ಶನಿ-ಸೂರ್ಯ ಗ್ರಹಗಳ ಪರಸ್ಪರ ದೃಷ್ಟಿಯಿಂದ ವಿರೋಧ ಸೃಷ್ಟಿ; ಕೆಲವರ ಜೀವನ ಹೂವಿನ ಹಾಸಿಗೆ ಕೆಲವರಿಗೆ ಕಲ್ಲು ಮುಳ್ಳಿನ ಹಾದಿ
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  ಶನಿ-ಸೂರ್ಯ ಗ್ರಹಗಳ ಪರಸ್ಪರ ದೃಷ್ಟಿಯಿಂದ ವಿರೋಧ ಸೃಷ್ಟಿ; ಕೆಲವರ ಜೀವನ ಹೂವಿನ ಹಾಸಿಗೆ ಕೆಲವರಿಗೆ ಕಲ್ಲು ಮುಳ್ಳಿನ ಹಾದಿ

ಶನಿ-ಸೂರ್ಯ ಗ್ರಹಗಳ ಪರಸ್ಪರ ದೃಷ್ಟಿಯಿಂದ ವಿರೋಧ ಸೃಷ್ಟಿ; ಕೆಲವರ ಜೀವನ ಹೂವಿನ ಹಾಸಿಗೆ ಕೆಲವರಿಗೆ ಕಲ್ಲು ಮುಳ್ಳಿನ ಹಾದಿ

ಆಗಸ್ಟ್‌ 16 ರಂದು ಸೂರ್ಯನು ಸಿಂಹ ರಾಶಿಯನ್ನು ಪ್ರವೇಶಿಸುತ್ತಾನೆ. ಇದೇ ರಾಶಿಯಲ್ಲಿ ಶನಿಯು ಶಕ್ತಿಶಾಲಿಯಾಗಿರುತ್ತಾನೆ. ಶನಿಯು ಸೂರ್ಯನ ಪುತ್ರನಾಗಿದ್ದರೂ ವೈರತ್ವ ಇರುವುದರಿಂದ ಇದರ ಪರಿಣಾಮ ದ್ವಾದಶ ರಾಶಿಗಳ ಮೇಲೆ ಉಂಟಾಗುತ್ತದೆ. ಸೂರ್ಯ, ಶನಿಯ ಮುನಿಸಿನಿಂದ ಯಾವ ರಾಶಿಯವರಿಗೆ ಏನು ಫಲ ದೊರೆಯಲಿದೆ ನೋಡೋಣ. (ಬರಹ: ಎಚ್‌. ಸತೀಶ್, ಜ್ಯೋತಿಷಿ)

ಶನಿ-ಸೂರ್ಯ ಗ್ರಹಗಳ ಪರಸ್ಪರ ದೃಷ್ಟಿಯಿಂದ ವಿರೋಧ ಸೃಷ್ಟಿ; ಕೆಲವರ ಜೀವನ ಹೂವಿನ ಹಾಸಿಗೆ ಕೆಲವರಿಗೆ ಕಲ್ಲು ಮುಳ್ಳಿನ ಹಾದಿ
ಶನಿ-ಸೂರ್ಯ ಗ್ರಹಗಳ ಪರಸ್ಪರ ದೃಷ್ಟಿಯಿಂದ ವಿರೋಧ ಸೃಷ್ಟಿ; ಕೆಲವರ ಜೀವನ ಹೂವಿನ ಹಾಸಿಗೆ ಕೆಲವರಿಗೆ ಕಲ್ಲು ಮುಳ್ಳಿನ ಹಾದಿ

ಸೂರ್ಯನು ಆಗಸ್ಟ್ ತಿಂಗಳ 16ರಂದು ಸಿಂಹ ರಾಶಿಯನ್ನು ಪ್ರವೇಶಿಸುತ್ತಾನೆ. ಇದೇ ರಾಶಿಯಲ್ಲಿ ಸೆಪ್ಟೆಂಬರ್ 16ವರೆಗೆ ನೆಲೆಸಿರುತ್ತಾನೆ. ರವಿಗೆ ಸಿಂಹ ರಾಶಿಯು ಸ್ವ ಕ್ಷೇತ್ರ. ಶನಿಯು ಈ ರಾಶಿಯಲ್ಲಿ ಸಂಪೂರ್ಣ ಶಕ್ತಿಶಾಲಿ ಆಗುತ್ತಾನೆ. ಈ ಕಾರಣದಿಂದಾಗಿ ಈಗ ನಡೆಯುತ್ತಿರುವ ಯಾವುದೇ ಸಮಸ್ಯೆಗಳು ಸುಲಭವಾಗಿ ಬಗೆಹರಿಯುವುದಿಲ್ಲ. ಸ್ವಂತ ಉದ್ದಿಮೆ ಇದ್ದಲ್ಲಿ ಉದ್ಯೋಗಿಗಳ ನಡುವೆ ಒಂದು ರೀತಿಯ ಸಮರವೇ ನಡೆಯಲಿದೆ. ಸೂರ್ಯನು ತನ್ನ ಹಕ್ಕನ್ನು ಯಾರಿಗೂ ಬಿಟ್ಟು ಕೊಡುವುದಿಲ್ಲ ಇದೇ ರೀತಿ ಶನಿಯು ಸೋಲದೆ ತನ್ನ ರೀತಿ ನೀತಿಯನ್ನು ಉಳಿಸಿಕೊಳ್ಳಲು ಪ್ರಯತ್ನಿಸುತ್ತಾನೆ ಆಗ ಇದು ಕೊನೆಯಿಲ್ಲದ ಅಧ್ಯಾಯದಂತಾಗುತ್ತದೆ. ರಾಜ್ಯದ ಅಥವಾ ರಾಷ್ಟ್ರದ ರಾಜಕೀಯ ಸಮಸ್ಯೆಗಳು ಇನ್ನೂ ಹೆಚ್ಚಲಿವೆ. ಇದೇ ರೀತಿ ಪ್ರತಿಯೊಂದು ರಾಶಿಗಳಿಗೂ ತನ್ನದೇ ಆದಂತಹ ಫಲಿತಾಂಶಗಳು ದೊರೆಯುತ್ತವೆ.

