ಮೃಗಶಿರಾ ನಕ್ಷತ್ರ ವರ್ಷ ಭವಿಷ್ಯ 2025; ಹಣಕಾಸಿನ ವಿಚಾರದಲ್ಲಿ ಬೇರೆಯವರನ್ನು ನಂಬಲ್ಲ, ಗುರಿ ಮುಟ್ಟಲು ಪ್ರಯತ್ನ ಬೇಕು
Mrigashira Nakshatra Bhavishya: ಮೃಗಶಿರಾ ನಕ್ಷತ್ರದವರ ವರ್ಷ ಭವಿಷ್ಯ 2025. ಹಣದ ವಿಚಾರದಲ್ಲಿ ಬೇರೆಯವರನ್ನು ನಂಬುವುದಿಲ್ಲ, ಗುರಿ ಮುಟ್ಟಲು ಪ್ರಯತ್ನ ಬೇಕಾಗುತ್ತೆ. (ಬರಹ: ಎಚ್.ಸತೀಶ್, ಜ್ಯೋತಿಷಿ)

ಕೃತಿಕಾ ನಕ್ಷತ್ರದ ಯುಗಾದಿ ವರ್ಷ ಭವಿಷ್ಯ: ಪಂಚಾಂಗದ ಪ್ರಕಾರ ಕೆಲವೇ ದಿನಗಳಲ್ಲಿ ಹಳೆಯ ವರ್ಷ ಮುಗಿದು ಹೊಸ ವರ್ಷಕ್ಕೆ ಕಾಲಿಡುತ್ತೇವೆ. ಯುಗಾದಿ ಹಬ್ಬವು ಹೊಸ ವರ್ಷದ ಮೊದಲ ದಿನ. ಈ ಹೊಸ ವರ್ಷದಲ್ಲಿ ಸಂಕಷ್ಟಗಳು ಕಳೆದು ಸುಖ, ಶಾಂತಿ, ನೆಮ್ಮದಿ, ಉತ್ತಮ ಆರೋಗ್ಯ, ಹೊಸ ಅವಕಾಶ, ಸಂಪತ್ತು ಸಮೃದ್ಧಿಯನ್ನು ನಿರೀಕ್ಷಿಸುತ್ತ ಆಶಾವಾದಿಗಳಾಗಿ ಬದುಕುವುದು ಸಾಮಾನ್ಯ. ಬಹುತೇಕ ಸಂದರ್ಭದಲ್ಲಿ ಜನರು ತಮ್ಮ ರಾಶಿಗೆ ಅನುಗುಣವಾಗಿ ವರ್ಷ ಭವಿಷ್ಯವನ್ನು ಕಾತರದಿಂದ ವೀಕ್ಷಿಸುತ್ತಾರೆ. ಇನ್ನೂ ನಿಖರವಾಗಿ ಬೇಕು ಎಂದುಕೊಳ್ಳುವವರು ನಕ್ಷತ್ರವಾರು ವರ್ಷ ಭವಿಷ್ಯ ನೋಡಿ ಕೊಂಚ ಸಮಾಧಾನ ಮಾಡಿಕೊಳ್ಳುತ್ತಾರೆ. ಅಂತಹ ಓದುಗರಿಗಾಗಿ 27 ನಕ್ಷತ್ರಗಳ ವರ್ಷ ಭವಿಷ್ಯವನ್ನು ಸರಣಿ ಪ್ರಕಾರ ‘ಎಚ್‌ಟಿ ಕನ್ನಡ’ ಒದುಗಿಸುತ್ತಿದೆ. ನಕ್ಷತ್ರಗಳ ಪೈಕಿ ಐದನೇಯದಾದ ಮೃಗಶಿರಾ ನಕ್ಷತ್ರದಲ್ಲಿ ಜನಿಸಿದವರ ಶ್ರೀ ವಿಶ್ವಾವಸುನಾಮ ಸಂವತ್ಸರದ ವರ್ಷ ಭವಿಷ್ಯ ಇಲ್ಲಿದೆ.
