ಸ್ವಾತಿ ನಕ್ಷತ್ರ ವರ್ಷ ಭವಿಷ್ಯ 2025: ಉತ್ತಮ ಆರೋಗ್ಯ ಇರುತ್ತೆ, ಒಂದೇ ರೀತಿಯ ಕೆಲಸ ಬೇಸರ ಮೂಡಿಸಲಿದೆ
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  ಸ್ವಾತಿ ನಕ್ಷತ್ರ ವರ್ಷ ಭವಿಷ್ಯ 2025: ಉತ್ತಮ ಆರೋಗ್ಯ ಇರುತ್ತೆ, ಒಂದೇ ರೀತಿಯ ಕೆಲಸ ಬೇಸರ ಮೂಡಿಸಲಿದೆ

ಸ್ವಾತಿ ನಕ್ಷತ್ರ ವರ್ಷ ಭವಿಷ್ಯ 2025: ಉತ್ತಮ ಆರೋಗ್ಯ ಇರುತ್ತೆ, ಒಂದೇ ರೀತಿಯ ಕೆಲಸ ಬೇಸರ ಮೂಡಿಸಲಿದೆ

Swati Nakshatra Bhavishya: ಸ್ವಾತಿ ನಕ್ಷತ್ರದವರ ವರ್ಷ ಭವಿಷ್ಯ 2025. ಉತ್ತಮ ಆರೋಗ್ಯ ಇರುತ್ತೆ, ಒಂದೇ ರೀತಿಯ ಕೆಲಸ ಬೇಸರ ಮೂಡಿಸಲಿದೆ. (ಬರಹ: ಎಚ್‌.ಸತೀಶ್, ಜ್ಯೋತಿಷಿ)

ಶ್ರೀ ವಿಶ್ವಾವಸು ಸಂವತ್ಸರ ಸ್ವಾತಿ ನಕ್ಷತ್ರ ಭವಿಷ್ಯ
ಶ್ರೀ ವಿಶ್ವಾವಸು ಸಂವತ್ಸರ ಸ್ವಾತಿ ನಕ್ಷತ್ರ ಭವಿಷ್ಯ

ಸ್ವಾತಿ ನಕ್ಷತ್ರದ ಯುಗಾದಿ ವರ್ಷ ಭವಿಷ್ಯ: ಪಂಚಾಂಗದ ಪ್ರಕಾರ ಕೆಲವೇ ದಿನಗಳಲ್ಲಿ ಹಳೆಯ ವರ್ಷ ಮುಗಿದು ಹೊಸ ವರ್ಷಕ್ಕೆ ಕಾಲಿಡುತ್ತೇವೆ. ಯುಗಾದಿ ಹಬ್ಬವು ಹೊಸ ವರ್ಷದ ಮೊದಲ ದಿನ. ಈ ಹೊಸ ವರ್ಷದಲ್ಲಿ ಸಂಕಷ್ಟಗಳು ಕಳೆದು ಸುಖ, ಶಾಂತಿ, ನೆಮ್ಮದಿ, ಉತ್ತಮ ಆರೋಗ್ಯ, ಹೊಸ ಅವಕಾಶ, ಸಂಪತ್ತು ಸಮೃದ್ಧಿಯನ್ನು ನಿರೀಕ್ಷಿಸುತ್ತ ಆಶಾವಾದಿಗಳಾಗಿ ಬದುಕುವುದು ಸಾಮಾನ್ಯ. ಬಹುತೇಕ ಸಂದರ್ಭದಲ್ಲಿ ಜನರು ತಮ್ಮ ರಾಶಿಗೆ ಅನುಗುಣವಾಗಿ ವರ್ಷ ಭವಿಷ್ಯವನ್ನು ಕಾತರದಿಂದ ವೀಕ್ಷಿಸುತ್ತಾರೆ. ಇನ್ನೂ ನಿಖರವಾಗಿ ಬೇಕು ಎಂದುಕೊಳ್ಳುವವರು ನಕ್ಷತ್ರವಾರು ವರ್ಷ ಭವಿಷ್ಯ ನೋಡಿ ಕೊಂಚ ಸಮಾಧಾನ ಮಾಡಿಕೊಳ್ಳುತ್ತಾರೆ. ಅಂತಹ ಓದುಗರಿಗಾಗಿ 27 ನಕ್ಷತ್ರಗಳ ವರ್ಷ ಭವಿಷ್ಯವನ್ನು ಸರಣಿ ಪ್ರಕಾರ ‘ಎಚ್‌ಟಿ ಕನ್ನಡ’ ಒದುಗಿಸುತ್ತಿದೆ. ನಕ್ಷತ್ರಗಳ ಪೈಕಿ 15ನೇಯದಾದ ಸ್ವಾತಿ ನಕ್ಷತ್ರದಲ್ಲಿ ಜನಿಸಿದವರ ಶ್ರೀ ವಿಶ್ವಾವಸು ಸಂವತ್ಸರದ ವರ್ಷ ಭವಿಷ್ಯ ಇಲ್ಲಿದೆ.

