ಸೂರ್ಯ, ಗುರು ನಡುವೆ ಪರಸ್ಪರ ದೃಷ್ಟಿ; ವೃಷಭ, ಮಿಥುನ ರಾಶಿಯವರಿಗೆ ಜೀವನದಲ್ಲಿ ಆರ್ಥಿಕವಾಗಿ ದೊಡ್ಡ ಬದಲಾವಣೆ
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  ಸೂರ್ಯ, ಗುರು ನಡುವೆ ಪರಸ್ಪರ ದೃಷ್ಟಿ; ವೃಷಭ, ಮಿಥುನ ರಾಶಿಯವರಿಗೆ ಜೀವನದಲ್ಲಿ ಆರ್ಥಿಕವಾಗಿ ದೊಡ್ಡ ಬದಲಾವಣೆ

ಸೂರ್ಯ, ಗುರು ನಡುವೆ ಪರಸ್ಪರ ದೃಷ್ಟಿ; ವೃಷಭ, ಮಿಥುನ ರಾಶಿಯವರಿಗೆ ಜೀವನದಲ್ಲಿ ಆರ್ಥಿಕವಾಗಿ ದೊಡ್ಡ ಬದಲಾವಣೆ

ನವೆಂಬರ್ 16 ರಂದು ವೃಶ್ಚಿಕ ರಾಶಿಗೆ ಸೂರ್ಯ ಪ್ರವೇಶಿಸಿದ್ದಾನೆ. ಇದು ಹಲವು ರಾಶಿಯವರಿಗೆ ಪ್ರಯೋಜನೆಗಳನ್ನು ತಂದಿದೆ. ಅದರಲ್ಲೂ ಪ್ರಮುಖವಾಗಿ ವೃಷಭ ಮತ್ತು ಮಿಥುನ ರಾಶಿಯವರಿಗೆ ಸಾಕಷ್ಟು ಲಾಭಗಳಿವೆ. ಅದರ ವಿವರವನ್ನು ಇಲ್ಲಿ ನೀಡಲಾಗಿದೆ.

ಸೂರ್ಯ ಮತ್ತು ಗುರುವಿನ ಪರಸ್ಪರ ದೃಷ್ಟಿಯಿಂದ ವೃಷಭ ಮತ್ತು ಮಿಥುನ ರಾಶಿಯವರಿಗೆ ನಿರೀಕ್ಷೆಗೂ ಮೀರಿದ ಲಾಭಗಳಿವೆ.
ಸೂರ್ಯ ಮತ್ತು ಗುರುವಿನ ಪರಸ್ಪರ ದೃಷ್ಟಿಯಿಂದ ವೃಷಭ ಮತ್ತು ಮಿಥುನ ರಾಶಿಯವರಿಗೆ ನಿರೀಕ್ಷೆಗೂ ಮೀರಿದ ಲಾಭಗಳಿವೆ.

ಪ್ರತಿಯೊಂದು ಗ್ರಹವು ಒಂದು ನಿರ್ದಿಷ್ಟ ಅವಧಿಯಲ್ಲಿ ಒಂದು ರಾಶಿಯಿಂದ ಮತ್ತೊಂದು ರಾಶಿಗೆ ಸಂಚರಿಸುತ್ತವೆ. ನವಂಬರ್ ತಿಂಗಳ 16 ರಂದು ರವಿಯು ವೃಶ್ಚಿಕ ರಾಶಿಯನ್ನು ಪ್ರವೇಶಿಸುತ್ತಾನೆ. ಈ ಅವಧಿಯದಲ್ಲಿ ರವಿ ಮತ್ತು ಗುರುವಿನ ನಡುವೆ ಪರಸ್ಪರ ದೃಷ್ಠಿ ಇರುತ್ತದೆ. ರವಿಯನ್ನು ಆತ್ಮಕಾರಕ ಮತ್ತು ಗುರುವನ್ನು ಜೀವಕಾರಕ ಎಂದು ಕರೆಯುತ್ತೇವೆ. ನಾಡಿ ಜೋತಿಷ್ಯದಲ್ಲಿ ಇದನ್ನು ಜೀವಾತ್ಮ ಸಂಯೋಗ ಎಂದು ಕರೆಯುತ್ತೇವೆ. ಸೂರ್ಯ ಮತ್ತು ಗುರುವಿನ ಪರಸ್ಪರ ದೃಷ್ಟಿಯಿಂದ ವಿಶೇಷವಾಗಿ ವೃಷಭ ಮತ್ತು ಮಿಥುನ ರಾಶಿಯವರಿಗೆ ಏನೆಲ್ಲಾ ಲಾಭಗಲಿವೆ ಎಂಬುದನ್ನು ಇಲ್ಲಿ ನೀಡಲಾಗಿದೆ.

