ಯುಗಾದಿ ವರ್ಷ ಭವಿಷ್ಯ: ವಿಶ್ವಾವಸು ಸಂವತ್ಸರದಲ್ಲಿ ಯಾರಿಗೆ ಬೇವು, ಯಾರಿಗೆ ಬೆಲ್ಲ ಮೇಷದಿಂದ ಮೀನದವರಿಗೆ 12 ರಾಶಿಗಳ ವರ್ಷದ ಫಲಾಫಲ
Ugadi Horoscope: ಯುಗಾದಿಯಂದು ಸಂವತ್ಸರ ಬದಲಾಗುತ್ತದೆ. ಈ ಬಾರಿ ವಿಶ್ವಾವಸು ಸಂವತ್ಸರ ಅಸ್ತಿತ್ವಕ್ಕೆ ಬರಲಿದೆ. ಎಲ್ಲ 12 ರಾಶಿಯವರ ಯುಗಾದಿ ಭವಿಷ್ಯವನ್ನು ಇಲ್ಲಿ ತಿಳಿಯಬಹುದು. (ಬರಹ: ಎಚ್.ಸತೀಶ್)

Ugadi Horoscope 2025: ಹಿಂದೂಗಳಿಗೆ ಯುಗಾದಿಯು ಹೊಸ ವರ್ಷ. ವಸಂತ ಋತು, ಚೈತ್ರ ಮಾಸದ ಮೊದಲ ದಿನವಾದ ಪಾಡ್ಯದಿಂದ ಹೊಸ ಪಂಚಾಂಗವೂ ಅಸ್ತಿತ್ವಕ್ಕೆ ಬರುತ್ತದೆ. ಅಂದಿನಿಂದ ಸಂಕಲ್ಪಗಳಲ್ಲಿ ಹೊಸ ಸಂವತ್ಸರದ ಹೆಸರು ಹೇಳಲಾಗುತ್ತದೆ. ನಮ್ಮೆಲ್ಲ ಓದುಗರಿಗೆ ಶ್ರೀ ವಿಶ್ವಾವಸು ಸಂವತ್ಸರವು ಸಕಲ ಸನ್ಮಂಗಳಗಳನ್ನೂ ಉಂಟು ಮಾಡಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತಾ ವರ್ಷ ಭವಿಷ್ಯ ತಿಳಿಸುವ ಪ್ರಯತ್ನ ಮಾಡಿದ್ದೇವೆ. ವರ್ಷ ಭವಿಷ್ಯದಲ್ಲಿ ಗುರು, ಶನಿ, ರಾಹು ಮತ್ತು ಕೇತು ಗ್ರಹಗಳ ಸಂಚಾರವು ಅತಿ ಮುಖ್ಯವಾಗುತ್ತದೆ. ವಿಶ್ವಾವಸು ಸಂವತ್ಸರವು 2025ರ ಮಾರ್ಚ್ 30 ರಂದು ಆರಂಭವಾಗುತ್ತದೆ. 2025ರ ಮಾರ್ಚ್ 29ರ ಬಳಿಕ ಕೆಲವು ಗ್ರಹಗಳ ರಾಶಿಯ ಪ್ರವೇಶ ಮಾಡುತ್ತವೆ.
ಮೀನದಲ್ಲಿ ರಾಹು, ಕನ್ಯಾ ರಾಶಿಯಲ್ಲಿ ಕೇತು ಸಂಚರಿಸುತ್ತಾರೆ. ಈ ಗ್ರಹಗಳ ನಡೆಯ ಅನ್ವಯ ವರ್ಷ ಭವಿಷ್ಯವನ್ನು ನಿರ್ಧರಿಸಬೇಕಾಗುತ್ತದೆ ನಕ್ಷತ್ರವನ್ನು ತಿಳಿಯದೆ ಇರುವವರು ರವಿಯನ್ನು ಆಧರಿಸಿ ವರ್ಷ ಭವಿಷ್ಯವನ್ನು ಅನ್ವಯಿಸಿಕೊಳ್ಳಬಹುದು. ವ್ಯಕ್ತಿ ನೆಲೆಯಲ್ಲಿ ಭವಿಷ್ಯವನ್ನು ಖಚಿತವಾಗಿ ಹೇಳಲು, ಸರಿಯಾದ ನಿರ್ಣಯಕ್ಕೆ ಬರಲು ಜನ್ಮ ಜಾತಕ ಫಲವನ್ನೂ ಪರಿಶೀಲಿಸಬೇಕಾಗುತ್ತದೆ. 2025ರ ಮಾರ್ಚ್ 29 ರವರೆಗೆ ಕ್ರೋಧಿನಾಮ ಸಂವತ್ಸವರ ಅಸ್ತಿತ್ವದಲ್ಲಿರುತ್ತದೆ. ಆ ನಂತರ ಅಂದರೆ 2025ರ ಮಾರ್ಚ್ 30ರ ಭಾನುವಾರ ಬರುವ ಯುಗಾದಿ ಹಬ್ಬದಿಂದ ವಿಶ್ವಾವಸು ಸಂವತ್ಸರ ಚಾಲ್ತಿಗೆ ಬರಲಿದೆ. ಇಲ್ಲಿರುವ ರಾಶಿ ಭವಿಷ್ಯವನ್ನು ಒಂದು ವರ್ಷದ ಗ್ರಹ ಸಂಚಾರವನ್ನು ಲೆಕ್ಕ ಹಾಕಿ ನೀಡಲಾಗಿದೆ.
