ಮೂಲಾ ನಕ್ಷತ್ರ ವರ್ಷ ಭವಿಷ್ಯ 2025: ವ್ಯವಹಾರದಲ್ಲಿ ಪ್ರಗತಿ ಸಾಧಿಸುತ್ತೀರಿ, ಮನಸ್ಸಿಗೆ ನೆಮ್ಮದಿ ಇರುವುದಿಲ್ಲ
Moola Nakshatra Bhavishya: ಮೂಲಾ ನಕ್ಷತ್ರದವರ ವರ್ಷ ಭವಿಷ್ಯ 2025. ವ್ಯವಹಾರದಲ್ಲಿ ಪ್ರಗತಿ ಸಾಧಿಸುತ್ತೀರಿ, ನೆಮ್ಮದಿ ಇರುವುದಿಲ್ಲ. ಸ್ವಂತ ಕೆಲಸ ಪೂರ್ಣವಾಗುತ್ತೆ. (ಬರಹ: ಎಚ್.ಸತೀಶ್, ಜ್ಯೋತಿಷಿ)

ಮೂಲ ನಕ್ಷತ್ರದ ಯುಗಾದಿ ವರ್ಷ ಭವಿಷ್ಯ: ಪಂಚಾಂಗದ ಪ್ರಕಾರ ಕೆಲವೇ ದಿನಗಳಲ್ಲಿ ಹಳೆಯ ವರ್ಷ ಮುಗಿದು ಹೊಸ ವರ್ಷಕ್ಕೆ ಕಾಲಿಡುತ್ತೇವೆ. ಯುಗಾದಿ ಹಬ್ಬವು ಹೊಸ ವರ್ಷದ ಮೊದಲ ದಿನ. ಈ ಹೊಸ ವರ್ಷದಲ್ಲಿ ಸಂಕಷ್ಟಗಳು ಕಳೆದು ಸುಖ, ಶಾಂತಿ, ನೆಮ್ಮದಿ, ಉತ್ತಮ ಆರೋಗ್ಯ, ಹೊಸ ಅವಕಾಶ, ಸಂಪತ್ತು ಸಮೃದ್ಧಿಯನ್ನು ನಿರೀಕ್ಷಿಸುತ್ತ ಆಶಾವಾದಿಗಳಾಗಿ ಬದುಕುವುದು ಸಾಮಾನ್ಯ. ಬಹುತೇಕ ಸಂದರ್ಭದಲ್ಲಿ ಜನರು ತಮ್ಮ ರಾಶಿಗೆ ಅನುಗುಣವಾಗಿ ವರ್ಷ ಭವಿಷ್ಯವನ್ನು ಕಾತರದಿಂದ ವೀಕ್ಷಿಸುತ್ತಾರೆ. ಇನ್ನೂ ನಿಖರವಾಗಿ ಬೇಕು ಎಂದುಕೊಳ್ಳುವವರು ನಕ್ಷತ್ರವಾರು ವರ್ಷ ಭವಿಷ್ಯ ನೋಡಿ ಕೊಂಚ ಸಮಾಧಾನ ಮಾಡಿಕೊಳ್ಳುತ್ತಾರೆ. ಅಂತಹ ಓದುಗರಿಗಾಗಿ 27 ನಕ್ಷತ್ರಗಳ ವರ್ಷ ಭವಿಷ್ಯವನ್ನು ಸರಣಿ ಪ್ರಕಾರ ‘ಎಚ್‌ಟಿ ಕನ್ನಡ’ ಒದುಗಿಸುತ್ತಿದೆ. ನಕ್ಷತ್ರಗಳ ಪೈಕಿ 19ನೇಯದಾದ ಮೂಲಾ ನಕ್ಷತ್ರದಲ್ಲಿ ಜನಿಸಿದವರ ಶ್ರೀ ವಿಶ್ವಾವಸು ಸಂವತ್ಸರದ ವರ್ಷ ಭವಿಷ್ಯ ಇಲ್ಲಿದೆ.
