ಉತ್ತರಾಭಾದ್ರ ನಕ್ಷತ್ರ ವರ್ಷ ಭವಿಷ್ಯ 2025: ಉದ್ಯೋಗದಲ್ಲಿ ಆಸಕ್ತಿ ಇರುವುದಿಲ್ಲ, ಸಾಲದಿಂದ ಸಮಸ್ಯೆಗಳು ಎದುರಾಗುತ್ತವೆ
Uttarabhadra Nakshatra Bhavishya: ಉತ್ತರಾಭಾದ್ರ ನಕ್ಷತ್ರದವರ ವರ್ಷ ಭವಿಷ್ಯ 2025. ಉದ್ಯೋಗದಲ್ಲಿ ಆಸಕ್ತಿ ಇರುವುದಿಲ್ಲ, ಸಾಲದಿಂದ ಸಮಸ್ಯೆಗೆ ಸಿಲುಕುವಿರಿ. (ಬರಹ: ಎಚ್.ಸತೀಶ್, ಜ್ಯೋತಿಷಿ)

ಉತ್ತರಾಭಾದ್ರ ನಕ್ಷತ್ರದ ಯುಗಾದಿ ವರ್ಷ ಭವಿಷ್ಯ: ಪಂಚಾಂಗದ ಪ್ರಕಾರ ಕೆಲವೇ ದಿನಗಳಲ್ಲಿ ಹಳೆಯ ವರ್ಷ ಮುಗಿದು ಹೊಸ ವರ್ಷಕ್ಕೆ ಕಾಲಿಡುತ್ತೇವೆ. ಯುಗಾದಿ ಹಬ್ಬವು ಹೊಸ ವರ್ಷದ ಮೊದಲ ದಿನ. ಈ ಹೊಸ ವರ್ಷದಲ್ಲಿ ಸಂಕಷ್ಟಗಳು ಕಳೆದು ಸುಖ, ಶಾಂತಿ, ನೆಮ್ಮದಿ, ಉತ್ತಮ ಆರೋಗ್ಯ, ಹೊಸ ಅವಕಾಶ, ಸಂಪತ್ತು ಸಮೃದ್ಧಿಯನ್ನು ನಿರೀಕ್ಷಿಸುತ್ತ ಆಶಾವಾದಿಗಳಾಗಿ ಬದುಕುವುದು ಸಾಮಾನ್ಯ. ಬಹುತೇಕ ಸಂದರ್ಭದಲ್ಲಿ ಜನರು ತಮ್ಮ ರಾಶಿಗೆ ಅನುಗುಣವಾಗಿ ವರ್ಷ ಭವಿಷ್ಯವನ್ನು ಕಾತರದಿಂದ ವೀಕ್ಷಿಸುತ್ತಾರೆ. ಇನ್ನೂ ನಿಖರವಾಗಿ ಬೇಕು ಎಂದುಕೊಳ್ಳುವವರು ನಕ್ಷತ್ರವಾರು ವರ್ಷ ಭವಿಷ್ಯ ನೋಡಿ ಕೊಂಚ ಸಮಾಧಾನ ಮಾಡಿಕೊಳ್ಳುತ್ತಾರೆ. ಅಂತಹ ಓದುಗರಿಗಾಗಿ 27 ನಕ್ಷತ್ರಗಳ ವರ್ಷ ಭವಿಷ್ಯವನ್ನು ಸರಣಿ ಪ್ರಕಾರ ‘ಎಚ್‌ಟಿ ಕನ್ನಡ’ ಒದುಗಿಸುತ್ತಿದೆ. ನಕ್ಷತ್ರಗಳ ಪೈಕಿ 26ನೇಯದಾದ ಉತ್ತರಾಭಾದ್ರ ನಕ್ಷತ್ರದಲ್ಲಿ ಜನಿಸಿದವರ ಶ್ರೀ ವಿಶ್ವಾವಸು ಸಂವತ್ಸರದ ವರ್ಷ ಭವಿಷ್ಯ ಇಲ್ಲಿದೆ.