ಸ್ವಾತಿ ನಕ್ಷತ್ರದವರ ಜೀವನ ಮತ್ತು ಹೆಸರು ಯಾವ ಅಕ್ಷರಗಳಿಂದ ಆರಂಭವಾಗುತ್ತೆ

ಪ್ರತಿಯೊಂದು ನಕ್ಷತ್ರವೂ ನಾಲ್ಕು ಪಾದಗಳನ್ನು ಹೊಂದಿರುತ್ತವೆ. ಸ್ವಾತಿ ನಕ್ಷತ್ರದ ಎಲ್ಲಾ 4 ಪಾದಗಳು ತುಲಾ ರಾಶಿಯಲ್ಲಿ ಬರುತ್ತವೆ. ಇದಲ್ಲದೆ ನಿಮ್ಮ ಹೆಸರು ರು, ರೆ, ರೊ ಮತ್ತು ತ ಅಕ್ಷರದಿಂದ ಆರಂಭವಾಗಿದ್ದಲ್ಲಿ ನಿಮ್ಮದು ಸ್ವಾತಿ ನಕ್ಷತ್ರವಾಗುತ್ತದೆ.

ಶ್ರೀ ವಿಶ್ವಾವಸು ಸಂವತ್ಸರದಲ್ಲಿ ಸ್ವಾತಿ ನಕ್ಷತ್ರದವರ ಭವಿಷ್ಯ

ಒಳ್ಳೆಯ ವಿಚಾರವನ್ನಾಗಲಿ ಅಥವಾ ಕೆಟ್ಟ ವಿಚಾರವನ್ನಾಗಲಿ ಸಮಾನ ದೃಷ್ಟಿಯಿಂದ ಸ್ವೀಕರಿಸುವಿರಿ. ಕೆಟ್ಟ ವಿಚಾರಗಳನ್ನು ಸರಿಪಡಿಸುವ ಹೊಣೆ ಹೊರುವಿರಿ. ನೈಜತೆ ಮತ್ತು ನಿಜಕ್ಕೆ ಆದ್ಯತೆ ನೀಡುವಿರಿ. ಮಾನಸಿಕ ಸಮತೋಲನದಿಂದ ಬಾಳುವಿರಿ. ಆಮೂಲಾಗ್ರವಾಗಿ ಪರಿಶೀಲಿಸದೆ ಯಾವುದೇ ವಿಚಾರವನ್ನು ಒಪ್ಪಿಕೊಳ್ಳುವುದಿಲ್ಲ. ಆತ್ಮೀಯರ ಸಲಹೆಯನ್ನು ಪಾಲಿಸಲು ಹಿಂಜರಿಯುವುದಿಲ್ಲ. ನಿಮ್ಮ ಮನಸ್ಸಿನ ವಿಚಾರಗಳನ್ನು ಬೇರೆಯವರಿಗೆ ತಿಳಿಸಲು ಹಿಂಜರಿಯುವಿರಿ. ಪರೋಪಕಾರದ ಗುಣ ನಿಮ್ಮಲ್ಲಿರುತ್ತದೆ. ಸಮಾಜದ ರೀತಿ ನೀತಿಗಳನ್ನು ಗೌರವಿಸುವಿರಿ. ಜೀವನದಲ್ಲಿ ಎದುರಾಗುವ ಯಾವುದೇ ಬದಲಾವಣೆಯನ್ನು ಸ್ವೀಕರಿಸುವ ಗುಣ ನಿಮ್ಮಲ್ಲಿರುತ್ತದೆ. ಕುಟುಂಬದವರ ವಿಶ್ವಾಸ ಮತ್ತು ನಂಬಿಕೆಗಳನ್ನು ಎಂದಿಗೂ ಕಳೆದುಕೊಳ್ಳುವುದಿಲ್ಲ. ವಯಸ್ಸಿನ ಮಿತಿ ಇಲ್ಲದೆ ಪ್ರತಿಯೊಬ್ಬರನ್ನು ಪ್ರೀತಿ ಮತ್ತು ಗೌರವದಿಂದ ಕಾಣುವಿರಿ. ದೊಡ್ಡ ಪ್ರಮಾಣದ ಅನುಕೂಲತೆಗಳನ್ನು ನಿರೀಕ್ಷಿಸುವಿರಿ.

ಸ್ವಾತಿ ನಕ್ಷತ್ರದ 1ನೇ ಪಾದ ಅಥವಾ ಹೆಸರು ರು ಅಕ್ಷರದಿಂದ ಆರಂಭವಾಗುವವರ ಭವಿಷ್ಯ

ಚಿಕ್ಕ ವಯಸ್ಸಿನಲ್ಲಿ ಮಕ್ಕಳ ಜೀವನದಲ್ಲಿ ನಿರೀಕ್ಷಿತವಾದ ಫಲಿತಾಂಶಗಳು ದೊರೆಯುವುದಿಲ್ಲ. ಇದರಿಂದಾಗಿ ತಂದೆ ತಾಯಿಯ ಮನಸ್ಸಿಗೆ ನೆಮ್ಮದಿ ಇರುವುದಿಲ್ಲ. ವಿದ್ಯಾಭ್ಯಾಸದಲ್ಲಿ ಸತತ ಪ್ರಯತ್ನದಿಂದ ಉನ್ನತಿ ಗಳಿಸಲು ಸಾಧ್ಯವಾಗುತ್ತದೆ. ಮಾಡುವ ಕೆಲಸ ಕಾರ್ಯಗಳೆಲ್ಲ ಸರಿಯಾದ ಹಾದಿಯಲ್ಲಿದೆ ಎಂಬ ಭಾವನೆ ಇರುತ್ತದೆ. ಅತಿಯಾದ ಆತ್ಮವಿಶ್ವಾಸದಿಂದ ತೊಂದರೆಯನ್ನು ಅನುಭವಿಸುವಿರಿ. ಜೀವನದಲ್ಲಿ ಶಾಂತಿ ನೆಮ್ಮದಿ ನೆಲೆಸಿರುತ್ತದೆ. ನ್ಯಾಯ ನೀತಿಯ ಪರವಾಗಿ ಕೆಲಸ ಮಾಡುವಿರಿ. ಕುಟುಂಬದಲ್ಲಿನ ವಿಚಾರಗಳನ್ನು ಯಾರೊಂದಿಗೂ ಹಂಚಿಕೊಳ್ಳುವುದಿಲ್ಲ. ಆದರೆ ಒಂದೇ ರೀತಿಯ ಕೆಲಸ ಕಾರ್ಯಗಳು ಬೇಸರ ನೀಡುತ್ತದೆ. ಒಮ್ಮೆ ತೆಗೆದುಕೊಂಡ ತೀರ್ಮಾನಗಳನ್ನು ಅನಗತ್ಯವಾಗಿ ಬದಲಿಸುವ ಕಾರಣ ಸಮಸ್ಯೆಗೆ ಸಿಲುಕುವಿರಿ. ಅಜೀರ್ಣದ ತೊಂದರೆ ನಿಮ್ಮನ್ನು ಬಹುವಾಗಿ ಕಾಡುತ್ತದೆ.

