ಕೃತಿಕಾ ನಕ್ಷತ್ರ ವರ್ಷ ಭವಿಷ್ಯ 2025; ಸೋಲು, ಗೆಲುವನ್ನ ಸಮಾನವಾಗಿ ಸ್ವೀಕರಿಸುತ್ತೀರಿ, ವಿದ್ಯಾರ್ಥಿಗಳಿಗೆ ನಿರೀಕ್ಷೆಗೂ ಮೀರಿದ ಯಶಸ್ಸು ಇರಲಿದೆ
Krittika Nakshatra Bhavishya: ಕೃತಿಕಾ ನಕ್ಷತ್ರದವರ ವರ್ಷ ಭವಿಷ್ಯ 2025. ಸೋಲು ಗೆಲುವನ್ನ ಸಮನಾಗಿ ಸ್ವೀಕರಿಸುವಿರಿ. ಕಷ್ಟದ ದಿನದಲ್ಲಿ ಬೇರೆಯವರಿಗೆ ಸಹಾಯ ಮಾಡುವಿರಿ. (ಬರಹ: ಎಚ್.ಸತೀಶ್, ಜ್ಯೋತಿಷಿ)

ಕೃತಿಕಾ ನಕ್ಷತ್ರದ ಯುಗಾದಿ ವರ್ಷ ಭವಿಷ್ಯ: ಪಂಚಾಂಗದ ಪ್ರಕಾರ ಕೆಲವೇ ದಿನಗಳಲ್ಲಿ ಹಳೆಯ ವರ್ಷ ಮುಗಿದು ಹೊಸ ವರ್ಷಕ್ಕೆ ಕಾಲಿಡುತ್ತೇವೆ. ಯುಗಾದಿ ಹಬ್ಬವು ಹೊಸ ವರ್ಷದ ಮೊದಲ ದಿನ. ಈ ಹೊಸ ವರ್ಷದಲ್ಲಿ ಸಂಕಷ್ಟಗಳು ಕಳೆದು ಸುಖ, ಶಾಂತಿ, ನೆಮ್ಮದಿ, ಉತ್ತಮ ಆರೋಗ್ಯ, ಹೊಸ ಅವಕಾಶ, ಸಂಪತ್ತು ಸಮೃದ್ಧಿಯನ್ನು ನಿರೀಕ್ಷಿಸುತ್ತ ಆಶಾವಾದಿಗಳಾಗಿ ಬದುಕುವುದು ಸಾಮಾನ್ಯ. ಬಹುತೇಕ ಸಂದರ್ಭದಲ್ಲಿ ಜನರು ತಮ್ಮ ರಾಶಿಗೆ ಅನುಗುಣವಾಗಿ ವರ್ಷ ಭವಿಷ್ಯವನ್ನು ಕಾತರದಿಂದ ವೀಕ್ಷಿಸುತ್ತಾರೆ. ಇನ್ನೂ ನಿಖರವಾಗಿ ಬೇಕು ಎಂದುಕೊಳ್ಳುವವರು ನಕ್ಷತ್ರವಾರು ವರ್ಷ ಭವಿಷ್ಯ ನೋಡಿ ಕೊಂಚ ಸಮಾಧಾನ ಮಾಡಿಕೊಳ್ಳುತ್ತಾರೆ. ಅಂತಹ ಓದುಗರಿಗಾಗಿ 27 ನಕ್ಷತ್ರಗಳ ವರ್ಷ ಭವಿಷ್ಯವನ್ನು ಸರಣಿ ಪ್ರಕಾರ ‘ಎಚ್‌ಟಿ ಕನ್ನಡ’ ಒದುಗಿಸುತ್ತಿದೆ. ನಕ್ಷತ್ರಗಳ ಪೈಕಿ ಮೂರನೇಯದಾದ ಕೃತಿಕಾ ನಕ್ಷತ್ರದಲ್ಲಿ ಜನಿಸಿದವರ ಶ್ರೀ ವಿಶ್ವಾವಸುನಾಮ ಸಂವತ್ಸರದ ವರ್ಷ ಭವಿಷ್ಯ ಇಲ್ಲಿದೆ.
ಯಾವ ಅಕ್ಷರದಿಂದ ಹೆಸರು ಆರಂಭವಾದರೆ ಅವರದ್ದು ಕೃತಿಕಾ ನಕ್ಷತ್ರವಾಗುತ್ತೆ
ನಿಮ್ಮ ಹೆಸರು ಅ, ಇ, ಉ ಮತ್ತು ಎ ಅಕ್ಷರದಿಂದ ಆರಂಭವಾಗಿದ್ದಲ್ಲಿ ನಿಮ್ಮದು ಕೃತ್ತಿಕ ನಕ್ಷತ್ರವಾಗುತ್ತದೆ.
