Horoscope Today: ವಾದ-ವಿವಾದಗಳಿಗೆ ಹೆದರುವುದಿಲ್ಲ, ಹಣಕಾಸಿನ ವಿಚಾರಕ್ಕೆ ಸಾಕ್ಷಿದಾರರಾಗದಿರಿ; ಮೇಷದಿಂದ ಕಟಕ ರಾಶಿವರೆಗಿನ ದಿನಭವಿಷ್ಯ
10 ಏಪ್ರಿಲ್ 2024 ಬುಧವಾರ: ಜ್ಯೋತಿಷ್ಯಶಾಸ್ತ್ರದ ಪ್ರಕಾರ, ಪ್ರತಿ ರಾಶಿಗೂ ಅದರದ್ದೇ ಆದ ಅಧಿಪತಿ ಇದ್ದಾನೆ. ಆಯಾ ರಾಶಿಗಳ ಜನರು ಮಾಡುವ ಪಾಪ-ಪುಣ್ಯಗಳಿಗೆ ಅನುಸಾರವಾಗಿ ಗ್ರಹಗತಿಗಳ ಫಲಗಳು ಸಿಗುತ್ತವೆ. ಮೇಷ, ವೃಷಭ, ಮಿಥುನ, ಕಟಕ ರಾಶಿಯವರಿಗೆ ಇಂದು ಏನು ಫಲ? ಇಂದಿನ ದಿನ ಭವಿಷ್ಯ ಇಲ್ಲಿದೆ. (10th April 2024 Daily Horoscope)

ಇಂದಿನ ರಾಶಿ ಭವಿಷ್ಯ: 'ನಾಳೆ ಏನಾಗುವುದೋ ಬಲ್ಲವರು ಯಾರು' ಎನ್ನುವುದು ತತ್ವಸಾಸ್ತ್ರದ ದೊಡ್ಡ ಮಾತು. ಜನಪ್ರಿಯ ಭಕ್ತಿಗೀತೆಯ ಸಾಲೂ ಹೌದು. ಎಷ್ಟೋ ಜನರು ದಿನ ಆರಂಭಿಸುವ ಮೊದಲು, ಏನಾದರೂ ಮಹತ್ವದ ಕೆಲಸಗಳನ್ನು ಆರಂಭಿಸುವ ಮೊದಲು 'ದಿನ ಭವಿಷ್ಯ' ಹೇಗಿದೆ ಎಂದು ನೋಡಿಕೊಳ್ಳುವುದು ರೂಢಿ ಇರಿಸಿಕೊಂಡಿದ್ದಾರೆ. ಅಂಥವರಿಗೆ ಕೈದೀಲವಿಗೆಯಾಗುವ ಬರಹ ಇದು. ಜ್ಯೋತಿಷ್ಯ ಶಾಸ್ತ್ರವನ್ನು ಸಾಂಪ್ರದಾಯಿಕವಾಗಿ ಅಭ್ಯಾಸ ಮಾಡಿರುವ ಹಿರಿಯ ಜ್ಯೋತಿಷಿ ಎಚ್. ಸತೀಶ್ ಎಲ್ಲ ರಾಶಿಗಳ ಭವಿಷ್ಯವನ್ನು ಶ್ರದ್ಧೆಯಿಂದ ಬರೆಯುತ್ತಾರೆ. ಈ ಮಾತನ್ನು ಒತ್ತಿ ಹೇಳಲು ಕಾರಣವಿದೆ. ಇದು ಜ್ಯೋತಿಷಿಯೇ ಬರೆಯುವ ರಾಶಿ ಭವಿಷ್ಯ. ನಿಮ್ಮ ನಂಬಿಕೆಗಳನ್ನು ನಾವು ಗೌರವಿಸುತ್ತೇವೆ. (10th April 2024 Horoscope)
ಇಂದಿನ ಪಂಚಾಂಗ
ಶ್ರೀ ಕ್ರೋಧಿನಾಮ ಸಂವತ್ಸರ, ಉತ್ತರಾಯನ, ವಸಂತ ಋತು, ಚೈತ್ರ ಮಾಸ, ಶುಕ್ಲಪಕ್ಷ, ಬುಧವಾರ
ತಿಥಿ: ಬಿದಿಗೆ ರಾತ್ರಿ 7.59 ರವರೆಗೂ ಇರುತ್ತದೆ. ಅನಂತರ ತದಿಗೆ ಆರಂಭವಾಗುತ್ತದೆ.
