ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  Horoscope Today: ವ್ಯಾಪಾರ ವ್ಯವಹಾರಗಳಲ್ಲಿ ಹೊಸ ಅವಕಾಶ, ಗೃಹೋತ್ಪನ್ನಗಳ ಮಾರಾಟದಲ್ಲಿ ಮಹಿಳೆಯರಿಗೆ ಉತ್ತಮ ಆದಾಯ: ಏ 16ರ ರಾಶಿಫಲ

Horoscope Today: ವ್ಯಾಪಾರ ವ್ಯವಹಾರಗಳಲ್ಲಿ ಹೊಸ ಅವಕಾಶ, ಗೃಹೋತ್ಪನ್ನಗಳ ಮಾರಾಟದಲ್ಲಿ ಮಹಿಳೆಯರಿಗೆ ಉತ್ತಮ ಆದಾಯ: ಏ 16ರ ರಾಶಿಫಲ

16 ಏಪ್ರಿಲ್‌ 2024: ಪ್ರತಿಯೊಂದು ರಾಶಿಗೂ ಅದರದ್ದೇ ಆದ ಅಧಿಪತಿಗಳಿರುತ್ತಾರೆ. ಪಾಪ-ಪುಣ್ಯಗಳಿಗೆ ಅನುಸಾರವಾಗಿ ಗ್ರಹಗತಿಗಳು ಫಲಾಫಲಗಳನ್ನು ನೀಡುತ್ತವೆ. ಮೇಷ, ವೃಷಭ, ಮಿಥುನ, ಕಟಕ, ರಾಶಿಯವರಿಗೆ ಇಂದು ಏನು ಫಲ? ಇಂದಿನ ದಿನಭವಿಷ್ಯ ಇಲ್ಲಿದೆ. (16th April 2024 Daily Horoscope).

16 ಏಪ್ರಿಲ್‌ 2024 ದಿನ ಭವಿಷ್ಯ
16 ಏಪ್ರಿಲ್‌ 2024 ದಿನ ಭವಿಷ್ಯ

ಇಂದಿನ ರಾಶಿ ಭವಿಷ್ಯ: ನಾಳೆ ಏನಾಗುವುದೋ ಬಲ್ಲವರು ಯಾರು' ಎನ್ನುವುದು ತತ್ವಶಾಸ್ತ್ರದ ದೊಡ್ಡ ಮಾತು. ಜನಪ್ರಿಯ ಭಕ್ತಿಗೀತೆಯ ಸಾಲೂ ಹೌದು. ಎಷ್ಟೋ ಜನರು ದಿನ ಆರಂಭಿಸುವ ಮೊದಲು, ಏನಾದರೂ ಮಹತ್ವದ ಕೆಲಸಗಳನ್ನು ಆರಂಭಿಸುವ ಮೊದಲು 'ದಿನ ಭವಿಷ್ಯ' ಹೇಗಿದೆ ಎಂದು ನೋಡಿಕೊಳ್ಳುವ ರೂಢಿ ಇರಿಸಿಕೊಂಡಿದ್ದಾರೆ. ಅಂಥವರಿಗೆ ಕೈದೀವಿಗೆಯಾಗುವ ಬರಹ ಇದು. ಜ್ಯೋತಿಷ್ಯ ಶಾಸ್ತ್ರವನ್ನು ಸಾಂಪ್ರದಾಯಿಕವಾಗಿ ಅಭ್ಯಾಸ ಮಾಡಿರುವ ಹಿರಿಯ ಜ್ಯೋತಿಷಿ ಎಚ್. ಸತೀಶ್ ಪ್ರತಿದಿನ ಅಚ್ಚುಕಟ್ಟಾಗಿ ಎಲ್ಲ ರಾಶಿಗಳ ಭವಿಷ್ಯವನ್ನು ಶ್ರದ್ಧೆಯಿಂದ ಬರೆಯುತ್ತಾರೆ. ಈ ಮಾತನ್ನು ಒತ್ತಿ ಹೇಳಲು ಕಾರಣವಿದೆ. ಇದು ಜ್ಯೋತಿಷಿಯೇ ಬರೆಯುವ ರಾಶಿ ಭವಿಷ್ಯ. ನಿಮ್ಮ ನಂಬಿಕೆಗಳನ್ನು ನಾವು ಗೌರವಿಸುತ್ತೇವೆ. (16th April 2024 Daily Horoscope).

ಇಂದಿನ ಪಂಚಾಂಗ

ಶ್ರೀ ಕ್ರೋಧಿನಾಮ ಸಂವತ್ಸರ-ಉತ್ತರಾಯಣ-ವಸಂತ ಋತು-ಚೈತ್ರ ಮಾಸ-ಶುಕ್ಲಪಕ್ಷ-ಮಂಗಳವಾರ

ತಿಥಿ: ಅಷ್ಟಮಿ 04.07 ವರೆಗು ಇರುತ್ತದೆ ನಂತರ ನವಮಿ ಆರಂಭವಾಗುತ್ತದೆ.

ನಕ್ಷತ್ರ : ಪುಷ್ಯ ನಕ್ಷತ್ರವು ದಿನಪೂರ್ತಿ ಇರುತ್ತದೆ.

ಸೂರ್ಯೋದಯ: ಬೆಳಗ್ಗೆ 06.06

ಸೂರ್ಯಾಸ್ತ: ಸಂಜೆ 06.31

ರಾಹುಕಾಲ: 03.00 ರಿಂದ 04.30 ವರೆಗೆ

ರಾಶಿಫಲ

ಮೇಷ

ದುಡಿದು ಬೇಸತ್ತ ಕಾರಣ ಸಹನೆ ಕಳೆದುಕೊಳ್ಳುವಿರಿ. ಒಳ್ಳೆಯದು ಮತ್ತು ಕೆಟ್ಟದ್ದರ ಪರಿವಿಲ್ಲದೆ ನಿಮ್ಮ ಕರ್ತವ್ಯದಲ್ಲಿ ನಿರತರಾಗುವಿರಿ. ಎದುರಾಗುವ ಸಮಸ್ಯೆಗಳಿಗೆ ಪರಿಹಾರ ಕಂಡುಹಿಡಿಯುವ ಕೆಲಸ ಮಾಡುವಿರಿ. ಕುಟುಂಬದಲ್ಲಿ ಬಿಗುವಿನ ವಾತಾವರಣವಿರುತ್ತದೆ. ಸಂಗಾತಿಯ ಸಲಹೆ ಪಾಲಿಸಿ ತೊಂದರೆಯಿಂದ ಪಾರಾಗುವಿರಿ. ಹಣಕಾಸಿನ ಕೊರತೆ ಎದುರಾಗದು. ಉದ್ಯೋಗದಲ್ಲಿ ಹೆಚ್ಚಿನ ಜವಾಬ್ದಾರಿ ದೊರೆಯುತ್ತದೆ. ಗೃಹಿಣಿಯರಿಗೆ ವಿಶ್ರಾಂತಿ ಕನಸಿನ ಮಾತಾಗಲಿದೆ. ಮಕ್ಕಳು ಉದ್ಯೋಗದ ಸಲುವಾಗಿ ವಿದೇಶಕ್ಕೆ ಪ್ರಯಾಣ ಮಾಡುವರು. ಸ್ವಂತ ವ್ಯಾಪಾರ ವ್ಯವಹಾರವು ಲಾಭದ ಹಾದಿಯಲಿ ಸಾಗುತ್ತದೆ. ವಿದ್ಯಾರ್ಥಿಗಳು ಒತ್ತಡದಲ್ಲಿ ವಿದ್ಯಾಭ್ಯಾಸವನ್ನು ಮುಂದುವರೆಸುತ್ತಾರೆ.

ಪರಿಹಾರ : ಕುಟುಂಬದ ಹಿರಿಯರ ಮಾರ್ಗದರ್ಶನದಲ್ಲಿ ದಿನದ ಕೆಲಸವನ್ನು ಆರಂಭಿಸಿರಿ.

