲ್ಲಿ ತಯಾರಿಸುತ್ತಾರೆ. ಯಂತ್ರದ ಮಧ್ಯಭಾಗದಲ್ಲಿ ಮೀನಿನ ಚಿತ್ರವಿರುತ್ತದೆ. ಮೀನಿನ ಕೆಲಸವೆಂದರೆ ನೀರಿನಲ್ಲಿ ಇರುವ ಕೊಳೆಗಳನ್ನು ದೂರಮಾಡುವುದು. ಇದೇ ರೀತಿ ಮತ್ಸ್ಯಯಂತ್ರವನ್ನು ಮನೆಯಲ್ಲಿ ಇರಿಸಿ ಪೂಜೆ ಮಾಡಿದಲ್ಲಿ, ಕುಟುಂಬದಲ್ಲಿ ಇರುವ ಮನಸ್ತಾಪಗಳನ್ನು ದೂರ ಮಾಡುತ್ತದೆ. ಮುಖ್ಯವಾಗಿ ದಂಪತಿ ನಡುವೆ ಮನಸ್ತಾಪ ಇದ್ದಲ್ಲಿ ಪರಿಹಾರವಾಗುತ್ತದೆ. ಮತ್ಸ್ಯಯಂತ್ರವು ಸರಸ್ವತಿಯ ಯಂತ್ರದಂತೆ, ವಾಸ್ತುದೋಷ ನಿವಾರಕ ಯಂತ್ರದಂತೆ ಕೆಲಸ ಮಾಡುತ್ತದೆ. ವಿದ್ಯಾರ್ಥಿಗಳಿಗೆ ಅಧ್ಯಯನದಲ್ಲಿ ಆಸಕ್ತಿ ಕಡಿಮೆ ಆದ ವೇಳೆ ಯಂತ್ರವನ್ನು ಪೂಜಿಸಿದಲ್ಲಿ ವಿದ್ಯಾರ್ಥಿಗಳು ಹೆಚ್ಚಿನ ಆಸಕ್ತಿಯಿಂದ ಕಲಿಕೆಯಲ್ಲಿ ಮುಂದುವರೆಯುತ್ತಾರೆ. ಈ ಯಂತ್ರದಿಂದ ದೀರ್ಘಕಾಲದಿಂದ ಕಾಡುತ್ತಿರುವ ರೋಗವಿದ್ದಲ್ಲಿ ಗುಣಹೊಂದುತ್ತದೆ. ಮುಖ್ಯವಾಗಿ ಮಧುಮೇಹ ರೋಗದಿಂದ ಬಳಲುತ್ತಿದ್ದಲ್ಲಿ ಆರೋಗ್ಯದಲ್ಲಿ ಸ್ಥಿರತೆ ಕಂಡುಬರುತ್ತದೆ.
ಈ ಯಂತ್ರವನ್ನು ರಟ್ಟೆಯಲ್ಲಿ ಧರಿಸಲು ಅಥವಾ ಕಿಸೆಯಲ್ಲಿ ಇರಿಸಲು ಸಾಧ್ಯವಿಲ್ಲ. ಮನೆಯ ಪೂಜಾಗೃಹದಲ್ಲಿ ಇದನ್ನು ಇರಿಸಿ ಬಿಳಿ ಬಣ್ಣದ ಮತ್ತು ಹಳದಿ ಬಣ್ಣದ ಹೂಗಳಿಂದ ಪೂಜಿಸುವುದು ಶುಭದಾಯಕವಾಗಿದೆ. ಇದರಿಂದ ಕುಟುಂಬದಲ್ಲಿ ಶಾಂತಿ ನೆಮ್ಮದಿ ನೆಲೆಸುತ್ತದೆ. ಕುಟುಂಬದ ಹಿರಿಯರ ಮತ್ತು ಗುರುಗಳ ಆಶೀರ್ವಾದವು ದೊರೆಯುತ್ತದೆ. ಮನೆಯಲ್ಲಿ ಯಾವುದೇ ವಾಸ್ತುದೋಷವಿದ್ದಲ್ಲಿ ಅದರ ಪ್ರಭಾವವು ಕಡಿಮೆ ಆಗುತ್ತದೆ.