ಶ್ರೀ ವಿಶ್ವಾವಸು ಸಂವತ್ಸರದಲ್ಲಿ ಕೃತಿಕಾ ನಕ್ಷತ್ರದವರ ಭವಿಷ್ಯ
ನಿಮ್ಮ ಮಾತಿಗೆ ಕೇವಲ ಕುಟುಂಬವಲ್ಲದೆ ಸಮಾಜದಲ್ಲಿಯೂ ವಿಶೇಷ ಗೌರವ ದೊರೆಯುತ್ತದೆ. ಮನಸ್ಸಿನಲ್ಲಿ ಒಳ್ಳೆಯ ಭಾವನೆಗಳು ಇರುತ್ತವೆ. ಇದರಿಂದ ಶಾಂತಿ ನೆಮ್ಮದಿಯಿಂದ ಜೀವನವನ್ನು ನಡೆಸಬಹುದು. ಕೆಲಸ ಕಾರ್ಯಗಳು ನಿಧಾನಗತಿಯಲ್ಲಿ ನಡೆದರೂ ನಿರೀಕ್ಷಿತ ಯಶಸ್ಸು ದೊರೆಯುತ್ತದೆ. ಆದರೆ ನಿಮ್ಮದೇ ತಪ್ಪಿನಿಂದ ಕೆಲಸ ಕಾರ್ಯಗಳಲ್ಲಿ ಒತ್ತಡ ಉಂಟಾಗುತ್ತದೆ. ಎಲ್ಲರೊಂದಿಗೆ ಪ್ರೀತಿ ವಿಶ್ವಾಸದಿಂದ ನಡೆದುಕೊಳ್ಳುವ ಮನಸ್ಸಿರುತ್ತದೆ. ಆದರೆ ಪ್ರತಿಯೊಂದು ವಿಚಾರವನ್ನು ಕಾರ್ಯರೂಪಕ್ಕೆ ತರಲು ಸಾಧ್ಯವಾಗುವುದಿಲ್ಲ. ವಯಸ್ಸಿನ ಭೇದವಿಲ್ಲದೆ ಪ್ರತಿಯೊಬ್ಬರು ಸೌಂದರ್ಯಕ್ಕೆ ಮೊದಲ ಪ್ರಾಮುಖ್ಯ ನೀಡುತ್ತಾರೆ. ಉತ್ತಮ ಆದಾಯ ಇರುತ್ತದೆ. ಹಣವನ್ನು ಉಳಿಸುವ ನಿಮ್ಮ ಯೋಚನೆಗೆ ಎಲ್ಲರ ಸಹಕಾರವಿರುತ್ತದೆ. ಬೇರೆಯವರ ಮಾತನ್ನು ಒಪ್ಪುವುದಿಲ್ಲ.
ಕೃತಿಕಾ 1ನೇ ಪಾದ ಅಥವಾ ಹೆಸರು ಅ ಅಕ್ಷರದಿಂದ ಆರಂಭವಾದರೆ ನಿಮ್ಮ ಭವಿಷ್ಯ
ವಿಶೇಷವಾದ ಬುದ್ಧಿಶಕ್ತಿ ಇರುತ್ತದೆ. ಆದರೆ ಯಾವುದೇ ಕೆಲಸ ಕಾರ್ಯಗಳನ್ನು ಮನಸ್ಸಿಟ್ಟು ಮಾಡುವುದಿಲ್ಲ. ಸಮಯ ಸಂದರ್ಭಕ್ಕೆ ಹೊಂದಿಕೊಂಡು ನಿಮಗೆ ಸವಾಲೆನಿಸುವಂತಹ ಕೆಲಸ ಕಾರ್ಯಗಳನ್ನು ಆಯ್ಕೆ ಮಾಡಿಕೊಳ್ಳುವಿರಿ. ಕಷ್ಟ ನಷ್ಟದಲ್ಲಿ ಇರುವವರಿಗೆ ಸೂಕ್ತ ಸಲಹೆಯನ್ನು ನೀಡುವಿರಿ. ಸಮಾಜಸೇವೆ ಮಾಡುವ ಆಸೆಗೆ ಕುಟುಂಬದವರ ಅಡ್ಡಿ ಇರುತ್ತದೆ. ಬೇಡದ ವಿಚಾರಗಳಿಗೆ ಯೋಚನೆ ಮಾಡುವಿರಿ. ಆತ್ಮವಿಶ್ವಾಸವನ್ನು ಹೆಚ್ಚಿಸಿಕೊಳ್ಳುವ ಯತ್ನದಲ್ಲಿ ತಪ್ಪು ನಿರ್ಧಾರವನ್ನು ತೆಗೆದುಕೊಳ್ಳುವಿರಿ. ಉದ್ಯೋಗದಲ್ಲಿ ನಿಧಾನಗತಿಯ ಪ್ರಗತಿ ದೊರೆಯಲಿದೆ. ಸೋಲಿನ ವೇಳೆಯಲ್ಲಿ ಕಡೆಯ ಘಳಿಗೆಯಲ್ಲಿ ಗೆಲುವನ್ನು ಸಾಧಿಸುವಿರಿ. ಮುಂಗೋಪದಿಂದ ತಪ್ಪು ನಿರ್ಧಾರವನ್ನು ತೆಗೆದುಕೊಳ್ಳುವಿರಿ. ಉಷ್ಣದ ತೊಂದರೆಯಿಂದ ಬಳಲುವಿರಿ.
