ಪುನರ್ವಸು ನಕ್ಷತ್ರ ವರ್ಷ ಭವಿಷ್ಯ 2025; ಕುಟುಂಬದ ಶ್ರೇಯಸ್ಸಿಗಾಗಿ ಸದಾ ಶ್ರಮಿಸುತ್ತೀರಿ, ದಾಂಪತ್ಯ ಜೀವನದಲ್ಲಿ ಸಂತೋಷ ಇರುತ್ತೆ
Punarvasu Nakshatra Bhavishya: ಪುನರ್ವಸು ನಕ್ಷತ್ರದವರ ವರ್ಷ ಭವಿಷ್ಯ 2025. ಕುಟುಂಬದ ಶ್ರೇಯಸ್ಸಿಗಾಗಿ ಸದಾ ಶ್ರಮಿಸುತ್ತೀರಿ, ದಾಂಪತ್ಯ ಜೀವನದಲ್ಲಿ ಸಂತೋಷ ಇರುತ್ತೆ. (ಬರಹ: ಎಚ್.ಸತೀಶ್, ಜ್ಯೋತಿಷಿ)

ಪುನರ್ವಸು ನಕ್ಷತ್ರದ ಯುಗಾದಿ ವರ್ಷ ಭವಿಷ್ಯ: ಪಂಚಾಂಗದ ಪ್ರಕಾರ ಕೆಲವೇ ದಿನಗಳಲ್ಲಿ ಹಳೆಯ ವರ್ಷ ಮುಗಿದು ಹೊಸ ವರ್ಷಕ್ಕೆ ಕಾಲಿಡುತ್ತೇವೆ. ಯುಗಾದಿ ಹಬ್ಬವು ಹೊಸ ವರ್ಷದ ಮೊದಲ ದಿನ. ಈ ಹೊಸ ವರ್ಷದಲ್ಲಿ ಸಂಕಷ್ಟಗಳು ಕಳೆದು ಸುಖ, ಶಾಂತಿ, ನೆಮ್ಮದಿ, ಉತ್ತಮ ಆರೋಗ್ಯ, ಹೊಸ ಅವಕಾಶ, ಸಂಪತ್ತು ಸಮೃದ್ಧಿಯನ್ನು ನಿರೀಕ್ಷಿಸುತ್ತ ಆಶಾವಾದಿಗಳಾಗಿ ಬದುಕುವುದು ಸಾಮಾನ್ಯ. ಬಹುತೇಕ ಸಂದರ್ಭದಲ್ಲಿ ಜನರು ತಮ್ಮ ರಾಶಿಗೆ ಅನುಗುಣವಾಗಿ ವರ್ಷ ಭವಿಷ್ಯವನ್ನು ಕಾತರದಿಂದ ವೀಕ್ಷಿಸುತ್ತಾರೆ. ಇನ್ನೂ ನಿಖರವಾಗಿ ಬೇಕು ಎಂದುಕೊಳ್ಳುವವರು ನಕ್ಷತ್ರವಾರು ವರ್ಷ ಭವಿಷ್ಯ ನೋಡಿ ಕೊಂಚ ಸಮಾಧಾನ ಮಾಡಿಕೊಳ್ಳುತ್ತಾರೆ. ಅಂತಹ ಓದುಗರಿಗಾಗಿ 27 ನಕ್ಷತ್ರಗಳ ವರ್ಷ ಭವಿಷ್ಯವನ್ನು ಸರಣಿ ಪ್ರಕಾರ ‘ಎಚ್‌ಟಿ ಕನ್ನಡ’ ಒದುಗಿಸುತ್ತಿದೆ. ನಕ್ಷತ್ರಗಳ ಪೈಕಿ ಏಳನೇಯದಾದ ಪುನರ್ವಸು ನಕ್ಷತ್ರದಲ್ಲಿ ಜನಿಸಿದವರ ಶ್ರೀ ವಿಶ್ವಾವಸುನಾಮ ಸಂವತ್ಸರದ ವರ್ಷ ಭವಿಷ್ಯ ಇಲ್ಲಿದೆ.
