ಗುರು-ಶುಕ್ರ ಗ್ರಹಗಳ ಕರುಣೆಗೆ ನಾಂದಿ ಹಾಡುವ ಸುಖ ಸಮೃದ್ಧಿ ಯಂತ್ರ: ಇಲ್ಲಿದೆ ಈ ಯಂತ್ರದ ಪೂಜಾ ವಿಧಾನ, ಅನುಷ್ಠಾನದ ವಿವರ
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  ಗುರು-ಶುಕ್ರ ಗ್ರಹಗಳ ಕರುಣೆಗೆ ನಾಂದಿ ಹಾಡುವ ಸುಖ ಸಮೃದ್ಧಿ ಯಂತ್ರ: ಇಲ್ಲಿದೆ ಈ ಯಂತ್ರದ ಪೂಜಾ ವಿಧಾನ, ಅನುಷ್ಠಾನದ ವಿವರ

ಗುರು-ಶುಕ್ರ ಗ್ರಹಗಳ ಕರುಣೆಗೆ ನಾಂದಿ ಹಾಡುವ ಸುಖ ಸಮೃದ್ಧಿ ಯಂತ್ರ: ಇಲ್ಲಿದೆ ಈ ಯಂತ್ರದ ಪೂಜಾ ವಿಧಾನ, ಅನುಷ್ಠಾನದ ವಿವರ

ಗುರುವಿನ ಕಾರುಣ್ಯದಿಂದ ಪ್ರತಿ ಕೆಲಸವೂ ಯಶಸ್ವಿಯಾಗುತ್ತದೆ. ಶುಕ್ರನು ಸಂಸಾರದ ಅಭಿಮಾನ, ಕಾಳಜಿ ಹೆಚ್ಚಿಸುತ್ತಾನೆ. ಹೀಗೆ ಏಕಕಾಲಕ್ಕೆ ನೆಮ್ಮದಿ ಮತ್ತು ಪ್ರಗತಿಯನ್ನು ಕೊಡುವ ಯಂತ್ರ ‘ಸುಖ ಸಮೃದ್ಧಿ ಯಂತ್ರ’. ಈ ಬರಹದಲ್ಲಿ ಈ ಯಂತ್ರದ ಅನುಷ್ಠಾನ ಕ್ರಮದ ವಿವರ ಇದೆ. (ಬರಹ: ಸತೀಶ್ ಎಸ್‌., ಜ್ಯೋತಿಷಿ)

ಜೀವನದಲ್ಲಿ ಪ್ರಗತಿ ಮತ್ತು ನೆಮ್ಮದಿ ಕರುಣಿಸುವ ಸುಖ ಸಮೃದ್ಧಿ ಯಂತ್ರ
ಜೀವನದಲ್ಲಿ ಪ್ರಗತಿ ಮತ್ತು ನೆಮ್ಮದಿ ಕರುಣಿಸುವ ಸುಖ ಸಮೃದ್ಧಿ ಯಂತ್ರ (Art Factory / amazon)

ಸುಖ ಸಮೃದ್ಧಿ ಯಂತ್ರವು ಕೇವಲ ಒಂದು ಕುಟುಂಬ ವರ್ಗಕ್ಕೆ ಸೀಮಿತವಾಗಿರುತ್ತದೆ. ಸುಖ ಸಮೃದ್ಧಿಯ ವಿಚಾರಕ್ಕೆ ಬಂದರೆ ಎರಡು ಗ್ರಹಗಳನ್ನು ಮುಖ್ಯವಾಗಿ ಪರಿಗಣಿಸಬೇಕು. ಅವುಗಳೆಂದರೆ ಗುರು ಮತ್ತು ಶುಕ್ರಗ್ರಹಗಳು. ಗುರುವು ಒಳ್ಳೆಯ ಜ್ಞಾನ, ದೈವಿಕ ಗುಣಧರ್ಮ ಮತ್ತು ಉತ್ತಮ ಮನಸ್ಥಿಯನ್ನು ಮುಖ್ಯವಾಗಿ ಸೂಚಿಸುತ್ತದೆ. ಇದರಿಂದ ಹಣಕಾಸಿನ ವಿಚಾರವನ್ನು ಸಹ ತಿಳಿಯಬಹುದಾಗಿದೆ. ಮಾಡುವ ಪ್ರತಿಯೊಂದು ಕೆಲಸ ಕಾರ್ಯಗಳನ್ನು ಸತ್ಯದ ಹಾದಿಯಲ್ಲಿ ಪೂರೈಸಲು ಗುರುವಿನ ಅನುಗ್ರಹ ಅವಶ್ಯಕವಾಗುತ್ತದೆ. ಶುಕ್ರಗ್ರಹವು ಮೋಹವನ್ನು ಸೂಚಿಸುತ್ತದೆ. ಸಂಸಾರದ ಬಗ್ಗೆ ಅಭಿಮಾನ ಮತ್ತು ಕಾಳಜಿಯು ಹೆಚ್ಚಲು ಸಹಕಾರಿಯಾಗುತ್ತದೆ.

