ಜ್ಯೇಷ್ಠ ನಕ್ಷತ್ರ ವರ್ಷ ಭವಿಷ್ಯ 2025: ಇಷ್ಟಪಟ್ಟವರ ಜೊತೆ ಮದುವೆಯಾಗಲಿದೆ, ಸ್ವಂತ ಹಣಕಾಸಿನ ವ್ಯವಹಾರದಲ್ಲಿ ನಂಬಿಕೆ ಇರುತ್ತೆ
Jyeshta Nakshatra Bhavishya: ಜ್ಯೇಷ್ಠ ನಕ್ಷತ್ರದವರ ವರ್ಷ ಭವಿಷ್ಯ 2025. ಇಷ್ಟಪಟ್ಟವರ ಜೊತೆ ಮದುವೆಯಾಗಲಿದೆ, ಸ್ವಂತ ಹಣಕಾಸಿನ ವ್ಯವಹಾರದಲ್ಲಿ ನಂಬಿಕೆ ಇರುತ್ತೆ. (ಬರಹ: ಎಚ್.ಸತೀಶ್, ಜ್ಯೋತಿಷಿ)

ಜ್ಯೇಷ್ಠ ನಕ್ಷತ್ರದ ಯುಗಾದಿ ವರ್ಷ ಭವಿಷ್ಯ: ಪಂಚಾಂಗದ ಪ್ರಕಾರ ಕೆಲವೇ ದಿನಗಳಲ್ಲಿ ಹಳೆಯ ವರ್ಷ ಮುಗಿದು ಹೊಸ ವರ್ಷಕ್ಕೆ ಕಾಲಿಡುತ್ತೇವೆ. ಯುಗಾದಿ ಹಬ್ಬವು ಹೊಸ ವರ್ಷದ ಮೊದಲ ದಿನ. ಈ ಹೊಸ ವರ್ಷದಲ್ಲಿ ಸಂಕಷ್ಟಗಳು ಕಳೆದು ಸುಖ, ಶಾಂತಿ, ನೆಮ್ಮದಿ, ಉತ್ತಮ ಆರೋಗ್ಯ, ಹೊಸ ಅವಕಾಶ, ಸಂಪತ್ತು ಸಮೃದ್ಧಿಯನ್ನು ನಿರೀಕ್ಷಿಸುತ್ತ ಆಶಾವಾದಿಗಳಾಗಿ ಬದುಕುವುದು ಸಾಮಾನ್ಯ. ಬಹುತೇಕ ಸಂದರ್ಭದಲ್ಲಿ ಜನರು ತಮ್ಮ ರಾಶಿಗೆ ಅನುಗುಣವಾಗಿ ವರ್ಷ ಭವಿಷ್ಯವನ್ನು ಕಾತರದಿಂದ ವೀಕ್ಷಿಸುತ್ತಾರೆ. ಇನ್ನೂ ನಿಖರವಾಗಿ ಬೇಕು ಎಂದುಕೊಳ್ಳುವವರು ನಕ್ಷತ್ರವಾರು ವರ್ಷ ಭವಿಷ್ಯ ನೋಡಿ ಕೊಂಚ ಸಮಾಧಾನ ಮಾಡಿಕೊಳ್ಳುತ್ತಾರೆ. ಅಂತಹ ಓದುಗರಿಗಾಗಿ 27 ನಕ್ಷತ್ರಗಳ ವರ್ಷ ಭವಿಷ್ಯವನ್ನು ಸರಣಿ ಪ್ರಕಾರ ‘ಎಚ್‌ಟಿ ಕನ್ನಡ’ ಒದುಗಿಸುತ್ತಿದೆ. ನಕ್ಷತ್ರಗಳ ಪೈಕಿ 18ನೇಯದಾದ ಜ್ಯೇಷ್ಠ ನಕ್ಷತ್ರದಲ್ಲಿ ಜನಿಸಿದವರ ಶ್ರೀ ವಿಶ್ವಾವಸು ಸಂವತ್ಸರದ ವರ್ಷ ಭವಿಷ್ಯ ಇಲ್ಲಿದೆ.
