ಯುಗಾದಿ ಆರೋಗ್ಯ ಭವಿಷ್ಯ: ಮಿಥುನ ರಾಶಿಯವರಿಗೆ ಮಾನಸಿಕ ಒತ್ತಡ ಹೆಚ್ಚಿರುತ್ತೆ, ಕಟಕ ರಾಶಿಯವರ ಉಸಿರಾಟದ ಸಮಸ್ಯೆ ನಿವಾರಣೆಯಾಗಲಿದೆ
Ugadi Health Horoscope: ಯುಗಾದಿ ಆರೋಗ್ಯ ವರ್ಷ ಭವಿಷ್ಯ 2025. ಮಿಥುನ ರಾಶಿಯವರಿಗೆ ಮಾನಸಿಕ ಒತ್ತಡ ಹೆಚ್ಚಿರುತ್ತೆ, ಕಟಕ ರಾಶಿಯವರ ಉಸಿರಾಟದ ಸಮಸ್ಯೆ ನಿವಾರಣೆಯಾಗಲಿದೆ. (ಬರಹ: ಎಚ್.ಸತೀಶ್, ಜ್ಯೋತಿಷಿ)

ಯುಗಾದಿ ಆರೋಗ್ಯ ವರ್ಷ ಭವಿಷ್ಯ: ಪಂಚಾಂಗದ ಪ್ರಕಾರ ಕೆಲವೇ ದಿನಗಳಲ್ಲಿ ಹಳೆಯ ವರ್ಷ ಮುಗಿದು ಹೊಸ ವರ್ಷಕ್ಕೆ ಕಾಲಿಡುತ್ತೇವೆ. ಯುಗಾದಿ ಹಬ್ಬವು ಹೊಸ ವರ್ಷದ ಮೊದಲ ದಿನ. ಈ ಹೊಸ ವರ್ಷದಲ್ಲಿ ಸಂಕಷ್ಟಗಳು ಕಳೆದು ಸುಖ, ಶಾಂತಿ, ನೆಮ್ಮದಿ, ಉತ್ತಮ ಆರೋಗ್ಯ, ಹೊಸ ಅವಕಾಶ, ಸಂಪತ್ತು ಸಮೃದ್ಧಿಯನ್ನು ನಿರೀಕ್ಷಿಸುತ್ತ ಆಶಾವಾದಿಗಳಾಗಿ ಬದುಕುವುದು ಸಾಮಾನ್ಯ. ಬಹುತೇಕ ಸಂದರ್ಭದಲ್ಲಿ ಜನರು ತಮ್ಮ ರಾಶಿಗೆ ಅನುಗುಣವಾಗಿ ವರ್ಷ ಭವಿಷ್ಯವನ್ನು ಕಾತರದಿಂದ ವೀಕ್ಷಿಸುತ್ತಾರೆ. ತಮ್ಮ ಆರೋಗ್ಯ ಭವಿಷ್ಯ ಹೇಗಿರಲಿದೆ ಎಂದು ತಿಳಿದುಕೊಳ್ಳುವವರು ಇದ್ದಾರೆ. ಶ್ರೀ ವಿಶ್ವಾವಸು ಸಂವತ್ಸರದ ಮೇಷದಿಂದ ಮೀನದವರಿಗೆ ನಾಲ್ಕು ರಾಶಿಯವರ ಆರೋಗ್ಯ ವರ್ಷ ಭವಿಷ್ಯ ಇಲ್ಲಿದೆ.