ಮೇಷ ರಾಶಿ

ಮೇಷ ರಾಶಿಗೆ ರವಿಯು ಪಂಚಮ ಭಾವದ ಅಧಿಪತಿ ಆಗುತ್ತಾನೆ. ಅಂದರೆ ಮೇಷ ರಾಶಿಯವರ ವಿದ್ಯಾಭ್ಯಾಸವು ರವಿಯನ್ನು ಆಧರಿಸುತ್ತದೆ. ಇದೇ ರೀತಿಯಲ್ಲಿ ಶನಿಯು 10 ಮತ್ತು 11ನೆಯ ಮನೆಯ ಅಧಿಪತಿಯಾಗುತ್ತಾನೆ. ಅಂದರೆ ಶನಿಯು ಕೆಲಸ ಕಾರ್ಯಗಳು ಮತ್ತು ಲಾಭವನ್ನು ಸೂಚಿಸುತ್ತದೆ. ವಿದ್ಯಾಭ್ಯಾಸದ ವಿಚಾರದಲ್ಲಿ ಹಿರಿಯ ಅಣ್ಣನ ಮೇಲೆ ಇವರು ಅವಲಂಬಿತವಾಗುತ್ತಾರೆ. ಆದರೆ ಕೆಲಸ ಕಾರ್ಯಗಳಲ್ಲಿ ಅಧಿಕಾರಿಗಳ ಸಹಕಾರವಿರುವ ಕಾರಣ ಸಹೋದ್ಯೋಗಿಗಳ ವಿರೋಧದ ನಡುವೆಯೂ ಗುರಿ ತಲುಪುತ್ತಾರೆ. ಮೇಷ ರಾಶಿಯಲ್ಲಿ ಜನಿಸಿರುವವರ ಜೀವನದಲ್ಲಿ ತಂದೆ ಮಕ್ಕಳ ನಡುವೆ ಉತ್ತಮ ಹೊಂದಾಣಿಕೆ ಇರುವುದಿಲ್ಲ. ಹಣದ ಸಮಸ್ಯೆ ಇರುವುದಿಲ್ಲ. ಶ್ರೀ ಸೂರ್ಯನ ಪೂಜೆ ಮತ್ತು ಶನಿಯ ಶಾಂತಿಯಿಂದ ಶುಭಫಲಗಳನ್ನು ಪಡೆಯಬಹುದು.

ವೃಷಭ ರಾಶಿ

ವೃಷಭ ರಾಶಿಗೆ ರವಿಯು 4ನೇ ಮನೆಯ ಅಧಿಪತಿ ಆಗುತ್ತಾನೆ. ಹಾಗೆಯೇ ಶನಿಯು 9 ಮತ್ತು 10ನೇ ಮನೆಯ ಅಧಿಪತಿ ಆಗುತ್ತಾನೆ. ಆದ್ದರಿಂದ ಇವರ ಮನೆಯಲ್ಲಿನ ಆಗು ಹೋಗುಗಳು ರವಿಯನ್ನು ಅವಲಂಬಿಸುತ್ತದೆ. ಶನಿಯಿಂದ ಇವರ ಜೀವನದಲ್ಲಿ ಅದೃಷ್ಟವಿರುತ್ತದೆ. ಶನಿಯು ಯಾವುದೇ ತೊಂದರೆ ನೀಡುವುದಿಲ್ಲ. ಆದರೆ ಸೂರ್ಯನಿಂದ ಅನಾವಶ್ಯಕ ಅಡ್ಡಿ ಆತಂಕಗಳು ಉಂಟಾಗಲಿವೆ. ಕುಟುಂಬದಲ್ಲಿ ಶಾಂತಿ ನೆಮ್ಮದಿಯ ಕೊರತೆ ಇರುತ್ತದೆ. ಚಿಕ್ಕ ಮಕ್ಕಳ ವಿದ್ಯಾಭ್ಯಾಸದಲ್ಲಿಯೂ ತೊಂದರೆ ಉಂಟಾಗಬಹುದು. ಆದರೆ ಶ್ರೀ ಸೂರ್ಯನ ಪೂಜೆಯಿಂದ ಶುಭ ಉಂಟಾಗುತ್ತದೆ. ತಾಯಿಯವರ ಜೊತೆ ಉತ್ತಮ ಅನುಬಂಧ ಇರುವುದಿಲ್ಲ. ಉದ್ಯೋಗದಲ್ಲಿ ಅನಾವಶ್ಯಕ ವಾದ ವಿವಾದಗಳು ಉಂಟಾಗಲಿವೆ. ಮೇಲಧಿಕಾರಿಗಳ ವಿರೋಧವನ್ನು ಎದುರಿಸಬೇಕಾಗುತ್ತದೆ. ಶ್ರೀ ಹನುಮಾನ್ ಚಾಲೀಸ ಪಠಿಸಿದರೆ ಶುಭವಾಗುತ್ತದೆ.

