ಉತ್ತರಾಷಾಢ ನಕ್ಷತ್ರ ವರ್ಷ ಭವಿಷ್ಯ 2025: ಅವಿವಾಹಿತರಿಗೆ ಮದುವೆಯಾಗುತ್ತೆ, ಉದ್ಯೋಗದಲ್ಲಿ ಹೆಚ್ಚಿನ ಜವಾಬ್ದಾರಿಗಳು ಇರಲಿವೆ
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  ಉತ್ತರಾಷಾಢ ನಕ್ಷತ್ರ ವರ್ಷ ಭವಿಷ್ಯ 2025: ಅವಿವಾಹಿತರಿಗೆ ಮದುವೆಯಾಗುತ್ತೆ, ಉದ್ಯೋಗದಲ್ಲಿ ಹೆಚ್ಚಿನ ಜವಾಬ್ದಾರಿಗಳು ಇರಲಿವೆ

ಉತ್ತರಾಷಾಢ ನಕ್ಷತ್ರ ವರ್ಷ ಭವಿಷ್ಯ 2025: ಅವಿವಾಹಿತರಿಗೆ ಮದುವೆಯಾಗುತ್ತೆ, ಉದ್ಯೋಗದಲ್ಲಿ ಹೆಚ್ಚಿನ ಜವಾಬ್ದಾರಿಗಳು ಇರಲಿವೆ

Uttarashada Nakshatra Bhavishya: ಉತ್ತರಾಷಾಢ ನಕ್ಷತ್ರದವರ ವರ್ಷ ಭವಿಷ್ಯ 2025. ಅವಿವಾಹಿತರಿಗೆ ಮದುವೆಯಾಗುತ್ತೆ, ಉದ್ಯೋಗದಲ್ಲಿ ಹೆಚ್ಚಿನ ಜವಾಬ್ದಾರಿಗಳು ಇರಲಿವೆ. (ಬರಹ: ಎಚ್‌.ಸತೀಶ್, ಜ್ಯೋತಿಷಿ)

ಶ್ರೀ ವಿಶ್ವಾವಸು ಸಂವತ್ಸರ ಉತ್ತರಾಷಾಢ ನಕ್ಷತ್ರ ಭವಿಷ್ಯ
ಶ್ರೀ ವಿಶ್ವಾವಸು ಸಂವತ್ಸರ ಉತ್ತರಾಷಾಢ ನಕ್ಷತ್ರ ಭವಿಷ್ಯ

ಉತ್ತರಾಷಾಢ ನಕ್ಷತ್ರದ ಯುಗಾದಿ ವರ್ಷ ಭವಿಷ್ಯ: ಪಂಚಾಂಗದ ಪ್ರಕಾರ ಕೆಲವೇ ದಿನಗಳಲ್ಲಿ ಹಳೆಯ ವರ್ಷ ಮುಗಿದು ಹೊಸ ವರ್ಷಕ್ಕೆ ಕಾಲಿಡುತ್ತೇವೆ. ಯುಗಾದಿ ಹಬ್ಬವು ಹೊಸ ವರ್ಷದ ಮೊದಲ ದಿನ. ಈ ಹೊಸ ವರ್ಷದಲ್ಲಿ ಸಂಕಷ್ಟಗಳು ಕಳೆದು ಸುಖ, ಶಾಂತಿ, ನೆಮ್ಮದಿ, ಉತ್ತಮ ಆರೋಗ್ಯ, ಹೊಸ ಅವಕಾಶ, ಸಂಪತ್ತು ಸಮೃದ್ಧಿಯನ್ನು ನಿರೀಕ್ಷಿಸುತ್ತ ಆಶಾವಾದಿಗಳಾಗಿ ಬದುಕುವುದು ಸಾಮಾನ್ಯ. ಬಹುತೇಕ ಸಂದರ್ಭದಲ್ಲಿ ಜನರು ತಮ್ಮ ರಾಶಿಗೆ ಅನುಗುಣವಾಗಿ ವರ್ಷ ಭವಿಷ್ಯವನ್ನು ಕಾತರದಿಂದ ವೀಕ್ಷಿಸುತ್ತಾರೆ. ಇನ್ನೂ ನಿಖರವಾಗಿ ಬೇಕು ಎಂದುಕೊಳ್ಳುವವರು ನಕ್ಷತ್ರವಾರು ವರ್ಷ ಭವಿಷ್ಯ ನೋಡಿ ಕೊಂಚ ಸಮಾಧಾನ ಮಾಡಿಕೊಳ್ಳುತ್ತಾರೆ. ಅಂತಹ ಓದುಗರಿಗಾಗಿ 27 ನಕ್ಷತ್ರಗಳ ವರ್ಷ ಭವಿಷ್ಯವನ್ನು ಸರಣಿ ಪ್ರಕಾರ ‘ಎಚ್‌ಟಿ ಕನ್ನಡ’ ಒದುಗಿಸುತ್ತಿದೆ. ನಕ್ಷತ್ರಗಳ ಪೈಕಿ 21ನೇಯದಾದ ಉತ್ತರಾಷಾಢ ನಕ್ಷತ್ರದಲ್ಲಿ ಜನಿಸಿದವರ ಶ್ರೀ ವಿಶ್ವಾವಸು ಸಂವತ್ಸರದ ವರ್ಷ ಭವಿಷ್ಯ ಇಲ್ಲಿದೆ.