ಮೂಲಾ ನಕ್ಷತ್ರದವರ ಜೀವನ ಮತ್ತು ಹೆಸರು ಯಾವ ಅಕ್ಷರಗಳಿಂದ ಆರಂಭವಾಗುತ್ತೆ
ಪ್ರತಿಯೊಂದು ನಕ್ಷತ್ರವೂ ನಾಲ್ಕು ಪಾದಗಳನ್ನು ಹೊಂದಿರುತ್ತವೆ. ಮೂಲ ನಕ್ಷತ್ರದ ಎಲ್ಲಾ 4 ಪಾದಗಳು ಧನುರ್ ರಾಶಿಯಲ್ಲಿ ಬರುತ್ತವೆ. ಇದಲ್ಲದೆ ನಿಮ್ಮ ಹೆಸರು ಯೆ, ಯೊ, ಬ ಮತ್ತು ಬಿ ಅಕ್ಷರದಿಂದ ಆರಂಭವಾಗಿದ್ದಲ್ಲಿ ನಿಮ್ಮದು ಮೂಲ ನಕ್ಷತ್ರವಾಗುತ್ತದೆ.
ಶ್ರೀ ವಿಶ್ವಾವಸು ಸಂವತ್ಸರದಲ್ಲಿ ಮೂಲಾ ನಕ್ಷತ್ರದವರ ಭವಿಷ್ಯ
ಮೌನದಿಂದ ರಹಸ್ಯವಾಗಿ ದಿನ ನಿತ್ಯದ ಆಗುಹೋಗುಗಳ ಬಗ್ಗೆ ಚಿಂತನೆ ನಡೆಸುವಿರಿ. ಒಳ್ಳೆಯ ವಿಚಾರಗಳನ್ನು ಮತ್ತು ಸಂತೋಷದ ವಿಚಾರಗಳನ್ನು ಎಲ್ಲರೊಡನೆ ಹಂಚಿಕೊಳ್ಳುವಿರಿ. ಅಲ್ಪ ಪ್ರಮಾಣದ ಸ್ವಾರ್ಥ ಬುದ್ಧಿ ಇರುತ್ತದೆ. ಆದರೆ ಅದರಿಂದ ಬೇರೆಯವರಿಗೆ ತೊಂದರೆಯಾಗುವುದಿಲ್ಲ. ಧೈರ್ಯದಿಂದ ಕುಟುಂಬದಲ್ಲಿ ಹಲವು ಬದಲಾವಣೆಗಳನ್ನು ತರುವಿರಿ. ವಾದ ವಿವಾದಗಳನ್ನು ಇಷ್ಟಪಡುವಿರಿ. ಪುರಾತನ ಪದ್ಧತಿಗಳು ಮತ್ತು ಸಂಪ್ರದಾಯಗಳನ್ನು ಆಚರಿಸುವಿರಿ. ಮುಂದೆ ಆಗಲಿರುವ ವಿಚಾರವನ್ನು ಸುಲಭವಾಗಿ ಊಹಿಸುವಿರಿ. ಪ್ರತಿಯೊಂದು ಕೆಲಸ ಕಾರ್ಯಗಳಿಗೂ ರಚನಾತ್ಮಕ ಯೋಜನೆಯನ್ನು ರೂಪಿಸುವಿರಿ. ಸದಾಕಾಲ ಸಂತಸದಿಂದ ಬಾಳುವಿರಿ. ಕಷ್ಟ ನಷ್ಟದ ವೇಳೆ ಮಾನಸಿಕವಾಗಿ ಕುಗ್ಗುವಿರಿ. ಬೇರೆಯವರ ಮನಸ್ಸಿನಲ್ಲಿ ಇರುವ ವಿಚಾರಗಳನ್ನು ತಿಳಿಯಬಲ್ಲಿರಿ. ಅನಾವಶ್ಯಕವಾಗಿ ತೆಗೆದುಕೊಂಡ ತೀರ್ಮಾನಗಳನ್ನು ಬದಲಿಸುವಿರಿ.
