ಹಸ್ತ ನಕ್ಷತ್ರ ವರ್ಷ ಭವಿಷ್ಯ 2025; ಒಂದಕ್ಕಿಂತ ಹೆಚ್ಚಿನ ಆದಾಯಗಳಿರುತ್ತವೆ, ಹೊಂದಾಣಿಕೆ ಗುಣದಿಂದ ಎಲ್ಲರಿಗೂ ಇಷ್ಟವಾಗುತ್ತೀರಿ
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  ಹಸ್ತ ನಕ್ಷತ್ರ ವರ್ಷ ಭವಿಷ್ಯ 2025; ಒಂದಕ್ಕಿಂತ ಹೆಚ್ಚಿನ ಆದಾಯಗಳಿರುತ್ತವೆ, ಹೊಂದಾಣಿಕೆ ಗುಣದಿಂದ ಎಲ್ಲರಿಗೂ ಇಷ್ಟವಾಗುತ್ತೀರಿ

ಹಸ್ತ ನಕ್ಷತ್ರ ವರ್ಷ ಭವಿಷ್ಯ 2025; ಒಂದಕ್ಕಿಂತ ಹೆಚ್ಚಿನ ಆದಾಯಗಳಿರುತ್ತವೆ, ಹೊಂದಾಣಿಕೆ ಗುಣದಿಂದ ಎಲ್ಲರಿಗೂ ಇಷ್ಟವಾಗುತ್ತೀರಿ

Hasta Nakshatra Bhavishya: ಹಸ್ತ ನಕ್ಷತ್ರದವರ ವರ್ಷ ಭವಿಷ್ಯ 2025. ಒಂದಕ್ಕಿಂತ ಹೆಚ್ಚಿನ ಆದಾಯಗಳಿರುತ್ತವೆ, ಹೊಂದಾಣಿಕೆ ಗುಣದಿಂದ ಎಲ್ಲರಿಗೂ ಇಷ್ಟವಾಗುತ್ತೀರಿ. (ಬರಹ: ಎಚ್‌.ಸತೀಶ್, ಜ್ಯೋತಿಷಿ)

ಶ್ರೀ ವಿಶ್ವಾವಸು ಸಂವತ್ಸರ ಹಸ್ತ ನಕ್ಷತ್ರ ಭವಿಷ್ಯ
ಶ್ರೀ ವಿಶ್ವಾವಸು ಸಂವತ್ಸರ ಹಸ್ತ ನಕ್ಷತ್ರ ಭವಿಷ್ಯ

ಹಸ್ತ ನಕ್ಷತ್ರದ ಯುಗಾದಿ ವರ್ಷ ಭವಿಷ್ಯ: ಪಂಚಾಂಗದ ಪ್ರಕಾರ ಕೆಲವೇ ದಿನಗಳಲ್ಲಿ ಹಳೆಯ ವರ್ಷ ಮುಗಿದು ಹೊಸ ವರ್ಷಕ್ಕೆ ಕಾಲಿಡುತ್ತೇವೆ. ಯುಗಾದಿ ಹಬ್ಬವು ಹೊಸ ವರ್ಷದ ಮೊದಲ ದಿನ. ಈ ಹೊಸ ವರ್ಷದಲ್ಲಿ ಸಂಕಷ್ಟಗಳು ಕಳೆದು ಸುಖ, ಶಾಂತಿ, ನೆಮ್ಮದಿ, ಉತ್ತಮ ಆರೋಗ್ಯ, ಹೊಸ ಅವಕಾಶ, ಸಂಪತ್ತು ಸಮೃದ್ಧಿಯನ್ನು ನಿರೀಕ್ಷಿಸುತ್ತ ಆಶಾವಾದಿಗಳಾಗಿ ಬದುಕುವುದು ಸಾಮಾನ್ಯ. ಬಹುತೇಕ ಸಂದರ್ಭದಲ್ಲಿ ಜನರು ತಮ್ಮ ರಾಶಿಗೆ ಅನುಗುಣವಾಗಿ ವರ್ಷ ಭವಿಷ್ಯವನ್ನು ಕಾತರದಿಂದ ವೀಕ್ಷಿಸುತ್ತಾರೆ. ಇನ್ನೂ ನಿಖರವಾಗಿ ಬೇಕು ಎಂದುಕೊಳ್ಳುವವರು ನಕ್ಷತ್ರವಾರು ವರ್ಷ ಭವಿಷ್ಯ ನೋಡಿ ಕೊಂಚ ಸಮಾಧಾನ ಮಾಡಿಕೊಳ್ಳುತ್ತಾರೆ. ಅಂತಹ ಓದುಗರಿಗಾಗಿ 27 ನಕ್ಷತ್ರಗಳ ವರ್ಷ ಭವಿಷ್ಯವನ್ನು ಸರಣಿ ಪ್ರಕಾರ ‘ಎಚ್‌ಟಿ ಕನ್ನಡ’ ಒದುಗಿಸುತ್ತಿದೆ. ನಕ್ಷತ್ರಗಳ ಪೈಕಿ 13ನೇಯದಾದ ಹಸ್ತ ನಕ್ಷತ್ರದಲ್ಲಿ ಜನಿಸಿದವರ ಶ್ರೀ ವಿಶ್ವಾವಸು ಸಂವತ್ಸರದ ವರ್ಷ ಭವಿಷ್ಯ ಇಲ್ಲಿದೆ.

