ಈ ರಾಶಿಯ ಹುಡುಗಿಯರನ್ನು ಮದುವೆಯಾದರೆ ಅದೃಷ್ಟವಂತೆ; ಜಾತಕ ಹೊಂದಾಣಿಕೆಯಲ್ಲಿ ಈ ವಿಷಯದ ಮೇಲಿರಲಿ ಗಮನ
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಕೆಲವು ರಾಶಿಗಳ ಹುಡುಗಿಯರು ಪುರುಷರ ಜೀವನದಲ್ಲಿ ಬಂದರೆ ಅವರ ಜೀವನ ಸ್ವರ್ಗಮಯವಾಗಿರುತ್ತದೆ. ಮನೆ ಹೂವಿನ ಹಾಸಿಗೆಯಾಗಿ ಬದಲಾಗುತ್ತದೆ. ಹಾಗಾದರೆ ಆ ರಾಶಿಚಕ್ರದ ಚಿಹ್ನೆಗಳು ಯಾವುವು ನೋಡೋಣ.
ಹೆಂಡತಿಯೊಬ್ಬಳು ಮನೆಯೊಳಗಿದ್ದರೆ ನನಗದು ಕೋಟಿ ರೂಪಾಯಿ. ಈ ಜನಪ್ರಿಯ ಹಾಡು ಯಾರಿಗೆ ಗೊತ್ತಿಲ್ಲ. ಜೀವನದಲ್ಲಿ ಒಳ್ಳೆಯ ಹೆಂಡತಿಯನ್ನು ಪಡೆದವರಿಗೆ ಸ್ವರ್ಗ ಕೈಯಲ್ಲಿದ್ದಂತೆ ಭಾಸವಾಗುತ್ತದೆ. ಗಂಡಿನ ಜೀವನದಲ್ಲಿ ಹೆಣ್ಣು ಮನೆಯನ್ನು ಬೆಳಗಿಸುವವಳಾಗಿರಬೇಕು. ಗಂಡನ ಸುಖ–ದುಃಖ ಎರಡರಲ್ಲೂ ಪಾಲುದಾರಳಾಗಿರಬೇಕು. ಹೆಂಡತಿ ಸೌಂದರ್ಯವತಿ ಮಾತ್ರವಲ್ಲದೆ ದಯೆ, ಕರುಣೆ ಹೊಂದಿರಬೇಕು, ಜೀವನದಲ್ಲಿ ಪ್ರೀತಿ ತುಂಬುವಂತವಳಾಗಿರಬೇಕು ಎನ್ನುವುದು ಎಲ್ಲರ ಆಸೆಯೂ ಆಗಿರುತ್ತದೆ.
ಬುದ್ಧಿವಂತ ಪತ್ನಿ ದೊರೆತರೆ ಪುರುಷನ ಜೀವನ ಸ್ವರ್ಗ. ಇಲ್ಲವಾದರೆ ನರಕವೇ ಎನ್ನಬಹುದು. ಒಬ್ಬರಿಗೊಬ್ಬರು ಅರ್ಥಮಾಡಿಕೊಂಡು ಜೀವನದ ಹಾದಿಯಲ್ಲಿ ಆದರ್ಶ ಸತಿ ಪತಿಗಳಾಗಬೇಕು ಎಂಬುದನ್ನು ಎಲ್ಲರೂ ಹಂಬಲಿಸುತ್ತಾರೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಕೆಲವು ರಾಶಿಗೆ ಸೇರಿದ ಹುಡುಗಿಯರಲ್ಲಿ ಆದರ್ಶ ಹೆಂಡತಿಯಾಗುವ ಎಲ್ಲಾ ಗುಣಲಕ್ಷಣಗಳು ಇರುತ್ತವೆ. ಅಂತಹ ಹುಡುಗಿಯರು ಹೆಂಡತಿಯಾಗಿ ಬಂದರೆ ಜೀವನವು ಹೂವಿನ ಹಾಸಿಗೆಯಾಗಿರುತ್ತದೆ. ಹಾಗಾದರೆ ಯಾವ ರಾಶಿಯ ಹುಡುಗಿಯರಲ್ಲಿ ಗಂಡ, ಮನೆಯನ್ನು ಜೋಡಿಸಿಕೊಂಡು ಹೋಗುವ, ಜೀವನವನ್ನು ಸುಂದರವನ್ನಾಗಿಸುವ ಲಕ್ಷಣವಿರುತ್ತದೆ ಇಲ್ಲಿದೆ ಓದಿ.
