ಅಯೋಧ್ಯೆ ರಾಮಮಂದಿರಕ್ಕೆ ಹರಿದು ಬಂದ ಉಡುಗೊರೆಗಳ ಪೈಕಿ ಅದ್ಭುತ ಎನ್ನಿಸುವ 4 ವಸ್ತುಗಳಿವು
ರಾಮಮಂದಿರ ಉದ್ಘಾಟನೆಗೂ ಮುನ್ನ ಅಯೋಧ್ಯೆಗೆ ದೇಶದ ನಾನಾ ಭಾಗಗಳಿಂದ ಉಡುಗೊರೆಗಳ ರಾಶಿಯೇ ಬಂದಿವೆ. ಇವುಗಳಲ್ಲಿ ನಾಲ್ಕು ಬಹಳ ಭಿನ್ನ ಎನ್ನಿಸುವ ಅನನ್ಯ ಉಡುಗೊರೆಗಳು ಕೂಡ ಬಂದಿವೆ. ಅವು ಯಾವುವು, ಏನದರ ವಿಶೇಷ ನೋಡಿ.
ಅಯೋಧ್ಯೆ ರಾಮಮಂದಿರ ಉದ್ಘಾಟನೆಗೆ ಕ್ಷಣಗಣನೆ ಆರಂಭವಾಗಿದೆ. ಬಾಲರಾಮನ ಪ್ರಾಣ ಪ್ರತಿಷ್ಠೆಗೂ ಮುನ್ನ ದೇಶದಾದ್ಯಂತ ರಾಮಭಕ್ತರು ಅಯೋಧ್ಯೆಗೆ ಉಡುಗೊರೆ ದೇಣಿಗೆಗಳ ಮಹಾಪೂರವನ್ನೇ ಹರಿಸಿದ್ದಾರೆ. ಭಾರತದ ಮಾತ್ರವಲ್ಲದೇ ವಿದೇಶಗಳಿಂದಲೂ ರಾಮಮಂದಿರಕ್ಕೆ ಉಡುಗೊರೆಗಳು ಬಂದಿವೆ. ಭಕ್ತರಿಂದ ಅದ್ಭುತ, ಅನನ್ಯ ಉಡುಗೊರೆ ಬಂದಿದ್ದು, 4 ನಾಲ್ಕು ಭಿನ್ನ ಎನ್ನಿಸುವ ಉಡುಗೊರೆಗಳನ್ನು ವಿಡಿಯೊ ಸಹಿತ ಇಲ್ಲಿ ತೋರಿಸಲಾಗಿದೆ.
108 ಅಡಿ ಉದ್ದದ ಊದಿನಕಡ್ಡಿ
ವಡೋದರಾದಲ್ಲಿ 108 ಅಡಿ ಉದ್ದದ ಊದಿನಕಡ್ಡಿಯನ್ನು ತಯಾರಿಸಲಾಗಿತ್ತು. ಈ ಊದಿನಕಡ್ಡಿಯು ಬರೋಬ್ಬರಿ 3500 ಕೆಜಿ ತೂಕವಿದೆ. ಇದನ್ನು ತಯಾರಿಸಲು 6 ತಿಂಗಳು ಸಮಯ ಬೇಕಾಗಿತ್ತು. ಅದಕ್ಕೆ 5 ಲಕ್ಷ ಖರ್ಚಾಗಿತ್ತು. ರಾಮಮಂದಿರದ ಶಂಕುಸ್ಥಾಪನೆ ಕಾರ್ಯಕ್ರಮದ ಮೊದಲು ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ನ ಮಹಂತ್ ನೃತ್ಯ ಗೋಪಾಲ್ ದಾಸ್ ಅವರು ಧೂಪವನ್ನು ಬೆಳಗಿಸಿದರು. ಹಸುವಿನ ಸಗಣಿ, ತುಪ್ಪ, ಸಾರ, ಗಿಡಮೂಲಿಕೆಗಳು ಮತ್ತು ಹೂವಿನ ಸಾರಗಳನ್ನು ಬಳಸಿ ಇದನ್ನು ತಯಾರಿಸಲಾಗಿತ್ತು. ಸುಗಂಧವು 50 ಕಿಮೀ ದೂರವನ್ನು ತಲುಪುತ್ತದೆ ಎಂದು ಸಹ ಹೇಳಲಾಗುತ್ತದೆ.
