ಮಿಥುನದಲ್ಲಿ ರವಿಯ ಸಂಚಾರ: ವಿವಾಹದ ಯೋಗವಿದೆ; ಸಿಂಹ, ಕನ್ಯಾ, ತುಲಾ, ವೃಶ್ಚಿಕ ರಾಶಿಯವರ ಅದೃಷ್ಟದ ಫಲಗಳಿವು
ಜೂನ್ 15 ರಿಂದ ಮಿಥುನ ರಾಶಿಗೆ ಸೂರ್ಯನ ಪ್ರವೇಶವಾಗಲಿದೆ. ಇದು 12 ರಾಶಿಯವರ ಮೇಲೆ ಪರಿಣಾಮ ಬೀರುತ್ತದೆ. ಆದರೆ ಸಿಂಹ, ಕನ್ಯಾ, ತುಲಾ ಹಾಗೂ ವೃಶ್ಚಿಕ ರಾಶಿಯವರಿಗೆ ಏನೆಲ್ಲಾ ಶುಭಫಲಗಳಿವೆ ಎಂಬುದನ್ನು ತಿಳಿಯಿರಿ.

ರವಿಯು 2025ರ ಜೂನ್ 15 ರ ಭಾನುವಾರದಿಂದ ಜುಲೈ 16 ರ ಬುಧವಾರದವರೆಗು ಮಿಥುನ ರಾಶಿಯಲ್ಲಿ ಸಂಚರಿಸುತ್ತಾನೆ. ಸೂರ್ಯನ ಈ ಸಂಚಾರದಿಂದ ದಾಂಪತ್ಯ ಜೀವನದ ಬಗ್ಗೆ ತಿಳಿಯಬಹುದು. ಪಾಲುಗಾರಿಕೆಯ ವ್ಯಾಪಾರ, ಸ್ಟಾಕ್ ಮತ್ತು ಷೇರಿನ ವ್ಯವಹಾರದ ಬಗ್ಗೆಯೂ ಇದರಿಂದ ತಿಳಿಯಬಹುದು. ಇದೇ ರಾಶಿಯಲ್ಲಿ ಗುರುವು ಸಂಚರಿಸುವ ಕಾರಣ ತಂದೆ ಮತ್ತು ಮಕ್ಕಳ ನಡುವಿನ ಸಂಬಂಧವನ್ನು ತಿಳಿಯಬಹುದು. ಗುರು ಹಿರಿಯರನ್ನು ಭೇಟಿಮಾಡುವ ಸಾಧ್ಯಾಸಾಧ್ಯತೆಯನ್ನು ಸೂಚಿಸುತ್ತದೆ. ನಮ್ಮ ಬುದ್ಧಿವಂತಿಕೆಯ ಪ್ರಯೋಜನ ಈ ತಿಂಗಳಲ್ಲಿ ಬಹುಮುಖ್ಯವಾಗುತ್ತದೆ. ಸಿಂಹ, ಕನ್ಯಾ, ತುಲಾ ಹಾಗೂ ವೃಶ್ಚಿಕ ರಾಶಿಯವರಿಗೆ ಸೂರ್ಯ ಸಂಚಾರದಿಂದ ಏನೆಲ್ಲಾ ಶುಭಫಲಗಳಿವೆ ಎಂಬುದನ್ನು ತಿಳಿಯಿರಿ.
