ವಿಶಾಖ ನಕ್ಷತ್ರ ವರ್ಷ ಭವಿಷ್ಯ 2025: ಖರ್ಚುಗಳು ಕಡಿಮೆ ಮಾಡಲು ಸಾಧ್ಯವಾಗುವುದಿಲ್ಲ, ಅನಿರೀಕ್ಷಿತ ಧನ ಲಾಭವಿರುತ್ತೆ
Vishakha Nakshatra Bhavishya: ವಿಶಾಖ ನಕ್ಷತ್ರದವರ ವರ್ಷ ಭವಿಷ್ಯ 2025. ಖರ್ಚು ವೆಚ್ಚಗಳನ್ನು ಕಡಿಮೆ ಮಾಡಲು ಸಾಧ್ಯವಾಗುವುದಿಲ್ಲ, ಅನಿರೀಕ್ಷಿತ ಧನ ಲಾಭವಿರುತ್ತೆ. (ಬರಹ: ಎಚ್.ಸತೀಶ್, ಜ್ಯೋತಿಷಿ)

ವಿಶಾಖ ನಕ್ಷತ್ರದ ಯುಗಾದಿ ವರ್ಷ ಭವಿಷ್ಯ: ಪಂಚಾಂಗದ ಪ್ರಕಾರ ಕೆಲವೇ ದಿನಗಳಲ್ಲಿ ಹಳೆಯ ವರ್ಷ ಮುಗಿದು ಹೊಸ ವರ್ಷಕ್ಕೆ ಕಾಲಿಡುತ್ತೇವೆ. ಯುಗಾದಿ ಹಬ್ಬವು ಹೊಸ ವರ್ಷದ ಮೊದಲ ದಿನ. ಈ ಹೊಸ ವರ್ಷದಲ್ಲಿ ಸಂಕಷ್ಟಗಳು ಕಳೆದು ಸುಖ, ಶಾಂತಿ, ನೆಮ್ಮದಿ, ಉತ್ತಮ ಆರೋಗ್ಯ, ಹೊಸ ಅವಕಾಶ, ಸಂಪತ್ತು ಸಮೃದ್ಧಿಯನ್ನು ನಿರೀಕ್ಷಿಸುತ್ತ ಆಶಾವಾದಿಗಳಾಗಿ ಬದುಕುವುದು ಸಾಮಾನ್ಯ. ಬಹುತೇಕ ಸಂದರ್ಭದಲ್ಲಿ ಜನರು ತಮ್ಮ ರಾಶಿಗೆ ಅನುಗುಣವಾಗಿ ವರ್ಷ ಭವಿಷ್ಯವನ್ನು ಕಾತರದಿಂದ ವೀಕ್ಷಿಸುತ್ತಾರೆ. ಇನ್ನೂ ನಿಖರವಾಗಿ ಬೇಕು ಎಂದುಕೊಳ್ಳುವವರು ನಕ್ಷತ್ರವಾರು ವರ್ಷ ಭವಿಷ್ಯ ನೋಡಿ ಕೊಂಚ ಸಮಾಧಾನ ಮಾಡಿಕೊಳ್ಳುತ್ತಾರೆ. ಅಂತಹ ಓದುಗರಿಗಾಗಿ 27 ನಕ್ಷತ್ರಗಳ ವರ್ಷ ಭವಿಷ್ಯವನ್ನು ಸರಣಿ ಪ್ರಕಾರ ‘ಎಚ್‌ಟಿ ಕನ್ನಡ’ ಒದುಗಿಸುತ್ತಿದೆ. ನಕ್ಷತ್ರಗಳ ಪೈಕಿ 16ನೇಯದಾದ ವಿಶಾಖ ನಕ್ಷತ್ರದಲ್ಲಿ ಜನಿಸಿದವರ ಶ್ರೀ ವಿಶ್ವಾವಸು ಸಂವತ್ಸರದ ವರ್ಷ ಭವಿಷ್ಯ ಇಲ್ಲಿದೆ.