ಉತ್ತರಾಷಾಢ ನಕ್ಷತ್ರದವರ ಜೀವನ ಮತ್ತು ಹೆಸರು ಯಾವ ಅಕ್ಷರಗಳಿಂದ ಆರಂಭವಾಗುತ್ತೆ

ಪ್ರತಿಯೊಂದು ನಕ್ಷತ್ರವೂ ನಾಲ್ಕು ಪಾದಗಳನ್ನು ಹೊಂದಿರುತ್ತವೆ. ಉತ್ತರಾಷಾಡ ನಕ್ಷತ್ರದ 1ನೆಯ ಪಾದವು ಧನುರ್ ರಾಶಿಯಲ್ಲಿ ಬರುತ್ತದೆ. 2, 3 ಮತ್ತು 4ನೆಯ ಪಾದಗಳು ಮಕರ ರಾಶಿಯಲ್ಲಿ ಬರುತ್ತವೆ. ಇದಲ್ಲದೆ ನಿಮ್ಮ ಹೆಸರು ಬೆ, ಬೊ,ಜ ಮತ್ತು ಜಿ ಅಕ್ಷರದಿಂದ ಆರಂಭವಾಗಿದ್ದಲ್ಲಿ ನಿಮ್ಮದು ಉತ್ತರಾಷಾಡ ನಕ್ಷತ್ರವಾಗುತ್ತದೆ.

