ಮಂಗಳ ಯಂತ್ರ: ಕುಜನಿಂದ ಶುಭ ಫಲ ಬಯಸುವವರಿಗೆ ಆಸರೆಯಾಗುವ ಯಂತ್ರ, ಯಾವ ರಾಶಿಯವರಿಗೆ ಇದು ಸೂಕ್ತ? -ಇಲ್ಲಿದೆ ವಿವರ
ಕುಜನ ಯಂತ್ರವನ್ನು ಬಂಗಾರ, ಬೆಳ್ಳಿ ಅಥವಾ ತಾಮ್ರದ ತಗಡಿನಲ್ಲಿ ಬರೆಸಬಹುದಾಗಿದೆ. ಇದರಿಂದ ಭೂವಿವಾದವು ದೂರವಾಗುತ್ತದೆ. ಸೋದರರ ನಡುವೆ ಉತ್ತಮ ಬಾಂಧವ್ಯ ರೂಪಗೊಳ್ಳುತ್ತದೆ. ನಾಯಕತ್ವದ ಗುಣವು ಹೆಚ್ಚುತ್ತದೆ. (ಬರಹ: ಸತಿಶ್ ಎಚ್., ಜ್ಯೋತಿಷಿ)

ಪ್ರತಿಯೊಂದು ಕುಂಡಲಿಯಲ್ಲಿಯೂ ಕುಜನು (ಮಂಗಳ ಅಥವಾ ಅಂಗಾರಕ) ಮುಖ್ಯ ಪಾತ್ರ ವಹಿಸುತ್ತಾನೆ. ಕುಜನಿಂದ ಕೇವಲ ಅಶುಭ ಫಲಗಳು ಮಾತ್ರವೇ ದೊರೆಯುತ್ತವೆ ಎಂದು ಕೆಲವರು ತಪ್ಪು ತಿಳಿವಳಿಕೆ ಹೊಂದಿದ್ದಾರೆ. ವಾಸ್ತವವಾಗಿ ಕುಜನು ಶುಭಫಲಗಳನ್ನೂ ನೀಡುತ್ತಾನೆ. ಆದ್ದರಿಂದಲೇ ಕುಜನಿಗೆ ಮಂಗಳ ಎಂಬ ಹೆಸರು ಸಹ ಇದೆ. ವಿದ್ಯಾ ಬುದ್ಧಿ ಅಧಿಕವಾಗಿದ್ದರೂ ಸಹ ಕೆಲವರಲ್ಲಿ ಧೈರ್ಯದ ಕೊರತೆ ಕಂಡು ಬರುತ್ತದೆ. ಇಂಥವರು ಧೈರ್ಯವನ್ನು ನೀಡುವ ಕುಜನಿಗೆ ಸಂಬಂಧಪಟ್ಟ ಯಂತ್ರವನ್ನು ಧರಿಸಿದರೆ ಉತ್ತಮ ಫಲಗಳನ್ನು ನಿರೀಕ್ಷಿಸಬಹುದು.
ಆದರೆ ಕುಜನ ಜೊತೆ ಇರುವ ಇತರೆ ಗ್ರಹಗಳನ್ನು ಪರಿಗಣಿಸಬೇಕು. ಕುಜನ ಜೊತೆ ಇರುವ ಗ್ರಹವು ಕುಜನಿಗಿಂತ ಪ್ರಭಾವಶಾಲಿ ಆದಲ್ಲಿ ಕುಜನ ಯಂತ್ರವನ್ನು ಧರಿಸುವುದು ಒಳ್ಳೆಯದು. ಮೇಷ, ಕಟಕ, ಸಿಂಹ, ವೃಶ್ಚಿಕ, ಧನಸ್ಸು ಮತ್ತು ಮೀನ ಲಗ್ನದವರು ಅಥವಾ ರಾಶಿಯವರು ಕುಜನ ಯಂತ್ರ ಅಥವ ತಾಯತವನ್ನು ಉಪಯೋಗಿಸುವುದು ಹೆಚ್ಚು ಪ್ರಯೋಜನಕಾರಿ ಆಗುತ್ತದೆ. ಉಳಿದವರು ಕುಜನ ಯಂತ್ರವನ್ನು ಪೂಜಿಸುವುದರಿಂದ ಉತ್ತಮ ಫಲಗಳನ್ನು ಪಡೆಯಬಹುದು.