ಹಸ್ತ ನಕ್ಷತ್ರದವರ ಹೆಸರು ಯಾವ ಅಕ್ಷರಗಳಿಂದ ಆರಂಭವಾಗುತ್ತೆ

ಪ್ರತಿಯೊಂದು ನಕ್ಷತ್ರವೂ ನಾಲ್ಕು ಪಾದಗಳನ್ನು ಹೊಂದಿರುತ್ತವೆ. ಹಸ್ತ ನಕ್ಷತ್ರದ ಎಲ್ಲಾ 4 ಪಾದಗಳೂ ಕನ್ಯಾ ರಾಶಿಯಲ್ಲಿ ಬರುತ್ತವೆ. ಇದಲ್ಲದೆ ನಿಮ್ಮ ಹೆಸರು ಪು, ಷ, ಣ ಮತ್ತು ಠ ಅಕ್ಷರದಿಂದ ಆರಂಭವಾಗಿದ್ದಲ್ಲಿ ನಿಮ್ಮದು ಹಸ್ತ ನಕ್ಷತ್ರವಾಗುತ್ತದೆ.

ಶ್ರೀ ವಿಶ್ವಾವಸು ಸಂವತ್ಸರದಲ್ಲಿ ಹಸ್ತ ನಕ್ಷತ್ರದವರ ಭವಿಷ್ಯ

ಲೆಕ್ಕಾಚಾರದಂತೆ ನಿಮ್ಮ ಸ್ವಂತ ಕೆಲಸ ಕಾರ್ಯಗಳನ್ನು ಪೂರ್ಣಗೊಳಿಸುವಿರಿ. ಕುಟುಂಬದ ಸದಸ್ಯರ ಜೊತೆಯಲ್ಲಿ ಹೊಂದಿಕೊಂಡು ಬಾಳುವಿರಿ. ಉನ್ನತ ವಿದ್ಯಾಭ್ಯಾಸ ಇದ್ದರೂ ದೊರೆಯುವ ಉದ್ಯೋಗ ವಿದ್ಯಾಬುದ್ದಿಗೆ ತಕ್ಕಂತೆ ಇರುವುದಿಲ್ಲ. ಅನಾವಶ್ಯಕವಾಗಿ ಹಣವನ್ನು ಖರ್ಚು ಮಾಡುವುದಿಲ್ಲ. ನಿಮ್ಮ ಮನಸ್ಸನ್ನು ಅರಿತು ನಡೆಯುವ ಬಾಳಸಂಗಾತಿ ಇರುತ್ತಾರೆ. ಒಂದಕ್ಕಿಂತಲೂ ಹೆಚ್ಚಿನ ರೀತಿಯ ಆದಾಯ ನಿಮಗಿರುತ್ತದೆ. ಅಪರೂಪದ ವಿದ್ಯೆಯೊಂದನ್ನು ಕಲಿಯುವಿರಿ. ಸಮಾಜದಲ್ಲಿ ಉನ್ನತ ಕೀರ್ತಿ ಪ್ರತಿಷ್ಠೆ ನಿಮ್ಮದಾಗುತ್ತದೆ. ಸ್ವಂತ ವ್ಯಾಪಾರ ವ್ಯವಹಾರಗಳಲ್ಲಿ ಉತ್ತಮ ಆದಾಯ ಇರುತ್ತದೆ. ಮಾಡುವ ತಪ್ಪಿಗೆ ಪಶ್ಚಾತಾಪ ಪಡುವಿರಿ. ಬಂಧು ಬಳಗದವರಿಂದ ದೂರ ಉಳಿಯುವಿರಿ. ನಿಮ್ಮ ಜನಪ್ರಿಯತೆಯನ್ನು ಕಂಡುವ ಅಸೂಯೆ ಪಡುವ ಜನರ ಬಗ್ಗೆ ಎಚ್ಚರಿಕೆ ಇರಲಿ.