ಮೃಗಶಿರಾ ನಕ್ಷತ್ರದವರ ಹೆಸರು ಯಾವ ಅಕ್ಷರಗಳಿಂದ ಆರಂಭವಾಗುತ್ತೆ
ಪ್ರತಿಯೊಂದು ನಕ್ಷತ್ರವೂ ನಾಲ್ಕು ಪಾದಗಳನ್ನು ಹೊಂದಿರುತ್ತವೆ. ಮೃಗಶಿರಾ ನಕ್ಷತ್ರದ 1 ಮತ್ತು 2ನೆಯ ಪಾದಗಳು ವೃಷಭರಾಶಿಯಲ್ಲಿ ಇರುತ್ತವೆ. ಉಳಿದ 3 ಮತ್ತು 4 ನೆಯ ಪಾದಗಳು ಮಿಥುನ ರಾಶಿಗಳಲ್ಲಿ ಇರುತ್ತವೆ. ಇದಲ್ಲದೆ ನಿಮ್ಮ ಹೆಸರು ವೆ, ವೊ, ಕ ಮತ್ತು ಕಿ ಅಕ್ಷರದಿಂದ ಆರಂಭವಾಗಿದ್ದಲ್ಲಿ ನಿಮ್ಮದು ಮೃಗಶಿರ ನಕ್ಷತ್ರವಾಗುತ್ತದೆ.
ಶ್ರೀ ವಿಶ್ವಾವಸು ಸಂವತ್ಸರದಲ್ಲಿ ಮೃಗಶಿರಾ ನಕ್ಷತ್ರದವರ ಭವಿಷ್ಯ
ಕೆಲವೊಂದು ಕೆಲಸಗಳಲ್ಲಿ ನಿಮ್ಮ ಮನಸ್ಸು ಒಪ್ಪದೆ ಹೋದರು ಧೈರ್ಯದಿಂದ ಕಾರ್ಯನಿರ್ವಹಿಸುವಿರಿ. ಯಾವುದೇ ವಿಚಾರದಲ್ಲಿ ದೃಢವಾದ ನಿಲುವು ತೆಗೆದುಕೊಳ್ಳಬಲ್ಲಿರಿ. ಉದ್ಯೋಗ ಕ್ಷೇತ್ರದಲ್ಲಿ ನಿಮ್ಮ ಮನಸ್ಸು ಗಲಿಬಿಲಿಗೊಂಡರು ಕ್ರಮೇಣವಾಗಿ ಸಹಜ ಸ್ಥಿತಿಗೆ ಮರಳುವಿರಿ. ಆರೋಗ್ಯದಲ್ಲಿ ಸ್ಥಿರತೆ ಇರುವುದಿಲ್ಲ. ನಿಮ್ಮದು ವಿಶಾಲವಾದ ಮನಸ್ಸು. ಎಲ್ಲರನ್ನೂ ಪ್ರೀತಿ ವಿಶ್ವಾಸದಿಂದ ಕಾಣುವಿರಿ. ಆದರೆ ಯಾರ ಮಾತನ್ನು ಒಪ್ಪುವುದಿಲ್ಲ. ನಿಮ್ಮದೇ ಆದ ತೀರ್ಮಾನಗಳು ಜೀವನದಲ್ಲಿ ಹೊಸ ಆಸೆಗಳನ್ನು ಸೃಷ್ಟಿಸುತ್ತದೆ. ಆಸ್ತಿಯ ವಿಚಾರದಲ್ಲಿ ನಿಮ್ಮದೇ ತೀರ್ಮಾನವು ಅಂತಿಮವಾಗುತ್ತದೆ. ಹಣಕಾಸಿನ ವಿಚಾರದಲ್ಲಿ ಬೇರೆಯವರನ್ನು ನಂಬುವುದಿಲ್ಲ. ಗೆಲುವಿನ ಸನಿಹದಲ್ಲಿ ಕೆಲವೊಮ್ಮೆ ತಪ್ಪು ನಿರ್ಧಾರವನ್ನು ತೆಗೆದುಕೊಳ್ಳುವಿರಿ. ಯುವಕ ಯುವತಿಯರ ಜೀವನದಲ್ಲಿ ಹೊಸ ರೀತಿಯ ಮಾರ್ಪಾಡುಗಳು ಉಂಟಾಗಲಿವೆ.
