ಮಿಥುನದಲ್ಲಿ ರವಿಯ ಸಂಚಾರ: ವ್ಯಾಪಾರದಲ್ಲಿ ಆದಾಯ ಇರುತ್ತೆ; ಮೇಷ,ವೃಷಭ, ಮಿಥುನ, ಕಟಕ ರಾಶಿಯವರ ಅದೃಷ್ಟದ ಫಲಗಳು ಹೀಗಿವೆ
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  ಮಿಥುನದಲ್ಲಿ ರವಿಯ ಸಂಚಾರ: ವ್ಯಾಪಾರದಲ್ಲಿ ಆದಾಯ ಇರುತ್ತೆ; ಮೇಷ,ವೃಷಭ, ಮಿಥುನ, ಕಟಕ ರಾಶಿಯವರ ಅದೃಷ್ಟದ ಫಲಗಳು ಹೀಗಿವೆ

ಮಿಥುನದಲ್ಲಿ ರವಿಯ ಸಂಚಾರ: ವ್ಯಾಪಾರದಲ್ಲಿ ಆದಾಯ ಇರುತ್ತೆ; ಮೇಷ,ವೃಷಭ, ಮಿಥುನ, ಕಟಕ ರಾಶಿಯವರ ಅದೃಷ್ಟದ ಫಲಗಳು ಹೀಗಿವೆ

ಜೂನ್ 15 ರಿಂದ ಮಿಥುನ ರಾಶಿಗೆ ಸೂರ್ಯನ ಪ್ರವೇಶವಾಗಲಿದೆ. ಇದು 12 ರಾಶಿಯವರ ಮೇಲೆ ಪರಿಣಾಮ ಬೀರುತ್ತದೆ. ಆದರೆ ಮೇಷ, ವೃಷಭ, ಮಿಥುನ, ಕಟಕ ರಾಶಿಯವರಿಗೆ ಇರುವ ಶುಭಫಲಗಳನ್ನು ತಿಳಿಯಿರಿ.

2025ರ ಜೂನ್ ನಲ್ಲಿ ಸಂಭವಿಸಲಿರುವ ಸೂರ್ಯ ಸಂಕ್ರಮಣದಿಂದ ಮೇಷ, ವೃಷಭ, ಮಿಥುನ ಹಾಗೂ ಕಟಕ ರಾಶಿಯವರಿಗೆ ಏನೆಲ್ಲಾ ಶುಭಫಲಗಳಿವೆ ಎಂಬುದನ್ನು ಇಲ್ಲಿ ವಿವರಿಸಲಾಗಿದೆ
2025ರ ಜೂನ್ ನಲ್ಲಿ ಸಂಭವಿಸಲಿರುವ ಸೂರ್ಯ ಸಂಕ್ರಮಣದಿಂದ ಮೇಷ, ವೃಷಭ, ಮಿಥುನ ಹಾಗೂ ಕಟಕ ರಾಶಿಯವರಿಗೆ ಏನೆಲ್ಲಾ ಶುಭಫಲಗಳಿವೆ ಎಂಬುದನ್ನು ಇಲ್ಲಿ ವಿವರಿಸಲಾಗಿದೆ

ರವಿಯು 2025ರ ಜೂನ್ 15 ರ ಭಾನುವಾರದಿಂದ ಜುಲೈ 16 ರ ಬುಧವಾರದವರೆಗು ಮಿಥುನ ರಾಶಿಯಲ್ಲಿ ಸಂಚರಿಸುತ್ತಾನೆ. ಸೂರ್ಯನ ಈ ಸಂಚಾರದಿಂದ ದಾಂಪತ್ಯ ಜೀವನದ ಬಗ್ಗೆ ತಿಳಿಯಬಹುದು. ಪಾಲುಗಾರಿಕೆಯ ವ್ಯಾಪಾರ, ಸ್ಟಾಕ್ ಮತ್ತು ಷೇರಿನ ವ್ಯವಹಾರದ ಬಗ್ಗೆಯೂ ಇದರಿಂದ ತಿಳಿಯಬಹುದು. ಇದೇ ರಾಶಿಯಲ್ಲಿ ಗುರುವು ಸಂಚರಿಸುವ ಕಾರಣ ತಂದೆ ಮತ್ತು ಮಕ್ಕಳ ನಡುವಿನ ಸಂಬಂಧವನ್ನು ತಿಳಿಯಬಹುದು. ಗುರು ಹಿರಿಯರನ್ನು ಭೇಟಿಮಾಡುವ ಸಾಧ್ಯಾಸಾಧ್ಯತೆಯನ್ನು ಸೂಚಿಸುತ್ತದೆ. ನಮ್ಮ ಬುದ್ಧಿವಂತಿಕೆಯ ಪ್ರಯೋಜನ ಈ ತಿಂಗಳಲ್ಲಿ ಬಹುಮುಖ್ಯವಾಗುತ್ತದೆ. ಮೇಷ, ವೃಷಭ, ಮಿಥುನ ಹಾಗೂ ಕಟಕ ರಾಶಿಯವರಿಗೆ ಸೂರ್ಯ ಸಂಚಾರದಿಂದ ಏನೆಲ್ಲಾ ಶುಭಫಲಗಳಿವೆ ಎಂಬುದನ್ನು ತಿಳಿಯೋಣ.

