ಪೂರ್ವ ಫಲ್ಗುಣಿ ನಕ್ಷತ್ರ ವರ್ಷ ಭವಿಷ್ಯ 2025; ವ್ಯವಹಾರಗಳಲ್ಲಿ ಉತ್ತಮ ಆದಾಯ ಸಿಗಲಿದೆ, ಐಷರಾಮಿ ಜೀವನ ನಡೆಸುವ ಮನಸ್ಸಿರುತ್ತೆ
Purva Phalguni Nakshatra Bhavishya: ಪೂರ್ವ ಫಲ್ಗುಣ ನಕ್ಷತ್ರದವರ ವರ್ಷ ಭವಿಷ್ಯ 2025. ವ್ಯವಹಾರದಲ್ಲಿ ಉತ್ತಮ ಆದಾಯ ಸಿಗಲಿದೆ,ಐಷರಾಮಿ ಜೀವನ ನಡೆಸುವ ಮನಸ್ಸಿರುತ್ತೆ. (ಬರಹ: ಎಚ್.ಸತೀಶ್, ಜ್ಯೋತಿಷಿ)

ಪೂರ್ವ ಫಲ್ಗುಣಿ ನಕ್ಷತ್ರದ ಯುಗಾದಿ ವರ್ಷ ಭವಿಷ್ಯ: ಪಂಚಾಂಗದ ಪ್ರಕಾರ ಕೆಲವೇ ದಿನಗಳಲ್ಲಿ ಹಳೆಯ ವರ್ಷ ಮುಗಿದು ಹೊಸ ವರ್ಷಕ್ಕೆ ಕಾಲಿಡುತ್ತೇವೆ. ಯುಗಾದಿ ಹಬ್ಬವು ಹೊಸ ವರ್ಷದ ಮೊದಲ ದಿನ. ಈ ಹೊಸ ವರ್ಷದಲ್ಲಿ ಸಂಕಷ್ಟಗಳು ಕಳೆದು ಸುಖ, ಶಾಂತಿ, ನೆಮ್ಮದಿ, ಉತ್ತಮ ಆರೋಗ್ಯ, ಹೊಸ ಅವಕಾಶ, ಸಂಪತ್ತು ಸಮೃದ್ಧಿಯನ್ನು ನಿರೀಕ್ಷಿಸುತ್ತ ಆಶಾವಾದಿಗಳಾಗಿ ಬದುಕುವುದು ಸಾಮಾನ್ಯ. ಬಹುತೇಕ ಸಂದರ್ಭದಲ್ಲಿ ಜನರು ತಮ್ಮ ರಾಶಿಗೆ ಅನುಗುಣವಾಗಿ ವರ್ಷ ಭವಿಷ್ಯವನ್ನು ಕಾತರದಿಂದ ವೀಕ್ಷಿಸುತ್ತಾರೆ. ಇನ್ನೂ ನಿಖರವಾಗಿ ಬೇಕು ಎಂದುಕೊಳ್ಳುವವರು ನಕ್ಷತ್ರವಾರು ವರ್ಷ ಭವಿಷ್ಯ ನೋಡಿ ಕೊಂಚ ಸಮಾಧಾನ ಮಾಡಿಕೊಳ್ಳುತ್ತಾರೆ. ಅಂತಹ ಓದುಗರಿಗಾಗಿ 27 ನಕ್ಷತ್ರಗಳ ವರ್ಷ ಭವಿಷ್ಯವನ್ನು ಸರಣಿ ಪ್ರಕಾರ ‘ಎಚ್‌ಟಿ ಕನ್ನಡ’ ಒದುಗಿಸುತ್ತಿದೆ. ನಕ್ಷತ್ರಗಳ ಪೈಕಿ ಹನ್ನೊಂದನೇಯದು ಪೂರ್ವ ಫಲ್ಗುಣಿ ಅಥವಾ ಪುಬ್ಬ ನಕ್ಷತ್ರದಲ್ಲಿ ಜನಿಸಿದವರ ಶ್ರೀ ವಿಶ್ವಾವಸು ಸಂವತ್ಸರದ ವರ್ಷ ಭವಿಷ್ಯ ಇಲ್ಲಿದೆ.