ಅದೃಷ್ಟದ ಸಂಖ್ಯೆ : 7

ಅದೃಷ್ಟದ ದಿಕ್ಕು : ಉತ್ತರ

ಅದೃಷ್ಟದ ಬಣ್ಣ: ಕಿತ್ತಳೆ

ವೃಷಭ

ಬೇರೆಯವರ ಸಲಹೆಯನ್ನು ಒಪ್ಪಿಕೊಳ್ಳುವ ಮನಸ್ಸು ಇರುವುದಿಲ್ಲ. ಮನಸ್ಸಿಗೆ ಒಳ್ಳೆಯದೆಂದು ತಿಳಿದುಬರುವ ಕೆಲಸ ಮಾಡುವಿರಿ. ಸಂಗಾತಿ ಮತ್ತು ಮಕ್ಕಳ ಜೊತೆ ಪ್ರೀತಿ ವಿಶ್ವಾಸದಿಂದ ದಿನ ಕಳೆಯುವಿರಿ. ಕುಟುಂಬದವರ ಪ್ರೀತಿ ವಿಶ್ವಾಸ ಸದಾ ನಿಮಗಿರುತ್ತದೆ. ಉದ್ಯೋಗದಲ್ಲಿ ನಕಾರಾತ್ಮಕ ಬದಲಾವಣೆಗಳು ಕಂಡು ಬರುವುದಿಲ್ಲ. ಸ್ವಂತ ವ್ಯಾಪಾರ ವ್ಯವಹಾರಗಳಲ್ಲಿ ಉತ್ತಮ ಆದಾಯ ಗಳಿಸುವ ಸಂಭವವಿದೆ. ವಿದ್ಯಾರ್ಥಿಗಳು ಕಲಿಕೆಯಲ್ಲಿ ಹೆಚ್ಚಿನ ಒಲವು ತೋರುವುದಿಲ್ಲ. ವಂಶದ ಹಳೆಯ ಮನೆಯನ್ನು ನವೀಕರಣಗೊಳಿಸಲು ತೀರ್ಮಾನ ಮಾಡುವಿರಿ. ಅವಕಾಶ ಇದ್ದರೂ ಹೊಸ ಹಣಕಾಸಿನ ವ್ಯವಹಾರ ಆರಂಭಿಸುವುದಿಲ್ಲ. ಧಾರ್ಮಿಕ ಕೇಂದ್ರಕ್ಕೆ ವಸ್ತ್ರವನ್ನು ನೀಡಿ ದಿನದ ಕೆಲಸವನ್ನು ಆರಂಭಿಸುವಿರಿ.

ಪರಿಹಾರ : ಕಣ್ಣಿನ ತೊಂದರೆ ಇರುವವರಿಗೆ ಸಹಾಯ ಮಾಡಿ ದಿನದ ಕೆಲಸವನ್ನು ಆರಂಭಿಸಿರಿ.

ಅದೃಷ್ಟದ ಸಂಖ್ಯೆ 10

ಅದೃಷ್ಟದ ದಿಕ್ಕು : ಈಶಾನ್ಯ

ಅದೃಷ್ಟದ ಬಣ್ಣ : ಹಳದಿ

ಮಿಥುನ

ಎದುರಾಗುವ ಸಮಸ್ಯೆಗಳನ್ನು ಗಂಭೀರವಾಗಿ ಪರಿಗಣಿಸುವುದಿಲ್ಲ. ಆತ್ಮೀಯರ ಸಹಾಯ ಮತ್ತು ನಿಮ್ಮ ಬುದ್ಧಿವಂತಿಕೆ ಬಗ್ಗೆ ವಿಶ್ವಾಸವಿರುತ್ತದೆ. ಆರಂಭಿಸಿದ ಕೆಲಸ ಕಾರ್ಯಗಳಲ್ಲಿ ಆತ್ಮವಿಶ್ವಾಸದಿಂದ ಯಶಸ್ಸನ್ನು ಸಾಧಿಸುವಿರಿ. ಕುಟುಂಬದ ಜವಾಬ್ದಾರಿಯಲ್ಲಿ ಹೆಚ್ಚಿನ ಆಸಕ್ತಿ ತೋರುವಿರಿ. ಉದ್ಯೋಗದಲ್ಲಿ ನಿರೀಕ್ಷಿತ ಹಾದಿಯಲ್ಲಿ ಶುಭ ಫಲಗಳು ದೊರೆಯುತ್ತವೆ. ವ್ಯಾಪಾರ ವ್ಯವಹಾರಗಳು ಲಾಭದಾಯಕವಾಗಿರುತ್ತದೆ. ವಿದ್ಯಾರ್ಥಿಗಳು ವಯಸ್ಸಿಗೆ ಮೀರಿದ ಯೋಜನೆ ರೂಪಿಸುತ್ತಾರೆ. ಸ್ವಂತ ಮನೆ ಕೊಳ್ಳುವ ವಿಚಾರದಲ್ಲಿ ಪ್ರಗತಿ ಕಂಡುಬರುತ್ತದೆ. ಮನೆಯ ಸುತ್ತಮುತ್ತಲಿರುವ ಗಿಡಗಳನ್ನು ಸಂರಕ್ಷಿಸುವಿರಿ. ಉತ್ತಮ ಆರೋಗ್ಯ ನಿಮ್ಮದಾಗುತ್ತದೆ

ಪರಿಹಾರ : ತಾಮ್ರದ ನಾಣ್ಯವನ್ನು ಖಾಕಿದಾರದಲ್ಲಿ ಕತ್ತಿನಲ್ಲಿ ಧರಿಸಿ.

