ಪುಷ್ಯ ನಕ್ಷತ್ರ ವರ್ಷ ಭವಿಷ್ಯ 2025; ಸ್ತ್ರೀಯರಿಗೆ ವಿಶೇಷವಾದ ಶುಭಫಲಗಳಿವೆ, ಅಸಾಧಾರಣ ಆತ್ಮವಿಶ್ವಾಸವಿರುತ್ತದೆ
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  ಪುಷ್ಯ ನಕ್ಷತ್ರ ವರ್ಷ ಭವಿಷ್ಯ 2025; ಸ್ತ್ರೀಯರಿಗೆ ವಿಶೇಷವಾದ ಶುಭಫಲಗಳಿವೆ, ಅಸಾಧಾರಣ ಆತ್ಮವಿಶ್ವಾಸವಿರುತ್ತದೆ

ಪುಷ್ಯ ನಕ್ಷತ್ರ ವರ್ಷ ಭವಿಷ್ಯ 2025; ಸ್ತ್ರೀಯರಿಗೆ ವಿಶೇಷವಾದ ಶುಭಫಲಗಳಿವೆ, ಅಸಾಧಾರಣ ಆತ್ಮವಿಶ್ವಾಸವಿರುತ್ತದೆ

Pushya Nakshatra Bhavishya: ಪುಷ್ಯ ನಕ್ಷತ್ರದವರ ವರ್ಷ ಭವಿಷ್ಯ 2025. ಸ್ತ್ರೀಯರು ವಿಶೇಷವಾದ ಶುಭಫಲಗಳನ್ನು ಪಡೆಯುತ್ತಾರೆ. ಅಸಾಧಾರಣ ಆತ್ಮವಿಶ್ವಾಸ ಇರುತ್ತದೆ. (ಬರಹ: ಎಚ್‌.ಸತೀಶ್, ಜ್ಯೋತಿಷಿ)

ಶ್ರೀ ವಿಶ್ವಾವಸು ಸಂವತ್ಸರ ನಕ್ಷತ್ರ ಭವಿಷ್ಯ 2025
ಶ್ರೀ ವಿಶ್ವಾವಸು ಸಂವತ್ಸರ ನಕ್ಷತ್ರ ಭವಿಷ್ಯ 2025

ಪುಷ್ಯ ನಕ್ಷತ್ರದ ಯುಗಾದಿ ವರ್ಷ ಭವಿಷ್ಯ: ಪಂಚಾಂಗದ ಪ್ರಕಾರ ಕೆಲವೇ ದಿನಗಳಲ್ಲಿ ಹಳೆಯ ವರ್ಷ ಮುಗಿದು ಹೊಸ ವರ್ಷಕ್ಕೆ ಕಾಲಿಡುತ್ತೇವೆ. ಯುಗಾದಿ ಹಬ್ಬವು ಹೊಸ ವರ್ಷದ ಮೊದಲ ದಿನ. ಈ ಹೊಸ ವರ್ಷದಲ್ಲಿ ಸಂಕಷ್ಟಗಳು ಕಳೆದು ಸುಖ, ಶಾಂತಿ, ನೆಮ್ಮದಿ, ಉತ್ತಮ ಆರೋಗ್ಯ, ಹೊಸ ಅವಕಾಶ, ಸಂಪತ್ತು ಸಮೃದ್ಧಿಯನ್ನು ನಿರೀಕ್ಷಿಸುತ್ತ ಆಶಾವಾದಿಗಳಾಗಿ ಬದುಕುವುದು ಸಾಮಾನ್ಯ. ಬಹುತೇಕ ಸಂದರ್ಭದಲ್ಲಿ ಜನರು ತಮ್ಮ ರಾಶಿಗೆ ಅನುಗುಣವಾಗಿ ವರ್ಷ ಭವಿಷ್ಯವನ್ನು ಕಾತರದಿಂದ ವೀಕ್ಷಿಸುತ್ತಾರೆ. ಇನ್ನೂ ನಿಖರವಾಗಿ ಬೇಕು ಎಂದುಕೊಳ್ಳುವವರು ನಕ್ಷತ್ರವಾರು ವರ್ಷ ಭವಿಷ್ಯ ನೋಡಿ ಕೊಂಚ ಸಮಾಧಾನ ಮಾಡಿಕೊಳ್ಳುತ್ತಾರೆ. ಅಂತಹ ಓದುಗರಿಗಾಗಿ 27 ನಕ್ಷತ್ರಗಳ ವರ್ಷ ಭವಿಷ್ಯವನ್ನು ಸರಣಿ ಪ್ರಕಾರ ‘ಎಚ್‌ಟಿ ಕನ್ನಡ’ ಒದುಗಿಸುತ್ತಿದೆ. ನಕ್ಷತ್ರಗಳ ಪೈಕಿ ಎಂಟನೇಯದಾದ ಪುಷ್ಯ ನಕ್ಷತ್ರದಲ್ಲಿ ಜನಿಸಿದವರ ಶ್ರೀ ವಿಶ್ವಾವಸು ಸಂವತ್ಸರದ ವರ್ಷ ಭವಿಷ್ಯ ಇಲ್ಲಿದೆ.

