How to read Upanishads Part 2: ಉಪನಿಷತ್ತುಗಳನ್ನು ಓದುವ ಆ ʻಮನೋಧರ್ಮʼ ಹೇಗಿರಬೇಕು?
How to read Upanishads Part 2: ಸಾಮಾನ್ಯವಾಗಿ ಉಪನಿಷತ್ತುಗಳಲ್ಲಿ ಅಂತರ್ಗತವಾಗಿರುವ "ಗಹನತತ್ತ್ವಗಳು ತರ್ಕಕ್ಕೆ ನಿಲುಕುವುದಿಲ್ಲ. ಎಂಬುದನ್ನು ಓದುಗರು ಮೊದಲಾಗಿ ಗಮನಿಸಬೇಕಾಗುತ್ತದೆ. ಅವು ವಾದ-ವಿವಾರ, ಚರ್ಚೆ-ಭಾಷಣಗಳಿಗೆ ಸೀಮಿತವಾದವುಗಳಲ್ಲ. ಆ ಗಹನತತ್ತ್ವಗಳಿಗೆ "ಅನುಭವ ಪ್ರಮಾಣ, ಹಾಗಾಗಿ ಅವುಗಳನ್ನು ಅನುಭವಿಸಿ ಅರ್ಥಮಾಡಿಕೊಳ್ಳಬೇಕಾಗುತ್ತದೆ.
ಉಪನಿಷತ್ತುಗಳು ಮನೋರಂಜಕ ಕಥೆ, ಕಾದಂಬರಿ, ಕಾವ್ಯ, ನಾಟಕಗಳಂತಲ್ಲ. ಹಾಗಂತ ಅವುಗಳಲ್ಲಿ ಕಥೆ, ಸಂವಾದ, ರೂಪಕ, ದೃಷ್ಟಾಂತ, ಇತ್ಯಾದಿಗಳು ಇಲ್ಲ ಎಂದರ್ಥವಲ್ಲ. ಅವೆಲ್ಲವೂ ಅದರಲ್ಲಿವೆ. ಅದರಲ್ಲಿ ದೇವ-ದಾನವರ ಕಥೆಯಿದೆ. ಗುರು-ಶಿಷ್ಯರ ಸಂವಾದಗಳಿವೆ. ಆತ್ಮಜ್ಞಾನಿ ಮತ್ತು ಜಿಜ್ಞಾಸುಗಳ ನಡುವಿನ ಪ್ರಶೋತ್ತರಗಳಿವೆ ರಥ, ಧನಸ್ಸು, ಇತ್ಯಾದಿ ರೂಪಕಗಳೂ ಇವೆ. ಮುಂತಾದ ವಿಚಾರಗಳನ್ನು ಹಿಂದಿನ ಕಂತಿನಲ್ಲಿ ಅರಿತುಕೊಂಡಾಯಿತು.
ಇನ್ನು, ಉಪನಿಷತ್ತುಗಳನ್ನು ಓದುವ ಮನೋಧರ್ಮಕ್ಕೆ ಬರುವುದಾದರೆ ಆ ಮನೋಧರ್ಮ ಹೇಗಿರಬೇಕು? ಎಂಬ ಪ್ರಶ್ನೆ ಉದ್ಭವಿಸುತ್ತದೆ.
ಆತ್ಮಜ್ಞಾನಿಗಳಾದವರು ಅತ್ಯಂತ ಉತ್ಸಾಹಿಗಳು, ಆನಂದಭರಿತರು, ಕ್ರೀಯಾಶೀಲರು, ಸೃಜನಶೀಲರು, ಧೀರರು, ಸಾಹಸಿಗಳು, ಸಾಧನಾಶೀಲರೂ ಆಗಿರುತ್ತಾರೆ. ಅಂತವರ “ಜೀವನ ದೃಷ್ಟಿಕೋನ” ವಿಶಿಷ್ಟವಾಗಿರುತ್ತದೆ. ಮಾತ್ರವಲ್ಲ ಅಂತಹವರು ನವಜೀವನ ಪಡೆದು ನವನವೀನರಾಗಿ ಕಂಗೊಳಿಸುತ್ತಾರೆ.