ಉತ್ತರಾಭಾದ್ರ ನಕ್ಷತ್ರದವರ ಹೆಸರು ಯಾವ ಅಕ್ಷರಗಳಿಂದ ಆರಂಭವಾಗುತ್ತೆ
ಪ್ರತಿಯೊಂದು ನಕ್ಷತ್ರವೂ ನಾಲ್ಕು ಪಾದಗಳನ್ನು ಹೊಂದಿರುತ್ತವೆ. ಉತ್ತರಾಭಾದ್ರ ನಕ್ಷತ್ರದ ಎಲ್ಲಾ ನಾಲ್ಕೂ ಪಾದಗಳು ಮೀನ ರಾಶಿಯಲ್ಲಿ ಬರುತ್ತವೆ. ಇದಲ್ಲದೆ ನಿಮ್ಮ ಹೆಸರು ದು, ಖ, ಝ ಮತ್ತು ಥ ಅಕ್ಷರದಿಂದ ಆರಂಭವಾಗಿದ್ದಲ್ಲಿ ನಿಮ್ಮದು ಉತ್ತರಾಭಾದ್ರ ನಕ್ಷತ್ರವಾಗುತ್ತದೆ.
ಶ್ರೀ ವಿಶ್ವಾವಸು ಸಂವತ್ಸರದಲ್ಲಿ ಉತ್ತರಾಭಾದ್ರ ನಕ್ಷತ್ರದವರ ಭವಿಷ್ಯ
ನಿಮಗೆ ಆತುರದ ಮನಸ್ಥಿತಿ ಇರುವುದಿಲ್ಲ. ನಿಮ್ಮ ಸ್ವಂತ ಕೆಲಸ ಕಾರ್ಯಗಳು ನಿಧಾನಗತಿಯಲ್ಲಿ ಸಾಗುತ್ತವೆ. ಆತುರದ ಗುಣ ಸ್ವಭಾವ ಇರುವುದಿಲ್ಲ. ಆದರೆ ಯಾವುದೇ ವಿಚಾರವಾದರೂ ಧೃಡವಾದ ನಿರ್ಧಾರವನ್ನು ತೆಗೆದುಕೊಳ್ಳಲು ಸಾಧ್ಯವಾಗುವುದಿಲ್ಲ. ಬೇರೆಯವರ ಅಧೀನದಲ್ಲಿ ಕೆಲಸ ಮಾಡುವ ಬದಲು ಸ್ವಂತ ಕೆಲಸ ಕಾರ್ಯಗಳಲ್ಲಿ ನಿರತರಾಗುವಿರಿ. ಮನಸ್ಸಿನಲ್ಲಿ ಸಂಶೋಧನಾ ಬುದ್ದಿ ಇರುತ್ತದೆ. ಸುಧೀರ್ಘ ಪ್ರಯಾಣವನ್ನು ಇಷ್ಟಪಡುವಿರಿ. ಹಣಕಾಸಿನ ವಿಚಾರದಲ್ಲಿ ಬೇರೆಯವರನ್ನು ಆಶ್ರಯಿಸುವಿರಿ. ವಿದ್ಯೆಗೆ ತಕ್ಕಂತಹ ಉದ್ಯೋಗ ಲಭಿಸುತ್ತದೆ. ಜೀವನದಲ್ಲಿ ಹೊಸ ಬದಲಾವಣೆಗಳನ್ನು ಇಷ್ಟಪಡುವಿರಿ. ಆರೋಗ್ಯದಲ್ಲಿ ಎಚ್ಚರ ವಹಿಸಬೇಕು. ನಿಮಗೆ ಅಜೀರ್ಣ ತೊಂದರೆ ಇರುತ್ತದೆ. ಆರಂಭದಲ್ಲಿ ಆರಂಭಿಸುವ ಕೆಲಸ ಕಾರ್ಯದಲ್ಲಿ ಅಡ್ಡಿ ಆತಂಕ ಉಂಟಾಗುತ್ತದೆ.