ಮೇಷ ರಾಶಿ

ಕೌಟುಂಬಿಕ ಜೀವನದಲ್ಲಿ ಆಸಹನೀಯ ಘಟನೆಗಳು ಎದುರಾಗುತ್ತವೆ. ಬಾಳ ಸಂಗಾತಿಗೆ ಅನಾರೋಗ್ಯ ಇರಲಿದೆ. ತಾಯಿಯವರ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದರು, ಮನಸ್ಸಿಗೆ ನೆಮ್ಮದಿ ಇರುವುದಿಲ್ಲ. ನಿಮ್ಮ ಸ್ವಂತ ಕೆಲಸ ಕಾರ್ಯಗಳಲ್ಲಿ ಅಡ್ಡಿ ಆತಂಕಗಳು ಎದುರಾಗುತ್ತವೆ. ಉತ್ತಮ ಆದಾಯವಿರುತ್ತದೆ. ಆದರೆ ಸ್ವಂತ ವಿಚಾರಗಳಿಗೆ ಅದನ್ನು ಬಳಸಿಕೊಳ್ಳಲು ಸಾಧ್ಯವಾಗುವುದಿಲ್ಲ. ಸ್ವಂತ ಕೆಲಸ ಕಾರ್ಯಗಳಿಗೆ ಪ್ರಥಮ ಆದ್ಯತೆ ನೀಡುವಿರಿ. ಆದರೆ ಬೇರೆಯವರ ಸಹಾಯ ಸಹಕಾರವು ದೊರೆಯುವುದಿಲ್ಲ. ಕ್ರಮೇಣವಾಗಿ ಕುಟುಂಬದ ಸದಸ್ಯರ ಸಹಾಯದಿಂದ ನಿಮ್ಮ ಜೀವನದಲ್ಲಿ ಸಕಾರಾತ್ಮಕ ಬದಲಾವಣೆಗಳು ಕಂಡುಬರುತ್ತದೆ. ಸ್ವತಂತ್ರವಾಗಿ ಮಾಡುವ ವ್ಯಾಪಾರ ವ್ಯವಹಾರಗಳಲ್ಲಿ ಉತ್ತಮ ಆದಾಯ ಇರಲಿದೆ. ಮನೆತನಕ್ಕೆ ಸಂಬಂಧಿಸಿದ ಭೂವಿವಾದವು ಪರಿಹಾರವಾಗುತ್ತದೆ. ನಿಮ್ಮ ಪ್ರಯತ್ನಕ್ಕೆ ತಕ್ಕಂತಹ ಫಲಗಳು ದೊರೆಯುತ್ತವೆ. ಕೋಪವನ್ನು ತೊರೆದು ಎಲ್ಲರೊಂದಿಗೆ ಪ್ರೀತಿ ವಿಶ್ವಾಸದಿಂದ ವರ್ತಿಸುವುದು ಅತಿ ಮುಖ್ಯ. ಕೇವಲ ನಿಮ್ಮ ಒಳ್ಳೆಯ ಗುಣತೆಗಳು ಮಾತ್ರ ಜೀವನಕ್ಕೆ ಹೊಸ ಅರ್ಥವನ್ನು ನೀಡಲಿದೆ.