ಮೃಗಶಿರ 1ನೇ ಪಾದ ಅಥವಾ ಹೆಸರು ವೆ ಅಕ್ಷರದಿಂದ ಆರಂಭವಾಗುವವರ ಭವಿಷ್ಯ
ಸಮಾಜದಲ್ಲಿ ಪ್ರತಿಷ್ಠಿತ ಸ್ಥಾನಮಾನವಿರುತ್ತದೆ. ನೋಡಲು ಒರಟುತನ ಇದ್ದರೂ, ಮನಸ್ಸು ಮಗುವಿನಂತೆ ಇರುತ್ತದೆ. ಎಲ್ಲರೊಂದಿಗೆ ಪ್ರೀತಿ ವಿಶ್ವಾಸದಿಂದ ವರ್ತಿಸುವಿರಿ. ನಿಮ್ಮಿಂದ ಸಹಾಯ ಪಡೆದವರು ಜೀವನದಲ್ಲಿ ಉನ್ನತ ಮಟ್ಟ ತಲುಪುತ್ತಾರೆ. ಇವರಿಂದ ನಿಮಗೆ ಅನುಕೂಲಕರ ಪರಿಸರವು ಉಂಟಾಗುತ್ತದೆ. ಪ್ರತಿಯೊಂದು ವಿಚಾರವನ್ನು ಅನಾವಶ್ಯಕವಾಗಿ ವಿರೋಧಿಸುವಿರಿ. ನಿಮಗೆ ಅರಿಯದ ವಿಚಾರಗಳ ಬಗ್ಗೆಯೂ ತರ್ಕ ಮಾಡುವಿರಿ. ವಾದದಲ್ಲಿ ನಿಮ್ಮನ್ನು ಗೆಲ್ಲಲು ಯಾರಿಂದಲೂ ಸಾಧ್ಯವಾಗುವುದಿಲ್ಲ. ಉದ್ಯೋಗದಲ್ಲಿ ಎದುರಾಗುವ ವಿರೋಧಭಾಸಗಳನ್ನು ಸುಲಭವಾಗಿ ಎದುರಿಸುವಿರಿ. ನ್ಯಾಯ ನೀತಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡುವಿರಿ. ಉತ್ತಮ ಆದಾಯವಿರುತ್ತದೆ. ವಿದ್ಯಾರ್ಥಿಗಳು ತಮ್ಮ ಗುರಿ ತಲುಪಲು ಹೆಚ್ಚಿನ ಪ್ರಯತ್ನವನ್ನು ಪಡಬೇಕಾಗುತ್ತದೆ. ಭೂವಿವಾದವಿರುತ್ತದೆ. ಆರೊಗ್ಯವನ್ನು ಕಾಪಾಡಿಕೊಳ್ಳುವಿರಿ.