ಪುಷ್ಯ ನಕ್ಷತ್ರದವರ ಹೆಸರು ಯಾವ ಅಕ್ಷರಗಳಿಂದ ಆರಂಭವಾಗುತ್ತೆ

ಪ್ರತಿಯೊಂದು ನಕ್ಷತ್ರವೂ ನಾಲ್ಕು ಪಾದಗಳನ್ನು ಹೊಂದಿರುತ್ತವೆ. ಪುಷ್ಯ ನಕ್ಷತ್ರದ ಎಲ್ಲಾ 4 ಪಾದಗಳೂ ಕಟದ ರಾಶಿಯಲ್ಲಿ ಬರುತ್ತವೆ. ಇದಲ್ಲದೆ ನಿಮ್ಮ ಹೆಸರು ಹು, ಹೆ, ಹೊ ಮತ್ತು ಡ ಅಕ್ಷರದಿಂದ ಆರಂಭವಾಗಿದ್ದಲ್ಲಿ ನಿಮ್ಮದು ಪುಷ್ಯ ನಕ್ಷತ್ರವಾಗುತ್ತದೆ.

ಶ್ರೀ ವಿಶ್ವಾವಸು ಸಂವತ್ಸರದಲ್ಲಿ ಪುಷ್ಯ ನಕ್ಷತ್ರದವರ ಭವಿಷ್ಯ

ನಿಧಾನವಾಗಿ ಅತಿಮುಖ್ಯ ನಿರ್ಧಾರಗಳನ್ನು ತೆಗೆದುಕೊಳ್ಳುವಿರಿ. ಇದರಿಂದ ದಿನ ನಿತ್ಯದ ಕೆಲಸ ಕಾರ್ಯಗಳಲ್ಲಿಯೂ ಹಿನ್ನೆಡೆ ಉಂಟಾಗುತ್ತದೆ. ಮಾನಸಿಕ ಸಮತೋಲನೆಯ ಕಾರಣ ನೆಮ್ಮದಿ ಉಂಟಾಗುತ್ತದೆ. ಸಾರ್ವಜನಿಕ ಸೇವೆಯಲ್ಲಿ ಆಸಕ್ತಿ ಇರುತ್ತದೆ. ಪಾಲುಗಾರಿಕೆಯ ವ್ಯಾಪಾರದಲ್ಲಿ ಆಸಕ್ತಿ ಇರುತ್ತದೆ. ವಿವಾಹದಂತಹ ಕಾರ್ಯಕ್ರಮಗಳ ನಿರ್ವಹಣೆಯಿಂದ ಉತ್ತಮ ಆದಾಯ ಗಳಿಸುವಿರಿ. ಜನಸಾಮಾನ್ಯರ ಸಮಸ್ಯೆಗಳನ್ನು ಸಂಧಾನದಿಂದ ಬಗೆಹರಿಸುವಿರಿ. ಸಮಾಜದಲ್ಲಿ ಗೌರವದ ಸ್ಥಾನಮಾನ ದೊರೆಯುತ್ತದೆ. ಮಕ್ಕಳ ವಿದ್ಯಾಭ್ಯಾಸದಲ್ಲಿ ನಿಮ್ಮ ಕೊಡುಗೆ ಮುಖ್ಯವಾಗುತ್ತದೆ. ಸ್ತ್ರೀಯರಿಗೆ ವಿಶೇಷವಾದ ಶುಭಫಲಗಳು ದೊರೆಯುತ್ತವೆ. ಅವಿಶ್ರಾಂತ ದುಡಿಮೆಯಿಂದ ಅಪೂರ್ಣಗೊಂಡ ಕೆಲಸಗಳನ್ನು ಪೂರ್ಣಗೊಳಿಸುವಿರಿ. ತಂದೆ ಅಥವಾ ಕುಟುಂಬದ ಹಿರಿಯರ ಆರೋಗ್ಯದಲ್ಲಿ ಏರಿಳಿತ ಇರುತ್ತದೆ.