ವಿಶಾಖ ನಕ್ಷತ್ರದವರ ಜೀವನ ಮತ್ತು ಹೆಸರು ಯಾವ ಅಕ್ಷರಗಳಿಂದ ಆರಂಭವಾಗುತ್ತೆ
ಪ್ರತಿಯೊಂದು ನಕ್ಷತ್ರವೂ ನಾಲ್ಕು ಪಾದಗಳನ್ನು ಹೊಂದಿರುತ್ತವೆ. ವಿಶಾಖ ನಕ್ಷತ್ರದ 1, 2, 3 ನೆಯ ಪಾದಗಳು ತುಲಾರಾಶಿಯಲ್ಲಿ ಬರುತ್ತವೆ. ವಿಶಾಖ ನಕ್ಷತ್ರದ 4ನೇ ಪಾದವು ವೃಶ್ಚಿಕ ರಾಶಿಯಲ್ಲಿ ಇರುತ್ತದೆ. ಇದಲ್ಲದೆ ನಿಮ್ಮ ಹೆಸರು ತಿ, ತು, ತೆ ಮತ್ತು ತೊ ಅಕ್ಷರದಿಂದ ಆರಂಭವಾಗಿದ್ದಲ್ಲಿ ನಿಮ್ಮದು ವಿಶಾಖ ನಕ್ಷತ್ರವಾಗುತ್ತದೆ.
ಶ್ರೀ ವಿಶ್ವಾವಸು ಸಂವತ್ಸರದಲ್ಲಿ ವಿಶಾಖ ನಕ್ಷತ್ರದವರ ಭವಿಷ್ಯ
ಬುದ್ಧಿವಂತಿಕೆಯಿಂದ ತೆಗೆದುಕೊಳ್ಳುವ ತೀರ್ಮಾನಗಳು ಜೀವನದ ಹಾದಿಯನ್ನೇ ಬದಲಿಸುತ್ತದೆ. ಸುಲಭವಾಗಿ ಯಾರೊಬ್ಬರ ಪ್ರಭಾವಕ್ಕೆ ಒಲಿಯುವುದಿಲ್ಲ. ಹಾಗೆಯೇ ಬೇರೆಯವರ ಮೇಲೆ ಒತ್ತಡವನ್ನು ಹೇರುವುದಿಲ್ಲ. ಉದ್ಯೋಗದಲ್ಲಿ ಯಾವುದೇ ತಪ್ಪಿಲ್ಲದಂತೆ ನಡೆದುಕೊಳ್ಳುವಿರಿ. ಪ್ರೀತಿ ವಿಶ್ವಾಸದಿಂದ ಸಹೋದ್ಯೋಗಿಗಳ ಮನಸ್ಸನ್ನು ಗೆಲ್ಲುವಿರಿ. ಏಕಾಂಗಿಯಾಗಿ ಯಾವುದೇ ಕೆಲಸವನ್ನು ಮಾಡಬಲ್ಲಿರಿ. ವ್ಯಾಪಾರ, ವ್ಯವಹಾರದಲ್ಲಿ ಉತ್ತಮ ಅಭಿವೃದ್ಧಿ ಕಂಡು ಬರುತ್ತದೆ. ಕಾನೂನಿನ ವಿಚಾರದಲ್ಲಿ ಪಾಂಡಿತ್ಯ ಸಾಧಿಸುವಿರಿ. ಆದಾಯದಲ್ಲಿ ಯಾವುದೇ ತೊಂದರೆ ಕಂಡುಬರುವುದಿಲ್ಲ. ಆದರೆ ಖರ್ಚು ವೆಚ್ಚಗಳನ್ನು ಕಡಿತಗೊಳಿಸಲು ಸಾಧ್ಯವಾಗುವುದಿಲ್ಲ. ಸಾರ್ವಜನಿಕ ಸಂಘ ಸಂಸ್ಥೆಗಳಿಗೆ ದೇಣಿಗೆಯಾಗಿ ಹಣವನ್ನು ನೀಡುವಿರಿ. ಕುಟುಂಬದಲ್ಲಿ ಶಾಂತಿ ನೆಮ್ಮದಿಯ ವಾತಾವರಣ ಉಂಟಾಗಲು ಕಾರಣರಾಗುವಿರಿ.