ಪುನರ್ವಸು ನಕ್ಷತ್ರದವರ ಹೆಸರು ಯಾವ ಅಕ್ಷರಗಳಿಂದ ಆರಂಭವಾಗುತ್ತೆ
ಪ್ರತಿಯೊಂದು ನಕ್ಷತ್ರವೂ ನಾಲ್ಕು ಪಾದಗಳನ್ನು ಹೊಂದಿರುತ್ತವೆ. ಪುನರ್ವಸು ನಕ್ಷತ್ರದ ಮೊದಲ 3 ಪಾದಗಳೂ ಮಿಥುನ ರಾಶಿಯಲ್ಲಿಯೂ, 4ನೇಯ ಪಾದವು ಕಟಕ ರಾಶಿಯಲ್ಲಿ ಇರುತ್ತದೆ. ಇದಲ್ಲದೆ ನಿಮ್ಮ ಹೆಸರು ಕೆ, ಕೊ, ಹ ಮತ್ತು ಹಿ ಅಕ್ಷರದಿಂದ ಆರಂಭವಾಗಿದ್ದಲ್ಲಿ ನಿಮ್ಮದು ಪುನರ್ವಸು ನಕ್ಷತ್ರವಾಗುತ್ತದೆ.
ಶ್ರೀ ವಿಶ್ವಾವಸು ಸಂವತ್ಸರದಲ್ಲಿ ಪುನರ್ವಸು ನಕ್ಷತ್ರದವರ ಭವಿಷ್ಯ
ಎಲ್ಲರನ್ನೂ ಸಮಾನ ದೃಷ್ಠಿಯಿಂದ ಕಾಣುವಿರಿ. ಕುಟುಂಬದ ಶ್ರೇಯಸ್ಸಿಗಾಗಿ ಸದಾ ಶ್ರಮಿಸುವಿರಿ. ಮಾಡುವ ಕೆಲಸ ಕಾರ್ಯದಲ್ಲಿ ತೃಪ್ತಿ ದೊರೆಯದ ವೇಳೆಯಲ್ಲಿ ಮತ್ತೊಮ್ಮೆ ಪ್ರಯತ್ನಿಸುವಿರಿ. ಯಾವುದೇ ಕೆಲಸವನ್ನು ಒಂದೇ ಬಾರಿ ಪೂರ್ಣಗೊಳಿಸುವುದು ನಿಮಗೆ ಸಾಧ್ಯವಾಗದ ವಿಚಾರ. ನಿಮ್ಮ ಯೋಚನಾಶಕ್ತಿ ಉನ್ನತ ಮಟ್ಟದಲ್ಲಿರುತ್ತದೆ. ಸ್ವಂತ ಕೆಲಸ ಕಾರ್ಯಗಳಿಗೆ ಬೇರೆಯವರ ಸಹಾಯ ದೊರೆಯುವುದಿಲ್ಲ. ಆರೋಗ್ಯದಲ್ಲಿ ತೊಂದರೆ ಕಂಡುಬರದು. ಉದ್ಯೋಗದಲ್ಲಿ ನಿಧಾನಗತಿಯ ಪ್ರಗತಿ ಕಂಡುಬರುತ್ತದೆ. ಕುಟುಂಬದಲ್ಲಿನ ಬದಲಾವಣೆಗಳಿಗೆ ಹೊಂದಿಕೊಂಡು ಬಾಳಬೇಕಾದ ಪರಿಸ್ಥಿತಿ ಇರುತ್ತದೆ. ಹಣಕಾಸಿನ ವಿಚಾರದಲ್ಲಿ ನಿಮ್ಮ ತೀರ್ಮಾನವೇ ಮುಖ್ಯವಾಗುತ್ತದೆ. ಖರ್ಚು ವೆಚ್ಚಗಳನ್ನು ನಿಯಂತ್ರಿಸದೆ ಹೋದಲ್ಲಿ ಹಣದ ಕೊರತೆ ನಿಮ್ಮನ್ನು ಕಾಡುತ್ತದೆ. ವಿದ್ಯಾರ್ಥಿಗಳು ತಮ್ಮ ಆಯ್ಕೆಯಲ್ಲಿ ವಿಫಲರಾಗುತ್ತಾರೆ. ಅಧಿಕಾರಿಗಳು ನಿಮ್ಮ ವಿಚಾರದಲ್ಲಿ ತಪ್ಪು ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾರೆ. ಆದ್ದರಿಂದ ಮೌನ ತೊರೆದು ನಿಮ್ಮ ಅವಶ್ಯಕತೆಗಳ ಬಗ್ಗೆ ಮಾತನಾಡುವುದು ಒಳ್ಳೆಯದು. ತಾನಾಗಿಯೆ ದೊರೆಯುವ ಅವಶಾಕಗಳನ್ನು ನಿಮ್ಮದಾಗಿಸಿಕೊಳ್ಳುವಲ್ಲಿ ಸಫಲರಾಗುವಿರಿ.