ಮೇಷ ರಾಶಿ
ನಿಮ್ಮ ನಿರೀಕ್ಷೆಗೂ ಮೀರಿದ ಶುಭಫಲಗಳು ದೊರೆಯುತ್ತವೆ. ಆದರೆ ಆರಂಭಿಸಿದ ಕೆಲಸ ಕಾರ್ಯಗಳು ನಿಧಾನ ಗತಿಯಲ್ಲಿ ಸಾಗುತ್ತವೆ. ಸಣ್ಣ ಪುಟ್ಟ ಮಕ್ಕಳ ಜೀವನದಲ್ಲಿ ಬದಲಾವಣೆಗಳು ಇರಲಿವೆ. ಆದಾಯದಲ್ಲಿ ತೊರತೆ ಕಾಣುವುದಿಲ್ಲ. ಆದರೆ ಹಣದ ಉಳಿಕೆ ಕಷ್ಟಸಾಧ್ಯ. ಜನಪ್ರಿಯತೆ ಮತ್ತು ಗೌರವ ತಾನಾಗಿಯೇ ಲಭಿಸುತ್ತದೆ. ಆಪ್ತರ ಸಂಖ್ಯೆ ಬಹಳ ಕಡಿಮೆ. ಎಲ್ಲರಿಂದಲೂ ದೂರ ಉಳಿದು ಅಂತರ ಕಾಪಾಡಿಕೊಳ್ಳುವಿರಿ. ಸ್ವತಂತ್ರವಾಗಿ ಸಂಪಾದಿಸುವ ಸುಲಭವಾದ ಹಾದಿ ಹುಡುಕುವಿರಿ. ಉಂದಾಳತ್ವದ ಗುಣ ನಿಮ್ಮಲ್ಲಿರುತ್ತದೆ. ಸ್ತ್ರೀಯರ ಆರೋಗ್ಯದಲ್ಲಿ ತೊಂದರೆ ಕಂಡುಬರುತ್ತದೆ. ಯೋಚಿಸದೆ ತೆಗೆದುಕೊಳ್ಳುವ ತೀರ್ಮಾನಗಳಿಂದ ವಿವಾದ ಉಂಟಾಗುತ್ತದೆ. ಕೌಟುಂಬಿಕ ಜೀವನ ಸುಖಮಯವಾಗಿರುತ್ತದೆ. ಉದ್ಯೋಗದ ವಿಚಾರವಾಗಿ ದೂರದ ಸ್ಥಳಕ್ಕೆ ತೆರಳುವಿರಿ. ಮೇಲ್ದರ್ಜೆಯ ಅಧಿಕಾರಿಗಳನ್ನು ಭೇಟಿಮಾಡುವಿರಿ. ಯಾರ ಬಗ್ಗೆಗೂ ದ್ವೇಷದ ಭಾವನೆ ಇರುವುದಿಲ್ಲ. ನಿಮ್ಮ ರೀತಿ ನೀತಿಗಳು ಮಕ್ಕಳಿಗೆ ಇಷ್ಟವಾಗುವುದಿಲ್ಲ. ಯಾವುದೇ ರೀತಿಯ ಅತಿಯಾದ ಆಸೆ ನಿಮ್ಮದಾಗಿರುವುದಿಲ್ಲ. ಹೊಂದಾಣಿಕೆಯ ಗುಣ ನಿಮಗಿರುತ್ತದೆ.
ಮೇಷ ರಾಶಿಯವರ ವಿಶ್ವಾವಸು ಸಂವತ್ಸರದ ವಿಸ್ತೃತ ವರ್ಷ ಭವಿಷ್ಯದ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ
ವೃಷಭ ರಾಶಿ
ಉತ್ತಮ ಪ್ರಯತ್ನವಿದ್ದರೂ ಕೆಲಸ ಕಾರ್ಯಗಳು ಆಮೆ ವೇಗದಲ್ಲಿ ಸಾಗುತ್ತವೆ. ಕುಟುಂಬದ ವಿಚಾರಗಳು ನಿಮ್ಮ ಮನಸ್ಸಿಗೆ ವಿರುದ್ಧವಾಗಿರುತ್ತವೆ. ವಿದ್ಯಾರ್ಜನೆಯಲ್ಲಿ ಸದಾ ಮುಂಚೂಣಿಯಲ್ಲಿ ಇರುವಿರಿ. ಅಜೀರ್ಣದ ತೊಂದರೆ ಸದಾ ನಿಮ್ಮನ್ನು ಕಾಡುತ್ತದೆ. ನಿಮಗಿರುವ ಹಾಸ್ಯ ಪ್ರಜ್ಞೆಯು ವಿಶೇಷವಾಗಿರುತ್ತದೆ. ಸುಲಭವಾಗಿ ಕೌಟುಂಬಿಕ ಕಲಗಳು ಪರಿಹಾರಗೊಳ್ಳುತ್ತವೆ. ಹಣಗಳಿಕೆಯ ಬಗ್ಗೆ ಹೆಚ್ಚಿನ ಆಸಕ್ತಿ ಇರುತ್ತದೆ. ನಿಮ್ಮ ಬಗ್ಗೆ ಎಲ್ಲರಿಗೂ ಮೆಚ್ಚುಗೆ ಮತ್ತು ಗೌರವ ಇರುತ್ತದೆ. ದಂಪತಿ ಮಕ್ಕಳ ಜೊತೆ ಸಂತೋಷದಿಂದ ಬಾಳುತ್ತಾರೆ. ದುರಾಸೆ ಇರುವುದಿಲ್ಲ. ವಿಶ್ರಾಂತಿಯ ಕೊರತೆ ನಿಮ್ಮನ್ನು ಕಾಡಲಿದೆ. ಕುಟುಂಬದ ಒಳಿತಿಗಾಗಿ ಧಾರ್ಮಿಕ ಕಾರ್ಯಗಳನ್ನು ಹಮ್ಮಿಕೊಳ್ಳುವಿರಿ. ವಿವಾದಗಳಿಗೆ ಅಂತ್ಯ ಕಾಣುತ್ತದೆ. ಸ್ವಂತ ಕೆಲಸಗಳಿಗೆ ಸಮಯವನ್ನು ಮುಡುಪಾಗಿಡುವಿರಿ. ಸಾಲದ ವ್ಯವಹಾರದಲ್ಲಿ ನಂಬಿಕೆ ಇರುವುದಿಲ್ಲ. ತಪ್ಪಾದ ಹಾದಿಯಲ್ಲಿ ಇರುವವರ ಮನಸ್ಸನ್ನು ಬದಲಾಯಿಸುವಿರಿ. ಹೊಗಳುವವರನ್ನು ನಂಬುವುದಿಲ್ಲ. ಆತ್ಮೀಯರ ತಪ್ಪನ್ನು ಮನ್ನಿಸುವಿರಿ. ನಿತ್ಯಜೀವನದಲ್ಲಿ ನೆಮ್ಮದಿ ಇರುತ್ತದೆ. ಹಠದ ಗುಣ ನಿಮ್ಮನ್ನು ಹೊಸ ಹಾದಿಯಲ್ಲಿ ನಡೆಸುತ್ತದೆ.