ಮೃಗಶಿರ 2ನೇ ಪಾದ ಅಥವಾ ಹೆಸರು ವೊ ಅಕ್ಷರದಿಂದ ಆರಂಭವಾಗುವವರ ಭವಿಷ್ಯ
ನಿಮ್ಮ ಮುಖದಲ್ಲಿ ದೈವಿಕ ಕಳೆ ರಾರಾಜಿಸುತ್ತದೆ. ದುಡುಕುತನ ಇರುವುದಿಲ್ಲ. ಯಾವುದೇ ವಿಚಾರವಾದರೂ ಅದರ ಬಗ್ಗೆ ಆಳವಾದ ಅಧ್ಯಯನ ನಡೆಸುವಿರಿ. ಬರಿ ಮಾತಿನಲ್ಲಿಯೇ ಎದುರಾಗುವ ವಿವಾದಗಳನ್ನು ಗೆಲ್ಲುವಿರಿ. ಆರಂಭದಲ್ಲಿ ನಿತ್ಯ ಜೀವನದಲ್ಲಿ ಹಿನ್ನಡೆ ಉಂಟಾದರೂ ಕ್ರಮೇಣವಾಗಿ ಪ್ರಗತಿ ಕಂಡುಬರುತ್ತದೆ. ಹಣಕಾಸಿನ ತೊಂದರೆ ಇರುವ ಸಂಬಂಧಿಕರಿಗೆ ಹಣದ ಸಹಾಯ ಮಾಡುವಿರಿ. ಮಧ್ಯ ವಯಸ್ಸಿನ ವ್ಯಕ್ತಿಗಳಿಗೆ ವಿಶೇಷವಾದಂತಹ ಅನುಕೂಲತೆಗಳು ದೊರೆಯುತ್ತವೆ. ಕುಟುಂಬದಲ್ಲಿ ಶಾಂತಿ ನೆಮ್ಮದಿ ನೆಲೆಸಿರುತ್ತದೆ. ದಂಪತಿ ನಡುವೆ ಹೊಂದಾಣಿಕೆ ಇರುತ್ತದೆ. ಸ್ವಂತ ಆಸ್ತಿ ಮಾಡುವ ಯೋಜನೆಯಲ್ಲಿ ಯಶಸ್ಸು ದೊರೆಯುತ್ತದೆ. ಸಮಾಜದಲ್ಲಿ ಉನ್ನತ ಮಟ್ಟದ ಗೌರವ ಮತ್ತು ಘನತೆ ಲಭಿಸುತ್ತದೆ
ಮೃಗಶಿರ 3ನೇ ಪಾದ ಅಥವಾ ಹೆಸರು ಕ ಅಕ್ಷರದಿಂದ ಆರಂಭವಾದವರ ಭವಿಷ್ಯ
ನಿಮ್ಮ ಮಾತುಗಾರಿಕೆಗೆ ಎಲ್ಲರೂ ಬೆರಗಾಗುತ್ತಾರೆ. ಮಾತಿನಿಂದ ಎಲ್ಲರನ್ನು ಮೋಡಿಗೆ ಒಳಪಡಿಸುವಿರಿ. ಶಾಂತಿ ಪ್ರಿಯರಾದ ನೀವು ಸಂಧಾನದ ಮುಖಾಂತರ ಕುಟುಂಬದಲ್ಲಿನ ಸಮಸ್ಯೆಗಳನ್ನು ಬಗೆಹರಿಸುವಿರಿ. ಸ್ವತಂತ್ರವಾಗಿ ಯಾವುದೇ ಕೆಲಸ ಕಾರ್ಯಗಳನ್ನು ಮಾಡುವ ವಿಶ್ವಾಸ ಇರುವುದಿಲ್ಲ. ಸಣ್ಣ ಪುಟ್ಟ ಕೆಲಸ ಕಾರ್ಯಗಳಿಗೂ ಸೋದರರನ್ನು ಅವಲಂಬಿಸುವಿರಿ. ನಿಮ್ಮ ಒಳ್ಳೆಯತನವನ್ನು ದುರುಪಯೋಗ ಪಡಿಸಿಕೊಳ್ಳುವ ಜನರು ಸುತ್ತಮುತ್ತಲಿರುತ್ತಾರೆ. ಬೇರೆಯವರಿಂದ ಸ್ಪೂರ್ತಿಯನ್ನು ಪಡೆದು ನಿಮ್ಮ ಕೆಲಸ ಸಾಧಿಸುವಿರಿ. ಉದ್ಯೋಗದಲ್ಲಿ ಬಿಡುವಿಲ್ಲದ ಕೆಲಸವಿರುತ್ತದೆ. ಇದರಿಂದಾಗಿ ಮಾನಸಿಕವಾಗಿ ಬಳಲುವಿರಿ. ಆತ್ಮವಿಶ್ವಾಸದಿಂದ ನಿಮ್ಮ ಕರ್ತವ್ಯ ಪಾಲಿಸುವಿರಿ. ನಿಮ್ಮ ಮಾತನ್ನು ಒಪ್ಪದ ಪಕ್ಷದಲ್ಲಿ ಅತಿಯಾದ ಕೋಪದಿಂದ ವರ್ತಿಸುವಿರಿ. ನಿರಾಸೆಯನ್ನು ತಡೆದುಕೊಳ್ಳುವಷ್ಟು ದೃಢವಾದ ಮನಸ್ಸು ನಿಮ್ಮಲ್ಲಿರುವುದಿಲ್ಲ.