ಸಾಮಾನ್ಯವಾಗಿ ಉಪನಿಷತ್ತುಗಳಲ್ಲಿ ಅಂತರ್ಗತವಾಗಿರುವ "ಗಹನತತ್ತ್ವಗಳು ತರ್ಕಕ್ಕೆ ನಿಲುಕುವುದಿಲ್ಲ. ಎಂಬುದನ್ನು ಓದುಗರು ಮೊದಲಾಗಿ ಗಮನಿಸಬೇಕಾಗುತ್ತದೆ. ಅವು ವಾದ-ವಿವಾರ, ಚರ್ಚೆ-ಭಾಷಣಗಳಿಗೆ ಸೀಮಿತವಾದವುಗಳಲ್ಲ. ಆ ಗಹನತತ್ತ್ವಗಳಿಗೆ "ಅನುಭವ ಪ್ರಮಾಣ, ಹಾಗಾಗಿ ಅವುಗಳನ್ನು ಅನುಭವಿಸಿ ಅರ್ಥಮಾಡಿಕೊಳ್ಳಬೇಕಾಗುತ್ತದೆ. ತರ್ಕಮಾಡಿ ಪ್ರಯೋಜನವಿಲ್ಲ. ಅಂತೆಯೇ ಉಪನಿಷತ್ತುಗಳನ್ನು ಚಿಂತನ-ಮಂಥನ, ಮನನಾದಿಗಳಿಗೆ ಒಳಪಡಿಸಿ, ಗುರಿಯತ್ತ ಹೆಜ್ಜೆ ಹಾಕಬೇಕಾಗುತ್ತದೆ.
ಸಾಮಾನ್ಯವಾಗಿ ಮನುಷ್ಯರಲ್ಲಿ ಎರಡು ಬಗೆಯ ಕ್ರಿಯೆ-ಪ್ರತಿಕ್ರಿಯೆಗಳಿರುತ್ತವೆ. ಒಂದು – ಬೌದ್ಧಿಕ ಕ್ರಿಯೆ, (intellect) ಇನ್ನೊಂದು ಸ್ಪುರಣ (intution).
ಮನುಷ್ಯ ಮೂಲತಃ ಬುದ್ಧಿಜೀವಿ, ವಿಚಾರವಾದಿ. ಆದರೆ ಕೇವಲ ಬೌದ್ಧಿಕತೆಯಿಂದ ಇಲ್ಲವೆ ವಿಚಾರವಾದದಿಂದ ಉಪನಿಷತ್ತುಗಳು ಅರ್ಥವಾಗಲಾರವು. ಹಣ್ಣಿನ "ಸ್ವಾದ" ತಿಳಿಯಬೇಕಾದರೆ ಅದನ್ನು ತಿನ್ನಬೇಕಪ್ಪೇ? ಅದನ್ನು ಕೈಯಲ್ಲಿ ಹಿಡಿದು - ಅದು ಸಿಹಿಯೋ? ಕಹಿಯೋ ಎಂದು ಗಂಟೆಗಟ್ಟಲೆ ಚರ್ಚೆ ಮಾಡಿದರೆ ಏನು ಪ್ರಯೋಜನ? ಅಂತೆಯೇ ಉಪನಿಷತ್ತುಗಳು ಪ್ರತಿಪಾದಿಸುವ “ಆತ್ಮತತ್ತ್ವ" ಬುದ್ಧಿಯ ಪರಿಧಿಯಿಂದ ಆಚೆ ಇರುವಂತದ್ದು, ಅದನ್ನು ಅನುಭವಿಸಿಯೇ ತಿಳಿಯಬೇಕಷ್ಟೆ.
ಆತ್ಮತತ್ತ್ವಕ್ಕೆ “ಸ್ಪುರಣ"ವೇ ಸ್ಫೂರ್ತಿ. ಅದು ಹೃದ್ಗತವಾದುದು. ಅದಕ್ಕೆ ನಮ್ಮನ್ನು ಸಮರ್ಪಿಸಿಕೊಳ್ಳಬೇಕು. ಆಗ ಮಾತ್ರ ಉಪನಿಷತ್ತುಗಳ ಆಳ-ಅಗಲ-ವಿಸ್ತಾರಗಳನ್ನು ಅರಿತುಕೊಳ್ಳಲು ಸಾಧ್ಯ. ಅದನ್ನು ಮಾತಿನಲ್ಲಿ ಬಣ್ಣಿಸಲಾಗದು. ಅದು ಅನುಭವ ವೇದ್ಯ-
ಒಬ್ಬ “ಅನುಭಾವಿ"ಯ ಮಾತನ್ನು ಇನ್ನೊಬ್ಬ “ಅನುಭಾವಿ” ಮಾತ್ರ ಅರ್ಥಮಾಡಿ ಕೊಳ್ಳಬಲ್ಲ. ಅಂತೆಯೇ ಉಪನಿಷತ್ತುಗಳನ್ನು ಅರ್ಥಮಾಡಿಕೊಳ್ಳಲು “ಅನುಭವ"ವೇ ಪ್ರಮಾಣ ಎಂದು ಉಪನಿಷತ್ಕಾರರು ಒತ್ತಿ ಹೇಳಿದ್ದಾರೆ. ಈ ಮಾತು ಉಪನಿಷತ್ತುಗಳನ್ನು ಓದಲು ತೊಡಗುವ ಪ್ರತಿಯೊಬ್ಬ ಓದುಗ-ಜಿಜ್ಞಾಸುವಿಗೂ ಅನ್ವಯವಾಗುತ್ತದೆ.