ಮಿಥುನ ರಾಶಿ

ಮಿಥುನ ರಾಶಿಗೆ ರವಿಯು 3ನೇ ಮನೆಯ ಅಧಿಪತಿಯಾಗುತ್ತಾನೆ. ಹಾಗೆಯೇ ಶನಿಯು 9 ಮತ್ತು 8ರ ಅಧಿಪತಿ ಆಗುತ್ತಾನೆ. ರವಿಯು ಪ್ರಯತ್ನವನ್ನು ಸೂಚಿಸಿದರೆ, ಶನಿಯು ಆಗಬಹುದಾದ ಕೆಲಸಗಳು ಮತ್ತು ಆರೋಗ್ಯವನ್ನು ಸೂಚಿಸುತ್ತಾನೆ. ರವಿಯಿಂದ ಕಿರಿ ಸೋದರ ಅಥವಾ ಸೋದರಿಯನ್ನು ಮತ್ತು ಶನಿಯಿಂದ ತಂದೆಯ ವಿಷಯಗಳನ್ನು ನಾವು ತಿಳಿದುಕೊಳ್ಳಬಹುದು. ನಿಮ್ಮ ತಂದೆ ಮತ್ತು ಕಿರಿಯ ಸೋದರ ಅಥವಾ ಸೋದರಿಯ ಜೊತೆಯಲ್ಲಿ ಉತ್ತಮ ಅನುಬಂಧ ಇರುವುದಿಲ್ಲ. ಕುಟುಂಬದಲ್ಲಿ ಅನಾವಶ್ಯಕ ವಾದ ವಿವಾದ ಇರಲಿವೆ. ನಿಮ್ಮ ಕೆಲಸದಲ್ಲಿ ಆರೋಗ್ಯ ಅಡ್ಡಿಯಾಗುತ್ತದೆ. ಹೆಚ್ಚಿನ ಪ್ರಯತ್ನದಿಂದ ಮಾತ್ರ ಕ್ರಮೇಣ ಧನಾತ್ಮಕ ಫಲಿತಾಂಶಗಳನ್ನು ಪಡೆಯಲು ಸಾಧ್ಯ. ಕೈಕಾಲುಗಳಿಗೆ ಪೆಟ್ಟು ಬೀಳುವ ಸಂಭವವಿರುತ್ತದೆ. ವಾಹನ ಚಾಲನೆ ಮಾಡುವ ವೇಳೆ ಎಚ್ಚರಿಕೆ ವಹಿಸಬೇಕು. ಒಮ್ಮೆ ತೆಗೆದುಕೊಂಡ ತೀರ್ಮಾನವನ್ನು ಬದಲಿಸದೇ ಹೋದಲ್ಲಿ ಯಾವುದೇ ತೊಂದರೆ ಉಂಟಾಗುವುದಿಲ್ಲ. ಶನಿದೇವನ ಆರಾಧನೆಯಿಂದ ಮತ್ತು ರವಿ ಶಾಂತಿಯಿಂದ ಶುಭ ಫಲಗಳನ್ನು ಪಡೆಯಬಹುದು.