ಮೃಗಶಿರ 4ನೇ ಪಾದ ಅಥವಾ ಹೆಸರು ಕಿ ಅಕ್ಷರದಿಂದ ಆರಂಭವಾಗುವವರ ಭವಿಷ್ಯ
ಅತಿಯಾಗಿ ಮಾತನಾಡುವಿರಿ. ನಿಮ್ಮ ಮಾತಿಗೆ ವಿರೋಧ ವ್ಯಕ್ತವಾದಲ್ಲಿ ಸಹನ ಕಳೆದುಕೊಳ್ಳುವಿರಿ. ಮಾತಿನ ಭರದಲ್ಲಿ ಕುಟುಂಬದ ರಹಸ್ಯದ ವಿಚಾರಗಳನ್ನು ಎಲ್ಲರಿಗೂ ತಿಳಿಸುವಿರಿ. ನಿಮ್ಮ ಜವಾಬ್ದಾರಿಗಳನ್ನು ನಿಧಾನವೆನಿಸಿದರು ಪೂರ್ಣಗೊಳಿಸಲು ಯಶಸ್ವಿಯಾಗುವಿರಿ. ಉದ್ಯೋಗದಲ್ಲಿ ಉಂಟಾಗುವ ಬದಲಾವಣೆಗಳನ್ನು ಎದುರಿಸಲಾರಿರಿ. ಹಠದ ಗುಣದ ಕಾರಣ ಆತ್ಮೀಯರ ಸ್ನೇಹವನ್ನು ಕಳೆದುಕೊಳ್ಳುವಿರಿ. ಮನಸ್ಸಿನ ವಿಚಾರಗಳು ಯಾರಿಗೂ ತಿಳಿಯುವುದಿಲ್ಲ. ಸೋತವರನ್ನು ಚುಚ್ಚು ಮಾತುಗಳಿಂದ ನಿಂದಿಸುವಿರಿ. ಇದರಿಂದ ಏಕಾಂಗಿಯಾಗಿ ಬಾಳಬೇಕಾಗುತ್ತದೆ. ನಿಮ್ಮ ಸ್ವಂತ ವಿಚಾರಗಳಲ್ಲಿ ಯಾವುದೇ ಬದಲಾವಣೆ ಕಾಣುವುದಿಲ್ಲ. ಆರೋಗ್ಯದ ಬಗ್ಗೆ ಎಚ್ಚರಿಕೆಯಿಂದ ಇರುವುದು ಒಳ್ಳೆಯದು. ಕುಟುಂಬದಲ್ಲಿ ಎಲ್ಲರೊಂದಿಗೆ ಹೊಂದಿಕೊಂಡು ಬಾಳುವಿರಿ. ಮಕ್ಕಳ ಭವಿಷ್ಯಕ್ಕೆ ಬೇಕಾದ ಅನುಕೂಲತೆಗಳನ್ನು ಸಂಗಾತಿಯ ಸಹಾಯದಿಂದ ಪೂರೈಸುವಿರಿ. ಬುದ್ದಿಯಿಂದ ಹೊರ ಬಂದಲ್ಲಿ ಸುಖ ಜೀವನ ನಿಮ್ಮದಾಗುತ್ತದೆ.
ಬರಹ: ಎಚ್. ಸತೀಶ್, ಜ್ಯೋತಿಷಿ.
ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ "ಹಿಂದೂಸ್ತಾನ್ ಟೈಮ್ಸ್ ಕನ್ನಡ" ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ.