ಸ್ವಾತಿ ನಕ್ಷತ್ರದ 2ನೇ ಪಾದ ಅಥವಾ ಹೆಸರು ರೆ ಅಕ್ಷರದಿಂದ ಆರಂಭವಾಗುವವರ ಭವಿಷ್ಯ

ಹೊಸ ರೀತಿಯ ವಿಚಾರಗಳನ್ನು ಸುಲಭವಾಗಿ ಒಪ್ಪುವುದಿಲ್ಲ. ಪ್ರತಿಯೊಂದು ಕೆಲಸ ಕಾರ್ಯಗಳನ್ನು ವ್ಯವಸ್ಥಿತ ರೀತಿಯಲ್ಲಿ ಪೂರ್ಣಗೊಳಿಸುವಿರಿ. ಯಾವುದೇ ಕೆಲಸ ಕಾರ್ಯಗಳಾದರೂ ಹೆಚ್ಚಿನ ಪ್ರಯತ್ನವನ್ನು ಮಾಡುವುದಿಲ್ಲ. ಯಾವುದೇ ನಿರೀಕ್ಷೆ ಇಲ್ಲದೆ ದೊರೆಯುವ ಫಲಿತಾಂಶಗಳನ್ನು ಸಂತಸದಿಂದ ಸ್ವೀಕರಿಸುವಿರಿ. ಹಣದ ತೊಂದರೆಯು ಕಡಿಮೆಯಾಗುತ್ತದೆ. ಬೇರೆಯವರಿಗೆ ಹಣದ ಸಹಾಯ ಮಾಡಲು ಹಿಂಜರಿಯುವಿರಿ. ಹಣವನ್ನು ಉಳಿಸುವಲ್ಲಿ ಸಫಲರಾಗುವಿರಿ. ಸಂಗಾತಿಯ ಜೊತೆ ಅನಾವಶ್ಯಕವಾಗಿ ವಾದ ವಿವಾದದಲ್ಲಿ ತೊಡಗುವಿರಿ. ಆತ್ಮೀಯರು ತಾವಾಗಿಯೇ ನಿಮ್ಮ ಸಹಾಯಕ್ಕೆ ಬರುತ್ತಾರೆ. ಉದ್ಯೋಗವನ್ನು ಬದಲಿಸುವಿರಿ. ವಾಸ ಸ್ಥಳವನ್ನು ಬದಲಿಸಬೇಕಾದ ಅನಿವಾರ್ಯತೆ ಎದುರಾಗುತ್ತದೆ. ಸುಲಭವಾಗಿ ಬೇರೆಯವರ ಪ್ರಭಾವಕ್ಕೆ ಒಳಗಾಗುವಿರಿ. ಬೇರೆಯವರನ್ನು ಸುಲಭವಾಗಿ ನಂಬುವುದಿಲ್ಲ. ಯಾವುದೇ ಅಳುಕಿಲ್ಲದೆ ನಿಮ್ಮ ಕೆಲಸ ಕಾರ್ಯಗಳನ್ನು ಮುಂದುವರೆಸುವಿರಿ. ಉತ್ತಮ ಆರೋಗ್ಯ ಇರುತ್ತದೆ.