ವೃಷಭ ರಾಶಿಯವರ ವಿಶ್ವಾವಸು ಸಂವತ್ಸರದ ವಿಸ್ತೃತ ವರ್ಷ ಭವಿಷ್ಯದ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಮಿಥುನ ರಾಶಿ
ಆದಾಯವಿದ್ದರೂ ಹಣವನ್ನು ಉಳಿಸಲಾಗದು. ಮನಸ್ಸಿನಲ್ಲಿ ಅನಾವಶ್ಯಕ ಯೋಚನೆ ಇರುತ್ತದೆ. ಹಿರಿಯರ ಬಗ್ಗೆ ಕಾಳಜಿ ಇರುತ್ತದೆ. ಆತಂಕ ವೇಳೆಯನ್ನು ಸಮರ್ಥವಾಗಿ ನಿರ್ವಹಿಸುವಿರಿ. ಮಕ್ಕಳ ಜೀವನದಲ್ಲಿ ಸಕಾರಾತ್ಮಕ ಬದಲಾವಣೆಗಳು ಉಂಟಾಗುತ್ತವೆ. ದೇವತಾ ಕಾರ್ಯಗಳಲ್ಲಿ ಭಾಗವಹಿಸುವಿರಿ. ಸಮಾಜದ ಹಿರಿಯ ವ್ಯಕ್ತಿಗಳ ಸಂಪರ್ಕ ದೊರೆಯುತ್ತದೆ. ನಿಮ್ಮ ನಿಷ್ಠುರದ ನಡವಳಿಕೆ ಕೆಲವರಲ್ಲಿ ಬೇಸರ ಉಂಟುಮಾಡುತ್ತದೆ. ಕುಟುಂಬದಲ್ಲಿ ಹೊಂದಾಣಿಕೆಯ ಗುಣ ಇರುವುದಿಲ್ಲ. ಅನಾರೋಗ್ಯ ಇರುತ್ತದೆ. ಕುಟುಂಬದ ಹಿರಿಯರಿಂದ ಹಣದ ಸಹಾಯ ಇರುತ್ತದೆ. ಕುಟುಂಬದ ಕೆಲಸ ಕಾರ್ಯಗಳಲ್ಲಿ ಹೆಚ್ಚಿನ ಆಸಕ್ತಿ ಇರುವುದಿಲ್ಲ. ಆಸಕ್ತಕರ ವಿಚಾರಗಳ ಬಗ್ಗೆ ಅಧ್ಯಯನ ಮಾಡುವಿರಿ. ಪತಿ ಅಥವಾ ಪತ್ನಿಯಿಂದ ಜೀವನದ ನೋವುಗಳು ದೂರವಾಗುತ್ತವೆ. ಉದ್ಯೋಗದಲ್ಲಿ ಕಠಿಣವಾದ ಸಮಸ್ಯೆಗಳನ್ನು ಎದುರಿಸುವಿರಿ. ದ್ವೇಷದ ಭಾವನೆ ಇರುವುದಿಲ್ಲ. ಆಂತರಿಕ ಶತ್ರುಗಳು ಅಧಿಕವಾಗಿರುತ್ತಾರೆ. ಮಾತಿನಲ್ಲಿ ನಿಮ್ಮನ್ನು ಗೆಲ್ಲಲಾಗುವುದಿಲ್ಲ. ವಿದ್ಯಾರ್ಥಿಗಳಿಗೆ ವಿಶೇಷವಾದ ಅವಕಾಶಗಳು ದೊರೆಯುತ್ತವೆ. ಪ್ರತಿಯೊಂದು ವಿಚಾರದಲ್ಲಿಯೂ ಆಸಕ್ತಿ ತೋರುವಿರಿ.
ಮಿಥುನ ರಾಶಿಯವರ ವಿಶ್ವಾವಸು ಸಂವತ್ಸರದ ವಿಸ್ತೃತ ವರ್ಷ ಭವಿಷ್ಯದ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಕಟಕ ರಾಶಿ
ಅಲ್ಪ ಸಮಯದಲ್ಲಿ ಉನ್ನತ ಗೌರವ ಗಳಿಸುವಿರಿ. ಉದ್ಯೋಗದಲ್ಲಿನ ಬದಲಾವಣೆಗಳಿಗೆ ಹೊಂದಿಕೊಂಡು ನಡೆಯುವಿರಿ. ಹಣದ ಕೊರತೆ ಇರುವುದಿಲ್ಲ. ತಂದೆಯವರ ಜೀವನದಲ್ಲಿ ಅನಿರೀಕ್ಷಿತ ಸಮಸ್ಯೆಯೊಂದು ಎದುರಾಗುತ್ತದೆ. ಮಕ್ಕಳಿಗೆ ಉನ್ನತ ಮಟ್ಟದ ವಿದ್ಯೆ ಅಥವಾ ಉದ್ಯೋಗ ದೊರೆಯುತ್ತದೆ. ಕುಟುಂಬದ ಹಿರಿಯರ ಆರೋಗ್ಯದಲ್ಲಿ ಏರಿಳಿತ ಕಂಡು ಬರುತ್ತದೆ. ಹೆಣ್ಣು ಮಕ್ಕಳಿಗೆ ಅನುಕೂಲತೆಗಳು ದೊರೆಯುತ್ತವೆ. ಸಮಾಜದಲ್ಲಿ ವಿಶೇಷ ಗೌರವ ದೊರೆಯುತ್ತದೆ. ಆತ್ಮೀಯರನ್ನೂ ಸಹ ಅನುಮಾನದಿಂದ ನೋಡುವಿರಿ. ಮಕ್ಕಳ ಬಗ್ಗೆ ಚಿಂತೆಗೆ ಒಳಗಾಗುವಿರಿ. ನಿಮ್ಮ ಸ್ಥಾನ ಮಾನವನ್ನು ಉಳಿಸಿಕೊಳ್ಳುವಿರಿ. ಸ್ವಂತ ಕೆಲಸಗಳಿಗೆ ಪ್ರಾಮುಖ್ಯ ನೀಡುವಿರಿ. ಕುಟುಂಬದ ಸದಸ್ಯರ ಜೊತೆಯಲ್ಲಿ ಪ್ರಯಾಣ ಬೆಳೆಸುವಿರಿ. ಕುಟುಂಬದ ಹಿರಿಯರಿಗೆ ಅನಾರೋಗ್ಯ ಇರುತ್ತದೆ. ನೆರೆಹೊರೆಯವರ ವಿಶ್ವಾಸ ಗಳಿಸುವಿರಿ. ಆತುರದ ನಿರ್ಧಾರದಿಂದ ತೊಂದರೆಗೆ ಒಳಗಾಗುವಿರಿ. ಸ್ವಂತ ನಿರ್ಧಾರಗಳಿಗೆ ಬದ್ದರಾಗುವಿರಿ. ಪ್ರತಿಸ್ಪರ್ಧಿಗಳನ್ನು ಎದುರಿಸಿ ಜಯ ಗಳಿಸುವಿರಿ. ಸಮಯವನ್ನು ವ್ಯರ್ಥಮಾಡದೆ ಹೊಸ ವಿಚಾರಗಳ ಅಧ್ಯಯನ ಮಾಡುವಿರಿ.
