ಶತಭಿಷ ನಕ್ಷತ್ರ ವರ್ಷ ಭವಿಷ್ಯ 2025: ತಪ್ಪು ನಿರ್ಧಾರಗಳನ್ನು ಕೈಗೊಳ್ಳುವುದಿಲ್ಲ, ಮನೆತನದ ಆಸ್ತಿಯನ್ನು ಹೆಚ್ಚಿಸಿಕೊಳ್ಳುತ್ತೀರಿ
Shatabhisha Nakshatra Bhavishya: ಶತಭಿಷ ನಕ್ಷತ್ರದವರ ವರ್ಷ ಭವಿಷ್ಯ 2025. ತಪ್ಪು ನಿರ್ಧಾರಗಳನ್ನು ಕೈಗೊಳ್ಳುವುದಿಲ್ಲ, ಮನೆತನದ ಆಸ್ತಿಯನ್ನು ಹೆಚ್ಚಿಸಿಕೊಳ್ಳುತ್ತೀರಿ. (ಬರಹ: ಎಚ್.ಸತೀಶ್, ಜ್ಯೋತಿಷಿ)

ಶತಭಿಷ ನಕ್ಷತ್ರದ ಯುಗಾದಿ ವರ್ಷ ಭವಿಷ್ಯ: ಪಂಚಾಂಗದ ಪ್ರಕಾರ ಕೆಲವೇ ದಿನಗಳಲ್ಲಿ ಹಳೆಯ ವರ್ಷ ಮುಗಿದು ಹೊಸ ವರ್ಷಕ್ಕೆ ಕಾಲಿಡುತ್ತೇವೆ. ಯುಗಾದಿ ಹಬ್ಬವು ಹೊಸ ವರ್ಷದ ಮೊದಲ ದಿನ. ಈ ಹೊಸ ವರ್ಷದಲ್ಲಿ ಸಂಕಷ್ಟಗಳು ಕಳೆದು ಸುಖ, ಶಾಂತಿ, ನೆಮ್ಮದಿ, ಉತ್ತಮ ಆರೋಗ್ಯ, ಹೊಸ ಅವಕಾಶ, ಸಂಪತ್ತು ಸಮೃದ್ಧಿಯನ್ನು ನಿರೀಕ್ಷಿಸುತ್ತ ಆಶಾವಾದಿಗಳಾಗಿ ಬದುಕುವುದು ಸಾಮಾನ್ಯ. ಬಹುತೇಕ ಸಂದರ್ಭದಲ್ಲಿ ಜನರು ತಮ್ಮ ರಾಶಿಗೆ ಅನುಗುಣವಾಗಿ ವರ್ಷ ಭವಿಷ್ಯವನ್ನು ಕಾತರದಿಂದ ವೀಕ್ಷಿಸುತ್ತಾರೆ. ಇನ್ನೂ ನಿಖರವಾಗಿ ಬೇಕು ಎಂದುಕೊಳ್ಳುವವರು ನಕ್ಷತ್ರವಾರು ವರ್ಷ ಭವಿಷ್ಯ ನೋಡಿ ಕೊಂಚ ಸಮಾಧಾನ ಮಾಡಿಕೊಳ್ಳುತ್ತಾರೆ. ಅಂತಹ ಓದುಗರಿಗಾಗಿ 27 ನಕ್ಷತ್ರಗಳ ವರ್ಷ ಭವಿಷ್ಯವನ್ನು ಸರಣಿ ಪ್ರಕಾರ ‘ಎಚ್‌ಟಿ ಕನ್ನಡ’ ಒದುಗಿಸುತ್ತಿದೆ. ನಕ್ಷತ್ರಗಳ ಪೈಕಿ 24ನೇಯದಾದ ಶತಭಿಷ ನಕ್ಷತ್ರದಲ್ಲಿ ಜನಿಸಿದವರ ಶ್ರೀ ವಿಶ್ವಾವಸು ಸಂವತ್ಸರದ ವರ್ಷ ಭವಿಷ್ಯ ಇಲ್ಲಿದೆ.