ಮೂಲಾ ನಕ್ಷತ್ರದ 1ನೇ ಪಾದ ಅಥವಾ ಹೆಸರು ಯೆ ಅಕ್ಷರದಿಂದ ಆರಂಭವಾಗುವವರ ಭವಿಷ್ಯ
ಮನಸ್ಸಿನಲ್ಲಿ ಮೋಸ ವಂಚನೆಯ ಯೋಚನೆ ಇರುವುದಿಲ್ಲ. ದೈಹಿಕವಾಗಿ ದುರ್ಬಲರಾಗುವಿರಿ. ಅವಿರತ ಕೆಲಸ ಕಾರ್ಯಗಳ ನಡುವೆ ವಿಶ್ರಾಂತಿಯನ್ನು ಪಡೆಯುವುದು ಅವಶ್ಯಕ. ನೋಡಲು ಶಾಂತರಾಗಿ ಕಂಡರೂ ಬೇಗನೆ ಕೋಪಗೊಳ್ಳುವಿರಿ. ಚುರುಕುತನದಿಂದ ಕೆಲಸ ಕಾರ್ಯಗಳನ್ನು ನಿರ್ವಹಿಸುವಿರಿ. ಸ್ವಂತ ಕೆಲಸ ಕಾರ್ಯಗಳಿಗೆ ಮೊದಲ ಆದ್ಯತೆ ನೀಡುವಿರಿ. ಬೇರೆ ಯಾರಿಗೂ ತೊಂದರೆಯನ್ನು ನೀಡುವುದಿಲ್ಲ. ಆತುರದಿಂದ ಹಣಕಾಸಿನ ವಿಚಾರದಲ್ಲಿ ತಪ್ಪು ತೀರ್ಮಾನ ಕೈಗೊಳ್ಳುವಿರಿ. ಎಚ್ಚರಿಕೆಯಿಂದ ವ್ಯವಹರಿಸುವುದು ಕ್ಷೇಮಕರ. ಆತ್ಮವಿಶ್ವಾಸದ ಕೊರತೆ ಕಂಡು ಬರುತ್ತದೆ. ಮನಸ್ಸಿಗೆ ನೆಮ್ಮದಿ ಇರುವುದಿಲ್ಲ. ಕೌಟುಂಬಿಕ ಕಲಹಗಳು ಬಹುದಿನ ನಿಲ್ಲುವುದಿಲ್ಲ. ಅತಿಯಾದ ಕೋಪವಿದ್ದರೂ ಸೇಡಿನ ನಿರ್ಧಾರಗಳನ್ನು ತೆಗೆದುಕೊಳ್ಳುವುದಿಲ್ಲ. ಪ್ರಯತ್ನದಿಂದ ಸ್ವಂತ ಕೆಲಸ ಕಾರ್ಯಗಳನ್ನು ಪೂರ್ಣಗೊಳಿಸುವುದು.