ಉತ್ತರಾಭಾದ್ರ ನಕ್ಷತ್ರದ 1ನೇ ಪಾದ ಅಥವಾ ಹೆಸರು ದು ಅಕ್ಷರದಿಂದ ಆರಂಭವಾಗುವವರ ಭವಿಷ್ಯ
ಉದ್ಯೋಗದಲ್ಲಿ ಆಸಕ್ತಿ ಉಂಟಾಗುವುದಿಲ್ಲ. ಸ್ವಂತ ವ್ಯಾಪಾರ ವ್ಯವಹಾರದಲ್ಲಿ ಉತ್ತಮ ಲಾಭವಿರುತ್ತದೆ. ಸ್ವಂತ ಉದ್ದಿಮೆ ಇದ್ದವರು ಉತ್ತಮ ಆದಾಯ ಗಳಿಸುತ್ತಾರೆ. ಸುಖ ಶಾಂತಿಯಿಂದ ಜೀವನ ನಡೆಸುವಿರಿ. ಕುಟುಂಬದ ನಾಯಕತ್ವ ನಿಮ್ಮದಾಗಲಿದೆ. ಸಮಾಜ ಸೇವೆ ಮಾಡುವ ಆಸೆಯು ಆತ್ಮೀಯರಿಂದ ಈಡೇರುತ್ತದೆ. ಅನಗತ್ಯವಾದ ವಿವಾದಗಳು ನಿಮ್ಮ ಮನಸ್ಸಿಗೆ ನೋವುಂಟು ಮಾಡುತ್ತದೆ. ಉತ್ತಮ ವಿದ್ಯಾಭ್ಯಾಸವಿದ್ದರೂ ತಕ್ಕನಾದ ಉದ್ಯೋಗ ದೊರೆಯುವುದಿಲ್ಲ. ಅನಿರೀಕ್ಷಿತವಾಗಿ ಎಲ್ಲರೊಂದಿಗೆ ಹೊಂದಿಕೊಂಡು ಬಾಳಬೇಕಾಗುತ್ತದೆ. ಯಾವುದೇ ಕೆಲಸ ಕಾರ್ಯಗಳು ಬೇರೆಯವರ ಸಹಾಯವಿಲ್ಲದೆ ಪರಿಪೂರ್ಣತೆ ಪಡೆಯುವುದಿಲ್ಲ. ಮಕ್ಕಳ ಜೀವನದಲ್ಲಿ ಸಕಾರಾತ್ಮಕ ಬೆಳವಣಿಗೆಗಳು ಕಂಡುಬರುತ್ತವೆ. ಕೋಪವನ್ನು ಹತೋಟಿಯಲ್ಲಿಟ್ಟುಕೊಂಡು ಎಲ್ಲರೊಂದಿಗೆ ಶಾಂತಿಯಿಂದ ವರ್ತಿಸುವುದು ಒಳ್ಳೆಯದು. ಸಾಲದ ವ್ಯವಹಾರದಿಂದ ತೊಂದರೆಗೆ ಸಿಲುಕುವಿರಿ. ಬೇರೆಯವರ ಹಣಕಾಸಿನ ವ್ಯವಹಾರದಲ್ಲಿ ಸಾಕ್ಷಿದಾರರದಲ್ಲಿ ವಿವಾದಕ್ಕೆ ಸಿಲುಕುವಿರಿ. ಸ್ವಂತ ನಿರ್ಧಾರದ ಬದಲು ಅನುಭವಸ್ಥರ ಸಲಹೆ ಪಡೆಯುವುದು ಒಳ್ಳೆಯದು.