ಹಸ್ತ ನಕ್ಷತ್ರದ 1ನೇ ಪಾದ ಅಥವಾ ಹೆಸರು ಪು ಅಕ್ಷರದಿಂದ ಆರಂಭವಾಗುವವರ ಭವಿಷ್ಯ

ರಾಜಕೀಯದಲ್ಲಿ ಆಸಕ್ತಿ ಇರುವುದಿಲ್ಲ. ಆದರೆ ಪರಿಸ್ಥಿತಿಯ ಒತ್ತಡಕ್ಕೆ ಮಣಿದು ರಾಜಕೀಯದಲ್ಲಿ ಭಾಗವಹಿಸಬೇಕಾಗುತ್ತದೆ. ಯಾವುದೇ ಉದ್ಯೋಗವಾದರೂ ಅದರಲ್ಲಿ ಉನ್ನತ ಹುದ್ದೆ ಗಳಿಸುವಿರಿ. ನಿಮ್ಮ ಮಾತಿಗೆ ಸಮಾಜದಲ್ಲಿ ಉನ್ನತ ಗೌರವ ಲಭಿಸುತ್ತದೆ. ಚಿಕ್ಕ ಮಕ್ಕಳಲ್ಲಿಯೂ ಸಹ ಜನಸೇವೆಯ ಮನೋಭಾವನೆ ತುಂಬಿರುತ್ತದೆ. ವಿದ್ಯಾಭ್ಯಾಸದಲ್ಲಿ ಸುಲಭವಾಗಿ ಅನೇಕ ವಿಚಾರಗಳನ್ನು ಕಲಿಯುವಿರಿ. ಮನಸ್ಸಿನಲ್ಲಿ ಯಾವುದೇ ಸ್ವಾರ್ಥದ ಭಾವನೆ ಇರುವುದಿಲ್ಲ. ಜೀವನದಲ್ಲಿ ಉಂಟಾಗುವ ಬದಲಾವಣೆಗಳಿಗೆ ಹೊಂದಿಕೊಂಡು ಬಾಳುವಿರಿ. ಹಣದ ಬಗ್ಗೆ ಅತಿಯಾದ ಆಸೆ ಇರುವುದಿಲ್ಲ. ಹಣದ ಉಳಿತಾಯದ ಬಗ್ಗೆ ಯೋಚಿಸುವುದಿಲ್ಲ. ಬುದ್ಧಿವಂತಿಕೆಯಿಂದ ಅವಶ್ಯಕತೆ ಇದ್ದಷ್ಟು ಹಣವನ್ನು ಸಂಪಾದಿಸಬಲ್ಲಿರಿ. ದೈಹಿಕ ವ್ಯಾಯಾಮದಿಂದ ಉತ್ತಮ ಆರೋಗ್ಯ ಗಳಿಸುವಿರಿ.