ವೃಷಭ ರಾಶಿ

ವೃಷಭ ರಾಶಿಯವರ ಮನದಲ್ಲಿ ಧನಾತ್ಮಕ ಚಿಂತನೆಗಳು ಇರುತ್ತವೆ. ಬಲು ಮುಖ್ಯ ಕೆಲಸ ಕಾರ್ಯಗಳನ್ನು ಬುದ್ಧಿವಂತಿಕೆಯ ಮಾತಿನಿಂದಾಗಿ ಪೂರ್ಣಗೊಳಿಸುವಿರಿ. ಬಹು ದಿನದಿಂದ ಕನಸಿನ ಮಾತಾಗಿದ್ದ ಸ್ವಂತ ಮನೆ ಕೊಳ್ಳುವ ಆಸೆ ಆತ್ಮೀಯರ ಸಹಾಯ ಸಹಕಾರದಿಂದ ಕಾರ್ಯಗತಗೊಳ್ಳಲಿದೆ. ಪೂರ್ವಿಕರ ಮನೆಯಿದ್ದಲ್ಲಿ ಅದನ್ನು ಪುನರುಜ್ಜೀವನಗೊಳಿಸುವಿರಿ. ಕುಟುಂಬದ ಹೆಚ್ಚಿನ ಜವಾಬ್ದಾರಿಯನ್ನು ಸ್ವಂತ ಆಸೆಯಿಂದ ನಿರ್ವಹಿಸುವಿರಿ. ಕುಟುಂಬದಲ್ಲಿ ಇದ್ದ ಮನಸ್ತಾಪವು ಮರೆಯಾಗುತ್ತದೆ. ಉದ್ಯೋಗದಲ್ಲಿನ ಬದಲಾವಣೆಗಳಿಗೆ ಹೊಂದಿಕೊಂಡು ಬಾಳುವಿರಿ. ಅದಿಕಾರಿಗಳ ಜೊತೆಯಲ್ಲಿ ಅಪರೂಪದ ಮಾತುಕತೆ ನಡೆಸುವಿರಿ. ಕುಟುಂಬದ ಸೌಕರ್ಯಕ್ಕಾಗಿ ವಿಶಾಲವಾದ ವಾಹನವನ್ನು ಕೊಳ್ಳುವಿರಿ. ನಿಮ್ಮಲ್ಲಿರುವ ಒಳ್ಳೆಯ ಭಾವನೆಗಳಿಗೆ ಬಂಧುಬಳಗದವರಿಂದ ಗೌರವ ಲಭಿಸುತ್ತದೆ.