ಕುಜನ ಯಂತ್ರವನ್ನು ಬಂಗಾರ, ಬೆಳ್ಳಿ ಅಥವಾ ತಾಮ್ರದ ತಗಡಿನಲ್ಲಿ ಬರೆಸಬಹುದಾಗಿದೆ. ಇದರಿಂದ ಭೂವಿವಾದವು ದೂರವಾಗುತ್ತದೆ. ಸೋದರರ ನಡುವೆ ಉತ್ತಮ ಬಾಂಧವ್ಯ ರೂಪಗೊಳ್ಳುತ್ತದೆ. ನಾಯಕತ್ವದ ಗುಣವು ಹೆಚ್ಚುತ್ತದೆ. ನಿಮ್ಮ ಕೆಲಸ ಕಾರ್ಯಗಳಿಗೆ ಎಲ್ಲರಿಂದಲೂ ಮೆಚ್ಚುಗೆ ಅಥವಾ ಹೊಗಳಿಕೆ ದೊರೆಯುತ್ತದೆ. ದೇವರಿಗೆ ಸಂಬಂಧಿಸಿದ ಜಪ-ತಪದಲ್ಲಿ ಆಸಕ್ತಿ ಮೂಡುತ್ತದೆ. ಇದಲ್ಲದೆ ಧೈರ್ಯವು ಹೆಚ್ಚುತ್ತದೆ.
ಇದನ್ನೂ ಓದಿ: ಇಷ್ಟಸಿದ್ಧಿಗಾಗಿ ಯಂತ್ರ ಪೂಜೆ, ಸೂರ್ಯ ಯಂತ್ರದ ಮಹತ್ವ
ಕುಜ ಯಂತ್ರದ ಪೂಜಾ ವಿಧಾನ
ಸ್ವಾತಿ ನಕ್ಷತ್ರವಿರುವ ಭಾನುವಾರ, ಮಂಗಳವಾರ ಅಥವಾ ಗುರುವಾರಗಳಂದು ಯಂತ್ರವನ್ನು ಬಳಿ ಸದಾಕಾಲ ಇಟ್ಟುಕೊಳ್ಳಬಹುದು. ಆದರೆ ವಾಹನ ಚಾಲನೆ ಮಾಡುವ ವೇಳೆ ಸಂಯಮದಿಂದ ವರ್ತಿಸಬೇಕು. ಆತುರದಿಂದ ಯಾವುದೇ ತೀರ್ಮಾನವನ್ನು ತೆಗೆದುಕೊಳ್ಳಬಾರದು. ದೇವರ ಬಳಿ ಯಂತ್ರವನ್ನು ಇರಿಸಿ ಪೂಜೆ ಮಾಡುವವರು ಕೆಂಪು ಬಣ್ಣದ ಹೂಗಳಿಂದ ಪೂಜಿಸಬೇಕು. ದೇವರಿಗೆ ಬೇಳೆಯ ಹೋಳಿಗೆಯನ್ನು ನೈವೇದ್ಯವಾಗಿ ನೀಡಬೇಕು. ರಟ್ಟೆಯಲ್ಲಿ ಕುಜನ ಯಂತ್ರವನ್ನು ಧರಿಸುವರು ಶ್ರೀ ಸುಬ್ರಹ್ಮಣ್ಯ ಸ್ವಾಮಿ ಅಥವಾ ಲಕ್ಷ್ಮೀನರಸಿಂಹ ಸ್ವಾಮಿ ದೇವರಿಗೆ ಪೂಜೆಯನ್ನು ಮಾಡಿಸಬೇಕು. ಶ್ರೀ ಸುಬ್ರಹ್ಮಣ್ಯ ಸ್ವಾಮಿ ದೇವಾಲಯಕ್ಕೆ ವಿಭೂತಿಯನ್ನು ನೀಡಬೇಕು. ಹಾಗೆಯೇ ಶ್ರೀ ಲಕ್ಷ್ಮಿ ನರಸಿಂಹಸ್ವಾಮಿ ದೇವಾಲಯಕ್ಕೆ ಬೆಣ್ಣೆಯನ್ನು ನೀಡಬೇಕು.
ಯಾವ ರಾಶಿಯವರು ಹೇಗೆ ಕುಜ ಯಂತ್ರ ಪೂಜಿಸಬೇಕು?
ಮೇಷ ರಾಶಿಯವರು ಕುಜನ ಯಂತ್ರವನ್ನು ಧರಿಸಿದಲ್ಲಿ ಉತ್ತಮ ಆರೋಗ್ಯ ಲಭಿಸುತ್ತದೆ. ಕುಟುಂಬದಲ್ಲಿ ಮತ್ತು ಸಮಾಜದಲ್ಲಿ ನಿಮ್ಮ ಮನಸ್ಸಿಗೆ ವಿಶೇಷ ಗೌರವ ದೊರೆಯುತ್ತದೆ. ವಾದ ವಿವಾದಗಳಿಂದ ದೂರ ಉಳಿಯುವಿರಿ. ಮಾನಸಿಕ ಸ್ಥಿತಿ ಉತ್ತಮವಾಗಿರುತ್ತದೆ. ಕಟಕ ರಾಶಿಯವರು ಕುಜನ ಯಂತ್ರವನ್ನು ಧರಿಸಿದಲ್ಲಿ ಅಥವಾ ಪೂಜಿಸಿದಲ್ಲಿ ಹೊಸದಾಗಿ ಆರಂಭಿಸುವ ಕೆಲಸಗಳಲ್ಲಿ ಸುಲಭವಾದ ಯಶಸ್ಸು ದೊರೆಯುತ್ತದೆ. ಮಕ್ಕಳ ವಿಚಾರದಲ್ಲಿ ಉತ್ತಮ ನಿರ್ಧಾರಗಳನ್ನು ತೆಗೆದುಕೊಳ್ಳಲು ಸಾಧ್ಯವಾಗುತ್ತದೆ. ವಿದ್ಯಾರ್ಥಿಗಳಿಗೆ ನಿರೀಕ್ಷಿತ ಮಟ್ಟದ ಯಶಸ್ಸು ದೊರೆಯುತ್ತದೆ.
