ಜಾತಕದಲ್ಲಿ ಗುರು ದೋಷ ಇದ್ದರೆ ಗುರು ಪೂರ್ಣಿಮೆಯಂದು ಈ ಪರಿಹಾರಗಳನ್ನು ಕೈಗೊಳ್ಳಿ, ಸಮಸ್ಯೆಯಿಂದ ಪಾರಾಗಿ
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  ಜಾತಕದಲ್ಲಿ ಗುರು ದೋಷ ಇದ್ದರೆ ಗುರು ಪೂರ್ಣಿಮೆಯಂದು ಈ ಪರಿಹಾರಗಳನ್ನು ಕೈಗೊಳ್ಳಿ, ಸಮಸ್ಯೆಯಿಂದ ಪಾರಾಗಿ

ಜಾತಕದಲ್ಲಿ ಗುರು ದೋಷ ಇದ್ದರೆ ಗುರು ಪೂರ್ಣಿಮೆಯಂದು ಈ ಪರಿಹಾರಗಳನ್ನು ಕೈಗೊಳ್ಳಿ, ಸಮಸ್ಯೆಯಿಂದ ಪಾರಾಗಿ

Guru Poornima: ಆಷಾಢ ಮಾಸದ ಹುಣ್ಣಿಮೆಯನ್ನು ಗುರು ಪೂರ್ಣಿಮೆಯನ್ನು ಆಚರಿಸಲಾಗುತ್ತದೆ. ಇದನ್ನು ವ್ಯಾಸ ಪೂರ್ಣಿಮೆ ಎಂದೂ ಕರೆಯಲಾಗುತ್ತದೆ. ಜಾತಕದಲ್ಲಿ ಗುರು ದೋಷ ಇದ್ದವರು ಈ ದಿನ ಕೆಲವೊಂದು ಪರಿಹಾರಗಳನ್ನು ಕೈಗೊಂಡರೆ ಎಲ್ಲಾ ದೋಷಗಳು ನಿವಾರಣೆ ಆಗುತ್ತವೆ.

ಜಾತಕದಲ್ಲಿ ಗುರುದೋಷ ಇದ್ದರೆ ಗುರು ಪೂರ್ಣಿಮೆಯಂದು ಈ ಪರಿಹಾರಗಳನ್ನು ಕೈಗೊಳ್ಳಿ, ಸಮಸ್ಯೆಯಿಂದ ಪಾರಾಗಿ
ಜಾತಕದಲ್ಲಿ ಗುರುದೋಷ ಇದ್ದರೆ ಗುರು ಪೂರ್ಣಿಮೆಯಂದು ಈ ಪರಿಹಾರಗಳನ್ನು ಕೈಗೊಳ್ಳಿ, ಸಮಸ್ಯೆಯಿಂದ ಪಾರಾಗಿ

ಗುರು ದೋಷ: ಪ್ರತಿಯೊಂದು ಹುಣ್ಣಿಮೆಗೂ ಒಂದೊಂದು ವಿಶೇಷತೆ ಇರುತ್ತದೆ. ಹಾಗೇ ಈ ಬಾರಿ ಆಚರಿಸಲಾಗುವ ಹುಣ್ಣಿಮೆಯನ್ನು ಗುರು ಪೂರ್ಣಿಮೆ ಹೆಸರಿನಲ್ಲಿ ಆಚರಿಸಲಾಗುತ್ತದೆ. ಈ ಬಾರಿ ಜುಲೈ 21, ಭಾನುವಾರ ಗುರು ಪೂರ್ಣಿಮೆ ಇರುತ್ತದೆ. ಗುರು ಪೂರ್ಣಿಮೆಗೆ ಹಿಂದೂ ಧರ್ಮದಲ್ಲಿ ಮಾತ್ರವಲ್ಲದೆ ಬೌದ್ಧ ಮತ್ತು ಜೈನ ಧರ್ಮದಲ್ಲಿ ಕೂಡಾ ಹೆಚ್ಚಿನ ಪ್ರಾಮುಖ್ಯತೆ ಇದೆ.

