ಯುಗಾದಿ ಪ್ರೇಮ ಭವಿಷ್ಯ: ಧನು ರಾಶಿಯ ದಂಪತಿ ನಡುವೆ ವಿಶೇಷ ಆಕರ್ಷಣೆ ಇರುತ್ತೆ, ಮಕರ ರಾಶಿಯವರಿಗೆ ಪ್ರೇಮ ವಿವಾಹದಲ್ಲಿ ನಂಬಿಕೆ ಜಾಸ್ತಿ
Ugadi Prema Bhavishya: ಯುಗಾದಿ ಪ್ರೇಮ ವರ್ಷ ಭವಿಷ್ಯ 2025. ಧನು ರಾಶಿಯ ದಂಪತಿ ನಡುವೆ ವಿಶೇಷ ಆಕರ್ಷಣೆ ಇರುತ್ತೆ, ಮಕರ ರಾಶಿಯವರಿಗೆ ಪ್ರೇಮ ವಿವಾಹದಲ್ಲಿ ನಂಬಿಕೆ. (ಬರಹ: ಎಚ್.ಸತೀಶ್, ಜ್ಯೋತಿಷಿ)

ಯುಗಾದಿ ಪ್ರೇಮ ಭವಿಷ್ಯ: ಪಂಚಾಂಗದ ಪ್ರಕಾರ ಕೆಲವೇ ದಿನಗಳಲ್ಲಿ ಹಳೆಯ ವರ್ಷ ಮುಗಿದು ಹೊಸ ವರ್ಷಕ್ಕೆ ಕಾಲಿಡುತ್ತೇವೆ. ಯುಗಾದಿ ಹಬ್ಬವು ಹೊಸ ವರ್ಷದ ಮೊದಲ ದಿನ. ಈ ಹೊಸ ವರ್ಷದಲ್ಲಿ ಸಂಕಷ್ಟಗಳು ಕಳೆದು ಸುಖ, ಶಾಂತಿ, ನೆಮ್ಮದಿ, ಉತ್ತಮ ಆರೋಗ್ಯ, ಹೊಸ ಅವಕಾಶ, ಸಂಪತ್ತು ಸಮೃದ್ಧಿಯನ್ನು ನಿರೀಕ್ಷಿಸುತ್ತ ಆಶಾವಾದಿಗಳಾಗಿ ಬದುಕುವುದು ಸಾಮಾನ್ಯ. ಬಹುತೇಕ ಸಂದರ್ಭದಲ್ಲಿ ಜನರು ತಮ್ಮ ರಾಶಿಗೆ ಅನುಗುಣವಾಗಿ ವರ್ಷ ಭವಿಷ್ಯವನ್ನು ಕಾತರದಿಂದ ವೀಕ್ಷಿಸುತ್ತಾರೆ. ತಮ್ಮ ಪ್ರೇಮ ಭವಿಷ್ಯ ಹೇಗಿರಲಿದೆ ಎಂದು ತಿಳಿದುಕೊಳ್ಳುವವರು ಇದ್ದಾರೆ. ಶ್ರೀ ವಿಶ್ವಾವಸು ಸಂವತ್ಸರದ ಧನುದಿಂದ ಮೀನದವರಿಗೆ ನಾಲ್ಕು ರಾಶಿಯವರ ಪ್ರೇಮ ವರ್ಷ ಭವಿಷ್ಯ ಇಲ್ಲಿದೆ.