ಉತ್ತರಾಭಾದ್ರ ನಕ್ಷತ್ರದ 2ನೇ ಪಾದ ಅಥವಾ ಹೆಸರು ಖ ಅಕ್ಷರದಿಂದ ಆರಂಭವಾಗುವವರ ಭವಿಷ್ಯ
ಹಣಕಾಸಿನ ವ್ಯವಹಾರದಲ್ಲಿ ಉತ್ತಮ ಆದಾಯ ದೊರೆಯುತ್ತದೆ. ಸ್ವಂತ ಉದ್ಯಮ ಇದ್ದಲ್ಲಿ ಅದರ ಕಾರ್ಯವ್ಯಾಪ್ತಿ ಹೆಚ್ಚುತ್ತದೆ. ಉದ್ಯೋಗವನ್ನು ಬದಲಿಸುವ ಅವಕಾಶ ದೊರೆಯುತ್ತದೆ. ದೊರೆಯುವ ಅವಕಾಶಗಳನ್ನು ನಿಮಗೆ ಉಪಯುಕ್ತವಾಗುವ ರೀತಿಯಲ್ಲಿ ಬಳಸುವಿರಿ. ಅತಿಯಾದ ಕೋಪವು ವಿವಾದಕ್ಕೆ ಕಾರಣವಾಗುತ್ತದೆ. ಸದಾಕಾಲ ಶಾಂತಿ ನೆಮ್ಮದಿಯಿಂದ ಬಾಳುವಿರಿ. ಕೋಪದಲ್ಲಿ ತಪ್ಪು ನಿರ್ಧಾರವನ್ನು ತೆಗೆದುಕೊಳ್ಳುವಿರಿ. ಕುಟುಂಬದಲ್ಲಿ ಅನಾವಶ್ಯಕವಾದ ವಾದ ವಿವಾದಗಳು ಕಂಡುಬರುತ್ತದೆ. ವಿದ್ಯಾಭ್ಯಾಸದಲ್ಲಿ ಹೆಚ್ಚಿನ ನಿರೀಕ್ಷೆ ಇರುತ್ತದೆ. ಕುಟುಂಬದ ಗೌರವ ಉಳಿಸಲು ಯಾವುದೇ ತ್ಯಾಗಕ್ಕೆ ಸಿದ್ದರಾಗುವಿರಿ. ಕುಟುಂಬದಲ್ಲಿನ ಹಣಕಾಸಿನ ಪರಿಸ್ಥಿತಿಯಲ್ಲಿ ಪ್ರಗತಿ ಕಂಡುಬರುತ್ತದೆ. ಅನಾವಶ್ಯಕವಾಗಿ ಒಮ್ಮೆ ತೆಗೆದುಕೊಂಡ ನಿರ್ಣಯಗಳನ್ನು ಬದಲಾಯಿಸುವಿರಿ. ಹೊಸ ವಾಹನವನ್ನು ಕೊಳ್ಳುವಿರಿ.
ಉತ್ತರಾಭಾದ್ರ ನಕ್ಷತ್ರದ 3ನೇ ಪಾದ ಅಥವಾ ಹೆಸರು ಝ ಅಕ್ಷರದಿಂದ ಆರಂಭವಾಗುವವರ ಭವಿಷ್ಯ
ಚಿಕ್ಕ ಮಕ್ಕಳ ಆರೋಗ್ಯದಲ್ಲಿ ತೊಂದರೆ ಕಂಡು ಬರುತ್ತದೆ. ಕುಟುಂಬದ ಹಿರಿಯರ ಜೀವನದಲ್ಲಿ ಇದ್ದ ಕಷ್ಟ ಕಾರ್ಪಣ್ಯಗಳು ದೂರವಾಗುತ್ತದೆ. ಸೋದರಿಯ ಸಹಾಯದಿಂದ ಜೀವನದಲ್ಲಿ ಉನ್ನತ ಮಟ್ಟ ತಲುಪುವಿರಿ. ಕುಟುಂಬದಲ್ಲಿ ಎಲ್ಲರೊಡನೆ ಪ್ರೀತಿ ವಿಶ್ವಾಸದಿಂದ ಬಾಳುವಿರಿ. ಯಾವುದೇ ಕೆಲಸ ಕಾರ್ಯವಾದರೂ ಹಠದಿಂದ ಯಶಸ್ಸನ್ನು ಗಳಿಸುವಿರಿ. ಆತುರದಲ್ಲಿ ಆತ್ಮೀಯರ ಹಣಕಾಸಿನ ವಿಚಾರದಲ್ಲಿ ವಿವಾದವನ್ನು ಉಂಟುಮಾಡುವಿರಿ. ಮಕ್ಕಳ ವಿಚಾರದಲ್ಲಿ ಹೆಚ್ಚಿನ ಕಾಳಜಿ ಇರುತ್ತದೆ. ಉದ್ಯೋಗದಲ್ಲಿ ಯಾವುದೇ ಬದಲಾವಣೆಗಳು ಕಾಣುವುದಿಲ್ಲ. ಯಾವುದೇ ನಿರೀಕ್ಷೆಯಿಲ್ಲದೆ ದೊರೆಯುವ ಫಲವನ್ನು ಪಡೆಯಬೇಕಾಗುತ್ತದೆ. ಸೋದರ ಜೊತೆಯಲ್ಲಿ ಪಾಲುಗಾರಿಕೆಯ ವ್ಯಾಪಾರವನ್ನು ಆರಂಭಿಸುವಿರಿ. ಮನೆತನದ ಮನೆಯೊಂದು ನಿಮ್ಮ ಪಾಲಿಗೆ ಬರಲಿದೆ. ಭೂ ವಿವಾದ ಒಂದು ಎದುರಾಗಲಿದೆ.