ಪೂರ್ವದಿಕ್ಕಿನಲ್ಲಿ ಈ ಯಂತ್ರವನ್ನು ಇರಿಸಿ ಪೂಜಿಸಿದಲ್ಲಿ ವಿದ್ಯಾರ್ಥಿಗಳಿಗೆ ಶುಭ ಫಲಗಳು ದೊರೆಯುತ್ತವೆ. ಉತ್ತರ ದಿಕ್ಕಿನಲ್ಲಿ ಈ ಯಂತ್ರವನ್ನು ಇರಿಸಿ ಪೂಜಿಸಿದಲ್ಲಿ ಬಂಧು ಬಳಗದವರಲ್ಲಿ ಮತ್ತು ಸಮಾಜದಲ್ಲಿ ಗೌರವ ದೊರೆಯುತ್ತದೆ. ಮನೆತನದಲ್ಲಿ ನಿಮ್ಮ ಮಾತಿಗೆ ಪ್ರಾಮುಖ್ಯತೆ ದೊರೆಯುತ್ತದೆ. ಮನೆತನದ ಆಸ್ತಿಯಲ್ಲಿನ ತೊಂದರೆಯು ದೂರವಾಗುತ್ತದೆ. ಈ ಯಂತ್ರದಲ್ಲಿ ಕೇವಲ ಬೀಜಾಕ್ಷರಗಳು ಇರುತ್ತವೆ. ಷಡ್ವರ್ಗ ಅಥವಾ ಅಷ್ಟದಳದ ಪದ್ಮ ಇರುತ್ತದೆ. ರೇಖೆಗಳ ಜೊತೆಯಲ್ಲಿ ಶ್ರೀ ದುರ್ಗಾ ಬೀಜಾಕ್ಷರಗಳು ಇರುತ್ತವೆ. ಎಂಟು ದಿಕ್ಕಿನಲ್ಲಿ ಶ್ರೀಕಾರ ಮತ್ತು ಓಂಕಾರಗಳು ಇರುತ್ತವೆ.
ಬರಹ: ಹೆಚ್. ಸತೀಶ್, ಜ್ಯೋತಿಷಿ, ಬೆಂಗಳೂರು
(ಗಮನಿಸಿ: ಜ್ಯೋತಿಷ್ಯ ಶಾಸ್ತ್ರದ ಲೆಕ್ಕಾಚಾರಕ್ಕೆ ಹಲವು ಸೂತ್ರಗಳಿವೆ. ನಿರ್ದಿಷ್ಟ ರೀತಿಯಲ್ಲಿ ಕ್ರಮಬದ್ಧವಾಗಿ ಈ ಯೋಗ ಮತ್ತು ಯಂತ್ರಗಳ ಮಾಹಿತಿಯನ್ನು ನೀಡಲಾಗಿದೆ. ಆದರೆ ಒಟ್ಟಾರೆಯಾಗಿ ಜ್ಯೋತಿಷ್ಯ ಎನ್ನುವುದು ನಂಬಿಕೆಯ ಮಾತು. ಓದುಗರ ನಂಬಿಕೆಯನ್ನು ಹಿಂದೂಸ್ತಾನ್ ಟೈಮ್ಸ್ ಕನ್ನಡ ಗೌರವಿಸುತ್ತದೆ. ಇಲ್ಲಿರುವ ಯಾವುದೇ ಶಿಫಾರಸು ಅಥವಾ ಸಲಹೆಗಳನ್ನು ಪಾಲಿಸುವುದು ಓದುಗರ ವಿವೇಚನೆ, ನಂಬಿಕೆಗೆ ಬಿಟ್ಟ ವಿಷಯವಾಗಿರುತ್ತದೆ).