ಧನು ರಾಶಿ
ದಂಪತಿ ನಡುವೆ ವಿಶೇಷವಾದ ಆಕರ್ಷಣೆ ಇರುತ್ತದೆ. ಪರಸ್ಪರ ಒಬ್ಬರ ಮನಸ್ಸನ್ನು ಒಬ್ಬರು ಅರಿತು ಬಾಳುತ್ತಾರೆ. ಮನದ ವಿಚಾರಗಳನ್ನು ಚರ್ಚಿಸುವ ಕಾರಣ ಅಂತರ ಕಡಿಮೆ ಆಗುತ್ತದೆ. ವಿವಾಹದ ಬಗ್ಗೆ ಯಾವುದೇ ನಿರ್ಧಾರವನ್ನು ತೆಗೆದುಕೊಳ್ಳುವುದಿಲ್ಲ. ಇದರಿಂದ ಪರಸ್ಪರ ಅನುಮಾನದ ಸುಳಿವು ಇರುತ್ತದೆ. ಆದರೆ ಆತ್ಮೀಯರ ಸಹಾಯದಿಂದ ವಿವಾಹ ನಿಶ್ಚಯವಾಗುತ್ತದೆ. ದುಡುಕಿನಿಂದ ವರ್ತಿಸುವಕಾರಣ ಬೇಸರ ಉಂಟಾಗುತ್ತದೆ. ಶಾಂತಿಯಿಂದ ವರ್ತಿಸುವುದು ಮುಖ್ಯ. ದಿನ ಕಳೆದಂತೆ ತಮ್ಮ ತಪ್ಪನ್ನು ಸರಿಪಡಿಸಿಕೊಳ್ಳುವ ನಿರ್ಧಾರಕ್ಕೆ ಬರುತ್ತಾರೆ. ಜಾಣತನದಿಂದ ದಾಂಪತ್ಯಜೀವನವನ್ನು ನಡೆಸುತ್ತಾರೆ. ವಿಶೇಷವಾದ ಪ್ರೀತಿ ವಿಶ್ವಾಸ ಮರುಕಳಿಸುತ್ತದೆ. ಬದಲಾವಣೆಗಳನ್ನು ಒಪ್ಪಲೇಬೇಕಾಗುತ್ತದೆ.
ಮಕರ ರಾಶಿ
ಪ್ರೇಮ ವಿವಾಹದಲ್ಲಿ ಆಸಕ್ತಿ ಮತ್ತು ನಂಬಿಕೆ ಇರುತ್ತದೆ. ಜಾಣತನದಿಂದ ಜೀವನವನ್ನು ನಡೆಸುವಿರಿ. ಸಂಗಾತಿಯನ್ನು ಕೇವಲ ಪ್ರೀತಿಸುವುದಲ್ಲದೆ ಗೌರವಿಸುವ ಸಂಸ್ಕೃತಿ ನಿಮ್ಮಲ್ಲಿರುತ್ತದೆ. ಇದರಿಂದಾಗಿ ಕೌಟುಂಬಿಕ ಜೀವನದಲ್ಲಿ ಸುಖ ಸಂತೋಷಕ್ಕೆ ಕೊನೆ ಇರುವುದಿಲ್ಲ. ಸಂಗಾತಿಯ ಮನಸ್ಸನ್ನು ಅರಿತು ನಡೆಯುವಿರಿ. ಕೆಲವೊಮ್ಮೆ ಬಿನ್ನಾಭಿಪ್ರಾಯಗಳು ಎದುರಾದರೂ ಬಹುಕಾಲ ನಿಲ್ಲುವುದಿಲ್ಲ. ದುಡುಕುತನ ಇರುವುದಿಲ್ಲ. ನಿಮ್ಮ ಕಲ್ಪನೆಗೆ ತಕ್ಕಂತೆ ಸಂಗಾತಿಯು ನಿಮ್ಮೊಂದಿಗೆ ವರ್ತಿಸಲಿದ್ದಾರೆ. ಮೋಜಿನ ಜೀವನ ನಡೆಸುವ ಇಚ್ಚೆ ಇರುತ್ತದೆ. ವಿವಾಹವು ಅನಿರೀಕ್ಷಿತವಾಗಿ ನೆರವೇರಲ್ಪಡುತ್ತದೆ. ಒಟ್ಟಾರೆ ಈ ರಾಶಿಯವರು ಸೌಭಾಗ್ಯಶಾಲಿಗಳು. ಕುಟುಂಬದ ಹಿರಿಯರ ಜೊತೆಯಲ್ಲಿ ಮನಸ್ತಾಪ ಉಂಟಾಗುತ್ತದೆ. ಸಹನೆಯಿಂದ ಇದ್ದಷ್ಟೂ ದಾಂಪತ್ಯಜೀವನ ಸುಖಮಯವಾಗಿರುತ್ತದೆ.