ನಕ್ಷತ್ರ: ಅಶ್ವಿನಿ ನಕ್ಷತ್ರವು ಬೆಳಿಗ್ಗೆ 6.57 ರವರೆಗೂ ಇರುತ್ತದೆ. ಉಪರಿ ಭರಣಿ ನಕ್ಷತ್ರ ಇರುತ್ತದೆ.
ಸೂರ್ಯೋದಯ: ಬೆಳಿಗ್ಗೆ 6.09
ಸೂರ್ಯಾಸ್ತ: ಸಂಜೆ 6.31
ರಾಹುಕಾಲ: ಬೆಳಿಗ್ಗೆ 12.00 ರಿಂದ ಮಧ್ಯಾಹ್ನ 1.30
ಮೇಷ
ಎಷ್ಟೇ ಬುದ್ಧಿವಂತರಾದರೂ ಮನದಲ್ಲಿ ಆತಂಕದ ಭಾವನೆ ಇರುತ್ತದೆ. ಕೈ ಹಿಡಿದ ಕೆಲಸ ಕಾರ್ಯದಲ್ಲಿ ಯಶಸ್ಸು ಲಭಿಸುತ್ತದೆ. ಕುಟುಂಬದಲ್ಲಿ ಪರಸ್ಪರ ನಂಬಿಕೆ ಇರುತ್ತದೆ. ವಿದ್ಯಾರ್ಥಿಗಳಿಗೆ ನೂತನ ಆವಿಷ್ಕಾರದ ಗುಣವಿರುತ್ತದೆ. ಉನ್ನತ ವಿದ್ಯಾಭ್ಯಾಸಕ್ಕೆ ಉತ್ತಮ ಅವಕಾಶ ದೊರೆಯಲಿದೆ. ಬುದ್ಧಿವಂತಿಕೆಯಿಂದ ಎದುರಾಗುವ ತೊಂದರೆಯಿಂದ ಪಾರಾಗುವಿರಿ. ತಾಯಿಯವರಿಗೆ ಸೇರಿದ ಆಸ್ತಿಯ ವಿವಾದ ಪರಿಹರಿಸುವಿರಿ. ವಾದ ವಿವಾದಗಳಿಗೆ ಹೆದರುವುದಿಲ್ಲ. ಸೋದರರ ಹಣದ ಕೊರತೆ ಕಡಿಮೆ ಮಾಡುವಿರಿ. ಆರೋಗ್ಯದ ಬಗ್ಗೆ ಗಮನ ಇರಲಿ. ಶಾಂತಿಯ ಮಾತುಕತೆ ಸುಖಜೀವನಕ್ಕೆ ಕಾರಣವಾಗುತ್ತದೆ. ಮನೆಯ ಮುಂದಿರುವ ಗಿಡಗಳನ್ನು ಸಂರಕ್ಷಿಸುವಿರಿ. ಧಾರ್ಮಿಕ ಕಾರ್ಯಗಳನ್ನು ನೆರವೇರಿಸುವಿರಿ.
ಪರಿಹಾರ: ಕುಟುಂಬದ ಹಿರಿಯರಿಗೆ ಬೆಳ್ಳಿಯ ವಸ್ತುವನ್ನು ಉಡುಗೊರೆಯಾಗಿ ನೀಡಿ ದಿನದ ಕೆಲಸವನ್ನು ಆರಂಭಿಸಿ.