ಹಸ್ತ ನಕ್ಷತ್ರದ 2ನೇ ಪಾದ ಅಥವಾ ಹೆಸರು ಷ ಅಕ್ಷರದಿಂದ ಆರಂಭವಾಗಿರುವವರ ಭವಿಷ್ಯ

ಚಿಕ್ಕ ಮಕ್ಕಳಲ್ಲಿ ಅನಾರೋಗ್ಯವಿರುತ್ತದೆ. ಮನಸ್ಸಿನಲ್ಲಿ ಎಲ್ಲರ ಬಗ್ಗೆ ಒಳ್ಳೆಯ ಭಾವನೆ ಇರುತ್ತದೆ. ಎಲ್ಲರನ್ನೂ ಗೌರವ ಭಾವನೆಯಿಂದ ನೋಡುವಿರಿ. ವಯಸ್ಸಿನ ಅಂತರವಿಲ್ಲದೆ ಎಲ್ಲರ ಸಲಹೆಯನ್ನು ಆಲಿಸುವಿರಿ. ನಿಮಗೆ ಅನೇಕ ವಿಚಾರಗಳಲ್ಲಿ ಉತ್ತಮ ಜ್ಞಾನ ಲಭಿಸುತ್ತದೆ. ಕೆಲಸ ಕಾರ್ಯಗಳಲ್ಲಿ ಆತ್ಮೀಯರ ಸಹಾಯ ದೊರೆಯುತ್ತದೆ. ಸಂಗೀತ ನಾಟ್ಯದಂತಹ ಕಲೆಗಳು ನಿಮಗೆ ಒಲಿಯುತ್ತದೆ. ಮನಸ್ಸಿಗೆ ಬೇಸರವೆನಿಸುವ ಕೆಲಸ ಕಾರ್ಯಗಳನ್ನು ಮಾಡುವುದಿಲ್ಲ. ಬೇರೆಯವರ ಅವಕಾಶಗಳನ್ನು ತಮ್ಮದಾಗಿಸಿಕೊಳ್ಳುವ ಮನಸಿರುವುದಿಲ್ಲ. ತಾಯಿಯ ಬಗ್ಗೆ ವಿಶೇಷವಾದ ಅಕ್ಕರೆ ಇರುತ್ತದೆ. ಅನಾವಶ್ಯಕವಾದ ವಿಚಾರಗಳಲ್ಲಿ ವಿಭಾಗವಹಿಸುವುದಿಲ್ಲ. ಅನಾಯಾಸವಾಗಿ ತೆಗೆದುಕೊಳ್ಳುವ ತೀರ್ಮಾನಗಳನ್ನು ಬದಲಾಯಿಸುವಿರಿ. ಹಣಕಾಸಿನ ತೊಂದರೆ ಕಂಡುಬರುವುದಿಲ್ಲ. ಆದರೆ ಆದಾಯಕ್ಕೆ ತಕ್ಕಂತಹ ಖರ್ಚು ವೆಚ್ಚಗಳು ಇರುತ್ತವೆ. ಆರೋಗ್ಯವನ್ನು ಕಾಪಾಡಿಕೊಳ್ಳುವಲ್ಲಿ ಯಶಸ್ವಿಯಾಗುವಿರಿ. ಸಣ್ಣಪುಟ್ಟ ಪ್ರವಾಸಗಳನ್ನು ಸಹ ಕೈಬಿಡಬೇಕಾಗುತ್ತದೆ. ತಂದೆಯವರ ಜೊತೆಯಲ್ಲಿ ಅನಾವಶ್ಯಕವಾದ ವಾದವಿವಾದಗಳಿರುತ್ತವೆ.