ಮಹರ್ಷಿ ವೇದವ್ಯಾಸರು ಜನಿಸಿದ ದಿನ

ಆಷಾಢ ಮಾಸದ ಹುಣ್ಣಿಮೆಯಂದು ಗುರುಪೂರ್ಣಿಮೆಯನ್ನು ಆಚರಿಸಲಾಗುತ್ತದೆ. ಈ ದಿನ ಮಹರ್ಷಿ ವೇದವ್ಯಾಸರು ಜನಿಸಿದರು ಎಂದು ಪುರಾಣಗಳು ಹೇಳುತ್ತವೆ. ಹಿಂದೂ ಮಹಾಕಾವ್ಯ ಮಹಾಭಾರತ ರಚಿಸುವಲ್ಲಿ ವ್ಯಾಸರು ಪ್ರಮುಖ ಪಾತ್ರ ವಹಿಸಿದ್ದಾರೆ. ಜ್ಞಾನ, ಮಾರ್ಗದರ್ಶನ ಮತ್ತು ಸ್ಫೂರ್ತಿಗೆ ಗುರು ಬಹಳ ಮುಖ್ಯ. ಅಜ್ಞಾನವನ್ನು ಹೋಗಲಾಡಿಸಿ ಬುದ್ಧಿ ಕಲಿಸಿ ಉನ್ನತ ಸ್ಥಾನಕ್ಕೆ ಏರಿಸುವಲ್ಲಿ ಗುರು ಪ್ರಮುಖ ಪಾತ್ರ ವಹಿಸುತ್ತಾರೆ. ಸನಾತನ ಧರ್ಮದಲ್ಲಿ ಗುರುವನ್ನು ದೇವರ ಸಮಾನ ಎಂದು ಪರಿಗಣಿಸಲಾಗಿದೆ. ಈ ಗುರು ಪೂರ್ಣಿಮೆಯು ಗುರು ಶಿಷ್ಯರ ನಡುವಿನ ಬಾಂಧವ್ಯವನ್ನು ಸಂಕೇತಿಸುತ್ತದೆ. ವಿದ್ಯೆ, ವಿವೇಕ , ಅಧ್ಯಾತ್ಮ ಕಲಿಸಿದ ಗುರುಗಳಿಗೆ ಕೃತಜ್ಞತೆ ಸಲ್ಲಿಸಿ ಶಿಷ್ಯರಿಂದ ಪೂಜೆ ನಡೆಯುತ್ತದೆ.

ಶಿಷ್ಯರು ಈ ದಿನ ಗುರುಗಳ ಪಾದ ಮುಟ್ಟಿ ನಮಸ್ಕರಿಸಿ ತಾಂಬೂಲ, ವಸ್ತ್ರ, ಹೂವಿನ ಹಾರಗಳನ್ನು ನೀಡಿ ಗೌರವಿಸುತ್ತಾರೆ. ಗುರು ಪೂರ್ಣಿಮೆಯಂದು ಅನೇಕ ಜನರು ವೇದವ್ಯಾಸರನ್ನು ಪೂಜಿಸುತ್ತಾರೆ . ವೇದಗಳನ್ನು ಋಗ್ವೇದ, ಯಜುರ್ವೇದ, ಸಾಮವೇದ, ಅಥರ್ವಣ ವೇದ ಎಂದು ನಾಲ್ಕು ಭಾಗಗಳಾಗಿ ವಿಂಗಡಿಸಿದ ಕೀರ್ತಿ ವ್ಯಾಸ ಮಹರ್ಷಿಗೆ ಸಲ್ಲುತ್ತದೆ. ಹಿಂದೂ ಧರ್ಮದಲ್ಲಿ ಸಾಹಿತ್ಯ ಮತ್ತು ಆಧ್ಯಾತ್ಮಿಕತೆಗೆ ವೇಸವ್ಯಾಸರ ಕೊಡುಗೆಯನ್ನು ಎಂದಿಗೂ ಮರೆಯಲಾಗದು. ಆದ್ದರಿಂದಲೇ ಭಕ್ತರು ವೇದವ್ಯಾಸರನ್ನು ಗೌರವಿಸಿ, ತಮಗೆ ವಿದ್ಯೆ, ಬುದ್ಧಿ ನೀಡಿದವರನ್ನು ನೆನಪಿಸಿಕೊಳ್ಳುತ್ತಾರೆ.