ಜ್ಯೇಷ್ಠ ನಕ್ಷತ್ರದವರ ಜೀವನ ಮತ್ತು ಹೆಸರು ಯಾವ ಅಕ್ಷರಗಳಿಂದ ಆರಂಭವಾಗುತ್ತೆ
ಪ್ರತಿಯೊಂದು ನಕ್ಷತ್ರವೂ ನಾಲ್ಕು ಪಾದಗಳನ್ನು ಹೊಂದಿರುತ್ತವೆ. ಜೇಷ್ಠ ನಕ್ಷತ್ರದ ಎಲ್ಲಾ 4 ಪಾದಗಳು ವೃಶ್ಚಿಕ ರಾಶಿಯಲ್ಲಿ ಬರುತ್ತವೆ. ಇದಲ್ಲದೆ ನಿಮ್ಮ ಹೆಸರು ನೊ, ಯ, ಯಿ ಮತ್ತು ಯು ಅಕ್ಷರದಿಂದ ಆರಂಭವಾಗಿದ್ದಲ್ಲಿ ನಿಮ್ಮದು ಜೇಷ್ಠ ನಕ್ಷತ್ರವಾಗುತ್ತದೆ.
ಶ್ರೀ ವಿಶ್ವಾವಸು ಸಂವತ್ಸರದಲ್ಲಿ ಜ್ಯೇಷ್ಠ ನಕ್ಷತ್ರದವರ ಭವಿಷ್ಯ
ಇವರು ಜೀವನವನ್ನು ಆನಂದದಿಂದ ಆಸ್ವಾದಿಸುತ್ತಾರೆ. ಯಾವುದೇ ವಿಷಯವನ್ನು ಗಂಭೀರವಾಗಿ ಪರಿಗಣಿಸುವುದಿಲ್ಲ. ಉತ್ತಮ ಆರೋಗ್ಯವಿರುತ್ತದೆ. ಸಣ್ಣ ಪುಟ್ಟ ಆರೋಗ್ಯದ ಸಮಸ್ಯೆಗಳು ಬಹುಕಾಲ ಕಾಡುವುದಿಲ್ಲ. ನೋಡಲು ಶಾಂತವಾಗಿ ಕಂಡರೂ ಆವೇಶದ ಗುಣ ಇರುತ್ತದೆ. ಪದೇ ಪದೆ ಕೈ ಕಾಲುಗಳಿಗೆ ಪೆಟ್ಟಾಗುವ ಸಾಧ್ಯತೆಗಳಿವೆ. ಅನಾವಶ್ಯಕವಾದ ವಿಚಾರಗಳಿಗೆ ಯೋಚನೆ ಮಾಡುವಿರಿ. ಸಮಾಜದಲ್ಲಿ ಗೌರವಯುತ ಸ್ಥಾನ ಲಭಿಸುತ್ತದೆ. ಒಳ್ಳೆಯ ಸ್ನೇಹಿತರು ಇರುತ್ತಾರೆ. ಯಾರೊಂದಿಗೂ ಅತಿಯಾದ ಸ್ನೇಹ ಬೆಳೆಸುವುದಿಲ್ಲ. ಸ್ವಂತ ಹಣಕಾಸಿನ ವ್ಯವಹಾರದಲ್ಲಿ ನಂಬಿಕೆ ಇರುತ್ತದೆ. ಪಾಲುಗಾರಿಕೆಯ ವ್ಯಾಪಾರದಲ್ಲಿ ನಂಬಿಕೆ ಇರುವುದಿಲ್ಲ. ಹಠದ ಸ್ವಭಾವದಿಂದ ಬೇರೆಯವರಿಗೆ ಬೇಸರ ಮೂಡಿಸುವಿರಿ. ನಿಮ್ಮ ತೀರ್ಮಾನಗಳನ್ನು ಬದಲಾಯಿಸಲು ಯಾರಿಗೂ ಸಾಧ್ಯವಾಗುವುದಿಲ್ಲ. ಸದಾಕಾಲ ಜನರ ನಡುವೆ ಕಾಲ ಕಳೆಯುವಿರಿ.