ಕಟಕ ರಾಶಿಯವರ ವಿಶ್ವಾವಸು ಸಂವತ್ಸರದ ವಿಸ್ತೃತ ವರ್ಷ ಭವಿಷ್ಯದ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಸಿಂಹ ರಾಶಿ
ಆರೋಗ್ಯದಲ್ಲಿ ತೊಂದರೆ ಇದ್ದರೂ ತ್ವರಿತ ಚೇತರಿಕೆ ಕಂಡು ಬರುತ್ತದೆ. ಪ್ರಯೋಜನವಿಲ್ಲದ ವಿಚಾರಗಳಿಂದ ಮಾನಸಿಕ ಇರುತ್ತದೆ. ಅನಗತ್ಯ ಮಾತುಕತೆ ಇಷ್ಟವಾಗುವುದಿಲ್ಲ. ಮೌನ ಏಕಾಂತದಲ್ಲಿ ನೆಮ್ಮದಿ ಕಾಣುವಿರಿ. ಪ್ರವಾಸಗಳಿಗೆ ಹಣ ವೆಚ್ಚಮಾಡುವಿರಿ. ವಿದ್ಯಾರ್ಥಿಗಳಿಗೆ ಶುಭವಿದೆ. ಸಮಾಜದಲ್ಲಿ ಗೌರವದ ಸ್ಥಾನ ಅಲಕಂರಿಸುವಿರಿ. ಎಲ್ಲರನ್ನೂ ಸ್ನೇಹದ ಮನೋಭಾವದಿಂದ ನೋಡುವಿರಿ. ಉತ್ತಮ ಆರೋಗ್ಯ ಇರುತ್ತದೆ. ದಾಂಪತ್ಯದಲ್ಲಿನ ಒಡುಕು ಬಹುಕಾಲ ಇರುವುದಿಲ್ಲ. ಮಕ್ಕಳ ಆರೋಗ್ಯದ ಬಗ್ಗೆ ಕಾಳಜಿ ಇರಲಿ. ಮುಂಗೋಪಿಗಳು. ಕುಟುಂಬದ ಸದಸ್ಯರನ್ನು ಮಾತ್ರ ನಂಬುತ್ತೀರಿ. ಬೇಡದ ಜವಾಬ್ದಾರಿಗಳಿಂದ ಮಾನಸಿಕ ಒತ್ತಡಕ್ಕೆ ಒಳಗಾಗುವಿರಿ. ಆಯ್ದ ವ್ಯಕ್ತಿಗಳಿಗೆ ಸಹಾಯ ಮಾಡುವಿರಿ. ಅತಿಯಾದ ಆಸೆ ಇರುವುದಿಲ್ಲ. ದೊರೆತ ಅವಕಾಶಗಳನ್ನು ಸದ್ಬಳಕೆ ಮಾಡಿಕೊಳ್ಳುವಿರಿ. ಹಣವನ್ನು ಸರಿಯಾದ ಹಾದಿಯಲ್ಲಿ ಬಲಸುವಿರಿ. ಪ್ರತ್ಯೇಕತೆಯನ್ನು ಇಷ್ಟಪಡುವಿರಿ. ಮಾತು ಮತ್ತು ಮನಸ್ಸು ಶುಭ್ರವಾಗಿರುತ್ತದೆ. ಎಲ್ಲರನ್ನೂ ಅನುಮಾನದಲ್ಲಿಯೇ ನೋಡುವಿರಿ. ಸೇಡಿನ ಮನೋಭಾವನೆ ಇರುವುದಿಲ್ಲ. ಶಾಸ್ತ್ರ ಸಂಪ್ರದಾಯದಲ್ಲಿ ನಂಬಿಕೆ ಇರುತ್ತದೆ.
ಸಿಂಹ ರಾಶಿಯವರ ವಿಶ್ವಾವಸು ಸಂವತ್ಸರದ ವಿಸ್ತೃತ ವರ್ಷ ಭವಿಷ್ಯದ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಕನ್ಯಾ ರಾಶಿ
ಆರಂಭಿಸಿದ ಕೆಲಸ ಕಾರ್ಯದಲ್ಲಿ ಯಶಸ್ಸು ದೊರೆಯುತ್ತದೆ. ಉದ್ಯೋಗದಲ್ಲಿ ಆತಂಕದ ಪರಿಸ್ಥಿತಿ ಇರುತ್ತದೆ. ಮಕ್ಕಳನ್ನು ಸನ್ಮಾರ್ಗದಲ್ಲಿ ಬೆಳಸುವಿರಿ. ಶಾಂತಸ್ವಭಾವಿಗಳಾದರೂ ಸಮಸ್ಯೆಗಳು ಎದುರಾದಲ್ಲಿ ಒರಟಾಗಿ ವರ್ತಿಸುವಿರಿ. ಆತ್ಮವಿಶ್ವಾಸ ನಿಮಗೆ ಆಸರೆಯಾಗುತ್ತದೆ. ಕುಟುಂಬದಲ್ಲಿ ಉತ್ತಮ ಸಹಕಾರ ದೊರೆಯುತ್ತದೆ. ಹೆಸರು ಗಳಿಸುವ ಸಲುವಾಗಿ ದೊಡ್ಡ ದೊಡ್ಡ ಜವಾಬ್ದಾರಿಯನ್ನು ಒಪ್ಪಿಕೊಳ್ಳುವಿರಿ. ಹಣದ ತೊಂದರೆ ಇರುವುದಿಲ್ಲ. ಬಾಳ ಸಂಗಾತಿಯ ಸಹಾಯ ನಿಮಗಿರುತ್ತದೆ. ಅತಿಯಾಗಿ ತಿನ್ನುವ ಅಭ್ಯಾಸಕ್ಕೆ ಒಳಗಾಗುವಿರಿ. ಆಡಂಬರದ ಜೀವನ ಇಷ್ಟಪಡುವುದಿಲ್ಲ. ಸಾಕುಪ್ರಾಣಿಗಳಿಗಾಗಿ ಹೆಚ್ಚಿನ ಹಣ ಖರ್ಚಾಗುತ್ತದೆ. ವ್ಯಾಪಾರ ವ್ಯವಹಾರದಲ್ಲಿ ಆತುರ ಪಡುವುದಿಲ್ಲ. ಉದ್ಯೋಗದಲ್ಲಿ ಉನ್ನತಿ ಇರುತ್ತದೆ. ಹಠದಿಂದ ಗೆಲುವನ್ನು ಸಾಧಿಸುವಿರಿ. ಅವಿವಾಹಿತರಿಗೆ ವಿವಾಹಯೋಗವಿದೆ. ಎಲ್ಲರ ಜೊತೆ ಸ್ನೇಹದಿಂದ ಬಾಳುವಿರಿ. ವಾದದಲ್ಲಿ ನಿಮ್ಮನ್ನು ಸೋಲಿಸಲಾಗದು. ಜನಸೇವೆಯಲ್ಲಿ ಆಸಕ್ತಿ ಉಂಟಾಗುತ್ತದೆ.ವಿದ್ಯಾರ್ಥಿಗಳು ಕಲಿಕೆಯಲ್ಲಿ ಅಗ್ರ ಗಣ್ಯರಾಗುತ್ತಾರೆ. ಹಣವನ್ನು ಉಳಿಸುವ ಯೋಜನೆ ರೂಪಿಸುವಿರಿ. ಯಾವುದೇ ಸನ್ನಿವೇಶವನ್ನು ನಿಮಗೆ ಲಾಭವಾಗುವಂತೆ ಬದಲಾಯಿಸುವಿರಿ.