ಪುಷ್ಯ ನಕ್ಷತ್ರದ 1ನೇ ಪಾದ ಅಥವಾ ಹೆಸರು ಹು ಅಕ್ಷರದಿಂದ ಆರಂಭವಾಗುವವರ ಭವಿಷ್ಯ

ಎಲ್ಲರೊಂದಿಗೆ ಸ್ನೇಹದಿಂದ ವರ್ತಿಸುವಿರಿ. ಗುರು ಹಿರಿಯರನ್ನು ಗೌರವದಿಂದ ಕಾಣುವಿರಿ. ಉದ್ಯೋಗದಲ್ಲಿ ನಿರೀಕ್ಷಿತ ಮಟ್ಟವನ್ನು ತಲುಪುವಿರಿ. ಉದ್ಯೋಗದ ಸಲುವಾಗಿ ದೂರದ ಪ್ರದೇಶಕ್ಕೆ ಅಥವಾ ವಿದೇಶಕ್ಕೆ ತೆರಳುವ ಅವಕಾಶ ದೊರೆಯುತ್ತದೆ. ಯಾರೊಬ್ಬರ ಮನ ನೋಯಿಸುವ ಮಾತುಗಳನ್ನು ಆಡುವುದಿಲ್ಲ. ನಿಮ್ಮ ಸ್ಫೂರ್ತಿಯಿಂದ ಹಲವರು ತಮ್ಮ ಜೀವನವನ್ನು ರೂಪಿಸಿಕೊಳ್ಳುತ್ತಾರೆ. ಸಣ್ಣಪುಟ್ಟ ವ್ಯಾಪಾರವನ್ನು ವಹಿಸಿಕೊಂಡು ಅಭಿವೃದ್ಧಿ ಪಡಿಸುವಿರಿ. ಕೋಪದಲ್ಲಿ ಆತುರದ ತೀರ್ಮಾನಗಳನ್ನು ತೆಗೆದುಕೊಳ್ಳುವಿರಿ. ಅನಾವಶ್ಯಕ ಖರ್ಚು ವೆಚ್ಚಗಳು ಇರಲಿವೆ. ಆತ್ಮೀಯರೊಂದಿಗೆ ಹಣಕಾಸಿನ ವ್ಯವಹಾರವನ್ನು ಮಾಡುವುದಿಲ್ಲ. ಆತುರದಿಂದ ತೆಗೆದುಕೊಳ್ಳುವ ನಿರ್ಧಾರಗಳನ್ನು ಸಮರ್ಥಿಸಿಕೊಳ್ಳುವಿರಿ. ಅಸಾಧಾರಣ ಆತ್ಮವಿಶ್ವಾಸವಿರುತ್ತದೆ. ಪ್ರಸಕ್ತ ಇರುವ ವಾಸ ಸ್ಥಳವನ್ನು ಆಧುನಿಕರಿಸುವಿರಿ. ಮಕ್ಕಳ ಜೀವನದಲ್ಲಿ ಸಕಾರಾತ್ಮಕ ಬದಲಾವಣೆಗಳು ಉಂಟಾಗುತ್ತವೆ.