ಕೃತ್ತಿಕ 2ನೇ ಪಾದ ಅಥವಾ ಹೆಸರು ಇ ಅಕ್ಷರದಿಂದ ಆರಂಭವಾಗುವವರ ಭವಿಷ್ಯ
ಯಾರ ಮನಸ್ಸಿಗೂ ನೋವನ್ನು ಉಂಟು ಮಾಡದೆ ಬಾಳುವಿರಿ. ನಿಮ್ಮ ನಡವಳಿಕೆಯಲ್ಲಿ ಗಾಂಭೀರ್ಯತೆ ಮನೆ ಮಾಡಿರುತ್ತದೆ. ಮುಖಭಾವನೆಯಲ್ಲಿ ಪ್ರೀತಿ ವಿಶ್ವಾಸ ಎದ್ದು ಕಾಣುತ್ತದೆ. ಬೇರೆಯವರ ಮನದ ವಿಚಾರವನ್ನು ಸುಲಭವಾಗಿ ಅರ್ಥ ಮಾಡಿಕೊಳ್ಳುವಿರಿ. ಮಾಡಿದ ತಪ್ಪನ್ನು ಸರಿಪಡಿಸಿಕೊಳ್ಳುವ ದೊಡ್ಡತನ ಇರುತ್ತದೆ. ಅವಶ್ಯಕತೆ ಇರುವ ವೇಳೆ ಚಿಕ್ಕ ವಯಸ್ಸಿನವರ ಸಲಹೆ ಸೂಚನೆಯನ್ನು ಸಹ ಪಾಲಿಸುವಿರಿ. ನಯ ವಿನಯದ ಮಾತಿನಿಂದ ವಿರೋಧಿಗಳ ಮನಸ್ಸನ್ನು ಗೆಲ್ಲಬಲ್ಲಿರಿ. ನಿಮ್ಮ ಮನದಲ್ಲಿ ಇರುವ ಯೋಚನೆಗಳನ್ನು ಕಾರ್ಯರೂಪಕ್ಕೆ ತರುವಿರಿ. ಆದರೆ ಯಾವುದೇ ವಿಚಾರವಾದರೂ ದೃಢವಾದ ನಿರ್ಧಾರವನ್ನು ತೆಗೆದುಕೊಳ್ಳುವುದಿಲ್ಲ. ಮನಸ್ಥಿತಿಗೆ ಸರಿಹೊಂದುವ ಜನರೊಂದಿಗೆ ಮಾತ್ರ ವಿಶ್ವಾಸವನ್ನು ಬೆಳೆಸುವಿರಿ.