ಸ್ವಾತಿ ನಕ್ಷತ್ರದ 3ನೇ ಪಾದ ಅಥವಾ ಹೆಸರು ರೊ ಅಕ್ಷರದಿಂದ ಆರಂಭವಾಗುವವರ ಭವಿಷ್ಯ

ಹೊಸ ವಿಚಾರಗಳನ್ನು ತಿಳಿದುಕೊಳ್ಳಲು ಉತ್ಸುಕರಾಗುವಿರಿ. ಉದ್ಯೋಗದಲ್ಲಿ ದೊರೆಕಬೇಕಿದ್ದ ಪ್ರತಿಷ್ಠಿತ ಸ್ಥಾನವನ್ನು ಹೋರಾಟ ಮಾಡಿ ಗಳಿಸುವಿರಿ. ಕುಟುಂಬದ ವಿಷಯದಲ್ಲಿ ವಿಶೇಷವಾದಂತಹ ಆಸಕ್ತಿ ತೋರುವಿರಿ. ಮಕ್ಕಳ ವಿದ್ಯಾಭ್ಯಾಸದ ವಿಚಾರದಲ್ಲಿ ಗೊಂದಲಗಳು ಉಂಟಾಗುತ್ತದೆ. ದಾಂಪತ್ಯ ಜೀವನದಲ್ಲಿ ಶಾಂತಿ ನೆಮ್ಮದಿ ಇರುತ್ತದೆ. ದಂಪತಿ ನಡುವೆ ಉತ್ತಮ ಅನ್ಯೋನ್ಯತೆ ಕಂಡುಬರುತ್ತದೆ. ಮಾತಿನಲ್ಲಿನ ನಿಜಾಂಶವನ್ನು ಅರಿಯಲು ಸಾಧ್ಯವಾಗುವುದಿಲ್ಲ. ಮಧ್ಯ ವಯಸ್ಸಿನವರು ಹೊಸತನಕ್ಕೆ ಹೊಂದಿಕೊಂಡು ಬಾಳುತ್ತಾರೆ. ಉದ್ಯೋಗದಲ್ಲಿ ಯಾವುದೇ ತೊಂದರೆ ಕಂಡುಬರುವುದಿಲ್ಲ. ಪ್ರಯತ್ನಕ್ಕೆ ತಕ್ಕಂತಹ ಫಲಿತಾಂಶಗಳು ದೊರೆಯುವುದು ಅಪರೂಪ. ಒಮ್ಮೆ ತೆಗೆದುಕೊಂಡ ತೀರ್ಮಾನಗಳನ್ನು ಬದಲಾಯಿಸುವುದಿಲ್ಲ. ದೇಹದ ತೂಕವು ಹೆಚ್ಚುವ ಸಂಭವವಿದೆ. ಹಠದ ಸ್ವಭಾವದಿಂದ ಕೆಲವರ ಬೇಸರಕ್ಕೆ ಕಾರಣರಾಗುವಿರಿ.