ಶ್ರೀ ವಿಶ್ವಾವಸು ಸಂವತ್ಸರದಲ್ಲಿ ಉತ್ತರಾಷಾಢ ನಕ್ಷತ್ರದವರ ಭವಿಷ್ಯ

ನಿಮ್ಮನ್ನು ನೋಡಿದರೆ ಆಧುನಿಕತೆಗೆ ಸೋತಂತೆ ಕಂಡುಬರುತ್ತದೆ. ಆದರೆ ಸದಾಕಾಲ ಸಂಪ್ರದಾಯಬದ್ಧ ಜೀವನವನ್ನು ನಡೆಸಲು ಇಷ್ಟಪಡುವಿರಿ. ಪುರಾತನ ಪದ್ಧತಿಗಳಲ್ಲಿ ಹೆಚ್ಚಿನ ಅಧ್ಯಯನ ಮಾಡುವ ಆಸಕ್ತಿ ತೋರುವಿರಿ. ಬೇರೆಯವರಿಂದ ಸಣ್ಣಪುಟ್ಟ ತಪ್ಪಾದರು ಬೇಗನೆ ಕೋಪ ಬರುತ್ತದೆ. ಆದರೆ ಬಹುಕಾಲ ಅದು ನಿಲ್ಲುವುದಿಲ್ಲ. ಕಾನೂನು ಮತ್ತು ಶಿಸ್ತುಬದ್ಧ ವ್ಯವಸ್ಥೆಯನ್ನು ಗೌರವಿಸುವಿರಿ. ನಿಮ್ಮಿಂದ ಸ್ಫೂರ್ತಿಗೊಂಡ ಹಲವರು ತಮ್ಮ ಜೀವನದಲ್ಲಿ ಉನ್ನತ ಮಟ್ಟ ತಲುಪುತ್ತಾರೆ. ಕೇವಲ ಕುಟುಂಬದ ಹಿರಿಯರಿಗೆ ಮಾತ್ರವಲ್ಲದೆ, ಬೇರೆಯವರನ್ನು ಸಹ ಗೌರವದಿಂದ ಕಾಣುವಿರಿ. ತಪ್ಪು ಮಾಡಿದವರನ್ನು ಸರಿದಾರಿಗೆ ತರುವ ಪ್ರಯತ್ನ ಮಾಡುವಿರಿ. ಮಕ್ಕಳಿಗೆ ಶಿಕ್ಷಣ ನೀಡುವ ಆಸೆ ನಿಮಗಿರುತ್ತೆ. ಮನೆಯ ಮಕ್ಕಳು ತಪ್ಪು ಮಾಡಿದಾಗ ಅವರನ್ನು ಸರಿದಾರಿಗೆ ತರುವ ಕೆಲಸವನ್ನು ಮಾಡುವಿರಿ. ಉದಾರವಾದ ಮನಸ್ಸಿರುತ್ತದೆ. ಬೇರೆಯವರ ಮನಸ್ಸನ್ನು ಅರ್ಥಮಾಡಿಕೊಳ್ಳದೆ ಹಣ ಸಹಾಯ ಮಾಡುವುದಿಲ್ಲ. ಉತ್ತಮ ಆರೋಗ್ಯವನ್ನು ಕಾಪಾಡಿಕೊಳ್ಳಲು ಪ್ರಾಚೀನ ಕಾಲದ ಯೋಗ, ಪ್ರಾಣಾಯಾಮ ಮುಂತಾದ ಪದ್ಧತಿಗಳನ್ನು ಅನುಸರಿಸುವಿರಿ,

ಉತ್ತಾರಾಷಾಢ ನಕ್ಷತ್ರದ 1ನೇ ಪಾದ ಅಥವಾ ಹೆಸರು ಬೆ ಅಕ್ಷರದಿಂದ ಆರಂಭವಾಗುವವರ ಭವಿಷ್ಯ

ಯಾವುದೇ ಕ್ಲಿಷ್ಣಕರ ಸಂದರ್ಭದಲ್ಲಿ ಒಮ್ಮೆ ಆಡುವ ಮಾತನ್ನು ಬದಲಿಸುವುದಿಲ್ಲ. ನಿಮ್ಮ ಆತ್ಮವಿಶ್ವಾಸವು ಹೆಚ್ಚಿನದಾಗಿರುತ್ತದೆ. ಮನಸ್ಸಿನಲ್ಲಿರುವ ಭಾವನೆಗಳಿಂದ ಯಾರೊಬ್ಬರಿಗೂ ಬೇಸರ ಉಂಟಾಗುವುದಿಲ್ಲ. ಕೆಲಸ ಕಾರ್ಯಗಳನ್ನು ಸಹ ಪೂರ್ವ ತಯಾರಿ ಇಲ್ಲದೆ ಆರಂಭಿಸುವುದಿಲ್ಲ. ಇದರಿಂದ ನಿಮ್ಮ ಜೀವನದಲ್ಲಿ ಗೆಲುವಿನ ಸರಮಾಲೆಯೇ ಇರುತ್ತದೆ. ಸೋಲಿನ ಸಂದರ್ಭದಲ್ಲಿಯೂ ಬೇರೆಯವರನ್ನು ಅವಲಂಬಿಸುವುದಿಲ್ಲ. ತಮ್ಮ ತಪ್ಪನ್ನು ಸರಿಪಡಿಸಿಕೊಂಡು ಗೆಲುವು ಸಾಧಿಸುವ ಹಠವಿರುತ್ತದೆ. ಹಣಕಾಸಿನ ತೊಂದರೆ ಇರುವುದಿಲ್ಲ. ಗೌರವ ಗಂಭೀರತೆಯಿಂದ ಜೀವನ ನಡೆಸುವಿರಿ. ಸಣ್ಣ ಪುಟ್ಟ ಲೋಪಗಳಿಗೂ ಬೇಸರಗೊಳ್ಳುವ ಗುಣವಿರುತ್ತದೆ. ಉದ್ಯೋಗದಲ್ಲಿ ಎದುರಾಗುವ ಸಮಸ್ಯೆಗಳು ಕೇವಲ ಕ್ಷಣಿಕ. ಇದಕ್ಕೆ ಕಾರಣ ನಿಮ್ಮಲ್ಲಿರುವ ಪ್ರೀತಿ ಮತ್ತು ನಯವಾದ ಮಾತುಗಾರಿಕೆ. ನಾಯಕರಾಗಲು ಇಷ್ಟಪಡದೆ ಹೋದರು ಸಾಮಾಜಿಕ ಜವಾಬ್ದಾರಿಗಳಿಂದ ದೂರ ಉಳಿಯುವುದಿಲ್ಲ.