ಶತಭಿಷ ನಕ್ಷತ್ರದವರ ಭವಿಷ್ಯ ಮತ್ತು ಹೆಸರು ಯಾವ ಅಕ್ಷರಗಳಿಂದ ಆರಂಭವಾಗುತ್ತೆ
ಪ್ರತಿಯೊಂದು ನಕ್ಷತ್ರವೂ ನಾಲ್ಕು ಪಾದಗಳನ್ನು ಹೊಂದಿರುತ್ತವೆ. ಶತಭಿಷ ನಕ್ಷತ್ರದ ಎಲ್ಲಾ 4 ಪಾದಗಳು ಕುಂಭ ರಾಶಿಯಲ್ಲಿ ಬರುತ್ತವೆ. ಇದಲ್ಲದೆ ನಿಮ್ಮ ಹೆಸರು ಗೊ, ಸ, ಸಿ ಮತ್ತು ಸು ಅಕ್ಷರದಿಂದ ಆರಂಭವಾಗಿದ್ದಲ್ಲಿ ನಿಮ್ಮದು ಶತಭಿಷ ನಕ್ಷತ್ರವಾಗುತ್ತದೆ.
ಶ್ರೀ ವಿಶ್ವಾವಸು ಸಂವತ್ಸರದಲ್ಲಿ ಶತಭಿಷ ನಕ್ಷತ್ರದವರ ಭವಿಷ್ಯ
ನಿಮ್ಮದೇ ಆದ ವ್ಯಕ್ತಿತ್ವವು ಇರುತ್ತದೆ. ಬೇರೊಬ್ಬರ ಒತ್ತಾಯಕ್ಕೆ ಮಣಿದು ತಪ್ಪು ನಿರ್ಧಾರಗಳನ್ನು ತೆಗೆದುಕೊಳ್ಳುವುದಿಲ್ಲ. ಏಕಾಂಗಿಯಾಗಿ ಹೋರಾಟ ಮಾಡಬಲ್ಲ ಶಕ್ತಿ ಇರುತ್ತದೆ. ಇವರ ನಿರೀಕ್ಷೆ ದೊಡ್ಡ ಮಟ್ಟದ್ದಾಗಿರುತ್ತದೆ. ಅದೃಷ್ಟದಲ್ಲಿ ನಂಬಿಕೆ ಇಟ್ಟು ತಮ್ಮ ಪ್ರಯತ್ನಗಳನ್ನು ಕೈಬಿಡುವುದಿಲ್ಲ. ಎಲ್ಲರೊಂದಿಗೆ ಪ್ರೀತಿ ವಿಶ್ವಾಸದಿಂದ ನಡೆದುಕೊಳ್ಳುವಿರಿ. ಕಠಿಣವಾದ ವಿಚಾರಗಳನ್ನು ಸಹ ನಿಧಾನವಾಗಿ ತಿಳಿದುಕೊಳ್ಳುತ್ತಾರೆ. ನಿಧಾನವಾಗಿ ಆರಂಭಿಸಿದ ಕೆಲಸ ಕಾರ್ಯಗಳು ಯಶಸ್ವಿಯಾಗುತ್ತವೆ. ಹಣಕಾಸಿನ ವಿಚಾರದಲ್ಲಿ ತೊಂದರೆ ಇರುವುದಿಲ್ಲ. ಆದರೆ ಆರ್ಥಿಕ ಪರಿಸ್ಥಿತಿಯಲ್ಲಿ ಏರಿಳಿತ ಸದಾಕಾಲವೂ ಇರುತ್ತದೆ. ಬಂಧು ಬಳಗದಲ್ಲಿ ಇವರ ಬಗ್ಗೆ ಹೆಮ್ಮೆಯ ಮನೋಭಾವನೆ ಇರುತ್ತದೆ. ಹಣಕಾಸು ಮತ್ತು ಐಶ್ವರ್ಯವನ್ನು ಅಭಿವೃದ್ಧಿಪಡಿಸಲು ಹಲವು ಅವಕಾಶಗಳು ನಿಮಗೆ ದೊರೆಯುತ್ತದೆ. ಸಹನೆಯಿಂದ ಅದನ್ನು ನಿಮಗೆ ಇಷ್ಟ ಬಂದಂತೆ ಬದಲಾಯಿಸಿಕೊಳ್ಳಲು ಯಶಸ್ವಿಯಾಗುವಿರಿ. ಸೋಲು ಎಂಬುವುದು ನಿಮಗಿರುವುದಿಲ್ಲ. ತಪ್ಪಾದ ನಿರ್ಧಾರಗಳನ್ನು ಒಪ್ಪಿಕೊಳ್ಳುವುದಿಲ್ಲ. ಯಾರ ಪ್ರಭಾವಕ್ಕೂ ಮಣಿಯದೆ ಸ್ವಂತ ನಿರ್ಧಾರಗಳಿಗೆ ಬದ್ಧರಾಗುವಿರಿ.