ಪುಷ್ಯ ನಕ್ಷತ್ರದ 2ನೇ ಪಾದ ಅಥವಾ ಹೆಸರು ಹೆ ಅಕ್ಷರದಿಂದ ಆರಂಭವಾಗುವವರ ಭವಿಷ್ಯ

ಸದಾಕಾಲ ಸ್ವಂತ ಕೆಲಸ ಕಾರ್ಯದಲ್ಲಿ ನಿರತರಾಗುವಿರಿ. ಅನಾವಶ್ಯಕವಾಗಿ ಬೇರೆಯವರ ವಿಚಾರದಲ್ಲಿ ಪಾಲ್ಗೊಳ್ಳುವುದಿಲ್ಲ. ನಿರಾಸಕ್ತಿಯಿಂದ ಕುಟುಂಬದ ಕೆಲಸ ಕಾರ್ಯಗಳನ್ನು ಆರಂಭಿಸುವಿರಿ. ನಿಮ್ಮ ವ್ಯಕ್ತಿತ್ವವನ್ನು ಸುಲಭವಾಗಿ ಅರ್ಥ ಮಾಡಿಕೊಳ್ಳಲು ಸಾಧ್ಯವಿಲ್ಲ. ಉತ್ತಮ ಕಾರ್ಯ ಯೋಜನೆಯಿಂದ ಯಶಸ್ಸನ್ನು ಗಳಿಸುವಿರಿ. ಬೇರೆಯವರಿಗೆ ಸಹಾಯ ಮಾಡಿದರು ಸ್ವಾರ್ಥದ ಬುದ್ಧಿ ಇರುತ್ತದೆ. ಕುಟುಂಬದಲ್ಲಿ ನಿಮಗೆ ಅನುಕೂಲಕರ ವಾತಾವರಣ ಉಂಟಾಗುತ್ತದೆ. ಉತ್ತಮ ಆದಾಯ ಇರುವ ಯೋಜನೆ ರೂಪಿಸುವಿರಿ. ಕುಟುಂಬದಲ್ಲಿ ನಿಮ್ಮದೇ ಆದ ತೀರ್ಮಾನಗಳನ್ನು ಎಲ್ಲರೂ ಒಪ್ಪಲೇಬೇಕಾಗುತ್ತದೆ. ಉಷ್ಣದ ತೊಂದರೆಯಿಂದ ಬಳಲುವಿರಿ. ಪಾರುಗಾರಿಕೆಯ ವ್ಯಾಪಾರದಿಂದ ಹೊರಬರುವಿರಿ. ಶಾಲಾ ಕಾಲೇಜುಗಳನ್ನು ಆರಂಭಿಸುವ ಇಂಗಿತ ವ್ಯಕ್ತಪಡಿಸುವಿರಿ. ಗೃಹಿಣಿಯರ ಸಹಯೋಗದಲ್ಲಿ ಗುಡಿ ಕೈಗಾರಿಕೆಯನ್ನು ಆರಂಭಿಸುವಿರಿ. ಮಕ್ಕಳ ಜೀವನವನ್ನು ರೂಪಿಸಲು ಪ್ರಯತ್ನಿಸುವಿರಿ.