ವೃಷಭ ರಾಶಿ

ಮನದಲ್ಲಿ ಗೆಲ್ಲಲೇ ಬೇಕೆಂಬ ಹಠ ಇರುತ್ತದೆ. ಸದಾಕಾಲ ನಿಮ್ಮ ಆದಾಯದ ಬಗ್ಗೆ ಯೋಚಿಸುವಿರಿ. ಆರೋಗ್ಯದಲ್ಲಿ ಯಾವುದೇ ತೊಂದರೆ ಕಂಡುಬರುವುದಿಲ್ಲ. ನಿಮ್ಮ ಪ್ರಯತ್ನಗಳಿಗೆ ಸಹೋದ್ಯೋಗಿಗಳ ಸಹಾಯ ಸಹಕಾರ ಇರುತ್ತದೆ. ಕುಟುಂಬದ ಜವಾಬ್ದಾರಿಯು ನಿಮ್ಮದಾಗುತ್ತದೆ. ಸ್ವಂತ ಕೆಲಸ ಕಾರ್ಯಗಳ ನಡುವೆ ಸೋದರರ ಜವಾಬ್ದಾರಿಯೂ ನಿಮ್ಮದಾಗುತ್ತದೆ. ಅತಿಯಾದ ನಿಧಾನದ ಕಾರಣ ಅತಿ ಮುಖ್ಯವಾದ ಅವಕಾಶವನ್ನು ದೂರಮಾಡಿಕೊಳ್ಳುವಿರಿ. ಬಾಳ ಸಂಗಾತಿಯ ಆಸೆ ಆಕಾಂಕ್ಷೆಗಳನ್ನು ಪೂರೈಸಲು ಪ್ರಯತ್ನಿಸುವಿರಿ. ಮನೆಯ ಹೆಣ್ಣುಮಕ್ಕಳು ತಮ್ಮ ನಿಸ್ವಾರ್ಥದ ಬುದ್ದಿಯಿಂದ ಎಲ್ಲರ ಮನ ಸೆಳೆಯುತ್ತಾರೆ. ಹಣಕಾಸಿನ ತೊಂದರೆ ಇರುವುದಿಲ್ಲ. ಸಣ್ಣದಾಗಿ ಆರಂಭಿಸಿದ ವ್ಯಾಪಾರವನ್ನು ವಿಸ್ತರಿಸಲು ಯತ್ನಿಸಿ ಯಶಸ್ಸನ್ನು ಗಳಿಸುವಿರಿ. ಕುಟುಂಬದಲ್ಲಿನ ಒಮ್ಮತಕ್ಕೆ ಎಲ್ಲರ ಮೆಚ್ಚುಗೆ ದೊರೆಯುತ್ತದೆ. ಉದ್ಯೋಗದಲ್ಲಿ ಆಸಕ್ತಿ ಕಡಿಮೆಯಾಗುತ್ತದೆ. ಸ್ವಂತ ಉದ್ದಿಮೆ ಸ್ಥಾಪಿಸಲು ಕುಟುಂಬದ ಹಿರಿಯರ ಸಹಾಯ ಸಹಕಾರ ದೊರೆಯುತ್ತದೆ. ಮಕ್ಕಳ ವಿವಾಹಕ್ಕೆ ಸಮಯ ಕೂಡಿಬರುತ್ತದೆ. ಚಿಕ್ಕ ಪುಟ್ಟ ಪ್ರವಾಸಗಳಿಗೆ ತೃಪ್ತಿ ಪಡುವಿರಿ.

ಮಿಥುನ ರಾಶಿ

ಸಿಡುಕಿನ ಗುಣಕ್ಕೆ ಆತ್ಮೀಯರು ಸಹ ಬೇಸರ ವ್ಯಕ್ತಿಪಡಿಸುತ್ತಾರೆ. ನಿಮ್ಮ ತಪ್ಪನ್ನು ಮನ್ನಿಸಿ ಗಣ್ಯವ್ಯಕ್ತಿಯೊಬ್ಬರು ನಿಮ್ಮ ಸಹಾಯಕ್ಕೆ ಬರಲಿದ್ದಾರೆ. ಕುಟುಂಬದಲ್ಲಿ ಬೇಸರದ ಛಾಯೆ ಮೂಡುತ್ತದೆ. ಆತ್ಮೀಯರ ಜೊತೆಗೂಡಿ ಪಾಲುಗಾರಿಕೆಯ ವ್ಯಾಪಾರವೊಂದನ್ನು ಆರಂಭಿಸುವ ಸಾಧ್ಯತೆಗಳು ಕಂಡುಬರಲಿವೆ. ಸಹೋದರರ ಜೀವನದಲ್ಲಿ ಅನುಕೂಲಕರ ಬದಲಾವಣೆಗಳು ಕಂಡುಬರಲಿವೆ. ದಂಪತಿ ನಡುವೆ ಉತ್ತಮ ಅನ್ಯೋನ್ಯತೆ ಇರಲಿದೆ. ಕ್ರಮೇಣವಾಗಿ ನಿಮ್ಮ ಆರ್ಥಿಕ ಪರಿಸ್ಥಿತಿಯು ಸುಧಾರಿಸುತ್ತದೆ. ಹಳೆಯ ಸ್ನೇಹಿತರೊಬ್ಬರ ಆಗಮನದಿಂದ ಕುಟುಂಬದಲ್ಲಿ ಹೊಸ ಆಶಾಭಾವನೆ ಉಂಟಾಗುತ್ತದೆ. ಉದ್ಯೋಗದಲ್ಲಿ ನಿರೀಕ್ಷಿತ ಮಟ್ಟವನ್ನು ತಲುಪಲು ಸಾಧ್ಯವಾಗುತ್ತದೆ. ಹೊಸ ಉದ್ಯೋಗದ ಅವಕಾಶಗಳು ಕಂಡುಬಂದರೂ ಅದನ್ನು ಸದುಪಯೋಗಪಡಿಸಿಕೊಳ್ಳುವಲ್ಲಿ ವಿಫಲರಾಗುವಿರಿ. ಉತ್ತಮ ಆದಾಯ ಇರುತ್ತದೆ. ಆತ್ಮವಿಶ್ವಾಸದಿಂದ ಕೆಲಸ ಕಾರ್ಯಗಳಲ್ಲಿ ಪಾಲ್ಗೊಳ್ಳುವಿರಿ. ಉತ್ತಮ ಆದಾಯಕ್ಕೆ ಹೊಸ ಯೋಜನೆಗಳಲ್ಲಿ ಹಣವನ್ನು ವಿನಿಯೋಗಿಸುವಿರಿ. ಕುಟುಂಬದ ತ್ಯಾಗದ ಮನೋಭಾವನೆಯಿಂದ ಜೀವನದಲ್ಲಿ ಸುಖ ಶಾಂತಿ ನೆಲೆಸಿರುತ್ತದೆ. ಪ್ರಾಣಿ ಪಕ್ಷಿಗಳಿಂದ ದೂರವಿರಿ.

ಕಟಕ ರಾಶಿ

ನಿಮ್ಮ ಕೆಲಸ ಕಾರ್ಯಗಳ ಬಗ್ಗೆ ಹೆಚ್ಚಿನ ಆಸಕ್ತಿ ಇರುವುದಿಲ್ಲ. ಮನೆತನದ ವ್ಯಾಪಾರವನ್ನು ಮುಂದುವರಿಸುವ ಅವಕಾಶ ದೊರೆತರೂ ಉಪಯೋಗವಿಲ್ಲ. ಸ್ವಂತ ವ್ಯಾಪಾರ ವ್ಯವಹಾರದಲ್ಲಿ ಆಸಕ್ತಿ ಇರುತ್ತದೆ. ಉದ್ಯೋಗದಲ್ಲಿ ಯಾವುದೇ ಬದಲಾವಣೆಗಳು ಎದುರಾಗುವುದಿಲ್ಲ. ಆತ್ಮೀಯರ ಸಹಾಯದಿಂದ ಉದ್ಯೋಗವನ್ನು ಬದಲಾಯಿಸುವಿರಿ. ಸ್ವಂತ ಮನೆಯ ಆಸೆಯು ಈಡೇರುತ್ತವೆ. ಅವಿವಾಹಿತರಿಗೆ ವಿವಾಹಯೋಗವಿದೆ. ನಿಮ್ಮ ಹಣಕಾಸಿನ ವ್ಯವಹಾರದಲ್ಲಿ ಆತ್ಮೀಯರ ಪಾತ್ರವಿರುತ್ತದೆ. ಅನಿರೀಕ್ಷಿತವಾಗಿ ದೂರದ ಊರಿಗೆ ಪ್ರಯಾಣ ಬೆಳೆಸುವಿರಿ. ಅನಿರೀಕ್ಷಿತವಾಗಿ ದೂರವಾಗಿದ್ದ ಸೋದರರು ಮರಳಿ ನಿಮ್ಮ ಬಳಿ ಬರುತ್ತಾರೆ. ಮಕ್ಕಳಿಗೆ ಉತ್ತಮ ಸಹಾಯ ಸಹಕಾರ ದೊರೆತಲ್ಲಿ ಮಾತ್ರ ಜೀವನದಲ್ಲಿ ಮಹತ್ತರ ಬದಲಾವಣೆಗಳು ಉಂಟಾಗಲಿವೆ. ಉತ್ತಮ ಆರೋಗ್ಯ ಇರಲಿದೆ. ಹಣಕಾಸಿನ ತೊಂದರೆ ಇರುವುದಿಲ್ಲ. ವಾಸಸ್ಥಳವನ್ನು ಬದಲಿಸುವಿರಿ. ಒತ್ತಡದ ಸನ್ನಿವೇಶದಲ್ಲಿಯೂ ನಿಮ್ಮ ನಿರ್ಧಾರಗಳನ್ನು ಬದಲಿಸುವುದಿಲ್ಲ. ಕ್ರಮೇಣವಾಗಿ ಎದುರಾಗುವ ಪರಿಸ್ಥಿತಿಗೆ ಹೊಂದುಕೊಂಡು ಬಾಳುವಿರಿ. ನವ ವಿವಾಹಿತರಿಗೆ ಸಂತಾನಯೋಗವಿದೆ.