ಜೀವನದಲ್ಲಿ ಸುಖ-ಸಂತೋಷವು ನೆಲಸಲು ಸಹಕಾರಿಯಾಗುತ್ತದೆ. ಗುರುವಿನಿಂದ ದೊರೆಯುವ ಒಳ್ಳೆಯ ಯೋಜನೆಗಳು ಕಾರ್ಯರೂಪಕ್ಕೆ ಬರಲು ಶುಕ್ರನು ಸಹಾಯ ಮಾಡುತ್ತಾನೆ. ಶುಕ್ರನು ಮಧುರವಾದ ಮಾತಿಗೆ ಕಾರಕನಾಗುತ್ತಾನೆ. ಹಣಕಾಸಿನ ಅನುಕೂಲತೆಯನ್ನು ಸಹ ಸೂಚಿಸುತ್ತಾನೆ. ಕಷ್ಟರಹಿತ ಅಥವ ಐಷಾರಾಮಿ ಜೀವನವು ದೊರೆಯಲು ಶುಕ್ರನ ಸಬಲತೆ ಕಾರಣವಾಗುತ್ತದೆ. ಈ ಯಂತ್ರದ ಬಳಕೆಯಿಂದ ಉತ್ತಮ ಆರೋಗ್ಯವು ಲಭ್ಯವಾಗುತ್ತದೆ. ಹಣಕಾಸಿನ ಪ್ರಗತಿ ಕಂಡುಬರುತ್ತದೆ.

ಕುಟುಂಬದಲ್ಲಿ ಐಕ್ಯಮತ್ಯ ಉಂಟಾಗುತ್ತದೆ. ಮಕ್ಕಳ ವಿದ್ಯಾಭ್ಯಾಸ ಮತ್ತು ಜೀವನವು ಯಶಸ್ವಿನ ಹಾದಿಯಲ್ಲಿ ಸಾಗುತ್ತದೆ. ಆದರೆ ಈ ಯಂತ್ರವನ್ನು ಧರಿಸಬಾರದು. ಮನೆಯಲ್ಲಿನ ಪೂಜಾಗೃಹದಲ್ಲಿ ಇಟ್ಟು ಪೂಜಿಸಬೇಕು. ಈ ಯಂತ್ರವು ವಾಸ್ತುವಿನ ದೋಷವನ್ನು ಸರಿಪಡಿಸುತ್ತದೆ. ವಾಸ್ತುಯಂತ್ರದಂತೆ ಕೆಲಸ ನಿರ್ವಹಿಸುತ್ತದೆ.

ಈ ಯಂತ್ರದಲ್ಲಿ ಬಣ್ಣಗಳು ತುಂಬಿರುತ್ತವೆ. ಈ ಬಣ್ಣಗಳು ತನ್ನದೆ ಆದ ಮಾದರಿಯಲ್ಲಿ ಇರುತ್ತದೆ. ಕೆಲವು ಯಂತ್ರಗಳಲ್ಲಿ ಕೇವಲ ಸಂಖ್ಯೆಗಳು ಇರುತ್ತವೆ. ಸಾಮಾನ್ಯವಾಗಿ ಈ ಯಂತ್ರವನ್ನು ತಾಮ್ರದ ತಗಡಿನಲ್ಲಿ ಬರೆಯಲಾಗುತ್ತದೆ. ಆದರೆ ಆ ತಗಡಿಗೆ ಚಿನ್ನದ ಲೇಪ ಮಾಡುವುದು ಒಳ್ಳೆಯದು. ಇಲ್ಲವಾದಲ್ಲಿ ಬೆಳ್ಳಿಯ ತಗಡಿನಲ್ಲಿ ಬರೆಸುವುದು ಒಳ್ಳೆಯದು. ತಾಮ್ರದ ತಗಡಿನಲ್ಲಿ ಬರೆದಿದ್ದಲ್ಲಿ ಯಂತ್ರವನ್ನು ಹಳದಿ ಬಟ್ಟೆಯ ಮೇಲೆ ಇಡಬೇಕು. ಬೆಳ್ಳಿಯ ತಗಡಿನಲ್ಲಿ ಬರೆಸಿದ್ದಲ್ಲಿ ಯಂತ್ರವನ್ನು ಹಾಲಿನ ಬಣ್ಣದ ಬಟ್ಟೆಯ ಮೇಲೆ ಇರಿಸಬೇಕು. ಈ ಯಂತ್ರವನ್ನು ಹಾಲಿನಿಂದ ಪೂಜಿಸಬೇಕು. ನೇವೇದ್ಯವನ್ನಾಗಿ ಹಾಲಿನಿಂದ ತಯಾರಿಸಿದ ಸಿಹಿತಿಂಡಿಯನ್ನು ಬಳಸಬೇಕು. ದೇವಾಲಯಕ್ಕೆ ಹಳದಿ ಬಟ್ಟೆ ಮತ್ತು ಕಡಲೆಬೇಳೆಯನ್ನು ನೀಡಬೇಕು. ಮನೆಯಲ್ಲಿ ಎರಡು ದೀಪಗಳನ್ನು ಹಚ್ಚಬೇಕು. ಪ್ರತಿದಿನವು ಮುಂಬಾಗಿಲ ಹೊಸಲನ್ನು ನೀರಿನಿಂದ ಶುಭ್ರಗೊಳಿಸಬೇಕು. ಮನೆಯಲ್ಲಿ ಅಪಶಬ್ದಗಳನ್ನು ಬಳಸಬಾರದು ಇದರಿಂದ ಶುಭಫಲಗಳು ದೊರೆಯುತ್ತವೆ.