ಸಿಂಹ ರಾಶಿ
ಸಮಯ ಸಂದರ್ಭವನ್ನು ಅರ್ಥೈಸಿಕೊಂಡು ಜೀವನದಲ್ಲಿ ಮುಂದುವರೆಯುವಿರಿ. ನಿಮ್ಮ ಮನಸ್ಸನ್ನು ಅರಿತುಕೊಳ್ಳಲು ಯಾರಿಂದಲೂ ಸಾಧ್ಯವಾಗುವುದಿಲ್ಲ. ನಿಮ್ಮಲ್ಲಿ ಅಸಾಧಾರಣ ಧೈರ್ಯ ಸಾಹಸದ ಗುಣ ಇರುತ್ತದೆ. ಧಾರ್ಮಿಕ ಗುರುಗಳನ್ನು ಭೇಟಿಮಾಡುವ ಅವಕಾಶ ದೊರೆಯುತ್ತದೆ. ನಿಮ್ಮ ತೀರ್ಮಾನಗಳನ್ನು ಬದಲಿಸುವುದಿಲ್ಲ. ಆತ್ಮೀಯರ ಜೀವನದ ಕಷ್ಟ ನಷ್ಟಗಳನ್ನು ದೂರಮಾಡುವ ಪ್ರಯತ್ನ ಮಾಡುವಿರಿ. ನಿಮ್ಮ ತಂದೆಯವರ ಉದ್ಯೋಗದಲ್ಲಿ ಆತಂಕದ ಪರಿಸ್ಥಿತಿಯು ಎದುರಾಗಲಿದೆ. ಒಂದೇ ಮಾದರಿಯ ಕೆಲಸ ಕಾರ್ಯಗಳಲ್ಲಿ ಆಸಕ್ತಿ ತೋರುವುದಿಲ್ಲ. ಆದ್ದರಿಂದ ಉದ್ಯೋಗವನ್ನು ಬದಲಿಸುವ ನಿರ್ಧಾರಕ್ಕೆ ಬರುವಿರಿ. ವಿದ್ಯಾರ್ಥಿಗಳಿಗೆ ವಿದೇಶದಲ್ಲಿ ಉದ್ಯೋಗ ದೊರೆವ ಸಂಭವವಿದೆ. ದೂರದ ಸಂಬಂಧಿಯ ಜೊತೆಯಲ್ಲಿ ವಿವಾಹವಾಗುತ್ತದೆ. ನಿಮ್ಮ ಹಾಸ್ಯದ ಪ್ರಕೃತಿಯು ಎಲ್ಲರ ಮನಗೆಲ್ಲುತ್ತದೆ. ದಂಪತಿಯರು ದೀರ್ಘಕಾಲದ ಪ್ರವಾಸಕ್ಕೆ ತೆರಳುತ್ತಾರೆ. ಹಣಕಾಸಿನ ತೊಂದರೆ ಇರುವುದಿಲ್ಲ. ಸೋದರಿಯ ಜೀವನದ ಸಮಸ್ಯೆಯನ್ನು ಮಾತುಕತೆಯಿಂದ ದೂರಮಾಡುವಿರಿ. ಕುಟುಂಬ ಮಾತ್ರವಲ್ಲದೆ ಸಮಾಜದಲ್ಲಿಯೂ ನಿಮ್ಮ ಗೌರವ ಪ್ರತಿಷ್ಠೆಯನ್ನು ಹೆಚ್ಚಿಸಿಕಿಳ್ಳುವಿರಿ.
ಕನ್ಯಾ ರಾಶಿ
ಬಂಧು ವರ್ಗದಲ್ಲಿ ನೀವಿಲ್ಲದೆ ಯಾವುದೇ ಕೆಲಸಕಾರ್ಯಗಳು ನಡೆಯುವುದಿಲ್ಲ. ವಯಸ್ಸಿಗೆ ಮೀರಿದ ಬುದ್ಧಿವಂತಿಕೆ ನಿಮ್ಮಲ್ಲಿ ಇರುತ್ತದೆ. ವಯೋವೃದ್ಧರು ಮಕ್ಕಳ ಜೊತೆಯಲ್ಲಿ ದೀರ್ಘಕಾಲದ ಪ್ರಯಾಣಕ್ಕೆ ತೆರಳುತ್ತಾರೆ. ಶಾಸ್ತ್ರ ಸಂಪ್ರದಾಯಗಳಲ್ಲಿ ಹೆಚ್ಚಿನ ಆಸಕ್ತಿ ಇರುತ್ತದೆ. ಮಕ್ಕಳ ಜೀವನದಲ್ಲಿ ಸಂತಸದ ಘಳಿಗೆಗಳು ಇರಲಿವೆ. ಹಣಕಾಸಿನ ತೊಂದರೆ ಇರುವುದಿಲ್ಲ. ಸೋದರರ ಮನೆಯ ಮಂಗಳ ಕಾರ್ಯಗಳ ನೇತೃತ್ವವನ್ನು ವಹಿಸಿಕೊಳ್ಳುವಿರಿ. ವಿದ್ಯಾರ್ಥಿಗಳು ಹೆಚ್ಚಿನ ಪ್ರಯತ್ನದಿಂದ ಉನ್ನತ ವ್ಯಾಸಂಗದಲ್ಲಿ ಮೇಲ್ಮಟ್ಟವನ್ನು ತಲುಪಲಿದ್ದಾರೆ. ಧಾರ್ಮಿಕ ಸ್ಥಳಗಳಿಗೆ ಭೇಟಿ ನೀಡುವಿರಿ. ಹೆಣ್ಣುಮಕ್ಕಳ ಜೀವನದ ಆತಂಕವು ದೂರವಾಗುತ್ತವೆ. ನಿಮ್ಮ ಸೋದರನ ಆರೋಗ್ಯದಲ್ಲಿ ತೊಂದರೆ ಕಂಡುಬರುತ್ತವೆ. ಉದ್ಯೋಗದಲ್ಲಿ ಯಾವುದೇ ಬದಲಾವಣೆಗಳು ಇರುವುದಿಲ್ಲ. ಹಣದ ಕೊರತೆ ನೀಗಲು ಸಣ್ಣ ಪ್ರಮಾಣದ ವ್ಯಾಪಾರವನ್ನು ಆರಂಭಿಸುವಿರಿ. ನಿಮಗೆ ಕೀಲುನೋವಿನ ತೊಂದರೆ ಇರುತ್ತದೆ. ಕುಟುಂಬದಲ್ಲಿ ಇದ್ದ ಅಶಾಂತಿಯ ಸನ್ನಿವೇಶವು ಮರೆಯಾಗುತ್ತದೆ. ಹೊಸ ವಾಹನವನ್ನು ಕೊಳ್ಳುವಿರಿ. ತಪ್ಪು ಮಾತಿನಿಂದ ಆತ್ಮೀಯರಲ್ಲಿ ಬೇಸರ ಮೂಡುತ್ತದೆ.