ಕನ್ಯಾ ರಾಶಿಯವರ ವಿಶ್ವಾವಸು ಸಂವತ್ಸರದ ವಿಸ್ತೃತ ವರ್ಷ ಭವಿಷ್ಯದ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ
ತುಲಾ ರಾಶಿ
ಮಾತು ಕಡಿಮೆ ಮಾಡಿ ಕೆಲಸವನ್ನು ಹೆಚ್ಚುಮಾಡುವಿರಿ. ಉದ್ಯೋಗದಲ್ಲಿ ನೆಮ್ಮದಿ ಇರುವುದಿಲ್ಲ. ಅನಾರೋಗ್ಯ ಇರುತ್ತದೆ. ಹಣದ ಕೊರತೆ ಇರುವುದಿಲ್ಲ. ಅತಿಯಾಗಿ ಖರ್ಚು ಮಾಡುವುದಿಲ್ಲ. ಮೌನದಿಂದ ಕೆಲಸ ಸಾಧಿಸುವಿರಿ. ಉದ್ಯೋಗದಲ್ಲಿ ಉತ್ತಮ ಸಹಕಾರ ಇರುವುದಿಲ್ಲ. ವಿದ್ಯಾರ್ಥಿಗಳಿಗೆ ಶುಭವಿದೆ. ಕುಟುಂಬದಲ್ಲಿ ಸಹಕಾರದ ಮನೋಭಾವನೆ ಇರುತ್ತದೆ. ನಿಧಾನಗತಿಯಲ್ಲಿ ಎದುರಾಗುವ ಸಮಸ್ಯೆಗಳಿಂದ ಪಾರಾಗುವಿರಿ. ಕಷ್ಟದಲ್ಲಿ ಇದ್ದ ಆತ್ಮೀಯರಿಗೆ ಸಹಾಯ ಮಾಡುವಿರಿ. ಸುಖ ಸಂತೃಪ್ತಿಯಿಂದ ಜೀವನ ನಡೆಸುವಿರಿ. ನೀವು ಬೇರೆಯವರ ಅನುಭವದಿಂದ ಪಾಠ ಕಲಿಯುವಿರಿ. ವಿವಿಧ ವಿಚಾರದಲ್ಲಿ ಆಸಕ್ತಿ ತೋರುವಿರಿ. ಅಧಿಕಾರಿಗಳಿಗೆ ಶುಭವಿದೆ. ನಿಮ್ಮದಲ್ಲದ ತಪ್ಪಿಗೆ ಕುಟುಂಬದವರ ವಿರೋಧಕ್ಕೆ ಗುರಿಯಾಗುವಿರಿ. ಎಲ್ಲರನ್ನೂ ಸಮಾನ ಭಾವನೆಯಿಂದ ನೋಡುವಿರಿ. ಕುಟುಂಬದ ಹಿರಿಯರ ಆರೋಗ್ಯದಲ್ಲಿ ಚೇತರಿಕೆ ಉಂಟಾಗುತ್ತದೆ. ನಯವಾದ ಮಾತುಗಾರಿಕೆಯಿಂದ ಎಲ್ಲರ ಮನ ಗೆಲ್ಲುವಿರಿ. ವಾಸ ಸ್ಥಳ ಬದಲಾಗುತ್ತದೆ. ಸೋದರಿಯ ಜೀವನದಲ್ಲಿನ ಸಮಸ್ಯೆಯನ್ನು ದೂರ ಮಾಡುವಿರಿ.
ತುಲಾ ರಾಶಿಯವರ ವಿಶ್ವಾವಸು ಸಂವತ್ಸರದ ವಿಸ್ತೃತ ವರ್ಷ ಭವಿಷ್ಯದ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ
ವೃಶ್ಚಿಕ ರಾಶಿ
ಉತ್ತಮ ಆರೋಗ್ಯವನ್ನು ಕಾಪಾಡಿಕೊಳ್ಳುವಿರಿ. ಉತ್ತಮ ಆದಾಯ ಇರುತ್ತದೆ. ಕಷ್ಟಕ್ಕೆ ಹೆದರದೆ ಸಂದರ್ಭೋಜಿತ ತೀರ್ಮಾನವನ್ನು ತೆಗೆದುಕೊಳ್ಳುವಿರಿ. ಸದಾ ಚುರುಕಿನಿಂದ ವರ್ತಿಸುವಿರಿ. ಮಕ್ಕಳ ತಪ್ಪನ್ನು ಒಪ್ಪವುದಿಲ್ಲ. ಆದರೆ ಶಿಕ್ಷಿಸುವುದೂ ಇಲ್ಲ. ಮಾತನ್ನು ಕಡಿಮೆ ಮಾಡಿ ಮೌನದಿಂದ ಬಾಳುವಿರಿ. ನಿಮ್ಮನ್ನು ನಿಮ್ಮ ಬಂಧುಗಳು ವಿಶೇಷವಾಗಿ ಗೌರವಿಸುತ್ತಾರೆ. ಧಾರ್ಮಿಕ ಕ್ಷೇತ್ರದಲ್ಲಿ ಲಾಭವಿದೆ. ವಿರೋಧಿಗಳು ಬಳಿಯೆ ಇದ್ದರೂ ಬುದ್ಧಿವಂತಿಕೆಯಿಂದ ವರ್ಥಿಸುವಿರಿ. ಸಾಮಾಜಿಕ ನಾಯಕರಾಗಿ ಜನಪ್ರಿಯತೆ ಗಳಿಸುರಿವಿರಿ. ಹಠದಿಂದ ಜಯ ಗಳಿಸುವಿರಿ. ಕುಟುಂಬದಲ್ಲಿ ಬೇಸರ ಮನೆಮಾಡಿರುತ್ತದೆ. ಮನೆಮಂದಿಯ ಉದ್ಯೋಗದಲ್ಲಿ ಸಮಸ್ಯೆಗಳು ಎದುರಾಗಲಿದೆ. ಬೇಸರದಿಂದ ಹೊರಬರಲು ದೀರ್ಘಕಾಲದ ಪ್ರವಾಸಕ್ಕೆ ತೆರಳುವಿರಿ. ಹೊಸ ವಾಹನ ಮನೆಯನ್ನು ಕೊಳ್ಳುವಿರಿ. ಆರೋಗ್ಯದ ಬಗ್ಗೆ ಕಾಳಜಿ ತೋರುವಿರಿ. ಆತ್ಮೀಯರ ಮನಸ್ಸನ್ನು ಅರಿಯಲು ವಿಫಲರಾಗುವಿರಿ. ನೆರೆಹೊರೆಯವರ ಜೊತೆ ಉತ್ತಮ ಬಾಂಧವ್ಯ ಇರುವುದಿಲ್ಲ. ಆಕರ್ಷಕ ವಸ್ತುಗಳನ್ನು ಕೊಳ್ಳಲು ಹಣವನ್ನು ಖರ್ಚು ಮಾಡುವಿರಿ. ಬೇರೆಯವರ ಸಲಹೆಯನ್ನು ಒಪ್ಪುವುದಿಲ್ಲ.