ಸಿಂಹ ಲಗ್ನ ಅಥವಾ ಸಿಂಹ ರಾಶಿಯವರು ಕುಜನ ಯಂತ್ರವನ್ನು ಧರಿಸಿದಲ್ಲಿ ಅಥವಾ ಪೂಜಿಸಿದಲ್ಲಿ ಅನಿರೀಕ್ಷಿತ ಶುಭಫಲಗಳು ದೊರೆಯುತ್ತವೆ. ಕುಟುಂಬದ ಹಿರಿಯರಿಗೆ ಮುಖ್ಯವಾಗಿ ತಂದೆಯವರಿಗೆ ಸಿಡುಕಿನ ಸ್ವಭಾವವಿದ್ದಲ್ಲಿ ಶಾಂತಿ ನೆಮ್ಮದಿಯಿಂದ ನಡೆದುಕೊಳ್ಳುವ ಮನಸ್ಥಿತಿ ದೊರೆಯುತ್ತದೆ. ಸ್ವಂತ ಜಮೀನು ಅಥವಾ ಮನೆಯನ್ನು ಕೊಳ್ಳುವ ಅವಕಾಶಗಳು ಹೆಚ್ಚುತ್ತವೆ. ಕುಟುಂಬದಲ್ಲಿ ಶಾಂತಿ ನೆಮ್ಮದಿ ನೆಲೆಸುತ್ತದೆ.
ವೃಶ್ಚಿಕ ರಾಶಿಯಲ್ಲಿ ಅಥವಾ ಲಗ್ನದಲ್ಲಿ ಜನಿಸಿದವರು ಕುಜನ ಯಂತ್ರವನ್ನು ಧರಿಸಿದಲ್ಲಿ ಅಥವಾ ಪೂಜಿಸಿದಲ್ಲಿ ಆತ್ಮವಿಶ್ವಾಸವು ಹೆಚ್ಚುತ್ತದೆ. ಎಲ್ಲರೊಂದಿಗೆ ಪ್ರೀತಿ ವಿಶ್ವಾಸದಿಂದ ನೋಡಿಕೊಳ್ಳುವ ಮನಸ್ಥಿತಿ ಉಂಟಾಗುತ್ತದೆ. ಉತ್ತಮ ಆರೋಗ್ಯವು ಲಭಿಸುತ್ತದೆ. ಉದ್ಯೋಗದಲ್ಲಿ ಇದ್ದ ಅಡ್ಡಿ ಆತಂಕಗಳು ದೂರವಾಗುತ್ತವೆ.
ಧನುರ್ ಲಗ್ನ ಅಥವಾ ಧನುರ್ ರಾಶಿಯಲ್ಲಿ ಜನಿಸಿದವರು ಉತ್ತಮ ವಿದ್ಯಾಭ್ಯಾಸವನ್ನು ಗಳಿಸುತ್ತಾರೆ. ಒಳ್ಳೆಯ ಸಂತಾನವಿರುತ್ತದೆ. ಮಕ್ಕಳ ಆರೋಗ್ಯದಲ್ಲಿ ತೊಂದರೆ ಕಂಡು ಬರುವುದಿಲ್ಲ. ಅನಾವಶ್ಯಕ ಖರ್ಚು ವೆಚ್ಚಗಳು ಕಡಿಮೆಯಾಗುತ್ತವೆ. ಮೀನ ಲಗ್ನ ಅಥವಾ ರಾಶಿಯಲ್ಲಿ ಜನಿಸಿದವರು ಕುಜನ ಯಂತ್ರವನ್ನು ಧರಿಸಿದಲ್ಲಿ ಮಾತುಕತೆಯಲ್ಲಿ ಎಲ್ಲರ ಮನಸ್ಸನ್ನು ಗೆಲ್ಲುತ್ತಾರೆ. ವಾದ ವಿವಾದಗಳು ದೂರ ಉಳಿಯುತ್ತದೆ. ತಮ್ಮ ಕೆಲಸ ಕಾರ್ಯಗಳು ನಿರೀಕ್ಷಿತ ಯಶಸ್ಸನ್ನು ಗಳಿಸುತ್ತಾರೆ. ಆದರೆ ಹಟದ ಗುಣದಿಂದ ಒಮ್ಮೆ ತೆಗೆದುಕೊಂಡ ನಿರ್ಧಾರಗಳನ್ನು ಬದಲಿಸುವ ಸಾಧ್ಯತೆಗಳಿವೆ.

ವಿಭಾಗ