ಕಟಕ ರಾಶಿ

ಕಟಕ ರಾಶಿಗೆ ರವಿಯು 2ನೇ ಮನೆಯ ಅಧಿಪತಿ ಆಗಲಿದ್ದಾನೆ. ಹಾಗೆಯೇ ಶನಿಯು 7ಮತ್ತು 8ನೇ ಮನೆಯ ಅಧಿಪತಿಗಳಾಗುತ್ತಾನೆ. ರವಿಯಿಂದ ಕುಟುಂಬದ ಮತ್ತು ಹಣದ ವಿಚಾರವನ್ನು ತಿಳಿಯಬಹುದು ಹಾಗೆಯೇ ಶನಿಯಿಂದ ಸಂಗಾತಿ ಮತ್ತು ಆಯುಷ್ಯದ ಬಗ್ಗೆ ತಿಳಿಯಬಹುದು. ಕುಟುಂಬದಲ್ಲಿ ನಿಮ್ಮ ಒಳ್ಳೆಯ ಗುಣದಿಂದಾಗಿ ಶಾಂತಿಯ ವಾತಾವರಣ ನಿರ್ಮಾಣವಾಗುತ್ತದೆ. ನಿಮ್ಮ ಮಾತಿಗೆ ಎಲ್ಲರ ಸಹಮತ ಇರುತ್ತದೆ. ಆದರೆ ನಿಮ್ಮ ಮಾತನ್ನು ನಿಮ್ಮ ಸಂಗಾತಿ ಒಪ್ಪುವುದಿಲ್ಲ. ನಿಮ್ಮ ತಂದೆ ಮತ್ತು ಸಂಗಾತಿಯ ಜೊತೆ ಉತ್ತಮ ಬಾಂಧವ್ಯ ಇರುವುದಿಲ್ಲ. ಅನಾವಶ್ಯಕವಾದ ವಾದ ವಿವಾದ ಕಂಡುಬರುತ್ತವೆ. ಸಂಗಾತಿಯ ಆರೋಗ್ಯದಲ್ಲಿ ಏರುಪೇರು ಕಂಡು ಬರುತ್ತದೆ. ಸ್ತ್ರೀಯರಾದಲ್ಲಿ ಹಾರ್ಮೋನಿನ ತೊಂದರೆಯಿಂದ ಬಳಲುತ್ತಾರೆ. ಈ ಅವಧಿಯಲ್ಲಿ ಮೈ ತೂಕ ಹೆಚ್ಚುತ್ತದೆ. ಆರೋಗ್ಯದ ಬಗ್ಗೆ ಹೆಚ್ಚಿನ ಗಮನ ವಹಿಸಬೇಕು. ದುಡುಕುತನದಿಂದ ಮಾತನಾಡದೆ ಪ್ರೀತಿ ವಿಶ್ವಾಸದಿಂದ ಎಲ್ಲರ ಮನಸ್ಸನ್ನು ಗೆಲ್ಲಬೇಕು. ಆತುರದ ನಿರ್ಧಾರದಿಂದ ಹಿನ್ನೆಡೆ ಉಂಟಾಗುತ್ತದೆ. ಅನಿವಾರ್ಯವಾಗಿ ಉದ್ಯೋಗ ಬದಲಿಸುವಿರಿ. ಕುಟುಂಬದ ಸ್ತ್ರೀಯರ ನಡುವೆ ಉತ್ತಮ ಬಾಂಧವ್ಯ ಇರುವುದಿಲ್ಲ. ಸೂರ್ಯನ ಪೂಜೆಯಿಂದ ಮತ್ತು ಶನಿ ಶಾಂತಿಯಿಂದ ಶುಭ ಫಲಗಳನ್ನು ಪಡೆಯಬಹುದು.

ಸಿಂಹ ರಾಶಿ

ಸಿಂಹ ರಾಶಿಯ ಅಧಿಪತಿಯೇ ಸೂರ್ಯ. ಶನಿಯು 7 ಮತ್ತು 8 ಮನೆಯ ಅಧಿಪತಿ ಆಗುತ್ತಾನೆ. ಈ ಕಾರಣದಿಂದ ಈ ರಾಶಿಯವರನ್ನು ಕೆಣಕಿದರೆ ತೊಂದರೆ ಹೆಚ್ಚು. ಇವರಲ್ಲಿ ಹೆಚ್ಚಿನ ಆತ್ಮವಿಶ್ವಾಸ ಇರುತ್ತದೆ. ರವಿಯಿಂದ ಸ್ವಂತ ವಿಚಾರಗಳನ್ನು ತಿಳಿದುಕೊಂಡರೆ ಶನಿಯಿಂದ ಬಾಳ ಸಂಗಾತಿ ಮತ್ತು ಸಿಂಹ ರಾಶಿಯವರ ಮತ್ತು ಅವರ ಸಂಗಾತಿಯ ಆರೋಗ್ಯದ ಬಗ್ಗೆ ತಿಳಿಯಬಹುದು. ಇವರ ಜೀವನದಲ್ಲಿ ಅನಾವಶ್ಯಕವಾದ ವಾದ ವಿವಾದಗಳು ಸದಾ ಇರುತ್ತವೆ. ಬೇರೆಯವರ ಬುದ್ಧಿ ಮಾತನ್ನು ಕೇಳುವುದೇ ಇಲ್ಲ. ದಂಪತಿ ನಡುವೆ ಅನಾವಶ್ಯಕ ವಾದ ವಿವಾದಗಳು ಇರುತ್ತವೆ. ಉಷ್ಣದ ತೊಂದರೆ ಕಾಡಲಿದೆ. ಆತ್ಮವಿಶ್ವಾಸದಿಂದ ಯಾವುದೇ ಕೆಲಸವನ್ನು ಮಾಡಬಲ್ಲರು. ತಂದೆ ಮಕ್ಕಳ ನಡುವೆ ಭಿನ್ನಾಭಿಪ್ರಾಯ ಇರಲಿವೆ. ಸ್ವಂತ ಉದ್ಧಿಮೆ ಇದ್ದಲ್ಲಿ ನೌಕರರ ನಡುವೆ ಅನಾವಶ್ಯಕ ಮನಸ್ತಾಪ ಎದುರಾಗಲಿವೆ. ಶನಿಶಾಂತಿ ಮತ್ತು ಆಂಜನೇಯನ ಪೂಜೆಯಿಂದ ಶುಭಫಲಗಳನ್ನು ಪಡೆಯಬಹುದಾಗಿದೆ.