ಪುಷ್ಯ ನಕ್ಷತ್ರದ 3ನೇ ಪಾದ ಅಥವಾ ಹೆಸರು ಹೊ ಅಕ್ಷರದಿಂದ ಆರಂಭವಾಗುವವರ ಭವಿಷ್ಯ

ಯಾವುದೇ ರೀತಿಯ ಸಮಸ್ಯೆಗಳಿದ್ದರೂ ಉಪಾಯದಿಂದ ಅವುಗಳನ್ನು ಬಗೆಹರಿಸುವಿರಿ. ಸ್ವಂತ ಕೆಲಸ ಕಾರ್ಯಗಳಲ್ಲಿ ಹಿನ್ನಡೆ ಉಂಟಾಗುವ ಸಾಧ್ಯತೆಗಳಿವೆ. ಕುಟುಂಬದ ಸದಸ್ಯರಿಂದ ನಿಮ್ಮ ಜೀವನದಲ್ಲಿ ವಿನೂತನ ಬದಲಾವಣೆಗಳು ಉಂಟಾಗುತ್ತದೆ. ಅವಿವಾಹಿತರಿಗೆ ವಿವಾಹ ಯೋಗವಿದೆ. ಮಕ್ಕಳೊಂದಿಗೆ ಸಣ್ಣ ಪ್ರಮಾಣದ ವ್ಯಾಪಾರವನ್ನು ಆರಂಭಿಸುವಿರಿ. ಬಹುದಿನದಿಂದ ಕಾಡುತ್ತಿದ್ದ ಆರೋಗ್ಯದ ಸಮಸ್ಯೆಯು ದೂರವಾಗುತ್ತದೆ. ತಮ್ಮ ಕಾರ್ಯ ಸಿದ್ದಿಗಾಗಿ ಏಕಾಂಗಿಯಾಗಿ ಯೋಜನೆಯನ್ನು ರೂಪಿಸುವಿರಿ. ಎಲ್ಲರ ಜೊತೆಯಲ್ಲಿ ಪ್ರೀತಿ ವಿಶ್ವಾಸದಿಂದ ಬಾಳುವಿರಿ. ವಿರೋಧಿಗಳನ್ನು ಸಹ ವಿಶ್ವಾಸದಿಂದ ಕಾಣುವಿರಿ. ಆಯ್ದ ವ್ಯಕ್ತಿಗಳ ಜೊತೆ ಸ್ನೇಹವನ್ನು ಬೆಳೆಸುವಿರಿ. ಪಾಲುಗಾರಿಕೆಯ ವ್ಯಾಪಾರವಿದ್ದಲ್ಲಿ ಹಣದ ಕೊರತೆ ಕಡಿಮೆಯಾಗುತ್ತದೆ. ಬೇರೆಯವರಿಗೆ ಆದರ್ಶಮಯ ವ್ಯಕ್ತಿಯಾಗಿ ಬಾಳುವಿರಿ. ಕಷ್ಟದ ಸಂದರ್ಭದಲ್ಲೂ ಬೇರೆಯವರಿಂದ ಹಣದ ಸಹಾಯ ಬಯಸುವುದಿಲ್ಲ.