ಮೂಲಾ ನಕ್ಷತ್ರದ 2ನೇ ಪಾದ ಅಥವಾ ಹೆಸರು ಯೊ ಅಕ್ಷರದಿಂದ ಆರಂಭವಾಗುವವರ ಭವಿಷ್ಯ
ಉದ್ಯೋಗದಲ್ಲಿ ಯಾವುದೇ ತೊಂದರೆ ಎದುರಾಗುವುದಿಲ್ಲ. ಆದರೆ ನಿಮ್ಮ ಕಷ್ಟದ ಕೆಲಸಕ್ಕೆ ಸಮನಾದ ಪ್ರತಿಫಲ ದೊರೆಯುವುದಿಲ್ಲ. ದೊರೆಯಬೇಕಾದ ಸ್ಥಾನಮಾನಗಳು ಬೇರೆಯವರ ಪಾಲಾಗುವ ಸಾಧ್ಯತೆ ಇದೆ. ಆರೋಗ್ಯವನ್ನು ಕಾಪಾಡಿಕೊಳ್ಳುವಲ್ಲಿ ಯಶಸ್ವಿಯಾಗುವಿರಿ. ಕುಟುಂಬದಲ್ಲಿ ಎಲ್ಲರ ಪ್ರೀತಿ ವಿಶ್ವಾಸವು ನಿಮಗೆ ದೊರೆಯುತ್ತದೆ. ಸೋಲಿನ ಸಂದರ್ಭದಲ್ಲಿ ಬಾಳ ಸಂಗಾತಿಯ ಸಲಹೆ ನಿಮ್ಮನ್ನು ಕಾಪಾಡುತ್ತದೆ. ಹಣಕಾಸಿನ ವಿಚಾರದಲ್ಲಿ ಸಾಧಾರಣಮಟ್ಟದ ಪ್ರಗತಿ ಕಂಡು ಬರುತ್ತದೆ. ಮನೆಯಲ್ಲಿ ದೇವತಾ ಕಾರ್ಯಗಳನ್ನು ನಡೆಸುವಿರಿ. ಹಠದ ಗುಣದಿಂದ ವ್ಯಾಪಾರ ವ್ಯವಹಾರದಲ್ಲಿ ಪ್ರಗತಿ ಸಾಧಿಸುವಿರಿ. ಖರ್ಚು ವೆಚ್ಚಗಳನ್ನು ಕಡಿಮೆ ಮಾಡಲು ಸಾಧ್ಯವಾಗುವುದಿಲ್ಲ. ಮಕ್ಕಳ ಜೀವನದಲ್ಲಿ ಅನಿರೀಕ್ಷಿತವಾದರೂ ಸಂತಸದ ಪರಿವರ್ತನೆ ಕಂಡುಬರುತ್ತದೆ.
ಮೂಲಾ ನಕ್ಷತ್ರದ 3ನೇ ಪಾದ ಅಥವಾ ಹೆಸರು ಬ ಅಕ್ಷರದಿಂದ ಆರಂಭವಾಗುವವರ ಭವಿಷ್ಯ
ಸುಲಭವಾಗಿ ಬೇರೆಯವರ ಮಾತನ್ನು ನಂಬುವುದಿಲ್ಲ. ನಿಮ್ಮಲ್ಲಿ ಉತ್ಕೃಷ್ಟ ಮಟ್ಟದ ಬುದ್ಧಿಶಕ್ತಿ ಇರುತ್ತದೆ. ಆದರೆ ಅತಿಯಾದ ಸ್ವಾಭಿಮಾನದಿಂದ ತಪ್ಪು ನಿರ್ಧಾರಗಳನ್ನು ತೆಗೆದುಕೊಳ್ಳುವಿರಿ. ಆತ್ಮೀಯರ ಸಲಹೆ ಸೂಚನೆಯನ್ನು ಪಾಲಿಸಿದರೆ ಯಾವುದೇ ತೊಂದರೆ ಎದುರಾಗುವುದಿಲ್ಲ. ಒಮ್ಮೆ ತೆಗೆದುಕೊಂಡ ತೀರ್ಮಾನಗಳನ್ನು ಬದಲಿಸುವುದಿಲ್ಲ. ಬೇರೆಯವರಿಗೆ ತಿಳಿಯದಂತೆ ನಿಮ್ಮ ಕೆಲಸ ಕಾರ್ಯಗಳು ಪೂರ್ಣಗೊಳಿಸುವಿರಿ. ಉದ್ಯೋಗದಲ್ಲಿ ನಿಮ್ಮ ಮಾತನ್ನು ಹಿರಿಯ ಅಧಿಕಾರಿಗಳು ಒಪ್ಪಿಕೊಳ್ಳುತ್ತಾರೆ. ಅನುಭವವನ್ನು ಸರಿಯಾದ ಮಾರ್ಗದಲ್ಲಿ ಬಳಸಿಕೊಳ್ಳುವುದು ಒಳ್ಳೆಯದು. ಆರೋಗ್ಯದ ಬಗ್ಗೆ ಗಮನವಹಿಸಿದಲ್ಲಿ ಸಮಸ್ಯೆಗಳು ದೂರವಾಗುತ್ತವೆ. ಮಕ್ಕಳ ವಿಚಾರದಲ್ಲಿ ನಿಧಾನಗತಿಯ ತೀರ್ಮಾನಗಳನ್ನು ತೆಗೆದುಕೊಳ್ಳುವಿರಿ. ಹಣಕಾಸಿನ ವಿಚಾರದಲ್ಲಿ ನಿಮ್ಮಲ್ಲಿ ಚಿಂತೆ ಇರುತ್ತದೆ. ಶಾಂತಿ ಸಂಯಮದಿಂದ ಬಾಳುವಿರಿ.