ಕನ್ಯಾ ರಾಶಿ

ಕನ್ಯಾ ರಾಶಿಗೆ ರವಿಯು 12ನೇ ಮನೆಯ ಅಧಿಪತಿ ಆಗುತ್ತಾನೆ. ಹಾಗೆಯೇ ಶನಿ 5 ಮತ್ತು 6ನೇ ಮನೆಯ ಅಧಿಪತಿ ಆಗುತ್ತಾನೆ. ಇದರಿಂದಾಗಿ ರವಿಯಿಂದ ಎದುರಾಗುವ ಕಷ್ಟಗಳನ್ನು ಖರ್ಚು ವೆಚ್ಚಗಳನ್ನು ಮತ್ತು ಶನಿಯಿಂದ ವಿದ್ಯಾಭ್ಯಾಸ, ಮಕ್ಕಳ ವಿಚಾರ, ಉದ್ಯೋಗ ಮತ್ತು ಆರೋಗ್ಯದ ಬಗ್ಗೆ ತಿಳಿಯಬಹುದು. ಯಾವುದೇ ಕೆಲಸ ಕಾರ್ಯಗಳನ್ನು ಆರಂಭಿಸುವ ಮುನ್ನ ಕಾನೂನಿನ ಬಗ್ಗೆ ಎಚ್ಚರಿಕೆ ವಹಿಸಬೇಕು. ಉದ್ಯೋಗದಲ್ಲಿ ಹಿರಿಯ ಅಧಿಕಾರಿಗಳಿಂದ ಅನಾವಶ್ಯಕ ವಿವಾದ ಉಂಟಾಗಲಿವೆ. ಇವರ ಕೆಲಸ ಕಾರ್ಯಗಳಿಗೆ ಸರಿಯಾದ ಉತ್ತೇಜನ ದೊರೆಯುವುದಿಲ್ಲ. ಎಡಗಣ್ಣಿಗೆ ಹಾನಿಯಾಗಬಹುದು. ಆಹಾರ ಸೇವನೆಯಲ್ಲಿ ಎಚ್ಚರಿಕೆ ವಹಿಸದೆ ಹೋದಲ್ಲಿ ಅನಾರೋಗ್ಯ ಉಂಟಾಗುತ್ತದೆ. ತಂದೆಯ ಸಲುವಾಗಿ ಹೆಚ್ಚಿನ ಖರ್ಚು ವೆಚ್ಚಗಳು ಎದುರಾಗಲಿವೆ. ವಿದ್ಯಾರ್ಥಿಗಳು ಆತ್ಮವಿಶ್ವಾಸದ ಕೊರತೆಯನ್ನು ಎದುರಿಸುತ್ತಾರೆ. ಮಕ್ಕಳ ಜೀವನದಲ್ಲಿ ಬೇಸರದ ಸಂಗತಿ ನಡೆಯಲಿದೆ. ಆರೋಗ್ಯದಲ್ಲಿ ತೊಂದರೆ ಉಂಟಾಗದಿರಲು ರವಿ ಶಾಂತಿಯನ್ನು ಮಾಡಬೇಕು. ಆಂಜನೇಯನ ಪೂಜೆಯಿಂದ ಕಷ್ಟಗಳು ಬಹುಪಾಲು ದೂರವಾಗಲಿವೆ.

ತುಲಾ ರಾಶಿ

ತುಲಾ ರಾಶಿಗೆ ರವಿಯು 11ನೇ ಭಾವದ ಅಧಿಪತಿ ಆಗುತ್ತಾನೆ. ಅಂದರೆ ತುಲಾ ರಾಶಿಯವರ ಆದಾಯ ಮತ್ತು ಸಮಾಜದ ಸ್ಥಾನಮಾನವು ರವಿಯನ್ನು ಆಧರಿಸುತ್ತದೆ. ಇದೇ ರೀತಿ ಶನಿಯು 4 ಮತ್ತು 5ನೆಯ ಮನೆಯ ಅಧಿಪತಿಯಾಗುತ್ತಾನೆ. ಅಂದರೆ ಶನಿಯು ಕುಟುಂಬದ ಕೆಲಸ ಕಾರ್ಯಗಳು ಮತ್ತು ವಿದ್ಯಾಭ್ಯಾಸವನ್ನು ಸೂಚಿಸುತ್ತದೆ. ಮಕ್ಕಳ ಬಗ್ಗೆಯೂ ತಿಳಿಯಬಹುದು. ಅಂದರೆ ವಿದ್ಯಾಭ್ಯಾಸದದಲ್ಲಿ ಯಾವುದೇ ತೊಂದರೆ ಉಂಟಾಗುವುದಿಲ್ಲ. ಮಕ್ಕಳಿಗೆ ಉತ್ತಮ ಸಂಸ್ಥೆಯಲ್ಲಿ ಉದ್ಯೋಗ ದೊರೆಯುತ್ತದೆ. ಹಿರಿಯ ಸೋದರ ಮತ್ತು ಸೋದರಿಗೆ ತಂದೆಯ ಜೊತೆ ಹಣಕಾಸಿನ ವಿಚಾರದಲ್ಲಿ ಮನಸ್ತಾಪ ಉಂಟಾಗುತ್ತದೆ. ಉದ್ಯೋಗದಲ್ಲಿ ಹಿರಿಯ ಅಧಿಕಾರಿಗಳೊಡನೆ ಉತ್ತಮ ಬಾಂಧವ್ಯ ರೂಪಿಸಿಕೊಳ್ಳಿರಿ. ಸೂರ್ಯಶಾಂತಿ ಮತ್ತು ಶನಿದೇವರ ಪೂಜೆಯಿಂದ ಶುಭಫಲಗಳನ್ನು ಪಡೆಯಬಹುದು.