ತುಲಾ ರಾಶಿ
ಜೀವನದಲ್ಲಿ ಯಾವುದೇ ತೊಂದರೆ ಎದುರಾದರೂ ಸತ್ಯ ನಿಷ್ಠೆಯ ಹಾದಿಯಲ್ಲಿ ನಡೆಯುವಿರಿ. ನಿಮ್ಮ ಪ್ರತಿಭೆಗೆ ತಕ್ಕಂತಹ ಅವಕಾಶಗಳು ದೊರೆಯುವುದಿಲ್ಲ. ಅನಿವಾರ್ಯವಾಗಿ ಉದ್ಯೋಗವನ್ನು ಬದಲಿಸುವಿರಿ. ಹೊರಗಿನ ವ್ಯಕ್ತಿಗಳಿಂದಲೂ ನಿಮಗೆ ಉತ್ತಮ ಸಹಾಯ ಸಹಕಾರ ದೊರೆಯುತ್ತದೆ. ಕುಟುಂಬದ ಜವಾಬ್ದಾರಿಯು ನಿಮ್ಮದಾಗುತ್ತದೆ. ನಿಮ್ಮ ಮಕ್ಕಳಿಂದ ಶುಭ ವರ್ತಮಾನವೊಂದು ಬರಲಿದೆ. ಆತುರದಿಂದ ನಿಮ್ಮ ಕೆಲಸ ಕಾರ್ಯಗಳಲ್ಲಿ ಹಿನ್ನೆಡೆ ಉಂಟಾಗಲಿದೆ. ಹಣಕಾಸಿನ ತೊಂದರೆ ಇದ್ದರೂ, ಕುಟುಂಬದ ಸದಸ್ಯರ ಸಹಾಯ ದೊರೆಯುತ್ತದೆ. ಮನೆತನದ ಭೂವಿವಾದವು ದೂರವಾಗುತ್ತದೆ. ವಿದ್ಯಾರ್ಥಿಗಳು ಆತಂಕದ ಪರಿಸ್ಥಿತಿಯನ್ನು ಎದುರಿಸುತ್ತಾರೆ. ಕುಟುಂಬದಲ್ಲಿ ಮನಸ್ತಾಪ ಇದ್ದರೂ ಬಹುಕಾಲ ಇರುವುದಿಲ್ಲ. ಸಂಘ ಸಂಸ್ಥೆಗಳನ್ನು ಆರಂಭಿಸುವ ಆಸೆಯು ಈಡೇರುತ್ತದೆ. ರಾಜಕೀಯದಲ್ಲಿ ನಿಮಗೆ ಉನ್ನತ ಸ್ಥಾನ ದೊರೆಯುತ್ತದೆ. ಸ್ತ್ರೀಯರಿಗೆ ಉದ್ಯೋಗದಲ್ಲಿ ವಿಶೇಷವಾದ ಸವಲತ್ತುಗಳು ದೊರೆಯುತ್ತವೆ. ಕಲುಷಿತ ಆಹಾರ ಸೇವನೆಯಿಂದ ಉದರ ಸಂಬಂಧಿತ ದೋಷವು ಉಂಟಾಗುತ್ತದೆ. ಸಾಕುಪ್ರಾಣಿಗಳ ಬಗ್ಗೆ ವಿಶೇಷವಾದ ಅಕ್ಕರೆ ತೋರುವಿರಿ.