ವಿಶಾಖ ನಕ್ಷತ್ರದ 1ನೇ ಪಾದ ಅಥವಾ ಹೆಸರು ತಿ ಅಕ್ಷರದಿಂದ ಆರಂಭವಾಗುವವರ ಭವಿಷ್ಯ
ನಿಮ್ಮಲ್ಲಿರುವ ಬುದ್ಧಿ ಶಕ್ತಿಯನ್ನು ಉಪಯೋಗಿಸಿಕೊಳ್ಳುವುದಿಲ್ಲ. ಆರಂಭಿಸಿದ ಕೆಲಸಕಾರ್ಯಗಳು ಪೂರ್ಣಗೊಳ್ಳಲು ಪ್ರಾಯಾಸ ಪಡಬೇಕಾಗುತ್ತದೆ. ಅತಿಯಾದ ಆತುರದಿಂದ ಕೆಲಸ ನಿರ್ವಹಿಸಲು ಪ್ರಯತ್ನಿಸುವಿರಿ. ಒಮ್ಮೆ ಯೋಚಿಸಿ ಹೊಸ ಕೆಲಸವನ್ನು ಆರಂಭಿಸುವುದು ಒಳ್ಳೆಯದು. ವಿಶ್ರಾಂತಿ ಇಲ್ಲದೆ ದುಡಿಯುತ್ತೀರಿ. ಹಣಕಾಸಿನ ವಿಚಾರದಲ್ಲಿ ಯಾವುದೇ ತೊಂದರೆ ಕಂಡುಬರುವುದಿಲ್ಲ. ಅನಿರೀಕ್ಷಿತ ಧನ ಲಾಭವಿರುತ್ತದೆ. ನಿರೀಕ್ಷಿಸಿದಂತೆ ಕೆಲಸ ಕಾರ್ಯಗಳಲ್ಲಿ ಯಶಸ್ಸನ್ನು ಗಳಿಸುವಿರಿ. ಕುಟುಂಬದಲ್ಲಿ ಸುಖ ಶಾಂತಿ ನೆಲೆಸಿರುತ್ತದೆ. ಸದಾಕಾಲ ಯಾವುದಾದರೂ ಒಂದು ಕೆಲಸದಲ್ಲಿ ನಿಮ್ಮನ್ನು ತೊಡಗಿಸಿಕೊಳ್ಳುವಿರಿ. ಸದಾ ಗೆಲುವನ್ನು ನಿರೀಕ್ಷಿಸುವ ನೀವು ಸೋಲಿನ ಭಯದಿಂದ ಕೋಪಗೊಳ್ಳುವಿರಿ. ಕೆಲಸ ಕಾರ್ಯಗಳಿಗೆ ಯಾರೊಬ್ಬರ ಸಹಾಯವನ್ನು ಪಡೆಯುವುದಿಲ್ಲ. ಸುಲಭವಾಗಿ ಬೇರೆಯವರನ್ನು ನಂಬುವ ಗುಣವಿರುವುದಿಲ್ಲ.