ಪುನರ್ವಸು ನಕ್ಷತ್ರದ 1ನೆ ಪಾದ ಅಥವಾ ಹೆಸರು ಕೆ ಅಕ್ಷರದಿಂದ ಆರಂಭವಾಗಿರುವವರ ಭವಿಷ್ಯ
ಅನೇಕ ವಿಚಾರದಲ್ಲಿ ಪೂರ್ಣ ಪಾಂಡಿತ್ಯ ಗಳಿಸುವಿರಿ. ನಿಮ್ಮಲ್ಲಿನ ಭಾಷಾಜ್ಞಾನಕ್ಕೆ ಸೂಕ್ತ ಗೌರವ ದೊರೆಯುತ್ತದೆ. ಸಸ್ಯ ಸಮೃದ್ಧಿಯ ಬಗ್ಗೆ ವಿಶೇಷವಾದ ಅನುಭವ ಇರುತ್ತದೆ. ವೈದ್ಯಕೀಯ ವಿಜ್ಞಾನದಲ್ಲಿ ಅಭಿರುಚಿ ಮೂಡುತ್ತದೆ. ಧಾರ್ಮಿಕ ಮತ್ತು ಸಂಪ್ರದಾಯಗಳಲ್ಲಿ ಶ್ರದ್ಧೆ ಬೆಳೆಯಲಿದೆ. ನಿಮ್ಮ ಜೀವನ ನಿರ್ವಹಣೆಯ ರೀತಿಯನ್ನು ಎಲ್ಲರೂ ಮೆಚ್ಚುತ್ತಾರೆ. ಕೆಲವೊಮ್ಮೆ ಜೀವನದಲ್ಲಿ ಕಷ್ಟ ಕಾರ್ಪಣ್ಯಗಳು ಎದುರಾದರೂ ಬಹುಕಾಲ ಉಳಿಯುವುದಿಲ್ಲ. ಸೋಲನ್ನು ಗೆಲುವನ್ನಾಗಿ ಪರಿವರ್ತಿಸುವ ಯೋಗ ಮತ್ತು ಬುದ್ಧಿಶಕ್ತಿ ನಿಮ್ಮಲ್ಲಿರುತ್ತದೆ. ಕೌಟುಂಬಿಕ ಜೀವನದಲ್ಲಿ ಶಾಂತಿ ನೆಮ್ಮದಿಯ ವಾತಾವರಣ ನೆಲೆಸಿರುತ್ತದೆ. ಉತ್ತಮ ಆದಾಯ ನಿಮ್ಮದಾಗುತ್ತದೆ. ದೃಢವಾದ ಮನಸ್ಸು ಇರುವುದಿಲ್ಲ. ಪ್ರವಾಸಕ್ಕೆ ತೆರಳಬೇಕೆಂಬ ಆಸೆ ಇದ್ದರೂ ಸಾಧ್ಯವಾಗುವುದಿಲ್ಲ. ಆತ್ಮವಿಶ್ವಾಸದಿಂದ ಬೇರೆಯವರ ಕೆಲಸ ಕಾರ್ಯಗಳಲ್ಲಿ ಮುಂದಾಳತ್ವ ವಹಿಸುವಿರಿ.