ವೃಶ್ಚಿಕ ರಾಶಿಯವರ ವಿಶ್ವಾವಸು ಸಂವತ್ಸರದ ವಿಸ್ತೃತ ವರ್ಷ ಭವಿಷ್ಯದ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಧನು ರಾಶಿ
ಅನಾರೋಗ್ಯವಿರುತ್ತದೆ. ವಯೋವೃದ್ಧರ ಮನಸ್ಥಿತಿ ಚೆನ್ನಾಗಿರುತ್ತದೆ. ಯಾರಿಗೂ ತಲೆಬಾಗಿ ಬಾಳುವುದಿಲ್ಲ. ಅಜೀರ್ಣದ ತೊಂದರೆ ಇರುತ್ತದೆ. ಅನಾವಶ್ಯಕ ಖರ್ಚುವೆಚ್ಚಗಳು ಇರಲಿವೆ. ವಿದೇಶಕ್ಕೆ ತೆರಳುವಿರಿ. ಅಪಾಯದ ಸನ್ನಿವೇಶದಲ್ಲಿ ಬುದ್ದಿವಂತಿಕೆಯ ನಿರ್ಧಾರವನ್ನು ತೆಗೆದುಕೊಳ್ಳುವಿರಿ. ಕುಟುಂಬದ ಹಿರಿಯರ ಸಹಾಯ ನಿಮಗಿರುತ್ತದೆ. ಕುಟುಂಬದ ಹಿರಿಯರ ಜವಾಬ್ದಾರಿಯು ನಿಮ್ಮದಾಗುತ್ತದೆ. ಹೊಗಳಿಕೆಗೆ ಮಾರುಹೋಗುವಿರಿ. ದಿಢೀರನೆ ಕೋಪವು ಬರುತ್ತದೆ. ಮೊದಲು ತೆಗೆದುಕೊಂಡ ನಿರ್ಧಾರದಂತೆ ನಡೆದುಕೊಳ್ಳುವಿರಿ. ಸ್ವಂತ ನಿರ್ಧಾರಗಳಿಂದ ಆಪತ್ತಿನಿಂದ ಪಾರಾಗುವಿರಿ. ನಿಮಗೆ ಅನುಕರಣೀಯ ಗುಣ ಇರುತ್ತದೆ. ಮನದಲ್ಲಿ ಯಾವುದೋ ಹೆದರಿಕೆ ಮನೆ ಮಾಡಿರುತ್ತದೆ. ನಿಮ್ಮಲ್ಲಿರುವ ವಿದ್ಯೆಯೇ ನಿಮ್ಮ ಜೀವನಕ್ಕೆ ಆಧಾರವಾಗುತ್ತದೆ. ಹಣದ ಮೇಲೆ ಅತಿಯಾದ ಆಸೆ ಇರುವುದಿಲ್ಲ. ಒಂಟಿತನವನ್ನು ಇಷ್ಟಪಡುವಿರಿ. ವಿದ್ಯಾರ್ಥಿಗಳಿಗೆ ಆತ್ಮವಿಶ್ವಾಸದ ಕೊರತೆ ಇರುತ್ತದೆ. ಗಾಳಿ ವರ್ತಮಾನಗಳನ್ನು ಹಾಸ್ಯಾಸ್ಪದವಾಗಿ ಸ್ವೀಕರಿಸುವಿರಿ. ನಿಮ್ಮ ಸಂತೋಷವನ್ನು ಎಲ್ಲರಿಗೂ ಹಂಚುವಿರಿ. ದಂಪತಿಯಲ್ಲಿ ಉತ್ತಮ ಹೊಂದಾಣಿಕೆ ಇರುತ್ತದೆ. ಸಾಲದ ವ್ಯವಹಾರವು ಇಷ್ಟವಾಗುವುದಿಲ್ಲ.
ಧನು ರಾಶಿಯವರ ವಿಶ್ವಾವಸು ಸಂವತ್ಸರದ ವಿಸ್ತೃತ ವರ್ಷ ಭವಿಷ್ಯದ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಮಕರ ರಾಶಿ
ಜೀವನದಲ್ಲಿನ ಬದಲಾವಣೆಗಳಿಗೆ ಹೊಂದಿಕೊಳ್ಳುವಿರಿ. ಹಣಕಾಸಿನ ನಿರ್ವಹಣೆಯಲ್ಲಿ ವಿಶೇಷವಾದ ಜ್ಞಾನ ಇರುತ್ತದೆ. ಸಮಾಜದಲ್ಲಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗುವಿರಿ. ಕೇಳುಗರಿಗೆ ಬೇಸರ ಉಂಟಾಗುವ ಮಟ್ಟದಲ್ಲಿ ಮಾತನಾಡುವಿರಿ. ಬಾಕಿ ಉಳಿದ ಕೆಲಸಗಳಿಗೆ ಮೊದಲ ಆದ್ಯತೆ ನೀಡುವಿರಿ. ಹಣಕಾಸು ಸಂಸ್ಥೆಯನ್ನು ಸ್ಥಾಪಿಸುವ ಸೂಚನೆಗಳಿವೆ. ಅಧಿಕಾರದ ಆಸೆ ಇರುವುದಿಲ್ಲ. ಕುಟುಂಬದ ಒಳಿತಿಗಾಗಿ ಯಾವುದೇ ತ್ಯಾಗ ಮಾಡಬಲ್ಲಿರಿ. ಬಾಕಿ ಉಳಿದ ಕೆಲಸ ಕಾರ್ಯಗಳನ್ನು ಪೂರ್ಣಗೊಳುಸುವ ಯೋಜನೆಗೆ ಚಾಲನೆ ನೀಡುವಿರಿ. ನಿಮ್ಮ ಕೆಲಸ ಕಾರ್ಯಗಳಲ್ಲಿ ಕುಟುಂಬದವರ ಪಾಲುಗಾರಿಕೆ ಇರುತ್ತದೆ. ಹಣದ ಜವಾಬ್ದಾರಿಯಿಂದ ದೂರ ಉಳಿಯುವಿರಿ. ಆದಾಯ ಮತ್ತು ಖರ್ಚುವೆಚ್ಚಗಳು ಸಮನಾಗಿರುತ್ತದೆ. ಎಲ್ಲರ ಪ್ರೀತಿ ವಿಶ್ವಾಸ ಗಳಿಸುವಿರಿ. ವಿದ್ಯಾರ್ಥಿಗಳ ಮನಸ್ಸು ಚಂಚಲವಾಗಿರುತ್ತದೆ. ಆದರೂ ಸತತ ಪ್ರಯತ್ನದಿಂದ ಕಲಿಕೆಯಲ್ಲಿ ಪ್ರಗತಿ ಸಾಧಿಸುತ್ತಾರೆ. ಜೀವನವು ಒಂದೇ ರೀತಿಯಲ್ಲಿ ಸಾಗುವುದಿಲ್ಲ. ಕೃಷಿಗೆ ಕಾರ್ಯಗಳನ್ನು ಯಶಸ್ವಿಯಾಗಿ ನಿರ್ವಹಿಸುವಿರಿ. ನಿಮ್ಮ ಜೀವನದಲ್ಲಿ ನಿಧಾನಗತಿಯ ಪ್ರಗತಿಯು ಕಂಡುಬರುತ್ತದೆ. ಉನ್ನತ ವಿದ್ಯಾಭ್ಯಾಸದಲ್ಲಿ ಯಶಸ್ಸು ದೊರೆಯುತ್ತದೆ. ಗೆಲ್ಲುವ ಛಲ ನಿಮ್ಮಲ್ಲಿರುತ್ತದೆ.