ಪೂರ್ವ ಫಲ್ಗುಣಿ ನಕ್ಷತ್ರದವರ ಹೆಸರು ಯಾವ ಅಕ್ಷರಗಳಿಂದ ಆರಂಭವಾಗುತ್ತೆ
ಪ್ರತಿಯೊಂದು ನಕ್ಷತ್ರವೂ ನಾಲ್ಕು ಪಾದಗಳನ್ನು ಹೊಂದಿರುತ್ತವೆ. ಪುಬ್ಬ ನಕ್ಷತ್ರದ ಎಲ್ಲಾ 4 ಪಾದಗಳೂ ಸಿಂಹ ರಾಶಿಯಲ್ಲಿ ಬರುತ್ತವೆ. ಇದಲ್ಲದೆ ನಿಮ್ಮ ಹೆಸರು ಮೊ, ಟ, ಟಿ ಮತ್ತು ಟು ಅಕ್ಷರದಿಂದ ಆರಂಭವಾಗಿದ್ದಲ್ಲಿ ನಿಮ್ಮದು ಪುಬ್ಬ ನಕ್ಷತ್ರವಾಗುತ್ತದೆ.
ಶ್ರೀ ವಿಶ್ವಾವಸು ಸಂವತ್ಸರದಲ್ಲಿ ಪುಬ್ಬ ಅಥವಾ ಪೂರ್ವ ಫಲ್ಗುಣಿ ನಕ್ಷತ್ರದವರ ಭವಿಷ್ಯ
ನಿಮ್ಮ ಮನದ ಆಸೆಯನ್ನು ಈಡೇರಿಸಿಕೊಳ್ಳಲು ಹೋರಾಟದ ಹಾದಿಯನ್ನು ಹಿಡಿಯುವಿರಿ. ಯಾವುದೇ ಸಂದರ್ಭ ಎದುರಾದರು ಸೋಲನ್ನು ಒಪ್ಪಿಕೊಳ್ಳುವುದಿಲ್ಲ. ಮೊದಲ ಆದ್ಯತೆಯನ್ನು ನಿಮ್ಮ ಸ್ವಂತ ಕೆಲಸಗಳಿಗೆ ನೀಡುವಿರಿ. ಕೇವಲ ಬಾಹ್ಯ ಸೌಂದರ್ಯಕ್ಕೆ ಮಾತ್ರವಲ್ಲದೆ ಮಾನಸಿಕ ಸೌಂದರ್ಯವನ್ನು ಉಳಿಸಿಕೊಳ್ಳಲು ಪ್ರಯತ್ನಿಸುವಿರಿ. ಐಷಾರಾಮಿ ಜೀವನವನ್ನು ನಡೆಸುವ ಮನಸ್ಸಿರುತ್ತದೆ. ಒಡವೆ ವಸ್ತ್ರಗಳಲ್ಲಿ ವಿಶೇಷವಾದ ಅಭಿರುಚಿ ಉಂಟಾಗುತ್ತದೆ. ಸ್ತ್ರೀಯರು ಅಧಿಕಾರಿಗಳಾಗಿದ್ದಲ್ಲಿ ಎಲ್ಲರ ಸಹಕಾರ ಲಭಿಸುತ್ತದೆ. ಗೆಲ್ಲುವುದನ್ನು ಹವ್ಯಾಸ ಮಾಡಿಕೊಂಡ ನಿಮಗೆ ಬಂಧು ಬಳಗಕ್ಕಿಂತ ಸ್ನೇಹಿತರೆ ಹೆಚ್ಚಿನವರಾಗುತ್ತಾರೆ. ಆರೋಗ್ಯದ ಸಮಸ್ಯೆಗಳು ಕ್ರಮೇಣವಾಗಿ ದೂರವಾಗುತ್ತದೆ. ಕುಟುಂಬದಲ್ಲಿ ನಿಮ್ಮ ಜವಾಬ್ದಾರಿಯು ಅತಿ ಮುಖ್ಯವಾಗುತ್ತದೆ.