ಹಸ್ತ ನಕ್ಷತ್ರದ 3ನೇ ಪಾದ ಅಥವಾ ಹೆಸರು ಣ ಅಕ್ಷರದಿಂದ ಆರಂಭವಾಗುವವರ ಭವಿಷ್ಯ

ಬೇರೆಯವರ ರೀತಿ ನೀತಿಗಳನ್ನು ಟೀಕಿಸುವಿರಿ. ಮಾತಿನಲ್ಲಿ ನಿಮ್ಮನ್ನು ಗೆಲ್ಲಲು ಯಾರಿಂದಲೂ ಸಾಧ್ಯವಾಗುವುದಿಲ್ಲ. ವಿದ್ಯೆಗಿಂತಲೂ ಹೆಚ್ಚಿನ ಬುದ್ಧಿಶಕ್ತಿ ನಿಮ್ಮಲ್ಲಿ ಇರುತ್ತದೆ. ಮನಸ್ಸಿಗೆ ಇಷ್ಟವೆನಿಸುವ ವಿಚಾರಗಳನ್ನು ಅಭ್ಯಾಸ ಮಾಡುವಿರಿ. ವ್ಯಾಪಾರ ವ್ಯವಹಾರಗಳಲ್ಲಿ ಬುದ್ಧಿವಂತಿಕೆಯ ಹಾದಿಯಲ್ಲಿ ಸಾಗುವಿರಿ. ಬಂಧು-ಬಳಗದವರಿಂದ ಯಾವುದೇ ರೀತಿಯ ಸಹಾಯ ಇರುವುದಿಲ್ಲ. ಕಷ್ಟವಿಲ್ಲದ ಮಾರ್ಗದಲ್ಲಿ ಹಣವನ್ನು ಸಂಪಾದಿಸಬಹುದು. ಮಕ್ಕಳ ವಿಚಾರದಲ್ಲಿ ಸಂಪೂರ್ಣ ಜವಾಬ್ದಾರಿ ತೆಗೆದುಕೊಳ್ಳುವಿರಿ. ಶಾಂತ ಮನಸ್ಸಿನವರಾದ ನೀವು ಕೋಪಗೊಂಡಲ್ಲಿ ಉದ್ವೇಗದಿಂದ ವರ್ತಿಸುವಿರಿ. ಮನಸ್ಸಿಗೆ ಇಷ್ಟವೆನಿಸುವ ಕೆಲಸ ಕಾರ್ಯಗಳನ್ನು ಮಾಡಲು ಇಚ್ಚಿಸುವಿರಿ. ಅಜೀರ್ಣದ ತೊಂದರೆ ನಿಮ್ಮನ್ನು ಕಾಡುತ್ತದೆ. ಸ್ವಂತ ವಾಹನವನ್ನು ಕೊಳ್ಳುವ ಯೋಜನೆಯು ಕೆಲ ದಿನ ಮುಂದೆ ಹೋಗಲಿದೆ.