ಕಟಕ ರಾಶಿ
ಕಟಕ ರಾಶಿಯ ಅಧಿಪತಿ ಚಂದ್ರ. ಶಾಂತಿಯುತ, ಸುಂದರ ಮನಸ್ಸನ್ನು ಹೊಂದಿರುವವನು. ಹಾಗಾಗಿ ಈ ರಾಶಿಯ ಹುಡುಗಿಯರಿಗೆ ಮನೆಯ ವಾತಾವರಣವನ್ನು ಸುಂದರಗೊಳಿಸುವ ಸಾಮರ್ಥ್ಯವಿರುತ್ತದೆ. ಮನೆಯಲ್ಲಿ ಪ್ರೀತಿಯನ್ನು ಸೃಷ್ಟಿಸುವ ಗುಣ ನೈಸರ್ಗಿಕವಾಗಿಯೇ ಅವರಲ್ಲಿರುತ್ತದೆ. ಎಲ್ಲಕ್ಕಿಂತ ಹೆಚ್ಚಾಗಿ, ಅವರು ತಮ್ಮ ಪ್ರೀತಿಪಾತ್ರರ ಯೋಗಕ್ಷೇಮಕ್ಕೆ ಹೆಚ್ಚಿನ ಆದ್ಯತೆ ನೀಡುತ್ತಾರೆ. ಈ ರಾಶಿಯ ಹುಡುಗಿಯನ್ನು ಹೆಂಡತಿಯನ್ನಾಗಿ ಪಡೆದರೆ, ಗಂಡನ ಸಂತೋಷಕ್ಕೆ ಮಿತಿಯೇ ಇರುವುದಿಲ್ಲ. ಅವಳು ಗಂಡನಿಗೆ ಸದಾ ಬೆಂಬಲವನ್ನು ಒದಗಿಸುವ ಹೆಂಡತಿಯಾಗುತ್ತಾಳೆ. ಜೀವನವನ್ನು ಜೊತೆಗೂಡಿ ನಡೆಸಲು ಮೀಸಲಿಟ್ಟಿರುತ್ತಾಳೆ. ಸಂಬಂಧದಲ್ಲಿ ಭದ್ರತೆಯ ಭಾವವನ್ನು ಮೂಡಿಸುವಲ್ಲಿಯೂ ಅವಳು ಉತ್ತಮವಾಗಿರುತ್ತಾಳೆ. ಅಷ್ಟೇ ಅಲ್ಲದೇ ಅಡುಗೆಯಲ್ಲೂ ನುರಿತ ಅನುಭವವಿರುತ್ತದೆ. ಈ ರಾಶಿಯ ಹುಡುಗಿಯರು ತಮ್ಮ ಮನೆಗಳನ್ನು ಸುಖ–ಸಮೃದ್ಧಿ, ಸ್ನೇಹ ಮತ್ತು ಶಾಂತಿಯುತ ವಾತಾವರಣದಿಂದ ತುಂಬಿರುವಂತೆ ನೋಡಿಕೊಳ್ಳುತ್ತಾರೆ.
ವೃಷಭ ರಾಶಿ
ವೃಷಭ ರಾಶಿಯ ಹುಡುಗಿಯರಲ್ಲಿ ಬಲವಾದ, ವಿಶ್ವಾಸಾರ್ಹ, ಆದರ್ಶ ಪತ್ನಿಯ ಗುಣಗಳು ಹೇರಳವಾಗಿರುತ್ತದೆ. ಪ್ರೀತಿ, ಸೌಂದರ್ಯ ಮತ್ತು ಆಕರ್ಷಣೆಗೆ ಸಂಬಂಧಿಸಿದ ಶುಕ್ರನು ಈ ರಾಶಿಯ ಅಧಿಪತಿ. ವೃಷಭ ರಾಶಿಯ ಜನರು ತಮ್ಮ ಅಚಲ ನಿಷ್ಠೆ ಮತ್ತು ಬದ್ಧತೆಗೆ ಹೆಸರುವಾಸಿಯಾಗಿದ್ದಾರೆ. ಅವರು ದಾಂಪತ್ಯದಲ್ಲಿ ಸ್ಥಿರತೆ ಮತ್ತು ಸಾಮರಸ್ಯವನ್ನು ಬಯಸುತ್ತಾರೆ. ಅವರಲ್ಲಿ ಸಮರ್ಪಣೆಯ ಭಾವ ಹೆಚ್ಚಿರುತ್ತದೆ. ಅವರೊಂದಿಗಿನ ಜೀವನವು ಒಂದು ಸಿಹಿ ಅನುಭವವಾಗಿರುತ್ತದೆ. ಈ ರಾಶಿಯ ಹುಡುಗಿಯರು ನಿಮ್ಮ ಬಾಳಸಂಗಾತಿಯಾದರೆ ನಿಮ್ಮ ಜೀವನ ಮತ್ತು ಕುಟುಂಬವು ಸ್ವರ್ಗವಾಗುವುದು ಖಚಿತ. ಮನೆಯನ್ನು ಶಾಂತಿಯುತವಾಗಿಡಲು ಅವರು ನಿರಂತರವಾಗಿ ಶ್ರಮಿಸುತ್ತಾರೆ. ಎಲ್ಲಕ್ಕಿಂತ ಮೊದಲು ಕುಟುಂಬಕ್ಕೆ ಆದ್ಯತೆ ನೀಡುತ್ತಾರೆ.