ಪುಬ್ಬ ನಕ್ಷತ್ರದ 1ನೇ ಪಾದ ಅಥವಾ ಹೆಸರು ಮೊ ಅಕ್ಷರದಿಂದ ಆರಂಭವಾಗಿರುವವರ ಭವಿಷ್ಯ
ಶಾಸ್ತ್ರ ಸಂಪ್ರದಾಯದಲ್ಲಿ ವಿಶೇಷವಾದ ಆಸಕ್ತಿ ಇರುತ್ತದೆ. ರಾಜಕೀಯ ಕ್ಷೇತ್ರದಲ್ಲಿ ಇದ್ದವರಿಗೆ ಮಹತ್ತರ ಬದಲಾವಣೆಗಳು ಉಂಟಾಗುತ್ತದೆ. ನಿಮ್ಮ ಮನಸ್ಸಿನ ಆಶಯಗಳು ತಡವಾದರೂ ಸುಲಭವಾಗಿ ಪೂರೈಸಲ್ಪಡುತ್ತದೆ. ನೇರವಾಗಿ ಅಥವಾ ಪರೋಕ್ಷವಾಗಿ ಜನಸೇವೆ ಮಾಡುವ ಅದೃಷ್ಟವೂ ನಿಮ್ಮದಾಗಲಿದೆ. ನಿಮ್ಮ ಮಾತಿಗೆ ಕುಟುಂಬದ ಒಳಗು ಮತ್ತು ಸಮಾಜದಲ್ಲಿಯೂ ಗೌರವ ಲಭಿಸುತ್ತದೆ. ಬಂಧು ಬಳಗದವರಿಗೆ ನಿಮ್ಮ ಯಶಸ್ಸನ್ನು ಕಂಡು ಅಸೂಯೆ ಉಂಟಾಗುತ್ತದೆ. ದಂಪತಿ ನಡುವೆ ಉತ್ತಮ ಬಾಂಧವ್ಯ ಇರುತ್ತದೆ. ವಿದ್ಯಾಭ್ಯಾಸ ಮತ್ತು ಉದ್ಯೋಗದಲ್ಲಿ ನಿಮಗೆ ಮೇಲ್ಮಟ್ಟದ ಅನುಕೂಲತೆಗಳು ಕಂಡುಬರುತ್ತವೆ. ಸಂಗೀತ ನಾಟ್ಯದ ಅಭಿರುಚಿ ಇದ್ದವರಿಗೆ ಸಾಧನೆಗೆ ವಿಶೇಷ ಅವಕಾಶ ದೊರೆಯುತ್ತದೆ. ವಿದ್ಯಾಭ್ಯಾಸದಲ್ಲಿ ಮತ್ತು ಉದ್ಯೋಗದಲ್ಲಿ ಉನ್ನತ ಮಟ್ಟ ತಲುಪುವಿರಿ.
ಪುಬ್ಬ ನಕ್ಷತ್ರದ 2ನೇ ಪಾದ ಅಥವಾ ಹೆಸರು ಟ ಅಕ್ಷರದಿಂದ ಆರಂಭವಾಗಿರುವವರ ಭವಿಷ್ಯ
ಹಣಕಾಸಿನ ವ್ಯವಹಾರದಲ್ಲಿ ವಿಶೇಷವಾದ ಪಾಂಡಿತ್ಯ ಇರುತ್ತದೆ. ಬುದ್ಧಿವಂತಿಕೆಯಿಂದ ಕೆಲಸ ಕಾರ್ಯಗಳಲ್ಲಿ ಯಶಸ್ಸು ಗಳಿಸುವಿರಿ. ಪ್ರಾಮಾಣಿಕತೆಯಿಂದ ಜೀವನ ನಡೆಸುವಿರಿ. ಬೇರೆಯವರ ಜೀವನದಲ್ಲಿ ನಿಮ್ಮಿಂದ ಉತ್ತಮ ಬದಲಾವಣೆಗಳು ಉಂಟಾಗುತ್ತವೆ. ವಿವೇಕದಿಂದ ವರ್ತಿಸುವ ನೀವು ಸಮಾಜದಲ್ಲಿ ವಿಶೇಷ ಗೌರವ ಗಳಿಸುವಿರಿ. ಅತಿಯಾದ ಹೋರಾಟದಿಂದ ನಿಮ್ಮ ಕೆಲಸ ಕಾರ್ಯಗಳಲ್ಲಿ ಅಪಜಯ ಉಂಟಾಗುತ್ತದೆ. ವಿದ್ಯಾರ್ಥಿಗಳು ಸಮಯ ವ್ಯರ್ಥ ಮಾಡದೆ ವಿಶೇಷ ಅಧ್ಯಯನದಲ್ಲಿ ತೊಡಗುತ್ತಾರೆ. ನಿಮ್ಮ ತಪ್ಪು ನಿರ್ಧಾರಗಳಿಂದ ಉದ್ಯೋಗದಲ್ಲಿ ಅನಾವಶ್ಯಕ ಬದಲಾವಣೆಗಳು ಎದುರಾಗಲಿವೆ. ಕೆಲಸ ಕಾರ್ಯದಲ್ಲಿ ತೊಂದರೆಯಾದಲ್ಲಿ ಸಹನೆ ಕಳೆದುಕೊಂಡು ಮುಂಗೋಪದಿಂದ ವರ್ತಿಸುವಿರಿ. ಕುಟುಂಬದಲ್ಲಿನ ಜವಾಬ್ದಾರಿಗಳ ಬಗ್ಗೆ ಆಸಕ್ತಿ ತೋರುವುದಿಲ್ಲ. ಆರೋಗ್ಯದಲ್ಲಿ ಕೆಲವೊಮ್ಮೆ ಏರಿಳಿತಗಳು ಉಂಟಾಗುತ್ತವೆ. ಆರೋಗ್ಯದ ಬಗ್ಗೆ ಕೊಂಚ ಗಂಭೀರತೆಯಿಂದ ಇರುವುದು ಒಳ್ಳೆಯದು.
ಪುಬ್ಬ ನಕ್ಷತ್ರದ 3ನೇ ಪಾದ ಅಥವಾ ಹೆಸರು ಟಿ ಅಕ್ಷರದಿಂದ ಆರಂಭವಾಗುವವರ ಭವಿಷ್ಯ
ನಿಮ್ಮ ರೀತಿ ನೀತಿಗಳು ಬೇರೆಯವರಲ್ಲಿ ಬೇಸರವನ್ನು ಉಂಟುಮಾಡುತ್ತದೆ. ಎಲ್ಲರೊಂದಿಗೆ ಪ್ರೀತಿ ವಿಶ್ವಾಸದಿಂದ ಬಾಳುವಿರಿ. ಆದರೆ ಯಾರೊಂದಿಗೂ ವಿಶೇಷವಾದಂತಹ ಭಾವನೆ ಬಾಂಧವ್ಯ ಇರುವುದಿಲ್ಲ. ಅವಶ್ಯಕತೆ ಇದ್ದರೂ ಬೇರೆಯವರ ಸಲಹೆಯನ್ನು ಒಪ್ಪುವುದಿಲ್ಲ. ಜೀವನದಲ್ಲಿ ನಿರಂತರ ಬದಲಾವಣೆಗಳು ಉಂಟಾಗಲಿವೆ ಹಣಕಾಸಿನ ಪರಿಸ್ಥಿತಿಯಲ್ಲಿ ಉತ್ತಮ ಬದಲಾವಣೆಗಳು ಕಂಡು ಬರುತ್ತದೆ. ಆಸ್ತಿ ಅಂತಸ್ತುನ್ನು ಹೆಚ್ಚಿಸಿಕೊಳ್ಳುವ ಪ್ರಯತ್ನದಲ್ಲಿ ಸಫಲರಾಗುವಿರಿ. ಮಕ್ಕಳ ಜೊತೆಯಲ್ಲಿ ಪ್ರೀತಿ ವಿಶ್ವಾಸದಿಂದ ನಡೆದುಕೊಳ್ಳುವಿರಿ. ದಂಪತಿ ನಡುವೆ ಅನಾವಶ್ಯಕವಾದ ವಾದವಿವಾದಗಳು ಇರುತ್ತವೆ. ಮನೆತನದ ಆಸ್ತಿಯನ್ನು ಉಳಿಸಿಕೊಳ್ಳಲು ಕಾನೂನಿನ ಮೊರೆಹೋಗುವಿರಿ. ವಿದ್ಯಾರ್ಥಿಗಳ ಜೀವನದಲ್ಲಿ ಹಿತಕರ ಬದಲಾವಣೆಗಳು ಉಂಟಾಗುತ್ತವೆ. ಸಭೆ ಸಮಾರಂಭಗಳಲ್ಲಿ ಭಾಗವಹಿಸುವುದಿಲ್ಲ. ಹೊಸ ವಾಹನವನ್ನು ಕೊಳ್ಳುವ ವಿಚಾರವನ್ನು ಮರೆಯಬೇಕಾಗುತ್ತದೆ. ಏಕಾಂಗಿತನವನ್ನು ಇಷ್ಟಪಡುವಿರಿ.