ಕುಂಭ ರಾಶಿ
ಮನದಲ್ಲಿ ಅಸುರಕ್ಷಿತ ಭಾವನೆ ಇರುತ್ತದೆ. ಆದರೆ ಸಂಗಾತಿಯ ಸ್ನೇಹಮಯ ವ್ಯಕ್ತಿತ್ವ ಜೀವನದ ಹಾದಿಯನ್ನು ಬದಲಿಸುತ್ತದೆ. ಪ್ರೀತಿ ಪ್ರೇಮದೊಂದಿಗೆ ತುಂಬು ಜೀವನ ನಡೆಸುವಿರಿ. ಮನದ ವಿಚಾರಗಳನ್ನು ಮರೆವ ಸಂದರ್ಭ ಎದುರಾಗುತ್ತದೆ. ಕೌಟುಂಬಿಕ ಜೀವನದಲ್ಲಿ ಗಂಭೀರದ ವಾತಾವರಣ ಇರುತ್ತದೆ. ಪರಸ್ಪರ ನಿಷ್ಟೂರದ ಮಾತುಕತೆ ಇದ್ದರೂ ಹೊಂದಿಕೊಳ್ಳು ಬಾಳುವ ಪರಿಸ್ಥಿತಿ ಉಂಟಾಗುತ್ತದೆ. ಮಾನಸಿಕ ನೆಮ್ಮದಿ ಇರುವುದಿಲ್ಲ. ಜೂನ್ ತಿಂಗಳ ವರೆಗೂ ಯಾಂತ್ರಿಕ ಬದುಕು ನಿಮ್ಮದಾಗುತ್ತದೆ. ಆದರೆ ಆನಂತರ ಆತ್ಮೀಯರ ಮಧ್ಯಸ್ಥಿಕೆಯಿಂದ ಪರಸ್ಪರ ಉತ್ತಮ ಭಾವನೆ ಇರುತ್ತದೆ. ಮನಬಿಚ್ಚಿ ಮಾತನಾಡಿದಲ್ಲಿ ಸುಖ ಸಂಸಾರ ನಿಮ್ಮದಾಗುತ್ತದೆ.
ಮೀನ ರಾಶಿ
ದಂಪತಿಯಲ್ಲಿ ಆದರ್ಶಮಯ ವ್ಯಕ್ತಿತ್ವ ಇರುತ್ತದೆ. ದಾಂಪತ್ಯ ಜೀವನದಲ್ಲಿ ಸುಖ ಸಂತೋಷ ಸಮೃದ್ಧಿಯಾಗುತ್ತದೆ. ಸ್ತ್ರೀಯರಿಗೆ ಮನಸ್ಸಿನಲ್ಲಿ ಶಾಂತಿ ಇರುವುದಿಲ್ಲ. ವೈವಾಹಿಕ ಜೀವನದಲ್ಲಿ ವದಂತಿಗಳನ್ನು ನಂಬಬಾರದು. ಪ್ರೇಮವಿವಾಹದಲ್ಲಿ ನಂಬಿಕೆ ಇರುತ್ತದೆ. ಸಂಬಂಧದಲ್ಲಿ ವಿವಾಹವಾಗುತ್ತದೆ. ನಿಮ್ಮ ಜೀವನ ಎಲ್ಲರಿಗೂ ಆದರ್ಶಪ್ರಾಯವಾಗುತ್ತದೆ. ಪರಸ್ಪರ ಸಮರ್ಪಣಾ ಮನೋಭಾವನೆ ಇರುತ್ತದೆ. ವಿಮರ್ಶನಾ ಗುಣ ನಿಮ್ಮಲ್ಲಿರುತ್ತದೆ. ಚಂಚಲ ಮನಸ್ಸಿರುತ್ತದೆ. ಮೃದುವಾದ ಮನಸ್ಸು ಮತ್ತು ಮಾತಿನಿಂದಾಗಿ ಕುಟುಂಬದಲ್ಲಿ ಶಾಂತಿ ನೆಮ್ಮದಿ ನೆಲೆಸುತ್ತದೆ. ಸ್ತುತಿಪ್ರಿಯರು. ಪ್ರತಿಯೊಂದು ವಿಚಾರಕ್ಕೂ ವೇದಾಂತದ ಮೆರಗು ನೀಡುವಿರಿ. ಯಾರೊಬ್ಬರೂ ಸುಲಭವಾಗಿ ಸೋಲುವುದಿಲ್ಲ. ವಾದ ವಿವಾದಗಳ ನಡುವೆಯೂ ಜೀವನದಲ್ಲಿ ಯಾವುದೇ ತೊಂದರೆ ಎದುರಾಗುವುದಿಲ್ಲ. ಕ್ರಮೇಣವಾಗಿ ದಂಪತಿ ನಡುವೆ ಪ್ರೀತಿ ವಿಶ್ವಾಸ ಹೆಚ್ಚುತ್ತದೆ.
ಬರಹ: ಎಚ್. ಸತೀಶ್, ಜ್ಯೋತಿಷಿ.
ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ "ಹಿಂದೂಸ್ತಾನ್ ಟೈಮ್ಸ್ ಕನ್ನಡ" ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ.