ಪುಷ್ಯ ನಕ್ಷತ್ರದ 4ನೇ ಪಾದ ಅಥವಾ ಹೆಸರು ಡ ಅಕ್ಷರದಿಂದ ಆರಂಭವಾಗುವವರ ಭವಿಷ್ಯ

ಕಷ್ಟಪಟ್ಟು ದುಡಿದ ಹಣವನ್ನು ಬೇರೆಯವರ ಒಳಿತಿಗಾಗಿ ಖರ್ಚು ಮಾಡುವಿರಿ. ದಾನ ಧರ್ಮದಲ್ಲಿ ವಿಶೇಷ ಆಸಕ್ತಿಯನ್ನು ತೋರುವಿರಿ. ತಂದೆಯವರ ಆರೋಗ್ಯದಲ್ಲಿ ತೊಂದರೆ ಇರುತ್ತದೆ. ನಿಮ್ಮ ವಿಶಾಲವಾದ ಮನಸ್ಸನ್ನು ಎಲ್ಲರೂ ಗೌರವಿಸುತ್ತಾರೆ. ಹೆಚ್ಚಿನ ಪರಿಶ್ರಮದಿಂದ ಕುಟುಂಬವನ್ನು ಸಂಕಷ್ಟ ಒಂದರಿಂದ ಪಾರು ಮಾಡುವಿರಿ. ನಿಮ್ಮಲ್ಲಿ ಆದರ್ಶಮಯ ಗುಣ ಕಂಡು ಬರುತ್ತವೆ. ಸಂದರ್ಭಕ್ಕೆ ಅನುಗುಣವಾಗಿ ಮಾತನಾಡುವ ಕಾರಣ ವಾದ ವಿವಾದಗಳು ಇರುವುದಿಲ್ಲ. ಮಕ್ಕಳ ಜೀವನದಲ್ಲಿ ಒಳ್ಳೆಯ ಘಟನೆಗಳು ಸಂಭವಿಸುತ್ತದೆ. ಕೋಪವಿದ್ದರೂ ದುಡುಕುತನದಿಂದ ಮಾತನಾಡುವುದಿಲ್ಲ. ನೋವಿನ ವಿಚಾರವನ್ನು ಮನದಲ್ಲಿ ಇರಿಸಿಕೊಂಡು ಸಂತೋಷವನ್ನು ಎಲ್ಲರಲ್ಲಿ ಹಂಚಿಕೊಳ್ಳುವಿರಿ. ಅವಿರತ ದುಡಿಮೆಯ ಫಲವಾಗಿ ವಿಶ್ರಾಂತಿ ಇರುವುದಿಲ್ಲ. ತಲೆಯ ನೋವಿನಂತಹ ಸಾಮಾನ್ಯ ಸಮಸ್ಯೆಗಳು ನಿಮ್ಮನ್ನು ಕಾಡುತ್ತದೆ. ಆದರೆ ಕ್ರಮೇಣವಾಗಿ ಕುಟುಂಬದಲ್ಲಿ ಶಾಂತಿ ನೆಮ್ಮದಿ ನೆಲೆಸುತ್ತದೆ.

ಬರಹ: ಎಚ್‌. ಸತೀಶ್, ಜ್ಯೋತಿಷಿ.

ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ "ಹಿಂದೂಸ್ತಾನ್ ಟೈಮ್ಸ್ ಕನ್ನಡ" ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ.

Raghavendra M Y

TwittereMail
ರಾಘವೇಂದ್ರ ಎಂ.ವೈ: 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದಲ್ಲಿ ಸೀನಿಯರ್ ಕಂಟೆಂಟ್ ಪ್ರೊಡ್ಯೂಸರ್. ರಾಶಿ ಭವಿಷ್ಯ (ಧರ್ಮ) ವಿಭಾಗದಲ್ಲಿ ಕಾರ್ಯನಿರ್ವಹಣೆ. ಪ್ರಜಾವಾಣಿ, ಉದಯ ನ್ಯೂಸ್, ದಿಗ್ವಿಜಯ ನ್ಯೂಸ್, ಫಸ್ಟ್ ನ್ಯೂಸ್, ಡಿಡಿ ಚಂದನ ನ್ಯೂಸ್, ಈ-ಟಿವಿ ಭಾರತದಲ್ಲಿ ಬುಲೆಟಿನ್ ಪ್ರೊಡ್ಯೂಸರ್ ಸೇರಿ ವಿವಿಧ ವಿಭಾಗಗಳಲ್ಲಿ ಒಟ್ಟು 12 ವರ್ಷ ಅನುಭವ. ಪುಸ್ತಕ, ಪತ್ರಿಕೆ ಓದುವುದು ಇಷ್ಟ. ವಾಣಿಜ್ಯ, ಕ್ರಿಕೆಟ್, ಗ್ರಾಮೀಣ ವಿದ್ಯಮಾನಗಳ ಬಗ್ಗೆ ಇಷ್ಟಪಟ್ಟು ಬರೆಯುತ್ತಾರೆ. ಕೋಲಾರ ಜಿಲ್ಲೆಯ ಮಾಲೂರು ತಾಲೂಕಿನ ಮಿರುಪನಹಳ್ಳಿ ಇವರ ಸ್ವಂತ ಊರು. ಸದ್ಯಕ್ಕೆ ಬೆಂಗಳೂರು ನಿವಾಸಿ.
Whats_app_banner
ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.