ರಾಮಮಂದಿರ ಪರಿಕಲ್ಪನೆಯ ನೆಕ್ಲೇಸ್
ಸೂರತ್‌ನ ಆಭರಣ ವ್ಯಾಪಾರಿಯೊಬ್ಬರು ರಾಮಮಂದಿರ ಪರಿಕಲ್ಪನೆಯ ನೆಕ್ಲೇಸ್‌ವೊಂದನ್ನು ತಯಾರಿಸಿದ್ದಾರೆ. ಇದಕ್ಕೆ 5000 ಅಮೆರಿಕನ್ ಡೈಮಂಡ್ ಹಾಗೂ 2 ಕೆಜಿ ಬೆಳ್ಳಿಯನ್ನ ಬಳಸಲಾಗಿದೆ. 40 ಕುಶಲಕರ್ಮಿಗಳು 35 ದಿನಗಳಲ್ಲಿ ಈ ನೆಕ್ಲೇಸ್ ವಿನ್ಯಾಸವನ್ನು ಪೂರ್ಣಗೊಳಿಸಿದ್ದಾರೆ ಎಂದು ಎಎನ್‌ಐ ಸುದ್ದಿಸಂಸ್ಥೆ ವರದಿ ಮಾಡಿದೆ.
ರಾಸೇಜ್ ಜ್ಯುವೆಲ್ಸ್‌ನ ನಿರ್ದೇಶಕ ಕೌಶಿಕ್ ಕಾಕಾಡಿಯಾ ಅವರು ಎಎನ್‌ಐಗೆ ನೀಡಿದ ಸಂದರ್ಶನದ ಪ್ರಕಾರ ಈ ಹಾರವನ್ನು ಅವರು ಯಾವುದೇ ವಾಣಿಜ್ಯ ಉದ್ದೇಶಕ್ಕಾಗಿ ತಯಾರಿಸಿಲ್ಲ, ಬದಲಾಗಿ ರಾಮಮಂದಿರಕ್ಕೆ ಉಡುಗೊರೆ ನೀಡುವ ಸಲುವಾಗಿ ತಯಾರಿಸಿದ್ದಾರೆ.
1265 ಕೆಜಿ ಭಾರದ ಲಡ್ಡು
ಹೈದರಾಬಾದ್ ಮೂಲದವರೊಬ್ಬರು ಅಯೋಧ್ಯೆ ರಾಮಮಂದಿರಕ್ಕಾಗಿ ವಿಶೇಷವಾದ ಲಡ್ಡುವೊಂದನ್ನು ತಯಾರಿಸಿದ್ದಾರೆ. ಈ ಲಡ್ಡು ತೂಕ ಬರೋಬ್ಬರಿ 1265 ಕೆಜಿ.
ಶ್ರೀರಾಮಮಂದಿರದ ಚಿತ್ತಾರವಿರುವ ರೇಷ್ಮೆ ಹಾಸು
ವಿಶ್ವ ಹಿಂದೂ ಪರಿಷತ್ ಅಧ್ಯಕ್ಷರಾದ ಅಲೋಕ್ ಕುಮಾರ್ ಅವರು ಶ್ರೀರಾಮ ಮಂದಿರ ಚಿತ್ರವಿರುವ ರೇಷ್ಮೆ ಬೆಡ್‌ಶೀಟ್ ರಾಮಮಂದಿರಕ್ಕೆ ನೀಡಿದ್ದಾರೆ. ತಮಿಳುನಾಡಿನ ರೇಷ್ಮೆ ಬಟ್ಟೆ ತಯಾರಕರು ಇದನ್ನು ತಯಾರಿಸಿದ್ದಾರೆ.
ನಾಳೆ ಅಯೋಧ್ಯೆಯಲ್ಲಿ ಬಾಲರಾಮನ ಪ್ರಾಣ ಪ್ರತಿಷ್ಠಾ ಕಾರ್ಯಕ್ರಮ ನಡೆಯಲಿದೆ. ಪ್ರಧಾನಿ ನರೇಂದ್ರ ಮೋದಿ ರಾಮಮಂದಿರವನ್ನು ಉದ್ಘಾಟಿಸಲಿದ್ದಾರೆ. ದೂರದರ್ಶನ, ಡಿಡಿ ನ್ಯೂಸ್ ಹಾಗೂ ಡಿಡಿ ನ್ಯಾಷನಲ್‌ನಲ್ಲಿ ಈ ಕಾರ್ಯಕ್ರಮ ಲೈವ್ ನೋಡಬಹುದಾಗಿದೆ.