ಉಣಕಲ್ ಸಿದ್ಧೇಶ್ವರ ರಥೋತ್ಸವ ಇಂದು; ಹಠಯೋಗಿ ಉಣಕಲ್ ಸಿದ್ದಪ್ಪಜ್ಜನವರ ಬದುಕಿನ ಚಿತ್ರಣ ಮತ್ತು ಜೀವನಾದರ್ಶಗಳು
ಉಣಕಲ್ ಸಿದ್ಧೇಶ್ವರ ರಥೋತ್ಸವ ಇಂದು. ತನ್ನಿಮಿತ್ತವಾಗಿ ಉಣಕಲ್‌ನ ಶ್ರೀ ಸದ್ಗುರು ಸಿದ್ದಪ್ಪಜ್ಜನವರ ಮೂಲ ಗದ್ದುಗೆ ಮಠದಲ್ಲಿ ಧಾರ್ಮಿಕ ಕಾರ್ಯಕ್ರಮಗಳು ಅಯೋಜನೆಯಾಗಿವೆ. ಯಾರು ಈ ಹಠಯೋಗಿ ಉಣಕಲ್ ಸಿದ್ದಪ್ಪಜ್ಜ ಎಂಬ ಕುತೂಹಲ ಸಹಜ. ಹಠಯೋಗಿ ಉಣಕಲ್ ಸಿದ್ದಪ್ಪಜ್ಜನವರ ಬದುಕಿನ ಚಿತ್ರಣ ಮತ್ತು ಜೀವನಾದರ್ಶಗಳ ಕಡೆಗೆ ಒಂದು ಕಿರುನೋಟ. (ಲೇಖನ - ಚನ್ನಬಸಪ್ಪ ಧಾರವಾಡಶೆಟ್ಟರ)

ಸೂರ್ಯನ ಹೊಂಗಿರಣದಂತೆ ಉದಯಿಸಿ ಸಮಯ ಸಾಗಿದಂತೆ ಉಜ್ವಲ ಬೆಳಕಾಗಿ ತಾವು ಸಂಚರಿಸಿದಲ್ಲೆಲ್ಲಾ ಬೆಳಕು ಚೆಲ್ಲಿ, ಲೋಕದ ಜೀವಿಗಳಿಗೆ ಲೋಕಾನುಭವ ಸಧರ್ಮ, ಚಾರಿತ್ರ್ಯ, ನೀತಿ, ಭಕ್ತಿಯ ನಿಷ್ಠುರ ಮಾತುಗಳನ್ನಾಡುತ್ತ ಲೀಲೆಗಳನ್ನು ತೋರುತ್ತ, ಜನ ಮನದ ಹತ್ತಿರ ಸಾಗಿ ದೇವ ಮಾನವನಾದವರೇ ಹಠಯೋಗಿ ಶ್ರೀ ಸಿದ್ದಪ್ಪಜ್ಜನವರು. ಉಣಕಲ್ಲನ್ನು ಕರ್ಮಭೂಮಿಯನ್ನಾಗಿ ಮಾಡಿಕೊಂಡು ಸುತ್ತ ಮುತ್ತಲಿನ ಪ್ರದೇಶಗಳಲ್ಲಿಯೂ ಪ್ರಜ್ವಲಿಸಿ ಲೋಕೋದ್ಧಾರ ಮಾಡಿದ ಮೇರು ಯೋಗಿಗಳು ಹೌದು. ಚಿಕ್ಕಂದಿನಿಂದಲೇ ಅಧ್ಯಾತ್ಮದ ಒಲವುಳ್ಳವರಾಗಿ ಶಾಲಾಭ್ಯಾಸದಲ್ಲಿಯೂ ತಮ್ಮ ಗುರುಗಳಿಗೆ ಆಗಾಗ ವಯೋಮಿತಿಗೂ ಮೀರಿದ ಆಧ್ಯಾತ್ಮದ ಒಲುವಿನ ಭಾವನೆಗಳನ್ನು ವ್ಯಕ್ತ ಪಡಿಸುತ್ತ ಅಗಾಧ ಪಾಂಡಿತ್ಯದ ಮಾತುಗಳನ್ನು ಸಾಧಕರಂತೆ ಉತ್ತರಿಸಿದವರು.
ಹಠಯೋಗಿ ಉಣಕಲ್ ಸಿದ್ದಪ್ಪಜ್ಜನವರು
ಬಳ್ಳಾರಿ ಜಿಲ್ಲೆಯ ಒಳಗುಂದಿ ಗ್ರಾಮದಲ್ಲಿ ಪೂಣ್ಯ ಜೀವಿಗಳಾದ ಶಿವಪ್ಪ, ತಾಯಿ ಪಾರ್ವತೆಮ್ಮನವರ ಉದರದಲ್ಲಿ 1859ರ ಡಿಸೆಂಬರ 20ರ ಸೋಮವಾರ ಬೆಳಗಿನ ಜಾವದಲ್ಲಿ ಜನ್ಮ ತಾಳಿದರು. ಇವರು ಹುಟ್ಟಿನಿಂದಲೇ ನಿರ್ಮೊಹಿಗಳು, ಬಾಲ್ಯದಲ್ಲಿಯೇ ಹೋಳಿಗೆ ತುಪ್ಪ ತಿಪ್ಪೆಗೆಸೆದು ವೈರಾಗ್ಯದ ಒಲುವಿನ ಮುನ್ನುಡಿ ಬರೆದರು. ಕಾಲಕ್ರಮೇಣ ಮಗು ಬೆಳೆದು 12 ವರ್ಷಕ್ಕೆ ಕಾಲಿಟ್ಟ ಸಮಯದಲ್ಲಿ ಮದುವೆ ಪ್ರಸ್ತಾಪ ತಂದೆ ತಾಯಿಯವರಿಂದಾದಾಗ ವಿನಯದಿಂದ ತಿರಸ್ಕರಿಸಿ ವೈರಾಗ್ಯದತ್ತ ಒಲುಮೆ ಶ್ರೇಷ್ಠವೆಂದು ಗುರುಗಳನ್ನರಿಸುತ್ತ ದೇಶ ಸಂಚಾರಿಯಾಗಿ ಅಲ್ಲಲ್ಲಿ ಭಕ್ತರ ಮನ ಗೆದ್ದರು. ಅನುಭವಿಗಳು ಹಾಗೂ ಸಾಧಕರಾದ ಫಕ್ಕೀರಪ್ಪನವರ ದರ್ಶನ ಮಾಡಿ ಶಿಷ್ಯತ್ವ ಪಡೆದರು. ಗುರುಗಳ ಇಚ್ಛೆಯಂತೆ ವಿದ್ಯೆ ಸಾಧನೆಗೈದು ಯೋಗಿಯಾಗುವ ಎಲ್ಲ ಗುಣಗಳನ್ನು ಹೊಂದಿ ಗುರುಗಳ ಮೆಚ್ಚುಗೆಗೆ ಪಾತ್ರರಾದವರು.