ಮೇಷ ರಾಶಿ
ಕಣ್ಣಿಗೆ ಸಂಬಂಧಪಟ್ಟಂತೆ ಎಚ್ಚರಿಕೆ ವಹಿಸುವುದು ಒಳ್ಳೆಯದು. ಕಲುಷಿತ ನೀರು ಅಥವಾ ದ್ರವ ಆಹಾರವನ್ನು ಸೇವಿಸಿದರೆ ಸೋಂಕಿನಿಂದ ಬಳಲಬೇಕಾಗುತ್ತದೆ. ಆದ್ದರಿಂದ ದಿನ ನಿತ್ಯ ಸೇವಿಸುವ ಆಹಾರ ಪದಾರ್ಥಗಳ ಬಗ್ಗೆ ಗಮನಹರಿಸಬೇಕು. ರುಚಿಗಿಂತ ಶುಚಿಯೇ ಮುಖ್ಯವಾಗುತ್ತದೆ. ಅನಾವಶ್ಯಕವಾಗಿ ಮಾನಸಿಕ ಒತ್ತಡವು ನಿಮಗಿರುತ್ತದೆ. ಇದರಿಂದಾಗಿ ಅತಿಯಾದ ತಲೆನೋವು ನಿಮ್ಮನ್ನು ಸದಾ ಕಾಡಬಹುದು. ಜೂನ್ ಆರಂಭವಾಗುವವರೆಗೂ ಆರೋಗ್ಯದಲ್ಲಿ ಏರುಪೇರು ಇರುತ್ತದೆ. ಆನಂತರ ಕ್ರಮೇಣವಾಗಿ ಆರೋಗ್ಯದಲ್ಲಿ ಚೇತರಿಕೆ ಕಂಡುಬರುತ್ತದೆ. ರಕ್ತದ ಒತ್ತಡ ಮುಂತಾದ ದೀರ್ಘಕಾಲದ ಅನಾರೋಗ್ಯವನ್ನು ಹೊಂದಿರುವವರು ಕೇವಲ ಒಳ್ಳೆಯ ಅಭ್ಯಾಸದಿಂದ ಮಾತ್ರ ಉತ್ತಮ ಆರೋಗ್ಯ ಗಳಿಸಲು ಸಾಧ್ಯವಾಗುತ್ತದೆ. ಮಕ್ಕಳಿಗೆ ಪದೇ ಪದೆ ಜ್ವರ ಮತ್ತು ನೆಗಡಿ ಅಂತಹ ತೊಂದರೆಗಳು ಕಂಡುಬರುತ್ತವೆ. ಆದರೆ ಯಾವುದೇ ತೊಂದರೆ ಎದುರಾಗದು.
ವೃಷಭ ರಾಶಿ
ಮುಖ್ಯವಾಗಿ ನಿಮ್ಮ ಅನಿಯಮಿತ ಆಹಾರ ಸೇವನೆಯ ಅಭ್ಯಾಸ ಆರೋಗ್ಯದ ಸಮಸ್ಯೆಗಳು ಉಂಟಾಗಲು ಕಾರಣವಾಗುತ್ತದೆ. ಸಾಮಾನ್ಯವಾಗಿ ಅಜೀರ್ಣತೆಯಿಂದ ಬಳಲುವಿರಿ. ಮೊಣಕಾಲು ಮತ್ತು ಪಾದಗಳಲ್ಲಿ ಕೆಲವೊಮ್ಮೆ ಅತಿಯಾದ ನೋವು ಇರುತ್ತದೆ. ಗುತ್ತಿಗೆಯಲ್ಲಿ ಊತ ಕಂಡು ಬರುತ್ತದೆ. ಗಂಟಲ ಸೋಂಕಿನಿಂದ ಬಳಲುವಿರಿ. ಬಹು ದಿನಗಳಿಂದ ಹಾರ್ಮೋನ್ ತೊಂದರೆಯಿಂದ ಬಳಲುತ್ತಿದ್ದಲ್ಲಿ ಎಚ್ಚರಿಕೆಯಿಂದ ಇರುವುದು ಒಳ್ಳೆಯದು. ಆತುರದಲ್ಲಿ ನಡೆಯುವ ವೇಳೆ ಕೈಕಾಲುಗಳಿಗೆ ಪೆಟ್ಟಾಗುವ ಸಾಧ್ಯತೆಗಳಿರುತ್ತದೆ. ವಯೋವೃದ್ಧರಿಗೆ ನಡೆಯಲು ಆಗದ ಪರಿಸ್ಥಿತಿ ಎದುರಾಗಬಹುದು. ಆದ್ದರಿಂದ ಅವರಿಗೆ ವಿಶ್ರಾಂತಿಯೇ ಒಳ್ಳೆಯ ಔಷಧಿ. ಕೆಲಸ ಕಾರ್ಯಗಳ ನಡುವೆ ವಿಶ್ರಾಂತಿಯನ್ನು ತೆಗೆದುಕೊಳ್ಳುವುದು ಒಳ್ಳೆಯದು.