ಮಕರ ರಾಶಿಯವರ ವಿಶ್ವಾವಸು ಸಂವತ್ಸರದ ವಿಸ್ತೃತ ವರ್ಷ ಭವಿಷ್ಯದ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಕುಂಭ ರಾಶಿ
ವಿದ್ಯಾರ್ಥಿಗಳು ಗುರು ಹಿರಿಯರ ಮನ ಗೆಲ್ಲುತ್ತಾರೆ. ಸ್ವಪ್ರಯತ್ನದಿಂದ ಉತ್ತಮ ಆದಾಯ ಗಳಿಸುವಿರಿ. ಹಣ ಕಾಸಿನ ಯೋಜನೆಗಲ್ಲಿ ಯಶಸ್ಸು ಗಳಿಸುವಿರಿ. ಕುಟುಂಬದ ಕೆಲಸದಲ್ಲಿ ನಿಮ್ಮ ಪಾತ್ರ ಮುಖ್ಯವಾಗುತ್ತದೆ. ಧಾರ್ಮಿಕ ಕಾರ್ಯಗಳಿಗೆ ಸಹಾಯ ಮಾಡುವಿರಿ. ವಿದ್ಯಾರ್ಥಿಗಳು ಆರಂಭದ ಅಡೆತಡೆಗಳಿಂದ ಪಾರಾಗುತ್ತಾರೆ. ಕುಟುಂಬದ ಸಮಸ್ಯೆಗಳನ್ನು ಪರಿಹರಿಸುವಿರಿ. ಸಂಗಾತಿ ಮತ್ತು ಮಕ್ಕಳ ಜೊತೆಯಲ್ಲಿ ಪ್ರವಾಸಕ್ಕೆ ತೆರಳುವಿರಿ. ಹಣಕಾಸಿನ ತೊಂದರೆ ದೂರವಾಗುತ್ತದೆ. ಸ್ತ್ರೀಯರ ನಡುವೆ ಮನಸ್ತಾಪ ಬೆಳೆಯುತ್ತದೆ. ದುಡುಕದೆ ಕಾದು ನೋಡುವ ತಂತ್ರ ಅನುಸರಿಸುವಿರಿ. ಭೂ ವ್ಯವಹಾರದಿಂದ ಲಾಭ ಗಳಿಸುವಿರಿ. ಅನಿಯಮಿತ ಆಹಾರ ಸೇವನೆಯ ಕಾರಣ ದೇಹದ ಕೊಬ್ಬಿನ ಅಂಶವು ಹೆಚ್ಚುತ್ತದೆ. ಹಣಕಾಸಿನ ತೊಂದರೆ ಇರುವುದಿಲ್ಲ. ಆದಾಯದಲ್ಲಿ ಪ್ರಗತಿ ಕಂಡುಬರುತ್ತದೆ. ಉದ್ಯೋಗದಲ್ಲಿ ಹೆಚ್ಚಿನ ನಿರೀಕ್ಷೆ ಇದ್ದು, ನಿಜವಾಗುತ್ತದೆ. ಉದ್ಯೋಗದಲ್ಲಿ ನೆಮ್ಮದಿ ಇರುತ್ತದೆ. ಹಣ ಉಳಿತಾಯ ಸಾಧ್ಯವಾಗದು. ಕುಟುಂಬದಲ್ಲಿ ಅಗೋಚರ ಬದಲಾವಣೆಗಳಿಗೆ ಹೊಂದಿಕೊಳ್ಳುವಿರಿ. ಪ್ರತಿಭೆಗೆ ತಕ್ಕ ಅವಕಾಶಗಳು ನಿಮ್ಮದಾಗುತ್ತದೆ. ಖರ್ಚು-ವೆಚ್ಚಗಳನ್ನು ನಿಯಂತ್ರಿಸಲು ಸಾಧ್ಯವಾಗದು.