ಜ್ಯೇಷ್ಠ ನಕ್ಷತ್ರದ 1ನೇ ಪಾದ ಅಥವಾ ಹೆಸರು ನೊ ಅಕ್ಷರದಿಂದ ಆರಂಭವಾಗುವವರ ಭವಿಷ್ಯ
ಹೆಣ್ಣು ಮಕ್ಕಳ ಬಗ್ಗೆ ವಿಶೇಷ ಗೌರವವಿರುತ್ತದೆ. ಸಾಮಾನ್ಯವಾಗಿ ತಾಯಿ, ಸೋದರಿ, ಪತ್ನಿ ಇಲ್ಲವೇ ಮಗಳ ಮಾತನ್ನು ಚಾಚು ತಪ್ಪದೆ ಪಾಲಿಸುವಿರಿ. ನಿಮ್ಮಲ್ಲಿರುವ ಬುದ್ಧಿವಂತಿಕೆ ಪ್ರಯೋಜನಕ್ಕೆ ಬರುವುದಿಲ್ಲ. ಕಷ್ಟಪಡದೆ ಸರಳ ರೀತಿಯ ಕೆಲಸ ಕಾರ್ಯಗಳಲ್ಲಿ ಆಸಕ್ತಿ ಬಯಸುವಿರಿ. ಸುಲಭವಾಗಿ ಬೇರೆಯವರ ಪ್ರಭಾವಕ್ಕೆ ಒಳಗಾಗುವುದಿಲ್ಲ. ನಿಮ್ಮದೇ ಆದ ಕಾರ್ಯ ಯೋಜನೆಗಳಿಗೆ ಬದ್ಧರಾಗುವಿರಿ. ಕುಟುಂಬದ ಜವಾಬ್ದಾರಿಗಳನ್ನು ಇತರ ಸದಸ್ಯರ ಜೊತೆ ಹಂಚಿಕೊಳ್ಳುವಿರಿ. ನಿಮಗೆ ಇಷ್ಟವಾದವರ ಜೊತೆ ವಿವಾಹವಾಗುವಿರಿ. ಹಣಕಾಸಿನ ವಿಚಾರದಲ್ಲಿ ಎಚ್ಚರಿಕೆ ವಹಿಸುವ ಕಾರಣ ಹಣದ ಕೊರತೆ ಉಂಟಾಗುವುದಿಲ್ಲ. ಬೇರೆಯವರಿಂದ ಹಣ ಸಹಾಯವನ್ನು ಬಿಡುವುದಿಲ್ಲ. ಸಮಸ್ಯೆಗಳು ಎದುರಾದಲ್ಲಿ ಚಿಂತೆ ಮಾಡದೆ ಪರಿಹಾರವನ್ನು ಕಂಡುಹಿಡಿಯುವಿರಿ.