ಮಿಥುನ ರಾಶಿ
ಉದರಕ್ಕೆ ಸಂಬಂಧಪಟ್ಟ ತೊಂದರೆಗಳಿಂದ ಬಳಲುವಿರಿ. ಹೃದಯಕ್ಕೆ ಸಂಬಂಧಪಟ್ಟ ದೋಷವಿದ್ದವರು ಉತ್ತಮ ಚಿಕಿತ್ಸೆ ಪಡೆದಲ್ಲಿ ಯಾವುದೇ ತೊಂದರೆ ಇರುವುದಿಲ್ಲ. ಬೆನ್ನಿನ ನೋವು ನಿಮ್ಮನ್ನು ಸತತವಾಗಿ ಕಾಡುತ್ತದೆ. ಆದರೆ ದಿನನಿತ್ಯ ದೈಹಿಕ ವ್ಯಾಯಾಮ ಮಾಡುವುದರಿಂದ ಅನಾರೋಗ್ಯದಿಂದ ಪಾರಾಗಬಹುದು. ಮಕ್ಕಳಿಗೆ ಯಾವುದೇ ತೊಂದರೆ ಇರುವುದಿಲ್ಲ, ಆದರೆ ಮನದಲ್ಲಿ ಒಂದು ರೀತಿಯ ಭಯ ನೆಲೆಸಿರುತ್ತದೆ. ಆತ್ಮಸ್ಥೈರ್ಯದ ಕೊರತೆ ಇರುವ ಕಾರಣ ಮಾನಸಿಕ ಒತ್ತಡವಿರುತ್ತದೆ. ವಾಹನದಿಂದ ಅಥವಾ ಮಹಡಿಯ ಮೆಟ್ಟಿಲು ಹತ್ತುವ ವೇಳೆ ಆಕಸ್ಮಿಕವಾಗಿ ಜಾರಿ ಬೀಳುವ ಕಾರಣ ಕೈಕಾಲುಗಳ ಮೂಳೆಯಲ್ಲಿ ತೊಂದರೆ ಉಂಟಾಗುತ್ತದೆ. ಕೇವಲ ಮಸಾಜ್ ನಂತಹ ಸಾಂಪ್ರದಾಯಿಕ ಚಿಕಿತ್ಸೆಯಿಂದ ಉತ್ತಮ ಆರೋಗ್ಯ ಗಳಿಸುವಿರಿ.
ಕಟಕ ರಾಶಿ
ಆರೋಗ್ಯದಲ್ಲಿ ತೊಂದರೆ ಉಂಟಾದರೂ ಬಹುಕಾಲ ನಿಲ್ಲುವುದಿಲ್ಲ. ಉಷ್ಣದ ತೊಂದರೆ ನಿಮ್ಮನ್ನು ಬಹುವಾಗಿ ಕಾಡುತ್ತದೆ. ಹೊಟ್ಟೆಯಲ್ಲಿ ಸೋಂಕು ಉಂಟಾಗುವ ಸಾಧ್ಯತೆಗಳಿವೆ. ಶುಚಿಯಾದ ಆಹಾರ ಸೇವನೆಯಿಂದ ಒಳ್ಳೆಯದಾಗುತ್ತದೆ. ವಾಯುದೋಷವಿರುತ್ತದೆ. ಉಸಿರಿಗೆ ಸಂಬಂಧಪಟ್ಟ ದೋಷವು ನಿಮ್ಮನ್ನು ಕಾಡುತ್ತದೆ. ವಾಹನ ಅಪಘಾತದಿಂದ ಕೈ ಕಾಲುಗಳಿಗೆ ಹೆಚ್ಚಿನ ಪೆಟ್ಟಾಗುತ್ತದೆ. ಆತ್ಮಸ್ಥೈರ್ಯದ ಕೊರತೆ ಮಾನಸಿಕ ಹಿಂಸೆಗೆ ಕಾರಣವಾಗುತ್ತದೆ. ವಯೋವೃದ್ಧರಿಗೆ ಉತ್ತಮ ಆರೋಗ್ಯ ಇರುತ್ತದೆ. ಆದರೆ ಚಿಕ್ಕ ಮಕ್ಕಳ ಆರೋಗ್ಯವು ಸ್ಥಿರವಾಗಿ ಇರುವುದಿಲ್ಲ. ಅತಿಯಾದ ಓಡಾಟ ಸ್ನಾಯು ಎಳೆತವನ್ನು ಉಂಟುಮಾಡುತ್ತದೆ.
ಬರಹ: ಎಚ್. ಸತೀಶ್, ಜ್ಯೋತಿಷಿ.
ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ "ಹಿಂದೂಸ್ತಾನ್ ಟೈಮ್ಸ್ ಕನ್ನಡ" ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ.