ಅದೃಷ್ಟದ ಸಂಖ್ಯೆ: 11
ಅದೃಷ್ಟದ ದಿಕ್ಕು: ದಕ್ಷಿಣ
ಅದೃಷ್ಟದ ಬಣ್ಣ: ಗುಲಾಬಿ ಬಣ್ಣ
ವೃಷಭ
ಕುಟುಂಬದ ಒಗ್ಗಟ್ಟಿಗೆ ಧಕ್ಕೆ ಬರುವ ಘಟನೆ ನಡೆಯಲಿದೆ. ಬೇಸರದಿಂದ ಹೊರಬರಲು ಮಕ್ಕಳ ಜೊತೆಯಲ್ಲಿ ಮನರಂಜನಾ ಸ್ಥಳಕ್ಕೆ ತೆರಳುವಿರಿ. ಸತತ ಪ್ರಯತ್ನದಿಂದ ಕೈಹಿಡಿದ ಕೆಲಸಗಳಲ್ಲಿ ಯಶಸ್ಸು ಗಳಿಸುವಿರಿ. ಸೋದರಿಯೊಬ್ಬರು ನಿಮ್ಮ ಸಹಾಯವನ್ನು ಬಯಸಿ ಬರಬಹುದು. ಸಾರಿಗೆ ವ್ಯವಸ್ಥೆಯನ್ನು ಕಲ್ಪಿಸುವ ವ್ಯಾಪಾರದಲ್ಲಿ ಉತ್ತಮ ಲಾಭಾಂಶ ದೊರೆಯಲಿದೆ. ಷೇರಿನ ವ್ಯವಹಾರದಲ್ಲಿ ಆದಾಯವಿರುತ್ತದೆ. ವಿವಾಹ ಯೋಗವಿದೆ. ಉದ್ಯೋಗದಲ್ಲಿ ಸ್ಥಿರತೆ ಕಂಡುಬರುತ್ತದೆ. ವಿದ್ಯಾರ್ಥಿಗಳು ನಿರೀಕ್ಷಿತ ಫಲಗಳನ್ನು ಪಡೆಯುತ್ತಾರೆ. ಆತ್ಮೀಯರ ಜೊತೆಯಲ್ಲಿ ಹಣಕಾಸಿನ ಸಂಸ್ಥೆಯನ್ನು ಆರಂಭಿಸುವಿರಿ. ಕುಟುಂಬದಲ್ಲಿನ ಮಕ್ಕಳಿಗೆ ಉಡುಗೊರೆಯನ್ನು ನೀಡುವಿರಿ.
ಪರಿಹಾರ: ಜೇನು ಸೇವಿಸಿ ನೀರನ್ನು ಕುಡಿದ ನಂತರ ದಿನದ ಕೆಲಸವನ್ನು ಆರಂಭಿಸಿ.
ಅದೃಷ್ಟದ ಸಂಖ್ಯೆ: 2
ಅದೃಷ್ಟದ ದಿಕ್ಕು: ನೈರುತ್ಯ
ಅದೃಷ್ಟದ ಬಣ್ಣ : ಬಿಳಿ ಬಣ್ಣ
ಮಿಥುನ
ಯಂತ್ರೋಪಕರಣಗಳ ಸರಬರಾಜಿನ ವ್ಯಾಪಾರದಲ್ಲಿ ಉತ್ತಮ ಲಾಭ ದೊರೆಯುತ್ತದೆ. ವಿದ್ಯಾರ್ಥಿಗಳು ಆತ್ಮವಿಶ್ವಾಸದಿಂದ ಉನ್ನತ ಅಧ್ಯಯನವನ್ನು ಆರಂಭಿಸಲಿದ್ದೀರಿ. ಉದ್ಯೋಗದಲ್ಲಿ ಸಾಧಾರಣ ಮಟ್ಟದ ಬದಲಾವಣೆಗಳು ಉಂಟಾಗಲಿವೆ. ಶಾಲಾ ಕಾಲೇಜು ಅಥವ ಬೋಧನಾ ಕೇಂದ್ರವನ್ನು ಆರಂಭಿಸುವ ಗುರಿ ತಲುಪುವಿರಿ. ಬೇರೆಯವರ ಮನಸ್ಸಿಗೆ ಬೇಸರ ಆಗುವಂತೆ ಮಾತನಾಡುವಿರಿ. ಹಣದ ಕೊರತೆ ಕಡಿಮೆ ಮಾಡಲು ಒಂದಕ್ಕಿಂತಲೂ ಹೆಚ್ಚಿನ ಉದ್ಯೋಗವನ್ನು ಮಾಡಲಿದ್ದೀರಿ. ಆದಾಯದಲ್ಲಿ ಪ್ರಗತಿ ಕಂಡುಬರುತ್ತದೆ. ಬೇರೆಯವರ ಹಣಕಾಸಿನ ವಿಚಾರದಲ್ಲಿ ಸಾಕ್ಷೀದಾರರಾಗದಿರಿ. ಅವಿವಾಹಿತರಿಗೆ ವಿವಾಹಯೋಗವಿದೆ. ಹಿರಿಯರ ಆಸ್ತಿಯಲ್ಲಿನ ಮನಸ್ತಾಪ ದೂರವಾಗುತ್ತದೆ.
ಪರಿಹಾರ: ಪುಟ್ಟ ಮಕ್ಕಳಿಗೆ ಬೆಣ್ಣೆ ನೀಡಿ ಇಂದಿನ ಕೆಲಸ ಆರಂಭಿಸಿ.