ಶತಭಿಷ ನಕ್ಷತ್ರದ 1ನೇ ಪಾದ ಅಥವಾ ಹೆಸರು ಗೊ ಅಕ್ಷರದಿಂದ ಆರಂಭವಾಗುವವರ ಭವಿಷ್ಯ
ಬೇರೆಯವರ ಜೊತೆಯಲ್ಲಿ ಒರಟುತನದಿಂದ ನಡೆದುಕೊಳ್ಳುವುದಿಲ್ಲ. ನಿಮ್ಮಲ್ಲಿರುವ ದಯಾ ಗುಣ ಎಲ್ಲರ ಮನ ಗೆಲ್ಲುತ್ತದೆ. ಅವಶ್ಯಕತೆ ಇದ್ದಲ್ಲಿ ನಿಮ್ಮ ಬಳಿ ಇರುವ ಹಣ ಅಧಿಕಾರ ಮುಂತಾದವುಗಳನ್ನು ಬೇರೆಯವರಿಗೆ ಕಾಣಿಕೆಯಾಗಿ ನೀಡುವಿರಿ. ಮನದ ಬೇಸರವನ್ನು ಕಡಿಮೆ ಮಾಡಲು ಪ್ರವಾಸವನ್ನು ಕೈಗೊಳ್ಳುವಿರಿ. ಬೇರೆಯವರ ಸಹಾಯ ಸಹಕಾರದಿಂದ ನಿಮ್ಮ ಕೆಲಸ ಕಾರ್ಯಗಳು ಪೂರ್ಣಗೊಳ್ಳುತ್ತವೆ. ನಿಮ್ಮಲ್ಲಿರುವ ಬುದ್ಧಿವಂತಿಕೆ ಮತ್ತು ಆತ್ಮಶಕ್ತಿಯು ಬಾಳಿನ ಸಮಸ್ಯೆಗಳು ದೂರ ಉಳಿಯುವಂತೆ ಮಾಡುತ್ತದೆ. ಮನೆತನದ ಆಸ್ತಿಯನ್ನು ಹೆಚ್ಚಿಸುವಲ್ಲಿ ಯಶಸ್ವಿಯಾಗುವಿರಿ. ಮಾನಸಿಕ ಒತ್ತಡ ಇದ್ದರು ತೋರ್ಪಡಿಸಿಕೊಳ್ಳುವುದಿಲ್ಲ. ಬಾಳ ಸಂಗಾತಿ ಮತ್ತು ಮಕ್ಕಳ ಅಭಿವೃದ್ಧಿಗೆ ನಾಂದಿ ಹಾಡುವಿರಿ. ಆರೋಗ್ಯವನ್ನು ಹತೋಟಿಯಲ್ಲಿ ಹಿಡಿದಿಡಲು ಯಶಸ್ವಿಯಾಗುವಿರಿ. ತೆಗೆದುಕೊಳ್ಳಬೇಕಾದ ನಿರ್ಧಾರಗಳನ್ನು ಶೀಘ್ರವೇ ತೆಗೆದುಕೊಳ್ಳುವುದು ಒಳ್ಳೆಯದು.