ವೃಶ್ಚಿಕ ರಾಶಿ

ವೃಶ್ಚಿಕ ರಾಶಿಗೆ ರವಿಯು 10ನೇ ಮನೆಯ ಅಧಿಪತಿ ಆಗುತ್ತಾನೆ. ಹಾಗೆಯೇ ಶನಿಯು 3 ಮತ್ತು 4ನೇ ಮನೆಯ ಅಧಿಪತಿ ಆಗುತ್ತಾನೆ. ಇವರಿಗೆ ರವಿಯು ಮುಖ್ಯವಾದ ಗ್ರಹವಾಗುತ್ತಾನೆ. ಆದ್ದರಿಂದ ಇವರ ಜೀವನದಲ್ಲಿ ಇದ್ದ ಕಷ್ಟಗಳು ಕಡಿಮೆಯಾಗುತ್ತದೆ. ವೃತ್ತಿಕ್ಷೇತ್ರದಲ್ಲಿ ಯಾವುದೇ ತೊಂದರೆ ಎದುರಾಗದು. ಮೇಲಧಿಕಾರಿಗಳ ಅನುಕಂಪ ಇವರಿಗೆ ಇರುತ್ತದೆ. ಅನಿರೀಕ್ಷಿತ ಅನುಕೂಲತೆಗಳು ಮತ್ತು ಉನ್ನತ ಅಧಿಕಾರ ದೊರೆಯುತ್ತದೆ. ಆದರೆ ಮನೆಯಲ್ಲಿ ಶಾಂತಿ ನೆಮ್ಮದಿ ಕಡಿಮೆ ಆಗಲಿದೆ. ಶನಿಯ ಪ್ರಭಾವದಿಂದ ಕುಟುಂಬದ ಕೆಲಸ ಕಾರ್ಯಗಳು ನಿಧಾನಗತಿಯಲ್ಲಿ ಸಾಗಲಿವೆ. ಕುಟುಂಬದ ಸ್ತ್ರೀಯರ ಮುಖ್ಯವಾಗಿ ಇವರ ತಾಯಿಯ ಆರೋಗ್ಯದಲ್ಲಿ ತೊಂದರೆ ಉಂಟಾಗುವ ಸಾಧ್ಯತೆಗಳಿವೆ. ಕುಟುಂಬದಲ್ಲಿ ಅನಾವಶ್ಯಕ ವಾದ ವಿವಾದಗಳು ಎದುರಾಗಲಿವೆ. ಶನಿದೇವರ ಶಾಂತಿ ಮತ್ತು ಶ್ರೀ ಸುಬ್ರಹ್ಮಣ್ಯಸ್ವಾಮಿಯ ಪೂಜೆಯಿಂದ ಶುಭ ಫಲಗಳು ದೊರೆಯುತ್ತವೆ.