ಹಸ್ತ ನಕ್ಷತ್ರದ 4ನೇ ಪಾದ ಅಥವಾ ಹೆಸರು ಠ ಅಕ್ಷರದಿಂದ ಆರಂಭವಾಗುವವರ ಭವಿಷ್ಯ

ಒಂದೆರಡು ಬಾರಿ ಉದ್ಯೋಗವನ್ನು ಬದಲಿಸುವಿರಿ. ನಿಮ್ಮ ಮನಸ್ಥಿತಿಗೆ ಹೊಂದಿಕೊಳ್ಳುವ ವ್ಯಕ್ತಿಗಳು ದೊರೆಯುವುದು ದುರ್ಲಭ. ನಿಮ್ಮಲ್ಲಿರುವ ಹೊಂದಾಣಿಕೆಯ ಗುಣವು ಎಲ್ಲರಿಗೂ ಇಷ್ಟವಾಗುತ್ತದೆ. ಮಧ್ಯ ವಯಸ್ಸಿನವರಿಗೆ ಆತ್ಮೀಯರ ಸಹಾಯದಿಂದ ವಿವಾಹ ನಿಶ್ಚಯವಾಗುತ್ತದೆ. ಯಾವುದೇ ವಿಚಾರವಾದರೂ ಧೃಡವಾದ ನಿರ್ಧಾರ ತೆಗೆದುಕೊಳ್ಳುವುದಿಲ್ಲ. ಸಮಯಕ್ಕೆ ಅನುಸಾರವಾಗಿ ಕೆಲಸಕಾರ್ಯಗಳನ್ನು ಬದಲಾಯಿಸಬಲ್ಲಿರಿ. ಪಾಲುಗಾರಿಕೆಯ ವ್ಯಾಪಾರ ವ್ಯವಹಾರದಲ್ಲಿ ಉತ್ತಮ ಆದಾಯ ಇರುತ್ತದೆ. ಅಲ್ಪ ಪ್ರಮಾಣದ ಹಣವನ್ನು ಉಳಿಸಲು ನಿಮ್ಮಿಂದ ಸಾಧ್ಯವಾಗುತ್ತದೆ. ಉತ್ತಮ ಆರೋಗ್ಯ ಇರುತ್ತದೆ. ವೈವಾಹಿಕ ಜೀವನದಲ್ಲಿ ಇದ್ದ ಸಮಸ್ಯೆಗಳು ಬಗೆಹರಿಯುತ್ತವೆ. ಹೊಸ ರೀತಿಯ ಜೀವನಕ್ಕೆ ಹೊಂದಿಕೊಂಡು ಬಾಳಬೇಕಾಗುತ್ತದೆ. ಕೃಷಿ ಕಾರ್ಯದಲ್ಲಿ ಆಸಕ್ತಿ ಮೂಡುತ್ತದೆ. ಮನೆತನದ ಗೌರವಕ್ಕಾಗಿ ಶ್ರಮಪಟ್ಟು ದುಡಿಯುವಿರಿ. ಮಕ್ಕಳಿಗೆ ಉದ್ಯೋಗ ದೊರೆಯುವ ಸಾಧ್ಯತೆಗಳು ಕಂಡುಬರುತ್ತವೆ.

ಬರಹ: ಎಚ್‌. ಸತೀಶ್, ಜ್ಯೋತಿಷಿ.

ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ "ಹಿಂದೂಸ್ತಾನ್ ಟೈಮ್ಸ್ ಕನ್ನಡ" ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ.

Raghavendra M Y

TwittereMail
ರಾಘವೇಂದ್ರ ಎಂ.ವೈ: 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದಲ್ಲಿ ಸೀನಿಯರ್ ಕಂಟೆಂಟ್ ಪ್ರೊಡ್ಯೂಸರ್. ರಾಶಿ ಭವಿಷ್ಯ (ಧರ್ಮ) ವಿಭಾಗದಲ್ಲಿ ಕಾರ್ಯನಿರ್ವಹಣೆ. ಪ್ರಜಾವಾಣಿ, ಉದಯ ನ್ಯೂಸ್, ದಿಗ್ವಿಜಯ ನ್ಯೂಸ್, ಫಸ್ಟ್ ನ್ಯೂಸ್, ಡಿಡಿ ಚಂದನ ನ್ಯೂಸ್, ಈ-ಟಿವಿ ಭಾರತದಲ್ಲಿ ಬುಲೆಟಿನ್ ಪ್ರೊಡ್ಯೂಸರ್ ಸೇರಿ ವಿವಿಧ ವಿಭಾಗಗಳಲ್ಲಿ ಒಟ್ಟು 12 ವರ್ಷ ಅನುಭವ. ಪುಸ್ತಕ, ಪತ್ರಿಕೆ ಓದುವುದು ಇಷ್ಟ. ವಾಣಿಜ್ಯ, ಕ್ರಿಕೆಟ್, ಗ್ರಾಮೀಣ ವಿದ್ಯಮಾನಗಳ ಬಗ್ಗೆ ಇಷ್ಟಪಟ್ಟು ಬರೆಯುತ್ತಾರೆ. ಕೋಲಾರ ಜಿಲ್ಲೆಯ ಮಾಲೂರು ತಾಲೂಕಿನ ಮಿರುಪನಹಳ್ಳಿ ಇವರ ಸ್ವಂತ ಊರು. ಸದ್ಯಕ್ಕೆ ಬೆಂಗಳೂರು ನಿವಾಸಿ.
Whats_app_banner
ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.