ಜ್ಯೇಷ್ಠ ನಕ್ಷತ್ರದ 2ನೇ ಪಾದ ಅಥವಾ ಹೆಸರು ಯ ಅಕ್ಷರದಿಂದ ಆರಂಭವಾಗುವವರ ಭವಿಷ್ಯ
ಅತಿಯಾದ ಬುದ್ಧಿವಂತಿಕೆ ಇರುತ್ತದೆ. ಮನಸ್ಸಿನಲ್ಲಿ ಯಾವುದೇ ಕಲ್ಮಷ ಇರುವುದಿಲ್ಲ. ಆದರೆ ದುಡುಕಿ ಮಾತನಾಡುವಿರಿ. ಇದರಿಂದಾಗಿ ಸುತ್ತಮುತ್ತಲ ಜನರ ನಂಬಿಕೆ ಗಳಿಸುವಲ್ಲಿ ಸೋಲುವಿರಿ. ಮನಸ್ಸಿಗೆ ಸರಿ ಎನಿಸುವ ಕೆಲಸವನ್ನು ಮಾತ್ರ ಆಯ್ದುಕೊಳ್ಳುವಿರಿ. ಎದುರುಗಿರುವ ವ್ಯಕ್ತಿಯ ಅಂತಸ್ತು ಪ್ರತಿಷ್ಠೆಯನ್ನು ನೋಡದೆ ತಪ್ಪನ್ನು ಖಂಡಿಸುವಿರಿ. ನೇರ ನಡೆನುಡಿಗೆ ಉದ್ಯೋಗದಲ್ಲಿ ಎಲ್ಲರ ಮೆಚ್ಚುಗೆ ಗಳಿಸುವಿರಿ. ಸ್ವಂತ ಕೆಲಸ ಕಾರ್ಯಗಳಲ್ಲಿ ನಿರೀಕ್ಷಿತ ಯಶಸ್ಸು ಗಳಿಸುವಿರಿ. ನಿಮ್ಮ ಮನಸ್ಸು ಗೆದ್ದವರಿಗೆ ಸಹಾಯ ಮಾಡುವಿರಿ. ಕೇವಲ ಪ್ರಯೋಜನಕಾರಿ ಎನಿಸುವ ವಿಚಾರಗಳನ್ನು ಎಲ್ಲರಲ್ಲಿಯೂ ಹಂಚಿಕೊಳ್ಳುವಿರಿ. ಇದರಿಂದ ಸಮಾಜದ ಮತ್ತು ಕುಟುಂಬದ ನಾಯಕತ್ವದ ಹೊಣೆ ನಿಮ್ಮದಾಗುತ್ತದೆ.
ಜ್ಯೇಷ್ಠ ನಕ್ಷತ್ರದ 3ನೇ ಪಾದ ಅಥವಾ ಹೆಸರು ಯಿ ಅಕ್ಷರದಿಂದ ಆರಂಭವಾಗುವವರ ಭವಿಷ್ಯ
ಮಾತು ಕಡಿಮೆ. ಆದರೆ ಆಡುವ ಮಾತಿನಲ್ಲಿ ಪ್ರೀತಿ ವಿಶ್ವಾಸ ತುಂಬಿರುತ್ತದೆ. ಇದರಿಂದಾಗಿ ಜನಾನುರಾಗಿಯಾಗಿ ಬಾಳುವಿರಿ. ದೈಹಿಕವಾಗಿ ಸಶಕ್ತರಾಗುವಿರಿ. ಉತ್ತಮ ಆತ್ಮವಿಶ್ವಾಸವಿರುತ್ತದೆ. ಉತ್ತಮ ಆರೋಗ್ಯ ಲಭಿಸುತ್ತದೆ. ವಾಹನಗಳಿಂದ ತೊಂದರೆ ಉಂಟಾಗುವ ಸಾಧ್ಯತೆಗಳಿವೆ. ಸೋಲಿನ ವೇಳೆ ಬುದ್ಧಿವಂತಿಕೆಯಿಂದ ವರ್ತಿಸುವಿರಿ. ಮನಸ್ಸಿನ ಮರ್ಮವನ್ನು ಅರ್ಥಮಾಡಿಕೊಳ್ಳಲು ಸಾಧ್ಯವಾಗುವುದಿಲ್ಲ. ಕಷ್ಟವೆನಿಸಿದರು ಜೀವನವನ್ನು ಚೊಕ್ಕವಾಗಿ ನಡೆಸಬಲ್ಲಿರಿ. ಬೇರೆಯವರ ಹಣಕ್ಕಾಗಿ ಸಹಾಯಕ್ಕಾಗಲಿ ಕಾದು ಕೂಡುವುದಿಲ್ಲ. ಸ್ವಂತ ಶಕ್ತಿ ಮತ್ತು ಸಾಮರ್ಥ್ಯದಿಂದ ಜೀವನವನ್ನು ಉನ್ನತ ಮಟ್ಟದಲ್ಲಿ ನಡೆಸುವಿರಿ. ವಿದ್ಯಾರ್ಥಿಗಳು ಏಕಾಂಗಿಯಾಗಿ ತಮ್ಮ ಕೆಲಸ ನಿರ್ವಹಿಸುತ್ತಾರೆ. ಮನೆತನದ ಆಸ್ತಿಯನ್ನು ಉಳಿಸಲು ಯಾವುದೇ ಹೋರಾಟಕ್ಕೆ ಸಿದ್ದರಾಗುವಿರಿ.