ಪುನರ್ವಸು ನಕ್ಷತ್ರದ 2ನೇ ಪಾದ ಅಥವಾ ಹೆಸರು ಕೊ ಅಕ್ಷರದಿಂದ ಆರಂಭವಾಗುವವರ ಭವಿಷ್ಯ
ಸುಲಭವಾಗಿ ಯಾರನ್ನೂ ನಂಬುವುದಿಲ್ಲ. ಅದರೆ ನಿಮ್ಮ ಮನಸ್ಸಿಗೆ ಹತ್ತಿರವಾದವರನ್ನು ದೂರಮಾಡುವುದಿಲ್ಲ. ನಿಮ್ಮ ಕೆಲಸ ಕಾರ್ಯಗಳು ಅಪೂರ್ಣಗೊಂಡರು ಆತ್ಮೀಯರ ಕೆಲಸಗಳಿಗೆ ಆಸರೆಯಾಗುವಿರಿ. ಸಂಶಯದ ಸ್ವಭಾವದಿಂದ ಮಾನಸಿಕ ಒತ್ತಡಕ್ಕೆ ಒಳಗಾಗುವಿರಿ. ದುಡುಕುತನದಿಂದ ಉದ್ಯೋಗದಲ್ಲಿ ಕೆಲವೊಂದು ಅವಕಾಶಗಳನ್ನು ಕಳೆದುಕೊಳ್ಳುವಿರಿ. ಸ್ತ್ರೀಯರು ಸೌಂದರ್ಯ ಪಾಲನೆಗೆ ಹೆಚ್ಚಿನ ಪ್ರಾಶಸ್ತ್ಯ ನೀಡುತ್ತಾರೆ. ದಂಪತಿ ನಡುವೆ ಪ್ರೀತಿ ವಿಶ್ವಾಸ ಅಚಲವಾಗಿರುತ್ತದೆ. ಸ್ವಂತ ವ್ಯಾಪಾರ ವ್ಯವಹಾರದಲ್ಲಿ ಉನ್ನತ ಮಟ್ಟ ತಲುಪುವಲ್ಲಿ ಯಶಸ್ವಿಯಾಗುವಿರಿ. ಹೆಚ್ಚಿನ ಆಸೆ ಮತ್ತು ಗುರಿಯಿಂದ ಉದ್ಯೋಗವನ್ನು ಬದಲಿಸುವಿರಿ. ನಿಮ್ಮಲ್ಲಿನ ಪ್ರತಿಭೆಯ ಅನಾವರಣಕ್ಕೆ ಸೂಕ್ತ ವೇದಿಕೆ ದೊರೆಯುತ್ತದೆ. ಹಣಕಸಿನ ವಿಚಾರದಲ್ಲಿ ಕ್ರಮೇಣವಾಗಿ ಪ್ರಗತಿ ಕಂಡುಬರುತ್ತದೆ. ಉತ್ತಮ ಆರೋಗ್ಯವನ್ನು ಕಾಪಾಡಿಕೊಳ್ಳುವಿರಿ.
ಪುನರ್ವಸು ನಕ್ಷತ್ರದ 3ನೇ ಪಾದ ಅಥವಾ ಹೆಸರು ಹ ಅಕ್ಷರದಿಂದ ಆರಂಭವಾಗುವವರ ಭವಿಷ್ಯ
ಉದ್ಯೋಗದಲ್ಲಿ ಸಂತೃಪ್ತಿ ಇರುವುದಿಲ್ಲ. ಒಂದೆರಡು ಉದ್ಯೋಗಗಳನ್ನು ಬದಲಿಸುವಿರಿ. ಒಂದೇ ರಿತಿಯ ಕೆಲಸ ಕಾರ್ಯಗಳನ್ನು ಒಪ್ಪುವುದಿಲ್ಲ. ಉದ್ಯೋಗದಲ್ಲಿ ನಿಧಾನಗತಿಯಲ್ಲಿ ಉನ್ನತ ಮಟ್ಟ ತಲುಪುವಿರಿ. ನಿಮ್ಮ ಮನಸ್ಸನ್ನು ಹತೋಟಿಯಲ್ಲಿ ಇರಿಸಲು ಸಾಧ್ಯವಾಗುವುದಿಲ್ಲ. ಸಹನೆಯ ಕೊರತೆ ಇರುತ್ತದೆ. ಆತುರದಿಂದ ನಿಮ್ಮ ಜವಾಬ್ದಾರಿಗಳನ್ನು ಪೂರೈಸಲು ಪ್ರಯತಿನಿಸುವಿರಿ. ಚುರುಕುತನಕ್ಕೆ ಸವಾಲೆನಿಸುವ ಕೆಲಸಗಳು ನಿಮ್ಮದಾಗುತ್ತದೆ. ವಯಸ್ಸಿನಲ್ಲಿ ಚಕ್ಕವರಾದರೂ ಕುಟುಂಬದ ಕೆಲಸದ ನಿರ್ವಹಣೆ ಮಾಡುವಿರಿ. ಸ್ವಂತ ಉದ್ಧಿಮೆ ಇದ್ದಲ್ಲಿ ಮಧ್ಯಮಗತಿಯ ಆದಾಯ ಇರುತ್ತದೆ. ಆರೋಗ್ಯದ ಬಗ್ಗೆ ಹೆಚ್ಚಿನ ಗಮನ ವಹಿಸಬೇಕು. ವಿದ್ಯಾರ್ಥಿಗಳ ಜೀವನದಲ್ಲಿ ಹೊಸ ಬದಲಾವಣೆಗಳು ಉಂಟಾಗಲಿವೆ. ಹಠದ ಸ್ವಭಾವದಿಂದ ಕ್ಲಿಷ್ಟಕರ ಸಂದರ್ಭದಿಂದ ಪಾರಾಗುವಿರಿ. ಆಧುನಿಕತೆಗೆ ಮನಸೊಲುವಿರಿ.