ಪುಬ್ಬ ನಕ್ಷತ್ರದ 4ನೇ ಪಾದ ಅಥವಾ ಹೆಸರು ಟು ಅಕ್ಷರದಿಂದ ಆರಂಭವಾಗುವವರ ಭವಿಷ್ಯ
ಬೇರೆಯವರಿಗೆ ಅಸಾಧ್ಯವೆನಿಸುವ ಕೆಲಸ ಕಾರ್ಯಗಳನ್ನು ಸುಲಭವಾಗಿ ಪೂರ್ಣಗೊಳಿಸುವಿರಿ. ನಿಮ್ಮ ಸಹಾಯವಿಲ್ಲದೆ ಕುಟುಂಬದಲ್ಲಿನ ಯಾವುದೇ ಕೆಲಸ ಕಾರ್ಯಗಳು ಯಶಸ್ವಿಯಾಗುವುದಿಲ್ಲ. ನವ ವಿವಾಹಿತರ ಜೀವನದಲ್ಲಿ ಬಹು ಮುಖ್ಯ ಬದಲಾವಣೆಗಳು ಉಂಟಾಗಲಿವೆ. ಸ್ವಂತ ನಿರ್ಧಾರಗಳಿಂದ ಹಣದ ವ್ಯವಹಾರಗಳಲ್ಲಿ ಉತ್ತಮ ಆದಾಯ ದೊರೆಯುತ್ತದೆ. ಒಮ್ಮೆ ತೆಗೆದುಕೊಂಡ ನಿರ್ಧಾರವನ್ನು ಬದಲಿಸುವುದಿಲ್ಲ. ನಿಮ್ಮ ಮಕ್ಕಳ ಹಠದ ಪರವಾಗಿ ಕುಟುಂಬದಲ್ಲಿ ಬೇಸರ ಉಂಟಾಗುತ್ತದೆ. ಅಜೀರ್ಣದ ತೊಂದರೆಯಿಂದ ಬಳಲುವಿರಿ. ಮಧ್ಯ ವಯಸ್ಕರಲ್ಲಿ ಬಹುದಿನದಿಂದ ಕಾಡುತ್ತಿದ್ದ ತೊಂದರೆಯೊಂದು ದೂರವಾಗುತ್ತದೆ. ಪಾಲುಗಾರಿಕೆಯ ವ್ಯಾಪಾರವು ಲಾಭದಾಯಕವಾಗುತ್ತದೆ. ನಿಮ್ಮ ಹಠದ ಸ್ವಭಾವದಿಂದ ಕುಟುಂಬದ ನೆಮ್ಮದಿಯು ಮರೆಯಾಗುತ್ತದೆ. ಮಹಿಳೆಯರ ಆರೋಗ್ಯದಲ್ಲಿ ತೊಂದರೆ ಇರುತ್ತದೆ. ಅವಿರತ ದುಡಿಮೆಯಿಂದ ವೈರಾಗ್ಯ ಉಂಟಾಗುತ್ತದೆ. ಸತತ ಪ್ರಯತ್ನದ ನಡುವೆಯೂ ಆದಾಯದಲ್ಲಿ ಸಾಧಾರಣ ಮಟ್ಟದ ಪ್ರಗತಿ ಕಂಡು ಬರುತ್ತದೆ.
ಬರಹ: ಎಚ್. ಸತೀಶ್, ಜ್ಯೋತಿಷಿ.
ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ "ಹಿಂದೂಸ್ತಾನ್ ಟೈಮ್ಸ್ ಕನ್ನಡ" ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ.