ಜ್ಯೇಷ್ಠ ನಕ್ಷತ್ರದ 4ನೇ ಪಾದ ಅಥವಾ ಹೆಸರು ಯು ಅಕ್ಷರದಿಂದ ಆರಂಭವಾಗುವವರ ಭವಿಷ್ಯ
ಸಂಪ್ರದಾಯ ಮತ್ತು ಧಾರ್ಮಿಕ ಬಗ್ಗೆ ವಿಶೇಷ ನಂಬಿಕೆ ಇರುತ್ತದೆ. ಇದರಿಂದ ಪಾಪ ಪುಣ್ಯಗಳ ಬಗ್ಗೆ ಅಧ್ಯಯನ ನಡೆಸಲು ಆಸಕ್ತಿ ಮೂಡುತ್ತದೆ. ಕುಟುಂಬದ ಎಲ್ಲರೊಂದಿಗೆ ಸುಖ ಶಾಂತಿಯ ಜೀವನ ನಡೆಸುವಿರಿ. ನಿಮಗೆ ಸ್ಪರ್ಧೆ ನೀಡುವ ಜನರು ಇರುವುದಿಲ್ಲ. ಹಠದಿಂದ ಆರಂಭಿಸುವ ಪ್ರತಿಯೊಂದು ಕೆಲಸ ಕಾರ್ಯದಲ್ಲಿಯೂ ಯಶಸ್ಸನ್ನು ಗಳಿಸುವಿರಿ. ಉದ್ಯೋಗದಲ್ಲಿ ಕ್ರಮೇಣವಾಗಿ ಮೇಲುಗೈ ಸಾಧಿಸುವಿರಿ. ಹಣಕಾಸಿನ ವ್ಯವಹಾರದಲ್ಲಿ ದುಡುಕಿನ ನಿರ್ಧಾರವನ್ನು ತೆಗೆದುಕೊಳ್ಳುವುದಿಲ್ಲ. ಉನ್ನತ ಅಧ್ಯಯನಕ್ಕಾಗಿ ವಿದೇಶಕ್ಕೆ ತೆರಳುವ ಅವಕಾಶ ದೊರೆಯುತ್ತದೆ. ಸಾಲದ ವ್ಯವಹಾರದಿಂದ ದೂರ ಉಳಿಯುವಿರಿ. ಕೇವಲ ಕುಟುಂಬದ ಸದಸ್ಯರಿಗೆ ಹಣದ ಸಹಾಯ ಮಾಡುವಿರಿ. ಉದ್ಯೋಗವನ್ನು ಅಥವಾ ವಾಸಸ್ಥಳವನ್ನು ಬದಲಿಸಬೇಕಾಗುತ್ತದೆ.
ಬರಹ: ಎಚ್. ಸತೀಶ್, ಜ್ಯೋತಿಷಿ.
ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ "ಹಿಂದೂಸ್ತಾನ್ ಟೈಮ್ಸ್ ಕನ್ನಡ" ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ.