ಸ್ವಾತಿ ನಕ್ಷತ್ರದ 4ನೆ ಪಾದ ಅಥವಾ ಹೆಸರು ತ ಅಕ್ಷರದಿಂದ ಆರಂಭವಾಗುವವರ ಭವಿಷ್ಯ

ಸೊಗಸಾಗ ಮಾತಿನಿಂದ ಎಲ್ಲರ ಗಮನ ಸೆಳೆಯುವಿರಿ. ಸ್ವಂತ ಕೆಲಸ ಕಾರ್ಯಗಳಲ್ಲಿ ಹೆಚ್ಚಿನ ಪರಿಶ್ರಮದಿಂದ ಮಾತ್ರ ಯಶಸ್ಸನ್ನು ಗಳಿಸಲು ಸಾಧ್ಯವಾಗುತ್ತದೆ. ಬೇರೆಯವರಿಗೆ ಬುದ್ಧಿವಾದ ಹೇಳುವಲ್ಲಿ ನಿಸ್ಸೀಮರು. ಸ್ವತಃ ಸರಳವಾದ ಕೆಲಸವನ್ನು ಸುಲಭವಾಗಿ ಮಾಡಲಾಗುವುದಿಲ್ಲ. ಬೇರೆಯವರ ಮಾತನ್ನು ಒಪ್ಪುವುದಿಲ್ಲ. ಸಣ್ಣಪುಟ್ಟ ಕೆಲಸ ಕಾರ್ಯಗಳಿಗೂ ಬೇರೆಯವರನ್ನು ಅವಲಂಬಿಸುವಿರಿ. ಉದ್ಯೋಗದಲ್ಲಿ ಸಹೋದ್ಯೋಗಿಗಳ ಜೊತೆ ಒರಟುತನದಿಂದ ವರ್ತಿಸುವಿರಿ. ಸ್ಥಿರವಾದ ಮನಸ್ಸಿರುವುದಿಲ್ಲ. ಕುಟುಂಬದ ವಿಚಾರದಲ್ಲಿ ಹೆಚ್ಚಿನ ಆಸಕ್ತಿ ತೋರುವುದಿಲ್ಲ. ಮಕ್ಕಳ ಜವಾಬ್ದಾರಿಯು ಬಾಳ ಸಂಗಾತಿಯ ಪಾಲಾಗುತ್ತದೆ. ಅನಾವಶ್ಯಕ ಯೋಚನೆ ಮಾಡುವ ಕಾರಣ ಮಾನಸಿಕ ಒತ್ತಡ ಹೆಚ್ಚುತ್ತದೆ. ಸಮಯಕ್ಕೆ ತಕ್ಕಂತೆ ವರ್ತಿಸುವ ಸ್ವಭಾವವನ್ನು ಬೆಳೆಸಿಕೊಳ್ಳುವಿರಿ. ದುಡುಕದೇ ಬಾಳುವುದು ಶ್ರೇಯಸ್ಕರ.

ಬರಹ: ಎಚ್‌. ಸತೀಶ್, ಜ್ಯೋತಿಷಿ.

ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ "ಹಿಂದೂಸ್ತಾನ್ ಟೈಮ್ಸ್ ಕನ್ನಡ" ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ.

Raghavendra M Y

TwittereMail
ರಾಘವೇಂದ್ರ ಎಂ.ವೈ: 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದಲ್ಲಿ ಸೀನಿಯರ್ ಕಂಟೆಂಟ್ ಪ್ರೊಡ್ಯೂಸರ್. ರಾಶಿ ಭವಿಷ್ಯ (ಧರ್ಮ) ವಿಭಾಗದಲ್ಲಿ ಕಾರ್ಯನಿರ್ವಹಣೆ. ಪ್ರಜಾವಾಣಿ, ಉದಯ ನ್ಯೂಸ್, ದಿಗ್ವಿಜಯ ನ್ಯೂಸ್, ಫಸ್ಟ್ ನ್ಯೂಸ್, ಡಿಡಿ ಚಂದನ ನ್ಯೂಸ್, ಈ-ಟಿವಿ ಭಾರತದಲ್ಲಿ ಬುಲೆಟಿನ್ ಪ್ರೊಡ್ಯೂಸರ್ ಸೇರಿ ವಿವಿಧ ವಿಭಾಗಗಳಲ್ಲಿ ಒಟ್ಟು 12 ವರ್ಷ ಅನುಭವ. ಪುಸ್ತಕ, ಪತ್ರಿಕೆ ಓದುವುದು ಇಷ್ಟ. ವಾಣಿಜ್ಯ, ಕ್ರಿಕೆಟ್, ಗ್ರಾಮೀಣ ವಿದ್ಯಮಾನಗಳ ಬಗ್ಗೆ ಇಷ್ಟಪಟ್ಟು ಬರೆಯುತ್ತಾರೆ. ಕೋಲಾರ ಜಿಲ್ಲೆಯ ಮಾಲೂರು ತಾಲೂಕಿನ ಮಿರುಪನಹಳ್ಳಿ ಇವರ ಸ್ವಂತ ಊರು. ಸದ್ಯಕ್ಕೆ ಬೆಂಗಳೂರು ನಿವಾಸಿ.
Whats_app_banner
ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.