ಪುನರ್ವಸು ನಕ್ಷತ್ರದ 4ನೆ ಪಾದ ಅಥವಾ ಹೆಸರು ಹಿ ಅಕ್ಷರದಿಂದ ಆರಂಭವಾಗುವವರ ಭವಿಷ್ಯ
ಅನಾವಶ್ಯಕ ವಾದ ವಾದಗಳನ್ನು ಇಷ್ಟಪಡುವುದಿಲ್ಲ. ಸದಾಕಾಲ ಯಾವುದಾದರೊಂದು ಕೆಲಸ ಕಾರ್ಯದಲ್ಲಿ ಪಾಲ್ಗೊಳ್ಳುವಿರಿ. ಕಾರ್ಯ ನಿರ್ವಹಣೆಯ ನಿಮ್ಮ ನೈಪುಣ್ಯತೆಗೆ ಎಲ್ಲರ ಮೆಚ್ಚುಗೆ ದೊರೆಯುತ್ತದೆ. ಕಾರ್ಯವ್ಯಾಪ್ತಿಯನ್ನು ವಿಸ್ತರಿಸುವಲ್ಲಿ ಯಶಸ್ಸು ಕಾಣುವಿರಿ. ಸತತ ಪ್ರಯತ್ನವಿದ್ದರೂ ತ್ವರಿತಗತಿಯಲ್ಲಿ ಕೆಲಸ ಕಾರ್ಯಗಳನ್ನು ಪೂರ್ಣಗೊಳಿಸಲು ಸಾಧ್ಯವಾಗುವುದಿಲ್ಲ. ಪ್ರಯೋಜನವಿಲ್ಲದ ಮಾತುಕತೆಯಲ್ಲಿ ಭಾಗವಿಹಿಸುವುದಿಲ್ಲ. ವೈವಾಹಿಕ ಜೀವನದಲ್ಲಿ ಸುಖ ಸಂತೋಷದ ವಾತಾವರಣ ಇರುತ್ತದೆ. ಕುಟುಂಬದಲ್ಲಿ ಗಂಭೀರತೆ ಮನೆ ಮಾಡಿರುತ್ತದೆ. ನಿಮ್ಮ ಮನಸ್ಸನ್ನು ಅರ್ಥಮಾಡಿಕೊಳ್ಳಲು ಸಾಧ್ಯವಾಗುವುದಿಲ್ಲ. ವ್ಯಾಪಾರ ವ್ಯವಹಾರದ ವಿಚಾರದಲ್ಲಿ ಆತುರದ ನಿರ್ಧಾರ ತೆಗೆದುಕೊಳ್ಳುವಿರಿ. ಮುಂದಾಲೋಚನೆಯಿಂದ ಯೋಜನೆ ರೂಪಿಸುವಿರಿ. ಮನಸ್ಸಿಲ್ಲದೆ ಹೋದರು ಒಂದೇ ರೀತಿಯ ಕೆಲಸವನ್ನು ಮಾಡಬೇಕಾಗುತ್ತದೆ. ನಿಮ್ಮ ಮಾತಿನಲ್ಲಿ ನಿಷ್ಠುರತೆ ತುಂಬಿರುತ್ತದೆ. ಆದರೆ ಎಲ್ಲರನ್ನೂ ಒಂದೇ ಭಾವನೆಯಿಂದ ನೋಡುವಿರಿ.
ಬರಹ: ಎಚ್. ಸತೀಶ್, ಜ್ಯೋತಿಷಿ.
ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ "ಹಿಂದೂಸ್ತಾನ್ ಟೈಮ್ಸ್ ಕನ್ನಡ" ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ.

ವಿಭಾಗ