Ayodhya Ram mandir: ಅಯೋಧ್ಯೆಯಲ್ಲಿ ಪ್ರತಿಷ್ಠಾಪನೆಗೆ ಮೈಸೂರಿನ ಅರುಣ್ ಯೋಗಿರಾಜ್ ಬಾಲರಾಮ ವಿಗ್ರಹ ಅಂತಿಮ: ರಾಮಜನ್ಮಭೂಮಿ ಟ್ರಸ್ಟ್ ಪ್ರಕಟ
ayodhya ram mandir ಅಯೋಧ್ಯೆಯಲ್ಲಿ ರೂಪಿಸಿರುವ ರಾಮಮಂದಿರಕ್ಕೆ ಮೈಸೂರಿನ ಕಲಾವಿದ ಅರುಣ್ ಯೋಗಿರಾಜ್ ಕೆತ್ತಿರುವ ಮೂರ್ತಿಯನ್ನೇ ಅಂತಿಮಗೊಳಿಸಲಾಗಿದೆ.
ಅಯೋಧ್ಯೆ: ಅಯೋಧ್ಯೆ ರಾಮಮಂದಿರದಲ್ಲಿ ಮುಂದಿನ ಭಾನುವಾರ ಪ್ರತಿಷ್ಠಾಪನೆಯಾಲಿರುವ ಬಾಲರಾಮನ ಮೂರ್ತಿ ಕರ್ನಾಟಕದಲ್ಲಿ ಕೆತ್ತನೆಯಾಗಿದ್ದು. ಮೈಸೂರಿನ ಕಲಾವಿದ ಅರುಣ್ ಯೋಗಿರಾಜ್ ಅವರು ವಿಶೇಷವಾಗಿ ರೂಪಿಸಿರುವ ಬಾಲರಾಮನ ಪ್ರತಿಮೆಯನ್ನು ಅಯೋಧ್ಯೆ ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಅಂತಿಮಗೊಳಿಸಿದೆ. ಸೋಮವಾರ ಅಯೋಧ್ಯೆಯಲ್ಲಿ ಪತ್ರಿಕಾಗೋಷ್ಠಿ ನಡೆಸಿದ ರಾಮಜನ್ಮಭೂಮಿ ಟ್ರಸ್ಟ್‌ನ ಪ್ರಮುಖರು ಈ ವಿಷಯವನ್ನು ಪ್ರಕಟಿಸಿದರು. ಐತಿಹಾಸಿಕ ರಾಮಮಂದಿರ ಉದ್ಘಾಟನೆ ಸಂದರ್ಭದಲ್ಲಿ ಕರ್ನಾಟಕದ ಕಲಾವಿದರೊಬ್ಬರು ರೂಪಿಸಿದ ವಿಗ್ರಹ ಅಂತಿಮಗೊಂಡಿರುವ ಹೆಮ್ಮೆಯ ಕ್ಷಣ ಎನ್ನಿಸಿದೆ.
ಬಹುತೇಕ ಒಂದು ತಿಂಗಳಿನಿಂದ ಅಯೋಧ್ಯೆಯಲ್ಲಿಯೇ ಅರುಣ್ ಯೋಗಿರಾಜ್ ಇದ್ದುಕೊಂಡು ವಿಗ್ರಹವನ್ನು ರೂಪಿಸಿದ್ದಾರೆ. ಮೈಸೂರು ಜಿಲ್ಲೆಯ ಎಚ್‌ಡಿಕೋಟೆ ತಾಲ್ಲೂಕಿನಲ್ಲಿ ಆಯ್ಕೆ ಮಾಡಿಕೊಳ್ಳಲಾಗಿದ್ದ ಕಪ್ಪು ಶಿಲೆಯನ್ನು ಬಳಸಿಕೊಂಡು ಮೂರ್ತಿ ರಚನೆ ಶುರು ಮಾಡಿದ್ದರು. ಹದಿನೈದು ದಿನದ ಹಿಂದೆಯೇ ಬಾಲರಾಮಮೂರ್ತಿ ರಚನೆ ಕಾರ್ಯ ಪೂರ್ಣಗೊಂಡಿದ್ದರೂ ಟ್ರಸ್ಟ್ ಸೂಚನೆ ಮೇರೆಗೆ ಕಲಾವಿದರು ಅಲ್ಲಿಯೇ ಇದ್ದರು. ಮೊದಲು ಏಳು ಮಂದಿ ದೇಶದ ಶ್ರೇಷ್ಟ ಕಲಾವಿದರ ಪಟ್ಟಿಯನ್ನು ಆಯ್ಕೆ ಮಾಡಿ ಆನಂತರ ಮೂವರಿಗೆ ಬಾಲರಾಮನ ಪ್ರತಿಮೆ ಸ್ಥಾಪನೆ ಜವಾಬ್ದಾರಿ ನೀಡಲಾಗಿತ್ತು. ಇದರಲ್ಲಿ ಅರುಣ್ ಯೋಗಿರಾಜ್, ಕುಮಟಾದ ಜಿ.ಎಸ್.ಭಟ್ ಹಾಗೂ ರಾಜಸ್ಥಾನದ ಸತ್ಯನಾರಾಯಣ ಪಾಂಡೆ ಅವರು ಬಾಲರಾಮಮೂರ್ತಿ ರೂಪಿಸಿದ್ದರು. ಮೂವರಲ್ಲಿ ಅರುಣ್ ಯೋಗಿರಾಜ್ ಮೂರ್ತಿಯನ್ನೇ ಅಂತಿಮಗೊಳಿಸಲಾಗಿದೆ.