ಉತ್ತರಾಭಾದ್ರ ನಕ್ಷತ್ರದ 4ನೇ ಪಾದ ಅಥವಾ ಹೆಸರು ಥ ಅಕ್ಷರದಿಂದ ಆರಂಭವಾಗುವವರ ಭವಿಷ್ಯ
ನವಜಾತ ಶಿಶುಗಳ ಆರೋಗ್ಯದಲ್ಲಿ ತೊಂದರೆ ಇರುತ್ತದೆ. ವಯೋವೃದ್ದರ ಆರೋಗ್ಯದಲ್ಲಿ ಚೇತರಿಕೆ ಕಂಡು ಬರುತ್ತದೆ. ದೊರೆತಿರುವ ಅನುಕೂಲತೆಗಳನ್ನು ಮರೆತು ಮನೆತನದ ಮನೆಯಲ್ಲಿ ನೆಲೆಸುವಿರಿ. ಜೀವನದಲ್ಲಿ ಅಭಿವೃದ್ಧಿ ಹೊಂದಲು ಎಲ್ಲರ ಸಹಕಾರ ದೊರೆಯುತ್ತದೆ. ಸಮಯ ಸಂದರ್ಭಕ್ಕೆ ಅನುಸಾರವಾಗಿ ತೀರ್ಮಾನಗಳನ್ನು ತೆಗೆದುಕೊಳ್ಳಬಲ್ಲಿರಿ. ಕುಟುಂಬದ ಜೀವನದಲ್ಲಿ ಕೆಲವೊಂದು ಬದಲಾವಣೆಗಳು ಬೇಸರಕ್ಕೆ ಕಾರಣವಾಗುತ್ತದೆ. ಅವಿವಾಹಿತರಿಗೆ ವಿವಾಹದಲ್ಲಿ ಆಸಕ್ತಿ ಕಡಿಮೆಯಾಗುತ್ತದೆ. ಸ್ತ್ರೀಯರಿಗೆ ಮನದಲ್ಲೇ ವೈರಾಗ್ಯದ ಭಾವನೆ ಮೂಡುತ್ತದೆ. ದೂರದ ಪ್ರದೇಶಕ್ಕೆ ಬೇಸರ ಕಳೆಯಲು ಪ್ರವಾಸ ಬೆಳೆಸುವಿರಿ. ಪಾಲುಗಾರಿಕೆಯ ವ್ಯವಹಾರದಲ್ಲಿ ನಿಮಗೆ ಉತ್ತಮ ಲಾಭಾಂಶ ದೊರೆಯುತ್ತದೆ. ಉದ್ಯೋಗದಲ್ಲಿ ಯಾವುದೇ ಬದಲಾವಣೆಗಳು ಕಂಡುಬರುವುದಿಲ್ಲ. ದೈಹಿಕವಾಗಿ ನಿಶ್ಯಕ್ತರಾಗುವಿರಿ.
ಬರಹ: ಎಚ್. ಸತೀಶ್, ಜ್ಯೋತಿಷಿ.
ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ "ಹಿಂದೂಸ್ತಾನ್ ಟೈಮ್ಸ್ ಕನ್ನಡ" ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ.