ಧನಸ್ಸು ರಾಶಿ

ಧನಸ್ಸು ರಾಶಿಗೆ ರವಿಯು 9ನೇ ಮನೆಯ ಅಧಿಪತಿಯಾಗುತ್ತಾನೆ. ಹಾಗೇ ಶನಿಯು 2 ಮತ್ತು 3ರ ಮನೆಯ ಅಧಿಪತಿ ಆಗುತ್ತಾನೆ. ಈ ರಾಶಿಗೆ ರವಿಯು ಅದೃಷ್ಟಕಾರಕನಾಗಿದ್ದಾನೆ. ಈ ರಾಶಿಯವರ ಜೀವನದಲ್ಲಿ ತೊಂದರೆ ಬಾರದಂತೆ ರವಿಯು ಕಾಯುತ್ತಾನೆ. ಶನಿಯು ಹಣ,ಕುಟುಂಬ ಮತ್ತು ಮಾತಿನ ಕಾರಕನಾಗುತ್ತಾನೆ. ಇವರು ಎದುರಾಗುವ ಅಡಚಣೆಗಳನ್ನು ಆತ್ಮವಿಶ್ವಾದಿಂದ ಎದುರಿಸಿ ಕೆಲಸ ಸಾಧಿಸುತ್ತಾರೆ. ಆದರೆ ದುಡುಕಿನ ಮಾತಿನಿಂದ ಆತ್ಮೀಯರ ವಿರೋಧ ಎದುರಿಸಬೇಕಾಗುತ್ತದೆ. ಹಣಕಾಸಿನ ಕೊರತೆ ಉಂಟಾಗುತ್ತದೆ. ಆದರೆ ಸೋದರಿಯ ಜೊತೆ ಉತ್ತಮ ಅನುಬಂಧ ಇರುತ್ತದೆ. ಆರೋಗ್ಯದ ಬಗ್ಗೆ ಎಚ್ಚರಿಕೆ ಇರಲಿ. ಶ್ರೀ ಆದಿತ್ಯಹೃದಯ ಪಠನೆಯಿಂದ ನಿರೀಕ್ಷಿಸಿದ ಯಶಸ್ಸು ಇವರಿಗೆ ಒಲಿಯುತ್ತದೆ. ಶನಿ ಶಾಂತಿಯಿಂದ ಮಾತಿನಿಂದಾಗುವ ತೊಂದರೆ ದೂರವಾಗುತ್ತದೆ. ಕುಟುಂಬದಲ್ಲಿ ಶಾಂತಿ ನೆಮ್ಮದಿ ನೆಲೆಸಿರುತ್ತದೆ.

ಮಕರ ರಾಶಿ

ಮಕರ ರಾಶಿಗೆ ರವಿಯು 8ನೇ ಮನೆಯ ಅಧಿಪತಿ ಆಗುತ್ತಾನೆ. ಹಾಗೆಯೇ ಶನಿಯು 2ನೆ ಮನೆಯ ಅಧಿಪತಿಗಳಾಗುತ್ತಾನೆ. ರವಿಯಿಂದ ಜೀವನದಲ್ಲಿ ನಡೆಯಬಹುದಾದ ಅನಿರೀಕ್ಷಿತ ಘಟನೆಗಳ ಬಗ್ಗೆ ತಿಳಿಯಬಹುದು. ಶನಿಯಿಂದ ಸ್ವಂತ ವಿಚಾರಗಳ ಬಗ್ಗೆಯೂ ತಿಳಿಯಬಹುದಾಗಿದೆ. ಇವರ ಕೆಲಸ ಕಾರ್ಯಗಳು ತಡವಾಗಿ ಪೂರ್ಣಗೊಳ್ಳಲಿದೆ. ಆರೋಗ್ಯದ ವಿಚಾರದಲ್ಲಿ ದಿಢೀರನೆ ತೊಂದರೆ ಉಂಟಾಗಲಿದೆ. ನಿಮಗೆ ಅರಿವಾಗದಂತೆ ಹಣಕಾಸಿನ ವ್ಯವಹಾರದಲ್ಲಿ ಸಿಲುಕುವಿರಿ. ಕುಟುಂಬದಲ್ಲಿ ಇದ್ದ ಹೊಂದಾಣಿಕೆ ಮರೆಯಾಗುತ್ತದೆ. ದಂಪತಿಗಳಲ್ಲಿ ಹೊಂದಾಣಿಕೆ ಇರುವುದಿಲ್ಲ. ಕಾನೂನಿನ ವಿವಾದವೊಂದು ಎದುರಾಗಬಹುದು. ಶ್ರೀ ಸೂರ್ಯ ಶಾಂತಿಯಿಂದ ಆರೋಗ್ಯದಲ್ಲಿ ಪ್ರಗತಿ ಕಂಡುಬರುತ್ತದೆ. ಶ್ರೀ ಸೀತಾರಾಮರ ಪೂಜೆಯಿಂದ ತೊಂದರೆಯಿಂದ ಪಾರಾಗಬಹುದು.