ವಿದ್ಯಾರ್ಥಿಗಳ ಜೀವನದಲ್ಲಿ ಅನೇಕ ಬದಲಾವಣೆಗಳು ಎದುರಾಗುತ್ತವೆ. ಸಮಯ ಸಂದರ್ಭವನ್ನು ಅರ್ಥೈಸಿಕೊಂಡು ಮುನ್ನಡೆಯುವ ಕಾರಣ ವಿವಾದಗಳು ನಿಮ್ಮಿಂದ ದೂರ ಉಳಿಯಲಿವೆ. ಮಕ್ಕಳ ವಿವಾಹದ ಬಗ್ಗೆ ಮಾತುಕತೆ ನಡೆಯುತ್ತದೆ. ಆರೋಗ್ಯದಲ್ಲಿ ಯಾವುದೇ ತೊಂದರೆ ಇರದು. ಅನಿರೀಕ್ಷಿತವಾದ ಧನ ಲಾಭ ಹೊಸ ಯೋಜನೆಗಳನ್ನು ರೂಪಿಸುವಂತೆ ಮಾಡುತ್ತದೆ. ಮನದಲ್ಲಿ ಚಿಂತೆ ಇದ್ದರೂ ಎಲ್ಲರಿಗೂ ಸಂತಸವನ್ನು ಹಂಚುವಿರಿ. ನಿಮ್ಮ ತೀರ್ಮಾನಗಳನ್ನು ಬದಲಾಯಿಸಲು ಯಾರಿಂದಲೂ ಸಾಧ್ಯವಾಗದು. ಸೋದರ ಸೋದರಿಯ ಜೀವನದಲ್ಲಿ ನೂತನ ಬದಲಾವಣೆ ತರುವಿರಿ. ಕುಟುಂಬದ ಜನರ ಜೊತೆಯಲ್ಲಿ ಪಾಲುಗಾರಿಕೆಯ ವ್ಯಾಪಾರ ಆರಂಸುವ ಸೂಚನೆಗಳಿವೆ. ಯಾಂತ್ರಿಕ ಪರಿಣತಿ ಪಡೆದವರಿಗೆ ವಿಶೇಷವಾದ ಮನ್ನಣೆ ದೊರೆಯುತ್ತದೆ.

ಮಿಥುನ ರಾಶಿ

ಈ ಅವಧಿಯಲ್ಲಿ ನಿಮ್ಮ ಉದ್ಯೋಗದಲ್ಲಿ ಉಪಯುಕ್ತ ಬದಲಾವಣೆಗಳು ಉಂಟಾಗಲಿವೆ. ಆತ್ಮೀಯರ ಸಹಾಯದಿಂದ ಉದ್ಯೋಗವನ್ನು ಬದಲಾಯಿಸುವಿರಿ. ನಿಮ್ಮಲ್ಲಿನ ಆತ್ಮವಿಶ್ವಾಸವು ಸವಾಲುಗಳನ್ನು ಎದುರಿಸುವಲ್ಲಿ ಸಹಕಾರಿಯಾಗುತ್ತದೆ. ಬಾಳ ಸಂಗಾತಿಯ ಜೊತೆಯಲ್ಲಿ ಅನಗತ್ಯವಾದ ವಾದ ವಿವಾದಗಳು ಎದುರಾಗುತ್ತವೆ. ಕುಟುಂಬದಲ್ಲಿ ಯಾವುದೇ ವಿಚಾರದಲ್ಲಿ ಒಮ್ಮತದ ತೀರ್ಮಾನವನ್ನು ತೆಗೆದುಕೊಳ್ಳುವಲ್ಲಿ ವಿಫಲರಾಗುವಿರಿ. ಆರಂಭಿಸಿದ ಕೆಲಸ ಕಾರ್ಯಗಳನ್ನು ನಿರ್ಧಿಷ್ಠವಾದ ಅವಧಿಯಲ್ಲಿ ಪೂರ್ಣಗೊಳಿಸಲು ವಿಫಲರಾಗುವಿರಿ. ಎಲ್ಲರನ್ನೂ ಸಮಾನ ಭಾವನೆಯಿಂದ ಕಾಣುವಿರಿ. ಸ್ವಂತ ಕೆಲಸವನ್ನು ಬದಿಗಿಟ್ಟು ಬೇರೆಯವರಿಗೆ ಸಹಾಯಮಾಡುವಿರಿ. ಬರಿಮಾತಿನಿಂದಲೇ ನಿಮ್ಮ ಕೆಲಸವನ್ನು ಕಾರ್ಯಗತಗೊಳಿಸುವಿರಿ. ಹಣಕಾಸಿನ ತೊಂದರೆ ಕಂಡುಬರುವುದಿಲ್ಲ. ಕುಟುಂಬದ ಸದಸ್ಯರ ಉತ್ತಮ ಪ್ರಯತ್ನಗಳಿಗೆ ಆಸರೆಯಾಗುವಿರಿ. ಸ್ತ್ರೀಯರಿಗೆ ಉತ್ತಮ ಆದಾಯ ದೊರೆಯುತ್ತದೆ. ಉದ್ಯಮಿಗಳಿಗೆ ಹೊಸ ಮಾದರಿಯ ಅವಕಾಶಗಳು ದೊರೆಯುತ್ತವೆ.