ವೃಶ್ಚಿಕ ರಾಶ ಿ
ನಿಮ್ಮ ಮನಸ್ಸನ್ನು ಅರ್ಥಮಾಡಿಕೊಳ್ಳಲು ಯಾರಿಗೂ ಸಾಧ್ಯವಾಗುವುದಿಲ್ಲ. ಸ್ಥಿರವಾದ ಮನಸ್ಸಿರುವುದಿಲ್ಲ. ಇದರಿಂದ ಆರಂಭಿಸಿದ ಕೆಲಸ ಕಾರ್ಯಗಳಲ್ಲಿ ನಿರೀಕ್ಷಿತ ಯಶಸ್ಸು ದೊರೆಯುವುದಿಲ್ಲ. ಸ್ತ್ರೀಯರು ತವರುಮನೆಯಲ್ಲಿ ದೀರ್ಘಕಾಲ ಉಳಿಯುತ್ತಾರೆ. ಸಾಂಸಾರಿಕ ಜೀವನದಲ್ಲಿ ಎದುರಾಗುವ ಮನಸ್ತಾಪವು ಬಹುಕಾಲ ಉಳಿಯುವುದಿಲ್ಲ. ಹಣಕಾಸಿನ ಕೊರತೆ ಇರುವುದಿಲ್ಲ. ಬಂಧು ಬಳಗದಲ್ಲಿ ನಿಮಗೆ ವಿಶೇಷವಾದ ಗೌರವ ಲಭಿಸುತ್ತದೆ. ನಿಮ್ಮ ತಪ್ಪನ್ನು ಮರೆಮಾಚುವಿರಿ. ಆದರೆ ಬೇರೆಯವರ ತಪ್ಪನ್ನು ಎಲ್ಲರ ಗಮನಕ್ಕೂ ಬರುವಂತೆ ಮಾಡುವಿರಿ. ಸಣ್ಣ ಪುಟ್ಟ ವಿಚಾರಗಳಿಗೂ ಸಿಡುಕಿನಿಂದ ವರ್ತಿಸುವಿರಿ. ನಿಮ್ಮ ತೀರ್ಮಾನಗಳನ್ನು ಬಲವಂತವಾಗಿ ಎಲ್ಲರ ಮೇಲೂ ಬಲವಂತವಾಗಿ ಹೇರುವಿರಿ. ಸುಲಭವಾಗಿ ಬೇರೆಯವರ ಪ್ರಭಾವಕ್ಕೆ ಒಳಗಾಗುವುದಿಲ್ಲ. ಉತ್ತಮ ಆರೋಗ್ಯ ಇರುತ್ತದೆ. ಆದರೆ ಅನಪೇಕ್ಷಿತ ಕಾರಣಗಳಿಂದ ಕೈಕಾಲುಗಳಿಗೆ ತೊಂದರೆ ಆಗುವ ಸಾಧ್ಯತೆಗಳಿವೆ. ಮಕ್ಕಳನ್ನು ಪ್ರೀತಿ ವಿಶ್ವಾಸದಿಂದ ಕಾಣುವಿರಿ. ವಿದ್ಯಾರ್ಥಿಗಳಿಗೆ ಅವಧಿಗೂ ಮುಂಚಿತವಾಗಿಯೇ ಉದ್ಯೋಗ ದೊರೆಯುವ ಸಾಧ್ಯತೆಗಳಿವೆ. ರಕ್ತಕ್ಕೆ ಸಂಬಂಧಿಸಿದ ತೊಂದರೆ ಇದ್ದರೆ ಎಚ್ಚರಿಕೆ ವಹಿಸಬೇಕು.
ಬರಹ: ಹೆಚ್. ಸತೀಶ್, ಜ್ಯೋತಿಷಿ, ಬೆಂಗಳೂರು
(ಗಮನಿಸಿ: ಜ್ಯೋತಿಷ್ಯ ಶಾಸ್ತ್ರದ ಲೆಕ್ಕಾಚಾರಕ್ಕೆ ಹಲವು ಸೂತ್ರಗಳಿವೆ. ನಿರ್ದಿಷ್ಟ ರೀತಿಯಲ್ಲಿ ಕ್ರಮಬದ್ಧವಾಗಿ ಈ ರಾಶಿ ಭವಿಷ್ಯ ನೀಡಲಾಗಿದೆ. ಆದರೆ ಒಟ್ಟಾರೆಯಾಗಿ ಜ್ಯೋತಿಷ್ಯ ಎನ್ನುವುದು ನಂಬಿಕೆಯ ಮಾತು. ಓದುಗರ ನಂಬಿಕೆಯನ್ನು ಹಿಂದೂಸ್ತಾನ್ ಟೈಮ್ಸ್ ಕನ್ನಡ ಗೌರವಿಸುತ್ತದೆ. ಇಲ್ಲಿರುವ ಯಾವುದೇ ಶಿಫಾರಸು ಅಥವಾ ಸಲಹೆಗಳನ್ನು ಪಾಲಿಸುವುದು ಓದುಗರ ವಿವೇಚನೆ, ನಂಬಿಕೆಗೆ ಬಿಟ್ಟ ವಿಷಯವಾಗಿರುತ್ತದೆ).