ಕುಂಭ ರಾಶಿ

ಕುಂಭ ರಾಶಿಗೆ ಸೂರ್ಯ ಸಪ್ತಮಾಧಿಪತಿಯಾಗುತ್ತಾನೆ. ಶನಿಯು 6 ಮತ್ತು 7ನೇ ಮನೆಯ ಅಧಿಪತಿ ಆಗುತ್ತಾನೆ. ಈ ಕಾರಣದಿಂದ ಈ ರಾಶಿಯವರನ್ನು ಅರ್ಥ ಮಾಡಿಕೊಳ್ಳುವುದು ಕಷ್ಟ. ಇವರು ಸೋಲೊಪ್ಪದೆ ಯಶಸ್ಸು ಗಳಿಸಲು ಶತಾಯಗತಾಯ ಪ್ರಯತ್ನಿಸುತ್ತಾರೆ. ರವಿಯಿಂದ ಬಾಳ ಸಂಗಾತಿಯ ಆರೋಗ್ಯದಲ್ಲಿ ಉಷ್ಣದ ತೊಂದರೆ ಉಂಟಾಗಲಿದೆ. ಸಂಗಾತಿಯ ನೆರವು ನಿಮ್ಮ ತೊಂದರೆಯೊಂದನ್ನು ದೂರ ಮಾಡಲಿದೆ. ವಾದ ವಿವಾದಾಳಿಗೆ ಆಸ್ಪದ ನೀಡದೆ ಮೌನತಾಳುವಿರಿ. ವೃತ್ತಿ ಜೀವನದಲ್ಲಿ ಅನಾವಶ್ಯಕ ವಾದ ವಿವಾದಗಳು ಸದಾ ಇರುತ್ತವೆ. ವಿದ್ಯಾರ್ಥಿಗಳು ಬೇರೆಯವರ ಬುದ್ಧಿ ಮಾತನ್ನು ಕೇಳುವುದು ಒಳಿತು. ತಡವಾದರೂ ಆತ್ಮವಿಶ್ವಾಸದಿಂದ ಯಾವುದೇ ಕೆಲಸವನ್ನು ಮಾಡಬಲ್ಲಿರಿ. ಶ್ರೀ ಸೂರ್ಯಶಾಂತಿ ಮತ್ತು ಶ್ರೀಆಂಜನೇಯನ ಪೂಜೆಯಿಂದ ಶುಭ ಫಲಗಳನ್ನು ಪಡೆಯಬಹುದಾಗಿದೆ.

ಮೀನ ರಾಶಿ

ಮೀನ ರಾಶಿಗೆ ರವಿಯು ಆರನೆಯ ಮನೆಯ ಅಧಿಪತಿ ಆಗುತ್ತಾನೆ. ಹಾಗೆಯೇ ಶನಿಯೂ 11 ಮತ್ತು 12ನೇ ಮನೆಯ ಅಧಿಪತಿ ಆಗುತ್ತಾನೆ. ಇದರಿಂದಾಗಿ ರವಿಯಿಂದ ಉದ್ಯೋಗದಲ್ಲಿನ ತೊಂದರೆಗಳು ದೂರವಾಗಲಿವೆ. ಉಷ್ಣದ ತೊಂದರೆ ಇದ್ದರೂ ಸಹಜ ಸ್ಥಿತಿಗೆ ಮರುಳುವಿರಿ. ಉತ್ತಮ ಆದಾಯವಿದ್ದರೂ ಹಣ ಉಳಿಸಲು ವಿಫಲರಾಗುವಿರಿ. ಉದ್ಯೋಗ ಬದಲಿಸಲು ಇದು ಉತ್ತಮ ಸಮಯ. ಉದ್ಯೋಗದಲ್ಲಿ ಹಿರಿಯ ಅಧಿಕಾರಿಗಳ ಬೆಂಬಲ ಗಳಿಸುವಿರಿ. ಕುಟುಂಬದ ಹಿರಿಯರ ಕೆಲಸ ಕಾರ್ಯಗಳು ನಿಮ್ಮಿಂದ ಯಶಸ್ವಿಯಾಗಲಿದೆ. ತಂದೆಯವರ ಆರ್ಥಿಕ ಪರಿಸ್ಥಿತಿ ಉತ್ತಮಗೊಳ್ಳಲಿದೆ. ವಿದ್ಯಾರ್ಥಿಗಳು ಏಕಾಗ್ರತೆಯಿಂದ ಕಲಿಕೆಯಲ್ಲಿ ಮುಂದುವರೆಯಬೇಕು.

ಬರಹ: ಎಚ್‌. ಸತೀಶ್, ಜ್ಯೋತಿಷಿ

ಮೊಬೈಲ್:‌ 8546865832

(ಗಮನಿಸಿ: ಜ್ಯೋತಿಷ್ಯ ಶಾಸ್ತ್ರದ ಲೆಕ್ಕಾಚಾರಕ್ಕೆ ಹಲವು ಸೂತ್ರಗಳಿವೆ. ನಿರ್ದಿಷ್ಟ ರೀತಿಯಲ್ಲಿ ಕ್ರಮಬದ್ಧವಾಗಿ ಈ ರಾಶಿ ಭವಿಷ್ಯ ನೀಡಲಾಗಿದೆ. ಆದರೆ ಒಟ್ಟಾರೆಯಾಗಿ ಜ್ಯೋತಿಷ್ಯ ಎನ್ನುವುದು ನಂಬಿಕೆಯ ಮಾತು. ಓದುಗರ ನಂಬಿಕೆಯನ್ನು ‘ಹಿಂದೂಸ್ತಾನ್ ಟೈಮ್ಸ್ ಕನ್ನಡ’ ಗೌರವಿಸುತ್ತದೆ. ಇಲ್ಲಿರುವ ಯಾವುದೇ ಶಿಫಾರಸು ಅಥವಾ ಸಲಹೆಗಳನ್ನು ಪಾಲಿಸುವುದು ಓದುಗರ ವಿವೇಚನೆ, ನಂಬಿಕೆಗೆ ಬಿಟ್ಟ ವಿಷಯವಾಗಿರುತ್ತದೆ).

Whats_app_banner
ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.