ಮೂಲ3 ನಕ್ಷತ್ರದ 4ನೈ ಪಾದ ಅಥವಾ ಹೆಸರು ಬಿ ಅಕ್ಷರದಿಂದ ಆರಂಭವಾಗುವವರ ಭವಿಷ್ಯ
ವೃತ್ತಿ ಕ್ಷೇತ್ರದಲ್ಲಿ ಪರಿಪೂರ್ಣತೆ ಇರುವುದಿಲ್ಲ. ಎರಡು ಅಥವಾ ಮೂರು ಬಾರಿ ವೃತ್ತಿಯನ್ನು ಬದಲಿಸುವಿರಿ. ಯಾವುದೇ ಅಂಜಿಕೆ ಇಲ್ಲದೆ ನಿಮ್ಮ ಪಾಲಿನ ಕರ್ತವ್ಯವನ್ನು ನಿರ್ವಹಿಸುವಿರಿ. ಉದ್ಯೋಗ ಕ್ಷೇತ್ರದಲ್ಲಿ ಮೇಲಾಧಿಕಾರಿಗಳ ಮೆಚ್ಚುಗೆಯನ್ನು ಗಳಿಸುವಿರಿ. ಮನಸ್ಸಿನಲ್ಲಿ ಯಾವುದಾದರೂ ಒಂದು ವಿಚಾರದಲ್ಲಿ ಆತಂಕದ ಭಾವನೆ ಇರುತ್ತದೆ. ನಿಮ್ಮ ಕಷ್ಟ ನಷ್ಟಗಳನ್ನು ಬೇರೆಯವರಿಗೆ ತಿಳಿಸುವುದಿಲ್ಲ. ಆತಂಕದ ಪರಿಸ್ಥಿತಿಯಲ್ಲಿಯು ಕುಟುಂಬದಲ್ಲಿ ಸಂತೋಷ ಹಂಚಲು ಪ್ರಯತ್ನಿಸುವಿರಿ. ಸ್ಥಿರವಾದ ಮನಸ್ಸು ಇರುವುದಿಲ್ಲ. ಇದರ ಪ್ರಯೋಜನವು ಪರರ ಪಾಲಾಗುತ್ತದೆ. ಆತ್ಮವಿಶ್ವಾಸದಿಂದ ನಡೆದುಕೊಂಡಲ್ಲಿ ಉನ್ನತ ಮಟ್ಟದ ಜೀವನ ನಡೆಸಬಹುದು. ಅತಿಯಾದ ನಿದ್ದೆ ಮತ್ತು ಪ್ರಯೋಜನವಿಲ್ಲದ ಓಡಾಟ ನಿಮ್ಮ ಪ್ರಗತಿಗೆ ಅಡ್ಡಗಾಲಾಗುತ್ತದೆ.
ಬರಹ: ಎಚ್. ಸತೀಶ್, ಜ್ಯೋತಿಷಿ.
ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ "ಹಿಂದೂಸ್ತಾನ್ ಟೈಮ್ಸ್ ಕನ್ನಡ" ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ.