ಶತಭಿಷ ನಕ್ಷತ್ರದ 2ನೇ ಪಾದ ಅಥವಾ ಹೆಸರು ಸ ಅಕ್ಷರದಿಂದ ಆರಂಭವಾಗುವವರ ಭವಿಷ್ಯ
ಹಣ ಕಾಸಿನ ಬಗ್ಗೆ ಆಸೆ ಇರುತ್ತದೆ ಆದರೆ ದುರಾಸೆ ಇರುವುದಿಲ್ಲ. ದೊರೆತ ಅವಕಾಶಗಳನ್ನು ಸರಿಯಾದ ಮಾಗದಲ್ಲಿ ಬಳಸುವ ಕಾರಣ ಯಾವುದೇ ಹಿನ್ನಡೆ ಎದುರಾಗುವುದಿಲ್ಲ. ನಿತ್ಯ ಜೀವನದಲ್ಲಿ ಸಂತೋಷ ಸಂಭ್ರಮಗಳು ತುಂಬಿರುತ್ತದೆ. ಸ್ವಂತ ಭೂಮಿ ಅಥವಾ ಜಮೀನನ್ನು ಕೊಳ್ಳುವ ಆಸೆಯು ಕೈಗೂಡುತ್ತದೆ. ಜನ್ಮಸ್ಥಳದಲ್ಲಿ ನಿಮ್ಮ ಕೆಲಸ ಕಾರ್ಯಗಳು ಸುಲಭದ ರೀತಿಯಲ್ಲಿ ಕೈಗೂಡುತ್ತವೆ. ಆದರೆ ಅತಿಯಾದ ನಿರೀಕ್ಷೆಯಿಂದ ಪರಸ್ಥಳಕ್ಕೆ ತೆರಳಿದರೆ ತೊಂದರೆಯಾಗುವ ಸಾಧ್ಯತೆ ಹೆಚ್ಚಿನದಾಗಿದೆ. ಬೇರೆಯವರ ಬತ್ತಡಕ್ಕೆ ಮಣಿದರೆ, ನಿರೀಕ್ಷಿಸಿದ ಕೆಲಸ ಕಾರ್ಯಗಳಲ್ಲಿ ಯಶಸ್ಸು ದೊರೆಯುವುದಿಲ್ಲ. ಬೇರೆಯವರ ಕಣ್ಣೀರಿಗೆ ಸೋತು ಹೋಗುವಿರಿ. ಕೆಲವೊಮ್ಮೆ ಇದರಿಂದ ನಿಮಗೆ ಅಪಜಯ ಸಿಗುವ ಸಾಧ್ಯತೆಗಳಿರುತ್ತವೆ. ಉದ್ಯೋಗದಲ್ಲಿ ಯಾವುದೇ ಬದಲಾವಣೆಗಳು ಕಂಡುಬರುವುದಿಲ್ಲ. ಗೆಲುವಿನ ಸಂತಸದಿಂದ ಜೀವನದಲ್ಲಿ ಮುಂದುವರೆಯುವಿರಿ.
ಶತಭಿಷ ನಕ್ಷತ್ರದ 3ನೇ ಪಾದ ಅಥವಾ ಹೆಸರು ಸಿ ಅಕ್ಷರದಿಂದ ಆರಂಭವಾಗುವವರ ಭವಿಷ್ಯ
ಗುರುಹಿರಿಯರು ಮತ್ತು ದೇವರಲ್ಲಿ ಹೆಚ್ಚಿನ ನಂಬಿಕೆ ಇರುತ್ತದೆ. ಆದರೆ ಮಾನವ ಪ್ರಯತ್ನವನ್ನು ನಿಲ್ಲಿಸುವುದಿಲ್ಲ. ಅನಿರೀಕ್ಷಿತವಾಗಿ ಆರಂಭಿಸಿದ ಕೆಲಸ ಕಾರ್ಯಗಳಲ್ಲಿ ನಿರೀಕ್ಷಿಸಿದ ಯಶಸ್ಸನ್ನು ಪಡೆಯುವಿರಿ. ಕೇವಲ ಕುಟುಂಬವಲ್ಲದೆ ಹೊರಗಿನ ಜನಮನ ಗೆಲ್ಲುವಿರಿ. ಒಂದೇ ರೀತಿಯಲ್ಲಿ ನಿಮ್ಮ ಜೀವನವು ನಡೆಯಲಿದೆ. ಯಾವುದೇ ಬದಲಾವಣೆಯಾಗಲಿ ಅಥವಾ ಸಮಸ್ಯೆಯಾಗಲಿ ಜೀವನದಲ್ಲಿ ಎದುರಾಗುವುದಿಲ್ಲ. ಸೋಲನ್ನು ಸಹ ಸಂತಸದಿಂದಲೇ ಒಪ್ಪುವ ಮನೋಭಾವನೆ ನಿಮ್ಮಲ್ಲಿರುತ್ತದೆ. ಧಾರ್ಮಿಕ ಕೆಲಸ ಕಾರ್ಯಗಳಲ್ಲಿ ಹೆಚ್ಚಿನ ಶ್ರದ್ಧೆ ತೋರುವಿರಿ. ಉತ್ತಮ ವಿದ್ಯಾ ಬುದ್ಧಿ ನಿಮ್ಮ ಜೀವನಕ್ಕೆ ಊರುಗೋಲಾಗುತ್ತದೆ. ಉದ್ಯೋಗದಲ್ಲಿ ಸ್ವಾರ್ಥ ತೋರದೆ ಎಲ್ಲರ ಗೆಲುವಿಗೂ ಶ್ರಮಿಸುವಿರಿ. ನೀವು ಇರುವ ಕಡೆ ಸಂತೋಷ ಮತ್ತು ಹಾಸ್ಯಕ್ಕೆ ಬರ ಇರುವುದಿಲ್ಲ. ಎಲ್ಲರನ್ನೂ ಪ್ರೀತಿಯಿಂದ ನೋಡುವ ಮನಸ್ಥಿತಿ ಹೆಚ್ಚಿನ ಫಲವನ್ನು ನೀಡುತ್ತದೆ.