ಬರಹ: ಹೆಚ್‌. ಸತೀಶ್‌, ಜ್ಯೋತಿಷಿ, ಬೆಂಗಳೂರು

(ಗಮನಿಸಿ: ಜ್ಯೋತಿಷ್ಯ ಶಾಸ್ತ್ರದ ಲೆಕ್ಕಾಚಾರಕ್ಕೆ ಹಲವು ಸೂತ್ರಗಳಿವೆ. ನಿರ್ದಿಷ್ಟ ರೀತಿಯಲ್ಲಿ ಕ್ರಮಬದ್ಧವಾಗಿ ಈ ರಾಶಿ ಭವಿಷ್ಯ ನೀಡಲಾಗಿದೆ. ಆದರೆ ಒಟ್ಟಾರೆಯಾಗಿ ಜ್ಯೋತಿಷ್ಯ ಎನ್ನುವುದು ನಂಬಿಕೆಯ ಮಾತು. ಓದುಗರ ನಂಬಿಕೆಯನ್ನು ಹಿಂದೂಸ್ತಾನ್ ಟೈಮ್ಸ್ ಕನ್ನಡ ಗೌರವಿಸುತ್ತದೆ. ಇಲ್ಲಿರುವ ಯಾವುದೇ ಶಿಫಾರಸು ಅಥವಾ ಸಲಹೆಗಳನ್ನು ಪಾಲಿಸುವುದು ಓದುಗರ ವಿವೇಚನೆ, ನಂಬಿಕೆಗೆ ಬಿಟ್ಟ ವಿಷಯವಾಗಿರುತ್ತದೆ).

Raghavendra M Y

TwittereMail
ರಾಘವೇಂದ್ರ ಎಂ.ವೈ: 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದಲ್ಲಿ ಸೀನಿಯರ್ ಕಂಟೆಂಟ್ ಪ್ರೊಡ್ಯೂಸರ್. ರಾಶಿ ಭವಿಷ್ಯ (ಧರ್ಮ) ವಿಭಾಗದಲ್ಲಿ ಕಾರ್ಯನಿರ್ವಹಣೆ. ಪ್ರಜಾವಾಣಿ, ಉದಯ ನ್ಯೂಸ್, ದಿಗ್ವಿಜಯ ನ್ಯೂಸ್, ಫಸ್ಟ್ ನ್ಯೂಸ್, ಡಿಡಿ ಚಂದನ ನ್ಯೂಸ್, ಈ-ಟಿವಿ ಭಾರತದಲ್ಲಿ ಬುಲೆಟಿನ್ ಪ್ರೊಡ್ಯೂಸರ್ ಸೇರಿ ವಿವಿಧ ವಿಭಾಗಗಳಲ್ಲಿ ಒಟ್ಟು 12 ವರ್ಷ ಅನುಭವ. ಪುಸ್ತಕ, ಪತ್ರಿಕೆ ಓದುವುದು ಇಷ್ಟ. ವಾಣಿಜ್ಯ, ಕ್ರಿಕೆಟ್, ಗ್ರಾಮೀಣ ವಿದ್ಯಮಾನಗಳ ಬಗ್ಗೆ ಇಷ್ಟಪಟ್ಟು ಬರೆಯುತ್ತಾರೆ. ಕೋಲಾರ ಜಿಲ್ಲೆಯ ಮಾಲೂರು ತಾಲೂಕಿನ ಮಿರುಪನಹಳ್ಳಿ ಇವರ ಸ್ವಂತ ಊರು. ಸದ್ಯಕ್ಕೆ ಬೆಂಗಳೂರು ನಿವಾಸಿ.
ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.