ಅಂತಿಮ ಆಯ್ಕೆಗಾಗಿ ಅಯೋಧ್ಯೆ ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಸಮಿತಿ ರಚಿಸಿತ್ತು. ಸಮಿತಿಯ ಸದಸ್ಯರು ಯಾವ ಮೂರ್ತಿ ಆಯ್ಕೆ ಮಾಡಬೇಕು ಎನ್ನುವ ಕುರಿತು ಮತದಾನವನ್ನು ಮಾಡಿದ್ದರು. ಇದರಲ್ಲಿ ಅರುಣ್ ಯೋಗಿರಾಜ್ ರೂಪಿಸಿದ ಮೂರ್ತಿಗೆ ಹೆಚ್ಚಿನ ಮತಗಳು ಲಭಿಸಿದ್ದವು. ಇದನ್ನಾಧರಿಸಿಯೇ ಅರುಣ್ ರೂಪಿಸಿದ ಮೂರ್ತಿಯೇ ಅಂತಿಮಗೊಂಡಿದೆ ಎಂದು ಟ್ರಸ್ಟ್ ಹೇಳಿಕೊಂಡಿದೆ.
ಸುಮಾರು ಐದು ಅಡಿಯಷ್ಟು ಎತ್ತರವಿರುವ ಈ ಬಾಲ ರಾಮನ ವಿಗ್ರಹ ವಿಶೇಷವಾಗಿದೆ. ರಾಮನೊಂದಿಗೆ ಸೀತಾ, ಲಕ್ಷ್ಮಣನೊಂದಿಗೆ ರಾಮನ ಭಂಟ ಹನುಮಂತನೂ ಕುಳಿತಿರುವ ವಿಗ್ರಹದಲ್ಲಿ ರಾಮನ ಮುಖಭಾವ ಮುಗ್ದವಾಗಿದೆ. ಗಂಭೀರತೆಯನ್ನು ಒಳಗೊಂಡಿದೆ. ಕಲ್ಲಿನ ಬಳಕೆ, ರಾಮನ ಮುಖಭಾವಗಳನ್ನು ಆಧರಿಸಿಯೇ ಅರುಣ್ ಯೋಗಿರಾಜ್ ರೂಪಿಸಿರುವ ವಿಗ್ರಹ ಅಂತಿಮಗೊಳಿಸಲಾಗಿದೆ ಎಂದು ಟ್ರಸ್ಟ್ ವಿವರಣೆ ನೀಡಿದೆ.
ಈಗಾಗಲೇ ಅಯೋಧ್ಯೆಯಲ್ಲಿಯೇ ಇರುವ ಅರುಣ್ ಯೋಗಿರಾಜ್ ಅವರು ರಾಮಮಂದಿರ ಉದ್ಘಾಟನೆಗೆ ಅಲ್ಲಿಯೇ ಇರಲಿದ್ದಾರೆ. ಅವರೊಂದಿಗೆ ಮೈಸೂರಿನಲ್ಲಿರುವ ಕುಟುಂಬದವರೂ ಸೇರಿಕೊಳ್ಳಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಇವರೇ ಅರುಣ್ ಯೋಗಿರಾಜ್
ಮೈಸೂರಿನ ಐದು ತಲೆಮಾರಿನ ಪ್ರಸಿದ್ಧ ಶಿಲ್ಪಿಗಳ ಕೌಟುಂಬಿಕ ಹಿನ್ನೆಲೆ ಹೊಂದಿರುವ ಅರುಣ್ ಯೋಗಿರಾಜ್ ಪ್ರಸ್ತುತ ದೇಶದ ಬಹುಬೇಡಿಕೆಯ ಶಿಲ್ಪಿ.
ಅರುಣ್ ಅವರ ಕೈಚಳಕದಿಂದ ಸಾಧಕರ ಪ್ರತಿಮೆಗಳು ತಲೆ ಎತ್ತಬೇಕು ಎಂಬ ಬೇಡಿಕೆಯಿಂದಾಗಿ ದೇಶದ ವಿವಿಧ ರಾಜ್ಯಗಳು ಅರುಣ್ ಅವರನ್ನು ಹುಡುಕಿಕೊಂಡು ಬರುತ್ತಿವೆ. ತನಗೆ ಸಿಕ್ಕ ಅವಕಾಶಗಳ ಸಮರ್ಥ ಬಳಕೆಗೆ ಬಂದಾಗ ಅರುಣ್ ಉದ್ಯಮಶೀಲ. ಹೀಗಾಗಿಯೇ ದೇಶದ ನಾನಾ ರಾಜ್ಯಗಳಲ್ಲಿ ಇವರ ಕಲೆಗೆ ಬೇಡಿಕೆ ಸೃಷ್ಟಿಯಾಗಿದೆ.
ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಅರುಣ್ ಅವರ ಪ್ರತಿಭೆಯನ್ನು ಶ್ಲಾಘಿಸಿದ್ದಾರೆ.
ಅರುಣ್ ತಂದೆ ಯೋಗಿರಾಜ್ ಕೂಡ ನುರಿತ ಶಿಲ್ಪಿ. ಕೆಲ ದಿನಗಳ ಹಿಂದೆಯಷ್ಟೇ ಅವರು ಕಾಲವಾಗಿದ್ದಾರೆ.
ಅವರ ಅಜ್ಜ ಬಸವಣ್ಣ ಶಿಲ್ಪಿ ಮೈಸೂರು ರಾಜರಿಂದ ಪೋಷಕರಾಗಿದ್ದರು. ಈ ತಲೆಮಾರಿನವರಾದ ಅರುಣ್ ಯೋಗಿರಾಜ್ ಅವರು ಬಾಲ್ಯದಿಂದಲೂ ಕೆತ್ತನೆಯಲ್ಲಿ ತೊಡಗಿಸಿಕೊಂಡಿದ್ದರು.
ವಿಭಾಗ