ಈ ಯಂತ್ರವು ಚೌಕಾಕಾರದಲ್ಲಿ ಇರುತ್ತದೆ. ಈ ಯಂತ್ರದಲ್ಲಿ ಶ್ರೀಸೂಕ್ತದ ಕೆಲವೊಂದು ಪದಗಳು ಇರುತ್ತವೆ. ದಕ್ಷಿಣಾಮೂರ್ತಿ ಸ್ತೋತ್ರದ ಅಲ್ಪಭಾಗ ಇದರಲ್ಲಿ ಇರುತ್ತದೆ. ಕೆಲವೊಮ್ಮೆ 'ಓಂ ಶ್ರೀ ಮಹಾಲಕ್ಷ್ಮೈ ನಮಃ' ಎಂಬ ಪದಗಳನ್ನು ಬರೆಯಲಾಗುತ್ತದೆ. ಪ್ರತಿಯೊಂದು ಮೂಲೆಯಲ್ಲಿಯೂ 'ಶ್ರೀ ಗುರುಭ್ಯೋ ನಮಃ' ಎಂಬ ಪದಗಳಿರುತ್ತವೆ. ಯಂತ್ರದ ಮದ್ಯಭಾಗದಲ್ಲಿ ಅಷ್ಟದಳ ಪದ್ಮವಿರುತ್ತದೆ. ಅದರ ಸುತ್ತ ಮೂರು ರೇಖೆಗಳ ವೃತ್ತವಿರುತ್ತದೆ. ಇದರಿಂದ ಕುಟುಂಬದಲ್ಲಿ ಉತ್ತಮ ಅನುಬಂಧ ಉಂಟಾಗುತ್ತದೆ. ಸಂತಾನದೋಷವು ನಿವಾರಣೆಯಾಗುತ್ತದೆ. ಮನೆತನದ ಗೌರವವನ್ನು ಕಾಪಾಡುವಲ್ಲಿ ಯಶಸ್ಸು ದೊರೆಯುತ್ತದೆ.

ಈ ಯಂತ್ರವನ್ನು ಬುದವಾರದಂದು ಸ್ಥಾಪಿಸಿ ಬಿಳಿಬಣ್ಣದ ಮತ್ತು ಹಳದಿ ಬಣ್ಣದ ಹೂಗಳಿಂದ ಪೂಜಿಸಬೇಕು. ಯಾವುದೇ ಯಂತ್ರಗಳನ್ನು ನೇವೇಧ್ಯವಿಲ್ಲದೆ ಪೂಜಿಸಬಾರದು. ಬಾಳೆಹಣ್ಣನ್ನು ಅರ್ಪಿಸಿದರೂ ತೊಂದರೆ ಇಲ್ಲ. ಈ ಯಂತ್ರವನ್ನು ಕೆಂಪು ಹೂಗಳಿಂದ ಪೂಜಿಸಬಾರದು. ಕನಕಾಂಬರದಿಂದ ಪೂಜಿಸಬಹುದು. ಈ ಯಂತ್ರವನ್ನು ಪೂರ್ವ ಅಥವ ಉತ್ತರ ದಿಕ್ಕಿನ ಮದ್ಯಭಾಗದಲ್ಲಿ ಇಟ್ಟು ಪೂಜಿಸಬಹುದು. ಗುರುವಾರದಂದು ಪುಷ್ಯ ನಕ್ಷತ್ರವಿರುವ ದಿನ ಪೂಜೆ ಮಾಡುವುದು ಮುಖ್ಯ. ಅದೇ ರೀತಿ ಶುಕ್ರವಾರದ ದಿನ ಉತ್ತರಾಭಾದ್ರ ನಕ್ಷತ್ರ ಇರುವ ದಿನದಂದು ಪೂಜೆಯನ್ನು ಮಾಡುವುದು ಬಲು ಮುಖ್ಯ.

Whats_app_banner

ವಿಭಾಗ

ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.