ಅದೃಷ್ಟದ ಸಂಖ್ಯೆ : 1

ಅದೃಷ್ಟದ ದಿಕ್ಕು : ಪೂರ್ವ

ಅದೃಷ್ಟದ ಬಣ್ಣ: ಹಸಿರು

ಕಟಕ

ದಿನನಿತ್ಯದ ದುಡಿಮೆಗೆ ಒತ್ತು ನೀಡುವಿರಿ. ಮನದ ಚಿಂತೆಯಿಂದ ಹೊರ ಬರಲು ಮನರಂಜನೆಯನ್ನು ಆಶ್ರಯಿಸುವಿರಿ. ಪ್ರತಿ ವಿಚಾರದಲ್ಲೂ ಕುಟುಂಬದಲ್ಲಿ ಒಮ್ಮತದ ನಿರ್ಧಾರ ತೆಗೆದುಕೊಳ್ಳುವಿರಿ. ಉದ್ಯೋಗದಲ್ಲಿ ಬದಲಾವಣೆ ನಿಮಗೆ ಅನುಕೂಲಕರವಾಗಿ ಇರಲಿದೆ. ಹೆಚ್ಚಿನ ವೇತನದ ನಿರೀಕ್ಷೆಯಿಂದ ಉದ್ಯೋಗ ಬದಲಾಯಿಸುವಿರಿ. ವ್ಯಾಪಾರ ವ್ಯವಹಾರಗಳಲ್ಲಿ ಹೊಸ ಅವಕಾಶಗಳು ದೊರೆಯಲಿವೆ. ಮಹಿಳೆಯರು ಗೃಹೋತ್ಪನ್ನಗಳ ಮಾರಾಟದಲ್ಲಿ ಉತ್ತಮ ಆದಾಯ ಗಳಿಸುವರು. ಗೃಹ ಬಳಕೆಗಾಗಿ ಹೊಸ ವಾಹನ ಕೊಳ್ಳುವಿರಿ. ಪಾಲುದಾರಿಕೆ ವ್ಯವಹಾರದಲ್ಲಿ ಹಣ ತೊಡಗಿಸಬೇಡಿ. ಬಡವರ ಮನೆಯ ಮದುವೆಗೆ ಹಣದ ಸಹಾಯ ಮಾಡುವಿರಿ.

ಪರಿಹಾರ : ಕೆಂಪು ಬೆಲ್ಲದಿಂದ ಮಾಡಿದ ದ್ರವಾಹಾರ ಸೇವಿಸಿ ದಿನದ ಕೆಲಸವನ್ನು ಆರಂಭಿಸಿ.

ಅದೃಷ್ಟದ ಸಂಖ್ಯೆ : 8

ಅದೃಷ್ಟದ ದಿಕ್ಕು : ದಕ್ಷಿಣ

ಅದೃಷ್ಟದ ಬಣ್ಣ: ನೀಲಿ

ಬರಹ: ಎಚ್‌. ಸತೀಶ್, ಜ್ಯೋತಿಷಿ

ಮೊಬೈಲ್:‌ 8546865832

(ಗಮನಿಸಿ: ಜ್ಯೋತಿಷ್ಯ ಶಾಸ್ತ್ರದ ಲೆಕ್ಕಾಚಾರಕ್ಕೆ ಹಲವು ಸೂತ್ರಗಳಿವೆ. ನಿರ್ದಿಷ್ಟ ರೀತಿಯಲ್ಲಿ ಕ್ರಮಬದ್ಧವಾಗಿ ಈ ರಾಶಿ ಭವಿಷ್ಯ ನೀಡಲಾಗಿದೆ. ಆದರೆ ಒಟ್ಟಾರೆಯಾಗಿ ಜ್ಯೋತಿಷ್ಯ ಎನ್ನುವುದು ನಂಬಿಕೆಯ ಮಾತು. ಓದುಗರ ನಂಬಿಕೆಯನ್ನು ‘ಹಿಂದೂಸ್ತಾನ್ ಟೈಮ್ಸ್ ಕನ್ನಡ’ ಗೌರವಿಸುತ್ತದೆ. ಇಲ್ಲಿರುವ ಯಾವುದೇ ಶಿಫಾರಸು ಅಥವಾ ಸಲಹೆಗಳನ್ನು ಪಾಲಿಸುವುದು ಓದುಗರ ವಿವೇಚನೆ, ನಂಬಿಕೆಗೆ ಬಿಟ್ಟ ವಿಷಯವಾಗಿರುತ್ತದೆ).