ತುಲಾ ರಾಶಿ
ತುಲಾ ರಾಶಿಯನ್ನು ಸಹ ಪ್ರೀತಿಯ ಸಂಬಂಧಗಳ ಗ್ರಹವಾದ ಶುಕ್ರನಿಂದಲೇ ಆಳಲ್ಪಡುತ್ತದೆ. ಈ ರಾಶಿಯವರ ಜಾತಕವೇ ಬಹಳ ಆಕರ್ಷಕವಾಗಿರುತ್ತದೆ. ಅವರು ತಮ್ಮ ಸಂಗಾತಿಯೊಂದಿಗೆ ಸ್ನೇಹ ಮತ್ತು ಸಾಮರಸ್ಯದ ಬಂಧವನ್ನು ರೂಪಿಸಿಕೊಳ್ಳುತ್ತಾರೆ. ಪತಿಗೆ ಅನುಗುಣವಾಗಿ ಮುನ್ನಡೆಯುತ್ತಾರೆ. ಪರಸ್ಪರ ಗೌರವವನ್ನು ನೀಡುವುದರ ಜೊತೆಗೆ ಇತರರನ್ನು ಸಹ ಅರ್ಥಮಾಡಿಕೊಳ್ಳುತ್ತಾರೆ. ಈ ರಾಶಿಯವರು ಹೆಂಡತಿಯಾಗಿ ಬಂದರೆ ಜೀವನ ಅದ್ಭುತವಾಗಿರುತ್ತದೆ. ದಂಪತಿ ಮಧ್ಯೆ ಯಾವುದೇ ರೀತಿಯ ಮನಸ್ತಾಪ ಇರುವುದಿಲ್ಲ. ಎಲ್ಲಾ ಪರಿಸ್ಥಿತಿಯನ್ನು ಎರಡೂ ದೃಷ್ಠಿಯಿಂದ ಯೋಚಿಸುವಂತಹ ನೈಸರ್ಗಿಕ ಸಾಮರ್ಥ್ಯವನ್ನು ಹೊಂದಿರುತ್ತಾರೆ. ಕಠಿಣ ಸಂದರ್ಭಗಳಲ್ಲಿ ರಾಜಿ ಮಾಡಿಕೊಳ್ಳುವ ಮನಸ್ಥಿತಿಯನ್ನು ಹೊಂದಿರುತ್ತಾರೆ. ಸಹಕಾರವನ್ನು ಬೆಳೆಸುವಲ್ಲಿ ಮುಂದಾಳತ್ವ ವಹಿಸುತ್ತಾರೆ. ಅವರ ಸುಂದರ ವರ್ತನೆಯು ಮೆಚ್ಚುವಂಥದ್ದಾಗಿದೆ. ಈ ರಾಶಿಯ ಹುಡುಗಿಯರು ತಮ್ಮ ಮನೆಯನ್ನು ಚೆನ್ನಾಗಿ ನೋಡಿಕೊಳ್ಳುತ್ತಾರೆ. ಗಂಡನ ಭಾವನೆಗಳನ್ನು ಅರ್ಥ ಮಾಡಿಕೊಂಡು ಅದರಂತೆ ನಡೆದುಕೊಳ್ಳುವ ಸ್ವಭಾವ ಅವರರಿಗೆ ಇರುತ್ತದೆ. ಹಠಾತ್ ಪ್ರವೃತ್ತಿಗಿಂತ ಚಿಂತನಶೀಲರಾಗಿ ವರ್ತಿಸುತ್ತಾರೆ.
ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ "ಹಿಂದೂಸ್ತಾನ್ ಟೈಮ್ಸ್ ಕನ್ನಡ" ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ.
ಬರಹ: ಅರ್ಚನಾ ಹೆಗ್ಡೆ