ವಿಶಾಖ ನಕ್ಷತ್ರದ 2ನೇ ಪಾದ ಅಥವಾ ಹೆಸರು ತು ಅಕ್ಷರದಿಂದ ಆರಂಭವಾಗುವವರ ಭವಿಷ್ಯ
ಮಕ್ಕಳ ಜೀವನದಲ್ಲಿ ಸಕಾರಾತ್ಮಕ ಬದಲಾವಣೆಗಳು ಉಂಟಾಗಲಿವೆ. ಮಕ್ಕಳ ವಿದ್ಯಾಭ್ಯಾಸದಲ್ಲಿ ಉನ್ನತಿ ಇರಲಿದೆ. ಯಾವುದಾದರೂ ಒಂದು ಚಟುವಟಿಕೆಗಳಲ್ಲಿ ನಿರತರಾಗುವಿರಿ. ಹಣಕಾಸಿನ ವಿಚಾರದಲ್ಲಿ ನಿಮ್ಮ ಎಣಿಕೆಯಂತೆ ಅನುಕೂಲತೆ ಇರುವುದಿಲ್ಲ. ಅತಿಯಾದ ಆಸೆ ಇರದು. ಕುಟುಂಬದವರೊಡನೆ ಹೊಂದಿಕೊಂಡು ಬಾಳುವಿರಿ. ಉದ್ಯೋಗದಲ್ಲಿ ಎಲ್ಲರ ಮೇಲೆ ಒತ್ತಡವನ್ನು ಹಾಕುವಿರಿ. ಆರೋಗ್ಯದಲ್ಲಿ ಏರಿಳಿತ ಕಂಡು ಬರಲಿದೆ. ಸಮಾಜದಲ್ಲಿ ನಿಮ್ಮದೇ ಆದ ಸ್ಥಾನಮಾನವಿರುತ್ತದೆ. ನಿಮಗೆ ಅನುಕೂಲವಿರುವ ವೇಳೆಯಲ್ಲಿ ಬೇರೆಯವರಿಗೆ ಸಹಾಯ ಮಾಡುವಿರಿ. ಸ್ವಂತ ವ್ಯಾಪಾರ ವ್ಯವಹಾರಗಳಲ್ಲಿ ಆಸಕ್ತಿ ಇರುವುದಿಲ್ಲ. ಆತ್ಮೀಯರೊಂದಿಗೆ ಪಾಲುಗಾರಿಕೆಯ ವ್ಯಾಪಾರವನ್ನು ಆರಂಭಿಸುವಿರಿ. ಸಾಲವಾಗಿ ಹಣವನ್ನು ನೀಡಿದರೆ ಅಥವಾ ಹಣವನ್ನು ಪಡೆದರೆ ತೊಂದರೆಗೆ ಸಿಲುಕುವಿರಿ.
ವಿಶಾಖ ನಕ್ಷತ್ರದ 3ನೇ ಪಾದ ಅಥವಾ ಹೆಸರು ತೆ ಅಕ್ಷರದಿಂದ ಆರಂಭವಾಗುವವರ ಭವಿಷ್ಯ
ಆತುರದಲ್ಲಿ ಆಡುವ ಮಾತುಗಳು ವಿವಾದವನ್ನು ಸೃಷ್ಟಿಸುತ್ತದೆ. ತಪ್ಪುಗಳನ್ನು ಮರೆತು ಸಹೋದ್ಯೋಗಿಗಳು ಸಹಾಯ ಮಾಡುತ್ತಾರೆ. ನಿಮ್ಮ ತಪ್ಪು ಕಲ್ಪನೆಗಳಿಂದ ಮಾನಸಿಕ ಒತ್ತಡಕ್ಕೆ ಒಳಗಾಗುವಿರಿ. ಪಾಲುಗಾರಿಕೆಯ ವ್ಯಾಪಾರದಲ್ಲಿ ಉತ್ತಮ ಆದಾಯವಿರುತ್ತದೆ. ಕಮಿಷನ್ ಆಧಾರಿತ ವ್ಯಾಪಾರವು ಸಹಕಾರಿಯಾಗುತ್ತದೆ. ಆತಂಕದಲ್ಲಿ ಇದ್ದವರಿಗೆ ಸೂಕ್ತ ಸಲಹೆಯನ್ನು ನೀಡುವಿರಿ. ಉತ್ತಮ ಆದಾಯವಿರುತ್ತದೆ. ಆದರೆ ಅನಾವಶ್ಯಕ ಖರ್ಚು ವೆಚ್ಚಗಳು ಎದುರಾಗುತ್ತದೆ. ಕೆಲಸ ಕಾರ್ಯಗಳಲ್ಲಿ ಮಕ್ಕಳ ಸಹಾಯ ದೊರೆಯುತ್ತದೆ. ವಿದ್ಯಾರ್ಥಿಗಳಿಗೆ ನಿರೀಕ್ಷಿತ ಯಶಸ್ಸು ದೊರೆಯಲಿದೆ. ಆರೋಗ್ಯದಲ್ಲಿ ತೊಂದರೆ ಇರುವುದಿಲ್ಲ. ಜೀವನದಲ್ಲಿ ಎದುರಾಗುವ ಸವಾಲುಗಳನ್ನು ಗೆಲ್ಲಬಲ್ಲಿರಿ.