ಆಡುಮಾತುಗಳಲ್ಲೇ ಧರ್ಮದ ತಿರುಳು ವಿವರಿಸುತ್ತಿದ್ದ ಸಿದ್ದಪ್ಪಜ್ಜ
ಇವರು ಜನರೊಂದಿಗೆ ಬೆರೆತು ಅವರಿಗೆ ಗೂಡಾರ್ಥ ಮಾತುಗಳನ್ನಾಡುತ್ತ ಅಧ್ಯಾತ್ಮಭಾವ ತುಂಬುತ್ತ, ಧರ್ಮದ ನೆಲೆ ತಿಳಿಸುತ್ತ, ತ್ಯಾಗ, ಭಕ್ತಿ, ಧಾನ, ಧರ್ಮದ ತಿರಳನ್ನು ತಿಳಿಸುತ್ತ ಸಂಚರಿಸುತ್ತ ಅವರ ಆಡು ಮಾತುಗಳೆಂದರೆ
ಇದ್ದರೂ ಇಲ್ಲದಂತೆ ಇರಬೇಕಲೇ ಸೂಳೆತರಹ ಹೇಗೆಂದ್ರ ಸತ್ತಂಗ ಇರಬೇಕಪಾ”
ಮಾಡಬಾರದ್ದ ಮಾಡಿದರ ಆಗಬಾರದ್ದು ಆಗತೈತಲೇ ಸೂಳೇತಮ್ಮಾ
ಸಾಕದಂರ ಸಾಹುಕಾರ, ಬೇಕೆಂದಾವ ಭಿಕಾರಿಲೇ ಸೂಳೇತಮ್ಮಾ”
ಸತ್ತ ಬಳಿಕ ಸಾವಿರ ವರ್ಷ ಬದಕಬೇಕಲೇ ಸೂಳೇತಮ್ಮಾ”
ಹೀಗೆ ಸಾವಿರಾರು ನುಡಿಗಳ ಮೂಲಕ ಮಾತುಗಳನ್ನು ಹೇಳುತ್ತ ಸಂಚರಿಸುತ್ತಿದ್ದರು. ಸಂಕಷ್ಟದಲ್ಲಿ ಸಿಲುಕಿದ ಜನರಿಗೆ ಉಪಕಾರ ಮಾಡುತ್ತ, ಬುದ್ದಿ ಹೇಳುತ್ತಲೇ ಊರಿಂದೂರಿಗೆ ಸಂಚರಿಸಿ ಕೊನೆಗೆ ಉಣಕಲ್ಲಿಗೆ ಬಂದು ಅಲ್ಲಿ ಮೈಲಾರಲಿಂಗೇಶ್ವರ ದೇವಸ್ಥಾನದ ಸರಮಾಲೆಯನ್ನು ತೋರಿಸುತ್ತಿದ್ದರು. ಪವಾಡಗಳನ್ನು ಕಂಡು ಭಕ್ತರು ಮೈಮರೆಯುತ್ತಿದ್ದರು. ಇವರು 1921ರ ಜನವರಿ31 ರಂದು ಶಿವನಲ್ಲಿ ಲೀನವಾದರು. ಲೀನವಾದ ಉಣಕಲ್ಲಿನ ಪೂರ್ವಭಾಗದಲ್ಲಿ ಮೂಲಗದ್ದುಗೆಯ ಬೃಹನ್‌ಮಠವಾಗಿದ್ದು ಇದೇ ಗ್ರಾಮದ ಪಶ್ಚಿಮ ಭಾಗದಲ್ಲಿ ಒಂದು ಬೃಹನ್‌ಮಠ ಕಟ್ಟಿಸಿದ್ದಾರೆ. ನಿತ್ಯ ಪೂಜೆ, ಅಭಿಷೇಕಗಳಿಂದ ಪೂಜ್ಯರ ಸೇವೆ ನಡೆಯುತ್ತಲೇ ಇದೆ. ಹೀಗೆ ಒಂದೇ ಊರಲ್ಲಿ ಎರಡು ಮಠಗಳು, ಎರಡು ಜಾತ್ರೆ ವಿಶೇಷವೆನಿಸಿದೆ.
ಲೇಖನ - ಚನ್ನಬಸಪ್ಪ ಧಾರವಾಡಶೆಟ್ಟರ, ಹುಬ್ಬಳ್ಳಿ

ವಿಭಾಗ