ಉತ್ತರಾಷಾಢ ನಕ್ಷತ್ರದ 2ನೇ ಪಾದ ಅಥವಾ ಹೆಸರು ಬೊ ಅಕ್ಷರದಿಂದ ಆರಂಭವಾಗುವವರ ಭವಿಷ್ಯ

ನಿಮ್ಮದಲ್ಲದ ಬೇರೆಯವರ ವಿಚಾರಗಳಲ್ಲಿ ಯಾವುದೇ ಆಸಕ್ತಿ ತೋರುವುದಿಲ್ಲ. ಸದಾಕಾಲ ನಿಮ್ಮ ಸ್ವಂತ ಕೆಲಸ ಕಾರ್ಯಗಳ ಬಗ್ಗೆ ಯೋಚಿಸುವಿರಿ. ಸಮಯದ ಪರಿವೇ ಇಲ್ಲದೆ ನುಡಿಯುವ ಕಾರಣ ಎಲ್ಲರ ಮೆಚ್ಚುಗೆ ದೊರೆಯುತ್ತದೆ. ಉದ್ಯೋಗದಲ್ಲಿನ ಹೆಚ್ಚಿನ ಜವಾಬ್ದಾರಿಗಳು ಆರಂಭದಿಂದಲೇ ನಿಮ್ಮದಾಗುತ್ತದೆ. ಆಡುವ ಮಾತುಗಳಲ್ಲಿ ನಿಷ್ಟುರತೆ ತುಂಬಿರುತ್ತದೆ. ಇದರಿಂದ ವಿರೋಧಿಗಳು ನಿಮ್ಮಿಂದ ದೂರ ಉಳಿಯುತ್ತಾರೆ. ನಾಯಕತ್ವದ ಗುಣವಿದ್ದರೂ ನಾಯಕರಾಗುವುದಿಲ್ಲ. ಆದರೆ ನಾಯಕರಾದವರಿಗೆ ಪೂರ್ಣಮಟ್ಟದ ಸಹಕಾರ ನೀಡುವಿರಿ. ಸ್ವಂತ ವ್ಯಾಪಾರ ವ್ಯವಹಾರಗಳಲ್ಲಿ ಆದಾಯಕ್ಕೆ ಒಂದು ಮಿತಿಯನ್ನು ರೂಪಿಸಿಕೊಳ್ಳುವಿರಿ. ರಾಜಕೀಯದಲ್ಲಿ ಇರುವವರ ಸ್ನೇಹ ಸಂಬಂಧವಿದ್ದರೂ ನಿಮ್ಮ ಸ್ವಂತ ಕೆಲಸಗಳಿಗೆ ಬಳಸಿಕೊಳ್ಳುವುದಿಲ್ಲ. ಬಾಳಸಂಗಾತಿಯ ಜೊತೆಯಲ್ಲಿ ಒಳ್ಳೆಯ ಸ್ನೇಹಿತರಂತೆ ವರ್ತಿಸುವಿರಿ. ನಿಮ್ಮ ಪ್ರಭಾವದಿಂದ ಯಾವುದೇ ಕೆಲಸವನ್ನು ಮಾಡಿಸಿಕೊಳ್ಳುವುದಿಲ್ಲ. ಕಷ್ಟವಿಲ್ಲದೆ ದೊರೆವ ಅವಕಾಶಗಳನ್ನು ಒಪ್ಪಿಕೊಳ್ಳುವುದಿಲ್ಲ.