ವಿಶಾಖ ನಕ್ಷತ್ರದ 4ನೇ ಪಾದ ಅಥವಾ ಹೆಸರು ತೊ ಅಕ್ಷರದಿಂದ ಆರಂಭವಾಗುವವರ ಭವಿಷ್ಯ
ಎಲ್ಲರ ಮೇಲು ನಿಮ್ಮ ಪ್ರಭಾವವನ್ನು ಬೀರಲು ಪ್ರಯತ್ನಿಸುವಿರಿ. ನಿಮ್ಮ ಮನಸ್ಸನ್ನು ಅರಿತ ಕೆಲವರು ನಿಮ್ಮಿಂದ ದೂರ ಉಳಿಯುತ್ತಾರೆ. ಕುಟುಂಬದಲ್ಲಿ ಸಣ್ಣ ಪುಟ್ಟ ವಿಚಾರಗಳಿಗೂ ತಗಾದೆ ತೆಗೆಯುವಿರಿ. ಆದರೆ ದಿಟ್ಟ ನಿಲುವನ್ನು ತೆಗೆದುಕೊಳ್ಳಲು ವಿಫಲರಾಗುವಿರಿ. ಆತ್ಮೀಯರ ರಕ್ಷಣೆಗೆ ಸದಾ ಮುಂದೆ ಇರುವಿರಿ. ಆದಾಯದಲ್ಲಿ ನಿರೀಕ್ಷಿತ ಮಟ್ಟ ತಲುಪುವಿರಿ. ಅವಶ್ಯಕತೆ ಇದ್ದಲ್ಲಿ ಉದ್ಯೋಗವನ್ನು ಬದಲಿಸಲು ಹಿಂಜರಿಯುವುದಿಲ್ಲ. ಉತ್ತಮ ವಿದ್ಯೆ ಇರುತ್ತದೆ. ವಿವೇಕತೆಯಿಂದ ವರ್ತಿಸುವಿರಿ. ವ್ಯಾಪಾರ ವ್ಯವಹಾರಗಳು ಮಧ್ಯಮ ಗತಿಯಲ್ಲಿ ಸಾಗಲಿವೆ. ಕೈಕಾಲುಗಳಲ್ಲಿ ಶಕ್ತಿ ಕಡಿಮೆಯಾಗುತ್ತದೆ. ವಯೋವೃದ್ಧರ ಆರೋಗ್ಯದ ಬಗ್ಗೆ ಹೆಚ್ಚಿನ ಗಮನ ನೀಡುವುದು ಒಳ್ಳೆಯದು.
ಬರಹ: ಎಚ್. ಸತೀಶ್, ಜ್ಯೋತಿಷಿ.
ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ "ಹಿಂದೂಸ್ತಾನ್ ಟೈಮ್ಸ್ ಕನ್ನಡ" ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ.