ಗುರು ದೋಷ ನಿವಾರಣೆಗೆ ಪರಿಹಾರಗಳು

ಜಾತಕದಲ್ಲಿ ಗುರು ದೋಷ ನಿವಾರಣೆಗೆ ಗುರು ಪೂರ್ಣಿಮೆಯನ್ನು ಅತ್ಯುತ್ತಮ ದಿನವೆಂದು ಪರಿಗಣಿಸಲಾಗಿದೆ. ಗುರುವಿನ ಆರಾಧನೆಯು ವ್ಯಕ್ತಿಯ ಜಾತಕದಲ್ಲಿ ಗುರುವಿನ ಸ್ಥಾನವನ್ನು ಬಲಪಡಿಸುತ್ತದೆ. ಅದಕ್ಕಾಗಿಯೇ ಜ್ಯೋತಿಷ್ಯದಲ್ಲಿ ಗುರುದೋಷ ನಿವಾರಣೆಗೆ ಇಂದಿನ ದಿನವನ್ನು ಆಯ್ಕೆ ಮಾಡಿಕೊಳ್ಳಲಾಗಿದೆ. ದೇವಗುರುವೆಂದು ಪರಿಗಣಿಸಲ್ಪಟ್ಟಿರುವ ಗುರುವಿನ ಮೇಲೆ ಭಕ್ತಿ ಮತ್ತು ಗೌರವವನ್ನು ತೋರಿಸಿದರೆ, ಗುರುವು ಜಾತಕದಲ್ಲಿ ಬಲಗೊಳ್ಳುತ್ತಾನೆ.

ಗುರುವಿನ ಆಶೀರ್ವಾದ ಪಡೆಯಲು ಗುರು ಪೂರ್ಣಿಮೆಯಂದು ವಿದ್ಯಾಬುದ್ಧಿ ಕಲಿಸಿದ ಗುರುಗಳ ಪಾದ ಮುಟ್ಟಿ ಅವರ ಆಶೀರ್ವಾದ ಪಡೆಯಬೇಕು. ಅವರಿಗೆ ಬಟ್ಟೆ ಮತ್ತು ಸಿಹಿತಿಂಡಿಗಳನ್ನು ನೀಡಬೇಕು. ನಿಮ್ಮ ಮನಸ್ಸಿಗೆ ಬಂದಂತೆ ಗುರು ದಕ್ಷಿಣೆಯನ್ನು ಅರ್ಪಿಸಬೇಕು. ಹೀಗೆ ಮಾಡುವುದರಿಂದ ಜೀವನದಲ್ಲಿ ಯಶಸ್ಸು ಕಾಣುವಿರಿ. ಗುರು ಪೂರ್ಣಿಮೆಯಂದು ನಿಮಗೆ ಗುರುವಿನ ಆಶೀರ್ವಾದ ಪಡೆಯಲು ಸಾಧ್ಯವಾಗದಿದ್ದರೆ ರಾವಿ ಅಥವಾ ಅಶ್ವತ್ಥ ಮರವನ್ನು ಪೂಜಿಸಿ. ಹಸುವಿಗೆ ಆಹಾರ ನೀಡಬೇಕು. ಸಾಧ್ಯವಾದರೆ ಬ್ರಾಹ್ಮಣರಿಗೆ ಸಿಹಿ ಪದಾರ್ಥಗಳನ್ನು ಕೊಡಬೇಕು. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಈ ರೀತಿ ಮಾಡುವುದರಿಂದ ಗುರುವಿನ ಕೃಪೆಯಿಂದ ಜೀವನದಲ್ಲಿನ ಎಲ್ಲಾ ಅಡೆ ತಡೆಗಳು ನಿವಾರಣೆ ಆಗಬೇಕು.

ಗುರು ಪೂರ್ಣಿಮೆಯ ದಿನ ಬಾಳೆಗಿಡವನ್ನು ಪೂಜಿಸುವುದರಿಂದ ಗುರು ದೋಷ ದೂರವಾಗುತ್ತದೆ. ಹಳದಿ ಬಟ್ಟೆಗಳನ್ನು ಧರಿಸಿ ಮತ್ತು ಬೃಹಸ್ಪತಿ ಮಂತ್ರಗಳನ್ನು 108 ಬಾರಿ ಪಠಿಸಿದರೆ ನೀವು ನಿಮ್ಮ ಬಹುತೇಕ ಸಮಸ್ಯೆಯಿಂದ ಹೊರ ಬಂದಂತೆ.

ಗಮನಿಸಿ: ಇದು ವೈದಿಕ ಜ್ಯೋತಿಷ್ಯದ ಪದ್ಧತಿಯಲ್ಲಿ ಗೋಚಾರ ಆಧರಿಸಿದ ಬರಹ. ನಿಖರ ವಿವರ ಮತ್ತು ಸಮರ್ಪಕ ಪರಿಹಾರಗಳಿಗಾಗಿ ಓದುಗರು ತಮ್ಮ ಜನ್ಮಜಾತಕವನ್ನು ಸಹ ಪರಿಗಣಿಸಬೇಕು. ನಿಮ್ಮ ಕುಲ ಗುರುಗಳು ಅಥವಾ ಜ್ಯೋತಿಷಿಗಳ ಸಲಹೆ ಪಡೆಯಬೇಕು. ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ "ಹಿಂದೂಸ್ತಾನ್ ಟೈಮ್ಸ್ ಕನ್ನಡ" ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ.

Whats_app_banner
ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.