ಕುಂಭ ರಾಶಿಯವರ ವಿಶ್ವಾವಸು ಸಂವತ್ಸರದ ವಿಸ್ತೃತ ವರ್ಷ ಭವಿಷ್ಯದ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಮೀನ ರಾಶಿ
ಜೀವನದ ಬದಲಾವಣೆಗಳನ್ನು ಒಪ್ಪುವುದಿಲ್ಲ. ತಂದೆ ತಾಯಿಯನ್ನು ಗೌರವದಿಂದ ಕಾಣುವಿರಿ. ಹಣಕಾಸಿನ ವಿಚಾರದಲ್ಲಿ ಸಂಗಾತಿಯ ಜೊತೆಯಲ್ಲಿ ಭಿನ್ನಾಭಿಪ್ರಾಯ ಮೂಡುತ್ತದೆ. ಕೌಟುಂಬಿಕ ಕಲಹಗಳು ಬಹುಕಾಲ ಉಳಿಯಲು ಬಿಡುವುದಿಲ್ಲ. ಮನೆತನದ ಹಿರಿಯರ ಸಹಾಯದಿಂದ ವರಮಾನವು ಹೆಚ್ಚುತ್ತದೆ. ಸ್ನೇಹಿತರಂತೆ ವರ್ತಿಸುವ ವಿರೋಧಿಗಳು ಇರುತ್ತಾರೆ. ಹಿರಿಯರ ಆಸ್ತಿಯ ವಿಚಾರದಲ್ಲಿ ಭಿನ್ನಾಭಿಪ್ರಾಯ ಇರುತ್ತದೆ. ಹಿಂದಿನ ಅನಾರೋಗ್ಯವು ಗುಣಹೊಂದುತ್ತದೆ. ಸಹನೆ ಕಡಿಮೆ. ಕೋಪದಲ್ಲಿ ತಪ್ಪು ನಿರ್ಧಾರ ತೆಗೆದುಕೊಳ್ಳುವಿರಿ. ಕುಟುಂಬದಲ್ಲಿ ಹೊಂದಾಣಿಕೆ ಮತ್ತು ಜಗಳಗಳು ಸಾಮಾನ್ಯವಾಗಿರುತ್ತವೆ. ಸ್ವಂತ ಕೆಲಸ ಕಾರ್ಯಗಳು ತ್ವರಿತವಾಗಿ ಸಾಗಲಿವೆ. ಬೇರೆಯವರ ಮನಸ್ಸನ್ನು ಅರ್ಥಮಾಡಿಕೊಂಡು ನಡೆಯುವಿರಿ. ಉದ್ಯೋಗದಲ್ಲಿ ನಿಮ್ಮ ಸಹೋದ್ಯೋಗಿಗಳು ತಾಟಸ್ಥ ನೀತಿ ಅನುಸರಿಸುತ್ತಾರೆ. ವಿದ್ಯಾರ್ಥಿಗಳಿಗೆ ಪರಿಪೂರ್ಣ ಫಲಿತಾಂಶವೂ ದೊರೆಯುವುದು ನಿಧಾನವಾಗುತ್ತದೆ. ನಿಧಾನಗತಿಯ ಧನಲಾಭ ಇರುತ್ತದೆ. ವಿದೇಶ ಪ್ರಯಾಣ ಯೋಗವಿದೆ. ಹಣಕಾಸಿನ ವ್ಯವಹಾರದಲ್ಲಿ ಬೇರೆಯವರ ಸಲಹೆ ಒಪ್ಪುವುದಿಲ್ಲ.
ಮೀನ ರಾಶಿಯವರ ವಿಶ್ವಾವಸು ಸಂವತ್ಸರದ ವಿಸ್ತೃತ ವರ್ಷ ಭವಿಷ್ಯದ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಸರ್ವೇ ಜನಾಃ ಸುಖಿನೋ ಭವಂತು
ಎಲ್ಲರಿಗೂ ಸುಖ ಸಿಗಲಿ ಎನ್ನುವುದು ಭಾರತೀಯ ಪರಂಪರೆಯ ಅತಿದೊಡ್ಡ ಪ್ರಾರ್ಥನೆ. ಸುಖ ಬಂದಾಗ ಹಿಗ್ಗದೆ, ದುಃಖ ಬಂದಾಗ ಕುಗ್ಗದೆ ನಾವೆಲ್ಲರೂ ಬದುಕು ಎದುರಿಸೋಣ. ನಮಗೆ ಇಂಥ ಶಕ್ತಿಯು ಅಧ್ಯಾತ್ಮದಿಂದ, ದೇವರ ದಯೆಯಿಂದ ಬರುತ್ತದೆ. ಎಲ್ಲರ ಸುಖದಲ್ಲಿ ನಮ್ಮ ಸುಖವೂ ಇದೆ ಎನ್ನುವುದನ್ನು ಅರಿತುಕೊಂಡು ಸಮಾಜಕ್ಕೆ ಒಳಿತಾಗಲಿ ಎಂದು ಚಿಂತನೆ ಮಾಡೋಣ. ಭಾರತೀಯ ಪರಂಪರೆಯಲ್ಲಿ ಯುಗಾದಿಗೆ ತನ್ನದೇ ಆದ ಮಹತ್ವವಿದೆ. ಹಲವು ಒಳಿತುಗಳಿಗೆ ಇದು ಶುಭಾರಂಭವಾಗಲಿ. ಕ್ರೋಧಿನಾಮ ಸಂವತ್ಸರದಲ್ಲಿ ನಿಮ್ಮ ಎಲ್ಲ ಒಳ್ಳೆಯ ಸಂಕಲ್ಪಗಳು ಈಡೇರಲಿ. ಎಲ್ಲರೂ ಇನ್ನಷ್ಟು ಧಾರ್ಮಿಕ ಕಾರ್ಯಗಳನ್ನು ಮಾಡುವಂತಾಗಲಿ, ಮನಸ್ಸಿಗೆ ನೆಮ್ಮದಿ, ಸುಖ ಮತ್ತು ಶಾಂತಿ ಸಿಗಲಿ ಎಂದು ದೇವರಲ್ಲಿ ಯುಗಾದಿ ಹಬ್ಬದ ಶುಭ ಸಂದರ್ಭದಲ್ಲಿ ಪ್ರಾರ್ಥಿಸುತ್ತೇನೆ. ಒಳಿತಿನ ಸಂಕಲ್ಪಕ್ಕೆ, ಮತ್ತೊಬ್ಬರಿಗೆ ಮನಃಪೂರ್ವಕ ಶುಭ ಹಾರೈಸಲು ಯಾವುದೇ ಹಿಂಜರಿಕೆ ಬೇಡ. ಯಾವುದೇ ಕಾರ್ಯ ಕೈಗೂಡಲು ಮನುಷ್ಯ ಪ್ರಯತ್ನವೂ ಬಹಳ ಮುಖ್ಯವಾಗುತ್ತದೆ.
ಬರಹ: ಎಚ್. ಸತೀಶ್, ಜ್ಯೋತಿಷಿ,
ಮೊಬೈಲ್: 8546865832
(ಗಮನಿಸಿ: ಜ್ಯೋತಿಷ್ಯ ಶಾಸ್ತ್ರದ ಲೆಕ್ಕಾಚಾರಕ್ಕೆ ಹಲವು ಸೂತ್ರಗಳಿವೆ. ನಿರ್ದಿಷ್ಟ ರೀತಿಯಲ್ಲಿ ಕ್ರಮಬದ್ಧವಾಗಿ ಈ ರಾಶಿ ಭವಿಷ್ಯ ನೀಡಲಾಗಿದೆ. ಆದರೆ ಒಟ್ಟಾರೆಯಾಗಿ ಜ್ಯೋತಿಷ್ಯ ಎನ್ನುವುದು ನಂಬಿಕೆಯ ಮಾತು. ಓದುಗರ ನಂಬಿಕೆಯನ್ನು ‘ಹಿಂದೂಸ್ತಾನ್ ಟೈಮ್ಸ್ ಕನ್ನಡ’ ಗೌರವಿಸುತ್ತದೆ. ಇಲ್ಲಿರುವ ಯಾವುದೇ ಶಿಫಾರಸು ಅಥವಾ ಸಲಹೆಗಳನ್ನು ಪಾಲಿಸುವುದು ಓದುಗರ ವಿವೇಚನೆ, ನಂಬಿಕೆಗೆ ಬಿಟ್ಟ ವಿಷಯವಾಗಿರುತ್ತದೆ).
ವಿಭಾಗ