ಅದೃಷ್ಟದ ಸಂಖ್ಯೆ: 5
ಅದೃಷ್ಟದ ದಿಕ್ಕು : ಪಶ್ಚಿಮ
ಅದೃಷ್ಟದ ಬಣ್ಣ: ಬೂದು ಬಣ್ಣ
ಕಟಕ
ಸಮಯಕ್ಕೆ ತಕ್ಕಂತಹ ತೀರ್ಮಾನದಿಂದ ವಿವಾದವಿಲ್ಲದೆ ಜೀವನ ನಡೆಸುವಿರಿ. ಉದ್ಯೋಗದಲ್ಲಿ ಉನ್ನತ ಅಧಿಕಾರ ಲಭಿಸುತ್ತದೆ. ಒಳ್ಳೆಯ ಅವಕಾಶ ದೊರೆತು ಉದ್ಯೋಗವನ್ನು ಬದಲಾಯಿಸುವ ಸಾಧ್ಯತೆ ಇದೆ. ವಿದ್ಯಾರ್ಥಿಗಳು ಅಧ್ಯಯನದಲ್ಲಿ ಮುಂಚೂಣಿಯಲ್ಲಿ ಇರುತ್ತಾರೆ. ದಿನಬಳಕೆಯ ಪದಾರ್ಥಗಳ ವ್ಯಾಪಾರದಲ್ಲಿ ಹೆಚ್ಚಿನ ಆದಾಯ ಗಳಿಸುವಿರಿ. ಹಣಕಾಸಿನ ವ್ಯವಹಾರದಲ್ಲಿಅನಿರೀಕ್ಷಿತ ಬದಲಾವಣೆಗಳು ತೋರುತ್ತವೆ. ಸಂಗಾತಿ ಮತ್ತು ಮಕ್ಕಳ ಜೊತೆಯಲ್ಲಿ ದೀರ್ಘಕಾಲದ ಪ್ರವಾಸ ಆಯೋಜಿಸುವಿರಿ. ಸ್ನೇಹಿತರ ವಿವಾಹಕ್ಕೆ ಸಹಾಯ ಮಾಡುವಿರಿ. ಕುಟುಂಬದ ಸದಸ್ಯರ ಜೊತೆಯಲ್ಲಿ ಸಂತೋಷದಿಂದ ದಿನ ಕಳೆಯುವಿರಿ. ಷೇರಿನ ವ್ಯವಹಾರದಲ್ಲಿ ಲಾಭವಿದೆ. ಪುಟ್ಟ ಮಕ್ಕಳ ಆರೋಗ್ಯದಲ್ಲಿ ತೊಂದರೆ ಕಂಡುಬರಲಿದೆ.
ಪರಿಹಾರ: ಕೈ ಅಥವಾ ಕಾಲಿನಲ್ಲಿ ಕಪ್ಪು ದಾರವನ್ನು ಧರಿಸುವುದರಿಂದ ಶುಭವಿರುತ್ತದೆ.
ಅದೃಷ್ಟದ ಸಂಖ್ಯೆ: 12
ಅದೃಷ್ಟದ ದಿಕ್ಕು: ಉತ್ತರ
ಅದೃಷ್ಟದ ಬಣ್ಣ: ಕಂದು ಬಣ್ಣ
ಬರಹ: ಎಚ್. ಸತೀಶ್, ಜ್ಯೋತಿಷಿ
ಮೊಬೈಲ್: 85468 65832
(ಗಮನಿಸಿ: ಜ್ಯೋತಿಷ್ಯ ಶಾಸ್ತ್ರದ ಲೆಕ್ಕಾಚಾರಕ್ಕೆ ಹಲವು ಸೂತ್ರಗಳಿವೆ. ನಿರ್ದಿಷ್ಟ ರೀತಿಯಲ್ಲಿ ಕ್ರಮಬದ್ಧವಾಗಿ ಈ ರಾಶಿ ಭವಿಷ್ಯ ನೀಡಲಾಗಿದೆ. ಆದರೆ ಒಟ್ಟಾರೆಯಾಗಿ ಜ್ಯೋತಿಷ್ಯ ಎನ್ನುವುದು ನಂಬಿಕೆಯ ಮಾತು. ಓದುಗರ ನಂಬಿಕೆಯನ್ನು 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಗೌರಿವಸುತ್ತದೆ. ಇಲ್ಲಿರುವ ಯಾವುದೇ ಶಿಫಾರಸು ಅಥವಾ ಸಲಹೆಗಳನ್ನು ಪಾಲಿಸುವುದು ಓದುಗರ ವಿವೇಚನೆ, ನಂಬಿಕೆಗೆ ಬಿಟ್ಟ ವಿಷಯವಾಗಿರುತ್ತದೆ).