ಉತ್ತಾರಾಷಾಢ ನಕ್ಷತ್ರದ 3ನೇ ಪಾದ ಅಥವಾ ಹೆಸರು ಜ ಅಕ್ಷರದಿಂದ ಆರಂಭವಾಗುವವರ ಭವಿಷ್ಯ

ನಿಮ್ಮಲ್ಲಿ ಆತ್ಮವಿಶ್ವಾಸದ ಕೊರತೆ ಕಂಡು ಬರುತ್ತದೆ. ಸಣ್ಣಪುಟ್ಟ ಕೆಲಸ ಕಾರ್ಯಗಳಿಗೂ ಬೇರೆಯವರನ್ನು ಅವಲಂಬಿಸುವಿರಿ. ದೊರೆಯುವ ಅವಕಾಶಗಳನ್ನು ಸೂಕ್ತವಾಗಿ ಬಳಸಿಕೊಳ್ಳಲು ವಿಫಲರಾಗುವಿರಿ. ನಿಮ್ಮ ಸ್ನೇಹಿತರ ಬಳಗವು ದೊಡ್ಡದಾಗಿರುತ್ತದೆ. ಈ ಕಾರಣದಿಂದಾಗಿ ನಿಮ್ಮ ಕೆಲಸ ಕಾರ್ಯಗಳಲ್ಲಿ ಯಾವುದೇ ತೊಂದರೆ ಎದುರಾಗುವುದಿಲ್ಲ. ಆದರೆ ಅತಿ ಸರಳವಾದ ವಿಷಯಗಳು ನಿಧಾನಗತಿಯಲ್ಲಿ ಸಾಗುತ್ತವೆ. ಕುಟುಂಬದಲ್ಲಿ ಸ್ನೇಹಮಯ ವಾತಾವರಣ ಇರುತ್ತದೆ. ಅನಿವಾರ್ಯವಾಗಿ ಕುಟುಂಬದ ಜವಾಬ್ದಾರಿಗಳನ್ನು ವಹಿಸಬೇಕಾಗುತ್ತದೆ. ಉದ್ಯೋಗದಲ್ಲಿ ಯಾವುದೇ ತೊಂದರೆ ಎದುರಾಗುವುದಿಲ್ಲ. ನಿಮ್ಮ ಜೀವನದಲ್ಲಿ ಘನತೆ ಗಾಂಭೀರ್ಯ ತುಂಬಿರುತ್ತದೆ. ನಿಮ್ಮಿಂದ ತಪ್ಪುಗಳಾದಲ್ಲಿ ಒಪ್ಪಿಕೊಳ್ಳುವ ಗುಣವಿರುತ್ತದೆ. ಮನಸ್ಸಿಗೆ ಸಮಾಧಾನ ಆಗದೆ ಹೋಗದಿದ್ದಲ್ಲಿ ಪೂರ್ಣಗೊಳಿಸಿದ ಕೆಲಸ ಕಾರ್ಯಗಳನ್ನು ಪುನರಾರಂಭಿಸುವಿರಿ. ದಾಂಪತ್ಯ ಜೀವನದಲ್ಲಿ ಯಾವುದೇ ಸಮಸ್ಯೆಗಳು ಎದುರಾಗುವುದಿಲ್ಲ. ಮಕ್ಕಳೊಂದಿಗೆ ಪ್ರೀತಿಯಿಂದ ಬಾಳುವಿರಿ.