ಕೃತ್ತಿಕ 3ನೇ ಪಾದ ಅಥವಾ ಹೆಸರು ಉ ಅಕ್ಷರದಿಂದ ಆರಂಭವಾಗುವವರ ಭವಿಷ್ಯ
ಕುಟುಂಬದಲ್ಲಿ ಸಂತೋಷಕರ ವಾತಾವರಣ ಇರುತ್ತದೆ. ಕುಟುಂಬದ ಹಿರಿಯರ ಜೊತೆಯಲ್ಲಿ ಉತ್ತಮ ಬಾಂಧವ್ಯ ಕಂಡುಬರುತ್ತದೆ. ಕೆಲವೊಮ್ಮೆ ಉತ್ತಮ ಅವಕಾಶಗಳನ್ನು ಕಳೆದುಕೊಳ್ಳುವಿರಿ. ನಿಮ್ಮಲ್ಲಿನ ನಯ ವಿನಯದ ಭಾವನೆ ಎಲ್ಲರ ಸ್ನೇಹವನ್ನು ಬಯಸುತ್ತದೆ. ಸೋಲು ಗೆಲುವನ್ನು ಸಮನಾಗಿ ಸ್ವೀಕರಿಸುವಿರಿ. ನಿಮ್ಮ ಕಷ್ಟದ ದಿನದಲ್ಲಿಯೂ ಬೇರೆಯವರಿಗೆ ಸಹಾಯ ಮಾಡುವ ಮನಸ್ಥಿತಿ ಇರುತ್ತದೆ. ಶಾಂತಿ ವಿಶ್ವಾಸದಿಂದ ಎಲ್ಲರೊಂದಿಗೆ ಬಾಳುವಿರಿ. ಆದರೆ ಕೋಪಗೊಂಡಲ್ಲಿ ಉದ್ವೇಗದಿಂದ ವರ್ತಿಸುವಿರಿ. ನಿಮ್ಮ ಮನಸ್ಸನ್ನು ಬದಲಿಸಲು ಯಾರಿಂದಲೂ ಸಾಧ್ಯವಿಲ್ಲ. ಮನೆತನದ ಉದ್ಯೋಗ ಅಥವಾ ವ್ಯಾಪಾರವನ್ನು ಆರಂಭಿಸುವಿರಿ. ಶೀತದ ತೊಂದರೆ ನಿಮ್ಮನ್ನು ಕಾಡುತ್ತದೆ. ವಿದ್ಯಾರ್ಥಿಗಳಿಗೆ ನಿರೀಕ್ಷೆಗೂ ಮೀರಿದ ಯಶಸ್ಸು ದೊರೆಯುತ್ತದೆ. ಉದ್ಯೋಗದಲ್ಲಿ ನೆಮ್ಮದಿಯ ವಾತಾವರಣ ಇರುವುದಿಲ್ಲ. ಸತತ ಪ್ರಯತ್ನದ ನಡುವೆಯೂ ಉದ್ಯೋಗವನ್ನು ಬದಲಿಸಲು ಸಾಧ್ಯವಾಗುವುದಿಲ್ಲ.
ಕೃತಿಕ 4ನೇ ಪಾದ ಅಥವಾ ಹೆಸರು ಎ ಅಕ್ಷರದಿಂದ ಆರಂಭವಾಗುವವರ ಭವಿಷ್ಯ
ಮನಸ್ಸಿನಲ್ಲಿಯೇ ಲೆಕ್ಕಾಚಾರ ಹಾಕುವ ಗುಣವಿರುತ್ತದೆ. ಸುಖ ಜೀವನ ನಡೆಸುವ ಆಸೆ ನಿಮ್ಮಲ್ಲಿ ಇರುತ್ತದೆ. ಚಂಚಲದ ಮನಸ್ಸು ನೆಮ್ಮದಿಯನ್ನು ಕೆಡಿಸುತ್ತದೆ. ಆದರೆ ಹಠದ ಗುಣ ಮನೆ ಮಾಡಿರುತ್ತದೆ. ಆಡುವ ಮಾತಿನ ಮೇಲೆ ಹತೋಟಿ ಸಾಧಿಸುವಿರಿ. ಹಣಕಾಸಿನ ವಿಚಾರದಲ್ಲಿ ನಿಧಾನಗತಿಯ ಪ್ರಗತಿ ಕಂಡುಬರುತ್ತದೆ. ಪ್ರಯೋಜನವಿಲ್ಲದ ವಿಚಾರಗಳಿಗೆ ಯೋಚನೆ ಮಾಡುವಿರಿ. ಕುಟುಂಬದಲ್ಲಿ ನೆಮ್ಮದಿಯ ವಾತಾವರಣ ಇರುವುದಿಲ್ಲ. ವಿದ್ಯಾರ್ಥಿಗಳ ಜೀವನದಲ್ಲಿ ಸಕಾರಾತ್ಮಕ ಬದಲಾವಣೆಗಳು ಕಂಡು ಬರಲಿವೆ. ಕೆಲಸ ಕಾರ್ಯಗಳ ನಡುವೆ ಆಹಾರ ಸೇವಿಸಲು ಸಾಧ್ಯವಾಗುವುದಿಲ್ಲ. ಮನರಂಜನೆಗಾಗಿ ಹೆಚ್ಚಿನ ಹಣ ಖರ್ಚಾಗುತ್ತದೆ. ಜವಾಬ್ದಾರಿಯಲ್ಲಿ ಸಂಗಾತಿಯ ಸಹಾಯ ಸಹಕಾರ ದೊರೆಯುತ್ತದೆ. ಆರೋಗ್ಯದ ಬಗ್ಗೆ ಹೆಚ್ಚಿನ ಗಮನವಿರಲಿ. ಚರ್ಮದ ತೊಂದರೆ ಬರುವ ಸಾಧ್ಯತೆಗಳಿವೆ.
ಬರಹ: ಎಚ್. ಸತೀಶ್, ಜ್ಯೋತಿಷಿ.
ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ "ಹಿಂದೂಸ್ತಾನ್ ಟೈಮ್ಸ್ ಕನ್ನಡ" ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ.