ಶತಭಿಷ ನಕ್ಷತ್ರದ 4ನೇ ಪಾದ ಅಥವಾ ಹೆಸರು ಸು ಅಕ್ಷರದಿಂದ ಆರಂಭವಾಗುವವರ ಭವಿಷ್ಯ
ನಿಮ್ಮಲ್ಲಿ ಆತುರದ ಗುಣ ಧರ್ಮವಿರುತ್ತದೆ. ಇದರಿಂದ ಉದ್ಯೋಗದಲ್ಲಿ ಅನಾವಶ್ಯಕವಾದ ಏರಿಳಿತ ಕಂಡುಬರುತ್ತದೆ. ಆದರೆ ನಿಮ್ಮ ಸಹೋದ್ಯೋಗಿಗಳಿಂದ ಸಂಪೂರ್ಣ ಸಹಾಯ ಸಹಕಾರ ದೊರೆಯುತ್ತದೆ. ನಿಮಗೆ ಅಸಾಧ್ಯ ಎನಿಸುವಂತಹ ಕೆಲಸಗಳು ಯಾವುದು ಇರುವುದಿಲ್ಲ. ಆತ್ಮವಿಶ್ವಾಸದಿಂದ ನಿಮ್ಮ ಧ್ಯೇಯೋದ್ದೇಶಗಳನ್ನು ಪೂರೈಸಿಕೊಳ್ಳಲು ಸಾಧ್ಯವಾಗುತ್ತದೆ. ಗೆಲ್ಲಲೇ ಬೇಕಾದ ಅನಿವಾರ್ಯತೆ ಮತ್ತು ಹಠ ನಿಮ್ಮಲ್ಲಿ ಇರುತ್ತದೆ. ಮನೆತನದ ಆಸ್ತಿಯನ್ನು ಕಾಪಾಡಿಕೊಳ್ಳುವಲ್ಲಿ ಯಶಸ್ವಿಯಾಗುವಿರಿ. ಅದೃಷ್ಟದಿಂದ ನಿರೀಕ್ಷಿತ ಮಟ್ಟ ತಲುಪಲು ಸಾಧ್ಯವಾಗುತ್ತದೆ. ಹಣಕಾಸಿನ ವಿಚಾರದಲ್ಲಿ ಚಿತ್ರ ವಿಚಿತ್ರವಾದ ಘಟನೆಗಳು ನಡೆಯುತ್ತವೆ. ಕುಟುಂಬದ ಸದಸ್ಯರಿಗೆ ಸಹಾಯ ಮಾಡುವಿರಿ. ಆರೋಗ್ಯದಲ್ಲಿ ಸ್ಥಿರತೆ ಇರುತ್ತದೆ. ಮಕ್ಕಳ ಜೀವನಕ್ಕೆ ಆಸರೆಯಾಗುವಿರಿ. ಬರಿ ಮಾತಿನಿಂದ ಕೆಲಸ ಸಾಧಿಸುವ ಚತುರತೆ ಇರುತ್ತದೆ.
ಬರಹ: ಎಚ್. ಸತೀಶ್, ಜ್ಯೋತಿಷಿ.
ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ "ಹಿಂದೂಸ್ತಾನ್ ಟೈಮ್ಸ್ ಕನ್ನಡ" ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ.