ಉತ್ತರಾಷಾಢ ನಕ್ಷತ್ರದ 4ನೇ ಪಾದ ಅಥವಾ ಹೆಸರು ಜಿ ಅಕ್ಷರದಿಂದ ಆರಂಭವಾಗುವವರ ಭವಿಷ್ಯ

ಹಣಕಾಸಿನ ಅನಿವಾರ್ಯತೆ ಹೆಚ್ಚುತ್ತದೆ. ಕುಟುಂಬದವರಿಂದ ಹಣದ ಸಹಾಯವನ್ನು ಪಡೆಯಬೇಕಾಗುತ್ತದೆ. ತೊಂದರೆಯಲ್ಲಿ ಇದ್ದರೂ ಬೇರೆಯವರಿಗೆ ಸಹಾಯ ಮಾಡಲು ಹಿಂಜರಿಯುವುದಿಲ್ಲ. ಯಾವುದೇ ವಿಚಾರದಲ್ಲಿ ದೃಢವಾದ ನಿರ್ಧಾರವನ್ನು ತೆಗೆದುಕೊಳ್ಳುವುದಿಲ್ಲ. ಮನದಲ್ಲಿ ಇರುವ ವಿಚಾರಗಳನ್ನು ಹೆಚ್ಚಿನ ಪ್ರಯತ್ನದಿಂದ ಕಾರ್ಯಗತಗೊಳಿಸುವಿರಿ. ಉದ್ಯೋಗದಲ್ಲಿ ಬೇಸರದ ಸನ್ನಿವೇಶಗಳು ಎದುರಾಗುತ್ತವೆ. ವಿದ್ಯಾರ್ಥಿಗಳು ಕಲಿಕೆಯಲ್ಲಿ ಮುಂದುವರೆಯಲು ಹಿರಿಯರ ಸಹಾಯ ಸಹಕಾರ ದೊರೆಯುತ್ತದೆ. ಅವಶ್ಯಕತೆ ಇರುವಷ್ಟು ಹಣವನ್ನು ಸಂಪಾದಿಸಬಲ್ಲಿರಿ. ವ್ಯಾಪಾರ ವ್ಯವಹಾರಗಳಲ್ಲಿ ನಿಧಾನವಾದ ಪ್ರಗತಿ ಕಂಡು ಬರುತ್ತದೆ. ಅವಿವಾಹಿತರಿಗೆ ಆತ್ಮೀಯರ ಸಹಾಯದಿಂದ ವಿವಾಹ ನಿಶ್ಚಯವಾಗುತ್ತದೆ. ತಲೆ ನೋವಿನ ಸಮಸ್ಯೆಗಳು ಸಾಮಾನ್ಯವಾಗಿರುತ್ತವೆ. ಜೀವನ ರೂಪಿಸಿಕೊಳ್ಳಲು ಕುಟುಂಬದ ಹಿರಿಯರ ಸಹಾಯವಿರುತ್ತದೆ. ಮನೆಯನ್ನು ಬದಲಾಯಿಸುವಿರಿ.

ಬರಹ: ಎಚ್‌. ಸತೀಶ್, ಜ್ಯೋತಿಷಿ.

ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ "ಹಿಂದೂಸ್ತಾನ್ ಟೈಮ್ಸ್ ಕನ್ನಡ" ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ.

Raghavendra M Y

TwittereMail
ರಾಘವೇಂದ್ರ ಎಂ.ವೈ: 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದಲ್ಲಿ ಸೀನಿಯರ್ ಕಂಟೆಂಟ್ ಪ್ರೊಡ್ಯೂಸರ್. ರಾಶಿ ಭವಿಷ್ಯ (ಧರ್ಮ) ವಿಭಾಗದಲ್ಲಿ ಕಾರ್ಯನಿರ್ವಹಣೆ. ಪ್ರಜಾವಾಣಿ, ಉದಯ ನ್ಯೂಸ್, ದಿಗ್ವಿಜಯ ನ್ಯೂಸ್, ಫಸ್ಟ್ ನ್ಯೂಸ್, ಡಿಡಿ ಚಂದನ ನ್ಯೂಸ್, ಈ-ಟಿವಿ ಭಾರತದಲ್ಲಿ ಬುಲೆಟಿನ್ ಪ್ರೊಡ್ಯೂಸರ್ ಸೇರಿ ವಿವಿಧ ವಿಭಾಗಗಳಲ್ಲಿ ಒಟ್ಟು 12 ವರ್ಷ ಅನುಭವ. ಪುಸ್ತಕ, ಪತ್ರಿಕೆ ಓದುವುದು ಇಷ್ಟ. ವಾಣಿಜ್ಯ, ಕ್ರಿಕೆಟ್, ಗ್ರಾಮೀಣ ವಿದ್ಯಮಾನಗಳ ಬಗ್ಗೆ ಇಷ್ಟಪಟ್ಟು ಬರೆಯುತ್ತಾರೆ. ಕೋಲಾರ ಜಿಲ್ಲೆಯ ಮಾಲೂರು ತಾಲೂಕಿನ ಮಿರುಪನಹಳ್ಳಿ ಇವರ ಸ್ವಂತ ಊರು. ಸದ್ಯಕ್ಕೆ ಬೆಂಗಳೂರು ನಿವಾಸಿ.
Whats_app_banner
ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.