ಹಣಕಾಸಿನ ವ್ಯವಹಾರದಲ್ಲಿ ಎಲ್ಲರಿಗೂ ಮಾದರಿಯಾಗಿ ಬಾಳುವಿರಿ. ಆತ್ಮವಿಶ್ವಾಸಕ್ಕಿಂತಲೂ ಉತ್ತಮ ಪ್ರಯತ್ನ ನಿಮಗೆ ಸೂಕ್ತ ಸ್ಥಾನವನ್ನು ಗಳಿಸುವಂತೆ ಮಾಡಲಿದೆ. ಸಮಾಜ ಸೇವೆಯಲ್ಲಿ ಆಸಕ್ತಿ ಹೆಚ್ಚಾಗುತ್ತದೆ. ವಿದ್ಯಾರ್ಥಿಗಳು ನಿರೀಕ್ಷಿತ ಗುರಿ ತಲುಪಲು ಪ್ರಯತ್ನಿಸುತ್ತಾರೆ. ಮಕ್ಕಳನ್ನು ಸ್ನೇಹಿತರಂತೆ ಕಾಣುವಿರಿ. ಅವಿವಾಹಿತರಿಗೆ ವಿವಾಹ ಯೋಗವಿದೆ. ಸರ್ಕಾರದ ಅನುಮತಿ ಪಡೆದು ಆರಂಭಿಸುವ ಪಾಲುಗಾರಿಕೆಯ ವ್ಯಾಪಾರದಲ್ಲಿ ಹೆಚ್ಚಿನ ಆದಾಯ ಇರುತ್ತದೆ. ಆರೋಗ್ಯದ ಬಗ್ಗೆ ಕಾಳಜಿ ಇರಲಿ. ಸ್ಟಾಕ್ ಮತ್ತು ಷೇರಿನ ವ್ಯವಹಾರದಲ್ಲಿ ಹಣವನ್ನು ವಿನಿಯೋಗಿಸುವಿರಿ. ಭವಿಷ್ಯದ ಜೀವನಕ್ಕಾಗಿ ಯೋಜನೆಗಳನ್ನು ರೂಪಿಸುವಿರಿ. ನಿಧಾನ ಗತಿಯಲ್ಲಿ ಕೆಲಸ ಕಾರ್ಯಗಳು ಸಾಗಲಿವೆ. ವಿದೇಶ ಪ್ರಯಾಣ ಯೋಗವಿದೆ. ನಿಧಾನಗತಿಯ ಕೆಲಸ ಕಾರ್ಯಗಳು ಅವಕಾಶವಂಚಿತರನ್ನಾಗಿ ಮಾಡಬಹುದು. ಅತಿಯಾದ ಆತ್ಮವಿಶ್ವಾಸವು ತಪ್ಪಾದ ಹಾದಿಯಲ್ಲಿ ನಡೆಯುವಂತೆ ಮಾಡುತ್ತದೆ. ಧಾರ್ಮಿಕ ಕೇಂದ್ರಗಳ ನಿರ್ವಹಣೆಯ ಜವಾಬ್ದಾರಿ ನಿಮ್ಮ ಪಾಲಾಗುತ್ತದೆ. ಹೈನುಗಾರಿಕೆಯ ವ್ಯಾಪಾರದಲ್ಲಿ ಉತ್ತಮ ಆದಾಯ ಗಳಿಸುವಿರಿ.

ಗಮನಿಸಿ: ಇದು ಪ್ರಚಲಿತದಲ್ಲಿರುವ ಧಾರ್ಮಿಕ ನಂಬಿಕೆಗಳನ್ನು ಆಧರಿಸಿದ ಬರಹ. ಓದುಗರಿಗೆ ಮಾಹಿತಿ ನೀಡುವ ಉದ್ದೇಶದಿಂದಷ್ಟೇ ಪ್ರಕಟಿಸಲಾಗಿದೆ.

Whats_app_banner
ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.