ಈ ಹಿನ್ನೆಲೆಯಲ್ಲಿ ನೋಡಿದಾಗ ಉಪನಿಷತ್ತುಗಳು “ಸ್ವಸ್ವರೂಪದರ್ಶನ"ದ ರಹದಾರಿಗಳು ಎಂಬುದು ವಿದಿತವಾಗುತ್ತದೆ. ಅದು ಅಂತರಂಗದ ದರ್ಶನ. ಬಹಿರಂಗ ಪ್ರದರ್ಶನದ ವಸ್ತುವಲ್ಲ. ಈ ಮನೋಧರ್ಮದಿಂದ ಪೂರ್ವಾಗ್ರಹವಿಲ್ಲದ, ಮುಕ್ತ ಮನಸ್ಸಿನಿಂದ ಉಪನಿಷತ್ತುಗಳ ಅಧ್ಯಯನಕ್ಕೆ ಮುಂದಾದರೆ ಆತ್ಮದರ್ಶನವಾಗುವುದು ನಿಶ್ಚಿತ.
(ಭಾರತೀಯ ಸನಾತನ ಧರ್ಮ-ಸಂಸ್ಕೃತಿಗಳ ಸಾರ- ಸರ್ವಸ್ವವಾದ ವೇದ- ಉಪನಿಷತ್ತುಗಳು ಮೂಲತಃ ಸಂಸ್ಕೃತ ಭಾಷೆಯಲ್ಲಿವೆ. ಪ್ರವೃತ್ತಿಯಲ್ಲಿ ಪತ್ರಕರ್ತ, ನಿವೃತ್ತ ಶಿಕ್ಷಕ ಶಿಕಾರಿಪುರ ಈಶ್ವರ ಭಟ್ ಸಾಮಾನ್ಯ ಓದುಗರಿಗೆ ಅರ್ಥವಾಗುವಂತೆ ಶ್ರೀ ಶ್ರೀ ಅಕ್ಷರಾನಂದೇಂದ್ರ ಸರಸ್ವತಿ ಸ್ವಾಮೀಜಿ ಅವರ ಪ್ರವಚನ ಮಾಲೆಯನ್ನು ಕನ್ನಡದಲ್ಲಿ ದಾಖಲಿಸಿದ್ದಾರೆ. ಅದಕ್ಕೆ ಪೀಠಿಕೆಯಾಗಿ ಈ ಲೇಖನವಿದೆ. )
ಗಮನಿಸಬಹುದಾದ ಇತರೆ ವಿಚಾರಗಳು
New Year 2023 Lucky Zodiacs: ಹೊಸ ವರ್ಷದ ಅದೃಷ್ಟವಂತರು ಈ ರಾಶಿಯವರು!; ಲಕ್ಷ್ಮೀನಾರಾಯಣ ಯೋಗದ ಅನುಕೂಲವೂ ಇವರದ್ದು!
New Year 2023 Lucky Zodiacs: ಜ್ಯೋತಿಷ್ಯದಲ್ಲಿ ಲಕ್ಷ್ಮೀ ನಾರಾಯಣ ಯೋಗವನ್ನು ಬಹಳ ಮುಖ್ಯವೆಂದು ಪರಿಗಣಿಸಲಾಗಿದೆ. ಈ ಯೋಗದ ಪರಿಣಾಮವಾಗಿ, 2023 ರ ಆರಂಭವು ಕೆಲವು ರಾಶಿಚಕ್ರದವರಿಗೆ ಉತ್ತಮವಾಗಿರುತ್ತದೆ. ಯಾವ ರಾಶಿಚಕ್ರದವರಿಗೆ ಉತ್ತಮ ಸಮಯ? ಯಾರು ಆ ಅದೃಷ್ಟಶಾಲಿಗಳು? ಇಲ್ಲಿದೆ ವಿವರ ಕ್ಲಿಕ್ ಮಾಡಿ.
ವಿಭಾಗ